ವಿಷಯಕ್ಕೆ ಹೋಗು

ದಂಡಯಾತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಂಡಯಾತ್ರೆ ಎಂದರೆ ಯುದ್ಧದಲ್ಲಿ ಒಂದು ನಿರ್ದಿಷ್ಟ ಘಟ್ಟವಾಗಿ ಕೈಗೊಂಡ ಸೇನಾಕಾರ್ಯಾಚರಣೆ ಯಾ ಪರಸ್ಪರ ಸಂಬಂಧಿತ ಕಾರ್ಯಾಚರಣೆಗಳು ಅಥವಾ ಒಟ್ಟಾರೆ ಯುದ್ಧನೀತಿಯ (ಸ್ಟ್ರ್ಯಾಟಜಿ) ಕಾರ್ಯಾಚರಣೆ (ಕೇಂಪೇನ್). ವಿಶೇಷ ಕಾರಣಕ್ಕಾಗಿ ನಡೆಸುವ ಸೇನಾ ಮುನ್ನಡೆಗೂ ಈ ಹೆಸರುಂಟು. ದೀರ್ಘಾವಧಿಯ ಯುದ್ಧದಲ್ಲಿ ಒಂದು ಮಹಾನಾಯಕತ್ವದ ಅಧೀನವಾಗಿ ಹಲವಾರು ಉಪನಾಯಕತ್ವಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕದನಗಳಲ್ಲಿ ಉದ್ಯುಕ್ತವಾಗಿರಬಹುದು. ಆಗ ಇವೆಲ್ಲ ಕಾರ್ಯಾಚರಣೆಗಳಲ್ಲೂ ಪರಸ್ಪರ ಸಂಬಂಧವನ್ನು ಮಹಾನಾಯಕತ್ವ ವಿಧಿಸಿ ಮತ್ತು ಕಾಣುತ್ತ ಒಟ್ಟೂ ದಂಡಯಾತ್ರೆಗೆ ಒಂದು ಗುರಿಯನ್ನು ಕೊಡುವುದು ವಾಡಿಕೆ.

ಕೆಲವು ಇತಿಹಾಸ ಪ್ರಸಿದ್ಧ ದಂಡಯಾತ್ರೆಗಳನ್ನು ಇಲ್ಲಿ ವಿವರಿಸಿದೆ.

ಅಲೆಗ್ಸಾಂಡರ್ ಮಹಾಶಯ : ಶಕ್ತಿಪರಾಕ್ರಮಗಳಲ್ಲಿ ಚರಿತ್ರೆಯ ಅಪ್ರತಿಮ ವೀರ ; ಸಮರತಂತ್ರದಲ್ಲೂ ನಾಯಕತ್ವದಲ್ಲೂ ಪ್ರಚಂಡ ಪ್ರತಿಭಾನ್ವಿತ. ಅವನ ಹೆಸರು ಲೋಕವನ್ನು ನಡುಗಿಸಿತು. ಯಾವ ಯುದ್ಧದಲ್ಲೂ ಸೋಲದೆ ವಿಜಯ ವೀರನಾದ. 16ನೆಯ ವಯಸ್ಸಿನಲ್ಲಿ ಸೇನಾನಾಯಕನಾಗಿ ಬೆಟ್ಟದ ಬುಡಕಟ್ಟಿನವರ ದಂಗೆಗಳನ್ನು ಅಡಗಿಸಿದ (ಕ್ರಿ. ಪೂ. 339). ಕ್ರಿ. ಪೂ. 335 ರಲ್ಲಿ ಮ್ಯಾಸಿಡೋನಿಯಾದಿಂದ ಬಲು ಶಿಸ್ತಿನ ಸೈನ್ಯದ ಸಮೇತ ಹೊರಟು ಬಾಲ್ಕನ್ಸುಗಳನ್ನು ದಾಟಿ ಅನೇಕ ಪರ್ವತ ಬುಡಕಟ್ಟಿನವರನ್ನು ಸೋಲಿಸಿದ. ಡಾನ್ಯೂಬ್ ನದಿಯನ್ನು ದಾಟಿ ಗೀಟೀ ಜನರ ವಸಾಹತನ್ನು ಸುಟ್ಟುಹಾಕಿದ. ಬೆಟ್ಟದ ಮೇಲೆ ಇಲ್ಲಿರಿಯನರನ್ನು ಅಡಗಿಸಿದ.

ದಂಗೆಕೋರರಾದ ಥೀಬಾ ಜನರನ್ನು ಏಕಾಏಕಿ ಚಕಿತಗೊಳಿಸಿ ಅವರ ರಾಜಧಾನಿಯನ್ನು ಆಕ್ರಮಿಸಿದ. ಏಷ್ಯಕ್ಕೆ ನುಗ್ಗಿ ಏಷ್ಯ ಮೇನರಿನಲ್ಲಿ ಭಾರಿ ಪರ್ಷಿಯನ್ ಸೇನೆಯನ್ನು ಸೋಲಿಸಿದ. ಎಲ್ಲ ಗ್ರೀಕ್ ಪಟ್ಟಣಗಳಲ್ಲೂ ಪರ್ಷಿಯನ್ನರಿಗೆ ಮಿತ್ರರಾಗಿದ್ದ ನಿರಂಕುಶ ಪ್ರಭುಗಳನ್ನು ನಿಗ್ರಹಿಸಿ ಪ್ರಜಾಧಿಪತ್ಯವನ್ನು ಸ್ಥಾಪಿಸಲು ತನ್ನ ಅಧಿಕಾರಿಗಳನ್ನು ನೇಮಿಸಿದ. ಅನೇಕ ಊರುಗಳ ಬಂಧವಿಮೋಚನೆ ಮಾಡಿದ. ಅಲೆಗ್ಸಾಂಡರನಿಗೆ ಹಿಂತಿರುಗಲು ಆಗದಂತೆ ಪರ್ಷಿಯದ ಚಕ್ರವರ್ತಿ ಡರಿಯಸ್ ಭಾರಿ ಸೈನ್ಯವನ್ನು ಪರ್ವತ ಕಣಿವೆಗಳಲ್ಲಿ ಜಮಾವಣೆ ಮಾಡಿ ಇಟ್ಟಿದ್ದ. ಇಸ್ಸಸಿನಲ್ಲಿ ನಡೆದ ಭಾರಿ ಕದನದಲ್ಲಿ ಡರಿಯಸ್ ಸೋತು ಓಡಿಹೋದ. ಡರಿಯಸ್ ತನ್ನ ಸಾಮ್ರಾಜ್ಯದ ಬಹುಭಾಗವನ್ನು ಕೊಡಲೊಪ್ಪಿದ. ಅಲೆಗ್ಸಾಂಡರ್ ಅದನ್ನು ನಿರಾಕರಿಸಿ ಇಡೀ ಸಾಮ್ರಾಜ್ಯ ಬೇಕೆಂದು ಹೇಳಿದ. ಟೈರ್ ಪಟ್ಟಣಕ್ಕೆ ಆರು ತಿಂಗಳು ಮುತ್ತಿಗೆ ಹಾಕಿ ಘಿನೀಷಿಯನ್ ಕರಾವಳಿಯನ್ನು ಜಯಿಸಿದ. ಎರಡು ತಿಂಗಳು ಹೋರಾಡಿ ಗಾಜಾ, ಸಿರಿಯಾ ಪ್ಯಾಲೆಸ್ಟೈನುಗಳನ್ನು ಆಕ್ರಮಿಸಿದ. ಈಜಿಪ್ಟನ್ನು ಗೆದ್ದು (ಕ್ರಿ.ಪೂ. 331). ಪರ್ಷಿಯದೊಳಗೆ ನುಗ್ಗಿ ಸಮುದ್ರ ತೀರಗಳನ್ನು ಆಕ್ರಮಿಸಿ ಪರ್ಷಿಯನ್ನರ ಕರಾವಳಿ ಹತೋಟಿಯನ್ನು ಮುರಿದ.

