ವಿಷಯಕ್ಕೆ ಹೋಗು

ಗಾಥಾ (ಝರತುಷ್ಟ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಥಾ ಎಂಬ ಶಬ್ದ ವೇದಗಳಲ್ಲಿ ಸ್ತೋತ್ರರೂಪ ಶ್ಲೋಕವೆಂಬ ಅರ್ಥದಲ್ಲಿಯೂ, ಸಂಸ್ಕೃತದಲ್ಲಿ ಹಾಡುವ ಗಾದೆಯಂಥ ಸೂಕ್ತಿಯೆಂಬ ಅರ್ಥದಲ್ಲಿಯೂ, ಪ್ರಾಕೃತದಲ್ಲಿ ಆರ್ಯಾವೃತ್ತಕ್ಕೆ ಸಮಾನವಾದ ಒಂದು ಮಾತ್ರಾವೃತ್ತದ ಛಂದೋಬಂಧವೆಂದೂ ಬಳಕೆಯಲ್ಲಿದೆ. ಆದರೆ ಇದು ಬಹಳಷ್ಟು ಪ್ರಸಿದ್ಧಿಗೆ ಬಂದುದು ಪ್ರಾಚೀನ ಪಾರಸಿಕರ ಪವಿತ್ರ ಗ್ರಂಥವಾದ ಜ಼ೆಂಡ್ ಅವೆಸ್ತದ ಒಂದು ಭಾಗವಾಗಿರುವುದರಿಂದಲೇ ಎನ್ನಬಹುದು. ಗಾಥೆಗಳೆಂದರೆ ಒಟ್ಟು ೧೭ ಸ್ತುತಿಗೀತೆಗಳು. ಅವೆಸ್ತದ ಅಸ್ತಿತ್ತ್ವದಲ್ಲಿರುವ ಅತ್ಯಂತ ಹಳೆಯ ತುಣುಕು ಕ್ರಿ.ಶ. ೧೩೨೩ ರ ಕಾಲದ್ದೆಂದು ನಿರ್ಧರಿಸಲಾಗಿದೆ.[]

ಕ್ರಿಸ್ತಪೂರ್ವ ಏಳನೆಯ ಶತಮಾನದ ವೇಳೆಗೆ ಆಕಿಮೀನಿಯನ್ ಚಕ್ರವರ್ತಿಗಳಾದ ಡೇರಿಯಸ್ ಮುಂತಾದವರ ಕಾಲದಲ್ಲಿ ಈ ಪವಿತ್ರಗ್ರಂಥ ಸಾಕಷ್ಟು ಪ್ರಚಾರಗೊಂಡು ಅಲೆಕ್ಸಾಂಡರನ ದಂಡಯಾತ್ರೆಯ ಹೊತ್ತಿಗೆ ಪ್ರಸಿದ್ಧಿಗೆ ಬಂದಾಗಿತ್ತು. ಭಾರತದಲ್ಲಿ ವೇದಗಳಿರುವ ಮಹತ್ತ್ವದ ಸ್ಥಾನವೇ ಅವೆಸ್ತಕ್ಕೆ ಅಂದಿನಿಂದ ಇಂದಿನವರೆಗೂ ಪಾರಸಿಕರಿಂದ ದತ್ತವಾಗಿದೆ. ಈ ಗ್ರಂಥ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಬಂದು ಈಗ ಬಹು ವಿಸ್ತಾರವಾಗಿದೆ. ಅದರ ಪ್ರಾಚೀನತಮ ಭಾಗವೇ ಜ಼ೊರಾಸ್ಟರನ ಮೂಲ ಸಂದೇಶವನ್ನೊಳಗೊಂಡ ಪದ್ಯರೂಪವಾದ ಗಾಥೆಗಳೆಂದು ವಿದ್ವಾಂಸರು ಭಾವಿಸುತ್ತಾರೆ.

ಈ ಸ್ತುತಿಗೀತೆಗಳ ಛಂದಸ್ಸು ಐತಿಹಾಸಿಕವಾಗಿ ವೈದಿಕ ತ್ರಿಷ್ಟುಭ್-ಜಗತಿ ಛಂದಸ್ಸುಗಳ ಕುಟುಂಬಕ್ಕೆ ಸಂಬಂಧಿಸಿದೆ.[] ಅವೆಸ್ತದ ಗಾಥೆಗಳು ಐದು ವೃತ್ತಜಾತಿಗಳನ್ನೊಳಗೊಳ್ಳುತ್ತವೆ:

  1. ಅಹುನ ವೈತಿ,
  2. ಉಷ್ತವೈತಿ,
  3. ಸ್ಪೆಂಟ ಮೆಯ್ನ್ಯು,
  4. ವೊಹುಕ್ಷಥ್ರ ಮತ್ತು
  5. ವಹಿಸ್ಟೋಯಿಸ್ಟಿ.

ಮಿಕ್ಕ ಭಾಗಗಳಿಗಿಂತ ಗಾಥೆಗಳಲ್ಲಿ ಜ಼ೊರಾಸ್ಟರನ ವೈಯಕ್ತಿಕ ಉಪದೇಶಗಳೂ ಬೋಧನಗಳೂ ಎದ್ದು ಕಾಣುತ್ತವೆ. ಅಹುರ ಮಜ಼್ಡ (ಒಳ್ಳೆಯದರ ಅಧಿದೈವ) ಮತ್ತು ಅಹ್ರಿಮನ್ (ಕೆಟ್ಟದರ ಅಧಿದೈವ) - ಇವುಗಳ ನಿತ್ಯಸ್ಪರ್ಧೆ. ಇದರಲ್ಲಿ ಮನುಷ್ಯನ ಸಂಬಂಧ, ಕಟ್ಟಕಡೆಗೆ ಅಧರ್ಮನಾಯಕನಾದ ಅಹ್ರಿಮನ್‍ನ ವಿನಾಶ - ಇವು ಗಾಥೆಗಳಲ್ಲಿ ಬರುವ ಮುಖ್ಯಾಂಶಗಳು.

ಉಲ್ಲೇಖಗಳು

[ಬದಲಾಯಿಸಿ]
  1. Boyce 1984, p. 1.
  2. Schlerath, Bernfried (1969), "Der Terminus aw. Gāθā", Münchener Studien zur Sprachwissenschaft, 25: 99–103

ಗ್ರಂಥಸೂಚಿ

[ಬದಲಾಯಿಸಿ]
  • Boyce, Mary (1984), Textual Sources for the Study of Zoroastrianism, Manchester UP.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: