ವಿಷಯಕ್ಕೆ ಹೋಗು

ಚಕ್ರಮುನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಕ್ರಮುನಿ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Malpighiales
ಕುಟುಂಬ:
Phyllanthaceae
ಪಂಗಡ:
Phyllantheae
ಉಪಪಂಗಡ:
Flueggeinae
ಕುಲ:
Sauropus
ಪ್ರಜಾತಿ:
S. androgynus
Binomial name
Sauropus androgynus

ಚಕ್ರಮುನಿಯ ತವರೂರು ಮಲೇಷಿಯಾ.ಸತ್ವಯುತ ಸಸ್ಯಮೂಲ ಆಹಾರಗಳಲ್ಲಿ ಪ್ರಕೃತಿಯ ಅಮೂಲ್ಯ ಕೊಡುಗೆಗಳಲ್ಲಿ ಚಕ್ರಮುನಿಯೂ ಒಂದು.ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ "ಬಹುಜೀವಸತ್ವಗಳ ಹಸಿರು" (ಮಲ್ಟಿವಿಟಮಿನ್ ಪ್ಲಾಂಟ್) ಎಂದು ಕರೆಯಲಾಗುತ್ತದೆ. ಚಕ್ರಮುನಿಯ ಎಲೆ,ಚಿಗುರು ಮತ್ತು ಕಾಂಡವನ್ನು ಹಸಿಯಾಗಿ ಇಲ್ಲವೇ ಬೇಯಸಿ ತಿನ್ನಬಹುದು.ಎಲೆಗಳು ಬೇಯಿಸಿದ ನಂತರ ಹುಳಿಯಾಗಿರುತ್ತವೆ.ಇಂಡೋನೇಷಿಯಾದಲ್ಲಿ ಇದನ್ನು ಹುದುಗು ಬಂದ ಅಕ್ಕಿಯ ಜೊತೆ ಬೇಯಿಸಿ ತಿನ್ನುತ್ತಾರೆ.ಕನ್ಯಾಕುಮಾರಿ ಜಿಲ್ಲೆಯಲ್ಲಿ ಇದನ್ನು ಪಶುಗಳ ಮತ್ತು ಕೋಳಿಗಳ ಆಹಾರ ತಯಾರಿಕೆಗಾಗಿ ಬಳಸುತ್ತಾರೆ.ಉತ್ತಮ ಪೌಷ್ಟಿಕತೆ ಮತ್ತು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಪ್ರತಿ ಮನೆಯ ಮತ್ತು ಶಾಲೆಯ ತೋಟಗಳಲ್ಲಿ ಬೆಳೆಸಿ ಉಪಯೋಗಿಸಿದರೆ ಮಹಿಳೆಯರ ಮತ್ತು ಮಕ್ಕಳಲ್ಲಿನ ಜೀವಸತ್ವಗಳ ಕೊರತೆಯನ್ನು ನೀಗಿಸಬಹುದಾಗಿದೆ.

ಸಸ್ಯವರ್ಣನೆ

[ಬದಲಾಯಿಸಿ]

ಬಹುಬಳಕೆಯ ಈ ಚಕ್ರಮುನಿ (ಸಾರೊಪಸ್ ಆಂಡ್ರೊಗೈನಸ್) ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ.ಇನ್ನು ೨ ರಿಂದ ೩.೫ ಮೀಟರ್ ಎತ್ತರ ಬೆಳೆಯುವ ಸಣ್ಣ ಪೊದೆ.ಇದು ಮೃದುವಾದ ರೆಂಬೆಗಳನ್ನು ಹೊಂದಿದ್ದು ಅನೇಕ ಸಂಯುಕ್ತ ಕಿರುಎಲೆಗಳನ್ನು ಹೊಂದಿರುತ್ತದೆ.

ಮಣ್ಣು

[ಬದಲಾಯಿಸಿ]

ಫಲವತ್ತಾದ ಮತ್ತು ಚೆನ್ನಾಗಿ ಬಸಿದು ಹೋಗುವಂತಹ ಎಲ್ಲಾ ತರಹದ ಭೂಮಿಯಲ್ಲಿ ಯಶಸ್ವಿಯಾಗಿ ಇದರ ಬೇಸಾಯ ಸಾಧ್ಯ.

ಹವಾಗುಣ

[ಬದಲಾಯಿಸಿ]

ಇದು ಚಳಿ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುವುದಿಲ್ಲವಾದರೂ ಶೀತ ಹಾಗೂ ಸಮಶೀತೋಷ್ಣವಲಯಗಳಲ್ಲೂ ಚೆನ್ನಾಗಿ ಬೆಳೆಯುತ್ತದೆ.

ಬೇಸಾಯ ಕ್ರಮಗಳು

[ಬದಲಾಯಿಸಿ]

ಗಿಡಗಳನ್ನು ಹೊಸದಾಗಿ ಬೀಜಗಳಿಂದ ಬೆಳೆಯಬೇಕಾದಲ್ಲಿ,ಬೀಜಗಳನ್ನು ಮೇ-ಜೂನ್ ತಿಂಗಳುಗಳಲ್ಲಿ ಬಿತ್ತನೆ ಮಾಡಬೇಕು.ಸೀಸದ ಕಡ್ಡಿಯ ಗಾತ್ರದ ೬ ರಿಂದ ೧೨ ತಿಂಗಳು ಚೆನ್ನಾಗಿ ಬಲಿತ ರೆಂಬೆಗಳನ್ನು ೨೦-೩೦ ಸೆಂ.ಮೀ. ಉದ್ದದ ತುಂಡುಗಳಾಗಿ ಕತ್ತರಿಸಿ,ಜೂನ್-ಜುಲೈ ತಿಂಗಳ ಆನಂತರ ಅವು ಚಿಗುರು ಒಡೆಯುತ್ತವೆ.ಆಮೇಲೆ ೨ ಘನ ಅಡಿ ಅಳತೆಯ ಗುಣಿಗಳನ್ನು ತೆಗೆದು,ಕೆಲವು ದಿನ ಬಿಟ್ಟು ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರವನ್ನು ಮೇಲ್ಮಣ್ಣಿನೊಡನೆ ಮಿಶ್ರ ಮಾಡಿ ಗುಣಿಗಳನ್ನು ತುಂಬಬೇಕು.ಆನಂತರ ಒಂದೊಂದು ಗುಣಿಗೂ ಎರಡು ತುಂಡುಗಳಂತೆ ೪೫ ಸೆಂ.ಮೀ. ಅಂತರದಲ್ಲಿ ೧೨-೧೫ ಸೆಂ.ಮೀ. ಆಳವಾಗಿ ನಾಟಿ ಮಾಡಬೇಕು.ಗಿಡಗಳು ೯೦ ಸೆಂ.ಮೀ. ಎತ್ತರ ಬೆಳೆದಾಗ ಅವುಗಳ ಕುಡಿಯನ್ನು ಚಿವುಟಿ ಹಾಕಬೇಕು.ಇದರಿಂದ ಗಿಡವು ಪೊದೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ನೀರಾವರಿ

[ಬದಲಾಯಿಸಿ]

ನೀರನ್ನು ಕಾಲಕಾಲಕ್ಕೆ ಗಿಡಗಳಿಗೆ ಹಾಕುತ್ತಿರಬೇಕು.

ಕಳೆ ಹತೋಟಿ

[ಬದಲಾಯಿಸಿ]

ಗಿಡದ ಬುಡಭಾಗದಲ್ಲಿರುವ ಕಳೆಗಳನ್ನು ತೆಗೆಯುತ್ತಿರಬೇಕು.

ಸಸ್ಯ ಸಂರಕ್ಷಣೆ

[ಬದಲಾಯಿಸಿ]

ಈ ಗಿಡದ ಹೆಚ್ಚು ಹಾನಿಯುಂಟುಮಾಡುವ ಕೀಟ ಮತ್ತು ರೋಗ ಬಾಧೆ ಕಂಡುಬಂದಿಲ್ಲ.

ಕೊಯ್ಲು ಮತ್ತು ಇಳುವರಿ

[ಬದಲಾಯಿಸಿ]

ನಾಟಿಯಾದ ೩ ರಿಂದ ೪ ತಿಂಗಳ ಆನಂತರ ಗಿಡಗಳು ಪೊದೆಯಾಗಿ ಬೆಳೆದು ಕೊಯ್ಲಿಗೆ ಬರುತ್ತವೆ.ನಂತರ ಪ್ರತಿತಿಂಗಳು ಎಳೆಯ ಸೊಪ್ಪನ್ನು ಕೊಯ್ಲು ಮಾಡಿ ಸೊಪ್ಪು ತರಕಾರಿಯಾಗಿ ಬಳಸಬಹುದು.ಒಂದು ಸಲಕ್ಕೆ ಒಂದು ಗಿಡದಿಂದ ಸರಾಸರಿ ೨-೩ ಕೆ.ಜಿ. ಸೊಪ್ಪನ್ನು ಪಡೆಯಬಹುದು.ಆರು ತಿಂಗಳಿಗೊಮ್ಮೆ ಗಿಡಗಳನ್ನು ಸವರುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ.