ಮೆಸೊಪೋಟಾಮಿಯವನ್ನು ಹಾಯ್ದು ಟೈಗ್ರಿಸ್ ನದಿಯನ್ನು ತಲುಪಿ ಜಿನಿವಾಕ್ಕೆ ಹೋದ. ಅಲ್ಲಿ ಬಹು ಸೈನ್ಯದೊಡನಿದ್ದ ಡರಿಯಸನನ್ನು ಸೋಲಿಸಿ ಓಡಿಸಿದ. ದಕ್ಷಿಣದ ನಾಡುಗಳೆಲ್ಲವನ್ನು ಹಿಡಿದ. ಸುಸಾದಲ್ಲಿ ಪರ್ಷಿಯನ್ ರಾಜರು ಶೇಖರಿಸಿ ಇಟ್ಟಿದ್ದ ಅಗಾಧ ಸಂಪತ್ತನ್ನು ಹಿಡಿದ. ಇರಾನಿನ ತಪ್ಪಲಿಗೆ ಹತ್ತಿ ಡರಿಯಸನನ್ನು ಬೆನ್ನಟ್ಟಿ, ದಾರಿಯಲ್ಲಿ ಮಾರಾಂತು ನಿಂತ ಪರ್ವತವಂಶದವರನ್ನು ಅಡಗಿಸಿದ. ಪರ್ಷಿಯದ ಪರ್ಸಿಪೋಲ್ ನಗರದಲ್ಲಿದ್ದ ಅಪರಿಮಿತ ಐಶ್ವರ್ಯವನ್ನು ಪಡೆದ. ಎಕ್‍ಬಟಾನದಲ್ಲಿ ಹೊಸ ನಿಕ್ಷೇಪವನ್ನು ವಶಪಡಿಸಿಕೊಂಡ. ಡರಿಯಸನನ್ನು ಬೆನ್ನಟ್ಟಿ ಅವನು ತನ್ನವರಿಂದ ಇರಿಯಲ್ಪಟ್ಟು ಸತ್ತಿರುವುದನ್ನು ಕಂಡ. ಪರ್ಷಿಯದ ಇತರ ಪ್ರಾಂತಗಳನ್ನು ಜಯಿಸಲು ತೆರಳಿ ಪರ್ವತಶ್ರೇಣಿಗಳಲ್ಲಿ ಪ್ರತಿಭಟಿಸಿದವರನ್ನು ಅಡಗಿಸಿದ. ಹಿಂದೂಕುಷ್ ಪರ್ವತವನ್ನು ದಾಟಿ ಬ್ಯಾಕ್ಟ್ರಿಯಾಕ್ಕೆ ಹೋದ. ಡರಿಯಸನ ಮಗ ಬಾಸಸ್ ರಾಜನನ್ನು ಆಕ್ಸಸ್ ನದಿಯನ್ನು ದಾಟಿ ಬೊಖಾರಕ್ಕೆ ಹೋಗಿ ಹಿಡಿದ. ಅನೇಕ ದಂಗೆಗಳನ್ನು ಅಡಗಿಸಿದ. ಗಡಿನಾಡಿನ ನದಿಯನ್ನು ದಾಟಿ ದಾಳಿಮಾಡಿದ. ಅನೇಕ ರಾಜರ ದುರ್ಗಗಳನ್ನು ಜಯಿಸಿ ಪ್ರಾಂತಗಳನ್ನು ಆಕ್ರಮಿಸಿದ.

ಕಾಂದಹಾರ್, ಕಾಬೂಲ್, ಕಂದರಗಳ ಮಾರ್ಗವಾಗಿ ಭಾರತಕ್ಕೆ ಬಂದ. ಕ್ರೂರಿಗಳಾದ ಅನೇಕ ಗಿರಿವಂಶದವರ ಪಟ್ಟಣಗಳನ್ನೂ ಗೋಡೆಯಿಂದ ಆವರಿಸಲ್ಪಟ್ಟ ಪರ್ವತಗ್ರಾಮಗಳನ್ನೂ ವಶಪಡಿಸಿಕೊಂಡ. ಸಿಂಧೂನದಿಯ ಪಕ್ಕದಲ್ಲಿ ಪ್ರಪಾತದ ಶಿಖರದ ಮೇಲಿದ್ದ, ಯಾರೂ ಜಯಿಸಲಾಗದಿದ್ದ, ಆಯೋರ್ನಸ್ ಎಂಬ ಊರನ್ನು ಹಿಡಿದ. ಸಿಂಧೂನದಿಗೆ ಸೇತುವೆಯನ್ನು ಕಟ್ಟಿ ಪಂಜಾಬನ್ನು ತಲಪಿದ. ತುಂಬು ಪ್ರವಾಹದಲ್ಲಿದ್ದ ಜೀಲಮ್ ನದಿಯನ್ನು ಭಾರಿ ಮಳೆಯಲ್ಲಿ ರಾತ್ರಿ ಹೊತ್ತು ದಾಟಿ, ಆಚೆ ದಡದಲ್ಲಿ 200 ಆನೆಗಳು, ಭಾರಿ ಸೈನ್ಯಗಳೊಡನೆ ಎದುರಿಸಲು ಕಾದಿದ್ದ ಪೋರಸ್ ರಾಜನನ್ನು ಗೆದ್ದು ಅವನನ್ನು ತನ್ನ ಮಿತ್ರನನ್ನಾಗಿ ಮಾಡಿಕೊಂಡ. ರಾವಿ ನದಿಯನ್ನು ದಾಟಿ ಚಿಕ್ಕ ಊರುಗಳ ಮೇಲೆ ಹಲ್ಲೆ ಮಾಡಿ, ಬೀಯಾಸ್ ನದಿಗೆ ಹೋದ. ನೌಕಾಪಡೆಯನ್ನು ತಯಾರಿಸಿದ. ಗೋಡೆಯಿಂದ ಸುತ್ತುವರಿಯಲ್ಪಟ್ಟ ಶತ್ರುಗಳ ಊರಿನ ಗೋಡೆಯಿಂದಲೇ ಒಳಕ್ಕೆ ಧುಮುಕಿ ತನ್ನ ಸೈನ್ಯವಿಲ್ಲದೆ ಶತ್ರುಗಳನ್ನು ದಂಗುಮಾಡಿದ. ಸಿಂಧೂನದಿ ಸಮುದ್ರವನ್ನು ಸೇರುವ ಕಡೆ ಮುಖಜ ಭೂಮಿಯನ್ನು ಪರಿಶೋಧಿಸಿದ. ಬಲೂಚಿಸ್ತಾನದಲ್ಲಿ ಕರಾವಳಿಯ ಮಾರ್ಗದಲ್ಲಿ ಹೋದ. ಭೀಕರ ಮರುಭೂಮಿಯಲ್ಲಿ ಸೆಕೆ, ನೀರಡಿಕೆ, ಮರಳುಗಳಿಂದ ಪಾಡುಪಟ್ಟು ಬ್ಯಾಬಿಲಾನಿಗೆ ಹೋದ. ಅವನನ್ನು ಗೌರವಿಸಲು ರಾಯಭಾರಿಗಳು ದೂರದೇಶಗಳಿಂದಲೂ ಬಂದರು. ಬ್ಯಾಬಿಲಾನ್-ಈಜಿಪ್ಟುಗಳನ್ನು ಸಮುದ್ರದಿಂದ ಸಂಧಿಸಲು ಹವಣಿಸಿದ. 1000 ಹಡಗುಗಳು ನಿಲ್ಲಲು ರೇವನ್ನು ಅಗೆಸಿದ. 33ನೆಯ ವಯಸ್ಸಿನಲ್ಲಿ (ಕ್ರಿ.ಪೂ. 323) ಬ್ಯಾಬಿಲಾನಿನಲ್ಲಿ ಜ್ವರದಿಂದ ಕಾಲವಾದ.

