ಘನಲಿಂಗದೇವ
ಘನಲಿಂಗದೇವ ಎನ್ನುವವನು ಶಿವಾನುಭವಿ. ಮಧ್ಯಕಾಲೀನ ವಚನಕಾರರಲ್ಲಿ ಖ್ಯಾತ.[೧][೨] ಮೈಸೂರು ಜಿಲ್ಲೆಯ ಕಪಿಲಾ ನದಿ ತೀರದಲ್ಲಿರುವ ಸುತ್ತೂರು ವೀರ ಸಿಂಹಾಸನ ಮಠದ ಆಚಾರ್ಯನೂ, ಎಡೆಯೂರು ಸಿದ್ಧಲಿಂಗೇಶ್ವರನ ಶಿಷ್ಯನೂ ಆಗಿದ್ದ.
ಜೀವನ
[ಬದಲಾಯಿಸಿ]ಕಾಲ 1480 ಎಂದು ಕವಿಚರಿತ್ರೆಕಾರರ ಅಭಿಪ್ರಾಯ. ಈತ ಹರದನಹಳ್ಳಿಯ ಗುರುಗಳ ಪ್ರಭಾವಕ್ಕೆ ಒಳಗಾಗಿದ್ದನೆನ್ನಲಾಗಿದೆ. ಈತನ 63 ವಚನಗಳು ಪ್ರಕಟವಾಗಿವೆ. ಸುದೀರ್ಘವೂ ವಿದ್ವತ್‌ಪೂರ್ಣವೂ ಆದ ಇವು ವೀರಶೈವ ಸಿದ್ಧಾಂತ ಬೋಧಕವಾಗಿವೆ. ಅಕ್ಕಮಹಾದೇವಿ ಸ್ತ್ರೀಯಾಗಿ ಹುಟ್ಟಿ ಚೆನ್ನಮಲ್ಲಿಕಾರ್ಜುನನಲ್ಲಿ ಪುರುಷ ಭಾವ ತಾಳಿ ಮುಕ್ತಿಯನ್ನು ಸಾಧಿಸಿದಳು. ಈತ ಗಂಡಾಗಿ ಹುಟ್ಟಿ ಶರಣವೆಣ್ಣಾಗಿ ಮೋಕ್ಷವನ್ನು ಗಳಿಸಿದ. ಅಕ್ಕನಿಗೆ ಚೆನ್ನಮಲ್ಲಿಕಾರ್ಜುನ ಅಂಕಿತವಾದರೆ ಈತನಿಗೆ ಮೋಹದ ಚೆನ್ನಮಲ್ಲಿಕಾರ್ಜುನ ಅಂಕಿತ. ಪ್ರತಿ ವಚನದ ಕೊನೆಯಲ್ಲಿ ಈತ ತನ್ನನ್ನು ಘನಲಿಂಗಿ ಎಂದುಕೊಂಡಿದ್ದಾನೆ. ಫ.ಗು. ಹಳಕಟ್ಟಿಯವರು ಈತನ ವಚನಗಳ ಭಾವ ಉಚ್ಚತರವಿದ್ದು ವಚನ ವಾಙ್ಮಯದಲ್ಲಿ ಅವಕ್ಕೆ ಉಚ್ಚಸ್ಥಾನವಿದೆ ಎಂದಿದ್ದಾರೆ.
ವಚನಗಳು
[ಬದಲಾಯಿಸಿ]ಈತನ ವಚನಗಳು ಕಾವ್ಯಮಯವಾಗಿವೆ. ಇವುಗಳಲ್ಲಿ ಶರಣಸತಿ ಲಿಂಗಪತಿ ಎಂಬ ಭಾವ ವ್ಯಕ್ತವಾಗಿದೆ. ಇವು ವೀರಶೈವ ಮತದ ಅಷ್ಟಾವರಣ, ಪಂಚಾಚಾರ ಷಟ್‌ಸ್ಥಲ ಸಿದ್ಧಾಂತಗಳನ್ನು ಚೆನ್ನಾಗಿ ನಿರೂಪಿಸುತ್ತವೆ. ಇವುಗಳಲ್ಲಿ ಡೋಹರ ಕಕ್ಕಯ್ಯ, ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಂಗನಬಸವಣ್ಣ, ಅನಿಮಿಷಯ್ಯ, ಅಕ್ಕಮಹಾದೇವಿ, ನೀಲಾಂಬಿಕೆ, ಬಿಜ್ಜಳರಾಜ, ತೋಂಟದಾರ್ಯ-ಇವರುಗಳ ಹೆಸರಿವೆ. ಘಟ್ಟಿವಾಳಯ್ಯ, ನಾಗದೇವ, ಸತ್ಯಕ್ಕ, ಶಿವರಾತ್ರೆ ಸಂಕಣ್ಣ, ನಿಜಗುಣಿ, ಚಂದಿಮರಸರನ್ನೂ, ತನ್ನ ಗುರುಗಳಾದ ಪರ್ವತದೇವರು, ಭಂಡಾರಿ ಬಸವಪ್ಪೊಡೆಯರು, ಕೂಗಲೂರು ನಂಜಯ್ಯದೇವರು ಇವರನ್ನೂ ಈತ ಸ್ಮರಿಸಿದ್ದಾನೆ.
ಈತನ ಒಂದು ವಚನ ಹೀಗಿದೆ.
ದೇವ,
ಕಂಬಳಕ್ಕೆ ಹೋಗಿ ಕನಕದ ಕೊಡನ ಕಂಡಂತೆ
ಮರ್ತ್ಯಲೋಕಕ್ಕೆ ಬಂದು ಮಾನವ ಜನ್ಮವ ಕಂಡೆ |
ಆ ಮಾನವ ಜನ್ಮಕ್ಕೆ ಘೃಣಾಕ್ಷರ ನ್ಯಾಯದತೆ ಲಿಂಗ ಬಂದುದ ಕಂಡೆ |
ಎನಗಿದು ಚೋದ್ಯ, ಎನಗಿದು ವಿಪರೀತವಯ್ಯ |
ಇದಕ್ಕೆ ನುಡಿದಂತೆ ನಡೆಸು, ನಡೆದಂತೆ ನುಡಿಸು.
ನುಡಿ-ನಡೆಗೆ ಭಿನ್ನವಾದರೆ ನಮ್ಮ ಶರಣರೊಪ್ಪರು
ನಿಮ್ಮ ಶರಣರೊಪ್ಪದಲ್ಲಿಯೆ ನೀನೊಪ್ಪೆ
ನೀನೊಪ್ಪದಲ್ಲಿಯೆ ಬಂದಿತೆನಗೆ ಭವದ ಹೆಮ್ಮಾರಿ
ಅದಕ್ಕೆ ನಾನಂಜುವೆನಯ್ಯ, ನಾನಳುಕುವೆನಯ್ಯ |
ನುಡಿ-ನಡೆ ಎರಡಾಗದಂತೆ ನಡೆಸಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.