ವಿಷಯಕ್ಕೆ ಹೋಗು

ಕೂಚಿಪೂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಗಳೂರಿನ ಐಐಎಂನಲ್ಲಿ ಕೂಚಿಪೂಡಿ ನೃತ್ಯ ಪ್ರದರ್ಶನ ನೀಡುತ್ತಿರುವ ಉಮಾ ಮುರಳಿಕೃಷ್ಣ
ರಾಜಮಹೇಂದ್ರಿ ಮೂಲದ ಕೂಚಿಪೂಡಿ ನೃತ್ಯಕಲಾವಿದೆ ಹಾಗೂ ಭಾರತದ ಐಸಿಎಐ 'ಐಸಿಡಬ್ಲ್ಯೂಎಐ ಸಂಸ್ಥಾನದ ಸಿಎ-ಸಿಪಿಟಿಯಲ್ಲಿ ರಾಷ್ಟ್ರ ಮಟ್ಟದ ಮೊದಲ ಶ್ರೇಯಾಂಕ' ಪಡೆದ ಅಪರ್ಣಾ ಕ್ರೊವ್ವಿಡಿ
ಸಾಹಿತಿ ರವಳಿ, ಕೂಚಿಪೂಡಿ ನೃತ್ಯ ಕಲಾಕಾರಿನಿ, ವಿಸಾಖಪಟ್ನಂ
ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವ ಕೂಚಿಪೂಡಿ ನೃತ್ಯಕಲಾವಿದೆ ವಿ ಅಂಜನಾ ದೇವಿ

ಕೂಚಿಪೂಡಿ (Kuchipudi) (ತೆಲುಗು : కూచిపూడి) ('Koochipoodi' ('ಕೂಚಿಪೂಡಿ') ಎಂದು ಉಚ್ಚಾರಿತ) ಭಾರತ ದೇಶದ ಆಂಧ್ರಪ್ರದೇಶ ರಾಜ್ಯದ ಭಾರತೀಯ ಶಾಸ್ತ್ರೀಯ ನೃತ್ಯರೂಪ. ದಕ್ಷಿಣ ಭಾರತದ ಇತರೆಡೆಯೂ ಸಹ ಈ ನೃತ್ಯವು ಜನಪ್ರಿಯ. ಕೂಚಿಪೂಡಿ ಎಂಬುದು ಆಂಧ್ರಪ್ರದೇಶದ ಬಂಗಾಳ ಕೊಲ್ಲಿ ತೀರದಲ್ಲಿರುವ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿರುವ ಗ್ರಾಮವೊಂದರ ಹೆಸರು. ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಸಮುದಾಯವು ಈ ನೃತ್ಯಕಲಾರೂಪವನ್ನು ಅಭ್ಯಸಿಸುತ್ತಿದ್ದ ರಿಂದ, ಇದಕ್ಕೆ 'ಕೂಚಿಪೂಡಿ ನೃತ್ಯ' ಎನ್ನುವುದು ರೂಢಿಯಾಯಿತು.

ಇತಿವೃತ್ತ

[ಬದಲಾಯಿಸಿ]
  • ನೃತ್ಯ ಪ್ರದರ್ಶನವು ಸಾಮಾನ್ಯವಾಗಿ ವೇದಿಕೆಯ ಕೆಲವು ಆಚರಣೆಗಳೊಂದಿಗೆ ಆರಂಭವಾಗುವುದು. ಆಚರಣೆಗಳ ನಂತರ ಪ್ರತಿಯೊಬ್ಬ ಪಾತ್ರಧಾರಿಯೂ ಸಹ ವೇದಿಕೆಯ ಮೇಲೆ ಬಂದು,(ಹಾಡು-ನೃತ್ಯಗಳ ಕಿರು ಸಂಯೋಜನೆಯ ಮೂಲಕ) ತಮ್ಮನ್ನು ತಾವು ಪರಿಚಯಿಸಿಕೊಳ್ಳುವರು. ಇದರಿಂದಾಗಿ, ನಾಟಕದಲ್ಲಿರುವ ಪಾತ್ರದ ಗುರುತು ಮತ್ತು ಹಾವಭಾವಗಳ ಸನ್ನಿವೇಶಗಳನ್ನು ಸಿದ್ಧಪಡಿಸಲಾಗುವುದು. ಆಗ ನಾಟಕವು ಆರಂಭವಾಗುವುದು.
  • ನೃತ್ಯಕ್ಕೆ ಹಿನ್ನೆಲೆಯಲ್ಲಿ ಮಾದರಿಯಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಲಾಗುತ್ತದೆ. ಹಾಡುವವರಿಗೆ 'ಮೃದಂಗ' ಎಂಬ ದಕ್ಷಿಣ ಭಾರತದ ಶಾಸ್ತ್ರೀಯ ತಾಳವಾದ್ಯ, ಪಿಟೀಲು, ಕೊಳಲು ಹಾಗೂ ತಂಬೂರಿ ಮಂದ್ರತಂತಿ ವಾದ್ಯ - ಈ ವಾದ್ಯಗಳ ಬೆಂಬಲವಿರುತ್ತದೆ. ಕಲಾವಿದರು ಧರಿಸುವ ಒಡವೆಗಳು 'ಬೂರುಗು ಎಂಬ, ಸಾಮಾನ್ಯವಾಗಿ ಕಡಿಮೆ-ತೂಕದ ಮರದ ವಸ್ತುಗಳಾಗಿರುತ್ತವೆ.
  • ಕೂಚಿಪೂಡಿ ನೃತ್ಯಗಳಲ್ಲಿ ಚಲನವಲನಗಳು ವೇಗದ ಗತಿಯಲ್ಲಿರುತ್ತವೆ. ಹಿನ್ನೆಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಾದ್ಯದ ಸಹಯೋಗದಿಂದ ನಡೆಯವ ಈ ನೃತ್ಯವು ಭರತನಾಟ್ಯದೊಂದಿಗೆ ಹಲವು ಅಂಶಗಳನ್ನು ಹಂಚಿಕೊಂಡಿದೆ. ಇದರ ಏಕ-ಪ್ರದರ್ಶನದಲ್ಲಿ, ಕೂಚಿಪೂಡಿ ಹಾಡುಗಳಲ್ಲಿ ಜತಿಸ್ವರಮ್‌ ಮತ್ತು ತಿಲ್ಲಾನ ಸೇರಿರುತ್ತವೆ, ನೃತ್ಯಗಳಲ್ಲಿ, ಭಕ್ತರೊಬ್ಬರು ದೇವರೊಂದಿಗೆ ಒಂದಾಗುವ ಹಂಬಲವನ್ನು ನಿರೂಪಿಸುವ ಹಲವು ಗೀತರಚನೆಗಳಿರುತ್ತವೆ.
  • ಕೂಚಿಪೂಡಿ ಮತ್ತು ಭರತನಾಟ್ಯ ಹೆಜ್ಜೆಗಳ ನಡುವಿನ ಬೇರೆ-ಬೇರೆ ಶೈಲಿಗಳಲ್ಲದೆ, ಕೂಚಿಪೂಡಿಯಲ್ಲಿಯೇ ಅಪೂರ್ವವಾದ ಹಲವು ವಿಶಿಷ್ಟ ನೃತ್ಯರೂಪಗಳಿವೆ. ವಿಶಿಷ್ಟವಾಗಿ, ಕೂಚಿಪೂಡಿಯಲ್ಲಿ 'ತರಂಗಂ' ಎಂಬುದಿದೆ. ಇದರಲ್ಲಿ ನರ್ತಿಸುವವರು ಹಿತ್ತಾಳೆಯ ತಟ್ಟೆಯ ಎತ್ತರದ ಅಂಚುಗಳ ಮೇಲೆ ಕಾಲಿಟ್ಟುಕೊಂಡು ನರ್ತಿಸಬೇಕಿದೆ. ನರ್ತಿಸುವವರು ಆಯ ತಪ್ಪದೆ ಬಹಳ ಕುಶಲತೆಯಿಂದ ತಟ್ಟೆಯನ್ನು ಚಲಿಸುವಂತೆ ಮಾಡುವರು.
  • ಇಂತಹ ನೃತ್ಯ ಮಾಡುವಾಗ ಅವರ ಹಸ್ತಗಳಲ್ಲಿ ತೈಲ-ದೀಪ ಹಚ್ಚಿದ ಎರಡು ಹಣತೆಗಳು ಹಾಗೂ, ತಲೆಯ ಮೇಲೆ ನೀರು ತುಂಬಿರುವ ಚಿಕ್ಕ ಪಾತ್ರೆಯನ್ನು ಹೊತ್ತಿರುತ್ತಾರೆ. ನೃತ್ಯದ ಅಂತ್ಯದಲ್ಲಿ, ಮಾದರಿಯಾಗಿ, ನೃತ್ಯಕಲಾವಿದರು ತೈಲ ದೀಪಗಳನ್ನು ಆರಿಸಿ, ತಲೆಯ ಮೇಲಿದ್ದ ಪಾತ್ರೆಯ ನೀರಿನಿಂದಲೇ ತಮ್ಮ ಕೈ ತೊಳೆದುಕೊಳ್ಳುವರು. ಎರಡೂ ತರಹದ ನೃತ್ಯಗಳಿಗೆ ಸಂಬಂಧಿತ ವಸ್ತ್ರವಿನ್ಯಾಸಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ಸಾಮಾನ್ಯವಾಗಿ, ಭರತನಾಟ್ಯಂ ಉಡುಪುಗಳಿಗೆ ವಿವಿಧ ಉದ್ದನೆಯ ಮೂರು ಮಡಿಕೆಗಳಿರುತ್ತವೆ.
  • ಸೀರೆಯ ಮಡಿಕೆಗಳು ಹರಡಿರುವಂತೆ ಕಾಣಿಸುತ್ತವೆ. ಆದರೆ, ಕೂಚಿಪೂಡಿ ನೃತ್ಯದಲ್ಲಿ, ಕೇವಲ ಒಂದೇ ಮಡಿಕೆಯಿದ್ದು, ಭರತನಾಟ್ಯ ಉಡುಪಿನ ಮೂರು ಮಡಿಕೆಗಳಲ್ಲಿ ಅತಿಯುದ್ದದ ಮಡಿಕೆಗಿಂತಲೂ ಉದ್ದವಾಗಿರುತ್ತದೆ. ಆಗಾಗ್ಗೆ ಕೂಚಿಪೂಡಿ ನೃತ್ಯದಲ್ಲಿ 20ನೆಯ ಕರಣವನ್ನು ಬಳಸ ಲಾಗುತ್ತದೆ. ಆರು ಪದಭೇದಗಳಲ್ಲದೆ, ಈ ಶಿಕ್ಷಣಶಾಲೆಗೆ ಪರಂಪರಾಗತವಾಗಿರುವ ಕೆಲವು 'ಆಡುಗುಲು' ಅಥವಾ ಅಡವುಗಳನ್ನು ಬಳಸುವರು: 'ಚೌಕ', 'ಕಟ್ಟರನಟು', 'ಕುಪ್ಪಿ ಅಡಗು', 'ಒಂಟಡುವು', 'ಜರಡುವು', 'ಪಕ್ಕನಾಟು'ಗಳನ್ನು ಕೂಚಿಪೂಡಿ ನೃತ್ಯಕಲಾವಿದರು ಬಳಸು ವುದುಂಟು.