ಹ್ಯಾನಿಬಾಲ್ : ಇವನು ಕಾರ್ಥೇಜಿನ ಜನರಲ್. ಒಂಬತ್ತನೆಯ ವಯಸ್ಸಿನಲ್ಲಿ ತಾನು ರೋಮನರ ಬದ್ಧದ್ವೇಷಿಯಾಗಿರುವೆನೆಂದು ತಂದೆಗೆ ವಚನ ನೀಡಿದ. ಇಪ್ಪತ್ತೈದನೆ ವಯಸ್ಸಿನಲ್ಲಿ ಸೇನಾಧಿಪತಿಯೂ ಸ್ಪೇನಿನ ಸರ್ವಾಧಿಕಾರಿಯೂ ಆದ. ಕ್ರಿ. ಪೂ. 220ರಲ್ಲಿ ಹೋಲ್‍ಕಾಡಸನ ವಿರುದ್ದ ದಂಡಯಾತ್ರೆಯನ್ನು ನಡೆಸಿದ. ವೆಕ್ಕಾಯಿಗಳ ವಿರುದ್ಧ ಹೋರಾಡಿ ಕಾರ್ಪಂಟನಿಯನ್ನು ಟೇಗಸ್ ನದಿಯ ಬಳಿ ಸೋಲಿಸಿದ. ಸ್ಯಾಗಂಟಮ್ ಪಟ್ಟಣಕ್ಕೆ ಎಂಟು ತಿಂಗಳು ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡ. ರೋಮನರ ವಿರುದ್ಧ ಬಲು ಭೀಕರವಾದ ಪ್ಯೂನಿಕ್ ಯುದ್ಧವನ್ನು ನಡೆಸಿದ. ಅದಕ್ಕಾಗಿ ಪೋ ನದಿಯ ಕಣಿವೆಯನ್ನು ತನ್ನ ಶಿಬಿರವಾಗಿ ಮಾಡಿಕೊಂಡು ರೋಮನರ ದ್ವೇಷಿಗಳಾಗಿದ್ದ ಗಾಲ್ ಜನರನ್ನು ಸೈನ್ಯಕ್ಕೆ ಸೇರಿಸಿಕೊಂಡ. ಇಟಲಿಯನ್ನು ಮುತ್ತುವ ಹಂಚಿಕೆಯನ್ನು ಹೂಡಿದ. ತಾನು ಇಟಲಿಯ ಕಡೆ ಹೋಗುವೆನೆಂದು ರೋಮನರಿಗೆ ಸಂಶಯ ಬಾರದಂತೆಯೂ ಅವರು ಯುದ್ಧಸನ್ನಾಹವನ್ನು ಮಾಡದಂತೆಯೂ ಆಲ್ಸ್ಫ್ ಪರ್ವತದಕಣಿವೆಗಳಲ್ಲಿ ಹೋಗಿ ಅದನ್ನು ಕೂಡಲೇ ದಾಟದೆ, ಅಲ್ಲಿದ್ದ ಬುಡಕಟ್ಟಿನವರೊಡನೆ ಎರಡು ತಿಂಗಳು ಹೋರಾಡುತ್ತಿದ್ದ. ರೋಮನ್ ಕಾನ್ಸಲ್ ಸಿಪಿಯೋ ದೊಡ್ಡ ಸೈನ್ಯದೊಡನೆ ಸಮುದ್ರಮಾರ್ಗವಾಗಿ ರ್ಹೋನ್ ನದಿಯ ಮುಖಜಭೂಮಿಗೆ ಹೋದಾಗ ಹ್ಯಾನಿಬಾಲ್ ನದಿಯ ಬಲದಂಡೆ ಬಳಿ ಉತ್ತರಕ್ಕೆ ಆಗಲೇ ಹೋಗಿದ್ದನೆಂದು ಅರಿತ. ಹ್ಯಾನಿಬಾಲನಿಗೆ ಸದ್ಯದಲ್ಲಿ ಯುದ್ದಮಾಡಲು ಇಷ್ಟವಿರಲಿಲ್ಲ. ಆದ್ದರಿಂದ ಸಿಪಿಯೋಗೆ ತಪ್ಪುದಾರಿತೋರಿಸಲು ಈ ಯುದ್ದತಂತ್ರವನ್ನು ಹೂಡಿದ್ದ ಅಷ್ಟೆ. ಹ್ಯಾನಿಬಾಲ್ ಯಾವ ಉದ್ದೇಶದಿಂದ ಅತ್ತಕಡೆ ಹೋಗುತ್ತಿದ್ದ, ಆಲ್ಫ್ಸ್ ಪರ್ವತದ ಯಾವ ಕಣಿವೆಯಿಂದ ಇಟಲಿಗೆ ಇಳಿಯಲು ಉದ್ದೇಶಿಸಿದ್ದ ಎಂಬುದು ಸಿಪಿಯೋಗೆ ತಿಳಿಯದೇ ಅವನು ತನ್ನ ಸೇನೆಯನ್ನು ಸ್ಪೇನಿನಲ್ಲಿ ದಂಡೆಯಾತ್ರೆ ಮಾಡಲು ಕಳುಹಿಸಿದ. ತನ್ನ ದೇಶವನ್ನು ರಕ್ಷಿಸಲು ಪೋ ನದಿಯ ಬಳಿ ಇದ್ದ ಸೇನೆಗಳನ್ನು ಸೇರಲು ಅಲ್ಲಿಗೆ ಹೋದ. ಹ್ಯಾನಿಬಾಲ್ ರೋಮನರನ್ನು ತನ್ನನ್ನು ಬೆನ್ನಟ್ಟುತ್ತಿರಲಿಲ್ಲವೆಂದು ತಿಳಿದ ಕೂಡಲೇ ದಕ್ಷಿಣಕ್ಕೆ ಹಿಂತಿರುಗಿ ಆಲ್ಫ್ಸ್ ಪರ್ವತದ ಜೆಸೆವ್ರೆ ಕಣಿವೆಯಿಂದ ಇಟಲಿಗೆ ಇಳಿದು ಸುಸಾ ಕಂದರಕ್ಕೆ ಹೋದ. ರೋಮನರನ್ನು ಜಯಿಸಲು ಪೋ ನದಿಯ ಕಡೆ ಬಲು ವೇಗದಿಂದ ಹೊರಟು ಸಿಪಿಯೋ ಅಲ್ಲಿಗೆ ಹೋಗುವುದಕ್ಕೆ ಮೊದಲೇ ಅಲ್ಲಿ ತಲುಪಿದ. ಅವನ ಯುದ್ಧಚಾತುರ್ಯ ಎಷ್ಟೆಂದರೆ ಈ ಮುನ್ನೋಟವನ್ನು ರೋಮನರು ನಿರೀಕ್ಷಿಸಿಯೇ ಇರಲಿಲ್ಲ. ಅಲ್ಲಿ ನಡೆದ ಟೆಸಿನೋ ಯುದ್ಧದಲ್ಲಿ ಹ್ಯಾನಿಬಾಲ್ ವಿಜಯವೀರನಾದ. ಪೋ ನದಿಯನ್ನು ಇನ್ನೂ ಮೇಲೆ ದಾಟಿ ಟ್ರಬಿಯಾ ನದಿಯ ಎಡದಂಡೆಯಲ್ಲಿ ಠಾಣ್ಯ ಹೂಡಿದ. ನಾಲ್ಕು ರೋಮನ್ ಸೇನೆಗಳು ನದಿಯನ್ನು ದಾಟಿ ಹ್ಯಾನಿಬಾಲನನ್ನು ಮುತ್ತಿದವು. ಅವನು ಪರಮಕೌಶಲದಿಂದ ಟ್ರೆಬಿಯಾ ಯುದ್ಧದಲ್ಲಿ ಗೆದ್ದ. ರೋಮನರು ಇಡೀ ಉತ್ತರ ಇಟಲಿಯನ್ನು ಕೈಬಿಟ್ಟರು.

