ಭಾರತೀಯ ಶಾಸ್ತ್ರೀಯ ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ನೃತ್ಯ

ನೃತ್ಯವು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಕಲೆಯಾಗಿದೆ.ಭಾರತದಲ್ಲಿನ ನೃತ್ಯಗಳನ್ನು ಮುಖ್ಯವಾಗಿ ಶಾಸ್ತ್ರೀಯ ಹಾಗು ಜನಪದ ನೃತ್ಯ[೧]ಗಳೆಂದು ವಿಂಗಡಿಸಲಾಗಿದೆ.ಭಾರತದ ವಿವಿಧ ಭಾಗಗಳಲ್ಲಿ ಹುಟ್ಟಿಕೊಂಡಿರುವ ಸ್ಥಳೀಯ ಸಂಪ್ರದಾಯಗಳಿಗೆ ಹಾಗು ಅಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ರೀತಿಯ ನೃತ್ಯಗಳು ಅಭಿವೃದ್ಧಿಗೊಂಡಿವೆ.ಭಾರತದಲ್ಲಿನ ಸಂಗೀತ ನಾಟ್ಯ ಅಕಾಡೆಮಿಯು ಎಂಟು ಸಾಂಪ್ರದಾಯಿಕ ನೃತ್ಯಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳಾಗಿ ಗುರುತಿಸಿದೆ.ಶಾಸ್ತ್ರೀಯ ನೃತ್ಯಗಳು ಐತಿಹಾಸಿಕವಾಗಿ ಶಾಲೆ ಅಥವಾ ಗುರು-ಶಿಷ್ಯ ಪರಂಪರೆಯನ್ನು ಒಳಗೊಂಡಿವೆ ಮತ್ತು ಶಾಸ್ತ್ರೀಯ ಪಠ್ಯಗಳು, ದೈಹಿಕ ವ್ಯಾಯಾಮಗಳು ಮತ್ತು ನೃತ್ಯದ ಸಂಗ್ರಹವನ್ನು ಆಧಾರವಾಗಿರುವ ನಾಟಕ ಅಥವಾ ಸಂಯೋಜನೆ, ಗಾಯಕರು ವ್ಯವಸ್ಥಿತವಾಗಿ ಮಾಡಲು ವ್ಯಾಪಕ ತರಬೇತಿಯ ಅಗತ್ಯವಿರುತ್ತದೆ. ಜಾನಪದ ನೃತ್ಯವು ಕೆಲವು ಮೌಖಿಕ ಸಂಪ್ರದಾಯಗಳಲ್ಲಿ ಒಂದಾಗಿದೆ.ಜಾನಪದ ನೃತ್ಯಗಳಲ್ಲಿ ಹಲವಾರು ಶೈಲಿಗಳಿವೆ.ಅವು ಆಯಾ ರಾಜ್ಯ,ಜನಾಂಗ ಅಥವಾ ಭೌಗೋಳಿಕ ಪ್ರದೇಶಗಳ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗುತ್ತವೆ.ನಾಟ್ಯಶಾಸ್ತ್ರವನ್ನು[೨] ಬರೆದವರು ಭರತಮುನಿ.ಅವು ಒಂದು ತಲೆಮಾರಿನಿಂದ ಮುಂದಿನ ಪೀಳಿಗೆಗೆ ಬಾಯಿ ಮಾತು ಮತ್ತು ಪ್ರಾಸಂಗಿಕ ಜಂಟಿ ಅಭ್ಯಾಸದ ಮೂಲಕ ಸಾಗುತ್ತವೆ.

ನೃತ್ಯದ ಮೂಲ[ಬದಲಾಯಿಸಿ]

ಪುರಾಣ, ವೇದಗಳ ಪ್ರಕಾರ ನೃತ್ಯವು ೧೦೦೦ ಬಿ.ಸಿಯಲ್ಲೆ ಹುಟ್ಟಿಕೊಂಡಿದೆ.ಹಿಂದೂ ಪುರಾಣಗಳಲ್ಲಿ, ಶಿವನ ನೃತ್ಯವು ವಿಶ್ವವನ್ನು ಸೃಷ್ಟಿಸುತ್ತದೆ ಮತ್ತು ನಾಶಪಡಿಸುತ್ತದೆ. ಭಾರತದಾದ್ಯಂತ ಅನೇಕ ವಿಭಿನ್ನ ಐತಿಹಾಸಿಕ ಶಿಲ್ಪಗಳು ಎ.ಡಿ. 1000 ಕ್ಕಿಂತ ಮೊದಲು, ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿನ ನೃತ್ಯದ ಮಹತ್ವವನ್ನು ಮತ್ತು ಅದರ ಸಂಪ್ರದಾಯಗಳ ಸಮೃದ್ಧಿಯನ್ನು ವಿವರಿಸುತ್ತದೆ. ನರ್ತಕರ ಅನೇಕ ಶಾಸ್ತ್ರೀಯ ರೂಪಗಳು ಪ್ರಾಚೀನ ಶಿಲ್ಪಗಳನ್ನು ಆಧರಿಸಿವೆ.ಇಂದಿಗೂ ಧಾರ್ಮಿಕ ಆಚರಣೆಗಳಲ್ಲಿ ನಾಟಕ[೩] ಮತ್ತು ನೃತ್ಯಗಳಿಗೆ ಮುಖ್ಯವಾದ ಸ್ಥಾನವಿದೆ.ನೃತ್ಯವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಹಿಂದೂ ದೇವರೊಂದಿಗೆ ಅಥವಾ ರಾಮಾಯಣ ಮತ್ತು ಮಹಾಭಾರತಕಥೆ ಅಥವಾ ಪ್ರಸಂಗದೊಂದಿಗೆ ಸಂಬಂಧ ಹೊಂದಿರುತ್ತದೆ.ಭಾರತೀಯ ನೃತ್ಯದ ಸಿದ್ಧಾಂತಗಳು ಮತ್ತು ತಂತ್ರಗಳು ನಾಟಕದ ಪರಿಕಲ್ಪನೆಯಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ ಮತ್ತು ಈ ಪ್ರತಿಪಾದನೆಗಳ ಪೂರ್ಣ ಪರಿಣಾಮಗಳನ್ನು ಅರಿತುಕೊಳ್ಳದೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದ್ದಂತೆ ಭರತರು ಸೂಕ್ತವಾಗಿ ಮಾಡಿದ್ದಾರೆ.ಭಾರತೀಯ ನೃತ್ಯದ ತಂತ್ರವನ್ನು ನಿಯಂತ್ರಿಸುವ ತತ್ವಗಳು ಹಾಗು ಶಾಸ್ತ್ರೀಯ ನಾಟಕದ ತಂತ್ರಗಳನ್ನು ನಿಯಂತ್ರಿಸುವ ತತ್ವಗಳು ಸಮಾನವಾಗಿರುತ್ತದೆ.

