ವಿಷಯಕ್ಕೆ ಹೋಗು

ಗ್ರಾಹಕರ ಸಂರಕ್ಷಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ. 'ಗ್ರಾಹಕನೇ ಎಚ್ಚರ' ಎಂಬ ಸಿದ್ಧಾಂತಕ್ಕೆ ಬದಲಾಗಿ 'ಮಾರಾಟಗಾರನೇ ಎಚ್ಚರ' ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಿದ್ಧಾಂತವು ಗ್ರಾಹಕನನ್ನು ವ್ಯವಹಾರ ಸಂಸ್ಥೆಗಳ ಅನುಚಿತ ವ್ಯಾಪಾರೀ ಪದ್ಧತಿಗಳಿಂದ ಹೇಗೆ ರಕ್ಷಿಸಲಾಗುತ್ತದೆ ಎಂಬುದರ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಗ್ರಾಹಕರು ಸಾಮಾನ್ಯವಾಗಿ ಭೇಟಿನೀಡುವ ಅಂಗಡಿ

ಗ್ರಾಹಕನ ಅರ್ಥ (Meaning of Consumer)

[ಬದಲಾಯಿಸಿ]

ಹಣವನ್ನು ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ.[] ಆದರೆ ವ್ಯವಹಾರ ಉದ್ದೇಶಗಳಿಗೆ (ಮರು ಮಾರಾಟ) ಸರಕು ಮತ್ತು ಸೇವೆಗಳನ್ನು ಖರೀದಿಸುವವನು ಗ್ರಾಹಕನಾಗುವುದಿಲ್ಲ.

ಗ್ರಾಹಕನ ವ್ಯಾಖ್ಯೆ (Definition of Consumer)

[ಬದಲಾಯಿಸಿ]

ಗ್ರಾಹಕ ಹಿತರಕ್ಷಣಾ ಕಾಯ್ದೆ ೧೯೮೬ರ[] ಪ್ರಕಾರ ಗ್ರಾಹಕನೆಂದರೆ,

೧. ಹಣ ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಅನ್ವಯ ಸ್ವಂತ ಉಪಯೋಗಕ್ಕಾಗಿ ಸರಕುಗಳನ್ನು ಖರೀದಿಸುವವ ಅಥವಾ ಬಾಡಿಗೆಗೆ ಪಡೆಯುವವ ಅಥವಾ ಯಾವುದೇ ಸೇವೆಗಳನ್ನು ಪಡೆಯುವವನು.

೨. ಖರೀದಿದಾರನ ಅಥವಾ ಮಾರಾಟಗಾರನ ಅಥವಾ ಬಾಡಿಗೆಗೆ ನೀಡುವವನ ಅನುಮತಿಯಿಂದ ಸರಕುಗಳನ್ನು ಉಪಯೋಗಿಸುವವ ಅಥವಾ ಸೇವೆಗಳನ್ನು ಪಡೆಯುವವನು.

೩. ಸ್ವಂತ ಉದ್ಯೋಗದ ಮೂಲಕ ಜೀವನ ನಿರ್ವಹಣೆಗಾಗಿ ಲಾರಿ, ಕಾರು, ಆಟೋರಿಕ್ಷಾ ಮುಂತಾದ ವಾಹನಗಳನ್ನು ಖರೀದಿಸುವವ ಅಥವಾ ಯಾವುದೇ ಸೇವೆಯನ್ನು ಪಡೆಯುವವನು. thumbnail|left|ಸಾರ್ವಜನಿಕರು

ಗ್ರಾಹಕನ ಹಿತರಕ್ಷಣೆಯ ಅರ್ಥ (Meaning of Consumer Protection)

[ಬದಲಾಯಿಸಿ]

ಗ್ರಾಹಕನ ಹಿತರಕ್ಷಣೆ ಎಂದರೆ ಗ್ರಾಹಕನ ಭೌತಿಕ, ಆರ್ಥಿಕ ಮತ್ತು ಇತರೆ ಹಿತಾಸಕ್ತಿಗಳನ್ನು ವ್ಯವಹಾರ ಸಂಸ್ಥೆಗಳ ಶೋಷಣೆಯಿಂದ ಶಾಸನಬದ್ಧ ಹಾಗೂ ಇತರೆ ವಿಧಾನಗಳಿಂದ ರಕ್ಷಿಸುವುದಾಗಿದೆ. ಸಾಮಾನ್ಯವಾಗಿ ಗ್ರಾಹಕನನ್ನು ತೂಕ ಮತ್ತು ಅಳತೆಯಲ್ಲಿ ಕೊರತೆ, ತಪ್ಪು ಮಾಹಿತಿಯ ಜಾಹೀರಾತು, ಕಡಿಮೆ ಗುಣಮಟ್ಟದ ಸರಕುಗಳು, ಕಲಬೆರಕೆ, ಕಾಳಸಂತೆ ವ್ಯಾಪಾರ, ಕೃತಕ ಅಭಾವ ಸೃಷ್ಟಿಸುವ, ಮಾರಾಟ ನಂತರದ ಸೇವೆಗಳನ್ನು ನಿರಾಕರಿಸುವ ಅಥವಾ ಮಾರಾಟ ಪಟ್ಟಿ ನೀಡದೇ ಶೋಷಿಸಲಾಗುತ್ತಿದೆ. ಸಂಕ್ಷಿಪ್ತವಾಗಿ ಗ್ರಾಹಕ ಹಿತರಕ್ಷಣೆ ಎಂದರೆ ಗ್ರಾಹಕನ ಹಕ್ಕುಗಳನ್ನು ರಕ್ಷಿಸುವುದು ಎಂದರ್ಥ.[]

