ಘಟ್ಟಿವಾಳಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶರಣ ಗೆಜ್ಜಗಾರ ಘಟ್ಟಿವಾಳಯ್ಶಾ ಹನ್ನೆರಡನೆಯ ಶತಮಾನದ ವಚನಕಾರ ಹಾಗೂ ಶರಣ. ಈತನ ಜನ್ಮದ ಹೆಸರು ಮುದ್ದಣ. ಚಿಕ್ಕಯ್ಯ ಪ್ರಿಯ ಸಿದ್ದಲಿಂಗ ಇವನ ಅಂಕಿತನಾಮ.[೧]

ಜೀವನ ಚರಿತ್ರೆ[ಬದಲಾಯಿಸಿ]

ಘಟ್ಟಿವಾಳಯ್ಯ ಮದ್ದಳೆಯನ್ನು ಬಾರಿಸುತ್ತ ಶಿವಾನುಭವವನ್ನು ನರ್ತನದ ಮೂಲಕ ಸಾರುವ ಕೆಲಸವನ್ನು ಮಾಡಿಕೊಂಡಿದ್ದನು. ಈತನ ಭಕ್ತಿಯುತ ಜೀವನದಿಂದ ಬೇಸತ್ತು, ಸಿರಿ ಸಂಪತ್ತನ್ನು ಅರಸಿ ಇವನ ಹೆಂಡತಿ ಅನ್ಯಪುರುಷನಿಗಾಗಿ ಈತನನ್ನು ತೊರೆಯುತ್ತಾಳೆ. ಧರ್ಮಪತ್ನಿಯ ಮೇಲಿನ ಆತ್ಮವಿಶ್ವಾಸ ಸುಳ್ಳಾದಾಗ ಆತ ವೈರಾಗಿಯಾಗುತ್ತಾನೆ. ಆಧ್ಯಾತ್ಮಿಕ ಜೀವನದತ್ತ ನಡೆದು ವಚನಕಾರನಾಗುತ್ತಾನೆ. [೨]

ಘಟ್ಟಿವಾಳಯ್ಯನ ಹಿರಿಮೆ[ಬದಲಾಯಿಸಿ]

ಘಟ್ಟಿವಾಳಯ್ಯ ಕನ್ನಡದಲ್ಲಿ ೧೪೭ ವಚನಗಳನ್ನು ರಚಿಸಿದ್ದಾನೆ. [೩]ತನ್ನ ವಚನಗಳ ಮೂಲಕ ಭಕ್ತರ ಡಾಂಭಿಕ, ಅರ್ಥಹೀನ ನಡವಳಿಕೆಗಳೆಲ್ಲವನ್ನು ವ್ಯರ್ಥವೆಂದು ಹೇಳುತ್ತಾನೆ.ವೇಷಧಾರಿಗಳು ಭಕ್ತರಾಗುವುದಿಲ್ಲ ಅಷ್ಟೇ ಅಲ್ಲದೆ, ಶರಣರ ಗುಂಪಿನಲ್ಲಿ ಡಾಂಭಿಕ ಭಕ್ತಿಯ ವೇಷಧಾರಿಗಳು ಸೇರಲು ಅನರ್ಹರೆಂಬುದನ್ನು ತನ್ನ ವಚನದ ಮೂಲಕ ತಿಳಿಸಿದ್ದಾನೆ. ಈತ ಗುರು-ಲಿಂಗ-ಜಂಗಮ ಕಲ್ಪನೆಗೆ ಹೊಸ ಆಯಾಮವನ್ನು, ವ್ಯಾಖ್ಯಾನವನ್ನು ನೀಡಿದ್ದಾನೆ. ಘಟ್ಟಿವಾಳಯ್ಯ ತನ್ನ ಜ್ಞಾನವನ್ನು ವಚನಗಳ ಮೂಲಕ ಸಾರುತ್ತಾ ಅಂದಿನ ಶರಣರ ನಡುವೆ ಗಮನಾರ್ಹವಾದ ಸ್ಥಾನವನ್ನು ಪಡೆದಿದ್ದನು. ಅಲ್ಲಮಪ್ರಭು ಈತನನ್ನು ಕುರಿತು ಅಂಗದ ಮೇಲಣ ಲಿಂಗಕ್ಕಿಂತ ಅಂಗದೊಳಗಣ ಲಿಂಗವ ಹಿಂಗದಂತಿರಬೇಕು, ಘಟ್ಟಿವಾಳಯ್ಯನಂತೆ ಎಂದು ನುಡಿದಿದ್ದಾರೆ. ಮೋಳಿಗೆ ಮಾರಯ್ಯ ಲೆಕ್ಕವಿಲ್ಲದ ಆಸೆ ಮನದೊಳಗೆ ಹೊಕ್ಕು ತಿರುಗಾಡುತಿಹ ಚಿಕ್ಕ ಮಕ್ಕಳಿಗೆಲ್ಲಿಯದೋ ನಿರ್ವಾಣ, ಘಟ್ಟಿವಾಳಂಗಲ್ಲದೆ ಎಂದಿದ್ದಾರೆ. ಬಸವಣ್ಣ ಕೂಡಲ ಚೆನ್ನಸಂಗಾ ನಿನ್ನ ಶರಣ ಘಟ್ಟಿವಾಳಯ್ಯನಲ್ಲದೆ ನೆರೆ ಅರಿವವರಾರೋ ಎಂದು ಮೆಚ್ಚಿ ನುಡಿದಿದ್ದಾನೆ. ಈತನನ್ನು ಅದೃಷ್ಯಕವಿ ದೃಢಶರಣಸೀಮಂತ ಮಣಿ ಎಂದು ಪ್ರಶಂಸಿಸಿದ್ದಾನೆ.

ಘಟ್ಟಿವಾಳಯ್ಯನ ವಚನಗಳು[ಬದಲಾಯಿಸಿ]

[೪] ಘಟ್ಟಿವಾಳಯ್ಯನ ೧೫೦ ವಚನಗಳು ದೊರೆತಿವೆ. ೧.ಅಂಗದಲ್ಲಿ ಅರ್ಪಿತವ ಮಾಡಿ ಪ್ರಸಾದಿ ನಾವೆಂಬವಂಗೆ

ಹಿಂಗದು ನೋಡಾ! ತನು ಸೂತಕ ಮನ ಸೂತಕ.

ಪ್ರಾಣದಲ್ಲಿ ಸಿಲುಕದು ತನುವಿನಲ್ಲಿರದು.

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.[೫]


೨.ಇಷ್ಟ ಬಾಹ್ಯವಾಯಿತ್ತೆಂದು ಸಮಯ ಒಪ್ಪದಿದೆ ನೋಡಾ!

ಅರಿವು ಬಾಹ್ಯವಾಗಿ ತ್ರಿವಿಧಕ್ಕೆ ಕಚ್ಚಾಡಲೇತಕ್ಕೆ?

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.


ಮರಣ[ಬದಲಾಯಿಸಿ]

ಘಟ್ಟಿವಾಳಯ್ಯ ನರ್ತನ ಕಾಯಕದಲ್ಲಿ ತೊಡಗಿರುವಾಗ ತನ್ನ ಕೊನೆಯುಸಿರೆಳೆದನು.


ಉಲ್ಲೇಖಗಳು[ಬದಲಾಯಿಸಿ]

  1. https://www.lingayatreligion.com/K/Sharanaru/Ghattivalayya
  2. https://kanaja.karnataka.gov.in/vachanasahitya/%e0%b2%98%e0%b2%9f%e0%b3%8d%e0%b2%9f%e0%b2%bf%e0%b2%b5%e0%b2%be%e0%b2%b3%e0%b2%af%e0%b3%8d%e0%b2%af/
  3. https://vachana.sanchaya.net/vachanakaaras/82
  4. https://kanaja.karnataka.gov.in/vachanasahitya/%E0%B2%98%E0%B2%9F%E0%B3%8D%E0%B2%9F%E0%B2%BF%E0%B2%B5%E0%B2%BE%E0%B2%B3%E0%B2%AF%E0%B3%8D%E0%B2%AF%E0%B2%A8-%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81/
  5. https://aralimara.com/2021/04/26/vachana-16/