ಜಾಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾಯಿಕಾಯಿ, ಜಾಕಾಯಿ, ಜಾಪತ್ರೆ
ಜಾಕಾಯಿ
Scientific classification
ಸಾಮ್ರಾಜ್ಯ:
ಪ್ಲಾಂಟೆ
Division:
ಹೂಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೊಪ್ಸಿಡಾ
ಗಣ:
ಮ್ಯಾಗ್ನೋಲಿಯಲ್ಸ್
ಕುಟುಂಬ:
ಮೈರಿಸ್ಟಿಕೇಸಿ
ಕುಲ:
ಮೈರಿಸ್ಟಿಕಾ

ಗ್ರೊನೊವ್.
ಪ್ರಭೇದಗಳು

ಸೇರಿದಂತೆ ಸುಮಾರು ೧೦೦ ಜಾತಿಗಳು:
ಮೈರಿಸ್ಟಿಕಾ ಅರ್ಜೆಂಟಿಯಾ
ಮೈರಿಸ್ಟಿಕಾ ಫ್ರ್ಯಾಗ್ರಾನ್ಸ್
ಮೈರಿಸ್ಟಿಕಾ ಮಲಬಾರಿಕಾ

ಜಾಪತ್ರೆ ಅಥವಾ ಜಾಯಿಕಾಯಿ ಆಗ್ನೇಯ ಏಶಿಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದು. ಇದನ್ನು ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಇದರ ಎಣ್ಣೆ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ, ಔಷಧಗಳಲ್ಲಿ ಬಳಸುತ್ತಾರೆ.ಮರದ ಮೂಲ ಸ್ಥಾನ ಇಂಡೋನೇಶಿಯಾ ದಲ್ಲಿರುವ ಭಾಂಡ್ರಾ(Bandra)[೧]

Mace within nutmeg fruit

ಮರ[ಬದಲಾಯಿಸಿ]

ಇದು ಮೈರಿಸ್ಟಿಕಾಸಿ(myristicaeae)ಸಸ್ಯ ಕುಟುಂಬಕ್ಕೆ ಸೇರಿದ ಮರ.ಈ ಮರ ವನ್ನು ಶಾಸ್ತ್ರೀಯ ವಾಗಿ ಹೆಸರು ಮಿರಿಸ್ಟಿಕ ಫ್ರಾಗ್ರನ್ಸ್ಎಂದು ಕೆರೆಯುತ್ತಾರೆ.[೨] ಉಷ್ಣವಲಯದಲ್ಲಿ ಬೆಳೆಯುತ್ತದೆ.ಇದು ಮಧ್ಯಮ ಪ್ರಮಾಣದ ಮರ ಆಗಿದೆ.ಒಂದೇ ಮರದಲ್ಲಿ ಜಾಜಿಕಾಯಿ,ಜಾಜಿ ಪತ್ರೆ ಎಂಬ ಎರಡು ಪದಾರ್ಥ ಗಳು ಸಿಗುತ್ತವೆ.ಈ ಎರಡು ಪದಾರ್ಥಗಳನ್ನ ಸಾಂಬಾರ ಪದಾರ್ಥಗಳನ್ನಾಗಿ ಬಳಸುತ್ತಾರೆ.. ಜಾಜಿಕಾಯಿ ಮರಗಳನ್ನು ಸುಲಭವಾಗಿ ಬೆಳೆಸಲಾಗುತ್ತದೆ.ಈ ಮರದ ಸಸ್ಯಕ್ಕೆ ಶೇಕಡಾ ೧೦%ರಷ್ಟು ನೆರಳಿದ್ದರೆ ಸಾಕು. ಸಸ್ಯವು ನಾಟಿಮಾಡಿದ ೬-೭ ವರ್ಷಗಳಲ್ಲಿ ಹಣ್ಣು ಬಿಡುವುದು ಆರಂಭವಾಗುತ್ತದೆ.ಮರ ಬೆಳೆದಂತೆ ವಿಸ್ತಾರವಾಗಿ ಹರಡಿಕೊಂಡು ಫಸಲು ಬಿಡಲು ಮೊದಲಾಗುತ್ತದೆ.ಜಾಯಿಮರದಲ್ಲಿ ಗಂಡು ಹಾಗೂ ಹಣ್ಣು ಮರ ಬೇರೆಬೇರೆ ಇರುತ್ತವೆ.ಕಾಯಿ ಕಚ್ಚಲು ಒಂದು ಎಕರೆಗೆ ೨-೪ ಗಂಡುಮರಗಳನ್ನು ನಾಟ ಮಾಡಬೇಕಾಗುತ್ತದೆ.ಕಾಯಿಗಳನ್ನು ಬಿಡುವ ಸಮಯ ಮೇ-ಜುಲೈ ವರೆಗೆ. ಜಾಜಿಕಾಯಿ ಹೊಂಬಣ್ಣದಲ್ಲಿರುತ್ತದೆ.ಹಣ್ಣಾದ ಮೇಲೆ ಕಾಯಿಗಳು ತಾವಾಗಿಯೇ ಕೆಳಗೆ ಬಿಳುತ್ತವೆ.ಈ ರೀತಿ ಬೀಳುವಾಗ ಜಾಪತ್ರೆ ಹಾಳಾಗುವುದರಿಂದ ಕಾಯಿಗಳನ್ನು ಕೊಯ್ದು ಪಾತ್ರೆ ಮತ್ತು ಕಾಯಿಗಳನ್ನು ಬೇರ್ಪಡಿಸಿ ಒಣಗಿಸಬೇಕು.