ಹ್ಯಾನಿಬಾಲ್ ರೋಮನರ ರಕ್ಷಣಾಸೈನ್ಯದ ಎಚ್ಚರಿಕೆಯನ್ನು ತಪ್ಪಿಸಿಕೊಂಡು ಆಪಿನೈನ ಪರ್ವತವನ್ನು ದಾಟಿ ಎಟ್ರೂರಿಯಾವನ್ನು ಧ್ವಂಸಗೊಳಿಸಿದ. ಕಾನ್ಸಲ್ ಸರ್ವಿಯಸನ ಸೇನೆಯನ್ನು ಏಕಾಏಕಿ ಅನಿರೀಕ್ಷಿತವಾಗಿ ಮುತ್ತಿ ನಾಶಮಾಡಿದ. ಏಡ್ರಿಯಾಟಿಕಿನ ಉದ್ದಕ್ಕೆ ಆಪ್ಯೂಲಿಯಾ ವರೆಗೂ ಕೊಳ್ಳೆ ಮಾಡಿ ಕ್ಯಾಪೇನಿಯಾಕ್ಕೆ ಹಾಯ್ದು ಫಲವತ್ತಾದ ಪ್ರಾಂತವನ್ನು ನಿರ್ನಾಮ ಮಾಡಿದ. ತನ್ನನ್ನು ಹಿಡಿದುಕೊಳ್ಳಲು ಹೊಂಚುಹಾಕಿಕೊಂಡಿದ್ದ ಭಾರಿ ರೋಮನ್ ಸೈನ್ಯಗಳನ್ನು ಅದ್ಭುತ ಸೈನ್ಯವ್ಯೂಹ, ಯುಕ್ತಿಗಳಿಂದ ಸದೆಬಡಿದು ಪಾರಾದ. ಏಕಾಏಕಿ ದಕ್ಷಿಣಕ್ಕೆ ಹೊರಟು ಕ್ಯಾನೀ ಎಂಬ ರೋಮನ್ ಕೋಟೆಯನ್ನು ಆಕ್ರಮಿಸಿ, ಅಲ್ಲಿದ್ದ ದವಸ ಧಾನ್ಯಗಳನ್ನು ತನ್ನ ಸೈನ್ಯಕ್ಕೆ ಬಳಸಿದ. ಅಲ್ಲಿಂದ ಆಫಿಡಸ್ ನದಿಯ ಬಳಿಗೆ ಹೋದ. ರೋಮನರ ಬಹು ಭಾರಿ ಸೈನ್ಯಗಳೆರಡು ಅಲ್ಲಿಗೆ ಹೋದವು. ಹ್ಯಾನಿಬಾಲ್ ಕಾಲ್ಬಲವನ್ನು ಮಧ್ಯದಲ್ಲೂ ಅಶ್ವಬಲವನ್ನು ಎರಡು ಪಾಶ್ರ್ವಗಳಲ್ಲೂ ಇಟ್ಟ ಮತ್ತೆರಡು ಮಗ್ಗಲುಗಳಲ್ಲೂ ಲಿಬಿಯನ್ ಪದಾತಿಗಳನ್ನಿಟ್ಟು ಅವರು ಯುದ್ಧಮಾಡದೆ ಸುಮ್ಮನಿರಬೇಕೆಂದು ತಿಳಿಸಿದ. ರೋಮನರು ಶತ್ರುಸೈನ್ಯದ ಮಧ್ಯಕ್ಕೆ ನುಗ್ಗಿ ಅದು ಹಿಂದಕ್ಕೆ ಸರಿಯುವಂತೆ ಮಾಡಿದರು. ಆಗ ಎರಡು ಮಗ್ಗಲುಗಳಲ್ಲೂ ಸುಮ್ಮನೆ ನಿಂತಿದ್ದ ಲಿಬಿಯನ್ ಪದಾತಿಗಳು ರೋಮನರನ್ನು ಸುತ್ತುವರಿದರು. ಹ್ಯಾನಿಬಾಲನ ಇನ್ನೊಂದು ಅಶ್ವದಳ ಹಿಂದಿನಿಂದ ಬಂದು ವೃತ್ತವನ್ನು ಪೂರ್ತಿಮಾಡಿತು. ರೋಮನ್ ಸೈನ್ಯಗಳು ನಾಶವಾದವು. ಹ್ಯಾನಿಬಾಲನ ಈ ಯುದ್ದವ್ಯೂಹ ಅತ್ಯಾಶ್ಚರ್ಯಕರವಾದದ್ದು ; ಇತಿಹಾಸ ಪ್ರಸಿದ್ದವಾದದ್ದು. ಇದಾದಬಳಿಕ ಅವನು ಅನೇಕ ರೋಮನ್ ಪ್ರಾಂತಗಳನ್ನು ಶ್ರೇಣಿಪರಂಪರೆಯಲ್ಲಿ ಜಯಿಸಿದ.

ಜೂಲಿಯಸ್ ಸೀಸರ್: ಏಷ್ಯದಲ್ಲಿ ರೋಮಿಗೆ ವಿರುದ್ಧವಾಗಿದ್ದವರನ್ನು ಅಡಗಿಸಿದ (ಕ್ರಿ.ಪೂ. 81). ಜರ್ಮನರು ಗಾಲನ್ನು ಆಕ್ರಮಿಸಿದಾಗ ಅವರ ಮೇಲೆ ದಂಡೆಯಾತ್ರೆ ಮಾಡಿದ. 368,000 ಹೆಲ್‍ವೆಟ್ಟಿ ಜನಾಂಗದವರು ಸ್ವಿಟ್ಜೆರ್ಲೆಂಡಿನಿಂದ ಅಟ್ಲಾಂಟಿಕ್ ಸಾಗರದ ಕರಾವಳಿಗೆ ಹೋಗಿ ನೆಲೆಸಲೋಸ್ಕರ ರೋಮನ್ ರಾಜ್ಯಮಾರ್ಗವಾಗಿ ಪಯಣಿಸಲು ಯತ್ನಿಸಿದಾಗ ಅವರ ಮುತ್ತಿಗೆಯನ್ನು ತಪ್ಪಿಸಲು ಸೀಸóರ್ ಸಣ್ಣ ಸೈನ್ಯದೊಡನೆ ಜೀನಿವಾಕ್ಕೆ ಹೋಗಿ ರ್ಹೋ ನದಿಯ ಮೇಲಿನ ಸೇತುವೆಯನ್ನು ನಾಶಮಾಡಿ ಎಡದಂಡೆಯನ್ನು ಭದ್ರಪಡಿಸಿದ. ಶತ್ರುಗಳು ಬಲದಂಡೆಯ ಮಾರ್ಗವಾಗಿ ಹೋಗುವಂತೆ ಮಾಡಿದ. ಇಟಲಿಗೆ ಮಿಂಚಿನ ವೇಗದಲ್ಲಿ ಹೋಗಿ, ಹೆಚ್ಚು ಸೈನ್ಯವನ್ನು ತೆಗೆದುಕೊಂಡು ಆಲ್ಫ್ಸ್ ಪರ್ವತವನ್ನು ದಾಟಿಲಿಯಾನ್ಸ್ ಬಳಿ ಹೋದಾಗ ಹೆಲ್ವೆಟ್ಟಿಯವರಲ್ಲಿ ಮುಕ್ಕಾಲು ಪಾಲು ಸ್ವೋನ್ ನದಿಯನ್ನು ದಾಟಿ ಪಶ್ಚಿಮದ ಕಡೆ ಹೋಗುತ್ತಿತ್ತು. ಸೀಸóರ್ ಅವರ ಹಿಂಭಾಗದವರನ್ನು ನಾಶಮಾಡಿ, ತನ್ನ ಸೈನ್ಯ 24 ಘಂಟೆಗಳಲ್ಲಿ ನದಿಯನ್ನು ದಾಟುವಂತೆ ಮಾಡಿ ಶತ್ರುಗಳನ್ನು ಬಿಬ್ರಾಕ್ಟದಲ್ಲಿ ಸೋಲಿಸಿ ಓಡಿಸಿದ. ಜರ್ಮನರು ಹಿಂಡುಹಿಂಡಾಗಿ ರ್ಹೈನ್ ನದಿಯನ್ನು ದಾಟುತ್ತಿದ್ದಾಗ ಸೀಸóರ್ ಬಲು ತ್ವರೆಯಿಂದ ಮುನ್ನಡೆದು ಜರ್ಮನರನ್ನು ಸೋಲಿಸಿದ. ರೋಮ್‍ಗೆ ವಿರುದ್ಧವಾಗಿ ಬರುವವರಿದ್ದ ನಾನಾ ಬುಡಕಟ್ಟಿನವರ ದೇಶಗಳಿಗೆ ನುಗ್ಗಿ ಅವರನ್ನು ಸೋಲಿಸಿ ಅನೇಕ ಮಂದಿಗಳನ್ನು ಗುಲಾಮರಾಗಿ ಮಾರಿದ. ಇಡೀ ಗಾಲ್ ರೋಮನರ ಅಧಿಪತ್ಯಕ್ಕೊಳಗಾಯಿತು. ಬ್ರಿಟ್ಟಾನಿಗೆ ಮುತ್ತಿಗೆಹಾಕಿ ಶತ್ರುಗಳ ಪ್ರಬಲ ನೌಕಾದಳವನ್ನು ನಾಶಮಾಡಿ ಬಲುಬೇಗ ತಾನೇ ನೌಕೆಗಳನ್ನು ತಯಾರಿಸಿದ. ರ್ಹೈನ್ ನದಿಯನ್ನು ದಾಟಿ ಫ್ಲಾನ್‍ಡರ್ಸನ್ನು ಮುತ್ತಿದ. ಜರ್ಮನ್ ಬುಡಕಟ್ಟಿನವರನ್ನು ಸೋಲಿಸಿ ರ್ಹೈನ್ ನದಿಯ ಮೇಲೆ ಪ್ರಸಿದ್ಧವಾದ ಸೇತುವೆಯನ್ನು ಹತ್ತು ದಿವಸಗಳಲ್ಲಿ ನಿರ್ಮಿಸಿ, ಎರಡು ಲೀಜûನುಗಳನ್ನು ಮಾತ್ರ ತೆಗೆದುಕೊಂಡು ಬ್ರಿಟನಿಗೆ ಹೋದ. ಈಜಿಪ್ಟ್ ದಂಡೆಯಾತ್ರೆಯಲ್ಲಿ ತನ್ನ ಶತ್ರು ಪಾಂಪೆಯನ್ನು ಈಜಿಪ್ಟಿಗೆ ಅಟ್ಟಿಕೊಂಡು ಹೋದ. ಈಜಿಪ್ಟನ್ನು ಜಯಿಸಿ ಅಲೆಗ್ಸಾಂಡ್ರಿಯಕ್ಕೆ ಹೋದ. ಆಫ್ರಿಕಕ್ಕೆ ಹೋಗಿ ಸಿಪಿಯೋನ ಭಾರಿ ಸೈನ್ಯವನ್ನು ಸೋಲಿಸಿದ. ಸ್ಪೇನಿಗೆ ಹೋಗಿ ಪಾಂಪೆಯ ಮಕ್ಕಳನ್ನು ಅಡಗಿಸಿದ.

