ಕಡವ ಶಂಭುಶರ್ಮ
ಕಡವ ಶಂಭುಶರ್ಮ : 1895-1964. ಕನ್ನಡ ಅರುಣೋದಯ ಕಾಲದ ಹಿರಿಯ ವಿದ್ವಾಂಸರು, ಸಾಹಿತಿ, ಆಯುರ್ವೇದ ವೈದ್ಯ, ಪ್ರಯೋಗಶೀಲ ಕೃಷಿಕ, ಗಾಂಧೀವಾದಿ.
ಜನನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಇವರು 1895 ಆಗಸ್ಟ್ 8ರಂದು ಜನಿಸಿದರು. ಇವರ ತಂದೆ ಕಡವ ಕೃಷ್ಣಭಟ್, ತಾಯಿ ಸತ್ಯವತಿ. ಶಂಭುಶರ್ಮರು ಔಪಚಾರಿಕ ವಿದ್ಯಾಭ್ಯಾಸವನ್ನು ಮಾಡದೇ ಮದರಾಸು ಸಂಸ್ಕೃತ ಕಾಲೇಜಿನಿಂದ ಅದ್ವೈತ ವೇದಾಂತ ಶಿರೋಮಣಿ ಪದವಿ ಪಡೆದು ಮುಂದೆ ಸ್ವಂತ ಪರಿಶ್ರಮದಿಂದ ಕನ್ನಡ ವಿದ್ವಾನ್ ಪದವಿ ಗಳಿಸಿಕೊಂಡರು.ಪುತ್ತೂರಿಗೆ ಬರುವ ಮೊದಲು ಕೆಲವು ಕಾಲ ಮದರಾಸಿನ ಪ್ರಾಚ್ಯವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಆಯುರ್ವೇದದ ಹಲವು ಕೃತಿಗಳನ್ನು ಅಧ್ಯಯನ ಮಾಡಿ ಸಿದ್ಧಿಯನ್ನು ಪಡೆದರು. ಅನಂತರ (1925) ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಉಗ್ರಾಣ ಮಂಗೇಶರಾಯರ ಸಹೋದ್ಯೋಗಿಯಾಗಿ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಕನ್ನಡದ ಕಂಪು ಮತ್ತು ಇಂಪುಗಳನ್ನು ಉಣಬಡಿಸಿದರು.
ಬಹುಮುಖ ಪ್ರತಿಭೆ
[ಬದಲಾಯಿಸಿ]ಅಧ್ಯಾಪಕರಾಗಿರುವಾಗಲೇ ಬಿಡುವಿನ ವೇಳೆಯ ಪ್ರವೃತ್ತಿಯಾಗಿ ಸಿದ್ಧರಸ ವೈದ್ಯಶಾಲಾ ಸಂಸ್ಥೆಯನ್ನು ಆರಂಭಿಸಿ ಆಯುರ್ವೇದದ ಚಿಕಿತ್ಸೆಯನ್ನು ನೀಡತೊಡಗಿದರು. ಮಲೇರಿಯಾ, ರಕ್ತಬೇಧಿ, ಆನೆಕಾಲು, ಪ್ಲೇಗ್ ರೋಗಕ್ಕೆ ಸ್ವಂತ ಪರಿಶ್ರಮದಿಂದ ಪರಿಣಾಮಕಾರಿ ಔಷಧಿಯನ್ನು ಶೋಧಿಸಿದ್ದರು. ಹೈನುಗಾರಿಕೆಯಲ್ಲಿ ಕ್ರಾಂತಿಕಾರಿ ಪ್ರಯೋಗ ಇವರದು. ಡೈರಿಯ ಕಲ್ಪನೆಯೇ ಇನ್ನೂ ಸರಿಯಾಗಿ ಮೊಳಕೆ ಯೊಡೆಯದಿದ್ದ ಕಾಲದಲ್ಲಿ ಕ್ಷೀರಸಾಗರ ಎಂಬ ಕೇಂದ್ರದ ಮೂಲಕ ಬಾಟಲಿಗಳಲ್ಲಿ ಹಾಲನ್ನು ಸರಬರಾಜು ಮಾಡಿದ್ದರು. ಇವರು ಸಿದ್ಧಪಡಿಸುತ್ತಿದ್ದ ಸುಗಂಧಾರ್ಕಮಧು ಅತ್ಯಂತ ಜನಪ್ರಿಯ ತಂಪು ಪಾನೀಯವಾಗಿತ್ತು. ತಮ್ಮ ಮನೆಯಲ್ಲಿಯೇ ಮಗ್ಗ, ಖಾದಿ ನೂಲನ್ನು ನೇಯಲು ವ್ಯವಸ್ಥೆ ಮಾಡಿ ಹತ್ತಾರು ಮಂದಿಗೆ ಜೀವನೋಪಾಯ ಕಲ್ಪಿಸಿಕೊಟ್ಟಿದ್ದರು. ದಲಿತರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ಪ್ರತಿಭಟಿಸುವ ಸಲುವಾಗಿ ‘ವಿಶ್ವಂಭರ ಸಂಘ’ದ ಸ್ಥಾಪನೆ ಮಾಡಿದ್ದರು. ಯಾವುದೋ ಒಂದು ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡರು. ಊನತೆ ಬದುಕಿನ ದಾರಿಯನ್ನು ಬದಲಿಸಿತು. ಬರೆವಣಿಗೆ, ಸಂಶೋಧನೆಯ ಕಡೆಗೆ ಹೆಚ್ಚು ಒಲವು ಮೂಡಿತು. ಇವರಿಗೆ ಬರೆವಣಿಗೆ ಹೊಸದಾಗಿರಲಿಲ್ಲ. 22ರ ಹರಯಕ್ಕಾಗಲೇ ಸಂಸ್ಕೃತದಿಂದ ಭಾಸನ ಪ್ರತಿಮಾ ನಾಟಕ, ಶ್ರೀಹರ್ಷನ ನಾಗಾನಂದ ನಾಟಕವನ್ನು ಅನುವಾದಿಸಿದ್ದರು. ಅನಂತರ ಕಾಳಿದಾಸನ ರಘುವಂಶ, ಅಶ್ವಘೂೕಷನ ಸೌಂದರನಂದ, ಬುದ್ಧ ಚರಿತೆ ಹಾಗೂ ಶ್ರೀಮದ್ಭಗವದ್ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದರು. ಇವರ ಅನುವಾದ ಮೂಲನಿಷವಿವಾದದ್ದು. ಇವರು ಮಾಡಿದ ಭಗವದ್ಗೀತೆಯ ಅನುವಾದವ ವಿಶಿಷ್ಟವಾದುದು. ಕನ್ನಡದಲ್ಲಿ ಭಾಮಿನಿ, ವಾರ್ಧಕ ಮೊದಲಾದ ಬಂಧಗಳಲ್ಲಿ ಗೀತೆಯ ಹಲವು ಅನುವಾದಗಳು ಬಂದಿವೆ. ಆದರೆ ಶರ್ಮರದು ಭಗವದ್ಗೀತೆಯ ವೃತ್ತಾನುವೃತ್ತ ಅನುವಾದ. ಮೂಲದ ಛಂದಸ್ಸು ಮತ್ತು ಲಯ ಇಲ್ಲಿನದು. ಇಡೀ ಕೃತಿಯನ್ನು ಮೂಲನಿಷವಿರಾಗಿ ಅನುಷ್ಟುಪ್ ಛಂದಸ್ಸಿನಲ್ಲಿ ಮರುಸೃಷ್ಟಿ ಮಾಡಿದ್ದಾರೆ.
ಸಂಶೋಧನ ಲೇಖಕ
[ಬದಲಾಯಿಸಿ]ತಿಮ್ಮಪ್ಪಯ್ಯ ಸ್ಮಾರಕಂ 62 ಕಂದಪದ್ಯಗಳಿರುವ ಕಾವ್ಯ. ಮುಳಿಯ ತಿಮ್ಮಪ್ಪಯ್ಯನವರಿಗೆ ಇಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರ ಇನ್ನೊಂದು ಮಹತ್ವದ ಕೃತಿ ‘ತುಳು ದೇಶಭಾಷಾ ವಿಚಾರವು’. 1955ರಷ್ಟು ಹಿಂದೆಯೇ ಬರೆದಿದ್ದ ಈ ಕೃತಿ ಪ್ರಕಟವಾದದ್ದು 1970ರಲ್ಲಿ. ತುಳು ದೇಶ, ಭಾಷೆ, ಪ್ರಾಚೀನತೆ, ನಾಥಪಂಥ ಮೊದಲಾದ ವಿಷಯದ ಬಗೆಗೆ ವಿಶೇಷ ಮಾಹಿತಿಯಿದೆ. ದೇಶೀಯ ಅಧ್ಯಯನ ಪರಂಪರೆಗೆ ಇದೊಂದು ಮಾದರಿ ಕೃತಿ. ಮದರಾಸು ಸರ್ಕಾರ ಈ ಪ್ರಬಂಧಕ್ಕೆ 1955ರಲ್ಲಿ ಬಹುಮಾನ ನೀಡಿ ಗೌರವಿಸಿದೆ. ಮಂಗಳೂರು ನಾಥಪಂಥದ ಕೇಂದ್ರಗಳಲ್ಲಿ ಒಂದು. 