ವಿಷಯಕ್ಕೆ ಹೋಗು

ಗಣರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಣತಂತ್ರ ಇಂದ ಪುನರ್ನಿರ್ದೇಶಿತ)

ಗಣರಾಜ್ಯವು ಯಾವುದೇ ದೇಶದಲ್ಲಿ ಪ್ರಜೆಗಳನ್ನು ಆಳುವ ಸರಕಾರವನ್ನು ನಿರ್ಧರಿಸುವ ಶಕ್ತಿ ಅಂತಿಮವಾಗಿ ಅದೇ ಪ್ರಜೆಗಳ ಕೈಯಲ್ಲಿ ಇರುವಂತಹ ಸರಕಾರದ ವಿಧ. ಗಣರಾಜ್ಯಗಳ ಸರಕಾರಗಳ ಹಲವು ವಿಧದವುಗಳಾಗಿರಬಹುದು. ಆದರೆ ಎಲ್ಲಾ ಗಣರಾಜ್ಯಗಳಲ್ಲೂ ಪ್ರಮುಖವಾಗಿ ಚಕ್ರಾಧಿಪತಿ ಅಥವಾ ಆ ರೀತಿಯ ವಂಶಾರ್ಜಿತ ಪಟ್ಟವನ್ನು ಹೊಂದಿರುವವರು ಪಾತ್ರವಿಲ್ಲದಿರುವುದು ಗಣನೀಯ.

ವಿವರಣೆ

[ಬದಲಾಯಿಸಿ]

ಒಂದು ಜನಸಮೂಹದ (ಚುನಾಯಕ ಸಮುದಾಯ) ವಶದಲ್ಲಿ ಪರಮಾಧಿಕಾರವಿರುವ, ಅವರಿಂದ ಚುನಾಯಿತರಾಗಿ ಮತ್ತು ಅವರಿಗೆ ತಾತ್ತ್ವಿಕವಾಗಿಯಾದರೂ ಜವಾಬ್ದಾರರಾಗಿರುವಂಥ ಪ್ರತಿನಿಧಿಗಳು ಆ ಪರಮಾಧಿಕಾರವನ್ನು ಚಲಾಯಿಸುತ್ತಿರುವ, ಒಂದು ರಾಷ್ಟ್ರ; ಅಂಥ ರಾಷ್ಟ್ರದ ಸರ್ಕಾರ (ರಿಪಬ್ಲಿಕ್). ಸಂವೈಧಾನಿಕಾಗಿ ಬಹಳಮಟ್ಟಿಗೆ ಭಿನ್ನವಾದ ಹಲಬಗೆಯ ರಾಷ್ಟ್ರಗಳನ್ನು ಗಣರಾಜ್ಯವೆಂದು ಸಂಬೋಧಿಸುವ ವಾಡಿಕೆಯಿದೆ.