ಚಲನವಲನಗಳು ಮತ್ತು ಸಂಗೀತ

[ಬದಲಾಯಿಸಿ]
  • ಕೂಚಿಪೂಡಿಯ ಹಾಡುಗಳನ್ನು ನೃತ್ಯಕಲಾವಿದರು ಆಕರ್ಷಿಸುವಂತಹ ಹಾವಭಾವಗಳು, ತ್ವರಿತ ನೋಟಗಳು ಮತ್ತು ಮುಖದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ತತ್ ಕ್ಷಣವೇ ವಿವಿಧ ಭಾವುಕತೆ-ರಸಗಳನ್ನು ನಿರೂಪಿಸುತ್ತಾರೆ. ತರಂಗಂನಲ್ಲಿ, ಕೆಲವೊಮ್ಮೆ, ನೃತ್ಯಕಲಾವಿದರು ನೀರು ತುಂಬಿದ ಬಿಂದಿಗೆಯನ್ನು ತಲೆಯ ಮೇಲಿಟ್ಟುಕೊಂಡು, ಹಿತ್ತಾಳೆ ತಟ್ಟೆಯ ಅಂಚುಗಳ ಮೇಲೆ ನರ್ತಿಸುತ್ತಾರೆ. ಈ ನೃತ್ಯದ ಹಿನ್ನೆಲೆಯ ಹಾಡು ಚಿರಪರಿಚಿತ ಕೃಷ್ಣ ಲೀಲಾ ತರಂಗಿಣಿಯಿಂದ ಆಯ್ದುಕೊಳ್ಳಲಾಗಿದೆ. ಈ ಪಠ್ಯವು ಶ್ರೀಕೃಷ್ಣನ ಅವತಾರ ಮತ್ತು ಜೀವನ-ಸಾಧನೆಗಳನ್ನು ತಿಳಿಸುತ್ತದೆ.
  • ಹಾವಭಾವಗಳುಳ್ಳ ನೃತ್ಯಗಳಲ್ಲಿ, ಭಾಮ ಕಲಾಪಂ ನೃತ್ಯ-ನಾಟಕದಲ್ಲಿ ಕೃಷ್ಣನ ರಾಣಿ ಸತ್ಯಭಾಮಾಳ ಪಾತ್ರವನ್ನು ನೃತ್ಯಕಲಾವಿದರು ಕೆಲವೊಮ್ಮೆ ನಿರೂಪಿಸುತ್ತಾರೆ. ಸತ್ಯಭಾಮಾ ಪ್ರೀತಿ-ಪ್ರೇಮದ ವಿವಿಧ ಹಂತಗಳಲ್ಲಿ ಹಾದುಹೋಗುತ್ತಾಳೆ. ಶ್ರೀಕೃಷ್ಣನಿಂದ ಅಗಲಿದಾಗ, ಆಕೆ ಆತನೊಂದಿಗಿನ ಆನಂದದ ದಿನಗಳನ್ನು ನೆನಪು ಮಾಡಿಕೊಂಡು ಅವನಿಗಾಗಿ ಹಂಬಲಿಸುತ್ತಾಳೆ.
  • ಕಡೆಗೆ, ಆಕೆಯು ಕೃಷ್ಣನಿಗೆ ಪತ್ರವೊಂದನ್ನು ಕಳುಹಿಸಿದಾಗ ಕೃಷ್ಣ-ಸತ್ಯಭಾಮರು ಒಂದಾಗುತ್ತಾರೆ. ಕೂಚಿಪೂಡಿ ಪರಿಚತ ಕಲಾಸಂಗ್ರಹದಿಂದ ಕೃಷ್ಣ ಶಬ್ದಂ ಎಂಬ ಇನ್ನೊಂದು ಹಾಡು ಉಲ್ಲೇಖನೀಯ. ಇದರಲ್ಲಿ ಹಾಲು ಮಾರುವ ಮಹಿಳೆಯು ಕೃಷ್ಣನನ್ನು ವಿವಿಧ ರೀತ್ಯಾ ಆಮಂತ್ರಿಸುತ್ತಾಳೆ. ಇದರಲ್ಲಿ ನೃತ್ಯಕಲಾವಿದರು ಮಹಿಳೆಯ ಆಕರ್ಷಣೆಯನ್ನು ನಿರೂಪಿಸುತ್ತಾರೆ.

ಇತಿಹಾಸ

[ಬದಲಾಯಿಸಿ]

ಕೂಚಿಪುಡಿ ನೃತ್ಯ ಕೃಷ್ಣಾ ಜಿಲ್ಲೆಯ ಕೂಚಿಪುಡಿಯಲ್ಲಿ ಮುಖ್ಯವಾಗಿ, ಮಿಕ್ಕಂತೆ ಅದರ ಸುತ್ತಣ ಪ್ರದೇಶಗಳಲ್ಲಿ ಸುಮಾರು 12 ಮತ್ತು 13ನೆಯ ಶತಕಗಳಲ್ಲಿ ರೂಪುಗೊಂಡು, ಕಾಲಕಾಲಕ್ಕೆ ಬದಲಾಗುತ್ತ ಬಂದಿರುವ ಒಂದು ನೃತ್ಯ ಪದ್ಧತಿ.

ಹಿನ್ನೆಲೆ

[ಬದಲಾಯಿಸಿ]

ನೃತ್ಯದಲ್ಲಿ ಧಾರ್ಮಿಕ ಮತ್ತು ಲೌಕಿಕ ಎಂಬುದಾಗಿ ಎರಡು ವಿಧಗಳಿವೆಯಷ್ಟೆ. ಧಾರ್ಮಿಕ ನೃತ್ಯ ದೇವದಾಸಿಯರಿಂದ ಅನುಷ್ಠಾನದಲ್ಲಿದ್ದು, ದೇವಾಲಯಗಳಿಗೆ ಮಾತ್ರ ಪರಿಮಿತವಾಗಿತ್ತು. ಲೌಕಿಕ ನೃತ್ಯಗಳು ವೃತ್ತಿನರ್ತಕಿಯರಿಂದ ನಿರ್ವಹಿಸಲ್ಪಡುತ್ತಿದ್ದುವು. ನೃತ್ಯದ ಜೀವಾಳವಾದ ಪರಿಶುದ್ಧತೆ ಮತ್ತು ಉನ್ನತ ತಂತ್ರಕೌಶಲಗಳನ್ನು ವೃತ್ತಿನರ್ತಕಿಯರು ಕಾಪಾಡಿಕೊಂಡು ಬರಲಿಲ್ಲವಾಗಿ ಸುಮಾರು ಕ್ರಿ. ಪೂ. 1000ದ ಹೊತ್ತಿಗೆ ನೃತ್ಯಕಲೆಯ ಅತ್ಯುನ್ನತ ಗುಣವನ್ನು ಸಂರಕ್ಷಿಸಿಕೊಂಡು ಬರುವುದಕ್ಕಾಗಿ ವಿದ್ವಾಂಸರಿಂದ, ಕಲಾವಿದರಿಂದ ಚಳವಳಿಯೊಂದು ಆರಂಭವಾಯಿತು. ಕೂಚಿಪುಡಿ ಈ ಚಳವಳಿಯ ಒಂದು ಕೇಂದ್ರವಾಯಿತು.

