ವಿಷಯಕ್ಕೆ ಹೋಗು

ಜಲ ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲ ಚಿಕಿತ್ಸೆ ಎಂದರೆ ಕೇವಲ ನೀರಿನ ಉಪಯೋಗದಿಂದಲೇ ಸಕಲ ವ್ಯಾಧಿಗಳನ್ನೂ ಗುಣಪಡಿಸಬಹುದೆಂದು ಪರಿಗಣಿಸಿ ಆಚರಿಸುವ ಚಿಕಿತ್ಸಾವಿಧಾನ.[೧] ಪ್ರಕೃತಿಯಲ್ಲಿ ದೊರೆಯುವ ನೀರನ್ನು ಸೇವಿಸುವುದೂ, ಸ್ನಾನ, ಮುಳುಗಡೆ (ಇಮ್ಮರ್ಷನ್) ಮುಂತಾದ ವಿಧಾನಗಳಿಂದ ಅಲ್ಪಕಾಲಿಕವಾಗಿ ಇಲ್ಲವೇ ದೀರ್ಘಕಾಲಿಕವಾಗಿ ನೀರಿನೊಡನೆ ಸಂಪರ್ಕಗೊಳಿಸಿಕೊಳ್ಳುವುದೂ ಈ ವಿಧಾನದಲ್ಲಿ ಆಚರಿಸುವ ಮಾರ್ಗಗಳು. ಬಹು ಹಿಂದಿನಿಂದಲೂ ಪ್ರಪಂಚದ ನಾನಾಕಾಲಗಳಲ್ಲಿ ಜಲಚಿಕಿತ್ಸೆ ಪ್ರಮುಖವಾಗಿ ಜನಪ್ರಿಯವಾಗಿ ಇದ್ದುದೂ ಇರುವುದೂ ಕಂಡುಬಂದಿದೆ. ದೇಹದಲ್ಲಿ ನೀರಿನಿಂದಾಗುವ ಪರಿಣಾಮಗಳನ್ನು ಅರಿತು ಜ್ವರನೋವುಗಳ ಶಮನಕ್ಕೆ ತಣ್ಣೀರಿನ ಉಪಯೋಗವನ್ನು ಹಿಪಾಕ್ರಟೀಸ್ ಸೂಚಿಸಿದ್ದನು. [೨]

ಚಿಲುಮೆ ನೀರಿನ ಸಂಶ್ಲೇಷಣೆ[ಬದಲಾಯಿಸಿ]

ಪರಾಸೆಲ್ಸಸ್ ಎಂಬ ವಿಜ್ಞಾನಿ ಆ ಕಾಲದಲ್ಲಿ ಯೂರೋಪಿನ ಸೇಂಟ್ ಮಾರಿಟ್ಸ್‍ನ ಚಿಲುಮೆ ನೀರಿನ ಸಂಶ್ಲೇಷಣೆಯನ್ನು ಮಾಡಿ ಅದರಲ್ಲಿ ವಿಲೀನವಾಗಿರುವ ಲವಣ ವಸ್ತುಗಳನ್ನು ಶೋಧಿಸಿದ್ದ. ಆದರೂ ಚಿಲುಮೆ ನೀರಿನಲ್ಲಿ ವಿಲೀನವಾದ ಲವಣ ಅನಿಲಗಳ ಹಾಗೂ ನೀರಿನ ಉಷ್ಣತೆಯ ವಿಷಯವಾಗಿ ವೈದ್ಯರು ಹತ್ತೊಂಭತ್ತನೆಯ ಶತಮಾನದ ಪ್ರಾರಂಭದವರೆಗೂ ಯೋಚಿಸಿರಲಿಲ್ಲ. ಇಂಗ್ಲೆಂಡಿನಲ್ಲಿ ಥಾಮಸ್ ಗಾರ್ನೆಟ್ ಎಂಬಾತ ಮೊದಲಿಗೆ ಬೇರೆ ಬೇರೆ ಚಿಲುಮೆಗಳ ನೀರಿನ ಉಷ್ಣತೆಯನ್ನು ಮಾಪಿಸಿ ಬಿಸಿನೀರಿನಲ್ಲಿ ಸಂಪರ್ಕಗೊಳ್ಳಬೇಕಾದ ಕಾಲವನ್ನು ನಿಗದಿಗೊಳಿಸಿದ. ಜಲಚಿಕಿತ್ಸೆ ಹೆಚ್ಚು ಜನಾದರಣೀಯವಾಗಿ ಹೊಸ ಹೊಸ ಚಿಲುಮೆಗಳು ಕಂಡುಹಿಡಿಯಲ್ಪಟ್ಟೊಡನೆಯೇ ಅವುಗಳ ನೀರಿನ ಉಷ್ಣಮಾಪನ ಮತ್ತು ಸಂಶ್ಲೇಷಣೆಯನ್ನು ಮಾಡುವುದಕ್ಕೆ ವೈದ್ಯರೂ ಪ್ರಾರಂಭಿಸಿ, ಆಯಾ ಚಿಲುಮೆಯ ನೀರು ಅದರಲ್ಲಿ ವಿಲೀನವಾಗಿರುವ ಯಾವುದೋ ಲವಣ ಅಥವಾ ಅನಿಲದಿಂದ ಇಲ್ಲವೆ ಅದರ ವಿಶಿಷ್ಟ ಉಷ್ಣತೆಯಿಂದ ತನ್ನ ಪ್ರಭಾವವನ್ನು ಬೀರುತ್ತದೆ ಎಂದು ಸಾರುವುದಕ್ಕೆ ಪ್ರಾರಂಭಿಸಿದರು.