ಶಾಸ್ತ್ರೀಯ ನೃತ್ಯ[ಬದಲಾಯಿಸಿ]

ಭಾರತದ ಶಾಸ್ತ್ರೀಯ ನೃತ್ಯವು ಒಂದು ರೀತಿಯ ನೃತ್ಯ-ನಾಟಕವನ್ನು ಅಭಿವೃದ್ಧಿಪಡಿಸಿದೆ.ನರ್ತಕರು ಸನ್ನೆಗಳ ಮೂಲಕ ಕಥೆಯನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಾರೆ.ಶಾಸ್ತ್ರೀಯ ನೃತ್ಯಗಳು ಹೆಚ್ಚಾಗಿ ಹಿಂದೂ ಪುರಾಣದ ಕಥೆಗಳನ್ನು ತೋರುತ್ತದೆ.ಪ್ರತಿಯೊಂದು ರೂಪವು ಒಂದು ನಿರ್ದಿಷ್ಟ ಪ್ರದೇಶದ ಅಥವಾ ಜನರ ಗುಂಪಿನ ಸಂಸ್ಕೃತಿ ಮತ್ತು ನೀತಿಯನ್ನು ಪ್ರತಿನಿಧಿಸುತ್ತದೆ. ಸಂಗೀತ ನಾಟ್ಯ ಅಕಾಡೆಮಿಯು [೪]ಎಂಟು ಶಾಸ್ತ್ರೀಯ ಶೈಲಿ ನೃತ್ಯಗಳನ್ನು ಗುರುತಿಸಿದೆ.ಅವು ಭರತನಾಟ್ಯ (ತಮಿಳುನಾಡು), ಕಥಕ್ (ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತ),ಕಥಕ್ಕಳಿ (ಕೇರಳ),ಕೂಚಿಪೂಡಿ (ಆಂಧ್ರಪ್ರದೇಶ), ಒಡಿಸ್ಸಿ (ಒಡಿಶಾ), ಮಣಿಪುರಿ (ಮಣಿಪುರ) ), ಮೋಹಿನಿಯಾಟ್ಟಂ (ಕೇರಳ) ಮತ್ತು ಸತ್ರಿಯಾ (ಅಸ್ಸಾಂ).ಶಾಸ್ತ್ರೀಯ ನೃತ್ಯವನ್ನು ಜಾನಪದ ನೃತ್ಯದಿಂದ ಪ್ರತ್ಯೇಕಿಸಲಾಗಿದೆ ಏಕೆಂದರೆ ಇದನ್ನು ನಾಟ್ಯಶಾಸ್ತ್ರದ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು ಎಲ್ಲಾ ಶಾಸ್ತ್ರೀಯ ನೃತ್ಯಗಳು ಅವುಗಳಿಗೆ ಅನುಗುಣವಾಗಿ ನಡೆಯುತ್ತದೆ.

ಭರತನಾಟ್ಯ[ಬದಲಾಯಿಸಿ]

ಭರತನಾಟ್ಯ

ಭರತನಾಟ್ಯವು ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ,ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಾಗಿದೆ.ಇದನ್ನು ಐದನೇ ವೇದ ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ[೫]ವನ್ನು ಒಳಗೊಂಡಿರುತ್ತದೆ.ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದ್ದು,"ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.ಇದು ಸಾಂಪ್ರದಾಯಿಕ ನೃತ್ಯ ಪ್ರಕಾರವಾಗಿದ್ದು, ಅದರ ಅನುಗ್ರಹ, ಶುದ್ಧತೆ, ಮೃದುತ್ವಗಳಿಗೆ ಹೆಸರುವಾಸಿಯಾಗಿದೆ.ಇಂದು ಇದು ಅತ್ಯಂತ ಜನಪ್ರಿಯ ನೃತ್ಯ ಶೈಲಿಗಳಲ್ಲಿ ಒಂದಾಗಿದೆ ಮತ್ತು ಪ್ರಪಂಚದಾದ್ಯಂತ ಅನೇಕ ನೃತ್ಯಗಾರರು ಈ ನೃತ್ಯ ಶೈಲಿಯನ್ನು ಅಭ್ಯಾಸ ಮಾಡುತ್ತಾರೆ.ಭರತನಾಟ್ಯವು ಮೂರು ಮುಖ್ಯ ಅಂಶಗಳನ್ನು[೬] ಒಳಗೊಂಡಿದೆ.ಅವು ನೃತ್ತ (ಲಯಬದ್ಧ ಚಲನೆ) ನಾಟ್ಯ(ನಾಟಕೀಯತೆ) ಮತ್ತು ನೃತ್ಯ[೭] (ನೃತ್ತ ಮತ್ತು ನಾಟ್ಯದ ಸಂಯೋಜನೆ)ತಮಿಳುನಾಡು ವಿಶೇಷವಾಗಿ ತಂಜಾವೂರು, ಯಾವಾಗಲೂ ಕಲಿಕೆ ಮತ್ತು ಸಂಸ್ಕೃತಿಯ ಸ್ಥಾನ ಮತ್ತು ಕೇಂದ್ರವಾಗಿದೆ.

ಪ್ರಾಚೀನ ಕಾಲದಲ್ಲಿ ಭರತ ನಾಟ್ಯವನ್ನು ದೇವಾಲಯಗಳಲ್ಲಿ ದೇವದಾಸಿಯರ ಮೂಲಕ "ಸಾದಿರ್ ಆಟಂ " ಅಂದರೆ ಆಸ್ಥಾನ ನೃತ್ಯವೆಂದು ಮಾಡುತ್ತಿದ್ದರು.ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೆಲ್ ೧೯೩೦ ರಲ್ಲಿ "ಭರತನಾಟ್ಯಂ" ಎಂದು "ಸಾದಿರ್ ಆಟಂ"ನ್ನು ಮರುನಾಮಕರಣ ಮಾಡಿದರು. ವಾಸ್ತವವಾಗಿ, ಹಲವು ಗ್ರಂಥಗಳಲ್ಲಿ ಚಿತ್ರಿಸಲಾಗಿರುವ ಅಪ್ಸರೆಯರು ಸ್ವರ್ಗದಲ್ಲಿ ಮಾಡಿರುವ ನೃತ್ಯದ ಭೂಮಿ ಮೇಲಿನ ಆವೃತ್ತಿ ಎಂದು ಭರತ ನಾಟ್ಯಂ ಎಂದು ಹೇಳಬಹುದು. ಸಂಪ್ರದಾಯದಂತೆ ದೇವಾಲಯದಲ್ಲಿರುವ ದೇವರು ಅಲ್ಲಿಯ ಮುಖ್ಯ ಅತಿಥಿ ಎಂದು ಪರಿಗಣಿಸಲ್ಪಟ್ಟು,ಅವರಿಗೆ ಅರ್ಪಿಸುವ ಹದಿನಾರು ಉಪಚಾರಗಳಲ್ಲಿ ಸಂಗೀತ ಮತ್ತು ನೃತ್ಯವೂ ಒಳಗೊಂಡಿತ್ತು.ಆದುದರಿಂದ,ಕಲಿಯುಗದಲ್ಲಿ ಭಾರತದ ಹೆಚ್ಚಿನ ಎಲ್ಲಾ ನೃತ್ಯ ಹಾಗೂ ಸಂಗೀತ ಪ್ರಕಾರಗಳು ಭಕ್ತಿಯನ್ನಾಧರಿಸಿವೆ.ಭರತನಾಟ್ಯವು ೧೭೯೮-೧೮೨೪ ರಲ್ಲಿ ಮರಾಠ ರಾಜ ಸರಬೋಜಿಯ ಆಸ್ಥಾನದಲ್ಲಿದ್ದ ಚಿನ್ನಯ್ಯ ,ಪೊನ್ನಯ್ಯ ,ಸಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರು ಸಹೋದರರ ಕೊಡುಗೆಯಿಂದ ಈಗಿನ ರೂಪ ಪಡೆದಿದೆ.ಈ ನಾಲ್ವರು ಭರತನಾಟ್ಯದ ಎಲ್ಲ ಅಂಶಗಳನ್ನು ಅಂದರೆ ಅಳರಿಪು, ಜಥಿಸ್ವರಂ, ವರ್ಣಂ, ಶಬ್ದಂ, ಪದಂ ಮತ್ತು ತಿಲ್ಲಾನ ವನ್ನು ರೂಪಿಸಿದರು. ಈ ನಾಲ್ಕು ಸಹೋದರರ ವಂಶಸ್ಥರು ತಂಜಾವೂರುನಲ್ಲಿ ಭರತ ನಾಟ್ಯಂ ನೃತ್ಯ ಶಿಕ್ಷಕರ ಮೂಲ ಪರಂಪರೆ ಬೆಳೆಸಿದರು. ಮೂಲತಃ, ಅವರು ಸ್ವತಃ ಒಂದು ಸಮುದಾಯವಾಗಿ ರೂಪುಗೊಂಡರು ಮತ್ತು ಅವರಲ್ಲಿ ಹೆಚ್ಚಿನವರು ಶೈವ ಪಂಥವನ್ನು ಅನುಸರಿಸುವ ಬ್ರಾಹ್ಮಣರಾಗಿದ್ದರು.ಭರತನಾಟ್ಯವು ತನ್ನದೆ ಆದ ಶೈಲಿಗಳನ್ನು ಹೊಂದಿದೆ. ಅವು:ತಂಜಾವುರು ಶೈಲಿ,ಕಲಾಕ್ಷೇತ್ರ ಶೈಲಿ,ಮೆಲ್ತೂರು ಶೈಲಿ,ಪಂದನಲ್ಲೂರ್ ಶೈಲಿ,ಕಾಂಚೀಪುರಂ ಶೈಲಿ,ಮೈಸೂರು ಶೈಲಿ.