ರಾಜಾಶ್ರಯ

[ಬದಲಾಯಿಸಿ]

ಕೂಚಿಪುಡಿ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿದೆ. ಕ್ರಿ. ಪೂ. 300ರ ಶಾತವಾಹನರ ಕಾಲದಿಂದ ಕ್ರಿ. ಶ. 16 ನೆಯ ಶತಮಾನದವರೆಗೆ ಆಂಧ್ರ ಸಂಸ್ಕೃತಿಯ ನೆಲೆಯಾಗಿದ್ದ ವಿಶಾಲ ಭೂವಲಯದಲ್ಲಿ ಇದು ನೆಲೆಗೊಂಡಿದೆ. ಕಾಕತೀಯ ರಾಜರು ನೃತ್ಯಕಲೆಯನ್ನು ಪೋಷಿಸಿದರು. ಕ್ರಿ. ಶ. 12ನೆಯ ಶತಮಾನದ ಕಾಕತೀಯ ಗಣಪತಿ ಮಹಾರಾಜನ ಆಳ್ವಿಕೆಯಲ್ಲಿ ಗುಂಡಾಮಾತ್ಯನೆಂಬ ಪ್ರಸಿದ್ಧ ವಿದ್ವಾಂಸನೂ ಕಲಾಚಾರ್ಯನೂ ಇದ್ದ. ಗುಂಡಾಮಾತ್ಯ, ಜಯಪ್ಪನಾಯಕನೆಂಬ ಗಜ ಸೈನ್ಯಾಧಿಪತಿಗೆ ನೃತ್ಯಕಲೆಯನ್ನು ಕಲಿಸಲು ರಾಜನಿಂದ ನಿಯೋಜಿತನಾಗಿದ್ದ. ಜಯಪ್ಪನಾಯಕ ಈ ಕಲೆಯಲ್ಲಿ ದೊಡ್ಡ ಪ್ರವೀಣನಾದುದಲ್ಲದೆ, ಭರತನಾಟ್ಯವನ್ನು ಕುರಿತು ವೃತ್ತ ರತ್ನಾವಳಿ ಎಂಬ ಉನ್ನತಮಟ್ಟದ ಗ್ರಂಥವೊಂದನ್ನು ರಚಿಸಿದ. ಇದು 12ನೆಯ ಶತಮಾನದಲ್ಲಿ ರೂಢಿಯಲ್ಲಿದ್ದ ಧಾರ್ಮಿಕ ಮತ್ತು ಲೌಕಿಕ ನೃತ್ಯಪ್ರಕಾರಗಳ ಪೂರ್ಣ ವಿವರಣೆಯನ್ನು ನೀಡುತ್ತದೆ. ಉದಾಹರಣೆಗೆ ಭುಜಂಗತ್ರಾಸ, ತಾಲಪುಷ್ಪ ಪುಟ, ಭೂಚಾರಿ, ಆಕಾಶಚಾರಿ, ಅಂಗಹಾರನೃತ್ಯ, ಸಪ್ತತಾಂಡವಗಳು ಇತ್ಯಾದಿ. ಇವುಗಳೆಲ್ಲ ಆ ಕಾಲದ ಶಾಸ್ತ್ರೀಯ ನೃತ್ಯದ ವಿವಿಧ ಮಾದರಿಗಳನ್ನು ಸ್ಪಷ್ಟಪಡಿಸುತ್ತವೆ. ಈ ಕಾಲದಲ್ಲಿ ಕಲಾವಿದರು ದಶವಿಧ ಶಿವಲೀಲೆಗಳ ನಾಟ್ಯಗಳನ್ನು ಅಭಿನಯಿಸುತ್ತಿದ್ದರು. ಜೊತೆಗೆ ರಾಮಾಯಾಣ, ಮಹಾಭಾರತಗಳಿಂದ ಆಯ್ದ ಕೆಲವು ಪ್ರಸಿದ್ಧ ಕಥೆಗಳ ಲಘು ವಿಷಯಗಳೂ ಅನುಷ್ಠಾನದಲ್ಲಿದ್ದುವು. ಮೇಲಿನ ಮಾದರಿಯ ಮಾರ್ಗೀಯ ನೃತ್ಯ ಸಂಪ್ರದಾಯ ಕೂಚಿಪುಡಿಯಲ್ಲಿ ಪ್ರವರ್ಧಮಾನಕ್ಕೆ ಬಂದದ್ದು 12 ಮತ್ತು 13ನೆಯ ಶತಮಾನಗಳ ಅವಧಿಯಲ್ಲೆಂದು ಅನುಮಾನಿಸಬಹುದು. ಕೂಚಿಪುಡಿಯಲ್ಲಿ ರೂಪಿತವಾದ ಬ್ರಾಹ್ಮಣ ಮೇಳಗಳು ಮಾರ್ಗ ಸಂಪ್ರದಾಯದಿಂದ ತಮ್ಮ ಕಲೆಯನ್ನು ಅರಳಿಸಿಕೊಂಡವು. ಈ ಮೇಳಗಳಲ್ಲಿ ಹೆಂಗಸರು ಭಾಗವಹಿಸಲು ಅವಕಾಶ ಕೊಡುತ್ತಿರಲಿಲ್ಲ. ಬ್ರಾಹ್ಮಣ ಮೇಳಗಳ ಸದಸ್ಯರು ಶುದ್ಧ ಹಾಗೂ ಧಾರ್ಮಿಕ ಜೀವನವನ್ನು ನಡೆಸುತ್ತಿದ್ದರು. ಅವರು ಸಂಸ್ಕೃತ ಮತ್ತು ತೆಲುಗಿನಲ್ಲಿ ವಿಶಾಲ ಸಾಂಸ್ಕೃತಿಕ ಶಿಕ್ಷಣವನ್ನು ಹೊಂದಿರುತ್ತಿದ್ದರು. ಭರತನಾಟ್ಯ, ಸಂಗೀತ ಹಾಗೂ ಅಲಂಕಾರಶಾಸ್ತ್ರಗಳನ್ನು ಕುರಿತಾದ ಪ್ರಮಾಣಭೂತ ಗ್ರಂಥಗಳನ್ನವರು ಅಧ್ಯಯನ ಮಾಡಿದರವರಾಗಿದ್ದು, ಹಲವು ವರ್ಷಗಳ ಕಾಲ ಪಕ್ಷ ಪ್ರಾಯೋಗಿಕ ತರಬೇತನ್ನು ಪಡೆದವರಾಗಿರುತ್ತಿದ್ದರು.

ಕೂಚಿಪುಡಿ ನೃತ್ಯಮಾರ್ಗದ ಆರಂಭ, ಬೆಳವಣಿಗೆ

[ಬದಲಾಯಿಸಿ]