ಚಂಗೇಸ್ ಖಾನ್ : ಲಗಾಮಿಲ್ಲದೆ ನಾಗಾಲೋಟದಲ್ಲಿ ಕುದುರೆಸವಾರಿ ಮಾಡುವಷ್ಟು ಪ್ರವೀಣನಾಗಿದ್ದ. ರಾವುತರೊಡನೆ ದಂಡೆಯಾತ್ರೆ ಹೊರಟು ಸಾವಿರಾರು ಮೈಲು ದೂರ ಬಿರುಗಾಳಿಯಂತೆ ಮುನ್ನುಗ್ಗುತ್ತಿದ್ದಾಗ ಅವನನ್ನು ಹಿಮ್ಮೆಟ್ಟಿಸಲು ಯಾವ ಶತ್ರುಸೈನ್ಯಕ್ಕೂ ಸಾಧ್ಯವಾಗಿರಲಿಲ್ಲ. ಅವನ ಹೆಸರು ಶತ್ರುಗಳನ್ನು ನಡುಗಿಸಿತು. ಯಾವ ಯುದ್ಧದಲ್ಲೂ ಸೋಲದೆ ದಾರಿಯಲ್ಲಿ ಸಿಕ್ಕಿದ ಪ್ರಾಂತಗಳನ್ನೆಲ್ಲ ಆಕ್ರಮಿಸಿಕೊಂಡು ಶಾಂತಸಾಗರದಿಂದ ಟೈಗ್ರಿಸ್ ನದಿಯವರೆಗೂ ಮಹಾಸಾಮ್ರಾಜ್ಯವನ್ನು ಸ್ಥಾಪಿಸಿದ. ಬಹುಕಠಿಣ ಚಳಿ, ಸೆಕೆಗಳಲ್ಲಿ ಅಪಾರ ಚಟುವಟಿಕೆ, ಕುದುರೆಸವಾರಿಯಲ್ಲಿ ಅಗ್ರಗಣ್ಯ ಪರಿಣತಿ, ಯುಕ್ತಿ, ಅಪೂರ್ವ ಕ್ರಿಯಾಶಕ್ತಿ ಇತ್ಯಾದಿಗುಣಗಳಿಂದ ಮುಂಗೋಲಿಯಾದ ಇತರ ಪಂಗಡಗಳ ನಾಯಕರೂ ಅವನ ನಾಯಕತ್ವಕ್ಕೆ ಸೇರಿಕೊಂಡರು. ಇಡೀ ಮುಂಗೋಲಿಯದ ಮೇಲೆ ಪ್ರಭುತ್ವ ಸ್ಥಾಪಿಸಿ ಎಲ್ಲ ಪಂಗಡದವರನ್ನೂ ಅದ್ವಿತೀಯ ಸಾಮಥ್ರ್ಯದಿಂದ ಒಗ್ಗೂಡಿಸಿದ. ಟಾರ್ಟರರನ್ನು ಜಯಿಸಿ ತನ್ನ ಬುಡಕ್ಕೆ ಸೇರಿಸಿ ಪಳಗಿಸಿದ. ಕೆರೇಯ್ಟ್‍ರನ್ನು ಸೋಲಿಸಿ ಅವರ ಪಟ್ಟಣಗಳನ್ನು ಹಿಡಿದುಕೊಂಡು ಕರಾಕೊರಮನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಅನಾಗರಿಕ, ಒರಟು ಜನರನ್ನು ಕಠಿಣ ಶಿಕ್ಷಣ, ಶಿಸ್ತು ಕಟ್ಟುಪಾಡುಗಳಿಂದ ಸಮರ್ಥ ಸೈನಿಕರಾಗಿ ಮಾಡಿದ. ಅವರೆಲ್ಲರಿಗೂ ಸರ್ವಶ್ರೇಷ್ಠ ದಂಡನಾಯಕನಾದ.

ಕ್ರಿ. ಶ. 1213ರಿಂದ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲೇ ನಿರತನಾಗಿದ್ದ. ಎಲ್ಲಿ ಹೋದರೂ ತನ್ನ ಸೈನ್ಯಕ್ಕೆ ಅಜೇಯವಾಗಿರುವಂತೆ ಸರ್ವಪ್ರಯತ್ನಗಳನ್ನೂ ಮಾಡಿದ. ಎರಡು ಲಕ್ಷ ಕುದುರೆ ಸವಾರರೊಂದಿಗೆ ಚೀನ ದೇಶವನ್ನು ಮುತ್ತಿ ಪೀಕಿಂಗ್ ಪಟ್ಟಣವನ್ನು ಆಕ್ರಮಿಸಿದ. ಉತ್ತರ ಚೀನ ಮತ್ತು ಮುಂಚೂರಿಯಗಳಲ್ಲಿ ಕಿನ್ ಸಾಮ್ರಾಜ್ಯವನ್ನು ಕೊನೆಗಾಣಿಸಿ ಉತ್ತರ ಚೀನವನ್ನೆಲ್ಲ ಆಕ್ರಮಿಸಿದ. ಚೀನೀಯರ ಸಮರತಂತ್ರ, ಆಡಳಿತ, ಕ್ರಮಗಳನ್ನು ಅನುಸರಿಸಿದ. ಕೋರಿಯಾವನ್ನು ನಿಗ್ರಹಿಸಿದ. ಕ್ಯಾರಜಮ್ ಚಕ್ರಾಧಿಪತ್ಯವನ್ನೂ ಬೊಖಾರದಲ್ಲಿದ್ದ ಅರಮನೆ ಮತ್ತು ಭವ್ಯ ಕಟ್ಟಡಗಳನ್ನೂ ನಿರ್ನಾಮ ಮಾಡಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರ ಕೊಲೆ ಮಾಡಿದ. ರಾಜಧಾನಿಯಾದ ಸಾಮರ್‍ಕ್ವಾಡಿನಲ್ಲಿದ್ದ ಹತ್ತು ಲಕ್ಷ ಜನರ ಪೈಕಿ 50,000 ಮಂದಿ ಮಾತ್ರ ಉಳಿದರು. ಹೆರಾತ್, ಬಾಲ್ಕ್, ಮತ್ತು ಇತರ ಅನೇಕ ಪಟ್ಟಣಗಳನ್ನು ಧ್ವಂಸಮಾಡಿದ. ಮಧ್ಯಏಷ್ಯದ ಮರಳುಕಾಡು, ಪರ್ವತಗಳಲ್ಲಿ ಬಲು ಪ್ರಯಾಸದಿಂದ ಪ್ರಯಾಣ ಮಾಡಿ ತುರ್ಕಿಸ್ತಾನವನ್ನು ಆಕ್ರಮಿಸಿದ. ಭಾರತವನ್ನು ಜಯಿಸಬೇಕೆಂದು ಹಾರೈಸಿ ಸಿಂಧೂನದಿಯವರೆಗೂ ಹೋದ. ಮಧ್ಯ ಏಷ್ಯಾದಲ್ಲಿ ಅವನನ್ನು ಎದುರಿಸಿದ ಸುಲ್ತಾನರ ದೇಶದಲ್ಲೆಲ್ಲ ಹಾವಳಿಮಾಡಿ ಲಕ್ಷಾಂತರ ಜನರನ್ನು ಕೊಲೆಮಾಡಿದ. ಆಫ್‍ಘಾನಿಸ್ತಾನದಲ್ಲಿ ಲೂಟಿಮಾಡಿ ರಾಜಕುಮಾರ ಜಲಾಲುದ್ದೀನನನ್ನು ಸೋಲಿಸಿ ಅವನ ಬೆನ್ನಟ್ಟಿ ಹೋದ. ರಾಜಕುಮಾರ ಬೆಟ್ಟದ ತುತ್ತತುದಿಗೇರಿ ಪ್ರಪಾತದಲ್ಲಿ ಭೋರ್ಗರೆಯುತ್ತಿದ್ದ ಸಿಂಧೂ ನದಿಗೆ ತನ್ನ ವಿಶ್ವಾಸಿ ಕುದುರೆಯೊಂದಿಗೆ ಧುಮುಕಿ ಆಚೆ ದಡಕ್ಕೆ ಪಾರಾದ. ಚಂಗೇಸ್‍ಖಾನ್ ಇರಾನ್, ಏಷ್ಯ, ಮೈನರುಗಳಲ್ಲಿ ಲೂಟಿ ಕೊಲೆಗಳನ್ನು ಮಾಡಿ ಕ್ಯಾಸ್ಪಿಯನ್ ಸಮುದ್ರದ ಬಳಿ ಪ್ರಬಲರಾಗಿದ್ದ ಖೃರಾಜಮ್ ಷಾಗಳನ್ನು ಸೋಲಿಸಿದ. ಅರ್ಧ ಯುರೋಪನ್ನು ಹಿಡಿದು ರಷ್ಯದ ಡಾನ್ ನದಿಯ ವರೆಗೂ ಮುಂದುವರಿದು ರಷ್ಯದ ಸೇನೆಯನ್ನು ಸೋಲಿಸಿ ಡ್ನೀಪರ್ ನದಿಯ ಕಡೆಗೆ ನುಗ್ಗಿದ. ಕೀವ್ ಪಟ್ಟಣದ ಗ್ರ್ಯಾಂಡ್ ಡ್ಯೂಕನನ್ನು ಸೆರೆಹಿಡಿದ. ಕಾಕಸ್ ಪರ್ವತದಲ್ಲಿ ನೆಲೆಸಿದ್ದ ಮುಸ್ಲಿಮರು ಮತ್ತು ಕ್ರಿಶ್ಚಿಯನರನ್ನೂ ದಕ್ಷಿಣ ರಷ್ಯದ ಸ್ಲಾವ್ ಜನರನ್ನೂ ಕೊಲೆಮಾಡಿದ. ಒಂದೊಂದು ಪಟ್ಟಣವನ್ನೂ ಜಯಿಸಿದ ಮೇಲೆ ಅದರ ಜನರನ್ನು ಮುಂದಿನ ಯುದ್ಧದಲ್ಲಿ ತನ್ನ ಸೇನೆಯ ಮುಂಭಾಗದಲ್ಲಿ ನಡೆಸಿಕೊಂಡು ಹೋಗಿ ಅವರನ್ನು ಸೇನೆಗೆ ರಕ್ಷಾಕವಚವಾಗಿ ಉಪಯೋಗಿಸುತ್ತಿದ್ದ. ಅವನ ಸೈನ್ಯಗಳು ಜ್ವಾಲಾಮುಖಿಯ ಸ್ಪೋಟಕದಂತೆ ಭೂಕಂಪನದ ರಭಸದಲ್ಲಿ ಎದುರಿಸಿದವರನ್ನೆಲ್ಲ ಆಹುತಿ ತೆಗೆದುಕೊಳ್ಳುತ್ತಿದ್ದವು.