ಗ್ರಾಹಕನ ಹಿತರಕ್ಷಣೆಯ ಪ್ರಾಮುಖ್ಯತೆ (Importance of Consumer Protection)

[ಬದಲಾಯಿಸಿ]

ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದ್ದರೂ ವ್ಯಾಪಾರಿ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಗ್ರಾಹಕನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮಾರ್ಚ್ ೧೫ ರಂದು ಗ್ರಾಹಕನ ಹಕ್ಕುಗಳ ದಿನ ವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.[]

ಗ್ರಾಹಕನ ಹಿತರಕ್ಷಣೆಯ ಪ್ರಾಮುಖ್ಯತೆಯನ್ನು ಗ್ರಾಹಕ ಮತ್ತು ವ್ಯಾಪಾರೀ ಸಂಸ್ಥೆಗಳ ದೃಷ್ಟಿಯಿಂದ ತಿಳಿಯಬಹುದು.

ಗ್ರಾಹಕರನ್ನು ಕೆಳಕಂಡ ಅಂಶಗಳ ಆಧಾರದ ಮೇಲೆ ರಕ್ಷಿಸುವುದು ಅವಶ್ಯಕವಾಗಿದೆ

[ಬದಲಾಯಿಸಿ]

೧. ಗ್ರಾಹಕರ ಅಜ್ಞಾನ (Consumers ignorance)

[ಬದಲಾಯಿಸಿ]

ಗ್ರಾಹಕರು ಅನೇಕ ಸಂದರ್ಭಗಳಲ್ಲಿ ಅವಶ್ಯಕ ಜ್ಞಾನವನ್ನು ಹೊಂದಿಲ್ಲದಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳ ಶೋಷಣೆಯ ವಿರುದ್ಧ ಧ್ವನಿ ಎತ್ತಲಾಗುತ್ತಿಲ್ಲ. ಆದುದರಿಂದ ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ರಕ್ಷಿಸಬೇಕಾಗಿದೆ.[]

೨. ಅಸಂಘಟಿತ ಗ್ರಾಹಕರು (Unorganised Consumers)

[ಬದಲಾಯಿಸಿ]

ಗ್ರಾಹಕರು ಅಸಂಘಟಿತರಾಗಿರುವುದರಿಂದ ವ್ಯವಹಾರ ಸಂಸ್ಥೆಗಳು ಅವರನ್ನು ಶೋಷಿಸುತ್ತಿವೆ. ಆದುದರಿಂದ ಗ್ರಾಹಕರು ಶೋಷಣೆಯ ವಿರುದ್ಧ ಹೋರಾಡಲು ಸಂಘಟಿತರಾಗಬೇಕಾಗಿದೆ.

೩.ಗ್ರಾಹಕರ ಶೋಷಣೆ (Consumers' exploitataion)

[ಬದಲಾಯಿಸಿ]

ವ್ಯಾಪಾರ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕನನ್ನು ಶೋಷಿಸುತ್ತಿರುವುದರಿಂದ ಗ್ರಾಹಕನ ಹಿತರಕ್ಷಣೆ ಅಗತ್ಯವಾಗಿದೆ.[]

ಮಾರಾಟ

ವ್ಯವಹಾರ ಸಂಸ್ಥೆಗಳ ದೃಷ್ಟಿಯಿಂದ ಗ್ರಾಹಕರ ಹಿತರಕ್ಷಣೆಯು ಈ ಕೆಳಕಂಡ ಅಂಶಗಳಿಂದ ಅತ್ಯಗತ್ಯವಾಗಿದೆ.

[ಬದಲಾಯಿಸಿ]

೧. ವ್ಯವಹಾರ ಸಂಸ್ಥೆಗಳ ದೀರ್ಘಾವಧಿ ಹಿತಾಸಕ್ತಿಗಾಗಿ (Long term interest of Business)

[ಬದಲಾಯಿಸಿ]

ವ್ಯವಹಾರ ಸಂಸ್ಥೆಗಳ ದೀರ್ಘಾವಧಿ ಹಿತಾಸಕ್ತಿಗಾಗಿ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನಿರಂತರವಾಗಿ ನ್ಯಾಯಬೆಲೆಯಲ್ಲಿ ಪೂರೈಸುವುದರ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ.

೨.ಸಾಮಾಜಿಕ ಜವಾಬ್ದಾರಿ (Social Responsibility)

[ಬದಲಾಯಿಸಿ]

ವ್ಯವಹಾರ ಸಂಸ್ಥೆಗಳು ಗ್ರಾಹಕರ ಹಿತರಕ್ಷಣೆಯನ್ನು ಸಾಮಾಜಿಕ ಜವಾಬ್ದಾರಿಯನ್ನಾಗಿ ಒಪ್ಪಿಕೊಳ್ಳುವುದರ ಮೂಲಕ, ಅನುಚಿತ ವ್ಯಾಪಾರಿ ಪದ್ಧತಿಗಳನ್ನು ಸ್ವತಃ ನಿಯಂತ್ರಿಸಿಕೊಳ್ಳುವುದರ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡುತ್ತಿವೆ.[]

೩.ಸರ್ಕಾರದ ಮಧ್ಯಸ್ಥಿಕೆ (Government intervention)

[ಬದಲಾಯಿಸಿ]

ಸರ್ಕಾರ ಕಾಲಕಾಲಕ್ಕೆ ಶಾಸನಗಳನ್ನು ರೂಪಿಸುವುದರ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತಿದೆ. ಆದುದರಿಂದ ವ್ಯಾಪಾರಿ ಸಂಸ್ಥೆಗಳು ಸರ್ಕಾರದ ಕಾನೂನು ಕಟ್ಟಲೆಗಳನ್ನು ಪಾಲಿಸುವುದರ ಮೂಲಕ ಸ್ವಯಂಪ್ರೇರಣೆಯಿಂದ ಗ್ರಾಹಕರನ್ನು ರಕ್ಷಿಸುವುದು ಅನಿವಾರ್ಯವಾಗಿದೆ.

ಗ್ರಾಹಕರ ಹಿತರಕ್ಷಣಾ ಕಾಯ್ದೆ, ೧೯೮೬ (Consumer Protection Act, 1986)

[ಬದಲಾಯಿಸಿ]

ಈ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ೧೯೮೬ ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನು ಶೀಘ್ರ ಹಾಗೂ ಮಿತವ್ಯಯಕಾರಿಯಾಗಿ ದೂರುಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮಂಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ.[]

ಗ್ರಾಹಕರ ಹಕ್ಕುಗಳು (Rights of Consumers)

[ಬದಲಾಯಿಸಿ]

ಗ್ರಾಹಕರ ಹಿತರಕ್ಷಣಾ ಕಾಯ್ದೆಯ, ೧೯೮೬ ಅನ್ವಯ ಕೆಳಕಂಡ ಹಕ್ಕುಗಳು ಗ್ರಾಹಕರಿಗೆ ದೊರೆಯುತ್ತಿವೆ.[]

೧. ಸುರಕ್ಷತೆಯ ಹಕ್ಕು (Right to Safety)

[ಬದಲಾಯಿಸಿ]

ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯೂನತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಔಷಧಿ, ವಿದ್ಯುತ್ ಉಪಕರಣಗಳು, ಗ್ಯಾಸ್ ಸಿಲಿಂಡರ್'ಗಳು, ಕುಕ್ಕರ್‌ಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೨. ಮಾಹಿತಿ ಪಡೆಯುವ ಹಕ್ಕು (Right to be informed)

[ಬದಲಾಯಿಸಿ]

ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಸರಕುಗಳ ಬಗ್ಗೆ ಅಂದರೆ ಸರಕಿನ ಪ್ರಮಾಣ, ಗುಣಮಟ್ಟ, ಬೆಲೆ, ಉತ್ಪಾದನೆ ಹಾಗೂ ವಾಯಿದೆ ದಿನಾಂಕ ಮುಂತಾದವುಗಳ ಬಗ್ಗೆ ನೈಜ ಹಾಗೂ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೩. ಆಯ್ಕೆಯ ಹಕ್ಕು (Right to choose)

[ಬದಲಾಯಿಸಿ]

ಮಾರಾಟಗಾರ ನಿರ್ದಿಷ್ಟ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಂಡರೂ ವೈವಿಧ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗುಣವಾದ ಸರಕುಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ.

೪. ಆಲಿಸುವ ಹಕ್ಕು (Right to be heard)

[ಬದಲಾಯಿಸಿ]

ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಖರೀದಿಸಿದ ಸರಕು ಅಥವಾ ಸೇವೆಗಳಿಂದ ಅತೃಪ್ತಿಯನ್ನು ಹೊಂದಿದ್ದಲ್ಲಿ ಸಂಬಂಧಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ಅನೇಕ ವ್ಯವಹಾರ ಸಂಸ್ಥೆಗಳು ತಮ್ಮದೇ ಆದ ಸೇವಾ ಹಾಗೂ ಕುಂದುಕೊರತೆಗಳನ್ನು ನಿವಾರಿಸುವ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸುತ್ತಿವೆ.

೫. ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು (Right to seek Redressal)

[ಬದಲಾಯಿಸಿ]

ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಪಡೆಯುವ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅವುಗಳಿಗೆ ಪರಿಹಾರಗಳನ್ನು ಬದಲಿ ವಸ್ತುಗಳನ್ನು ಪಡೆಯುವ ಅಥವಾ ದೋಷಗಳನ್ನು ನಿವಾರಿಸಿಕೊಳ್ಳುವ ಹಾಗೂ ಸರಕುಗಳ ಖರೀದಿಯಿಂದಾದ ನಷ್ಟವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೬. ಗ್ರಾಹಕರ ಶಿಕ್ಷಣದ ಹಕ್ಕು (Right to educate)

[ಬದಲಾಯಿಸಿ]

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಸಂಪೂರ್ಣ ಜ್ಞಾನ ಹಾಗೂ ಪರಿಣಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ಸೂಕ್ತ ಕಾನೂನುಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಹಾಗೂ ತಮಗೆ ದೊರೆಯುವ ವಿವಿಧ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಮೇಲ್ಕಂಡ ಆರು ಹಕ್ಕುಗಳ ಜೊತೆಗೆ ವಿಶ್ವಸಂಸ್ಥೆಯು ಎರಡು ಪ್ರತ್ಯೇಕ ಹಕ್ಕುಗಳನ್ನು ನೀಡಿದೆ.

[ಬದಲಾಯಿಸಿ]

೧. ಮೂಲಭೂತ ಅವಶ್ಯಕತೆಗಳನ್ನು ಪಡೆಯುವ ಹಕ್ಕು (Right to possess basic needs)

[ಬದಲಾಯಿಸಿ]

ಪ್ರತಿಯೊಬ್ಬ ಗ್ರಾಹಕನು ಗೌರವಯುತ ಜೀವನ ನಿರ್ವಹಿಸಲು ಮೂಲಭೂತ ಅವಶ್ಯಕತೆಗಳಾದ ಆಹಾರ, ಕುಡಿಯುವ ನೀರು, ಉಡುಪು, ವಸತಿ, ಆರೋಗ್ಯ, ಶಿಕ್ಷಣ ಹಾಗೂ ನೈರ್ಮಲ್ಯಯುತ ವಾತಾವರಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾನೆ.