ಇತಿಹಾಸ

[ಬದಲಾಯಿಸಿ]
A map of the Roman Republic

ಪ್ರಾಚೀನ ರೋಮನ್ ಗಣರಾಜ್ಯವೆಂದು ಸಂಬೋಧಿಸುವ ವಾಡಿಕೆಯಿದೆ. ಪ್ರಾಚೀನ ರೋಮನ್ ಗಣರಾಜ್ಯ ಮೂಲತಃ ಒಂದು ಶ್ರೀಮಂತಪ್ರಭುತ್ವವಾಗಿತ್ತು (ಅರಿಸ್ಟಾಕ್ರಸಿ); ಇದು ಉತ್ತಮ ಕುಲಜ ವರ್ಗದ (ಪಟ್ರಿಷನ್ ಕ್ಲಾಸ್) ನಿಯಂತ್ರಣಕ್ಕೆ ಒಳಪಟ್ಟಿತ್ತು. ಪ್ರಾಚೀನ ಗ್ರೀಸಿನ ಮತ್ತು ಆಧುನಿಕ ಸ್ವಿಟ್ಜರ್ಲೆಂಡಿನ ಗಣರಾಜ್ಯಗಳು ರಾಜಕೀಯಾಧಿಕಾರ ಎಲ್ಲ ಪ್ರಜೆಗಳಲ್ಲೂ ನಿಹಿತವಾಗಿರುವಂಥ ಪ್ರಜಾಪ್ರಭುತ್ವಗಳಿಗೆ ಉದಾಹರಣೆಗಳು. ಪ್ರಾಚೀನ ಗ್ರೀಸಿನ ಪ್ರಜಾಪ್ರಭುತ್ವಗಳಲ್ಲಿ ಪ್ರಜೆತನವಿದ್ದದ್ದು ಆಯ್ದ ಕೆಲವೇ ಜನರ ವರ್ಗಕ್ಕೆ; ಸ್ವಿಟ್ಜರ್ಲೆಂಡಿನಲ್ಲಿ ಸ್ವತಂತ್ರವಾಗಿರುವ ಎಲ್ಲ ಜನರೂ ಪ್ರಜೆಗಳು. ಮಧ್ಯಯುಗದ ಇಟಾಲಿಯನ್ ಗಣರಾಜ್ಯಗಳು ಪರಿಮಿತವಾದ ಸ್ವಲ್ಪಜನಾಧಿಪತ್ಯಗಳು (ಆಲಿಗಾರ್ಕಿ). ಭಾರತ, ಫ್ರಾನ್ಸ್ ಮುಂತಾದ ಆಧುನಿಕ ಪ್ರಜಾಪ್ರಭುತ್ವಗಳು ಮೂಲಭೂತವಾಗಿ ಸ್ವತಂತ್ರ ಗಣರಾಜ್ಯಗಳು. ಯಾವ ವರ್ಗಕ್ಕೂ ವಿಶಿಷ್ಟವಾದ ರಾಜಕೀಯ ಹಕ್ಕುಗಳಿಲ್ಲದಂಥ, ಅಲ್ಲಿ ವಾಸವಾಗಿರುವ ಸರ್ವ ವಯಸ್ಕರಿಗೂ (ಅಥವಾಾ ಬಹುತೇಕ ಎಲ್ಲ ವಯಸ್ಕರಿಗೂ) ಸಂವಿಧಾನದ ನಿಬಂಧನೆಗಳಿಗೆ ಒಳಪಟ್ಟಂತೆ ಮತಾಧಿಕಾರವಿರುವಂಥ ಸ್ವತಂತ್ರ ಜನತಾ ಸರ್ಕಾರವನ್ನು ಇಂದು ಗಣರಾಜ್ಯವೆಂದು ಕರೆಯಲಾಗುತ್ತದೆ. ತಮ್ಮದು ವರ್ಗರಹಿತವಾದ, ಸರ್ವಜನರ ಸರ್ಕಾರವೆಂಬುದನ್ನು ಸುವ್ಯಕ್ತಗೊಳಿಸುವ ಸಲುವಾಗಿ ಕಮ್ಯೂನಿಸ್ಟ್ ರಾಷ್ಟ್ರಗಳು ತಮ್ಮನ್ನು ಜನತಾ ಗಣರಾಜ್ಯಗಳೆಂದು ಕರೆದುಕೊಳ್ಳುತ್ತವೆ. ಗ್ರೀಕ್ ತತ್ತ್ವಜ್ಞಾನಿ ಪ್ಲೇಟೊ ರಾಜ್ಯಶಾಸ್ತ್ರದ ಆದಿಗ್ರಂಥವೆನಿಸಿಕೊಂಡಿರುವ ತನ್ನ ಅತ್ಯುನ್ನತ ಗ್ರಂಥಕ್ಕೆ ರಿಪಬ್ಲಿಕ್ (ಗಣರಾಜ್ಯ) ಎಂಬ ಹೆಸರನ್ನಿಟ್ಟಿದ್ದಾನೆ.ಬ್ರಿಟನಿನಲ್ಲಿ ಆಲಿವರ್ ಕ್ರಾಮ್ವೆಲ್ ಅಧಿಕಾರಕ್ಕೆ ಬಂದಾಗ ಅದನ್ನು ಕಾಮನ್ ವೆಲ್ತ್ (ಸಮಾನ ಕಲ್ಯಾಣ) ಎಂದು ಕರೆದ. ಇದು ಇಂಗ್ಲೀಷ್ ವಿಶ್ವದ ಪ್ರಥಮ ಗಣರಾಜ್ಯ. ಮುಖ್ಯವಾಗಿ ಜನತಾಹಿತ, ಸಮಾನ ಕಲ್ಯಾಣ ಮುಂತಾದ ತತ್ತ್ವಗಳಿಗೆ ಪ್ರಾಮುಖ್ಯ ಕೊಡುವುದೇ ಇಂಥ ಸರ್ಕಾರ ಪದ್ಧತಿಯ ಮುಖ್ಯೋದ್ದೇಶ. ಎಟ್ರಸ್ಕನ್ ದೊರೆಗಳನ್ನೂ ಟಾಕಿರ್್ವನರನ್ನೂ ಉಚ್ಚಾಟನೆ ಮಾಡಿದ ಮೇಲೆ, ಆದರೆ ಆಗಸ್ಟಸನ ಚಕ್ರಾಧಿಪತ್ಯ ಸ್ಥಾಪನೆ ಆಗುವುದಕ್ಕೆ ಮುಂಚೆ, ಇದ್ದ ಪ್ರಾಚೀನ ರೋಮ್ ಸರ್ಕಾರವನ್ನು ಇತಿಹಾಸಕಾರರು ಪ್ರಪ್ರಥಮ ಗಣರಾಜ್ಯವೆಂದು ಕರೆದಿದ್ದಾರೆ. ರಾಜತ್ವವಿಲ್ಲದ್ದೂ ಸಾಮೂಹಿಕ ಸರ್ಕಾರಿ ಹಿತವಿದ್ದದ್ದೂ ಅದರ ಎರಡು ಮುಖ್ಯ ಲಕ್ಷಣ. ಕೆಲವು ಇತಿಹಾಸಜ್ಞರು ಪ್ರಾಚೀನ ಗ್ರೀಸಿನ ನಗರ ರಾಷ್ಟ್ರವನ್ನು ಗಣರಾಜ್ಯವೆಂದು ಕರೆದಿದ್ದಾರೆ. ಅಧಿಕಾರವನ್ನು ಎಷ್ಟು ಜನರು ಚಲಾಯಿಸುತ್ತಾರೆಂಬ ಆಧಾರದ ಮೇಲೆ ಸರ್ಕಾರಗಳನ್ನು ರಾಜಪ್ರಭುತ್ವ, ಶ್ರೀಮಂತ ಪ್ರಭುತ್ವ, ಪ್ರಜಾಪ್ರಭುತ್ವ ಎಂದು ವಿಂಗಡಿಸಲಾಗಿದೆ. ನಿರಂಕುಶ ಪ್ರಭುತ್ವ, ಸ್ವಲ್ಪ ಜನಾಧಿಪತ್ಯ ಮತ್ತು ದೊಂಬಿಜನಪ್ರಭುತ್ವ (ಆಕ್ಲಾಕ್ರಸಿ) ಇವು ಮೇಲ್ಕಂಡ ಸರ್ಕಾರ ಪದ್ಧತಿಗಳ ಅಪಭ್ರಂಶಗಳು. ಇವು ಅವಿಚಾರಕ ಆಡಳಿತಗಳು, ಆದಾಗ್ಯೂ, ಗ್ರೀಕ್ ನಗರ ರಾಜ್ಯಗಳಲ್ಲಿ ಗಣರಾಜ್ಯದ ಮೂಲ ತತ್ತ್ವಗಳಾದ ಸಮಾನಹಿತ, ಅಧಿಕಾರದಲ್ಲಿ ಜನತೆಯ ಪಾಲ್ಗೊಳ್ಳುವಿಕೆ ಇವೆರಡು ತತ್ತ್ವಗಳೂ ಅಡಕವಾಗಿದ್ದುವು. ಗ್ರೀಕೇತರ ಅನಾಗರಿಕ ಚಕ್ರಾಧಿಪತ್ಯಗಳ ರಾಜರ ಬೇಜವಾಬ್ದಾರಿ ವರ್ತನೆ, ಜನತೆಯ ಗುಲಾಮಗಿರಿ ಮುಂತಾದವು ಗ್ರೀಕ್ ನಗರ ರಾಜ್ಯಗಳಲ್ಲಿ ಕಂಡುಬರುತ್ತಿರಲಿಲ್ಲವಾದ್ದರಿಂದ ಅಲ್ಲಿ ಗಣರಾಜ್ಯ ತತ್ತ್ವವನ್ನು ಮನ್ನಿಸಲಾಗಿದೆಯೆಂದೂ ಹೇಳಬಹುದು. ಗಣರಾಜ್ಯ ತತ್ತ್ವ ಕೇವಲ ಪಾಶ್ಚಾತ್ಯರಾಜ್ಯ ವ್ಯವಸ್ಥೆಗೆ ಸೀಮಿತವಾದ್ದಲ್ಲ.