ಇತಿಹಾಸ[ಬದಲಾಯಿಸಿ]

ಜಾಪತ್ರೆಗಳ ಉಪಯೋಗ ಪ್ರಾಚೀನ ರೋಮನರಿಗಾಗಲಿ, ಗ್ರೀಕರಿಗಾಗಲಿ ತಿಳಿದಿರಲಿಲ್ಲ. ಕ್ರಿ.ಶ. ೫೪೦ ರ ಸುಮಾರಿನಲ್ಲಿ ಕಾನ್‍ಸ್ಟ್ಯಾಂಟಿನೋಪಲಿನಲ್ಲಿ ಇದರ ಬಗ್ಗೆ ಪ್ರಥಮ ಉಲ್ಲೇಖ ಕಂಡುಬರುತ್ತದೆ. ಬಹುಶಃ ಇದಕ್ಕೂ ಮುಂಚೆ ಭಾರತದಲ್ಲಿ ಇದರ ಬಳಕೆ ಇದ್ದಿರಬೇಕು. ೧೨ನೆಯ ಶತಕದ ವೇಳೆಗೆ ಯೂರೋಪಿನಲ್ಲಿ ಇದರ ಬಳಕೆ ಆರಂಭವಾಯಿತು. ಬಹುಕಾಲ ಅರಬ್ ವ್ಯಾಪಾರಿಗಳು ಕಾಯಿ ಮತ್ತು ಪತ್ರೆಗಳ ಮೂಲವನ್ನು ಗುಟ್ಟಾಗಿ ಇಟ್ಟಿದ್ದರು. ೧೫೧೨ ರಲ್ಲಿ ಪೋರ್ಚುಗೀಸ್ ನಾವಿಕರು ಅಂಬಾಯ್ನ ಮತ್ತು ಬಾಂಡ ದ್ವೀಪಗಳಲ್ಲಿ ಜಾಕಾಯಿ ಮರದ ಇರವನ್ನು ಪತ್ತೆಹಚ್ಚಿ ೧೭ನೆಯ ಶತಮಾನದ ಮಧ್ಯದವರೆಗೆ ಇದರ ವ್ಯಾಪಾರವನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದರು. ಅನಂತರ ಡಚ್ಚರು ಜಾಕಾಯಿ ವ್ಯಾಪಾರದ ಏಕಸ್ವಾಮ್ಯ ಪಡೆದು, ಮೇಲೆ ಹೇಳಿದ ದ್ವೀಪಗಳನ್ನು ಬಿಟ್ಟು ಉಳಿದ ಯಾವ ಕಡೆಯಲ್ಲೂ ಜಾಕಾಯಿ ಮರ ಬೆಳೆಯದಂತೆ ನಿರ್ಬಂಧಿಸಿದರು. ಆದರೂ ೧೭೭೨ ರ ವೇಳೆಗೆ ಫ್ರೆಂಚರು ಜಾಕಾಯಿ ಮರವನ್ನು ಮಾರಿಷಸ್ ಮತ್ತು ಫ್ರೆಂಚ್ ಗಯಾನಗಳಲ್ಲಿ ಬೆಳೆಸುವುದರಲ್ಲಿ ಯಶಸ್ವಿಗಳಾದರು. ೧೮ನೆಯ ಶತಮಾನದ ಕೊನೆಯಲ್ಲಿ ಮಲಕಸ್ ದ್ವೀಪಗಳಿಗೆ ಪ್ರಯಾಣ ಮಾಡಿದ ಈಸ್ಟ್ ಇಂಡಿಯ ಕಂಪನಿಯ ಸಸ್ಯಶಾಸ್ತ್ರಜ್ಞ ಕ್ರಿಸ್ಟೋಫರ್ ಸ್ಮಿತ್ ಎಂಬಾತ ಪೆನಾಂಗ್, ಕ್ಯೂ ಸಸ್ಯೋದ್ಯಾನ ಕಲ್ಕತ್ತ, ಮದರಾಸು ಮುಂತಾದೆಡೆಗಳಿಗೆ ಜಾಕಾಯಿ ಮರದ ಸಸಿಗಳನ್ನು ಕಳಿಸಿದ. ಅನಂತರ ಪೆನಾಂಗ್ ಮತ್ತು ಸಿಂಗಪುರಗಳಲ್ಲಿ ಜಾಕಾಯಿ ತೋಟಗಳು ವೃದ್ಧಿಯಾಗತೊಡಗಿದವು. ಲಂಡನ್ ಪ್ರಾಣಿಸಂಗ್ರಹಾಲಯದ ಸ್ಥಾಪಕನಾದ ಸರ್ ಸ್ಟಾಫರ್ಡ್ ರ್ಯಾಫಲ್ಸ್ ಸುಮಾತ್ರದಲ್ಲಿ ಜಾಕಾಯಿ ಮರಗಳನ್ನು ಬೆಳೆಸುವುದನ್ನು ಪ್ರೋತ್ಸಾಹಿಸಿದ. ೧೮೨೪ರ ಸಮಯಕ್ಕೆ ಟ್ರಿನಿಡಾಡಿಗೂ ೧೮೪೩ರ ವೇಳೆಗೆ ಗ್ರನೇಡಕ್ಕೂ ಇದನ್ನು ತಂದು ಬೆಳೆಸಲಾಯಿತು.