ಕೂಚಿಪುಡಿಯಲ್ಲಿ ಈ ಬ್ರಾಹ್ಮಣ ಮೇಳ ಚಳವಳಿ ಯಾವಾಗ ಆರಂಭವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಿನ ಬ್ರಾಹ್ಮಣ ಭಾಗವತರನ್ನು ಕುರಿತಾದ ಪ್ರಾಚೀನ ಆಧಾರ ಕ್ರಿ. ಶ. 1500ರಷ್ಟು ಹಿಂದಕ್ಕೆ, ವಿಜಯನಗರ ರಾಜ ವೀರನರಸಿಂಹರಾಯನ ಆಳ್ವಿಕೆಗೆ ಹೋಗುತ್ತದೆ. ಸ್ಥಳೀಯ ದಾಖಲೆಗಳ ಮಚುಪಲ್ಲಿ ಕೈಫಿಯತ್ತಿನಲ್ಲಿ ಅದು ಈ ರೀತಿ ಉಲ್ಲೇಖಿತವಾಗಿರುವುದನ್ನು ನೋಡಬಹುದು: 'ಕೂಚಿಪುಡಿಯ ಬ್ರಾಹ್ಮಣ ಭಾಗವತರ ನಾಟಕ ತಂಡವೊಂದು ವಿನುಕೊಂಡ ಮತ್ತು ಚಿಲ್ಲಮ್‍ಕೊಂಡದ ಮಾರ್ಗದಲ್ಲಿ ಬೀಡು ಬಿಟ್ಟಿದ್ದಾಗ, ವೀರನರಸಿಂಹರಾಯದ ಆಳ್ವಿಕೆಯ ಅವಧಿಯಲ್ಲಿ ವಿಜಯನಗರಕ್ಕೆ ಬಂದಿತ್ತು. ಕೋರಿಕೆಯ ಮೇಲೆ ಅವರು ನಾಟಕವೊಂದನ್ನು ಆಡಲು ವ್ಯವಸ್ಥೆ ಮಾಡಿದರು.' ಕೂಚಿಪುಡಿ ಮೇಳ ನುರಿತದ್ದೆಂದು ಪ್ರಸಿದ್ಧಿಪಡೆದಿದ್ದುದರಿಂದ, ವೀರ ನರಸಿಂಹರಾಯ ತನ್ನ ರಾಣಿ ಮತ್ತು ರಾಜಪರಿವಾರದ ಜೊತೆಯಲ್ಲಿ ಅರಮನೆಯೊಳಗೆ ನಾಟಕವನ್ನು ನೋಡಲು ಅಪೇಕ್ಷಿಸಿದರು. ನಿಜವಾಗಿ ಈ ಮೇಳ ಸಂಚಾರೀ ತಂಡವಾಗಿದ್ದು, ಜನಪ್ರಿಯ ಪೌರಾಣಿಕ ಕಥೆಗಳನ್ನು ಅಭಿನಯಿಸುವುದರ ಮೂಲಕ ಜನತೆಯನ್ನು ರಂಜಿಸುತ್ತಿತ್ತಲ್ಲದೆ ದೇಶದಲ್ಲಿ ಧಾರ್ಮಿಕ ಹಾಗೂ ಭಕ್ತಿಯ ವಾತಾವರಣವನ್ನು ಕಾಪಾಡಿಕೊಂಡು ಬರುತ್ತಿತ್ತು. ವೈಷ್ಣವ ತತ್ತ್ವದ ಉತ್ಕರ್ಷದಿಂದಾಗಿ ಈ ಸಂಚಾರೀ ತಂಡಗಳು ಭಾಗವತ ಪುರಾಣದಿಂದ ತೆಗೆದುಕೊಂಡ ಕಥೆಗಳನ್ನು ಅಭಿನಯಿಸಲು ಪ್ರಾರಂಭಿಸಿದುವು. ಇದರ ಪರಿಣಾಮವಾಗಿ ಈ ಕಲಾವಿದರಿಗೆ ಕೂಚಿಪುಡಿ ಭಾಗವತರು ಅಥವಾ ಕೂಚಿಪುಡಿ ಭಾಗವತ ಮೇಳ ಎಂದು ಹೆಸರಾಯಿತು. ಈ ನೃತ್ಯ ನಾಟಕದ ನಿಷ್ಕøಷ್ಟ ರೂಪವೆಂಥದ್ದಾಗಿತ್ತು ಎಂಬುದನ್ನು ಯಾರೂ ಹೇಳುವಂತಿಲ್ಲವಾಗಿದೆ. ಅದು ಇಂದು ನಾವು ಯಕ್ಷಗಾನವೆಂದು ಕರೆಯುವ ಜನಪದ ಅಥವಾ ದೇಸೀ ಮಾದರಿಯಿಂದ ಬೆಳೆದು ಬಂದುದೆಂದು ತೋರುತ್ತದೆ. ಕೂಚಿಪುಡಿ ಕಲಾವಿದರಿಗೆ, ವಿದ್ವಾಂಸರಿಗೆ ವಿಜಯನಗರದ ದೊರೆಗಳ ಆಶ್ರಯವಿತ್ತು. ವಿಜಯನಗರದ ಪತನಾನಂತರ, ಈ ವಿದ್ವಾಂಸರು ಮತ್ತು ನಾಟಕ ತಂಡಗಳವರು ತಂಜಾವೂರಿಗೆ ವಲಸೆಬಂದು, ಅದರ ಸಮೀಪದಲ್ಲಿರುವ ಅಚ್ಯುತಪುರಂ ಎಂಬ ಹಳ್ಳಿಯಲ್ಲಿ ನೆಲೆಸಿದರು. ಇದು ತಂಜಾವೂರಿನ ರಾಜ ಅಚ್ಯುತಪ್ಪ ನಾಯಕನಿಂದ ದಾನವಾಗಿ ದೊರೆತ ಅಗ್ರಹಾರ. ಇಂದು ಇದನ್ನು ಮೇಳತ್ತೂರು ಎಂದು ಕರೆಯುವರು. ಈ ಸ್ಥಳದಲ್ಲಿ ಬ್ರಾಹ್ಮಣ ಮೇಳಗಳು ಪ್ರಹ್ಲಾದ ಚರಿತ್ರೆ, ಮೋಹಿನಿ ರುಕ್ಮಾಂಗದ, ಹರಿಶ್ಚಂದ್ರ ಮತ್ತು ರಾಮನಾಟಕದಂಥ ತಮ್ಮ ಸಾಂಪ್ರದಾಯಿಕ ನೃತ್ಯನಾಟಕಗಳನ್ನು ಆಡತೊಡಗಿದರು. ಈ ಅವಧಿಯಲ್ಲಿ, ಸರಿಸುಮಾರು 1560ರಿಂದ 1660ರ ವರೆಗೆ ಕೂಚಿಪುಡಿ ಬಹು ದೊಡ್ಡ ಸಾಂಸ್ಕೃತಿಕ ಮತ್ತು ಕಲಾಕೇಂದ್ರವಾಗಿ ಮುಂದುವರಿಯಿತು; ನೃತ್ಯ ಹಾಗೂ ಸಂಗೀತ ಕಲೆಗಳಲ್ಲಿ ಕ್ಷೇತ್ರಜ್ಞ , ತೀರ್ಥನಾರಾಯಣ ಯತಿ ಹಾಗೂ ಸಿದ್ಧೇಂದ್ರಯೋಗಿಗಳಂಥ ಶ್ರೇಷ್ಠ ರಚನಕಾರರನ್ನು, ಶಿಕ್ಷಕರನ್ನು ಸೃಷ್ಟಿಸಿತು. ಇವರಲ್ಲಿ ಸಿದ್ಧೇಂದ್ರಯೋಗಿ ಈಗಾಗಲೇ ಅಸ್ತಿತ್ವದಲ್ಲಿದ್ದ ನೃತ್ಯಕಲೆಗೆ ಹೊಸ ತಿರುವೊಂದನ್ನು ತಂದುಕೊಟ್ಟ. ಯಾವುದನ್ನು ನಾವಿಂದು ಕೂಚಿಪುಡಿ ನೃತ್ಯಪಂಥವೆಂದು ಕರೆಯುತ್ತೇವೆಯೋ ಅದರ ಸ್ಥಾಪಕನಾದ. ನೃತ್ಯನಾಟಕದ ಅದ್ವೀತೀಯ ಮಾದರಿಯಾಗಿ ಆತ ಪಾರಿಜಾತಹರಣದ ಕಥೆಯನ್ನು ರಚಿಸಿ, ಆ ನಾಟಕವನ್ನು ಕೂಚಿಪುಡಿ ಕಲಾವಿದರಿಗೆ ಕಲಿಸಿದ. ಅದು ಕೂಚಿಪುಡಿ ಪಂಥದ ನಾಟಕ ಅಥವಾ ಸಂಗೀತ ಕೃತಿಗಳಲ್ಲಿ ಅತ್ಯುತ್ತಮ ಪ್ರಕರಣವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ಪಾರಿಜಾತ ಹರಣ ಸತ್ಯಭಾಮೆಗೂ ಭಗವಾನ್ ಶ್ರೀಕೃಷ್ಣನಿಗೂ ಇದ್ದ ಗಾಢ ಪ್ರೀತಿಯ ಕಥೆಯಾಗಿದೆ. ಈ ಕಥೆ ರಸಭಾವಗಳನ್ನು ಗರ್ಭೀಕರಿಸಿಕೊಂಡಿದೆ. ಸತ್ಯಭಾಮೆ ಸ್ವಾಧೀನ ಪತಿಕಾ ನಾಯಿಕೆಯಾಗಿರುವುದರಿಂದ ಭಗವಾನ್ ಶ್ರೀಕೃಷ್ಣನನ್ನು ಆಜ್ಞಾನುವರ್ತಿಯನ್ನಾಗಿ ಮಾಡಬಹುದು ಮತ್ತು ಅವನ ಜೊತೆಯಲ್ಲಿ ಸ್ವಾತಂತ್ರ್ಯ ವಹಿಸಬಹುದು. ರಹಸ್ಯಾರ್ಥದಲ್ಲಿ, ಇದು ಮಧುರಭಕ್ತಿಯ ಅಂದರೆ ಜೀವಾತ್ಮ ಪರಮಾತ್ಮ ಸಮಾಗಮದ ಪ್ರತಿಪಾದನೆಗೆ ಯುಕ್ತವಸ್ತುವಾಗಿದೆ. ಜೀವಾತ್ಮನ ಪ್ರಯತ್ನದ ಮೂಲಕ ಪರಿಹಾರವಾಗಬಲ್ಲ ಸಂಕಷ್ಟಗಳು ಮತ್ತು ಯಾತನೆಗಳನ್ನು ವಿಪ್ರಲುಭ ಶೃಂಗಾರ ಚಿತ್ರಿಸುತ್ತದೆ. ಕೂಚಿಪುಡಿ ಸಂಸಾರಗಳ ಪ್ರತಿಯೊಬ್ಬ ಪುರುಷ ಸದಸ್ಯನೂ ಈ ಕಲೆಯ ಅನುಷ್ಠಾನಕ್ಕಾಗಿ ತನ್ನನ್ನು ತಾನು ಒತ್ತೆಯಿಡುವಂತೆ ತನ್ನ ಜೀವಮಾನದಲ್ಲಿ ಕೊನೆಯ ಪಕ್ಷ ಒಂದು ಬಾರಿಯಾದರೂ ಸತ್ಯಭಾಮಾ ಪಾತ್ರವನ್ನು ಅಭಿನಯಿಸಲು ಪ್ರತಿಜ್ಞೆ ಮಾಡುವಂತೆ ಸಿದ್ಧೇಂದ್ರ ಯೋಗಿಗಳು ಸದಸ್ಯರ ಮನವೊಲಿಸಿದ್ದರು. ಇದಲ್ಲದೆ, ಈ ಪ್ರೌಢಕಲೆಗಾಗಿ, ತನ್ಮೂಲಕ ಧಾರ್ಮಿಕ ಪ್ರಚಾರಕ್ಕಾಗಿ ತಮ್ಮ ಜೀವನವನ್ನೆ ಮೀಸಲಿಟ್ಟ ಸಂಸಾರಗಳಿಗೆಂದು ಕೂಚಿಪುಡಿಯನ್ನು ಅಗ್ರಹಾರವಾಗಿ ಕೊಡಲು ಗೊಲ್ಕೊಂಡದ ನವಾಬ (ಕ್ರಿ. ಶ. 1672-1687) ಅಬ್ಬುಲ್ ಹಸನ್ ಕುತಾಬ್ ಅವರಿಂದ ತಾಮ್ರ ಫಲಕ ದತ್ತಿಯನ್ನು ಹೊರಡಿಸಲು ಸಿದ್ಧೇಂದ್ರಯೋಗಿಗಳೇ ಕಾರಣರಾದರು. ಈ ವಾಗ್ದಾನವನ್ನು ಗೌರವಿಸುತ್ತ ಈ ಕಲೆ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿದೆ. ಈಗಾಗಲೆ ತಿಳಿಸಿದಂತೆ, ಸಿದ್ಧೇಂದ್ರಯೋಗಿಯವರು ನೃತ್ಯನಾಟಕದ ವಸ್ತು ಮತ್ತು ರೂಪವನ್ನು ಬಹಳ ಮಟ್ಟಿಗೆ ಉತ್ತಮಪಡಿಸಿದರು. ಪಾರಿಜಾತಹರಣ ನಾಟಕ ಹೆಚ್ಚು ಪ್ರೌಢವಾದದ್ದು ಮತ್ತು ನಾಟ್ಯಶಾಸ್ತ್ರ, ಸಂಗೀತಶಾಸ್ತ್ರ ಹಾಗೂ ತಾಳಶಾಸ್ತ್ರಗಳ ಆವಶ್ಯಕ ಅಂಶಗಳನ್ನೆಲ್ಲ ಒಳಗೊಂಡಿರುವಂಥದು. ಕಾಲ ಕಳೆದಂತೆ ಕೂಚಿಪುಡಿ ಭಾಗವತರ ಸಂಚಾರೀ ಮೇಳಗಳು ವಿವಿಧ ದೇವಾಲಯಗಳಲ್ಲಿ ಮತ್ತು ದರ್ಬಾರುಗಳಲ್ಲಿ ನಡೆಯುತ್ತಿದ್ದ ದೇವದಾಸಿಯರ ಮತ್ತು ರಾಜನರ್ತಕಿಯರ ಪ್ರದರ್ಶನಗಳ ಜೊತೆ ಸಂಪರ್ಕ ಕಲ್ಪಿಸಿಕೊಂಡುವು. ಅದರ ಫಲವಾಗಿ, ಕೂಚಿಪುಡಿ ಪಂಥದ ಕಲೆ ಸಣ್ಣ ಪುಟ್ಟ ಮಾರ್ಪಾಡುಗಳಿಗೆ, ಭಿನ್ನತೆಗಳಿಗೆ ಒಳಗಾಗಬೇಕಾಯಿತು. ಕ್ಷೇತ್ರಜ್ಞರ ಮೂವ್ವ ಗೋಪಾಲ ಪದಗಳ ಗಾಯನ ಮತ್ತು ನರ್ತನದಿಂದ ದಕ್ಷಿಣ ಭಾರತಾದ್ಯಂತ ನೃತ್ಯಕಲೆಯ ಮೇಲಾದ ಬಹುದೊಡ್ಡ ಪ್ರಭಾವ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ. ಇದರ ಫಲಿತಾಂಶವಾಗಿ, ಪಾರಿಜಾತ ಹರಣ ನಾಟಕದಲ್ಲಿನ ಸತ್ಯಭಾಮಾ ಪಾತ್ರ ಅಲಂಕಾರಶಾಸ್ತ್ರದಲ್ಲಿ ವರ್ಣಿತವಾದ ನಾಯಿಕೆಯ ಎಂಟು ಬಗೆಯ ಪೂರ್ಣ ನಿರೂಪಣೆಗೆ ಇಂಬುಕೊಟ್ಟು ಮಾರ್ಪಟ್ಟಿತು. ಹೀಗೆ ಕಥೆಯಲ್ಲಿ ಹಲವಾರು ಪಾತ್ರ ವೈಲಕ್ಷಣ್ಯಗಳನ್ನು ಒಳಗೊಂಡಿರುವ ಪಾರಿಜಾತ ಹರಣ ನಾಟಕದ ಮೂಲ ರೂಪ ಮಾರ್ಪಟ್ಟು ಪ್ರಮುಖವಾಗಿ ಸತ್ಯಭಾಮಾ ಮತ್ತು ಮಾಧವಿ ಎಂಬೆರಡು ಪಾತ್ರಗಳು ಮಾತ್ರ ಉಳಿದು ಬಂದುವು. ಸಮಸ್ತವೂ ಸತ್ಯಭಾಮೆಯ ಕಲಾಪವಾಯಿತು. ಹೀಗಾಗಿ ಪಾರಿಜಾತಹರಣ ನಾಟಕಕ್ಕೆ ಭಾಮಾಕಲಾಪ ಎಂದು ಹೆಸರಾಯಿತು. ಇಲ್ಲಿ ಮಾಧವಿ ಸತ್ಯಭಾಮೆಯ ಪ್ರಿಯ ಗೆಳತಿ, ಆಕೆಯ ಆತ್ಮಸಾಕ್ಷ್ಯ ರಕ್ಷಕಳು, ಒಂದು ದೃಷ್ಟಿಯಲ್ಲಿ ಆಕೆಯ ಆತ್ಮವಿವೇಕ ಸ್ವರೂಪಳು.