10ನೆಯ ಶತಮಾನದ ಮಧ್ಯಭಾಗದಲ್ಲಿ ನಾಥಪಂಥ ಕರ್ನಾಟಕಕ್ಕೆ ಬಂತೆಂಬುದು ಸಂಶೋಧಕರ ಅಭಿಪ್ರಾಯ. ಆದರೆ ಶಂಭುಶರ್ಮರು ಇದಕ್ಕೆ ಸಹಮತವನ್ನು ವ್ಯಕ್ತಪಡಿಸುವುದಿಲ್ಲ. ನಾಥಪಂಥದ ಸ್ವಯಂಬೋಧ ಅಮನಸ್ಕಯೋಗ ಮತ್ತು ಆತ್ಮವಾದ, ಸಿದ್ಧಸಿದ್ಧಾಂತ ಪದ್ಧತಿ, ಚರ್ಪಟನಾಥ ಶತಕಂ, ನವನಾಥ ಕಥಾಚ ಮೊದಲಾದ ಕೃತಿಗಳನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಹಠಯೋಗದ ಬಗೆಗೆ ಉಪನ್ಯಾಸ ಮಾಡುವಷ್ಟು ಪಾಂಡಿತ್ಯವನ್ನು ಇವರು ಪಡೆದಿದ್ದರು. ಕಾವ್ಯದಲ್ಲಿ ಬಳಸುವ ಭಾಷೆಯ ಬಗೆಗೆ ಇವರದು ಖಚಿತವಾದ ನಿಲವು. ಯಾವುದೇ ನಿಯಮಗಳಿಲ್ಲದೆ ಕಾವ್ಯ ಬರೆಯುವುದನ್ನು ಇವರು ಒಪ್ಪುವುದಿಲ್ಲ. ಈ ದಿಸೆಯಲ್ಲಿ ಬಿ.ಎಂ.ಶ್ರೀಕಂಠಯ್ಯನವರ ನಿಲವುಗಳನ್ನೂ ಮುಲಾಜಿಲ್ಲದೆ ಟೀಕಿಸಿದ್ದರು. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ] ಸಂಸ್ಕೃತಕ್ಕೆ ಅನುವಾದಿಸಿದ ಪಾಂಡಿತ್ಯ ಇವರದು. ಇವರ ಸಮಗ್ರ ಅಪ್ರಕಟಿತ ಕೃತಿಗಳನ್ನು ‘ಕಡವ ಶಂಭಶರ್ಮ ಕೃತಿಸಂಚಯ’ ಎಂಬ ಹೆಸರಿನಲ್ಲಿ ಎಚ್.ಜಿ. ಶ್ರೀಧರ್ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ (2003).
ಗಾಂಧೀವಾದಿ
[ಬದಲಾಯಿಸಿ]ಇವರು ಗಾಂಧೀಜಿಯವರ ಅಭಿಮಾನಿ, ಅನುಯಾಯಿ. ಗಾಂಧೀಜಿಯವರ ಬದುಕು, ಆದರ್ಶ, ಸಂದೇಶಕ್ಕೆ ಸಂಬಂಧಿಸಿದಂತೆ ಗಾಂಧೀಲಹರಿ, ಗಾಂಧೀಶತಕಂ, ಗಾಂಧೀನಿರ್ವಾಣಂ, ಗಾಂಧೀಸಂದೇಶ ಮತ್ತು ಗಾಂಧೀವಿಜಯಂ ಎಂಬ ಕಾವ್ಯಗಳನ್ನು ಬರೆದಿರುವರು. ಗಾಂಧೀಜಿಯ ಬಗೆಗೆ ಇಷ್ಟೊಂದು ಕಾವ್ಯವನ್ನು ಬರೆದವರು ಬಹುತೇಕ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಗಾಂಧೀವಿಜಯಂ ಏಳು ಆಶ್ವಾಸಗಳಿರುವ ಕಾವ್ಯ. ಗಾಂಧೀಜಿಯ ಹುಟ್ಟಿನಿಂದ ಮರಣದ ವರೆಗಿನ ಕಥೆ ಇಲ್ಲಿ ತೆರೆದುಕೊಳ್ಳುತ್ತದೆ. ಕಟ್ಟುಕತೆಯಲ್ಲ, ಪ್ರೇಮಕತೆಯಲ್ಲ, ಸತ್ಯಶೋಧನೆಯ ಕತೆಯಿದು ಎಂದು ಕೃತಿಯ ಆರಂಭದಲ್ಲಿ ಹೇಳಿದ್ದಾರೆ.
ಕ್ರಿಯಾಶೀಲತೆ
[ಬದಲಾಯಿಸಿ]ಪುತ್ತೂರು ಕರ್ನಾಟಕ ಸಂಘದ ಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು. ಶಿವರಾಮ ಕಾರಂತರು ನಡೆಸುತ್ತಿದ್ದ ನಾಡಹಬ್ಬದ ಕಾರ್ಯಕ್ರಮದಲ್ಲಿ ಇವರು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುತ್ತಿದ್ದರು. ಇವರ ವ್ಯಕ್ತಿತ್ವ ಆಳನಿರಾಳ ಕಾದಂಬರಿಯ ಒಂದು ಪಾತ್ರಕ್ಕೆ ಪ್ರೇರಣೆ ಎಂದು ಶಿವರಾಮ ಕಾರಂತರು ದಾಖಲಿಸಿದ್ದಾರೆ.
ನಿಧನ
[ಬದಲಾಯಿಸಿ]ಇವರು 1964 ಮೇ 3ರಂದು ನಿಧನ ಹೊಂದಿದರು.