ಸಸ್ಯ ವೃತ್ತಾಂತ[ಬದಲಾಯಿಸಿ]

ಇದು ಅಗಲವಾಗಿ ಹರಡಿಕೊಂಡು ಬೆಳೆಯುವ ಸದಾ ಹಸಿರಿನ ಮರ. ೫-೧೫ ಮೀ. ಎತ್ತರಕ್ಕೆ ಬೆಳೆಯುತ್ತದೆ. ಕೆಲವು ಸಲ ೨೦ ಮೀ.ಗೂ ಹೆಚ್ಚು ಎತ್ತರ ಬೆಳೆಯುವುದುಂಟು. ತೊಗಟೆ ಬೂದುಮಿಶ್ರಿತ ಕಪ್ಪು ಬಣ್ಣದ್ದು; ವಯಸ್ಸಾದ ತೊಗಟೆ ಉದ್ದುದ್ದವಾಗಿ ಸೀಳಿರುವುದುಂಟು. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಆಕಾರ ಅಂಡದಂತೆ; ಬಣ್ಣ ಕಡುಹಸಿರು; ಅಂಚು ನಯವಾಗಿದೆ. ವೃತ್ತಪರ್ಣಗಳಿಲ್ಲ. ಎಲೆಗಳನ್ನು ಉಜ್ಜಿದರೆ ಒಂದು ತೆರನ ಸುವಾಸನೆ ಸೂಸುವುದುಂಟು.[೩] ಹೂಗಳು ಏಕಲಿಂಗಿಗಳು; ವಿಭಿನ್ನ ಮರಗಳಲ್ಲಿ ಅರಳುತ್ತವೆ. ಅಪರೂಪಕ್ಕೆ ಒಂದೇ ಮರದಲ್ಲಿ ಗಂಡು ಮತ್ತು ಹೆಣ್ಣುಹೂಗಳೂ ದ್ವಿಲಿಂಗಿ ಹೂಗಳೂ ಇರುವುದುಂಟು. ಗಂಡು ಹೆಣ್ಣು ಹೂಗೊಂಚಲುಗಳೆರಡೂ ಛತ್ರಿಯಾಕಾರದ ಸೈಮೋಸ್ ಮಾದರಿಯವು. ಹೂಗಳಿಗೆ ಮಧುರವಾದ ಗಂಧವೂ ತಿಳಿಹಳದಿ ಬಣ್ಣವೂ ಇವೆ. ಹೂಗಳಲ್ಲಿ ದಳಗಳೇ ಇಲ್ಲ. ಗಂಡುಹೂವಿನಲ್ಲಿ ಗಂಟೆಯಾಕಾರದ ಪುಷ್ಪಪತ್ರ ಸಮೂಹ ಮತ್ತು೮-೧೨ ಕೇಸರಗಳು ಇವೆ. ಕೇಸರಗಳೆಲ್ಲ ಹೂವಿನ ಕೇಂದ್ರಭಾಗದಲ್ಲಿ ಒಟ್ಟಾಗಿ ಕೂಡಿ ಒಂದು ಕಂಬದಂಥ ರಚನೆಯನ್ನು ನಿರ್ಮಿಸಿವೆ. ಹೆಣ್ಣುಹೂವಿನಲ್ಲಿ ಪುಷ್ಪಪತ್ರದ ಜೊತೆಗೆ ಒಂದೇ ಒಂದು ಕಾರ್ಪೆಲಿನಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಉಂಟು. ಅಂಡಾಶಯದೊಳಗೆ ಒಂದೇ ಒಂದು ಅಂಡಕ ಇದೆ. ಫಲ ರಸಭರಿತ ಅಷ್ಟಿಮಾದರಿಯದು. ಇದರ ಬಣ್ಣ ಹಳದಿ.[೪]

ಜಾಕಾಯಿಯ ಬೇಸಾಯ[ಬದಲಾಯಿಸಿ]

