ವಿಷಯಕ್ಕೆ ಹೋಗು

ಗಾಥಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಥಾ ಎನ್ನುವುದು ಗೀಯತೇ ಇತಿ-ಎಂಬ ವಿವರಣೆಯುಳ್ಳದ್ದು. ಋಗ್ವೇದದಲ್ಲಿ ಗಾತವ್ಯಸ್ತೋತ್ರವೆಂಬ ಅರ್ಥದಲ್ಲಿ ಗಾಥಾ ಶಬ್ದವನ್ನು ಕಾಣಬಹುದು; ಋಕ್, ಸಾಮ, ಯಜುಸ್ ಎಂಬ ವೇದಮಂತ್ರಗಳಿಗಿಂತ ಬೇರೆಯಾಗಿರುವ ಛಂದೋಬದ್ಧ ರಚನೆ. ಸ್ವರ ಸಂಗೀತಯುಕ್ತವಾದ ವೈದಿಕವೃತ್ತಗಳು ಲಘು-ಗುರು ವಿನ್ಯಾಸಜನ್ಯ ಸಂಗೀತದಿಂದ ಕೂಡಿದ ವೃತ್ತಗಳಾಗಿ ಪರಿವರ್ತನೆ ಹೊಂದುತ್ತಿರುವಾಗ ಬ್ರಾಹ್ಮಣಗಳಲ್ಲಿ ಅನುಷ್ಟುಭ್ ಮುಂತಾದ ಕೆಲವು ವೃತ್ತಗಳು ಗಾನಯೋಗ್ಯವಾಗಿ ಪಡೆದಿರುವ ಹೆಸರಿದು. ಮುಖ್ಯವಾಗಿ ಪ್ರಾಕೃತ ಕಾವ್ಯದ ಒಂದು ಮಾತ್ರಾವೃತ್ತ;[] ಇದರ ಸಂಸ್ಕೃತ ರೂಪ ಆರ್ಯಾ ಎನಿಸಿಕೊಂಡಿದೆ. ಛಂದೋಗ್ರಂಥಗಳಲ್ಲಿ ನಿರ್ದೇಶಿಸದೆ ಬಿಟ್ಟಿರುವ ವೃತ್ತಗಳ ಸಾಮಾನ್ಯ ಹೆಸರು.

ಹಾಗಾಗಿ, ಗಾಥಾ ಪದವು ಸಾಮಾನ್ಯವಾಗಿ ಯಾವುದೇ ಪ್ರಾಕೃತ ಅಥವಾ ಪಾಳಿ ವೃತ್ತಗಳನ್ನು ಸೂಚಿಸಬಹುದು.[]

ಸಂಸ್ಕೃತದಲ್ಲಿ ಕಂಡುಬರುವ ಮತ್ತು ಸ್ವಲ್ಪ ಹೆಚ್ಚು ಕಡಿಮೆಯಾಗಿ ವೈದಿಕ ಛಂದಸ್ಸಿನ ಹಿನ್ನೆಲೆಯುಳ್ಳ ಅಕ್ಷರವೃತ್ತ, ವರ್ಣವೃತ್ತ, ಮಾತ್ರಾವೃತ್ತ-ಇವುಗಳಲ್ಲಿ ಕಡೆಯವು ಪ್ರಾಕೃತ ಛಂದಸ್ಸಿನ ಕೆಲವು ಜಾನಪದಗೀತೆಗಳ ಪ್ರಭಾವದಿಂದ ರೂಪುಗೊಂಡಿವೆಯೆಂದು ವಿದ್ವಾಂಸರ ಅಭಿಪ್ರಾಯ. ವೈದಿಕ ಛಂದಸ್ಸಿನಂತೆ ಅಕ್ಷರವಾಗಲಿ, ಸಂಸ್ಕೃತಕಾವ್ಯ ಛಂದಸ್ಸಿನ ವರ್ಣವಾಗಲಿ (ಲಘು - ಗುರುಯುಕ್ತ), ಪ್ರಾಕೃತ ಜನಪದ ಗೀತೆಗಳ ಕಾಲಮಾನವಾಗಲಿ (ಕಾಲಮಾತ್ರೆ) ಮಾತ್ರಾವೃತ್ತಗಳ ಆಧಾರಾಂಶಗಳಾಗಿಲ್ಲ. ಅವುಗಳ ವೈಲಕ್ಷಣ್ಯವೆಂದರೆ ಅಕ್ಷರಮಾತ್ರೆಗಳ ಅಂಶತ್ವ. ಅವನ್ನು ನಾಲ್ಕು ಮಾತ್ರೆಗಳ (ಚತುರ್ಮಾತ್ರೆ) ಮಾತ್ರಾಗಣದಿಂದ ವಿಭಾಗ ಮಾಡಿ ಗುರುತಿಸುವುದುಂಟು.