ಜಲ ಚಿಕಿತ್ಸೆಯ ಉಪಯುಕ್ತತೆ[ಬದಲಾಯಿಸಿ]

ವಾಸ್ತವವಾಗಿ ತಣ್ಣೀರಿನ ಸ್ನಾನ ಆ ಕೂಡಲೇ ಚರ್ಮದ ರಕ್ತನಾಳಗಳನ್ನು ಸಂಕುಚಿಸಿ ಚಳಿಯಾಗುವಂತೆಯೂ ಚರ್ಮ ಬಿಳಿಚಿಕೊಳ್ಳುವಂತೆಯೂ ಮಾಡುತ್ತದೆ. ಅನಂತರ ಸುಮಾರು ೧೫ -೨೦ ನಿಮಿಷ ಬೆವರುವುದು ಕಡಿಮೆ ಆಗಿ ದೇಹ ಶಾಖ ನಷ್ಟವೂ ಕಡಿಮೆ ಆಗಿ ದೇಹದ ಉಷ್ಣತೆ ಹಾಗೂ ಗುಂಡಿಗೆಮಿಡಿತ ಮತ್ತು ಉಸಿರಾಟಗಳ ದರಗಳು ಹೆಚ್ಚುತ್ತವೆ. ಚರ್ಮದ ರಕ್ತನಾಳಗಳು ಪುನಃ ಆಕುಂಚಿಸಿ ಅಧಿಕ ರಕ್ತ ಪರಿಚಲನೆಯಿಂದ ಚರ್ಮ ಕೆಂಪಗೂ ಬೆಚ್ಚಗೂ ಆಗುತ್ತದೆ. ಅನಂತರ ಯಥಾಸ್ಥಿತಿಗೆ ಬರುತ್ತದೆ.[೩] ಇದೇ ರೀತಿ ಹದವಾದ ಬಿಸಿನೀರಿನ ಸ್ನಾನದಿಂದಲೂ, ಆ ಕೂಡಲೆ ಚರ್ಮದ ರಕ್ತ್ತನಾಳಗಳು ಆಕುಂಚಿಸಿ ಸುಖಾನುಭವ ಉಂಟಾಗುತ್ತದೆ. ಆದರೆ ಬಹು ಬಿಸಿಯಾದ (ಸುಮಾರು 50 ಸೆಂ. ಮೀರಿ) ನೀರಿನ ಜಳಕಮಾಡಿದರೆ ಮೈಕಾವು ಜ್ವರದಂತೆ ಏರಿ ನಾಡಿ, ಉಸಿರಾಟಗಳ ದರ ಹೆಚ್ಚಿ ಸುಮಾರು ಒಂದು ಗಂಟೆ ಕಾಲ ಮೈಯೆಲ್ಲ ಬೆವರುತ್ತದೆ. ರಕ್ತಕಣಗಳ ಸಂಖ್ಯೆ ವೃದ್ಧಿಸುವುದಲ್ಲದೆ ಹೀಮೋಗ್ಲೊಬಿನ್ನಿನ ಪ್ರಮಾಣವೂ ಹೆಚ್ಚುವುದುಂಟು. ಮೂತ್ರೋತ್ಪತ್ತಿ ವಿಸರ್ಜನೆಗಳು ಕಡಿಮೆ ಆಗುವುದರಿಂದ ರಕ್ತದಲ್ಲಿ ಯೂರಿಯಾ, ಯೂರಿಕ್ ಆಮ್ಲ, ಕ್ರಿಯಾಟನ್ ಮುಂತಾದ ತ್ಯಾಜ್ಯ ವಸ್ತುಗಳೂ ಹೆಚ್ಚಾಗುವುದೂ ಉಂಟು. ಕೀಲು ನೋವು, ವಾತರೋಗ, ಕೈಕಾಲುಸೆಳವು ಇವುಗಳಿಂದ ನರಳುವ ವ್ಯಕ್ತಿಗಳನ್ನು ಹದವಾದ ಬಿಸಿನೀರಿನಲ್ಲಿ ಕುತ್ತಿಗೆಯ ತನಕ ಮುಳುಗಿಸಿ ಅವರ ಕೈಕಾಲುದೇಹಗಳ ಚಲನವನ್ನು ಪ್ರೋತ್ಸಾಹಿಸುವುದು ಜಲಚಿಕಿತ್ಸೆಯಲ್ಲಿ ಒಂದು ವಿಶೇಷ ವಿಧ. ಚಲನೆಗೆ ಬೇಕಾಗುವ ಪ್ರಯತ್ನ ನೀರಿನೊಳಗೆ ಕಡಿಮೆಯಾಗಿ ಚಲನೆ ಸುಲಭ ಸಾಧ್ಯವಾಗುವುದರಿಂದ ಈ ರೋಗಿಗಳು ಉಪಯುಕ್ತ ಅಂಗಚಲನೆಯ ಮರುಪ್ರಾಪ್ತಿಗಾಗಿ ಇಂಥ ಪ್ರಯತ್ನವನ್ನು ಮಾಡಲಾಗುತ್ತದೆ.[೪] [೫]