ಜಾಕಾಯಿ ಬೇಸಾಯಕ್ಕೆ ನೀರು ಸುಲಭವಾಗಿ ಬಸಿದು ಹೋಗುವಂಥ ಮತ್ತು ಪುಡಿಪುಡಿಯಾಗುವ ಗುಣವುಳ್ಳ ಗೋಡು ಮಣ್ಣು, ಮತ್ತು ವರ್ಷಕ್ಕೆ ೧೫೦-೩೦೦ ಸೆಂ.ಮೀ. ಮಳೆ ಹಾಗೂ ೭೬ಲಿ-೯೨ಲಿ ಫ್ಯಾ. ಉಷ್ಣತೆ ಇರುವ ಹವಾಮಾನ ಅತ್ಯುತ್ತಮ. ಸಮುದ್ರಮಟ್ಟದಿಂದ ಹಿಡಿದು ೭೫೦ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚು. ಜಾಕಾಯಿಯನ್ನು ಬೀಜಗಳಿಂದ, ಕಾಂಡತುಂಡುಗಳಿಂದ, ಕಸಿಮಾಡುವುದರಿಂದ ಹಾಗೂ ಗೂಟ ಕಟ್ಟುವುದರಿಂದ ವೃದ್ದಿ ಮಾಡಬಹುದು. ಚೆನ್ನಾಗಿ ಬಲಿತಿರುವ ಹಣ್ಣುಗಳನ್ನು ಆಯ್ದುಕೊಂಡು ಬೀಜಗಳನ್ನು ತೆಗೆದು ಒಂದು ದಿನ ಒಣಗಿಸಲಾಗುತ್ತದೆ. ಬಳಿಕ ನೇರವಾಗಿ ಜಾಕಾಯಿ ಮರಗಳನ್ನು ಬೆಳೆಸುವ ಭೂಮಿಯಲ್ಲಾಗಲಿ ಮಡಿಗಳಲ್ಲಾಗಲಿ ಬೀಜಗಳನ್ನು ನೆಟ್ಟು ಬಿಸಿಲಿನಿಂದ ರಕ್ಷಿಸಬೇಕು. ನೆರಳಿನಲ್ಲಿ ೯೮% ರಷ್ಟು, ಬಿಸಿಲು ಹೆಚ್ಚಾಗಿರುವ ಕಡೆ ೯೨%ರಷ್ಟು ಬೀಜ ಮೊಳೆಯುತ್ತವೆ. ಆದರೆ ಬಿಸಿಲಿನಲ್ಲಿ ಒಣಗಿಸಿ ೨ತಿಂಗಳು ಶೇಖರಿಸಿಟ್ಟ ಬೀಜಗಳ ಮೊಳೆಯುವ ಸಾಮಥ್ರ್ಯ ನೆರಳಿನಲ್ಲಿ 7% ರಷ್ಟು ಮಾತ್ರ. ಇಂಥವು ನೆರಳಿಲ್ಲದ ಕಡೆ ಮೊಳೆಯುವುದೇ ಇಲ್ಲ. ಬೀಜಗಳನ್ನು ಮಡಿಯಲ್ಲಿ ೧೫ ಸೆಂ.ಮೀ. ಅಂತರಕ್ಕೊಂದರಂತೆ ೦.೫ ಸೆಂ.ಮೀ. ಆಳಕ್ಕೆ ನೆಡಲಾಗುತ್ತದೆ. ಬೀಜಗಳು ೧ ೧/೨ - ೩ ತಿಂಗಳ ಅನಂತರ ಮೊಳೆಯುತ್ತವೆ. ಸಸಿಗಳು ೧ ಮೀ. ಎತ್ತರಕ್ಕೆ ಬೆಳೆದ ಬಳಿಕ ಅವನ್ನು ಬೇಕಾದ ಜಾಗದಲ್ಲಿ ತಂಪು ಹವೆ ಇರುವಾಗ ನಾಟಿ ಮಾಡುವುದುಂಟು. ತಮಿಳುನಾಡಿನ ನೀಲಗಿರಿಯಲ್ಲಿ 6 ತಿಂಗಳು ವಯಸ್ಸಾಗಿರುವ ಸಸಿಗಳನ್ನು ಕುಂಡಗಳಲ್ಲಿ ನಾಟಿ ಮಾಡಿ, ಒಂದು ವರ್ಷದ ಆನಂತರ ಬೇಕಾದ ಸ್ಥಳಗಳಿಗೆ ವರ್ಗಾಯಿಸಲಾಗುತ್ತದೆ.[೫]

