ಗಂಗಾಧರ ಮಡಿವಾಳೇಶ್ವರ ತುರಮರಿ

ವಿಕಿಪೀಡಿಯ ಇಂದ
Jump to navigation Jump to search

ಗಂಗಾಧರ ಮಡಿವಾಳೇಶ್ವರ ತುರಮರಿಯವರು ೧೮೭೨ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಿಸಿದರು. ಇವರ ತಾಯಿ ಪಾರ್ವತಮ್ಮ ; ತಂದೆ ಚೆನ್ನಬಸಪ್ಪ. ಆ ಕಾಲಾವಧಿಯಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದ್ದರೂ ಸಹ, ತಾಯಿನುಡಿಯ ಅಭಿಮಾನಿಯಾದ ಬಾಲಕ ಗಂಗಾಧರನು ಕನ್ನಡವನ್ನೆ ಕಲಿಯಲು ಅಪೇಕ್ಷಿಸಿದ್ದರಿಂದ , ಅವನ ಛಲದಿಂದ ಸಂತೋಷಗೊಂಡ ಗುರು ಮಡಿವಾಳೇಶ್ವರರು ಅವನಿಗೆ ಹಳಗನ್ನಡ ಹಾಗು ಸಂಸ್ಕೃತ ಕಾವ್ಯಗಳ ಅಭ್ಯಾಸ ಮಾಡಿಸಿದರು. ಗುರುಗಳ ನಿಧನದ ನಂತರ ತುರಮರಿಯವರು ತಮ್ಮ ಹೆಸರಿನ ಮುಂದೆ ಅವರ ಹೆಸರನ್ನೂ ಸಹ ಜೋಡಿಸಿಕೊಂಡು ಗಂಗಾಧರ ಮಡಿವಾಳೇಶ್ವರ ತುರಮರಿಯಾದರು.

ಕನ್ನಡ ಭಾಷೆಯ ಪ್ರಚಾರವನ್ನೆ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡು ತುರಮರಿಯವರು, ಬೈಲಹೊಂಗಲದಲ್ಲಿ ‘ ಗಾವಠೀ ’ ಶಾಲೆಯನ್ನು ತೆರೆದರು. ಪುರಾಣ ಪ್ರವಚನಗಳನ್ನು , ಹಳಗನ್ನಡ ಕಾವ್ಯ ವಾಚನಗಳನ್ನು ಮಾಡುತ್ತಿದ್ದರು. ಕೆಲಕಾಲದ ನಂತರ ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರಕ್ಕೆ ಆಗಮಿಸಿದ ತುರಮರಿಯವರು ಅಲ್ಲಿಯೂ ಕನ್ನಡ ಶಾಲೆಯನ್ನು ಪ್ರಾರಂಭಿಸಿದರು. ಆ ಬಳಿಕ ಬಾಗಲಕೋಟ ಜಿಲ್ಲೆಯಲ್ಲಿರುವ ಹುನಗುಂದದಲ್ಲಿರುವ ಸರಕಾರಿ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ನಿಯಮಿಸಲ್ಪಟ್ಟರು.

ಈ ಸಮಯದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ‍ನವರು ಹುನಗುಂದ ಶಾಲೆಗೆ ಪರಿಶೀಲನೆಗಾಗಿ ಬಂದಾಗ ತುರಮರಿಯವರ ಬೋಧನಾಕ್ರಮ ಹಾಗು ಕನ್ನಡ ಪಾಂಡಿತ್ಯಗಳಿಂದ ಪ್ರಭಾವಿತರಾಗಿ ಅವರನ್ನು ಬೆಳಗಾವಿಯಲ್ಲಿರುವ ನಾರ್ಮಲ್ ಸ್ಕೂಲಿಗೆ ಸಹಾಯಕ ಅಧ್ಯಾಪಕರನ್ನಾಗಿ ನಿಯಮಿಸುವಲ್ಲಿ ಕಾರಣೀಭೂತರಾದರು.

೧೮೬೬ರಲ್ಲಿ ತುರಮರಿಯವರು ಕನ್ನಡ ಭಾಷೆಯ ಭಾಷಾಂತರಕಾರರಾಗಿ ನಿಯುಕ್ತರಾದರು. ವೆಂಕಟ ರಂಗೋ ಕಟ್ಟಿ‍ಯವರ ಜೊತೆಗೆ ಅನೇಕ ಭಾಷಾಂತರ ಕಾರ್ಯಗಳನ್ನು ಕೈಗೊಂಡರು. ೧೮೭೫ರಲ್ಲಿ ಭಾಷಾಂತರ ಕಾರ್ಯಾಲಯವು ಧಾರವಾಡ‍ಕ್ಕೆ ಸ್ಥಳಾಂತರಗೊಂಡ ಬಳಿಕ ,ಅವರು ಇಲ್ಲಿ ಭಾಷಾಂತರಿಸಿದ ಬಾಣ ಕಾದಂಬರಿ ಅವರನ್ನು ಪ್ರಖ್ಯಾತಿಗೊಯ್ಯಿತು.

ಇದಲ್ಲದೆ, ಅವರು ಪಠ್ಯ ಹಾಗು ಪಠ್ಯೇತರ ಪುಸ್ತಕಗಳ ರಚನೆ ಮಾಡಿದರು. ಕವಿತೆಗಳನ್ನು ಕಲಿಸಲು ಶಿಕ್ಷಕರಿಗೆ ಸಹಾಯವಾಗಲು ‘ಕವಿತಾ ಪದ್ಧತಿ’ ಎನ್ನುವ ಗ್ರಂಥ ರಚಿಸಿದರು. ಇದರಂತೆ ವ್ಯಾಕರಣ ಕಲಿಸಲು ಸಹಾಯಕವಾಗುವಂತೆ ‘ಭಾಷಾ ದರ್ಪಣ’ ಕೃತಿಯನ್ನು ರಚಿಸಿದರು. ಇವರ ಅತ್ಯಂತ ಪರಿಶ್ರಮ ಹಾಗು ಪಾಂಡಿತ್ಯದ ಕೃತಿ ಎಂದರೆ “ಶಬ್ದ ಮಂಜರಿ”. ಇದು ೧೭,೦೦೦ ಶಬ್ದಗಳನ್ನು ಒಳಗೊಂಡ ಕನ್ನಡ ಶಬ್ದಕೋಶ.

ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಗೆ, ಷಡಕ್ಷರ ದೇವ‍ನ ರಾಜಶೇಖರ ವಿಲಾಸಕ್ಕೆ ಹಾಗು ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ತುರಮರಿಯವರು ವ್ಯಾಖ್ಯಾನ ಬರೆದಿದ್ದಾರೆ.

ಈ ರೀತಿಯಾಗಿ ಕನ್ನಡ ಶಿಕ್ಷಣಕ್ಕೆ ಹಾಗು ಕನ್ನಡ ಸಾಹಿತ್ಯಕ್ಕೆ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಅಪಾರ ಸೇವೆ ಸಲ್ಲಿಸಿದ್ದಾರೆ. ಇವರು ೧೮೭೭ರಲ್ಲಿ ಧಾರವಾಡದಲ್ಲಿ ಕೈಲಾಸವಾಸಿಗಳಾದರು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ತುರಮರಿಯವರ ಬಗೆಗಿನ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿನ ಒಂದು ಪುಸ್ತಕ