ಡ್ಯೂಕ್ ಆಫ್ ಮಾರ್ಲ್‍ಬರೊ : ಸೆಡ್ಬ್‍ಮೂರ್ ಯುದ್ಧದಲ್ಲಿ (1685) ಬಹಳ ಪರಾಕ್ರಮವನ್ನು ತೋರಿಸಿದ. ನೆದರ್ಲೆಂಡ್ಸಿನಲ್ಲೂ ಐರ್ಲೆಂಡಿನಲ್ಲೂ ದಂಡೆಯಾತ್ರೆಗಳನ್ನು ಮಾಡಿ ಜಯಶಾಲಿಯಾದ. 1702 ರಲ್ಲಿ ಇಂಗ್ಲೆಂಡ್, ಹಾಲೆಂಡ್, ಮತ್ತು ಆಸ್ಟ್ರಿಯಾಗಳ ಸಂಯುಕ್ತ ಸೇನೆಯ ಪ್ರಧಾನ ದಳಪತಿಯಾಗಿ ಫ್ರಾನ್ಸಿನ ಅನೇಕ ಕೋಟೆಗಳನ್ನು ಹಿಡಿದ. ಬಾನ್ ಮುತ್ತಿಗೆಯಲ್ಲಿ ಗೆದ್ದ. ಫ್ರೆಂಚರು ಬವೇರಿಯದ ಜೊತೆ ಸೇರಿ ವಿಯನ್ನಾವನ್ನು ಹಿಡಿಯಲು ಡಾನ್ಯೂಬ್ ನದಿಯ ಪಕ್ಕದಲ್ಲಿ ಹೋಗುತ್ತಿದ್ದಾಗ ಮಾರ್ಲ್‍ಬರೋ ಯುದ್ದತಂತ್ರದಿಂದ ತಾನು ಬೇರೆ ಕಡೆ ಹೋಗುವಂತೆ ನಟಿಸಿ ತನ್ನ ಸೈನ್ಯವನ್ನು ಬವೇರಿಯಕ್ಕೆ ಒಯ್ದು. ಡಾನ್ಯೂಬ್ ನದಿಯ ಬಳಿ ನಡೆದ ಬ್ಲೆನ್‍ಹಿಮ್ ಯುದ್ಧದಲ್ಲಿ ಫ್ರೆಂಚರನ್ನು ಸೋಲಿಸಿದ. 30,000 ಮಂದಿ ಫ್ರೆಂಚರೂ ಬವೇರಿಯನ್ನರೂ ಮಡಿದರು ಅಥವಾ ಗಾಯಗೊಂಡರು. 11,000 ಮಂದಿ ಫ್ರೆಂಚರು ಶರಣಾಗತರಾದರು. ಮಾರ್ಲ್‍ಬರೋ ಬವೇರಿಯವನ್ನು ಹಿಡಿದುಕೊಂಡ. ರಾಮಲೀಸ್ ಯುದ್ಧದಲ್ಲಿ (1706) ಫ್ರೆಂಚರನ್ನು ಸೋಲಿಸಿದ. ಆಂಟ್‍ವರ್ಪ್, ಆಸ್ಟೆನ್‍ಡ್, ಮೆನಿನುಗಳನ್ನು ಹಿಡಿದ. 1708 ರಲ್ಲಿ ಫ್ರೆಂಚರನ್ನು ಸೋಲಿಸಿ ಪ್ಯಾರಿಸಿಗೆ ಹೋಗುವುದರಲ್ಲಿದ್ದ ಲಿಲ್ಲೆ ಪಟ್ಟಣವನ್ನು ಹಿಡಿದು ಟೂರ್ನೆ, ಮಾಲ್‍ಪ್ಲಾಕ್ವೆಟುಗಳನ್ನು ವಶಪಡಿಸಿಕೊಂಡ. ಈ ದಂಡೆಯಾತ್ರೆ ಯುಟ್ರೆಕ್ಟ್ ಒಪ್ಪಂದದ ವರೆಗೂ ಕೆಲವು ವರ್ಷಗಳ ಕಾಲ ನಡೆಯಿತು.

ನೆಪೋಲಿಯನ್ ಬೋನಾಪಾರ್ಟ್ : ಇಟಲಿಯ ದಂಡಯಾತ್ರೆಯಲ್ಲಿ (1796) ಪ್ಯಾರಿಸಿನಿಂದ ಹೊರಟು ಇಟಲಿಯನ್ನು ಪ್ರವೇಶಿಸಿದ. ಅವನು ಲೋಡಿ ಸೇತುವೆಯನ್ನು ದಾಟಿದ್ದು ಪ್ರಚಂಡ ಸಾಹಸ. ಒಂದೇ ದಿವಸದಲ್ಲಿ ಅವನ ಹೆಸರು ಯೂರೋಪಿನಲ್ಲೆಲ್ಲ ಪ್ರಖ್ಯಾತವಾಯಿತು. ಮಿಲಾನ್ ಪಟ್ಟಣವನ್ನು ವಿಜಯವೀರನಂತೆ ಪ್ರವೇಶಿಸಿದ. ಇಟಲಿಯ ಬಹುಭಾಗವನ್ನು ಫ್ರೆಂಚ್ ಆಡಳಿತಕ್ಕೊಳಪಡಿಸಿದ. ಇಂಗ್ಲೆಂಡಿನ ಪ್ರಭಾವವನ್ನು ಮುರಿಯಲು ಭಾರತಕ್ಕೆ ಮಾರ್ಗವನ್ನು ಸ್ಥಾಪಿಸಲೂ ಈಜಿಪ್ಟ್ ದಂಡಯಾತ್ರೆಯನ್ನು ಯೋಜಿಸಿದ. 1798ರಲ್ಲಿ ಅಲೆಗ್ಸಾಂಡ್ರಿಯಾಕ್ಕೆ ದಂಡಿನೊಡನೆ ಹೋಗಿ ಕೈರೊವನ್ನು ಸ್ವಾಧೀನಪಡಿಸಿಕೊಂಡ. ಮೂರು ವಾರಗಳಲ್ಲಿ ಈಜಿಪ್ಟನ್ನು ಜಯಿಸಿದ. ಸಿರಿಯಾವನ್ನು ಗೆದ್ದ. ಆಲ್ಫ್ಸ್ ಪರ್ವತವನ್ನು ಸೇಂಟ್ ಬರ್ನಾರ್ಡ್ ಕಣಿವೆಯ ಮೂಲಕ ದಾಟಿ ಆಸ್ಟ್ರಿಯ ಒಪ್ಪಂದ ಮಾಡಿಕೊಳ್ಳುವಂತೆ ನಿರ್ಬಂಧಿಸಿದ. 1800ರ ಮೆರೊಂಗೋ ಗೆಲುವಿನಲ್ಲಿ ಮತ್ತೊಮ್ಮೆ ಇಟಲಿಯನ್ನು ವಶಪಡಿಸಿಕೊಂಡ. ತನ್ನ ತಮ್ಮ ಜೋಸೆಫ್‍ನನ್ನು ನೇಪಲ್ಸಿನ ರಾಜನಾಗಿ ಮಾಡಿದ. ಆಸ್ಟ್ರಿಯಾ ದಂಡಯಾತ್ರೆಯಲ್ಲಿ ಉಲ್ಮ್ ಮತ್ತು ಆಸ್ಟರ್‍ಲಿಟ್ಸ್ ಯುದ್ಧಗಳಲ್ಲಿ ಆಸ್ಟ್ರಿಯದವರನ್ನು ಸಂಪೂರ್ಣವಾಗಿ ಸೋಲಿಸಿದ. ರಷ್ಯನ್ನರನ್ನೂ ಸೋಲಿಸಿದ. ಅವನ ತಮ್ಮ ಲೂಯಿಯನ್ನು ಹಾಲೆಂಡಿನ ರಾಜನಾಗಿ ಮಾಡಿದ. ಯೂರೋಪಿನಲ್ಲಿ ಸರ್ವಾಧಿಕಾರಿಯಾಗಲು ಹಂಚಿಕೆ ಹೂಡಿದ. ಇಂಗ್ಲೆಂಡಿಗೆ ಮುತ್ತಿಗೆಹಾಕಲು ಟ್ರಫಾಲ್ಗರ್ ದಂಡಯಾತ್ರೆಯಲ್ಲಿ (1805) ನೌಕಾಪಡೆಯನ್ನು ಕೊಂಡೊಯ್ದ; ಆದರೆ ಬ್ರಿಟಿಷ್ ನೌಕಾಸೇನಾಪತಿ ನೆಲ್ಸನ್ನನಿಂದ ಟ್ರಫಾಲ್ಗರಿನಲ್ಲಿ ಸೋಲಿಸಲ್ಪಟ್ಟ.