ಜಾಕಾಯಿ ಸಸಿಗಳನ್ನು ನೆಡುವುದಕ್ಕೆ ಆರಿಸಿದ ಭೂಮಿಯಲ್ಲಿ ೧ ಘನಮೀಟರ್ ಆಳದ ಗುಂಡಿಗಳನ್ನು ೬-೮ ಮೀ. ಅಂತರ ಬಿಟ್ಟು ತೆಗೆಯಲಾಗುತ್ತದೆ. ಗುಂಡಿಯನ್ನು ಒಂದೆರಡು ವಾರ ಆರಲು ಬಿಟ್ಟು ಆನಂತರ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನೊಡನೆ ಬೆರೆಸಿ ಗುಂಡಿಗೆ ತುಂಬಲಾಗುತ್ತದೆ. ತರುವಾಯ ಬೀಜಗಳನ್ನೊ ಸಸಿಗಳನ್ನೊ ಗುಂಡಿಯ ಮಧ್ಯದಲ್ಲಿ ನೆಡಲಾಗುತ್ತದೆ. ಚಿಕ್ಕ ಸಸಿಗಳಿಗೆ ನೆರಳು ಅಗತ್ಯವಾದ್ದರಿಂದ ಮುಂಚಿತವಾಗಿಯೇ ಬಾಳೆ, ಗ್ಲಿರಿಸಿಡಿಯ ಮುಂತಾದವನ್ನು ಬೆಳೆಸುವುದಿದೆ. ಜಾಕಾಯಿಯನ್ನು ಕಾಫಿ, ಚಹಾ, ಅಡಿಕೆ, ತೆಂಗು ಮತ್ತು ಹಣ್ಣಿನ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಸುವ ಕ್ರಮ ಉಂಟು. ಮೊದಲ ವರ್ಷ ಒಂದು ಗಿಡಕ್ಕೆ ೨೫ ಗ್ರಾಂ. ಕೊಟ್ಟಿಗೆ ಗೊಬ್ಬರ, ೩೦ ಗ್ರಾಂ. ಅಮೋನಿಯಮ್ ಸಲ್ಪೇಟ್, ೩೦ಗ್ರಾಂ. ಸೂಪರ್ ಫಾಸ್ಪೇಟ್ ಮತ್ತು ೩೦ ಗ್ರಾಂ. ಮ್ಯೂರಿಯೇಟ್ ಆಫ್ ಪೊಟ್ಯಾಷನ್ನು ಹಾಕಲಾಗುತ್ತದೆ. ಪ್ರತಿ ವರ್ಷ ಈ ಪ್ರಮಾಣವನ್ನು ಹೆಚ್ಚಿಸುತ್ತ ಹೋಗುವುದುಂಟು.[೬]

ಕೊಯ್ಲು ಮತ್ತು ಇಳುವರಿ[ಬದಲಾಯಿಸಿ]

ಸುಧಾರಿಸಿದ ರೀತಿಯಲ್ಲಿ ಬೇಸಾಯ ಮಾಡಿ ಜಾಕಾಯಿಯನ್ನು ಬೆಳೆಸಿದರೆ ನೆಟ್ಟ ಏಳನೆಯ ವರ್ಷದ ಅನಂತರ ಅಥವಾ ಮುಂಚಿತವಾಗಿ ಫಲ ಬಿಡಲು ಪ್ರಾರಂಭಿಸುವುದು. ಫಸಲು ೧೫ ವರ್ಷದವರೆಗೂ ಹೆಚ್ಚುತ್ತಹೋಗುತ್ತದೆ.

೭೦-೮೦ ವರ್ಷಗಳವರೆಗೂ ಲಾಭದಾಯಕ ಇಳುವರಿಯನ್ನು ಕೊಡುವುದು. ಜಾಕಾಯಿ ಮರ ವರ್ಷಪೂರ್ತಿ ಹಣ್ಣುಗಳನ್ನು ಬಿಡುವುದಾದರೂ ಮುಖ್ಯವಾದ ಕೊಯ್ಲಿನ ಕಾಲ ಜೂನ್-ಅಕ್ಟೋಬರ್. ಇಂಡೊನೇಷ್ಯದಲ್ಲಿ ವರ್ಷಕ್ಕೆ ಎರಡು ಮೂರು ಬಾರಿ ಇದರ ಕೊಯ್ಲು ಮಾಡುವುದುಂಟು. ಚೆನ್ನಾಗಿ ಬಲಿತು ಮೇಲಿನ ಸಿಪ್ಪೆ ಸೀಳಿರುವಂಥ ನೆಲಕ್ಕೆ ಬಿದ್ದ ಹಣ್ಣುಗಳನ್ನು ಆಯ್ದುಕೊಳ್ಳಲಾಗುತ್ತದೆ. ಕೆಲವು ಸಲ ತುದಿಯಲ್ಲಿ ಕೊಕ್ಕೆಯನ್ನು ಕಟ್ಟಿರುವ ಉದ್ದ ಕೋಲಿನ ಸಹಾಯದಿಂದ ಹಣ್ಣುಗಳನ್ನು ಕೊಯ್ಯುವುದುಂಟು. ಭಾರತದಲ್ಲಿ ವರ್ಷಕ್ಕೆ ಒಂದು ಮರದಿಂದ ಸರಾಸರಿ ೧೦೦೦-೧೫೦೦ ಹಣ್ಣುಗಳನ್ನು ಪಡೆಯಬಹುದು. ಇತರ ದೇಶಗಳಲ್ಲಿ ಒಂದು ಮರದಿಂದ ವರ್ಷಕ್ಕೆ ೨೦೦೦೦ ಹಣ್ಣುಗಳನ್ನು ಇಳಿಸಿದ ದಾಖಲೆಗಳೂ ಉಂಟು.