ರಂಗಭೂಮಿ, ನಾಟಕ

[ಬದಲಾಯಿಸಿ]

ಕೂಚಿಪುಡಿ ನೃತ್ಯನಾಟಕವನ್ನು ಕುರಿತಾದ ಕೆಲವು ಸ್ವಾರಸ್ಯಕರವಾದ ಅಂಶಗಳನ್ನೀಗ ನೋಡಬಹುದು. ಅವರ ರಂಗಭೂಮಿ ಸರಳವಾದುದು. ಗ್ರಾಮದ ದೇವಾಲಯವೊಂದರ ಮುಂದು ಸಮತಟ್ಟಾದ, ತೆಂಗಿನಗರಿಗಳಿಂದ ಮುಚ್ಚಿದ ಚಪ್ಪರದವೇ ಸಾಮಾನ್ಯವಾಗಿ ಅವರ ನಾಟಕರಂಗ. ಪ್ರೇಕ್ಷಕರು ಎದುರಿನ ಬಯಲಿನಲ್ಲಿ ನೆಲದ ಮೇಲೆ ಕುಳಿತು ನಾಟಕವನ್ನು ನೋಡುತ್ತಾರೆ. ನಾಟಕ ರಾತ್ರಿ ಹತ್ತರಿಂದ ಬೆಳಗಿನ ನಾಲ್ಕು ಗಂಟೆಯವರೆಗೂ ನಡೆಯಬಹುದು. ಸುಂದರ ನಮೂನೆಯ ಬಣ್ಣದ ಪರದೆಯೊಂದನ್ನು ಇಬ್ಬರು ಯುವಕರು ರಂಗಭೂಮಿಗೆ ಅಡ್ಡಲಾಗಿ ಹಿಡಿದಿರುತ್ತಾರೆ. ಗ್ರಾಮದ ಅಗಸರಿಬ್ಬರು ರಂಗಸ್ಥಳದ ಎರಡು ಕಡೆಯಲ್ಲಿಯೂ ನಿಂತು ಹರಳೆಣ್ಣೆಯಿಂದ ಉರಿಯುವ ಪಂಜುಗಳನ್ನು ಹಿಡಿದಿದ್ದು ರಂಗಸ್ಥಳಕ್ಕೆ ಬೆಳಕನ್ನು ಒದಗಿಸುತ್ತಾರೆ. ನಾಟಕ ನಡೆಯುತ್ತಿದ್ದಾಗ ನಿರ್ದಿಷ್ಟ ಕ್ಷಣಗಳಲ್ಲಿ ಉದಾಹರಣೆಗೆ, ಪರದೆಯ ಹಿಂದಿನಿಂದ ಸತ್ಯಭಾಮೆ ಪ್ರವೇಶಿಸುತ್ತಿದ್ದಾಗ, ನಾಟಕೀಯ ಪರಿಣಾಮವನ್ನು ಅಧಿಕಗೊಳಿಸುವ ಸಲುವಾಗಿ, ಬೆಳಕನ್ನು ಹೆಚ್ಚಿಸಲು ಪಂಜಿನಮೇಲೆ ಗುಗ್ಗಿಲು ಎಂಬ ರಾಳವನ್ನು ಎರಚುತ್ತಾರೆ. ಅದು ಭುಗ್ ಎಂದು ಹತ್ತಿ ಉರಿಯುತ್ತದೆ. ರಂಗಸ್ಥಳದ ಮೇಲೆ ಪಾತ್ರ ಪ್ರವೇಶಿಸುತ್ತಿದ್ದಂತೆ ದ್ವಾರದಲ್ಲಿನ ವಾದ್ಯಗಾನ ಹಠಾತ್ತನೆ ಪ್ರಾರಂಭವಾಗುತ್ತದಲ್ಲದೆ ತೆರೆ ಬಿದ್ದು ರಾಳದ ಉರಿ ಭುಗಿಲೆನ್ನುತ್ತದೆ. ಇಲ್ಲಿ ಗಮನಿಸಬೇಕಾದ ಸ್ವಾರಸ್ಯವೆಂದರೆ ಪಾತ್ರ ತನ್ನನ್ನು ತಾನೆ ಪರಿಚಯಿಸಿಕೊಳ್ಳುವುದು. ನಟರ ಹಿಂದೆ, ಅವರನ್ನು ಸಮೀಪಿಸಿದಂತೆ, ಮೃದಂಗ, ಕೊಳಲು ಶ್ರುತಿಗಳನ್ನೊಳಗೊಂಡಂತಿರುವ ವಾದ್ಯಗಾರರು ಮತ್ತು ಇಬ್ಬರು ಹಿನ್ನೆಲೆ ಗಾಯಕರು ನಿಂತಿರುತ್ತಾರೆ. ತಂಡದ ಮುಖಂಡನಾದವ ಕೈನಲ್ಲಿನ ತಾಳಗಳ ಮೂಲಕ ಕಾಲ ವ್ಯವಸ್ಥೆ ಮಾಡುತ್ತ ನಾಟಕವನ್ನು ನಿಯಂತ್ರಿಸುತ್ತಾರೆ. ಆತ ಎತ್ತರವಾದ ಆಳಾಗಿದ್ದು ಸಂಪ್ರದಾಯ ಶುದ್ಧವಾದ ಮಂತ್ರಶಾಸ್ತ್ರದಲ್ಲಿ ನುರಿತವನಾಗಿರುತ್ತಾನೆ. ಕಲಾವಿದರ ಮೇಲೆ ಬೀಳಬಹುದಾದ ಕೆಟ್ಟದೃಷ್ಟಿಯನ್ನು ನಿವಾರಿಸಲು ಆತ ಸದಾ ಜಾಗರೂಕನಾಗಿರುತ್ತಾನೆ. ಕಾಲ ಸರಿದಂತೆ ನೃತ್ಯ ನಾಟಕಗಳಲ್ಲಿ ನೂತರ ಪ್ರಕಾರಗಳು ನಿರ್ಮಿತವಾದುವು. ಅವುಗಳಲ್ಲಿ ಗೊಲ್ಲಕಲಾಪ ಒಂದು. ಇದು ಕೂಚಿಪುಡಿಯ ಇನ್ನೊಂದು ವಿಶೇಷ. ಇದು ಗೌಳಿಗಿತ್ತಿ ಮತ್ತು ಬ್ರಾಹ್ಮಣನೊಬ್ಬನ ನಡುವೆ ನಡೆದ ತಾತ್ತ್ವಿಕ ಸಂವಾದವೇ ಆಗಿದೆ. ಈ ಭಾಗಗಳನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಸ್ಕೃತದ ಸ್ವಾಮ್ಯ ಅವಶ್ಯ ಇರಬೇಕಾಗುತ್ತದೆ. ಇದು ಕ್ರಮಬದ್ಧ ಕಥೆಯಾಗಿರದೆ ವಿಶದವಾದ ಮತಾನುಚರಣೆಯಲ್ಲಿನ ಯಜ್ಞಗಳ ನಿಷ್ಟ್ರಯೋಜಕತೆ, ಮಾನಸಿಕ ಯಜ್ಞದ ಶ್ರೇಷ್ಠತೆ, ಆದರ್ಶಪ್ರಾಯ ಸಾಂಸಾರಿಕ ಜೀವನ ಮತ್ತು ಪಿಂಡೋತ್ಪತ್ತಿ ಕರ್ಮಗಳಂತೆ ವಿವಿಧ ಸಾಂಸ್ಕೃತಿಕಪ್ರಕರಣಗಳನ್ನು ಕುರಿತ ಪ್ರವಚನವಾಗಿದೆ. ಇದೊಂದು ಸಾಮಾಜಿಕ ವಿಡಂಬನೆಯಾಗಿದ್ದು ಮನೋರಂಜನೆಗಿಂತ ಹೆಚ್ಚಾಗಿ ಬೋಧಪರವಾದುದಾಗಿದೆ. ಗೌಳಿಗಿತ್ತಿ, ತಾನು ಸಂಸ್ಕೃತಿ, ಜ್ಞಾನ, ಶಿಕ್ಷಣ ಹಾಗೂ ಗೌರವದಲ್ಲಿ ಬ್ರಾಹ್ಮಣನಿಗಿಂತ ಕೀಳಾದವಳಲ್ಲ ಎಂಬುದನ್ನು ಸಿದ್ಧಪಡಿಸುತ್ತಾಳಲ್ಲದೆ ಶೂದ್ರನಾಗಿ ಹುಟ್ಟಿದ ಮನುಷ್ಯನೊಬ್ಬ ದೀಕ್ಷೆಪಡೆದ ಅನಂತರ ಬ್ರಾಹ್ಮಣ್ಯವನ್ನು ಗಳಿಸಿಕೊಳ್ಳಬಹುದೆಂದು ವಾದಿಸುತ್ತಾಳೆ.

