ವಿಷಯಕ್ಕೆ ಹೋಗು

ಏಬೆಲ್ ಯಾನ್ಸನ್ ಟಾಸ್ಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಬೆಲ್ ಯಾನ್ಸನ್ ಟಾಸ್ಮಾನ್ (ಸು. 1603-ಸು.1659). ಡಚ್ ನಾವಿಕ ಹಾಗೂ ಪರಿಶೋಧಕ. ಟಾಸ್ಮೇನಿಯಾ, ನ್ಯೂಜಿಲೆಂಡ್, ಟಾಂಗ ಮತ್ತು ಫೀಜೀ ದ್ವೀಪಗಳನ್ನು ಆವಿಷ್ಕರಿಸಿದವ.

ಬದುಕು ಮತ್ತು ಅನ್ವೇಷಣೆಗಳು

[ಬದಲಾಯಿಸಿ]

ಜನನ ಸು.1603ರಲ್ಲಿ, ಗ್ರಾನಿಂಗೆನ್ ಪ್ರಾಂತ್ಯದ ಲುಟ್ಜಿಗಾಸ್ಟ್‍ನಲ್ಲಿ. 1632 ಅಥವಾ 1633ರಲ್ಲಿ ಈತ ಡಚ್ ಈಸ್ಟ್ ಇಂಡಿಯ ಕಂಪೆನಿಯ ಸೇವೆಗೆ ಸೇರಿದ. ಮೋಚ ಎಂಬ ಹಡಗಿನ ಕಪ್ತಾನನಾಗಿ 1634ರಲ್ಲಿ ಇಂಡೊನೇಷ್ಯದ ಸೇರಾಮ್ ದ್ವೀಪಕ್ಕೆ ಯಾನ ಮಾಡಿದ. ಇದೇ ಈತನ ಪ್ರಥಮ ಪರಿಶೋಧನ ಯಾನ. 1639ರಲ್ಲಿ ಮ್ಯಾತ್ಯೂ ಕ್ವಾಸ್ಟನ ನೇತೃತ್ವದಲ್ಲಿ ಜಪಾನಿನ ಪೂರ್ವದ ಸಮುದ್ರಪ್ರದೇಶದಲ್ಲಿ ಚಿನ್ನ ಬೆಳ್ಳಿಗಳ ದ್ವೀಪವನ್ನು ಅರಸಿ ಯಾನ ಮಾಡಿದ. ಜಪಾನ್, ಫಾರ್ಮೋಸ, ಕಾಂಬೋಡಿಯ ಮತ್ತು ಪಾಲಂಬಾಗ್‍ಗಳಿಗೆ ವ್ಯಾಪಾರೋದ್ದೇಶದಿಂದ ಯಾನಗಳನ್ನು ಕೈಗೊಂಡ. ಡಚ್ ಈಸ್ಟ್ ಇಂಡೀಸಿನ ಗವರ್ನರ್-ಜನರಲ್ ಆಗಿದ್ದ ಆಂಟೋನಿಯೋ ವಾನ್ ಡೀಮೆನ್ 1642ರಲ್ಲಿ ಈತನನ್ನು ದಕ್ಷಿಣಾರ್ಧಗೋಳದ ಪರಿಶೋಧನೆಯ ಯಾನಕ್ಕೆ ನಾಯಕನನ್ನಾಗಿ ನೇಮಿಸಿದ. ಇದು ಡಚ್ ಸಮುದ್ರಯಾನಗಳಲ್ಲೆಲ್ಲ ಅತ್ಯಂತ ಮಹತ್ತ್ವಾಕಾಂಕ್ಷೆಯದಾಗಿತ್ತು.