ಕಥಕ್ಕಳಿ[ಬದಲಾಯಿಸಿ]

ಕಥಕ್ಕಳಿ

ಕಥಕ್ಕಳಿ ಹೆಚ್ಚು ಶೈಲೀಕೃತ ಶಾಸ್ತ್ರೀಯ ಭಾರತೀಯ ನೃತ್ಯ ನಾಟಕವಾಗಿದ್ದು, ಅದರ ಆಕರ್ಷಕ ಪಾತ್ರಗಳು, ಅವರ ವಿಸ್ತಾರವಾದ ವೇಷಭೂಷಣಗಳು, ವಿವರವಾದ ಸನ್ನೆಗಳು, ಸಂಗೀತ ಮತ್ತು ಪೂರಕ ತಾಳವಾದ್ಯಕ್ಕೆ ಅನುಗುಣವಾಗಿ ಪ್ರಸ್ತುತಪಡಿಸಿದ ದೇಹದ ಚಲನೆಗಳಿಗೆ ಹೆಸರುವಾಸಿಯಾಗಿದೆ.ಇದು ಕೇರಳದಲ್ಲಿ ಕ್ರಿ.ಶ 17 ನೇ ಶತಮಾನ ಹುಟ್ಟಿಕೊಂಡಿತು.ಕಥಕ್ಕಳಿಯು ಅದಕ್ಕಿಂತ ಮೊದಲಿನ ನೃತ್ಯ-ನಾಟಕ ರೂಪವಾದ ರಾಮನಾಟ್ಟಂನಿಂದ ವ್ಯುತ್ಪನ್ನಗೊಂಡಿತು, ಜೊತೆಗೆ ಕೃಷ್ಣನಾಟ್ಟಂನಿಂದ ಕೆಲವು ತಂತ್ರಗಳನ್ನು ತೆಗೆದುಕೊಂಡಿತು. "ಆಟ್ಟಂ" ಎಂದರೆ ಅಭಿನಯಿಸುವುದು ಎಂದರ್ಥ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಥಕ್ಕಳಿಗೆ ಮೊದಲಿನ ಈ ಎರಡೂ ಸ್ವರೂಪಗಳು ಹಿಂದೂ ದೇವರುಗಳಾದ ರಾಮ ಮತ್ತು ಕೃಷ್ಣನ ಕಥೆಗಳನ್ನು ಪ್ರಸ್ತುತಪಡಿಸುವುದಕ್ಕೆ ಸಂಬಂಧಿಸಿದ್ದವು.ಕಥಕ್ಕಳಿಯು ಕೃಷ್ಣನಾಟ್ಟಂ, ಕೂಡಿಯಾಟ್ಟಂ ಮತ್ತು ಅಷ್ಟಪದಿಯಾಟ್ಟಂ, ಈ ಮೂರು ಕಲೆಗಳೊಂದಿಗೆ ಬಹಳ ಹೋಲಿಕೆಗಳನ್ನು ಹೊಂದಿದೆ. ಸಾಂಪ್ರದಾಯಿಕ ಮತ್ತು ಧಾರ್ಮಿಕವಿಧಿಯ ಕಲಾ ಪ್ರಕಾರಗಳಾದ ಮುಡಿಯೆಟ್ಟು , ತಿಯ್ಯಟ್ಟು , ತೆಯ್ಯಂ ಮತ್ತು ಪದಯನಿ ಇತ್ಯಾದಿಗಳ ಹಲವಾರು ಅಂಶಗಳನ್ನು ಕಥಕ್ಕಳಿಯು ಅಳವಡಿಸಿಕೊಂಡಿದೆ. ಜೊತೆಗೆ ಪೊರಟ್ಟುನಾಟಕಂ ನಂತಹ ಜನಪದ ಕಲೆಗಳಿಂದಲೂ ಕೆಲವು ಅಂಶಗಳನ್ನು ತೆಗೆದುಕೊಂಡಿದೆ.ಸ್ಥಳೀಯ ಭಾಷೆ ಮಲೆಯಾಳಂ, ಕಥಕ್ಕಳಿಯ ಸಾಹಿತ್ಯವು ಸಾಮಾನ್ಯ ಪ್ರೇಕ್ಷಕರಿಗೂ ಚೆನ್ನಾಗಿ ಅರ್ಥವಾಗುವಂತೆ ಮಾಡುವಲ್ಲಿ ಸಹಕರಿಸಿತು.ಲಲಿತ ಕಲೆಗಳ ಐದು ಘಟಕಗಳ ಸಮ್ಮಿಶ್ರಣ ಕಥಕ್ಕಳಿ ಎಂದು ಪರಿಗಣಿಸಲಾಗುತ್ತದೆ: ಅವು ನಾಟ್ಯಂ,ನೃತ್ತಂ,ನೃತ್ಯಂ,ಗೀತ,ವಾದ್ಯಂ.ಪಾರಂಪರಿಕವಾಗಿ ಸುಮಾರು 101 ಶಾಸ್ತ್ರೀಯ ಕಥಕ್ಕಳಿ ಕಥೆಗಳಿವೆ ಎನ್ನಲಾಗಿದೆ. ಆದರೆ ಇಂದಿನ ದಿನಗಳಲ್ಲಿ ಇದರ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಕಥೆಗಳನ್ನು ಸಾಮಾನ್ಯವಾಗಿ ಪ್ರದರ್ಶಿಸಲಾಗುತ್ತದೆ.

ಇವುಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಒಂದು ಇಡೀ ರಾತ್ರಿ ಪ್ರದರ್ಶನಕ್ಕೆಂದೇ ಸಂಯೋಜಿಸಲಾಗಿವೆ.ಕಥಕ್ಕಳಿಯಲ್ಲಿ ಅಭಿನಯಿಸಲಾಗುವ ಕೆಲವು ಜನಪ್ರಿಯ ಕತೆಗಳು ಹೀಗಿವೆ : ನಳಚರಿತಂ,ದುರ್ಯೋಧನ ವಧಂ, ಕಲ್ಯಾಣಸೌಗಂಧಿಕಂ, ಕೀಚಕವಧಂ[೮],ಕಿರಾತಂ, ಕರ್ಣಶಪಥಂ ಮತ್ತು ಭದ್ರಕಾಳಿವಿಜಯಂ. ಜೊತೆಗೆ ಆಗಾಗ ಪ್ರದರ್ಶಿತಗೊಳ್ಳುವ ಇನ್ನೊಂದಿಷ್ಟು ಕತೆಗಳು ಹೀಗಿವೆ; ಬಾಲಿವಿಜಯಂ , ದಕ್ಷಯಾಗಂ[೯], ರುಕ್ಮಿಣೀಸ್ವಯವರಂ, ಕಾಳಕೇಯವಧಂ[೧೦],ಪೂತನಮೋಕ್ಷ್ಮಂ, ಸುಭದ್ರಾಹರಣಂ,ನರಕಾಸುರವಧಂ,ಹರಿಶ್ಚಂದ್ರಚರಿತಂ, ಕಚ-ದೇವಯಾನಿ ಮತ್ತು ಕಂಸವಧಂ.ಕಥಕ್ಕಳಿಗೆ ಬಳಸುವ ಹಾಡುಗಳ ಭಾಷೆಯು ಮಣಿಪ್ರವಲಂ ಆಗಿದೆ.ಪಾರಂಪರಿಕವಾಗಿ, ಕಥಕ್ಕಳಿ ಪ್ರದರ್ಶನವನ್ನು ಸಾಮಾನ್ಯವಾಗಿ ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ನಡೆಸಲಾಗುತ್ತದೆ.ಕೇರಳದ ಕೆಲವು ಪ್ರದೇಶಗಳು ಅನೇಕ ವರ್ಷಗಳವರೆಗೆ ಹಲವಾರು ಕಥಕ್ಕಳಿ ಕಲಾವಿದರಿಗೆ ಜನ್ಮ ನೀಡಿವೆ. ಇವುಗಳನ್ನು ಕಥಕ್ಕಳಿ ಹಳ್ಳಿಗಳೆಂದು ಕರೆಯಬಹುದಾಗಿದೆ,ಅವುಗಳಲ್ಲಿ ಕೆಲವು ಹಳ್ಳಿಗಳು:ಕರಲ್‌ಮಣ್ಣ, ಚೆರ್ಪುಲಸ್ಸೆರಿ, ಕೊಥಚಿರ, ಪೆರಿಂಗೋಡ್,ಒಟ್ಟಪಾಲಂ,ವಜೆಂಕಡ[೧೧],ಗುರುವಾಯೂರ್[೧೨],ಜೊತೆಗೆ ದಕ್ಷಿಣ ಟ್ರಾವಂಕೋರ್‌ನಲ್ಲಿ ತಿರುವನಂತಪುರಂ ಮತ್ತು ಉತ್ತರ ಮಲಬಾರ್‌ನ ಪಯ್ಯನ್ನೂರ್.

ಕೂಚಿಪೂಡಿ[ಬದಲಾಯಿಸಿ]

ಕೂಚಿಪೂಡಿ

ಕೂಚಿಪೂಡಿ ಆಂಧ್ರಪ್ರದೇಶ ರಾಜ್ಯದ ಶಾಸ್ತ್ರೀಯ ನೃತ್ಯರೂಪವಾಗಿದೆ.ಕೂಚಿಪೂಡಿ ಎಂಬುದು ಆಂಧ್ರಪ್ರದೇಶದ ಹಾಗು ಬಂಗಾಳ ಕೊಲ್ಲಿ ತೀರದಲ್ಲಿರುವ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿರುವ ಗ್ರಾಮವೊಂದರ ಹೆಸರು. ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಸಮುದಾಯವು ಈ ನೃತ್ಯಕಲಾರೂಪವನ್ನು ಅಭ್ಯಸಿಸುತ್ತಿದ್ದರಿಂದ, ಇದಕ್ಕೆ 'ಕೂಚಿಪೂಡಿ ನೃತ್ಯ' ಎನ್ನುವುದು ರೂಢಿಯಾಯಿತು.ನೃತ್ಯಕ್ಕೆ ಹಿನ್ನೆಲೆಯಲ್ಲಿ ಮಾದರಿಯಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಲಾಗುತ್ತದೆ.ಈ ನೃತ್ಯಕ್ಕೆ ಮೃದಂಗ,ಪಿಟೀಲು ಮತ್ತು ಕೊಳಲುವಾದ್ಯಗಳ ಬೆಂಬಲವಿರುತ್ತದೆ. ಕೂಚಿಪೂಡಿ ನೃತ್ಯಗಳಲ್ಲಿ ಚಲನವಲನಗಳು ವೇಗದ ಗತಿಯಲ್ಲಿರುತ್ತವೆ.ಈ ನೃತ್ಯವು ಭರತನಾಟ್ಯದೊಂದಿಗೆ ಹಲವು ಅಂಶಗಳನ್ನು ಹಂಚಿಕೊಂಡಿದೆ.ಕೂಚಿಪೂಡಿ ಏಕ-ಪ್ರದರ್ಶನದ ಹಾಡುಗಳಲ್ಲಿ ಜತಿಸ್ವರಮ್‌ ಮತ್ತು ತಿಲ್ಲಾನ ಸೇರಿರುತ್ತವೆ, ನೃತ್ಯಗಳಲ್ಲಿ ಭಕ್ತರೊಬ್ಬರು ದೇವರೊಂದಿಗೆ ಒಂದಾಗುವ ಹಂಬಲವನ್ನು ನಿರೂಪಿಸುವ ಹಲವು ಗೀತರಚನೆಗಳಿರುತ್ತವೆ. ವಿಶಿಷ್ಟವಾಗಿ, ಕೂಚಿಪೂಡಿಯಲ್ಲಿ 'ತರಂಗಂ' ಎಂಬುದಿದೆ. ಇದರಲ್ಲಿ ನರ್ತಿಸುವವರು ಹಿತ್ತಾಳೆಯ ತಟ್ಟೆಯ ಎತ್ತರದ ಅಂಚುಗಳ ಮೇಲೆ ಕಾಲಿಟ್ಟುಕೊಂಡು ನರ್ತಿಸಬೇಕಿದೆ. ನರ್ತಿಸುವವರು ಆಯ ತಪ್ಪದೆ ಬಹಳ ಕುಶಲತೆಯಿಂದ ತಟ್ಟೆಯನ್ನು ಚಲಿಸುವಂತೆ ಮಾಡುವರು.ಇಂತಹ ನೃತ್ಯ ಮಾಡುವಾಗ ಅವರ ಹಸ್ತಗಳಲ್ಲಿ ತೈಲ-ದೀಪ ಹಚ್ಚಿದ ಎರಡು ಹಣತೆಗಳು ಹಾಗೂ, ತಲೆಯ ಮೇಲೆ ನೀರು ತುಂಬಿರುವ ಚಿಕ್ಕ ಪಾತ್ರೆಗಳು ಇರುತ್ತದೆ.ನೃತ್ಯದ ಅಂತ್ಯದಲ್ಲಿ, ನೃತ್ಯಕಲಾವಿದರು ತೈಲ ದೀಪಗಳನ್ನು ಆರಿಸಿ, ತಲೆಯ ಮೇಲಿದ್ದ ಪಾತ್ರೆಯ ನೀರಿನಿಂದಲೇ ತಮ್ಮ ಕೈ ತೊಳೆದುಕೊಳ್ಳುವರು.