ಜಾಕಾಯಿ ಮತ್ತು ಜಾಪತ್ರೆಯನ್ನು ಸಂಸ್ಕರಿಸುವ ವಿಧಾನ[ಬದಲಾಯಿಸಿ]

ಹಣ್ಣುಗಳನ್ನು ಸಂಗ್ರಹಿಸಿ ಹಣ್ಣಿನ ಮೇಲಿರುವ ಸಿಪ್ಪೆಯನ್ನೆಲ್ಲ ತೆಗೆದು, ಬೀಜವನ್ನು ಜಾಪತ್ರೆಯಿಂದ ಬೇರ್ಪಡಿಸಿ ಒಣಗಿಸಬೇಕು. ಇದನ್ನು ಅಲ್ಲಾಡಿಸಿದಾಗ ಬೀಜದ ತಿರುಳು ಶಬ್ದ ಮಾಡಿದರೆ ಬೀಜ ಪೂರ್ತಿ ಒಣಗಿದೆ ಎಂದಾಗುತ್ತದೆ. ಅನಂತರ ಬೀಜದ ಸಿಪ್ಪೆಯನ್ನು ಕೊಡತಿಯಿಂದ ಇಲ್ಲವೆ ಬೇರೆ ಸೂಕ್ತವಾದ ಉಪಕರಣಗಳಿಂದ ಸೀಳಿ ಒಣಗಿದ ತಿರುಳನ್ನು ತೆಗೆದು ಶೇಖರಿಸಲಾಗುತ್ತದೆ. ಇಂಡೋನೇಷ್ಯದಲ್ಲಿ ಒಣಗಿಸುವುದಕ್ಕೆ ಮುಂಚೆ ಕಾಯಿಗೆ ಸುಣ್ಣವನ್ನು ಹಚ್ಚುವ ಕ್ರಮ ಉಂಟು. ಇದರಿಂದ ಬೀಜಕ್ಕೆ ಕೀಟಗಳ ಹಾವಳಿ ಇರುವುದಿಲ್ಲ ಮತ್ತು ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಜಾಪತ್ರೆಯನ್ನು ಕೂಡ ಜಾಕಾಯಿಯಿಂದ ಬೇರ್ಪಡಿಸಿ ಎರಡು ಹಲಗೆಗಳ ಮಧ್ಯೆ ಇಟ್ಟು ಚಪ್ಪಡೆ ಮಾಡಿ ಅನಂತರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಉತ್ತಮ ಗುಣದ ಜಾಪತ್ರೆಯನ್ನು ಪಡೆಯಲು ಅದಕ್ಕಾಗಿಯೇ ನಿರ್ಮಿಸಿದ ಒಲೆಯಲ್ಲಿ ಒಣಗಿಸುವುದುಂಟು. ಕೆಲವು ದೇಶಗಳಲ್ಲಿ ಒಣಗುವ ಜಾಪತ್ರೆಯ ಮೇಲೆ ಉಪ್ಪು ನೀರನ್ನು ಸಿಂಪಡಿಸುವುದಿದೆ. ಇದರಿಂದ ಜಾಪತ್ರೆಯನ್ನು ಬಹಳ ಕಾಲ ಕೆಡದಂತೆ ಇಡಬಹುದು. ಒಣಗಿಸುವಾಗ ಜಾಪತ್ರೆ ಮೊದಲು ಕಗ್ಗೆಂಪು ಬಣ್ಣಕ್ಕೆ ತಿರುಗಿ ಬಿದುರವಾಗುತ್ತದೆ. ೬ ವಾರಗಳ ಅನಂತರ ಇದಕ್ಕೆ ಒಳ್ಳೆಯ ಅಂಬರ್ ಬಣ್ಣ ಬರುತ್ತದೆ.