ವೇಷಭೂಷಣ

[ಬದಲಾಯಿಸಿ]

ಕೂಚಿಪುಡಿ ಕಲಾವಿದರ ವೇಷಭೂಷಣ ವಿಶದವಾದುದಲ್ಲ. ಪಾತ್ರಕ್ಕೆ ತಕ್ಕ, ಒಂದೇ ಬಣ್ಣ ಮತ್ತು ಒಂದೇ ಹುಡಿಯನ್ನು ಉಪಯೋಗಿಸಲಾಗುತ್ತದೆ. ಆಧುನಿಕ ವೇಷಭೂಷಣಗಳ ವಸ್ತುಗಳು ಬರುವ ಮುನ್ನ, ಅವಶ್ಯವಿದ್ದ ಬಣ್ಣ, ಹುಡಿಗಳನ್ನು ಖನಿಜ ಮತ್ತು ವನಸ್ಪತಿಗಳಿಂದ ಸಿದ್ಧಗೊಳಿಸಲಾಗುತ್ತಿತ್ತು. ರಾಜ ಸುಂದರ ಕಿರೀಟ ಮತ್ತು ಅಲಂಕೃತ ಭುಜಕೀರ್ತಿಗಳನ್ನು ಧರಿಸುತ್ತಿದ್ದ. ಸತ್ಯಭಾಮೆಯ ಶೃಂಗಾರ ವಿಶದವಾಗಿರುತ್ತಿತ್ತು. ಅವಳ ಅಲಂಕಾರ ಸಾಧನಗಳು ಹಲವು. ಅವಳು ವಾರದ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ರೀತಿಯ ಒಡವೆಗಳನ್ನು ಧರಿಸುತ್ತಿದ್ದಳು. ಇವು ಅಂದಿನ ಸಮಾಜದ ರಾಣಿ ಧರಿಸುವ ಒಡವೆಗಳ ಪಡಿಯಚ್ಚುಗಳಾಗಿರುತ್ತಿದ್ದುವು. ಅವನ್ನು ಹಗುರವಾದ ಮರದಿಂದ ಮಾಡಿ ಹೊಳೆವ ಬಣ್ಣದ ಕಾಗದಗಳಿಂದ ಅಲಂಕರಿಸುತ್ತಿದ್ದರು.ಕೂಚಿಪುಡಿಯ ಸಂಗೀತದ ಸಂಪ್ರದಾಯ ಮಾರ್ಗೀಯವಾದುದೇ.

ಕೂಚಿಪುಡಿ ಮತ್ತು ಭರತನಾಟ್ಯ

[ಬದಲಾಯಿಸಿ]

ಕೂಚಿಪುಡಿ ನೃತ್ಯಕ್ಕೂ ಮತ್ತು ಇಂದಿನ ಭರತನಾಟ್ಯಕ್ಕೂ ಇರುವ ವ್ಯತ್ಯಾಸವಿದು : ಕೂಚಿಪುಡಿ ಪಂಥದ ನೃತ್ಯ ಅವಶ್ಯವಾಗಿ, ಮೂಲಭೂತವಾಗಿ ಭರತಮುನಿಯಿಂದ ಪ್ರತಿಪಾದಿತವಾದ ನೃತ್ಯನಾಟಕವಾಗಿದೆ. ನಾಟ್ಯರೂಪದ ಇದು ವಾಚಿಕ, ಆಂಗಿಕ, ಆಹಾರ್ಯ ಮತ್ತು ಸಾತ್ತ್ವಿಕ ಮೊದಲಾದ ನಾಟ್ಯಾಂಶಗಳನ್ನು ಒಳಗೊಂಡಿದ್ದು, ಶೈಕ್ಷಣಿಕ ಹಾಗೂ ಮನೋರಂಜಕ ಉದ್ದೇಶಗಳುಳ್ಳದಾಗಿದೆ. ಇದು ಹೃದಯ ಮುಟ್ಟುವಂಥ ವಿವಿಧ ಭಾವಗಳ ಪ್ರದರ್ಶನಕ್ಕೆ ಆಸ್ಪದ ಕೊಟ್ಟಿದ್ದು, ಅತ್ಯುನ್ನತ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ. ವಿಶೇಷವಾಗಿ ಉಲ್ಲೇಖಿಸಬಹುದಾದ್ದೆಂದರೆ, ಸ್ತ್ರೀಪಾತ್ರಗಳ ಕಾರ್ಯಭಾಗಗಳೆಲ್ಲವನ್ನೂ ಪುರುಷರು ವಹಿಸಿಕೊಂಡಿರುವುದೇ ಆಗಿದೆ. ಇಂದಿನ ಭರತನಾಟ್ಯ ಪ್ರಾಯಶಃ 120 ವರ್ಷಗಳಷ್ಟು ಹಿಂದಿನದು, ಅಷ್ಟೆ. ಅಲರಿಪು, ಜತಿಸ್ವರ, ಶಬ್ದ, ವರ್ಣ, ಪಾದ ಮತ್ತು ತಿಲ್ಲಾನ ಮೊದಲಾದ ಅಂಶಗಳು ತರ್ಕಬದ್ಧ ಅನುಪೂರ್ವಿಯೊಂದನ್ನು ಅನುಸರಿಸಿದ್ದು, ನೃತ್ತ, ನೃತ್ಯ ಮತ್ತು ಅಭಿನಯಗಳ ಮೂಲಕ ನೃತ್ಯಕಲೆ ಹೇಗೆ ಅಭಿವೃದ್ಧಿಹೊಂದಿತು ಎಂಬುದನ್ನು ತೋರಿಸುತ್ತವೆ. ಈ ಅಂಶಗಳು ವಿಷಯಾನುಕ್ರಮಣಿಕೆಯಲ್ಲಿ ಒಂದು ಮತ್ತೊಂದರ ಜೊತೆ ಸಂಬಂಧವಾವುದನ್ನೂ ಹೊಂದಿರುವುದಿಲ್ಲ. ಪ್ರತಿಯೊಂದು ಅಂಶವೂ ತನಗೆ ತಾನೆ ಪೂರ್ಣವಾದುದಾಗಿದ್ದು, ಉನ್ನತಮಟ್ಟದ ಚಿಕ್ಕದಾದರೂ ಚೊಕ್ಕದಾದ ಮನೋರಂಜನೆಯನ್ನು ಒದಗಿಸುತ್ತದೆ. ಈ ಭರತನಾಟ್ಯಯೋಜನೆ ತಂಜವೂರು ದರ್ಬಾರಿನಲ್ಲಿ ವಡಿವೇಲು ಮತ್ತು ಅವನ ಸೋದರರಿಂದ ರಚಿತವಾದುದು. ಸಾಮಾನ್ಯವಾಗಿ ಒಬ್ಬಳೇ ಒಬ್ಬ ಯುವಸ್ತ್ರೀ ಪ್ರವೀಣೆ ಈ ಎಲ್ಲ ಅಂಶಗಳನ್ನೂ ನಿರ್ವಹಿಸುತ್ತಾಳೆ. ಇತ್ತೀಚಿನ ವರ್ಷಗಳಲ್ಲಿ ಕೂಚಿಪುಡಿ ಕಲಾವಿದರು ಕೂಡಿ ಮೇಲಿನಂತೆ ತರಂಗ ನೃತ್ಯವನ್ನು, ವಿಶೇಷವಾಗಿ ಬಾಲಗೋಪಾಲ ತರಂಗ, ಮುವ್ವಾ ಗೋಪಾಲಪಾದ ಅಭಿನಯ, ತಿಲ್ಲಾನ ಮತ್ತು ದಶಾವತಾರ ನೃತ್ಯಗಳನ್ನು ಒಳಗೊಂಡಂತೆ ವಿನೋದ ಪ್ರದರ್ಶನಗಳನ್ನು ಕೊಡುತ್ತಿದ್ದಾರೆ. ಪ್ರದರ್ಶನ ಪುಷ್ಪಾಂಜಲಿಯಿಂದ ಪ್ರಾರಂಭವಾಗಿ ತಿಲ್ಲಾನದಿಂದ ಮುಕ್ತಾಯವಾಗುತ್ತದೆ. ಕೂಚಿಪುಡಿ ಕಲೆಯ ಭವ್ಯತೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯದಲ್ಲಿ ಆಂಧ್ರಪ್ರದೇಶ ಸಂಗೀತ ನಾಟಕ ಅಕೆಡಮಿ ಮಾರ್ಗದರ್ಶನವೀಯುತ್ತಿದೆ. ಕೂಚಿಪುಡಿಯ ವೆಂಕಟರಾಮ ನಾಟ್ಯ ಮಂಡಲಿಯ ಮುಖಂಡರಾದ ಚಿಂತಾಕೃಷ್ಣಮೂರ್ತಿಯವರು ತಮ್ಮ ತಂಡದೊಡನೆ ಸಾರ್ವಜನಿಕ ಪ್ರದರ್ಶನಗಳನ್ನು ಕೊಡುತ್ತಿದ್ದಾರೆ. ಪ್ರಮುಖ ಸ್ತ್ರೀಪಾತ್ರದಲ್ಲಿ ಭಾಗವಹಿಸುವ ವೇದಾಂತಂ ಸತ್ಯನಾರಾಯಣ ಅವರು 1961ರ ರಾಷ್ಟ್ರಪತಿ ಪಾರಿತೋಷಕವನ್ನು ಪಡೆದವರಾಗಿದ್ದಾರೆ.

ಈ ನಾಟ್ಯಶೈಲಿಯಲ್ಲಿ ಪರಿಣತರು

[ಬದಲಾಯಿಸಿ]

ತೀರ್ಥನಾರಾಯಣ ಯತಿ : ತರಂಗ ನೃತ್ಯಪದ್ಧತಿಗೆ ಕಾರಣನಾದ ಒಬ್ಬ ಕವಿ ಮತ್ತು ಕಲಾವಿದ. ಪೂರ್ವಗೋದಾವರಿ ಜಿಲ್ಲೆಅಮಲಪುರಂನ ಕುಚಿಮಂಚಿವರಿ ಅಗ್ರಹಾರಕ್ಕೆ ಸೇರಿದ ಈತ ವೇದಾದ್ರಿ ನರಸಿಂಹಸ್ವಾಮಿಯ ಶ್ರೇಷ್ಠ ಭಕ್ತ. ಚಿಕ್ಕವನಿರುವಾಗಲೆ ಯತ್ಯಾಶ್ರಮವನ್ನು ಪ್ರವೇಶಿಸಿ ಸಂಸ್ಕೃತ, ಸಂಗೀತ, ನೃತ್ಯಕಲೆಗಳನ್ನು ಕಲಿತು, ತಂಜವೂರು ಜಿಲ್ಲೆಗೆ ವಲಸೆ ಬಂದ. ತೆಲುಗಿನಲ್ಲಿ ಪಾರಿಜಾತ ಹರಣ ನಾಟಕ ಎಂಬ ಚಿಕ್ಕ ಸಂಗೀತ ನಾಟಕವೊಂದನ್ನು ಈತ ರಚಿಸಿ ಅಚ್ಯುತಪುರದ (ಇಂದಿನ ಮೇಳತೂರು) ವರದರಾಜಸ್ವಾಮಿಗೆ ಅರ್ಪಿಸಿದ್ದಾನೆ. ಕಾವೇರಿಯ ಉಪನದಿಯೊಂದರ ಮೇಲಿರುವ ವರಹೂರಿನಲ್ಲಿ ಈತ ಕಡೆಗೆ ನೆಲೆಸಿದ. ಅಲ್ಲಿದ್ದು ಕೃಷ್ಣಲೀಲಾ ತರಂಗಿಣಿ ಎಂಬ ಬಹುಪ್ರಸಿದ್ಧ ಯಕ್ಷಗಾನವನ್ನು ಸಂಸ್ಕೃತದಲ್ಲಿ ರಚಿಸಿದ ವರಹೂರಿನ ದೇವಾಲಯದ ದೇವರ ಮುಂದೆ ತರಂಗಗಳನ್ನು ಭಾವಪರವಶತೆಯಲ್ಲಿ ಹಾಡಿದುದಾಗಿಯೂ ನೃತ್ಯಮಾಡಿದುದಾಗಿಯೂ ಈತ ಹೇಳಿಕೊಂಡಿದ್ದಾನೆ. ಲಯ ವಿನ್ಯಾಸದ ಜಟಿಲ ಉದಾಹರಣೆಗಳು, ವಿಶೇಷವಾಗಿ, ಕೆಲವು ತರಂಗಗಳ ಚರಣಗಳ ಅಂತ್ಯದಲ್ಲಿ ಬರುವ ಶಬ್ದಗಳು ನೃತ್ಯಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಕೂಚಿಪುಡಿಯ ಕಲಾವಿದರು ತರಂಗ ನೃತ್ಯದ ತಂತ್ರವನ್ನು ಕರಗತಮಾಡಿಕೊಂಡಿದ್ದು ಉದ್ದಕ್ಕೂ ಅದು ಈ ಪಂಥದ ವಿಶೇಷತೆಯಾಗಿ ಮುಂದುವರಿದಿದೆ.

  • ಡಾ. ವೇಂಪತಿ ಚಿನ್ನ ಸತ್ಯಂ Archived 2010-09-29 ವೇಬ್ಯಾಕ್ ಮೆಷಿನ್ ನಲ್ಲಿ.[]
  • ಗುರು ಪಿ. ವಿ. ಭರಣಿ ಶಂಕರ್‌
  • ಅನುರಾಗ್‌ ದೇಬ್‌ (ಆಯುಷ್‌ - ಪಾಗ್ಲೂ ಛಾಗ್ಲು ಮಹಾರಾಜ್‌) ಕೋಲ್ಕತಾ, ಪಶ್ಚಿಮ ಬಂಗಾಳ
  • ದೇವಶೀಷ್‌ ಪ್ರಧಾನ್‌ (ಬೋಟು ಮಹಾರಾಜ್‌) ಕೋಲ್ಕತ್ತಾ, ಪಶ್ಚಿಮ ಬಂಗಾಳ
  • ಗುರು ಜಯರಾಮ ರಾವ್‌ ಮತ್ತು ವನಶ್ರೀ ರಾವ್‌
  • ಶ್ರೀನಿವಾಸ ರಾವ್‌ ರವಿ
  • ವೇದಾಂತಂ ಲಕ್ಷ್ಮಿನಾರಾಯಣ
  • ಡಾ. ಉಮಾ ರಾಮರಾವ್‌
  • ತಡೆಪಲ್ಲಿ ಪೇರಯ್ಯ
  • ಚಿಂತಾ ಕೃಷ್ಣಮೂರ್ತಿ
  • ವೇದಾಂತಮ್‌ ಸತ್ಯನಾರಾಯಣ ಶರ್ಮ
  • ಡಾ: ಕೋರದ ನರಸಿಂಹ ರಾವ್‌ ಗುರು ಸಿ ಆರ್‌ ಆಚಾರ್ಯುಲೂ ಅವರನ್ನೂ ಸಹ ಸ್ಮರಿಸಬೇಕು. ಇವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಮೃಣಾಲಿನಿ ಸಾರಾಭಾಯಿ ಅಹ್ಮದಾಬಾದ್‌ನಲ್ಲಿ ಸ್ಥಾಪಿಸಿದ ದರ್ಪಣಾ ನೃತ್ಯ ಅಕಾಡೆಮಿಯಲ್ಲಿ ದೀರ್ಘಕಾಲಿಕ ಸೇವೆ ಸಲ್ಲಿಸಿದರು. ಆಶಾ ಪಾರಿಖ್‌ ಸೇರಿದಂತೆ, ಹಲವು ಕಲಾವಿದರಿಗೆ ಮೃಣಾಲಿನಿ ತರಬೇತಿ ನೀಡಿದ್ದರು.
  • ಗುರು ಬಾಲ ಕೊಂಡಲ ರಾವ್‌
  • ಪಿ. ಬಿ. ಕೃಷ್ಣ ಭಾರತಿ
  • ಪಸುಮರ್ಥಿ ವೇಣುಗೋಪಾಲ ಕೃಷ್ಣ ಶರ್ಮ
  • ಡಾ. ರಾಜಾ ರಾಧಾ ರೆಡ್ಡಿ
  • ಸ್ವಾಗತ್‌ ಕೂಚಿಪೂಡಿ
  • ಶೋಭಾ ನಾಯುಡು,[]
  • ಮಹಾಂಕಾಲಿ ಸೂರ್ಯನಾರಾಯಣ ಶರ್ಮ,[]
  • ಡಾ. ಯಶೋಧ ಠಾಕೋರ್‌
  • ವಿಜಯಪಾಲ್‌ ಪತಲೋಥ್‌
  • ವಂಶಿ ಕೃಷ್ಣ ವರ್ಮ
  • ಮಲ್ಲಿಕಾ ರಾಮಪ್ರಸಾದ್‌
  • ಇಂದಿರಾ ಶ್ರೀರಾಮ್‌ ದೀಕ್ಷಿತ್‌

