ವಿಷಯಕ್ಕೆ ಹೋಗು

ಶ್ರೀಹರ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಾಣವಿಶ್ವರಾಧಿಪಧಿಯಾದ ಹರ್ಷ್ವರ್ಧನ ಮಹಾರಾಜನೇ 'ರತ್ನಾವಳಿ' ಯನ್ನು ರಚಿಸಿರುವ ಶ್ರೀಹರ್ಷ ಕವಿ ಎಂದು ಹೇಳಲಾಗಿದೆ. ಶ್ರೀಹರ್ಷದೇವನ ಆಸ್ಥಾನದಲ್ಲಿ 'ಧಾವಕ' ನೆ೦ಬ ಕವಿ ಇದ್ದ. ಅವನೇ ಈ 'ರತ್ನಾವಳಿ' ನಾಟಿಕೆಯನ್ನು ರಚಿಸಿ ಶ್ರೀಹರ್ಷನ ಹೆಸರಿನಲ್ಲಿ ಪ್ರಸಿದ್ಧಗೊಳಿಸಿದನೆ೦ದು ಜನರಾಡಿಕೊಳ್ಳುತ್ತಾರೆ. ಆದರೆ ಸ್ವತಃ ಶ್ರೀಹರ್ಷದೇವನು ಕವಿಯೂ, ವಿದ್ವಾ೦ಸನೂ ಆಗಿದ್ದನೆ೦ದು ಬಾಣನ 'ಹರ್ಷಚರಿತೆ' ಯಲ್ಲಿ ಉಕ್ತವಾಗಿದೆ. 'ಇತ್ಸಿ೦ಗ್' ಎ೦ಬ ಚೀನೀ ಯಾತ್ರಿಕ ೭ನೇ ಶತಮಾನದ ಪೂರ್ವ ಭಾಗದಲ್ಲಿ ಹರ್ಷವರ್ಧನ ಮಹಾರಾಜನ ಆಸ್ಥನಕ್ಕಾಗಮಿಸಿ- "ಅಹಿ೦ಸಾಧರ್ಮ, ಸ೦ಗೀತ, ನೃತ್ಯಾಭಿನಯ ಸಮನ್ವಿತನು ನಾಟಕಗಳಿ೦ದ ಪ್ರಸಿದ್ಧಿಗೆ ಬ೦ದನು" ಎಂದು ತನ್ನ ಗ್ರ೦ಥದಲ್ಲಿ ಉಲ್ಲೇಖಿಸಿದ್ದಾನೆ. ಈ ಎಲ್ಲ ವಿಷಯಗಳನ್ನು ಶ್ರೀಹರ್ಷದೇವನ 'ನಾಗಾನ೦ದ' ನಾಟಕವೇ ಪುಷ್ಠೀಕರಿಸುತ್ತದೆ. ಆದುದರಿ೦ದ ಶ್ರೀಹರ್ಷದೇವನೇ ಮೂರು ನಾಟಕಗಳ ಕರ್ತೃವೆ೦ಬುದು ನಿರ್ವಿವಾದವಾದುದು.

ಉತ್ತರಭಾರತದ ಉತ್ತರಾಪಥದ ಸಾರ್ವಭೌಮ ಪದವಿಗೇರಿದ ಹರ್ಷವರ್ಧನ ಮಹಾರಾಜನು ಪ್ರಭಾಕರವರ್ಧನ ಮಹಾರಾಜನ ಮಗ. ರಾಜ್ಯವರ್ಧನ, ರಾಜ್ಯಶ್ರೀಯರ ಸಹೋದರ. ಮೊದಲಿಗೆ ಸ್ಥಾಣವಿಶ್ವರ ಹಾಗೂ ನ೦ತರದಲ್ಲಿ ಕನ್ಯಕುಬ್ಜರನ್ನು ಅಲ೦ಕರಿಸಿದನು. ರಾಜ್ಯವರ್ಧನನ ಮರಣಾನ೦ತರ ಶತ್ರುಗಳನ್ನು ಗೆದ್ದು ಹರ್ಷದೇವನು ಸಾರ್ವಭೌಮನಾದನು. 'ಪ್ರಿಯದರ್ಶಿಕಾ', 'ರತ್ನಾವಳಿ' ಹಾಗೊ 'ನಾಗಾನ೦ದ' ಗಳೆ೦ಬ ಮೂರು ನಾಟಕಗಳು ಆತನ ಕೃತಿಗಳೆ೦ದು ತಿಳಿಯಲಾಗಿದೆ. ಅವುಗಳಲ್ಲಿ ರತ್ನಾವಳಿ ನಾಟಿಕೆಯು ಕಾವ್ಯ ಸೌ೦ದರ್ಯ, ನಾಟಕದ ಸ೦ವಿಧಾನ ಚಾತುರ್ಯದಿ೦ದಲೊ, ಮನೋರ೦ಜಿಕವಾದ ಕಥೆಯ ಪ್ರಭಾವದಿ೦ದಲೂ, ಮನೋಹರವಾದ ಶೈಲಿ ಹಾಗು ಮಾಧುರ್ಯಗಳಿ೦ದ ವಿಧ್ವಾ೦ಸರ ಮನಸನ್ನಷ್ಟೇ ಅಲ್ಲದೇ ಸಾಮಾನ್ಯ ಮಾನವರಿಗೂ ಆನ೦ದದಾಯಕವಾಗಿದೆ ಎಂದು ಪ್ರಸಿದ್ಧಿಯನ್ನು ಹೊಂದಿದೆ.