ಒಳ್ಳೆಯ ಜಾಕಾಯಿ ೨-೩.೫ ಸೆಂ.ಮೀ. ಉದ್ದವೂ ೧.೫-೨.೮ ಸೆಂ.ಮೀ. ಅಗಲವೂ ಇದ್ದು ಅಂಡಾಕಾರದ್ದಾಗಿದೆ. ಇದರ ಬಣ್ಣ ಬೂದುಮಿಶ್ರಿತ ಕಂದು. ಅಲ್ಲಲ್ಲೆ ಸೂಕ್ಷ್ಮವಾದ ಕೆಂಗಂದು ಬಣ್ಣದ ಮಚ್ಚೆಗಳೂ ಗೆರೆಗಳೂ ಉಂಟು. ಅಲ್ಲದೆ ಬಲೆಯಾಕಾರದ ಜಾಡುಗಳೂ ಇವೆ. ಇದಕ್ಕೆ ತೀವ್ರವಾದ ಸುವಾಸನೆಯೂ ಕಟು ರುಚಿಯೂ ಉಂಟು. ಸಾಮಾನ್ಯವಾಗಿ ಜಾಕಾಯಿಯಲ್ಲಿ ಈಸ್ಟ್ ಇಂಡಿಯನ್ ಮತ್ತು ವೆಸ್ಟ್ ಇಂಡಿಯನ್ ಎಂಬ ಎರಡು ಮುಖ್ಯ ಬಗೆಗಳುಂಟು. ಇವುಗಳಲ್ಲಿ ಮೊದಲನೆಯದು ಉತ್ತಮ ದರ್ಜೆಯದೆಂದು ಹೆಸರಾಗಿದೆ. ಇದರಲ್ಲೂ ಬಾಂಡ, ಸಿಯಾವ್ ಮತ್ತು ಪೆನಾಂಗ್ ಜಾಕಾಯಿಗಳೆಂಬ ವರ್ಗಗಳಿವೆ. ಇವುಗಳೆಲ್ಲೆಲ್ಲ ಅತ್ಯುತ್ತಮವಾದ್ದು ಬಾಂಡ ಜಾಕಾಯಿ. ಇವಲ್ಲದೆ ಮಿರಿಸ್ಟಿಕ ಆರ್ಜೆಂಶಿಯ ಪ್ರಭೇದದಿಂದ ಪಡೆಯಲಾಗುವ ಪಾಪುವ ಜಾಕಾಯಿ ಮತ್ತು ಮಿ.ಮಲಬಾರಿಕ ಪ್ರಭೇದದಿಂದ ಪಡೆಯಲಾಗುವ ಬಾಂಬೆ ಜಾಕಾಯಿ ಎಂಬ ಬಗೆಗಳೂ ಉಂಟು. ಇವನ್ನು ಜಾಕಾಯಿಯೊಂದಿಗೆ ಕಲಬೆರಕೆ ಮಾಡುವುದಿದೆ.

ಉಪಯುಕ್ತಗಳು[ಬದಲಾಯಿಸಿ]

ಜಾಜಿಕಾಯಿ ಸಿಹಿತಿಂಡಿ ಪಾನೀಯಗಳಲ್ಲಿ ಸುವಾಸನೆ ವೃದ್ಧಿಗಾಗಿ ಬಳಸ್ಪಡುತ್ತದೆ.ಔಷಧ ಗುಣವನ್ನು ಹೊಂದಿದ ಜಾಯಿಹಣ್ಣಿನ ಸಿಪ್ಪೆಯಲ್ಲಿ ತಂಬುಳಿ,ಜ್ಯಾಮ್,ಹಾಗೂ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಜಾಯಿಶ್ಯಾಂಪೂ,ಸುಗಂಧದ್ರವ್ಯ,ಮತ್ತು ಕೀಟಕನಾಶಕಗಳ ತಾಯಾರಿಕೆಯಲ್ಲಿ ಜಾಯಿಕಾಯನ್ನು ಬಳಸುತ್ತಾರೆ.ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ ಕಾಯಿಯ ತಿರುಳಿನಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ.ಇದನ್ನು ಜಾಯಿ ಬೆಣ್ಣೆ(Nutmeg butter)ಎಂದು ಕರೆಯುತ್ತಾರೆ.ಜಾಯಿ ಬೆಣ್ಣೆಯಲ್ಲಿ ಮಿರಿಸ್ಟಿಕ್ ಆಮ್ಲಎನ್ಲಲಾಗುವ ಪರ್ಯಾಪ್ತ ಕೊಬ್ಬಿನ ಆಮ್ಲ ೭೦% ರಷ್ಟು ಇರುತ್ತದೆ.ಜಾಯಿಬೆಣ್ಣೆಯನ್ನು ಕೋಕೋಬಟ್ಟರು ಬದಲಾಗಿ ಚಾಕೋಲೆಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.[೭]

ರಾಸಾಯನಿಕ ಸಂಯೋಜನೆ[ಬದಲಾಯಿಸಿ]

ಜಾಕಾಯಿಯಲ್ಲಿ ೧೪.೩% ತೇವಾಂಶ, ೭.೫% ಪ್ರೋಟೀನ್, ೨೮.೫% ಕಾರ್ಬೋಹೈಡ್ರೇಟುಗಳು, ೩೬.೪% ಈಥರಿನಲ್ಲಿ ವಿಲೀನವಾಗಿ ಬೇರ್ಪಡುವಂಥ ವಸ್ತು, ೧೧.೬% ನಾರು, ೧.೭% ಖನಿಜಾಂಶ, ೦.೧೨% ಕ್ಯಾಲ್ಸಿಯಮ್, ೦.೨೪% ರಂಜಕ ಮತ್ತು ಪ್ರತಿ ೧೦೦ ಗ್ರಾಂ. ನಲ್ಲಿ ೪.೬ ಗ್ರಾಂ. ಕಬ್ಬಿಣ ಇವೆ. ಜೊತೆಗೆ ೬.೧೬% ಚಂಚಲ ತೈಲ, ೧೪.೬% - ೨೪.೨% ಪಿಷ್ಟ ಹಾಗೂ ಪೆಂಟೊಸಾನುಗಳು, ಫರ್‍ಫರಾಲ್, ಪೆಕ್ಟಿನುಗಳೂ ಉಂಟು. ಜಾಕಾಯಿಯ ವಿಶಿಷ್ಟ ವಾಸನೆಗೆ ಇದರಲ್ಲಿನ ಚಂಚಲ ತೈಲವೇ ಕಾರಣ. ಇದನ್ನು ಆವಿ ಆಸವೀಕರಣದಿಂದ ಬೇರ್ಪಡಿಸಿ ಆಹಾರ ಪದಾರ್ಥಗಳು, ಪಾನೀಯಗಳು, ಸಾಬೂನು, ತಂಬಾಕು ಮುಂತಾದವಕ್ಕೆ ವಾಸನೆ ಕಟ್ಟಲು ಬಳಸುತ್ತಾರೆ. ಇದಕ್ಕೆ ಔಷಧೀಯ ಗುಣಗಳೂ ಉಂಟು. ಉಜ್ಜುತೈಲ (ಲಿನಿಮೆಂಟ್) ಹಾಗೂ ಕೇಶತೈಲಗಳ ತಯಾರಿಕೆಯಲ್ಲೂ ಮೂತ್ರಕೋಶದ ಉರಿಯೂತದ ನಿವಾರಣೆಗೂ ಜಾಕಾಯಿ ತೈಲವನ್ನು ಉಪಯೋಗಿಸುವುದಿದೆ. ಇದರಲ್ಲಿ ಮಿರಿಸ್ಟಿಸಿನ್ ಎಂಬ ವಿಷವಸ್ತು ಇರುವುದರಿಂದ ತೈಲವನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ಜಾಕಾಯಿಯಲ್ಲಿ ಒಂದು ತೆರನ ಕೊಬ್ಬೂ ಉಂಟು. ಜಾಕಾಯಿಯನ್ನು ಅರೆದು, ಬೇಯಿಸಿ, ಅನಂತರ ಗಾಣಕ್ಕೆ ಒಡ್ಡಿ ಈ ಕೊಬ್ಬನ್ನು ಹೊರತೆಗೆಯಲಾಗುತ್ತದೆ. ಇದರ ಬಣ್ಣ ಹಳದಿ, ವಾಸನೆ ಜಾಕಾಯಿಯಂತೆಯೇ. ಇದನ್ನು ಸಂಧಿವಾತ, ಪಾಶ್ರ್ವವಾಯು, ಉಳುಕು ಮುಂತಾದವುಗಳಲ್ಲಿ ಉಪಯೋಗಿಸಲಾಗುತ್ತದೆ.

ಗ್ಯಾಲರಿ[ಬದಲಾಯಿಸಿ]

Nutmeg fruit
Nutmeg fruit 
Red aril and seed within fruit
Red aril and seed within fruit 
Aril surrounding nutmeg seed
Aril surrounding nutmeg seed 

ಬಾಹ್ಯಾಕೊಂಡಿಗಳು[ಬದಲಾಯಿಸಿ]

  1. http://sobagu.com/%E0%B2%9C%E0%B2%BE%E0%B2%AF%E0%B2%BF%E0%B2%95%E0%B2%BE%E0%B2%AF%E0%B2%BF/

ಉಲ್ಲೇಖನ[ಬದಲಾಯಿಸಿ]

  1. "Nutmeg and Mace History". http://homecooking.about.com/. Archived from the original on 2014-01-06. Retrieved 2013-12-3. {{cite web}}: Check date values in: |accessdate= (help); External link in |publisher= (help)
  2. "Nutmeg". www.erowid.org/. Retrieved 2013-12-2. {{cite web}}: Check date values in: |accessdate= (help)
  3. Dotschkal, Janna (2015-06-22). "The Spice Trade's Forgotten Island". National Geographic. Retrieved 2017-04-13.
  4. Ehrenpreis, J. E.; Deslauriers, C; Lank, P; Armstrong, P. K.; Leikin, J. B. (2014). "Nutmeg Poisonings: A Retrospective Review of 10 Years Experience from the Illinois Poison Center, 2001–2011". Journal of Medical Toxicology. 10 (2): 148–151. doi:10.1007/s13181-013-0379-7. PMC 4057546. PMID 24452991.
  5. https://www.drugs.com/npp/nutmeg.html
  6. (December 30, 2016). "What Nutmeg Can Tell Us About Nafta". New York Times.
  7. "Nutmeg and derivatives (Review)". Food and Agriculture Organization (FAO) of the United Nations. September 1994. Retrieved 29 October 2018

ಕನ್ನಡ ಪುಸ್ತಕಗಳಲ್ಲಿ[ಬದಲಾಯಿಸಿ]

ಹಸುರು ಹೊನ್ನು ಪುಸ್ತಕದಲ್ಲಿ ಬಿ ಜಿ ಎಲ್ ಸ್ವಾಮಿಯವರು ಈ ಗಿಡದ ಬಗ್ಗೆ ವಿವರ ನೀಡುತ್ತಾರೆ.

"https://kn.wikipedia.org/w/index.php?title=ಜಾಪತ್ರೆ&oldid=1160528" ಇಂದ ಪಡೆಯಲ್ಪಟ್ಟಿದೆ