1942ರ ಹೊತ್ತಿಗೆ ಡಚ್ ನಾವಿಕರು ಆಸ್ಟ್ರೇಲಿಯದ ಪಶ್ಚಿಮ ಕರಾವಳಿಯ ಹರಹನ್ನು ಅವಿಚ್ಛಿನ್ನವಾಗಿಯಲ್ಲದಿದ್ದರೂ ಅಲ್ಲಲ್ಲಿ ಗುರುತಿಸಿದ್ದರು. ಆದರೆ ಈ ಕರಾವಳಿ ಪ್ರದೇಶಗಳ ಖಂಡದ ಭಾಗಗಳೇ? ಪೆಸಿಫಿಕ್ ಸಾಗರದಲ್ಲಿದೆಯೆಂದು ಭಾವಿಸಲಾಗಿದ್ದ ದಕ್ಷಿಣ ಖಂಡಕ್ಕೆ ಸೇರಿದ್ದೇ?_ಎಂಬುದನ್ನು ಹೇಳುವುದು ಇನ್ನೂ ಸಾಧ್ಯವಾಗಿರಲಿಲ್ಲ. ಟಾಸ್ಮಾನ್ ತನ್ನ ಮುಖ್ಯ ಚಾಲಕನಾಗಿದ್ದ ಫ್ರಾನ್ಸ್ ಯಾಕೊಬ್‍ಝೂನ್ ವಿಸರ್‍ನ ಬಖೈರುಗಳಲ್ಲಿ ನೀಡಲಾದ ಸೂಚನೆಗಳ ಪ್ರಕಾರ ನಡೆದು ಈ ಒಗಟಿಗೆ ಉತ್ತರ ದೊರಕಿಸಬೇಕಾಗಿತ್ತು. ಹಿಂದೂ ಸಾಗರದ ಸಾಮಾನ್ಯ ವ್ಯಾಪಾರಮಾರ್ಗದ ದಕ್ಷಿಣದಲ್ಲಿ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಫೆಸಿಫಿಕಿಗೆ ಸಾಗಿ, ಚಿಲಿಗೆ ಪೂರ್ವದ ಕಡೆಯಿಂದ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸುವುದೂ ಸ್ಪೇನಿಗರ ಸಾಲೊಮನ್ ದ್ವೀಪಗಳನ್ನು ಮತ್ತೆ ಆವಿಷ್ಕರಿಸುವುದೂ ನ್ಯೂಗಿನಿಯನ್ನು ಪರಿಶೋಧಿಸುವುದೂ ಟಾಸ್ಮಾನನ ಪ್ರವಾಸ, ಉದ್ದೇಶಗಳಾಗಿದ್ದುವು.

1642ರ ಆಗಸ್ಟ್ 14ರಂದು ಈಗ ಹೀಮ್ಸ್‍ಕೆರ್ಕ್ ಮತ್ತು ಜೀಹೇನ್ ಎಂಬ ಎರಡು ಹಡಗುಗಳೊಂದಿಗೆ ಬಟೇವಿಯದಿಂದ ಹೊರಟು, ಮಾರಿಷಸ್‍ಗೆ ಪ್ರಯಾಣ ಬೆಳೆಸಿದ (ಸೆಪ್ಟೆಂಬರ್ 5-ಅಕ್ಟೋಬರ್ 8). ಅಲ್ಲಿಂದ ದಕ್ಷಿಣ ಹಾಗೂ ಪೂರ್ವಾಭಿಮುಖವಾಗಿ ಹೊರಟು ಪೂ.ರೇ. 94ºನೇರಕ್ಕೆ ದ.ಅ. 49ºತಲುಪಿದ. ಇದು ಅವನ ಯಾನದ ಅತ್ಯಂತ ದಕ್ಷಿಣದ ಅಕ್ಷಾಂಶ. ತಿರುಗಿ ನವೆಂಬರ್ 24ರಂದು ದ.ಅ.42ºರ ಭೂಪ್ರದೇಶವೊಂದನ್ನು ಕಂಡುಹಿಡಿದ. ಅದರ ದಕ್ಷಿಣ ತೀರದ ಗುಂಟ ಸಾಗಿ ಅದಕ್ಕೆ ವಾನ್ ಡೀಮೆನ್ಸ್ ಲ್ಯಾಂಡ್ ಎಂಬ ಹೆಸರಿಟ್ಟ. ಅದೇ ಈಗಿನ ಟಾಸ್ಮೇನಿಯ. ಅಲ್ಲಿಂದ ಮುಂದೆ ಪರಿಶೋಧನೆ ನಡೆಸಬೇಕಾಗಿಲ್ಲವೆಂದು ಅಧಿಕಾರಿಗಳ ಸಮಿತಿಯೊಂದು ಡಿಸೆಂಬರ್ 5ರಂದು ತೀರ್ಮಾನಿಸಿತು. ಆದ್ದರಿಂದ ಬಾಸ್ ಜಲಸಂಧಿಯನ್ನು ಕಂಡುಹಿಡಿಯುವ ಅವಕಾಶ ಟಾಸ್ಮಾನನಿಗೆ ತಪ್ಪಿಹೋಯಿತು. ಅವನು ಪೂರ್ವಾಭಿಮುಖವಾಗಿ ಮುಂದೆ ಸಾಗಿ ಡಿಸೆಂಬರ್ 13ರಂದು ನ್ಯೂಜಿûೀಲೆಂಡಿನ ಸೌತ್ ಐಲೆಂಡ್ ತೀರವನ್ನು ದ.ಅ. 42º 10ºನಲ್ಲಿ ಕಂಡು ಉತ್ತರಾಭಿಮುಖವಾಗಿ ಪರಿಶೋಧನೆಯ ಪ್ರವಾಸ ಮಾಡಿದ. ನಾರ್ತ್ ಐಲೆಂಡ್ ಮತ್ತು ಸೌತ್ ಐಲೆಂಡುಗಳ ನಡುವಣ ಜಲಸಂಧಿಯನ್ನು ಪ್ರವೇಶಿಸಿದ. ಅದೊಂದು ಕೊಲ್ಲಿಯೆಂದು ಅವನ ಭಾವನೆಯಾಗಿತ್ತು. ತಾನು ಬಹುಶಃ ದಕ್ಷಿಣ ಖಂಡದ ಪಶ್ಚಿಮ ಕರಾವಳಿಯನ್ನು ಕಂಡುಹಿಡಿಯುವುದಾಗಿಯೂ ಡಬ್ಲ್ಯು. ಸಿ. ಸ್ಕೌಟೆನ್ ಮತ್ತು ಜೆ. ಲೀಮೇರ್ ಎಂಬವರು ದಕ್ಷಿಣ ಅಮೆರಿಕದ ದಕ್ಷಿಣದಲ್ಲಿ ಕಂಡುಹಿಡಿದಿದ್ದ ಸ್ಟೇಟನ್ ಲ್ಯಾಂಡ್‍ಗೆ ಇದು ಸೇರಿಕೊಂಡಿರಬಹುದೆಂದೂ ಭಾವಿಸಿದ. ಆದ್ದರಿಂದಲೇ ಇದನ್ನು ಸ್ಟೇಟನ್ ಲ್ಯಾಂಡ್ ಎಂದೇ ಈತ ಕರೆದ.

ಸಮುದ್ರದ ಉಬ್ಬಿನಿಂದಾಗಿ ಚಿಲಿಗೆ ಸಮುದ್ರಮಾರ್ಗವೊಂದು ಇದೆಯೆಂಬುದು ಟಾಸ್ಮಾನನಿಗೆ ದೃಢವಾಯಿತು. ಅವನು ಈಶಾನ್ಯದತ್ತ ತಿರುಗಿದ. ಜನವರಿ 21ರಂದು ಟಾಂಗವನ್ನೂ ಫೆಬ್ರವರಿ 6ರಂದು ಫೀಜೀ ದ್ವೀಪಗಳನ್ನೂ ಕಂಡುಹಿಡಿದ. ಅವನ ಹಡಗುಗಳ ವಾಯವ್ಯಾಭಿಮುಖವಾಗಿ ತಿರುಗಿ ಏಪ್ರಿಲ್ 1ರಂದು ನ್ಯೂ ಗಿನಿಯ ಸಮುದ್ರ ತಲುಪಿದುವು; 1643ರ ಜೂನ್ 15ರಂದು ಬಟೇವಿಯವನ್ನು ಮುಟ್ಟಿದುವು. ಅಲ್ಲಿಗೆ ಸುಮಾರು ಹತ್ತು ತಿಂಗಳ ಸಮುದ್ರಯಾನ ಕೊನೆಗೊಂಡಿತು. ಈ ಅವಧಿಯಲ್ಲಿ ಪರಿಶೋಧಕ ತಂಡಕ್ಕೆ ಸೇರಿದ ಸುಮಾರು ಹತ್ತು ಮಂದಿ ಅನಾರೋಗ್ಯದಿಂದ ಮರಣಹೊಂದಿದ್ದರು. ಅವನು ಆಸ್ಟ್ರೇಲಿಯವನ್ನು ನೋಡದೆ ಅದನ್ನು ಸಂಪೂರ್ಣವಾಗಿ ಬಳಸಿದ್ದ.

ಆದರೆ ಟಾಸ್ಮಾನ್ ಆವಿಷ್ಕರಿಸಿದ ನೆಲಗಳ ತನಿಖೆಯ ಕೆಲಸದಲ್ಲೂ ಚಿಲಿಗೆ ದಾರಿ ಕಂಡುಹಿಡಿಯುವ ವಿಚಾರದಲ್ಲೂ ಅವನು ಉಪೇಕ್ಷೆಯಿಂದಿದ್ದನೆಂದು ಕಂಪನಿಯ ಮಂಡಲ ತೀರ್ಮಾನಿಸಿತು. 1644ರಲ್ಲಿ ಅದು ಟಾಸ್ಮಾನನನ್ನು ಸೌತ ಲ್ಯಾಂಡ್‍ಗೆ ಪ್ರವಾಸಮಾಡಲು ಕಳುಹಿಸಿತು.

ನ್ಯೂ ಗಿನಿ, ಪರಿಚಿತ ಸೌತ್ ಲ್ಯಾಂಡ್ (ಪಶ್ಚಿಮ ಆಸ್ಟ್ರೇಲಿಯ), ವಾನ್ ಡೀಮೆನ್ಸ್ ಲ್ಯಾಂಡ್ ಹಾಗೂ ಅಪರಿಚಿತ ಸೌತ ಲ್ಯಾಂಡ್ ಇವುಗಳ ನಡುವೆ ಇರುವ ಸಂಬಂಧವೇನೆಂಬುದನ್ನು ತಿಳಿಯಬೇಕೆಂಬುದು ಟಾಸ್ಮಾನನಿಗೆ ನೀಡಲಾಗಿದ್ದ ಸೂಚನೆ. ಟಾಸ್ಮಾನ್ ಫೆಬ್ರವರಿ 29ರಂದು ಬಟೇವಿಯದಿಂದ ಹೊರಟು ಆಗ್ನೇಯಾಭಿಮುಖವಾಗಿ ಸಾಗಿ ಟಾರಸ್ ಜಲಸಂಧಿಯನ್ನು ಸೇರಿದ. ಇದೊಂದು ತೆಟ್ಟೆಯಾದ ಕೊಲ್ಲಿಯೆಂದು ಅವನು ತಪ್ಪಾಗಿ ತಿಳಿದ. ಕಾರ್ಪೆಂಟೇರಿಯ ಖಾರಿಯ ದಡದ ಬಳಿ ಪ್ರಯಣ ಮುಂದುವರಿಸಿ, ಮುಂದೆ ಆಸ್ಟ್ರೇಲಿಯದ ತೀರದಲ್ಲಿ ಸಾಗಿ ದ.ಅ. 22º ತಲಪಿದ. ಟಾಸ್ಮಾನನಿಗೆ ಕಮ್ಯಾಂಡರ್ ದರ್ಜೆಯನ್ನೂ ಬಟೇವಿಯದ ನ್ಯಾಯ ಸಮಿತಿಯ ಸದಸ್ಯತ್ವವನ್ನೂ ನೀಡಿ ಮನ್ನಣೆ ಮಾಡಲಾದರೂ ಅವನ ಎರಡನೆಯ ಪರಿಶೋಧನ ಪ್ರವಾಸವೂ ಕಂಪನಿಗೆ ನಿರಾಶೆಯನ್ನೇ ಉಂಟುವಾಡಿತು. ಏಕೆಂದರೆ ಆ ಬಾರಿಯೂ ಸಾಕಷ್ಟು ಸಂಪದ್ಭರಿತವಾದ ಭೂಪ್ರದೇಶವನ್ನು ಅವನು ಕಂಡು ಹಿಡಿಯಲಾಗಲಿಲ್ಲ. 1647ರಲ್ಲಿ ಟಾಸ್ಮಾನ್ ವ್ಯಾಪಾರ ನೌಕೆಯೊಂದರ ನಾಯಕನಾಗಿ ಸೈಯಾಮಿಗೆ ಹೋಗಿದ್ದ. 1648ರಲ್ಲಿ ಫಿಲಿಪೀನ್ಸ್‍ನಲ್ಲಿ ಸ್ಪೇನಿಗರ ವಿರುದ್ಧ ಯುದ್ಧ ನೌಕೆಯೊಂದರ ಅಧಿಪತಿಯಾಗಿದ್ದ. 1653ರ ಹೊತ್ತಿಗೆ ಕಂಪನಿಯ ಸೇವೆಯನ್ನು ಬಿಟ್ಟ. 1661ರ ಫೆಬ್ರುವರಿ 5ಕ್ಕಿಂತ ಮೊದಲೆ, ಬಹುಶಃ 1659ರ ಅಕ್ಟೋಬರ್ 22ಕ್ಕಿಂತ ಮುಂಚೆ, ಟಾಸ್ಮಾನ್ ಮರಣಹೊಂದಿದ.