೨. ಮಾಲಿನ್ಯಮುಕ್ತ ಪರಿಸರವನ್ನು ಪಡೆಯುವ ಹಕ್ಕು (Right to have Healthy Environment)

[ಬದಲಾಯಿಸಿ]

ಆರೋಗ್ಯಪೂರ್ಣ ವಾತಾವರಣವು ಮಾನವನ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಹಕ್ಕಿನ ಅನ್ವಯ ಗುಣಮಟ್ಟದ, ಶಾಂತಿಯುತ ಹಾಗೂ ಮಾಲಿನ್ಯರಹಿತ ಪರಿಸರವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾನೆ.

ಗ್ರಾಹಕರ ಜವಾಬ್ದಾರಿಗಳು (Consumer Responsibility)

[ಬದಲಾಯಿಸಿ]

ಗ್ರಾಹಕರು ತಾವು ಪಡೆಯುತ್ತಿರುವ ಹಕ್ಕುಗಳೊಂದಿಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮೂಖಗಳಾಗಿವೆ.[೧೦] ಗ್ರಾಹಕರ ಜವಾಬ್ದಾರಿಗಳು ಕೆಳಕಂಡಂತಿವೆ:

೧. ಹಕ್ಕುಗಳ ಬಗ್ಗೆ ಜಾಗೃತಿ (Awareness of Rights)

[ಬದಲಾಯಿಸಿ]

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ತಮಗೆ ದೊರೆಯುವ ಹಕ್ಕುಗಳಾದ ಸುರಕ್ಷತೆ, ಮಾಹಿತಿ ಪಡೆಯುವ ಹಾಗೂ ಇತರೆ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗೃತಿಯನ್ನು ಹೊಂದಿರಬೇಕು.

೨. ಗುಣಮಟ್ಟದ ಅರಿವು (Quality conscious)

[ಬದಲಾಯಿಸಿ]

ಗ್ರಾಹಕರು ತಾವು ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಗುಣಮಟ್ಟ ನಿರ್ಧರಿಸಿದ ಬಿ.ಐ.ಎಸ್, ಅಗ್-ಮಾರ್ಕ್, ಹಾಲ್-ಮಾರ್ಕ್, ಇತ್ಯಾದಿಗಳ ಬಗ್ಗೆ ಅರಿವನ್ನು ಹೊಂದಿರಬೇಕು.

೩. ದೂರು ನೀಡಲು ಸಿದ್ಧರಿರಬೇಕು (Ready to lodge complaint)

[ಬದಲಾಯಿಸಿ]

ಗ್ರಾಹಕರು ತಾವು ಖರೀದಿಸಿದ ಸರಕು ಅಥವಾ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅದರ ಮೌಲ್ಯವನ್ನು ಪರಿಗಣಿಸದೇ ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೪. ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಬಾರದು (Not to be misled by false advertisements)

[ಬದಲಾಯಿಸಿ]

ಸಾಮಾನ್ಯವಾಗಿ ಉತ್ಪಾದಕ/ಮಾರಾಟಗಾರ ಜಾಹೀರಾತಿನಲ್ಲಿ ತಪ್ಪು ಮಾಹಿತಿಗಳನ್ನು ನೀಡುವುದರ ಮೂಲಕ ಸರಕುಗಳ ಗುಣಮಟ್ಟವನ್ನು ವಾಸ್ತವಕ್ಕಿಂತ ಹೆಚ್ಚಾಗಿದೆಯೆಂದು ಬಿಂಬಿಸುತ್ತಾನೆ. ಆದರೆ, ಗ್ರಾಹಕರು ನೈಜ ಗುಣವನ್ನು ಪರಿಶೀಲಿಸಿ, ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತಪ್ಪು ಮಾಹಿತಿಯ ಜಾಹಿರಾತಿನಿಂದ ರಕ್ಷಣೆಯನ್ನು ಪಡೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೫. ನಗದು ರಶೀದಿಗಾಗಿ ಬೇಡಿಕೆ (Demand for Cash memo)

[ಬದಲಾಯಿಸಿ]

ಗ್ರಾಹಕರು ತಾವು ಖರೀದಿಸಿದ ಸರಕು ಮತ್ತು ಸೇವೆಗಳ ಪುರಾವೆಗಾಗಿ ನಗದು ರಶೀದಿಯನ್ನು ಕೇಳಿ ಪಡೆಯಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಖರೀದಿದಾರ ನಗದು ರಶೀದಿಯನ್ನು ಅಪೇಕ್ಷಿಸದೇ ಇದ್ದರೂ ಅದನ್ನು ನೀಡುವುದು ಮಾರಾಟಗಾರನ ಆದ್ಯ ಕರ್ತವ್ಯವಾಗಿರುತ್ತದೆ.

೬. ಜಾಗೃತ ಬಳಕೆದಾರ (Cautious Consumer)

[ಬದಲಾಯಿಸಿ]

ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, ಬೆಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಮತ್ತು ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.

೭. ಸರಕುಗಳ ಆಯ್ಕೆ (Selection of Goods)

[ಬದಲಾಯಿಸಿ]

ಗ್ರಾಹಕರು ಕಾನೂನುಬದ್ಧ ಸರಕು ಮತ್ತು ಸೇವೆಗಳನ್ನು ಖರೀದಿಸಬೇಕು. ಕಳ್ಳಸಾಗಾಣಿಕೆ, ಕಾಳಸಂತೆಯ ಸರಕುಗಳನ್ನು ಖರೀದಿಸಬಾರದು.

೮. ಗ್ರಾಹಕ ಸಂಘಟನೆ (Consumer organisation)

[ಬದಲಾಯಿಸಿ]

ಗ್ರಾಹಕರು ಉತ್ಪಾದಕ/ಮಾರಾಟಗಾರರ ಅನೈತಿಕ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ತಮ್ಮದೇ ಆದ ಗ್ರಾಹಕ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೯. ಪರಿಸರ ರಕ್ಷಣೆ (Protection of Environment)

[ಬದಲಾಯಿಸಿ]

ಗ್ರಾಹಕರು ಸಂಪನ್ಮೂಲಗಳನ್ನು ಅನುಪಯುಕ್ತಗೊಳಿಸದೇ ಪರಿಸರದ ಬಗ್ಗೆ ಗೌರವ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೧೦. ಅವಸರದಲ್ಲಿ ಖರೀದಿಸಬಾರದು (Not to buy in hurry)

[ಬದಲಾಯಿಸಿ]

ಗ್ರಾಹಕರು ಅವಸರದಿಂದ ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸಬಾರದು ಮತ್ತು ಖರೀದಿಸುವ ಸಂದರ್ಭದಲ್ಲಿ ಅವುಗಳ ಗುಣಮಟ್ಟ, ಪ್ರಮಾಣ, ಬೆಲೆ, ಖರೀದಿಯ ಸಮಯ ಮುಂತಾದವುಗಳ ಬಗ್ಗೆ ಸುದೀರ್ಘವಾಗಿ ಯೋಚಿಸಿ ಖರೀದಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಯಾರು ದೂರನ್ನು ದಾಖಲಿಸಬಹುದು?

[ಬದಲಾಯಿಸಿ]

ಈ ಕೆಳಕಂಡ ವ್ಯಕ್ತಿಗಳು ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಬಹುದು.

೧. ಒಬ್ಬ ಗ್ರಾಹಕ

೨. ಯಾವುದೇ ನೊಂದಾಯಿತ ಗ್ರಾಹಕ ಸಂಘಟನೆ

೩. ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ

೪. ಒಂದೇ ರೀತಿಯ ಹಿತಾಸಕ್ತಿಯನ್ನು ಹೊಂದಿರುವ ಒಬ್ಬ ಅಥವಾ ಅನೇಕ ಗ್ರಾಹಕರು, ಅಥವಾ

೫. ಗ್ರಾಹಕನ ವಾರಸುದಾರ (ಗ್ರಾಹಕನ ನಿಧನಾನಂತರ)

ದೂರಿನಲ್ಲಿರಬೇಕಾದ ಪ್ರಮುಖ ಅಂಶಗಳು

[ಬದಲಾಯಿಸಿ]

೧. ದೂರುದಾರರ ಹೆಸರು, ವಿಳಾಸ, ಮತ್ತು ದೂರಿನ ವಿವರ.

೨. ಎದುರು ಕಕ್ಷಿದಾರನ ಹೆಸರು, ವಿಳಾಸ, ಮತ್ತು ವಿವರ.

೩. ಯಾವ ಸಂದರ್ಭದಲ್ಲಿ ನ್ಯೂನ್ಯತೆ ಸಂಭಂದಿಸಿದೆ ಎಂಬುದರ ಬಗ್ಗೆ ಮಾಹಿತಿ

೪. ದೂರಿಗೆ ಸಂಭಂದಿಸಿದ ಮಾಹಿತಿಗಳನ್ನೊಳಗೊಂಡ ದಾಖಲೆಗಳು

೫. ದೂರುದಾರ ಅಪೇಕ್ಷಿಸುವ ಪರಿಹಾರದ ವಿಧಗಳು ಇತ್ಯಾದಿ.[೧೧]

ಗ್ರಾಹಕರ ದೂರುಗಳು ಪರಿಹಾರ ಸಂಸ್ಥೆಗಳು

[ಬದಲಾಯಿಸಿ]

ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಮೂರು ಹಂತದ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಿದ್ದು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ನೀಡುವ ಕಾರ್ಯದಲ್ಲಿ ನಿರತರಾಗಿವೆ. ವಿವಿಧ ಗ್ರಾಹಕರ ದೂರುಗಳು ಪರಿಹಾರ ಸಂಸ್ಥೆಗಳು ಮತ್ತು ಅವುಗಳ ಲಕ್ಷಣಗಳು ಕೆಳಕಂಡಂತಿವೆ.

ಜಿಲ್ಲಾ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆ

[ಬದಲಾಯಿಸಿ]

ಜಿಲ್ಲಾ ವೇದಿಕೆಯನ್ನು ಜಿಲ್ಲೆಯಲ್ಲೂ ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ ರ ಅನ್ವಯ ಸ್ಥಾಪಿಸಲಾಗಿದೆ. ಮತ್ತು ರಾಜ್ಯ ಸರ್ಕಾರ ಇಚ್ಚಿಸಿದಲ್ಲಿ ಹೆಚ್ಚುವರಿ ಜಿಲ್ಲಾ ವೇದಿಕೆಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬಹುದಾಗಿದೆ. ಜಿಲ್ಲಾ ವೇದಿಕೆಯ ಲಕ್ಷಣಗಳು ಕೆಳಕಂಡಂತಿವೆ.

ಸಂಯೋಜನೆ

[ಬದಲಾಯಿಸಿ]

ಜಿಲ್ಲಾ ವೇದಿಕೆಯ ಮೂರು ವ್ಯಕ್ತಿಗಳಿಂದ ಕೂಡಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರಿರುತ್ತಾರೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು. ಇವರನ್ನು ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ನೇಮಕ ಮಾಡುತ್ತಾರೆ.

ವಿದ್ಯಾರ್ಹತೆ

[ಬದಲಾಯಿಸಿ]

ಜಿಲ್ಲಾ ವೇದಿಕೆಯ ಅಧ್ಯಕ್ಷರು ಜಿಲ್ಲಾ ನ್ಯಾಯಾಧೀಶರಾಗಲು ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸದಸ್ಯರು ಪಧವೀಧರರಾಗಿದ್ದು ಶಿಕ್ಷಣ, ವ್ಯವಹಾರ, ವಾಣಿಜ್ಯ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಿದ ವ್ಯಕ್ತಿಗಳಾಗಿರಬೇಕು.

ಅಧಿಕಾರ

[ಬದಲಾಯಿಸಿ]

ಜಿಲ್ಲಾ ವೇದಿಕೆಯು ನಾಗರೀಕ ನ್ಯಾಯಾಲಯ (ಸಿವಿಲ್ ಕೋರ್ಟ್)ದ ಅಧಿಕಾರವನ್ನು ಹೊಂದಿದ್ದು ಯಾವುದೇ ದೂರನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ಸಂಧರ್ಭದಲ್ಲಿ ನಿರ್ವಹಿಸಬೇಕಾದ ಎಲ್ಲಾ ಅಧಿಕಾರಗಳನ್ನು ಹೊಂದಿದೆ.

ವ್ಯಾಪ್ತಿ

[ಬದಲಾಯಿಸಿ]

ಜಿಲ್ಲಾ ವೇದಿಕೆಯು ಸರಕು ಅಥವಾ ಸೇವೆಗಳ ಮೌಲ್ಯ ಹಾಗೂ ಕೋರಲಾಗಿರುವ ಪರಿಹಾರದ ಮೊತ್ತ ರೂ.೨೦ ಲಕ್ಷ ಮೀರಿದ ದೂರುಗಳನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ವ್ಯಾಪ್ತಿಯನ್ನು ಹೊಂದಿದೆ.

ದೂರು ನಿವಾರಣೆ ನಡವಳಿಕೆಗಳು

[ಬದಲಾಯಿಸಿ]

ದೂರನ್ನು ಸ್ವೀಕರಿಸಿದ ನಂತರ ವೇದಿಕೆಯು ಎದುರು ಕಕ್ಷಿದಾರನಿಗೆ ಸೂಚನೆ (ನೋಟೀಸು ) ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ದೂರಿನಲ್ಲಿರುವ ನ್ಯೂನತೆಯನ್ನು ದೃಢೀಕರಿಸುವ ಉದ್ದೇಶದಿಂದ ಮಾದರಿಯನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಬಹುದು. ಎದುರು ಕಕ್ಷಿದಾರನು ಮಾರಾಟಗಾರ, ವಿತರಕ ಅಥವಾ ಉತ್ಪಾದಕನಾಗಿರಬಹುದು.

ಪರಿಹಾರ

[ಬದಲಾಯಿಸಿ]

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಸರಕುಗಳಲ್ಲಿರುವ ದೋಷಗಳು ದೃಢೀಕರಿಸಲ್ಪಟ್ಟಲ್ಲಿ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ಅನುಸರಿಸಲಾಗಿದೆಯೆಂದು ವೇದಿಕೆಗೆ ಮನವರಿಕೆಯಾದಲ್ಲಿ ಎದುರು ಕಕ್ಷಿದಾರನಿಗೆ ಕೆಳಕಂಡಂತೆ ಆದೇಶಿಸಬಹುದು.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸುವಂತೆ

೨. ಬದಲಿ ಸರಕನ್ನು ನೀಡುವಂತೆ

೩. ದೂರುದಾರ ಪಾವತಿಸಿರುವ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ

೪. ಗ್ರಾಹಕನಿಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವಂತೆ.

ಮೇಲ್ಮನವಿ

[ಬದಲಾಯಿಸಿ]

ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶವು ಯಾವುದೇ ಕಕ್ಷಿದಾರನಿಗೆ ತೃಪ್ತಿಕರವಾಗದಿದ್ದಲ್ಲಿ ಜಿಲ್ಲಾ ವೇದಿಕೆಯ ಆದೇಶವಾದ ೩೦ ದಿನಗಳೊಳಗಾಗಿ ರಾಜ್ಯ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು.

ರಾಜ್ಯ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆ.

[ಬದಲಾಯಿಸಿ]

೧. ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಅನ್ವಯ ಸರ್ಕಾರವು ರಾಜ್ಯದ ರಾಜಧಾನಿಯಲ್ಲಿ ಆಯಾ ರಾಜ್ಯಕ್ಕೆ ಸೀಮಿತವಾಗಿ ಈ ಸಮಿತಿಯಲ್ಲಿ ರಚಿಸಿದೆ.ರಾಜ್ಯ ಸಮಿತಿಯ ಲಕ್ಷಣಗಳು ಕೆಳಕಂಡಂತಿವೆ.

ಸಂಯೋಜನೆ

[ಬದಲಾಯಿಸಿ]

ರಾಜ್ಯ ಸಮಿತಿಯು ಮೂರು ವ್ಯಕ್ತಿಗಳಿಂದ ಕೂಡಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರಿರುತ್ತಾರೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು. ಇವರನ್ನು ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ.

ವಿದ್ಯಾರ್ಹತೆ

[ಬದಲಾಯಿಸಿ]

ರಾಜ್ಯ ಸಮಿತಿಯ ಅಧ್ಯಕ್ಷರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.ಸದಸ್ಯರು ಪಧವೀಧರರಾಗಿದ್ದು, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಕಾನೂನು, ಲೆಕ್ಕಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ವ್ಯವಹಾರ ಮತ್ತು ಆಡಳಿತ ಜ್ಞಾನ ಹಾಗೂ ಅನುಭವವನ್ನು ಹೊಂದಿರಬೇಕು. ಹಾಗೂ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು.

ವ್ಯಾಪ್ತಿ

[ಬದಲಾಯಿಸಿ]

ರಾಜ್ಯ ಸಮಿತಿಯು ಸರಕು ಅಥವಾ ಸೇವೆಗಳ ಮೌಲ್ಯ ಹಾಗೂ ಕೋರಲಾಗಿರುವ ಪರಿಹಾರದ ಮೊತ್ತ ರೂ.೨೦ ಲಕ್ಷಕ್ಕಿಂತ ಹೆಚ್ಚಾಗಿರುವ, ಆದರೆ ಒಂದು ಕೋಟಿಗಿಂತ ಕಡಿಮೆ ಇರುವ ದೂರುಗಳನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ಮತ್ತು ಜಿಲ್ಲಾ ವೇದಿಕೆಗಳ ಆದೇಶದ ವಿರುದ್ಧ ಮೇಲ್ಮನವಿಯನ್ನು ಸ್ವೀಕರಿಸಿ ತೀರ್ಮಾನಿಸುವ ವ್ಯಾಪ್ತಿಯನ್ನು ಹೊಂದಿದೆ.

ದೂರು ನಿವಾರಣೆ ನಡವಳಿಕೆಗಳು

[ಬದಲಾಯಿಸಿ]

ದೂರನ್ನು ಸ್ವೀಕರಿಸಿದ ನಂತರ ರಾಜ್ಯ ಸಮಿತಿಯು ಎದುರು ಕಕ್ಷಿದಾರನಿಗೆ ಸೂಚನೆ (ನೋಟೀಸು ) ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ದೂರಿನಲ್ಲಿರುವ ನ್ಯೂನತೆಯನ್ನು ದೃಢೀಕರಿಸುವ ಉದ್ದೇಶದಿಂದ ಮಾದರಿಯನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಬಹುದು..ಎದುರು ಕಕ್ಷಿದಾರನು ಮಾರಾಟಗಾರ, ವಿತರಕ ಅಥವಾ ಉತ್ಪಾದಕನಾಗಿರಬಹುದು.

ಪರಿಹಾರ

[ಬದಲಾಯಿಸಿ]

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಸರಕುಗಳಲ್ಲಿರುವ ದೋಷಗಳು ದೃಢೀಕರಿಸಲ್ಪಟ್ಟಲ್ಲಿ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ಅನುಸರಿಸಲಾಗಿದೆಯೆಂದು ಸಮಿತಿಗೆ ಮನವರಿಕೆಯಾದಲ್ಲಿ ಎದುರು ಕಕ್ಷಿದಾರನಿಗೆ ಕಳಕಂಡಂತೆ ಆದೇಶಿಸಬಹುದು.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸುವಂತೆ

೨. ಬದಲಿ ಸರಕನ್ನು ನೀಡುವಂತೆ

೩. ದೂರುದಾರ ಪಾವತಿಸಿರುವ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ

೪. ಗ್ರಾಹಕನಿಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವಂತೆ.

ಮೇಲ್ಮನವಿ

[ಬದಲಾಯಿಸಿ]

ರಾಜ್ಯ ಸಮಿತಿಯು ನೀಡಿರುವ ಆದೇಶವು ಯಾವುದೇ ಕಕ್ಷಿದಾರನಿಗೆ ತೃಪ್ತಿಕರವಾಗದಿದ್ದಲ್ಲಿ ರಾಜ್ಯವೇದಿಕೆಯ ಆದೇಶವಾದ ೩೦ ದಿನಗಳೊಳಗಾಗಿ ರಾಷ್ಟ್ರ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು.

ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಸಂಸ್ಥೆ

[ಬದಲಾಯಿಸಿ]

ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಅನ್ವಯ ಕೇಂದ್ರ ಸರ್ಕಾರವು ರಾಷ್ಟದ ರಾಜಧಾನಿಯಲ್ಲಿ ಸಂಪೂರ್ಣ ರಾಷ್ಟ್ರಕ್ಕೆ ಅನ್ವಯಿಸುವಂತೆ ಈ ಸಮಿತಿಯಲ್ಲಿ ರಚಿಸಿದೆ. ಇದರ ಲಕ್ಷಣಗಳು ಕೆಳಕಂಡಂತಿವೆ.

ಸಂಯೋಜನೆ

[ಬದಲಾಯಿಸಿ]

ರಾಷ್ಟ್ರ ಸಮಿತಿಯು ಐದು ವ್ಯಕ್ತಿಗಳಿಂದ ಕೂಡಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಉಳಿದ ನಾಲ್ಕು ಜನ ಸದಸ್ಯರನ್ನು ಹೊಂದಿರುತ್ತದೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು.ಇವರಗಳನ್ನು ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ.

ವಿದ್ಯಾರ್ಹತೆ

[ಬದಲಾಯಿಸಿ]

ರಾಷ್ಟ್ರ ಸಮಿತಿಯ ಅಧ್ಯಕ್ಷರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.ಸದಸ್ಯರು ಪಧವೀಧರರಾಗಿದ್ದು, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಕಾನೂನು, ಲೆಕ್ಕಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ವ್ಯವಹಾರ ಮತ್ತು ಆಡಳಿತ ಜ್ಞಾನ ಹಾಗೂ ಅನುಭವವನ್ನು ಹೊಂದಿರಬೇಕು. ಹಾಗೂ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು.

ವ್ಯಾಪ್ತಿ

[ಬದಲಾಯಿಸಿ]

ರಾಷ್ಟ್ರ ಸಮಿತಿಯು ಸರಕು ಅಥವಾ ಸೇವೆಗಳ ಮೌಲ್ಯ ಹಾಗೂ ಕೋರಲಾಗಿರುವ ಪರಿಹಾರದ ಮೊತ್ತ ರೂ.ಒಂದು ಕೋಟಿಗಿಂತ ಹೆಚ್ಚಾಗಿರುವ ದೂರುಗಳನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ಮತ್ತು ರಾಜ್ಯ ಸಮಿತಿಗಳ ಆದೇಶದ ವಿರುದ್ಧ ಮೇಲ್ಮನವಿಯನ್ನು ಸ್ವೀಕರಿಸಿ ತೀರ್ಮಾನಿಸುವ ವ್ಯಾಪ್ತಿಯನ್ನು ಹೊಂದಿದೆ.

ದೂರು ನಿವಾರಣೆ ನಡವಳಿಕೆಗಳು

[ಬದಲಾಯಿಸಿ]

ದೂರನ್ನು ಸ್ವೀಕರಿಸಿದ ನಂತರ ರಾಷ್ಟ್ರ ಸಮಿತಿಯು ಎದುರು ಕಕ್ಷಿದಾರನಿಗೆ ಸೂಚನೆ (ನೋಟೀಸು ) ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ದೂರಿನಲ್ಲಿರುವ ನ್ಯೂನತೆಯನ್ನು ದೃಢೀಕರಿಸುವ ಉದ್ದೇಶದಿಂದ ಮಾದರಿಯನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಬಹುದು..ಎದುರು ಕಕ್ಷಿದಾರನು ಮಾರಾಟಗಾರ, ವಿತರಕ ಅಥವಾ ಉತ್ಪಾದಕನಾಗಿರಬಹುದು.

ಪರಿಹಾರ

[ಬದಲಾಯಿಸಿ]

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಸರಕುಗಳಲ್ಲಿರುವ ದೋಷಗಳು ದೃಢೀಕರಿಸಲ್ಪಟ್ಟಲ್ಲಿ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ಅನುಸರಿಸಲಾಗಿದೆಯೆಂದು ಸಮಿತಿಗೆ ಮನವರಿಕೆಯಾದಲ್ಲಿ ಎದುರು ಕಕ್ಷಿದಾರನಿಗೆ ಕಳಕಂಡಂತೆ ಆದೇಶಿಸಬಹುದು.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸುವಂತೆ

೨. ಬದಲಿ ಸರಕನ್ನು ನೀಡುವಂತೆ

೩. ದೂರುದಾರ ಪಾವತಿಸಿರುವ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ

೪. ಗ್ರಾಹಕನಿಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವಂತೆ.

ಮೇಲ್ಮನವಿ

[ಬದಲಾಯಿಸಿ]

ರಾಷ್ಟ್ರ ಸಮಿತಿಯು ನೀಡಿರುವ ಆದೇಶವು ಯಾವುದೇ ಕಕ್ಷಿದಾರನಿಗೆ ತೃಪ್ತಿಕರವಾಗದಿದ್ದಲ್ಲಿ ಜಿಲ್ಲಾ ವೇದಿಕೆಯ ಆದೇಶವಾದ ೩೦ ದಿನಗಳೊಳಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು.

ಗ್ರಾಹಕನಿಗೆ ದೊರೆಯುವ ಪರಿಹಾರಗಳು

[ಬದಲಾಯಿಸಿ]

ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಶೋಷಿತ ಗ್ರಾಹಕನಿಗೆ ಕೆಳಕಂಡ ಪರಿಹಾರಗಳು ದೊರೆಯುತ್ತವೆ.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸಿಕೋಳ್ಳುವ

೨. ಬದಲಿ ಸರಕನ್ನು ನೀಡುವಂತೆ

೩. ಸರಕಿನ ಮೌಲ್ಯವನ್ನು ವಾಪಸ್ಸು ಪಡೆಯುವ

೪. ನಷ್ಟ ಪರಿಹಾರವನ್ನು ಪಡೆಯುವ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವ

೬. ಹಾನಿಕಾರಕ ಸರಕುಗಳನ್ನು ಮಾರಾಟ ಮಾಡುದಂತೆ ನಿರ್ಬಂಧ ಹೇರುವ

೭. ಹಾನಿಕಾರಕ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ.

ಇವುಗಳನ್ನು ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. http://dictionary.reference.com/browse/consumer
  2. "ಆರ್ಕೈವ್ ನಕಲು" (PDF). Archived from the original (PDF) on 2016-03-06. Retrieved 2015-05-08.
  3. http://www.collinsdictionary.com/dictionary/english/consumer-protection
  4. http://www.consumersinternational.org/our-work/wcrd/
  5. http://www.oldandsold.com/articles11/distribution-41.shtml
  6. http://www.consumercomplaint.ind.in/essays/essay-on-consumer-exploitation-in-india/1174[ಶಾಶ್ವತವಾಗಿ ಮಡಿದ ಕೊಂಡಿ]
  7. https://ideas.repec.org/p/clb/wpaper/201115.html
  8. http://odishapolice.gov.in/sites/default/files/PDF/Consumer%20Protection%20Act%20%201986.pdf
  9. "ಆರ್ಕೈವ್ ನಕಲು". Archived from the original on 2015-04-29. Retrieved 2021-08-28.
  10. "ಆರ್ಕೈವ್ ನಕಲು". Archived from the original on 2015-05-04. Retrieved 2015-05-08.
  11. "ಆರ್ಕೈವ್ ನಕಲು". Archived from the original on 2015-05-13. Retrieved 2015-05-08.