ಚಿಕಿತ್ಸಾ ಗುಣ[ಬದಲಾಯಿಸಿ]

ನೀರಿನಲ್ಲಿ ಮುಳುಗಡೆ, ಜಳಕ ಇವು ಅನೇಕ ಸಂದರ್ಭಗಳಲ್ಲಿ ತರ್ಕಸಮ್ಮತವಾದ ಮಾರ್ಗಗಳಾಗಿದ್ದು ನಿರೀಕ್ಷಿಸಿದ ಫಲವನ್ನು ಕೊಡುತ್ತವೆ. ಚಿಲುಮೆ ನೀರಿನ ಸೇವನೆ, ಸ್ನಾನಗಳು ಇಂಗ್ಲೆಂಡ್ ಯೂರೋಪುಗಳಲ್ಲಿ ಅಮೆರಿಕ ಸಂಯುಕ್ತಸಂಸ್ಥಾನಗಳಿಗಿಂತ ಹೆಚ್ಚು ಪ್ರಚಾರದಲ್ಲಿವೆ. ಸಂಯುಕ್ತಸಂಸ್ಥಾನಗಳ ವೈದ್ಯರು, ಚಿಲುಮೆ ನೀರಿನ ಉಪಯೋಗದಿಂದ ಕಂಡುಬರುವ ಸತ್ಪರಿಣಾಮಗಳು ನೇರಫಲಗಳಲ್ಲದೆ ಪರೋಕ್ಷವಾದುವೆಂದೂ ಇಂಥ ಸ್ಥಳಗಳಲ್ಲಿಯ ಹವ, ಆವರಣ, ಕ್ಲುಪ್ತ ಆಹಾರ ವ್ಯಾಯಾಮ ನಡೆವಳಿಕೆಗಳು, ದೇಹ ಹಾಗೂ ಮನಸ್ಸಿಗೆ ನೆಮ್ಮದಿ ಉಂಟುಮಾಡಿ ಫಲಕೊಡುತ್ತವೆಂದೂ ನಂಬಿರುತ್ತಾರೆ.[೬]

ಉಲ್ಲೇಖಗಳು[ಬದಲಾಯಿಸಿ]

  1. "What is Water Therapy & Its Benefits? Everything You Need to Know". Livpure. Archived from the original on 2020-01-11. Retrieved 2020-01-11.
  2. "Water & Nutrition | Drinking Water | Healthy Water | CDC". www.cdc.gov. 10 October 2018. Retrieved 11 January 2020. {{cite news}}: Cite has empty unknown parameter: |1= (help)
  3. "Water cure therapy and its benefits". Jindal Naturecure Institute. 27 November 2018. Retrieved 11 January 2020.
  4. "WATER THERAPY AND ITS BENEFITS". www.linkedin.com. Retrieved 11 January 2020. {{cite news}}: Cite has empty unknown parameter: |1= (help)
  5. "Water". www.mdpi.com. Retrieved 11 January 2020. {{cite news}}: Cite has empty unknown parameter: |1= (help)
  6. "Water Therapy From India". www.anvari.org. Retrieved 11 January 2020.