ಪ್ರಷ್ಯನ್ ದಂಡಯಾತ್ರೆಯಲ್ಲಿ ಮಿಂಚಿನ ವೇಗದಲ್ಲಿ ನಡೆದು ಫ್ರೆಡರಿಕ್ ಮಹಾಶಯನ ಕಾಲದಲ್ಲಿ ಬಹು ಪ್ರಸಿದ್ಧವಾಗಿದ್ದ ಪ್ರಷ್ಯನ್ ಸೇನೆಯನ್ನು ಜೆನಾದಲ್ಲಿ ಸೋಲಿಸಿದ (1806). ಕೆಲವು ವಾರಗಳಲ್ಲಿ ಬಹುಭಾಗವನ್ನು ಜಯಿಸಿದ. ಪೋಲೆಂಡ್ ದಂಡಯಾತ್ರೆಯಲ್ಲಿಯೂ ಜಯಶೀಲನಾದ. 1809 ರಲ್ಲಿ ಆಸ್ಟ್ರಿಯದಲ್ಲಿ ಮೂರು ನಾಲ್ಕು ಕಡೆ ನಡೆದ ಯುದ್ಧಗಳಲ್ಲಿ ಗೆಲವು ಪಡೆದ. ಇಪ್ಪತ್ತು ಜನಾಂಗಗಳಿಂದ ಕೂಡಿಸಿದ ಬಹು ಭಾರಿ ಸೈನ್ಯವನ್ನು ರಷ್ಯನ್ ದಂಡಯಾತ್ರೆಯಲ್ಲಿ (1812) ರಷ್ಯಕ್ಕೆ ಒಯ್ದ. ರಷ್ಯನ್ನರು ಮಾಸ್ಕೊಗೆ ಬೆಂಕಿ ಹಚ್ಚಿದರು. ಅವನ ಸೇನೆ ಮಾಸ್ಕೊದಿಂದ ಹಿಮ್ಮೆಟ್ಟಿ ಶರತ್ಕಾಲದ ಚಳಿ, ಹಿಮಗಳಲ್ಲಿ ವಿನಾಶಕ್ಕೆ ಗುರಿಯಾಯಿತು. ಬ್ರಿಟಿಷ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಸಂಯೋಗದ ಸೈನ್ಯಗಳಿಗೂ ಫ್ರೆಂಚ್ ಸೈನ್ಯಕ್ಕೂ ನಡೆದ ಪೆನಿನ್‍ಸುಲಾರ್ ಯುದ್ಧ (1808-1814) ಅನೇಕ ದಂಡಯಾತ್ರೆಗಳನ್ನು ಒಳಗೊಂಡಿತ್ತು - ಪೋರ್ಚುಗಲ್ ದಂಡಯಾತ್ರೆ, ಸರ್ ಜಾನ್ ಮೂರನ ದಂಡಯಾತ್ರೆ, ಸ್ಪೇನಿನ ದಂಡಯಾತ್ರೆ, ಸರ್ ಆರ್ಥರ್ ವೆಲ್ಲೆಸ್ಲಿ ದಂಡಯಾತ್ರೆ ಇತ್ಯಾದಿ; ಅನೇಕ ಜನರಲ್‍ಗಳು ಬೇರೆ ಬೇರೆ ಸ್ಥಳಗಳಲ್ಲಿ ಯುದ್ಧಮಾಡಿದರು.

ಜರ್ಮನ್ನರ ವಿಮೋಚನ ಯುದ್ಧ ಮತ್ತು ಜನಾಂಗಗಳ ಕದನಗಳಲ್ಲಿ ನೆಪೋಲಿಯನ್ ಜಯಶೀಲನಾದ. ಅವನು ಡ್ರೆಸ್‍ಡನ್ ಪಟ್ಟಣಕ್ಕೆ ಮಾಡಿದ ಮುನ್ನಡೆ ಬಹು ಪ್ರಸಿದ್ಧವಾದದ್ದು. 1815 ರಲ್ಲಿ ಅವನು ಎಲ್ಬಾದಿಂದ ತಪ್ಪಿಸಿಕೊಂಡು ಪ್ಯಾರಿಸ್ಸಿಗೆ ಓಡಿಹೋಗಿ ಸೈನ್ಯವನ್ನು ರಚಿಸಿ ಪರಂಪರೆಯಲ್ಲಿ ಜಯಗಳನ್ನು ಗಳಿಸಿದ. ಕೊನೆಯದಾಗಿ ಅವನು ವಾಟರ್ಲೂ ದಂಡಯಾತ್ರೆಯಲ್ಲಿ (1815) ನಡೆದ ವಾಟರ್ಲೂ ಯುದ್ಧದಲ್ಲಿ ಡ್ಯೂಕ್ ಆಫ್ ವೆಲಿಂಗ್ಟನ್ನನಿಂದ ಸೋಲಿಸಲ್ಪಟ್ಟು ಪ್ಯಾರಿಸ್ಸಿಗೆ ಓಡಿಹೋದ. ಮಿತ್ರಸೈನ್ಯಗಳ ವಿರುದ್ಧ ಕಾದಾಡಲು ಸರಿಯಾದ ಫ್ರೆಂಚ್ ಸೈನ್ಯವಿಲ್ಲದೆ ಸಿಂಹಾಸನವನ್ನು ತ್ಯಾಗ ಮಾಡಿದ.

ಒಂದನೆಯ ಮಹಾಯುದ್ಧ (1914-18) : ಇದರಲ್ಲಿ ಅನೇಕ ದಂಡಯಾತ್ರೆಗಳಿದ್ದವು ; ಡಾರ್ಡನಲ್ಸ್ ದಂಡಯಾತ್ರೆ. ಸಾಲೋನಿಕಾ ದಂಡಯಾತ್ರೆ, ಜರ್ಮನ್ನರ ಜಲಾಂತರ್ಗಾಮಿ ದಂಡಯಾತ್ರೆ, ಪಶ್ಚಿಮ ಗಡಿಯ ದಂಡಯಾತ್ರೆ, ಫೆಸಿಫಿಕ್ ದಂಡಯಾತ್ರೆ, ಎಮ್‍ಡನ್ ಹಡಗಿನ ಸಾಹಸ ಕೃತ್ಯ ಇತ್ಯಾದಿ. ಅನೇಕ ಕಾಳಗಗಳು ನಡೆದವು; ಜರ್ಮನಿಯಿಂದ ಬೆಲ್ಜಿಯಮ್ ಮುತ್ತಿಗೆ, ಲೀಜ್ ಕೋಟೆಯ ಮುತ್ತಿಗೆ ಮತ್ತು ಆ ಪಟ್ಟಣದ ಆಕ್ರಮಣ, ಲೋರೇನಿನಲ್ಲಿ ಫ್ರೆಂಚರ ಯುದ್ಧ, ಪೂರ್ವಪ್ರಷ್ಯಾದ ಮುತ್ತಿಗೆ, ಸರ್ಬಿಯಾದಲ್ಲಿ ವಿಜಯ. ರುಮೇನಿಯದಲ್ಲಿ ಗೆಲವು, ಬಾಗ್‍ದಾದ್ ಮತ್ತು ಗೊರಿಜಿಯಾಗಳ ಸ್ವಾಧೀನತೆ, ಜೆರೂಸಲಮ್ಮಿನ ಸ್ವಾಧೀನತೆ, ವಾಯುಯುದ್ಧ, ಪೂರ್ವ ಆಫ್ರಿಕದಲ್ಲಿ ವಿಜಯ, ಬಲ್ಗೇರಿಯ, ತುರ್ಕಿ, ಆಸ್ಟಿಯಾಗಳ ಅಧಃಪತನ, ಜಟ್‍ಲೆಂಡ್ ಯುದ್ಧ, ಇತ್ಯಾದಿ.

ಎರಡನೆಯ ಮಹಾಯುದ್ಧ (1939-45) : ಇದರಲ್ಲೂ ಅನೇಕ ದಂಡಯಾತ್ರೆಗಳೂ ಯುದ್ಧಗಳೂ ನಡೆದವು ; ಪೋಲೆಂಡಿನ ದಂಡಯಾತ್ರೆ, ನಾರ್ವೆಯ ದಂಡಯಾತ್ರೆ, ಉತ್ತರ ಆಫ್ರಿಕದ ದಂಡಯಾತ್ರೆ, ಪೂರ್ವ ಆಫ್ರಿಕದ ದಂಡಯಾತ್ರೆ, ಬಾಲ್ಕನ್ ದಂಡಯಾತ್ರೆಗಳು, ಕ್ರೀಟ್ ದಂಡಯಾತ್ರೆ, ರಷ್ಯನ್ ದಂಡಯಾತ್ರೆ, ಜಪಾನಿನ ದಂಡಯಾತ್ರೆ ಇತ್ಯಾದಿ.

ಉಲ್ಲೇಖಗಳು[ಬದಲಾಯಿಸಿ]

  • Dupuy, T.N., Understanding war: History and Theory of Combat, Leo Cooper, London, 1992
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: