ವಿಷಯಕ್ಕೆ ಹೋಗು

ಕಾನ್ರಾಡ್ ಜ಼ಕಾರಿಯಾಸ್ ಲೊರೆಂಟ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾನ್ರಾಡ್ ಲೊರೆಂಟ್ಸ್

ಕಾನ್ರಾಡ್ ಜ಼ಕಾರಿಯಾಸ್ ಲೊರೆಂಟ್ಸ್ (1903-89) ಆಸ್ಟ್ರಿಯದ ಪ್ರಾಣಿವಿಜ್ಞಾನಿ, ಪ್ರಾಣಿವರ್ತನ ವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ.[][]

ಜನನ, ವಿದ್ಯಾಭ್ಯಾಸ

[ಬದಲಾಯಿಸಿ]

ಈತ ವಿಯೆನ್ನದಲ್ಲಿ 1903ರಲ್ಲಿ ಜನಿಸಿದ. ಬಾಲ್ಯ ಹಾಗೂ ಕಾಲೇಜು ಶಿಕ್ಷಣ ಇಲ್ಲಿಯೇ ನಡೆಯಿತು. ವಿಯೆನ್ನ ವಿಶ್ವವಿದ್ಯಾಲಯದಿಂದ ಎಂ.ಡಿ.(1928) ಹಾಗೂ ಪಿಎಚ್.ಡಿ. (1933) ಪದವಿಗಳನ್ನು ಪಡೆದ.[]

ವೃತ್ತಿ, ಸಾಧನೆಗಳು

[ಬದಲಾಯಿಸಿ]

ನೆದರ್ಲೆಂಡಿನ ನಿಕೊಲಸ್ ಟಿನ್‌ಬರ್ಗೆನ್ ಮತ್ತು ಆಸ್ಟ್ರಿಯದವನೇ ಆದ ಕಾರ್ಲ್ ಫಾನ್ ಫ್ರಿಶ್ ಎಂಬಾತನ ಜೊತೆಗೂಡಿ 1930ರ ದಶಕದಲ್ಲಿ ಪ್ರಾಣಿ ವರ್ತನ ವಿಜ್ಞಾನವನ್ನು (ಈಥಾಲಜಿ)- ಅಂದರೆ ನಿಸರ್ಗದ ಸಹಜ ಸನ್ನಿವೇಶಗಳಲ್ಲಿ ವನ್ಯ ಪ್ರಾಣಿಗಳು ಹೇಗೆ ವರ್ತಿಸುತ್ತವೆ ಎಂಬುದರ ವೈಜ್ಞಾನಿಕ ಅಧ್ಯಯನ-ಸ್ಥಾಪಿಸಿದ. ಪ್ರಯೋಗಾಲಯಗಳ ಕೃತಕ ಸನ್ನಿವೇಶದಲ್ಲಿ ಪ್ರಾಣಿಗಳ ವರ್ತನೆ ಒಂದು ರೀತಿಯದಾಗಿದ್ದರೆ, ಪ್ರಕೃತಿಯಲ್ಲಿ ಬೇರೆಯೇ ಆಗಿದ್ದು ಸಹಜ ಪ್ರವೃತ್ತಿಗೆ (ಇನ್‍ಸ್ಟಿಂಕ್ಟ್) ಒಳಪಟ್ಟಿರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಇವರು ಸಾಬೀತು ಪಡಿಸಿದರು. ಮುಖ್ಯವಾಗಿ ಹಕ್ಕಿ, ಮೀನು ಮತ್ತು ಕೀಟಗಳ ವರ್ತನೆ ಅಭ್ಯಸಿಸಿದ ಇವರಿಬ್ಬರು ಈ ಪ್ರಾಣಿಗಳ ವರ್ತನೆಯ ಬಹ್ವಂಶ ಒಂದು ಬಗೆಯ ಸ್ಥಿರಕ್ರಿಯಾ ಪ್ರರೂಪ (ಫಿಕ್ಸ್ಡ್ ಆಕ್ಷನ್ ಪ್ಯಾಟರ್ನ್) ತೋರಿಸುತ್ತವೆ ಎಂಬ ಅಭಿಪ್ರಾಯ ಮಂಡಿಸಿದರು. ಅದುವರೆಗೆ ಪ್ರಚಲಿತವಾಗಿದ್ದ ಮನೋವೈಜ್ಞಾನಿಕ ಅಭಿಪ್ರಾಯಕ್ಕಿಂತ ಇದು ಬೇರೆಯಾಗಿತ್ತು. ಜೊತೆಗೆ ವಿಭಿನ್ನ ಜೀವಿಪ್ರಭೇದಗಳ ವರ್ತನೆಯನ್ನು ಪರಸ್ಪರ ಹೋಲಿಸಿ ಅಭ್ಯಾಸ ನಡೆಸಿದ ಕೀರ್ತಿಯೂ ಇವರದಾಗಿದೆ. ಲೊರೆಂಟ್ಸ್‌ನ ಅಧ್ಯಯನ, ಪ್ರಾಣಿವರ್ತನೆಯ ವಿವಿಧ ಮುಖಗಳ ಆಳವಾದ ಸಂಶೋಧನೆಗೆ ಎಡೆಮಾಡಿಕೊಟ್ಟಿತು. ಈ ಎಲ್ಲ ಸಂಶೋಧನೆಯ ಕಾರ್ಯಕ್ಕಾಗಿ ಲೊರೆಂಟ್ಸ್, ಟಿನ್‍ಬರ್ಗೆನ್ ಮತ್ತು ಫ್ರಿಶ್ ಅವರಿಗೆ 1973ರ ನೊಬೆಲ್ ಪ್ರಶಸ್ತಿ ಲಭಿಸಿತು.[]

ಲೊರೆಂಟ್ಸ್ 1935ರಲ್ಲಿ ತನ್ನ ಇನ್ನೊಂದು ಮಹತ್ತ್ವದ ಸಂಶೋಧನೆಯಾದ-ಪಕ್ಷಿಗಳಲ್ಲಿ ಅಚ್ಚೊತ್ತಿಕೆ (ಇಂಪ್ರಿಂಟ್) ಎಂಬುದನ್ನು ಪ್ರಕಟಿಸಿದ. ಆಗ ತಾನೇ ಜನಿಸಿದ ಹಕ್ಕಿಮರಿಗಳು ಪ್ರಾರಂಭದಲ್ಲೇ ತಮ್ಮ ಬದಲೀ ಪಾಲಕರನ್ನೇ (ಒಂದು ವೇಳೆ ಹಾಗೆ ಕಲಿಸಿದರೆ) ತಮ್ಮ ನೈಜಪಾಲಕರೆಂದು ತಿಳಿಯುತ್ತವೆ ಮತ್ತು ಅದಕ್ಕೆ ತಕ್ಕ ಹಾಗೆ ವರ್ತಿಸುತ್ತವೆ ಎಂಬುದು ಇದರ ಸ್ಥೂಲ ವಿವರಣೆ.

ಮಾನವನ ಆಕ್ರಮಣ ಪ್ರವೃತ್ತಿ (ಅಗ್ರೆಷನ್) ಕುರಿತ ಸಂಶೋಧನೆ ನಡೆಸಿದ ಈತ ಇದು ಪ್ರಕೃತಿ ಜನ್ಯವಾದುದೆಂದೂ ಬೇಕೆನಿಸಿದರೆ ಅದನ್ನು ಬದಲಿಸಬಹುದು, ಇಲ್ಲವೆ ಬೇರೆ ಚಟುವಟಿಕೆಗಳ ಕಡೆಗೆ ಹರಿಸಬಹುದೆಂದೂ ಬೇರೆ ಪ್ರಾಣಿಗಳಲ್ಲಾದರೋ ಈ ಪ್ರವೃತ್ತಿ ಕೇವಲ ಉಳಿವಿಗಾಗಿ ಇರುವಂಥದೆಂದೂ ಅಭಿಪ್ರಾಯಪಟ್ಟ. ಮಾನವ ಮಾತ್ರ ಉದ್ದೇಶಪೂರ್ವಕವಾಗಿ ಇತರರನ್ನು ಸಾಯಿಸುತ್ತಾನೆ ಎಂಬುದು ಈತನ ವಾದ.

ಈತ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಕಿಂಗ್ ಸಾಲೊಮನ್ಸ್ ರಿಂಗ್ (1949), ಮ್ಯಾನ್ ಮೀಟ್ಸ್ ಡಾಗ್ (1950), ಎವೊಲ್ಯೂಷನ್ ಅಂಡ್ ಮಾಡಿಫಿಕೇಷನ್ ಆಫ್ ಬಿಹೇವಿಯರ್ (1961), ಆನ್ ಅಗ್ರೆಷನ್ (1966) ಎಂಬವು ಜನಪ್ರಿಯವಾಗಿವೆ. ಈತ 1989ರಲ್ಲಿ ನಿಧನನಾದ.

ಉಲ್ಲೇಖಗಳು

[ಬದಲಾಯಿಸಿ]
  1. Hess, Eckhard H.. "Konrad Lorenz". Encyclopedia Britannica, 23 Feb. 2023, https://www.britannica.com/biography/Konrad-Lorenz. Accessed 28 September 2023.
  2. "Lorenz, Konrad (1903-1989) ." Learning and Memory. . Encyclopedia.com. 19 Sep. 2023 <https://www.encyclopedia.com>.
  3. Lorenz, Konrad (2007). King Solomon's Ring (3rd ed.). London: Routledge. pp. 4–5. ISBN 978-0-415-26747-2.
  4. "Konrad Lorenz – Biographical, The Nobel Prize in Physiology or Medicine 1973". Nobel prize The Official Web Site of The Nobel Prize. Retrieved 7 November 2013.

ಹೊರಗಿನ ಕೊಂಡಿಗಳು

[ಬದಲಾಯಿಸಿ]