ಕೂಚಿಪೂಡಿಯ ಹಾಡುಗಳನ್ನು ನೃತ್ಯಕಲಾವಿದರು ಆಕರ್ಷಿಸುವಂತಹ ಹಾವಭಾವಗಳು, ತ್ವರಿತ ನೋಟಗಳು ಮತ್ತು ಮುಖದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ತತ್ ಕ್ಷಣವೇ ವಿವಿಧ ಭಾವುಕತೆ-ರಸಗಳನ್ನು ನಿರೂಪಿಸುತ್ತಾರೆ. ಈ ನೃತ್ಯದ ಹಿನ್ನೆಲೆಯ ಹಾಡು ಚಿರಪರಿಚಿತ ಕೃಷ್ಣ ಲೀಲಾ ತರಂಗಿಣಿಯಿಂದ ಆಯ್ದುಕೊಳ್ಳಲಾಗಿದೆ. ಈ ಪಠ್ಯವು ಶ್ರೀಕೃಷ್ಣನ ಅವತಾರ ಮತ್ತು ಜೀವನ-ಸಾಧನೆಗಳನ್ನು ತಿಳಿಸುತ್ತದೆ.ಹಾವಭಾವಗಳುಳ್ಳ ನೃತ್ಯಗಳಲ್ಲಿ, ಭಾಮ ಕಲಾಪಂ ನೃತ್ಯ-ನಾಟಕದಲ್ಲಿ ಸತ್ಯಭಾಮಾಳ[೧೩] ಪಾತ್ರವನ್ನು ನೃತ್ಯಕಲಾವಿದರು ಕೆಲವೊಮ್ಮೆ ನಿರೂಪಿಸುತ್ತಾರೆ. ಸತ್ಯಭಾಮಾ ಪ್ರೀತಿ-ಪ್ರೇಮದ ವಿವಿಧ ಹಂತಗಳಲ್ಲಿ ಹಾದುಹೋಗುತ್ತಾಳೆ. ಶ್ರೀಕೃಷ್ಣನಿಂದ ಅಗಲಿದಾಗ, ಆಕೆ ಆತನೊಂದಿಗಿನ ಆನಂದದ ದಿನಗಳನ್ನು ನೆನಪು ಮಾಡಿಕೊಂಡು ಅವನಿಗಾಗಿ ಹಂಬಲಿಸುತ್ತಾಳೆ.ಕಡೆಗೆ, ಆಕೆಯು ಕೃಷ್ಣನಿಗೆ ಪತ್ರವೊಂದನ್ನು ಕಳುಹಿಸಿದಾಗ ಕೃಷ್ಣ-ಸತ್ಯಭಾಮರು ಒಂದಾಗುತ್ತಾರೆ. ಕೂಚಿಪೂಡಿ ಪರಿಚತ ಕಲಾಸಂಗ್ರಹದಿಂದ ಕೃಷ್ಣ ಶಬ್ದಂ ಎಂಬ ಇನ್ನೊಂದು ಹಾಡು ಉಲ್ಲೇಖನೀಯ. ಇದರಲ್ಲಿ ಹಾಲು ಮಾರುವ ಮಹಿಳೆಯು ಕೃಷ್ಣನನ್ನು ವಿವಿಧ ರೀತಿಯಾಗಿ ಆಮಂತ್ರಿಸುತ್ತಾಳೆ. ಇದರಲ್ಲಿ ನೃತ್ಯಕಲಾವಿದರು ಮಹಿಳೆಯ ಆಕರ್ಷಣೆಯನ್ನು ನಿರೂಪಿಸುತ್ತಾರೆ.

ಒಡಿಸ್ಸಿ[ಬದಲಾಯಿಸಿ]

ಒಡಿಸ್ಸಿ

೧೯೫೦ರ ಉತ್ತರಾರ್ಧದಲ್ಲಿ ಇಂದಿನ ಒಡಿಸ್ಸಿ[೧೪] ಶೈಲಿಯ ನೃತ್ಯವು ಅಸ್ತಿತ್ವಕ್ಕೆ ಬಂದಿತು.ಭುವನೇಶ್ವರ ದೇವಾಲಯಗಳಲ್ಲಿನ ನೃತ್ಯ ಶಿಲ್ಪಗಳಲ್ಲಿ ಕಂಡುಬರುವಂತೆ ನೃತ್ಯದ ಶ್ರೀಮಂತ ಪರಂಪರೆಯನ್ನು ಕಾಣಬಹುದು.ಅನೇಕ ಐತಿಹಾಸಿಕ ಶಾಸನಗಳು, ನೃತ್ಯ ಮತ್ತು ಸಂಗೀತದಲ್ಲಿ ತರಬೇತಿ ಪಡೆದ ದೇವದಾಸಿಯರನ್ನ ಪುರಿಯಲ್ಲಿನ ಜಗನ್ನಾಥ ದೇವಸ್ಥಾನಕ್ಕೆ[೧೫] ಸಮರ್ಪಿಸಲಾಗಿದೆ ಎಂದು ತೋರಿಸುತ್ತದೆ.ಮಹಾರಿಗಳು ಒರಿಯಾ ದೇವದಾಸಿಗಳು.ಅವರು ವಿಶೇಷವಾಗಿ ಜಯದೇವ್ ಅವರ ಗೀತಾ ಗೋವಿಂದ[೧೬] ಸಾಹಿತ್ಯವನ್ನು ಆಧರಿಸಿ ನೃತ್ಯ ಸನ್ನಿವೇಶಗಳನ್ನು ಪ್ರದರ್ಶಿಸಿದರು.

ಒಡಿಸ್ಸಿಯ ಮೂರು ಪ್ರಾಥಮಿಕ ನೃತ್ಯ ಸ್ಥಾನಗಳು:ಸಮಾಭಂಗ - ಚದರ ಸ್ಥಾನ,ಎರಡು ಕಾಲುಗಳ ಮೇಲೆ ತೂಕವನ್ನು ಸಮಾನವಾಗಿ ಇರಿಸಿ, ಬೆನ್ನುಮೂಳೆಯ ನೇರ, ಮೊಣಕೈಯಿಂದ ಬಾಗಿದ ತೋಳುಗಳು.ಅಭಂಗಾ - ಆಳವಾದ ಕಾಲು ಬಾಗುವುದರಿಂದ ದೇಹದ ತೂಕವು ಅಕ್ಕಪಕ್ಕಕ್ಕೆ ಬದಲಾಗುತ್ತದೆ, ಆದರೆ ಕಾಲು ಮತ್ತು ಮೊಣಕಾಲುಗಳನ್ನು ಹೊರಕ್ಕೆ ತಿರುಗಿಸಲಾಗುತ್ತದೆ ಮತ್ತು ಒಂದು ಸೊಂಟವು ಪಕ್ಕಕ್ಕೆ ವಿಸ್ತರಿಸುತ್ತದೆ.ತ್ರಿಭಂಗ - ದೇಹದ ಎಸ್-ಆಕಾರದ ಮೂರು ಪಟ್ಟು ಬಾಗುವುದು, ಮುಂಡವು ಒಂದು ದಿಕ್ಕಿನಲ್ಲಿ ತಿರುಗುತ್ತದೆ ಮತ್ತು ತಲೆ ಮತ್ತು ಸೊಂಟ ಮುಂಡದ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ.ಹಸ್ತಾಗಳೆಂದರೆ ಕೈ ಸೂಚಕಗಳು, ಇವುಗಳನ್ನು ನಿರ್ದಿಷ್ಟ ಕ್ರಿಯೆಯ ಅರ್ಥವನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ.ಭಾರತದ ಎಲ್ಲಾ ಶಾಸ್ತ್ರೀಯ ನೃತ್ಯಗಳಂತೆ, ಒಡಿಸ್ಸಿಯ ಉದ್ದೇಶವು ಕಥೆಯಲ್ಲಿನ ಭಾವನೆಗಳು, ಮನಸ್ಥಿತಿ ಮತ್ತು ಆಂತರಿಕ ಭಾವನೆಗಳನ್ನು ಸೂಕ್ತವಾದ ಕೈ ಮತ್ತು ಮುಖದ ಸನ್ನೆಗಳ ಮೂಲಕ ತಿಳಿಸುವುದು. ಆಧುನಿಕ ಒಡಿಸ್ಸಿ ನೃತ್ಯದಲ್ಲಿ 63 ಹಸ್ತಾಗಳಿವೆ.ಅವುಗಾಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ:ಅಸಮ್ಯಕ್ತ ಹಸ್ತ, ಸಂಯುಕ್ತಾ ಹಸ್ತ, ನೃತ್ಯ ಹಸ್ತ.ಒಡಿಸ್ಸಿ ನೃತ್ಯವು ಒಡಿಸ್ಸಿ ಸಂಗೀತದೊಂದಿಗೆ ಕೂಡಿರುತ್ತದೆ.ಮುಖ್ಯವಾದ ಒಡಿಸ್ಸಿ ರಾಗಗಳು[೧೭] ಕಲ್ಯಾಣ, ನಾಟಾ, ಶ್ರೀ ಗೌಡ, ಬರಾಡಿ, ಪಂಚಮಾ, ಧನಶ್ರೀ, ಕರ್ನಾಟಾ, ಭೈರವೀ ಮತ್ತು ಶೋಕಬರಡಿ.

ಮೋಹಿನಿಯಾಟ್ಟಂ[ಬದಲಾಯಿಸಿ]

ಮೋಹಿನಿಯಾಟ್ಟಂ

ಮೋಹಿನಿಯಾಟ್ಟಂ ಕೇರಳ ಮೂಲದ ಸಾಂಪ್ರದಾಯಿಕ ದಕ್ಷಿಣ ಭಾರತೀಯ ನೃತ್ಯ ಶೈಲಿ. ಮಹಿಳೆಯರು ಒಂಟಿಯಾಗಿ ಪ್ರದರ್ಶಿಸುವ ಬಹಳ ಸುಲಲಿತ ನೃತ್ಯವಿದು. ಮೋಹಿನಿಯಾಟ್ಟಂ ಎಂಬ ಪದವು, 'ಮೋಹಿನಿ' ಎಂದರೆ ನೋಡುಗರನ್ನು ಮರುಳಾಗಿಸುವ ಮಹಿಳೆ ಹಾಗೂ 'ಆಟಂ' ಎಂದರೆ ಸುಲಲಿತ ಹಾಗೂ ಅಪ್ಯಾಯಮಾನವಾದ ಶಾರೀರಿಕ ಚಲನವಲನಗಳು ಎಂಬ ಎರಡು ಪದಗಳ ಸಂಯೋಗದಿಂದ ಮೂಡಿಬಂದಿದೆ. ಮೋಹಿನಿಯಾಟ್ಟಂ ಎಂಬುದು ಮೋಹಿನಿಯ ನೃತ್ಯ ಎಂದರ್ಥ ನೀಡುತ್ತದೆ. ಶ್ರೀವಿಷ್ಣು ಮೋಹಿನಿಯ ವೇಷದಲ್ಲಿದ್ದ ಬಗ್ಗೆ ಎರಡು ಕಥೆಗಳಿವೆ. ಒಂದು ಕಥೆಯಲ್ಲಿ, ದೇವತೆಗಳು-ಅಸುರರು ಕ್ಷೀರಸಾಗರ ಮಥನ ಮಾಡಿ ಅಮೃತವನ್ನು ತೆಗೆದ ನಂತರ, ಅಸುರರನ್ನು ಅಮೃತದಿಂದ ದೂರವಿಡಲು ವಿಷ್ಣು ಮೋಹಿನಿಯ ವೇಷದಲ್ಲಿ ಗೋಚರಿಸುವನು.ಎರಡನೆಯ ಕಥೆಯಲ್ಲಿ, ಭಸ್ಮಾಸುರನೆಂಬ ರಾಕ್ಷಸನಿಂದ ಶಿವನನ್ನು ರಕ್ಷಿಸಲು ವಿಷ್ಣು ಮೋಹಿನಿಯ ರೂಪದಲ್ಲಿ ಗೋಚರಿಸುವನು. ವಿಷ್ಣುವಿನ ಅವತಾರವನ್ನು ಮೂಲವಾಗಿಟ್ಟುಕೊಂಡು ಮೋಹಿನಿಯಾಟ್ಟಂ ಎಂಬ ಹೆಸರು ಬಳಕೆಯಾಗಿದ್ದರೂ, ವಿಷ್ಣು ಅಥವಾ ಕೃಷ್ಣ ದೇವರನ್ನು ನೆಚ್ಚಿ ನಮನ ಸಲ್ಲಿಸುವುದು ಈ ನೃತ್ಯದ ಧ್ಯೇಯವಾಗಿದೆ.

ದೇವದಾಸಿಗಳು ದೇವಾಲಯಗಳಲ್ಲಿ ಈ ನೃತ್ಯ ಮಾಡುತ್ತಿದ್ದರು. ಆದರೂ ಈ ನೃತ್ಯದಲ್ಲಿ ಕೂತು ಮತ್ತು ಕೊಟ್ಟಿಯಾಟಂನ ಅಂಶಗಳಿವೆ. ಮೋಹಿನಿಯಾಟ್ಟಂ ಎಂಬುದು ನೃತ್ಯ ಮತ್ತು ಪದ್ಯ-ಪಂಕ್ತಿಗಳುಳ್ಳ ನಾಟಕ.ಇದು ಭಾರತದ ಅತ್ಯಂತ ಭಾವಗೀತಾತ್ಮಕ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ.ಮೋಹಿನಿಯಾಟ್ಟಂನ ಹಾಡುಗಾರಿಕೆಯ ಸಂಗೀತವು ಲಯಬದ್ಧ ರಚನೆಗಳಲ್ಲಿ ವಿಭಿನ್ನತೆಗಳನ್ನು ಒಳಗೊಂಡಿದೆ. ಈ ನೃತ್ಯದ ಗೀತೆಗಳು ಮಣಿಪ್ರವಾಳಂ ಭಾಷೆಯಲ್ಲಿವೆ.ಈ ನೃತ್ಯ ಪ್ರದರ್ಶಿಸುತ್ತಿರುವ ನೃತ್ಯಕಲಾವಿದೆಯು ಸುಲಲಿತ ಮುದ್ರಗಳು ಮತ್ತು ಹೆಜ್ಜೆಗಳೊಂದಿಗೆ ನೃತ್ಯ ಮಾಡುವರು. ನೃತ್ಯ ಕಲಾವಿದೆಯು ಅತಿಯಾಗಿ ಮೋಹಗೊಳಿಸದೆ, ಸೌಮ್ಯ ಹಾಗೂ ಅಪ್ಯಾಯಮಾನ ರೀತಿಯಲ್ಲಿ ತಮ್ಮ ಕಣ್ಣುಗಳ ಮೂಲಕ ನೃತ್ಯದ ಹಾವಭಾವಗಳನ್ನು ಪ್ರದರ್ಶಿಸುವರು.