ಉಪಯುಕ್ತ ಭಾಗಗಳು

[ಬದಲಾಯಿಸಿ]

ಎಲೆ,ಬೇರು,ಕಾಂಡ.[]

ಔಷಧೀಯ ಗುಣಗಳು

[ಬದಲಾಯಿಸಿ]
  • ಜೀವಸತ್ವದ ಕೊರತೆ:ಪೋಷಕಾಂಶಗಳ ಕೊರತೆ ಅದರಲ್ಲಿಯೂ ಜೀವಸತ್ವ ಎ,ಬಿ,ಸಿಗಳ ನ್ಯೂನತೆಯಿಂದ ಬಳಲುವವರು ಪ್ರತಿದಿನ ಚಕ್ರಮುನಿ ಸೊಪ್ಪನ್ನು ಹಸಿಯಾಗಿ ತಿನ್ನುವುದು ಉತ್ತಮವಾದುದು.ಎರಡು ಚಮಚೆ ಚಕ್ರಮುನಿ ಸೊಪ್ಪಿನ ರಸಕ್ಕೆ ಒಂದು ಚಮಚೆ ಜೇನು ಬೆರೆಸಿ ಬೆಳಗ್ಗೆ ಖಾಲಿಹೊಟ್ಟೆಗೆ ಕುಡಿಯುವುದರಿಂದ ಉತ್ತಮ ಪರಿಣಾಮ ಉಂಟಾಗುತ್ತದೆ.
  • ಮಲಬದ್ಧತೆಯಿಂದ ಬಳಲುವವರು ಆಹಾರದಲ್ಲಿ ಚಕ್ರಮುನಿ ಸೊಪ್ಪನ್ನು ಹೆಚ್ಚು ಬಳಸಬೇಕು.
  • ಕಣ್ಣಿನ ಕಾಯಿಲೆಗಳಲ್ಲಿ:ಚಕ್ರಮುನಿ ಎಲೆಯ ರಸವನ್ನು ದುಂಡುಮಲ್ಲಿಗೆ ಎಲೆಯ ರಸ ಮತ್ತು ದಾಳಿಂಬೆ ಬೇರುಗಳೊಂದಿಗೆ ಸೇರಿಸಿ ಜಜ್ಜಿ ಹಿಂಡಿ ತೆಗೆದು ರಸವನ್ನು ತೆಳುವಾದ ಸ್ವಚ್ಛವಾದ ಬಟ್ಟೆಯಲ್ಲಿ ಶೋಧಿಸಿ,ಈ ರಸವನ್ನು ಕಣ್ಣು ಕೆಂಪಾಗಿದ್ದಲ್ಲಿ ಎರಡು ಹನಿ ಕಣ್ಣಿಗೆ ಹಾಕುವುದರಿಂದ ಉರಿ,ನೋವು ಶಮನವಾಗುತ್ತದೆ.

ಅಡುಗೆ

[ಬದಲಾಯಿಸಿ]

ತಮಿಳುನಾಡಿನಲ್ಲಿ ಪಶು ಮತ್ತು ಕೋಳಿ ಆಹಾರದಲ್ಲಿ ಚಕ್ರಮುನಿ ಸೊಪ್ಪನ್ನು ಬಳಸುತ್ತಾರೆ.

ಇತರ ಭಾಷೆಗಳಲ್ಲಿ

[ಬದಲಾಯಿಸಿ]
  • ಇಂಗ್ಲೀಷ್ - ಮಲ್ಟಿವಿಟಮಿನ್ ಪ್ಲಾಂಟ್
  • ವೈಜ್ಞಾನಿಕ ಹೆಸರು - sauropus androgynus (L.) Merr.

ಪೋಷಕಾಂಶಗಳು (೧೦೦ ಗ್ರಾಂ ಸೊಪ್ಪಿನಲ್ಲಿ)

[ಬದಲಾಯಿಸಿ]
ಪೋಷಕಾಂಶಗಳು ಪ್ರಮಾಣ
ಸಸಾರಜನಕ ೭.೪ ಗ್ರಾಂ
'ಎ' ಜೀವಸತ್ವ ೪೭೫೦೦ ಐ.ಯು
'ಸಿ' ಜೀವಸತ್ವ ೧೧೦ ಮಿ.ಗ್ರಾಂ
ರಂಜಕ ೨೦೦ ಮಿ.ಗ್ರಾಂ
'ಬಿ' ಜೀವಸತ್ವ ೫೧ ಮಿ.ಗ್ರಾಂ
ಶಕ್ತಿ ೫೪ ಕ್ಯಾಲೊರಿ
ಸುಣ್ಣಾಂಶ ೫೭೦ ಮಿ.ಗ್ರಾಂ
ಕಬ್ಬಿಣಾಂಶ ೨೩ ಮಿ.ಗ್ರಾಂ

ಉಲ್ಲೇಖ

[ಬದಲಾಯಿಸಿ]
  1. ಮನೆಯಂಗಳದಲ್ಲಿ ಔಷಧಿವನ,ಡಾ.ಎಂ.ವಸುಂಧರ, ಡಾ.ವಸುಂಧರಾ ಭೂಪತಿ,ನವಕರ್ನಾಟಕ ಪ್ರಕಾಶನ,೭ನೇ ಮುದ್ರಣ,ಪುಟ ೪೯,೫೦,೫೧,೫೨

ಬಾಹ್ಯಸಂಪರ್ಕಗಳು

[ಬದಲಾಯಿಸಿ]

http://www.herbsarespecial.com.au/free-herb-information/sweet-leaf.html