ಭಾರತದಲ್ಲಿ

[ಬದಲಾಯಿಸಿ]
Vaishali was the capital of the Vajjian Confederacy, an early republic.

ಪೌರಸ್ತ್ಯ ದೇಶಗಳಲ್ಲಿ, ಅದರಲ್ಲೂ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ, ಗಣರಾಜ್ಯ ತತ್ತ್ವಕ್ಕೆ ಮಾನ್ಯತೆ ಇತ್ತೆಂದು ಹೇಳಲು ಅನೇಕ ಆಧಾರಗಳುಂಟು.ಇವುಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು.[].ಹದಿನಾರು ಗಣಗಳ ಒಂದು ಸಂಘಟನೆ ಮಹಾಜನಪದವಾಗುತ್ತಿತ್ತು.[][] . ಪ್ರಾಚೀನ ಭಾರತದ ರಾಜ್ಯ ವ್ಯವಸ್ಥೆಯ ಬಗ್ಗೆ ಆಮೂಲಾಗ್ರ ಸಂಶೋಧನೆ ನಡೆಸಿರುವ ಡಾ. ಜಯಸ್ವಾಲ್, ಡಾ ಘೋಷಾಲ್ ಮತ್ತು ಡಾ ಎ.ಎಸ್.ಅಳ್ಟೇಕರ್ ಇವರು ಈ ಬಗ್ಗೆ ಖಚಿತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ[][][] . ಈ ಸಂಶೋಧಕರು ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವ ಪದ್ಧತಿಯೊಂದೇ ಪ್ರಚಲಿತ ಸರ್ಕಾರ ಪದ್ಧತಿಯಾಗಿತ್ತೆಂದು ಹೇಳುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ರಾಜರಹಿತ ಪ್ರಭುತ್ವಗಳೆನಿಸಿಕೊಂಡಿರುವ ಶ್ರೀಮಂತ ಪ್ರಭುತ್ವ, ಪ್ರಜಾಪ್ರಭುತ್ವ ಅಥವಾಾ ಗಣರಾಜ್ಯ ಇವು ವೇದಗಳ ಕಾಲದಲ್ಲಿ ಪ್ರಚಲಿತವಿದ್ದುವು. ಮಾಲವ ಗಣ ಮತ್ತು ಯಾಹುದೇಯ ಗಣಗಳು ಹಿಂದುಳಿದ ಪಂಗಡಗಳ ರಾಜ್ಯಗಳಾಗಿರದೆ ಅವು ಸುವ್ಯವಸ್ಥಿತ ರಾಜ್ಯ ಪದ್ಧತಿಗಳೆನಿಸಿಕೊಂಡಿದ್ದವು. ಪ್ರಾಚೀನ ಭಾರತದಲ್ಲಿ ಗಣ ಎಂಬ ಪದಕ್ಕೆ ಖಚಿತವಾದ ರಾಜಕೀಯ ಹಾಗೂ ಸಂವೈಧಾನಿಕ ಅರ್ಥವಿತ್ತು. ಗಣವೆಂಬುದು ಸರ್ಕಾರದ ಒಂದು ಪ್ರಭೇದವಾಗಿತ್ತು. ಅದರಲ್ಲಿ ರಾಜ್ಯಾಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿರದೆ ಗಣ ಅಥವಾಾ ಜನಸಮೂಹದ ಕೈಯಲ್ಲಿರುತ್ತಿತ್ತು. ಗಣ ಎಂಬುದೇ ಅಲ್ಲದೇ ಸಂಘ ಅಥವಾಾ ಸಮಿತಿ ಎಂಬ ಪದಗಳೂ ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದುವು. ಮಧ್ಯ ಯುಗದಲ್ಲಿ ಅಲ್ಲಲ್ಲಿ ಕೆಲವು ಗಣರಾಜ್ಯಗಳು ತಲೆ ಎತ್ತಿದುವು.

ಆಧುನಿಕ ಕಾಲದಲ್ಲಿ

[ಬದಲಾಯಿಸಿ]

ಆದರೆ 14-16ನೆಯ ಶತಮಾನಗಳ ಅವಧಿಯಲ್ಲಿ ಉಂಟಾದ ಪುನರುಜ್ಜೀವನ ಕಾಲದಲ್ಲಿ ಇಟಲಿಯ ನಗರ ರಾಜ್ಯಗಳಾದ ವೆನಿಸ್ ಮತ್ತು ಫ್ಲಾರೆನ್ಸ್ ಗಣರಾಜ್ಯ ಸರ್ಕಾರಗಳು ಹೆಚ್ಚು ಸತ್ವಶಾಲಿ ಸರ್ಕಾರ ಪ್ರಭೇದಗಳಾಗಿ ಅಸ್ತಿತ್ವಕ್ಕೆ ಬಂದುವು. ಇವುಗಳಲ್ಲೂ ರಾಜರಹಿತ ಪ್ರಭುತ್ವವೇ ಪ್ರಮುಖ ಅಂಶವಾಗಿತ್ತು. ವೆನಿಸ್ ಮತ್ತು ಫ್ಲಾರೆನ್ಸ್‍ಗಳಲ್ಲಿ ಅಧಿಕಾರ ಹಲವು ಶ್ರೀಮಂತರ ಕೈಯಲ್ಲಿತ್ತು. ಸರ್ಕಾರವನ್ನು ಚುನಾಯಿತ ಅಥವಾಾ ಆಯ್ದ ಪ್ರತಿನಿಧಿಗಳ ಸಮಿತಿ ನಡೆಸುತ್ತಿತ್ತು. ಇದರಲ್ಲಿ ಪ್ರಜಾಪ್ರಭುತ್ವ ತತ್ವಕ್ಕೆ ಅಷ್ಟೊಂದು ಮಹತ್ವವಿರಲಿಲ್ಲ. ಇಂಗ್ಲೆಂಡಿನಲ್ಲಿ ಸ್ಥಾಪಿತವಾದ ಕ್ರಾಮ್ವೆಲ್ ಆಡಳಿತ ಅರಸೊತ್ತಿಗೆಯ ವಿರುದ್ಧ ಎದ್ದ ಬಂಡಾಯದ ಫಲ. ಆ ಅವಧಿಯಲ್ಲಿ ಗಣರಾಜ್ಯ ತತ್ತ್ವವನ್ನು ಎತ್ತಿ ಹಿಡಿಯಲಾಯಿತು. ಡಚ್ ಗಣರಾಜ್ಯದಲ್ಲಿ ಒಬ್ಬನ ಕೈಯಲ್ಲಿ ಅಧಿಕಾರವಿದ್ದರೂ ಅದು ಆಳರಸರ ವಿರುದ್ಧ ರಚಿತವಾದ ಅಧ್ಯಕ್ಷೀಯ ಸರ್ಕಾರ. ಇದೇ ರೀತಿ ಸ್ವಿಟ್ಜರ್ಲೆಂಡಿನಲ್ಲಿ ಕೂಡ ಗಣರಾಜ್ಯ ಪದ್ಧತಿ ರೂಪುಗೊಂಡಿತು. ಅಮೆರಿಕದ ಕ್ರಾಂತಿ ಮತ್ತು ಫ್ರಾನ್ಸಿನ ಕ್ರಾಂತಿಗಳು ರಾಜಪ್ರಭುತ್ವದ ವಿರುದ್ಧ ಎದ್ದ ಬಂಡಾಯಗಳು. ಅಲ್ಲಿ ಗಣರಾಜ್ಯಗಳು ಸ್ಥಾಪಿತವಾದುವು. ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳಲ್ಲಿ ರಾಜ್ಯಾಧಿಕಾರ ಜನತೆಯ ಒಪ್ಪಿಗೆಯಂತೆ ರೂಪುಗೊಂಡು ಚಲಾಯಿಸಲ್ಪಡಬೇಕು ಮತ್ತು ಅದು ಮಾನವೀಯ ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿರಬೇಕು ಎಂಬ ತತ್ತ್ವಗಳು ಪ್ರಮುಖವಾಗಿದ್ದುವು. ಸಮೂಹದಿಂದ ಪ್ರತ್ಯಕ್ಷವಾಗಿ ಅಥವಾಾ ಪರೋಕ್ಷವಾಗಿ ಅಧಿಕಾರ ಪಡೆದು, ಜನತೆಯ ಇಚ್ಛೆಗನುಗುಣವಾಗಿ, ನಿಯಮಿತ ಅವಧಿಯಲ್ಲಿ ಮಾತ್ರ ಆ ಅಧಿಕಾರವನ್ನು ಚಲಾಯಿಸುವ ಸರ್ಕಾರ ಪದ್ಧತಿಯೇ ಗಣರಾಜ್ಯವೆಂದು ಮ್ಯಾಡಿಸನ್ ಹೇಳಿದ್ದಾನೆ. ಇಂಥ ವ್ಯವಸ್ಥೆಯಲ್ಲಿ ಅಧಿಕಾರವನ್ನು ಹಲವೇ ಜನರಿಂದ ಪಡೆಯದೆ ಇಡೀ ಜನತೆಯಿಂದ ಪಡೆಯುವುದು ಬಹು ಮುಖ್ಯವಾದ ಅಂಶ. ಈ ಅರ್ಥದಲ್ಲಿ ಗಣರಾಜ್ಯವೆಂದರೆ ಇಂದಿನ ಪ್ರಜಾಪ್ರಭುತ್ವ ಪದ್ಧತಿ. ಅಮೆರಿಕದಲ್ಲಿ ಗಣರಾಜ್ಯ ಸ್ಥಾಪನೆಯಾದಂದಿನಿಂದ ಜಗತ್ತಿನ ಅನೇಕ ರಾಷ್ಟ್ರಗಳು ಗಣರಾಜ್ಯಗಳಾಗಿವೆ. ಸ್ವತಂತ್ರಭಾರತವೂ ತನ್ನ ಸಂವಿಧಾನದಲ್ಲಿ ಭಾರತವನ್ನು ಸರ್ವತಂತ್ರ ಸ್ವತಂತ್ರ ಗಣರಾಜ್ಯವೆಂದು ಸಾರಿದೆ. ಇಪ್ಪತ್ತನೆಯ ಶತಮಾನದಲ್ಲಿ ಗಣರಾಜ್ಯ ಪದ್ಧತಿಯ ಸರ್ಕಾರ ರಚನೆಗೆ ಎಲ್ಲೆಲ್ಲೂ ಪ್ರೋತ್ಸಾಹ ದೊರೆತಿದ್ದು ಸಹಜವೇ ಆದರೂ 1914-18ರಲ್ಲಿ ಜರುಗಿದ ಒಂದನೆ ಮಹಾಯುದ್ಧದ ತರುವಾಯ ಗಣರಾಜ್ಯದ ಹೆಸರಿನಲ್ಲಿ ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ಸರ್ವಾಧಿಕಾರಿಗಳು ಅಧಿಕಾರಕ್ಕೆ ಬಂದರು. ಜರ್ಮನಿ, ಇಟಲಿ, ಸ್ಪೇನ್, ಸೋವಿಯೆತ್ ದೇಶ ಮುಂತಾದ ರಾಷ್ಟ್ರಗಳಲ್ಲಿ ಈ ಸರ್ವಾಧಿಕಾರಿಗಳು ರಾಜಪ್ರಭುತ್ವವನ್ನು ಮಾನ್ಯ ಮಾಡಲೂ ಇಲ್ಲ, ಗಣರಾಜ್ಯ ತತ್ತ್ವವನ್ನು ಅಲ್ಲಗಳೆಯಲೂ ಇಲ್ಲ. ತಮ್ಮದೇ ಆದ ರೀತಿಯಲ್ಲಿ ಅವರು ತಮ್ಮ ಕೈಯಲ್ಲಿ ರಾಜ್ಯಾಧಿಕಾರವನ್ನು ಇಟ್ಟುಕೊಂಡರು. ಅಂದಿನಿಂದ ಸರ್ಕಾರಗಳನ್ನು ಸಂವೈಧಾನಿಕ ಸರ್ಕಾರಗಳು ಮತ್ತು ಸರ್ವಾಧಿಕಾರ ಸರ್ಕಾರಗಳೆಂದು ವರ್ಗೀಕರಿಸಬೇಕಾಯಿತು. ಎರಡನೆಯ ಮಹಾಯುದ್ಧದ ಅನಂತರವೂ ಅನೇಕ ದೇಶಗಳು ಹೆಸರಿನಲ್ಲಿ ಮಾತ್ರ ಗಣರಾಜ್ಯಗಳಾಗಿ ಉಳಿದುವು. ಆದರೆ ಅನೇಕ ಗಣರಾಜ್ಯಗಳು ಯಶಸ್ವಿಯಾಗಿ ಮುಂದುವರೆಯುತ್ತಿವೆ.

ಉಲ್ಲೇಖಗಳು

[ಬದಲಾಯಿಸಿ]
  1. 16 Mahajanapadas - Sixteen Mahajanapadas, 16 Maha Janapadas India, Maha Janapada Ancient India. Iloveindia.com. Retrieved on 2013-07-12.
  2. Anguttara Nikaya I. p 213; IV. pp 252, 256, 261.
  3. Singh, Upinder (2008). A History of Ancient and Early Medieval India: From the Stone Age to the 12th Century. Delhi: Pearson Education. pp. 260–4. ISBN 978-81-317-1120-0.
  4. http://www.britannica.com/eb/article-9074639/Vaisali Vaisali, Encyclopædia Britannica
  5. Kulke, Hermann; Dietmar Rothermund (2004). A history of India. Routledge. p. 57. ISBN 0-415-32919-1.
  6. Sharma, RS. Aspects of Political Ideas and Institutions in Ancient India. Motilal Banarsidass Publ., 1999 pg. xxix


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಣರಾಜ್ಯ&oldid=1185805" ಇಂದ ಪಡೆಯಲ್ಪಟ್ಟಿದೆ