ಗಾಥಾ ಎಂಬ ಪ್ರಾಕೃತ ವೃತ್ತದಲ್ಲಿ ಎರಡು ಶ್ಲೋಕಾರ್ಧಗಳಿದ್ದು, ಒಂದೊಂದರ್ಧದಲ್ಲೂ ಎರಡು ಭಾಗಗಳಿರುತ್ತವೆ. ಎರಡು ಅರ್ಧಗಳ ಪ್ರಥಮ ಭಾಗಗಳಲ್ಲಿ 12 ಮಾತ್ರೆಗಳಿದ್ದು, ಒಂದನೆಯ ಅರ್ಧದ ದ್ವಿತೀಯ ಭಾಗದಲ್ಲಿ 18 ಮಾತ್ರೆಗಳೂ, ಎರಡನೆಯ ಅರ್ಧದ ದ್ವಿತೀಯ ಭಾಗದಲ್ಲಿ 15 ಮಾತ್ರೆಗಳೂ ಇರುತ್ತವೆ. ಅಂದರೆ ಒಟ್ಟಿನಲ್ಲಿ ಮೊದಲನೆಯ ಶ್ಲೋಕಾರ್ಧದಲ್ಲಿ 30 ಮಾತ್ರೆಗಳೂ, ಎರಡನೆಯದರಲ್ಲಿ 27 ಮಾತ್ರೆಗಳೂ ಇದ್ದಂತಾಯಿತು. ಪ್ರಥಮ ಭಾಗಗಳಲ್ಲಿ ಒಂದೊಂದರ 12 ಮಾತ್ರೆಗಳೂ ಚತುರ್ಮಾತ್ರೆಯ ಮಾತ್ರಾಗಣದ ಐದು ರೂಪಗಳಲ್ಲಿ ಯಾವುದಾದರೂ ಮೂರೂ ಚತುರ್ಮಾತ್ರೆಗಳುಳ್ಳವು. ಮೊದಲರ್ಧದ ದ್ವಿತೀಯ ಭಾಗದಲ್ಲಿ ನಾಲ್ಕು ಚತುರ್ಮಾತ್ರೆಗಳೂ (ಇವುಗಳಲ್ಲಿ ಮೂರನೆಯ ಚತುರ್ಮಾತ್ರೆ ಜಗಣವೋ ಸರ್ವಲಘುವೋ ಆಗಿರಬೇಕು) ಅನಂತರ ಕಡೆಯಲ್ಲಿ ಒಂದು ಗುರುವೂ ಇದ್ದು, ಎರಡನೆಯ ಅರ್ಧದ ದ್ವಿತೀಯ ಭಾಗದಲ್ಲಿ ಯಾವುದಾದರೂ ಎರಡು ಚತುರ್ಮಾತ್ರೆಗಳು, ಅನಂತರ ಒಂದು ಲಘು, ಯಾವುದಾದರೂ ಒಂದು ಚತುರ್ಮಾತ್ರೆ ಮತ್ತು ಕಡೆಯಲ್ಲಿ ಒಂದು ಗುರು ಇರುತ್ತವೆ.

ಈ ಗಾಥಾ ವೃತ್ತದಲ್ಲಿ ಗಮನಿಸಬೇಕಾದ ಇನ್ನೆರಡು ವಿಷಯಗಳೆಂದರೆ-ಚತುರ್ಮಾತ್ರೆಗಳು ನಿರಂತರವಾಗಿ ಬಂದಾಗ ಒಂದು ಚತುರ್ಮಾತ್ರೆಯ ಕಡೆಯ ಮಾತ್ರೆಗೂ ಮುಂದಿನ ಚತುರ್ಮಾತ್ರೆಯ ಮೊದಲನೆಯದಕ್ಕೂ ಮಧ್ಯೆ ಏರ್ಪಡುವ ಸಂಧಿಸ್ಥಾನದಲ್ಲಿ ಅವೆರಡರ ಸಂಯೋಗವಾಗುವಂತೆ ದೀರ್ಘಾಕ್ಷರವನ್ನು ಬಳಸದಿರುವಿಕೆ ಮತ್ತು ಎಲ್ಲಿ ನಿರ್ದಿಷ್ಟವಾಗಿಲ್ಲವೋ ಅಂಥ ಕಡೆಗಳಲ್ಲಿ ಜಗಣದ ಪ್ರಯೋಗ ನಿಷೇಧ.

ಜ಼ೆಂಡ್ ಅವೆಸ್ತದ ಭಾಗವಾಗಿ ಕೂಡ ಗಾಥಾ ಎಂಬ ಪದ ಬರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Sujit Mukherjee (1998), A Dictionary of Indian Literature Hyderabad: Orient Longman ISBN 81-250-1453-5 page 110
  2. Amaresh Datta (1988) Encyclopaedia of Indian literature vol. 2 Chennai: Sahitya Academy ISBN 81-260-1194-7 p. 1374
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಾಥಾ&oldid=1259239" ಇಂದ ಪಡೆಯಲ್ಪಟ್ಟಿದೆ