ಕಥಕ್[ಬದಲಾಯಿಸಿ]

ಭಾರತೀಯ ಶಾಸ್ತ್ರೀಯ ನೃತ್ಯದ ಎಂಟು ಪ್ರಮುಖ ಪ್ರಕಾರಗಳಲ್ಲಿ ಕಥಕ್ ನೃತ್ಯವು ಸಹ ಒಂದು.ಕಥಕ್ ಎಂಬ ಪದವನ್ನು ಕಥಾ(ಕಥೆ ಎಂದರ್ಥ) ಎಂಬ ಸಂಸ್ಕೃತ ಪದದಿಂದ ಆರಿಸಲಾಗಿದೆ ಮತ್ತು ಕಥಕರ್ ಎಂದರೆ "ಒಂದು ಕಥೆಯನ್ನು ಹೇಳುವವನು" ಅಥವಾ "ಕಥೆಗಳೊಂದಿಗೆ ಮಾಡುವುದು".ಕಥಕ್ ನರ್ತಕರು ತಮ್ಮ ಕೈ ಚಲನೆ ಮತ್ತು ಹೆಜ್ಜೆಗುರುತುಗಳ ಮೂಲಕ ಹಾಗು ಮುಖ್ಯವಾಗಿ ಮುಖದ ಅಭಿವ್ಯಕ್ತಿಗಳ ಮೂಲಕ ವಿವಿಧ ಕಥೆಗಳನ್ನು ಹೇಳುತ್ತಾರೆ.ನೃತ್ಯದ ಮುಖ್ಯ ಗಮನವು ಕಣ್ಣುಗಳು ಮತ್ತು ಕಾಲು ಚಲನೆಗಳು ಆಗುತ್ತದೆ. ಹುಬ್ಬುಗಳಿಂದ ನರ್ತಕರು ವಿವಿಧ ಮುಖಭಾವಗಳನ್ನು ನೀಡುತ್ತಾರೆ.ಕಥಕ್ ಮುಖ್ಯವಾಗಿ ಉತ್ತರ ಪ್ರದೇಶದ ರಾಜ್ಯಕ್ಕೆ ಸೇರಿರುವುದಾಗಿದೆ.

ಭಕ್ತಿ ಚಳವಳಿಯ ಸಮಯದಲ್ಲಿ ಕಥಕ್ ನೃತ್ಯ ಮುಖ್ಯವಾಗಿ ಕೃಷ್ಣ ಅವನ ಪ್ರೇಮಿ ರಾಧಾ[೧೮] ಮತ್ತು ಗೋಪಿಗಳ ಮೇಲಿ ಕುರಿತಿದ್ದವು.ರಾಧಾ ಮತ್ತು ಕೃಷ್ಣರ ನಡುವಿನ ಪ್ರೀತಿಯು ಆತ್ಮ ಮತ್ತು ಸರ್ವೋಚ್ಚ ಮೂಲದ ನಡುವಿನ ಪ್ರೀತಿಯ ಸಂಕೇತವಾಗಿ ಮಾರ್ಪಟ್ಟಿತು.ಭರತನಾಟ್ಯದಲ್ಲಿದ್ದಂತೆ ಕಥಕ್ನಲ್ಲಿಯೂ ನೃತ್ತ, ನೃತ್ಯ ಮತ್ತು ನಾಟ್ಯಗಳೆಂಬ ವಿಭಾಗಗಳಿವೆ.ಮೊಟ್ಟ ಮೊದಲು ಆಹ್ವಾನ,ನಂತರ ನೃತ್ತ ಬರುತ್ತದೆ. ನೃತ್ತವೆಂದರೆ ಭಾವರಹಿತವಾದ, ತಾಳಲಯ ವೈಚಿತ್ರ್ಯವನ್ನು ತೋರ್ಪಡಿಸುವ ಕ್ರಮ.ನಂತರ ಭಾಗವಾದ ನೃತ್ಯದಲ್ಲಿ ನಿಧಾನ ಮತ್ತು ಅಭಿವ್ಯಕ್ತಿಶೀಲ ಅಂಶವಿದ್ದು, ಭಾವನೆಗಳನ್ನು,ಆಧ್ಯಾತ್ಮಿಕ ವಿಷಯಗಳೊಂದಿಗೆ ಸಂವಹನ ಮಾಡಲು ಪ್ರಯತ್ನಿಸುತ್ತದೆ.ಕಥಕ್ ನೃತ್ಯದಲ್ಲಿ ಸಾಮಾನ್ಯವಾಗಿ ಬಳಸುವ ವಾದ್ಯಗಳೆಂದರೆ ತಬಲ, ಸರಂಗಿ ಅಥವಾ ಹಾರ್ಮೋನಿಯಂನೊಂದಿಗೆ ಮಂಜೀರಾ[೧೯] ಮುಂತಾದ ವಾದ್ಯಗಳನ್ನು ಉಪಯೋಗಿಸುತ್ತಾರೆ.

ಮಣಿಪುರಿ[ಬದಲಾಯಿಸಿ]

ಮಣಿಪುರಿ

ಮಣಿಪುರಿ ನೃತ್ಯವನ್ನು ಜಾಗೊಯ್ ಎಂದು ಸಹ ಕರೆಯುವರು.ಮಣಿಪುರಿಯನ್ನು ನೃತ್ಯವನ್ನು ಒಮ್ಮೆಗೇ ಹಳೆಯದು ಮತ್ತು ಶಾಸ್ತ್ರೀಯ ನೃತ್ಯಗಳಲ್ಲಿ ಕಿರಿಯವಾದ ಪ್ರಕಾರವೆಂದು ವಿವರಿಸಬಹುದು.ಈ ನೃತ್ಯವು ಮಣಿಪುರ ರಾಜ್ಯದಲ್ಲಿ ಹುಟ್ಟಿರುತ್ತದೆ.ಇದು ವಿಶೇಷವಾಗಿ ಹಿಂದೂ-ವೈಷ್ಣವ ಧರ್ಮ ವಿಷಯಗಳಿಗೆ ಹೆಸರುವಾಸಿಯಾಗಿದೆ ಹಾಗು ರಾಧಾ ಕೃಷ್ಣರ ರಾಸಲೀಲೆಗಳು ಹೆಚ್ಚಾಗಿ ಪ್ರದರ್ಶಿಸಲಾಗುತ್ತದೆ.ಮಣಿಪುರಿ ನೃತ್ಯವು ತಂಡದ ಪ್ರದರ್ಶನವಾಗಿದ್ದು,ತನ್ನದೇ ಆದ ವಿಶಿಷ್ಟ ವೇಷಭೂಷಣಗಳನ್ನು ಮುಖ್ಯವಾಗಿ ಕುಮಿಲ್, ಸೌಂದರ್ಯಶಾಸ್ತ್ರ, ಸಂಪ್ರದಾಯಗಳನ್ನು ಹೊಂದಿದೆ ಮತ್ತು ವೈವಿಧ್ಯತೆಗಳ ತಂಡದ ಸಾಧನೆಯಾಗಿದೆ. ಮಣಿಪುರಿ ನೃತ್ಯ ನಾಟಕದಲ್ಲಿ, ಬಹುತೇಕ ಭಾಗವು ಆಕರ್ಷಕವಾಗಿರುವುದು ಕೈ ಮೇಲೆ ಹೆಚ್ಚಿನ ಒತ್ತು ನೀಡುವ ತಿರುವುಮುರುವುಗಳುಳ್ಳ ಮತ್ತು ದೇಹದ ಮೇಲ್ಭಾಗದ ಸನ್ನೆಗಳ ಒಂದು ಪ್ರದರ್ಶನ ಎಂದು ಗುರುತಿಸಲಾಗಿದೆ.

ಮಣಿಪುರಿ ನೃತ್ಯವು ಧಾರ್ಮಿಕ ಕಲೆ.ಈ ಪ್ರದರ್ಶನ ಕಲೆಯ ಅಂಶಗಳು ಹಿಂದೂ ಹಬ್ಬಗಳ ಆಚರಣೆಯ ಸಮಯಗಳಲ್ಲಿ ಮತ್ತು ಮಣಿಪುರಿ ಜನರ ಮದುವೆ ಸಮಯಗಳಲ್ಲಿ ಪ್ರದರ್ಶಿಸಲಗುತ್ತದೆ.ನೃತ್ಯ ನಾಟಕವು ' ವೈಷ್ಣವಿತೆ ಪಡವಾಲಿಸ್' ಕಥೆಗಳ ನೃತ್ಯ ಸಂಯೋಜನೆಯನ್ನು ಹಂಚಿಕೊಂಡಿದೆ.ಮಣಿಪುರಿಯಲ್ಲಿ ಬಳಸಲಾಗುವ ಸಾಹಿತ್ಯವು ಸಾಮಾನ್ಯವಾಗಿ ಜಯದೇವ, ವಿದ್ಯಾಪತಿ, ಚಂಡಿದಾಸ್, ಗೋವಿಂದದಾಸ್ ಅಥವಾ ಜ್ಞಾನಂದರ ಶಾಸ್ತ್ರೀಯ ಕಾವ್ಯಗಳಿಂದ ಬಂದಿರುವುದಾಗಿದೆ ಮತ್ತು ಸಂಸ್ಕೃತ, ಮೈಥಿಲಿ, ಬ್ರಿಜ್ ಭಾಷಾ ಅಥವಾ ಇತರವುಗಳಲ್ಲಿರಬಹುದಾಗಿದೆ.ಮಣಿಪುರಿ ರಾಸ್ ಲೀಲಾವನ್ನು ತಾಲ್ ರಸಕ್, ದಂಡ ರಸಾಕ್ ಮತ್ತು ಮಂಡಲ್ ರಸಕ್ ಎಂಬ ಮೂರು ಶೈಲಿಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಸತ್ರಿಯಾ[ಬದಲಾಯಿಸಿ]

ಸತ್ರಿಯಾ

ಸತ್ರಿಯಾ ನೃತ್ಯವು ಅಸ್ಸಾಂನಲ್ಲಿ ಹುಟ್ಟಿಕೊಂಡಿದೆ.ಸ್ವಲ್ಪ ದಿನಗಳ ಹಿಂದೆ ಇತರ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲಾಯಿತು, ಆದರೆ ಸತ್ರಿಯಾ ಮಾತ್ರ ಅಸ್ಸಾಮಿ ವೈಷ್ಣವ ಸಂತರಾದ ಶ್ರೀಮಂತ ಶಂಕರ್ ದೇವಾ ೧೫ನೇ ಶತಮಾನದಲ್ಲಿ ಅಸ್ಸಾಂನಲ್ಲಿ ಇದನ್ನು ಸೃಷ್ಟಿಸಿದಾಗ,ಅದು ಹೇಗೆ ಇತ್ತೂ ಹಾಗೇಯೇ ಉಳಿದುಕೊಂಡಿದೆ.ಪ್ರಾಚೀನ ಗ್ರಂಥಗಳನ್ನು ಬಳಸಿಕೊಂಡು ಶಂಕರದೇವನು ಕೃಷ್ಣನ ಭಾವನಾತ್ಮಕ ಭಕ್ತಿಗಾಗಿ ಸಮುದಾಯ ಧಾರ್ಮಿಕ ಕಲೆಯ ಒಂದು ರೂಪವಾಗಿ ನಾಟಕ ಮತ್ತು ಅಭಿವ್ಯಕ್ತಿಶೀಲ ನೃತ್ಯವನ್ನು ಪರಿಚಯಿಸಿದನು.ಪೌರಾಣಿಕ ಕಥೆಗಳು ಸತ್ರಿಯಾ ನೃತ್ಯದ ತಿರುಳಾಗಿವೆ. ಇದು ಪೌರಾಣಿಕ ಭೋಧನೆಗಳನ್ನು ಜನರಿಗೆ ಮನುಮುಟ್ಟುವಂತೆ ಮತ್ತು ಸುಲಭವಾಗಿ ಅರ್ಥವಾಗುವಂತೆ ಪ್ರದರ್ಶಿಸುವ ಕಲಾತ್ಮಕ ರೀತಿಯಾಗಿದೆ.ಸತ್ರಿಯಾವನ್ನು ಭೂಕೋಟ್ಗಳು (ಪುರುಷ ಸನ್ಯಾಸಿಗಳು) ಮಾತ್ರ ವಿಹಾರಗಳಲ್ಲಿ ಪ್ರದರ್ಶಿಸಬಹುದಾಗಿದೆ.

ಸತ್ರಿಯಾ ನೃತ್ಯವನ್ನು ಅನೇಕ ಪ್ರಕಾರಗಳಲ್ಲಿ ವಿಂಗಡಿಸಲಾಗಿದ್ದು, ಅವುಗಳಲ್ಲಿ ಕೆಲವು: ಅಪ್ಸರಾ ನೃತ್ಯ, ದಶವತಾರ ನೃತ್ಯ, ರಾಸ ನೃತ್ಯ , ರಾಜ್ ಘರಿಯಾಚಾಲಿ ನೃತ್ಯ , ಗೊಸಾಯಿ ಪ್ರಬೇಶ್, ಬಾರ್ ಪ್ರಬೇಷ್, ಗೋಪಿ ಪ್ರಬೇಷ್ , ಜುಮುರಾ , ನಡು ಭಂಗಿ ಮತ್ತು ಸೂತ್ರಧಾರ.ಈ ಸಾಂಪ್ರದಾಯಿಕ ಪ್ರದರ್ಶನಕ್ಕೆ ಜೊತೆಗೂಡುವಂತಹ ವಾದ್ಯಗಳೆಂದರೆ:ಖೊಲ್ಸ್, ತಾಳಗಳು ಮತ್ತು ಕೊಳಲು. ಪಿಟೀಲು ಮತ್ತು ಹಾರ್ಮೋನಿಯಂ ನಂತಹ ಇತರ ವಾದ್ಯ[೨೦]ಗಳನ್ನು ಇತ್ತೀಚೆಗೆ ಸೇರಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/List_of_Indian_folk_dances
  2. https://en.wikipedia.org/wiki/Natya_Shastra
  3. https://en.wikipedia.org/wiki/Drama
  4. https://en.wikipedia.org/wiki/Sangeet_Natak_Akademi
  5. https://en.wikipedia.org/wiki/Indian_classical_music
  6. "ಆರ್ಕೈವ್ ನಕಲು". Archived from the original on 2018-07-20. Retrieved 2019-12-14.
  7. https://en.wikipedia.org/wiki/Nritya
  8. https://en.wikipedia.org/wiki/Keechakavadham
  9. https://en.wikipedia.org/wiki/Dakshayagam
  10. https://en.wikipedia.org/wiki/Kalakeyavadham
  11. https://en.wikipedia.org/wiki/Vazhenkada
  12. https://en.wikipedia.org/wiki/Guruvayur
  13. https://en.wikipedia.org/wiki/Satyabhama
  14. https://en.wikipedia.org/wiki/Odissi
  15. https://en.wikipedia.org/wiki/Jagannath_Temple,_Puri
  16. https://en.wikipedia.org/wiki/Gita_Govinda
  17. https://en.wikipedia.org/wiki/Raga
  18. https://en.wikipedia.org/wiki/Radha
  19. https://en.wikipedia.org/wiki/Taal_(instrument)
  20. https://en.wikipedia.org/wiki/Musical_instrument