ರವಿ ವೇಂಪತಿ, ಶಶಿಕಲಾ ಪೆನುಮರ್ತಿ, ಕಮಲಾ ರೆಡ್ಡಿ, ವನಜಾ ಅಯ್ಯಲರಾಜು ದಾಸಿಕ, ಸಂಧ್ಯಶ್ರೀ ಆತ್ಮಕೂರಿ, ಶಾರದಾ ಜಮ್ಮಿ, ಅನುರಾಧಾ ನೆಹರು, ಹಿಮಬಿಂದು ಚಲ್ಲಾ, ಯಾಮಿನಿ ಸಾರಿಪಲ್ಲಿ ಕೂಚಿಪೂಡಿ ನೃತ್ಯರೂಪವು ಭಾರತವೊಂದಕ್ಕೇ ಸೀಮಿತವಾಗಿಲ್ಲ. ಉತ್ತರ ಅಮೆರಿಕಾ, ಯುನೈಟೆಡ್‌ ಕಿಂಗ್ಡಮ್‌, ಆಸ್ಟ್ರೇಲಿಯಾ ಮತ್ತು ವಿಶ್ವದೆಲ್ಲೆಡೆ ಹಲವು ಚಿರಪರಿಚಿತ ಕೂಚಿಪೂಡಿ ನೃತ್ಯ ತರಬೇತುದಾರರು, ನೃತ್ಯನಿರ್ದೇಶಕರು ಮತ್ತು ನೃತ್ಯಕಲಾವಿದರಿದ್ದಾರೆ.

ವಿಶ್ವ ಗಿನ್ನೆಸ್‌ ದಾಖಲೆ ನಿರ್ಮಿಸಿದ ಕೂಚಿಪೂಡಿ ನೃತ್ಯಕಲಾವಿದರು

[ಬದಲಾಯಿಸಿ]
ವಿಶ್ವದೆಲ್ಲೆಡೆಯಿಂದ ಬಂದು ಕೂಚಿಪೂಡಿ ನೃತ್ಯ ಪ್ರದರ್ಶನ ನೀಡುತ್ತಿರುವ ನೃತ್ಯಕಲಾವಿದರು
  • ಸುಮಾರು 200ಕ್ಕೂ ಹೆಚ್ಚು ನಾಟ್ಯಗುರುಗಳು ಸೇರಿದಂತೆ, 2,800ಕ್ಕೂ ಹೆಚ್ಚು ಕೂಚಿಪೂಡಿ ನೃತ್ಯಕಲಾವಿದರು, 2010ರ ಡಿಸೆಂಬರ್‌ 26ರಂದು ಹೈದರಾಬಾದಿನ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಹಿಂದೊಲಂ ತಿಲ್ಲಾನಾ ನೃತ್ಯ ಪ್ರದರ್ಶನ ನೀಡಿ ವಿಶ್ವ ಗಿನ್ನೆಸ್‌ ದಾಖಲೆ ಸೃಷ್ಟಿಸಿದರು. ಭಾರತದ ಪ್ರತಿ ರಾಜ್ಯ ಹಾಗೂ ಹಾಗೂ 15 ದೇಶಗಳಿಂದ ಆಗಮಿಸಿದ ನೃತ್ಯಕಲಾವಿದರು ಭಾಗವಹಿಸಿದ ಈ ನೃತ್ಯಪ್ರದರ್ಶನವು, ಕೂಚಿಪೂಡಿ ನೃತ್ಯನಿರ್ದೇಶಕ ಸಿದ್ಧೇಂದ್ರ ಯೋಗಿಯವರ ಪ್ರಶಂಸನೀಯ ಕಾರ್ಯಗಳಿಗಾಗಿ ನಡೆಸಲಾಯಿತು.
  • ಮೂರು ದಿನಗಳು ನಡೆದ ಎರಡನೆಯ ಅಂತರರಾಷ್ಟ್ರೀಯ ಕೂಚಿಪೂಡಿ ನೃತ್ಯ ಮಹಾಸಮ್ಮೇಳನದ ಅಂಗವಾಗಿ, 11 ನಿಮಿಷಗಳ ಕಾಲದ ಈ ನೃತ್ಯ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿ ಭಾರತದ ರಾಷ್ಟಪತಿ ಪ್ರತಿಭಾ ಪಾಟೀಲ್‌, ಆಂಧ್ರ ಪ್ರದೇಶ ರಾಜ್ಯಪಾಲ ಇ ಎಸ್‌ ಎಲ್‌ ನರಸಿಂಹನ್‌ ಹಾಗೂ ರಾಜ್ಯದ ಮುಖ್ಯಮಂತ್ರಿ ಎನ್‌. ಕಿರಣ್‌ ಕುಮಾರ್‌ ರೆಡ್ಡಿ, ಭಾಗವಹಿಸಿದವರೆಲ್ಲರನ್ನೂ ಅಭಿನಂದಿಸಿದರು.
  • ಕಾರ್ಯಕ್ರಮವು ಅಂತ್ಯಗೊಂಡೊಡನೆ, ಗಿನೆಸ್‌ ವಿಶ್ವದಾಖಲೆಗಳ ಗ್ರಂಥದ ಪ್ರತಿನಿಧಿಯೊಬ್ಬರು ಎದ್ದು ನಿಂತು, 'ಈ ಕಾರ್ಯಕ್ರಮದ ಅಗಾಧತೆಯನ್ನು ನೋಡಿ ನಾನು ಮೂಕನಾದೆ' ಎಂದು ಘೋಷಿಸಿದಾಗ ಕರತಾಡನಗಳ ಸದ್ದು ತುಂಬಿಕೊಂಡಿತು. ಕೂಚಿಪೂಡಿ ಪರಿಣತರಾದ ವೇಂಪತಿ ಚಿನ್ನಸತ್ಯಂ, ಯಾಮಿನಿ ಕೃಷ್ಣಮೂರ್ತಿ, ರಾಜಾ ರೆಡ್ಡಿ ರಾಧಾ ರೆಡ್ಡಿ ಹಾಗೂ ಶೋಭಾ ನಾಯುಡು, ರಾಷ್ಟ್ರಪತಿಗಳಿಂದ ಪುರಸ್ಕೃತರಾದರು.
  • ಆನಂತರ, ರಾಜಾ ರೆಡ್ಡಿ ರಾಧಾ ರೆಡ್ಡಿಯವರ ಶಿಷ್ಯವೃಂದವು, ಲೋಕಕಲ್ಯಾಣವಾಗಲೆಂದು ದೇವಿಸ್ಮೃತಿಯ ನೃತ್ಯ ನಮನ ಸಲ್ಲಿಸಿತು. ಸಮಾರಂಭದ ಮೊದಲ ದಿನ, ಸರ್ಕಾರವು 25 ಲಕ್ಷ ರೂಪಾಯಿಗಳ ನೆರವು ನೀಡುವುದೆಂದು ಮುಖ್ಯಮಂತ್ರಿ ಕಿರಣ್‌ ರೆಡ್ಡಿ ಘೋಷಿಸಿದ್ದರು.ಕೊನೆಯ ದಿನ, ಅವರು ಈ ಮೊತ್ತದ ಚೆಕ್ಕನ್ನು ಮಾನವ ಸಂಪನ್ಮೂಲ ಖಾತೆಯ ಕೇಂದ್ರೀಯ ರಾಜ್ಯ ಸಚಿವೆ ದಗ್ಗುಬಟಿ ಪುರಂದೇಶ್ವರಿಯವರಿಗೆ ಹಸ್ತಾಂತರಿಸಿದರು.

ಇವನ್ನೂ ನೋಡಿ

[ಬದಲಾಯಿಸಿ]
  • ಘುಂಗುರೂ

ಉಲ್ಲೇಖಗಳು

[ಬದಲಾಯಿಸಿ]
  • ಕೂಚಿಪೂಡಿ ಭಾರತಮ್‌. ರಾಗ-ನೃತ್ಯ ಶ್ರೇಣಿಯಲ್ಲಿ; ಶ್ರೀ ಸದ್ಗುರು ಪಬ್ಲಿಕೇಷನ್ಸ್‌/ಇಂಡಿಯನ್‌ ಬುಕ್ಸ್‌ ಸೆಂಟರ್‌, ನವದೆಹಲಿ, ಭಾರತ

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: