ಆಸ್ಮಾಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಧಪಾರಗಮ್ಯ ಪೊರೆಯ ಮೇಲೆ ಆಸ್ಮಾಸಿಸ್ ಪ್ರಕ್ರಿಯೆ. ನೀಲಿ ಬಿಂದುಗಳು ಆಸ್ಮಾಟಿಕ್ ಇಳುಕಲನ್ನು ಚಾಲನೆ ಮಾಡುವ ಕಣಗಳನ್ನು ಪ್ರತಿನಿಧಿಸುತ್ತವೆ.

ಆಸ್ಮಾಸಿಸ್ ಅಥವಾ ಸೂಕ್ಷ್ಮಾಭಿಸರಣ ಎಂದರೆ ನೈಸರ್ಗಿಕ ಅಥವಾ ಕೃತಕ ಪೊರೆಯ (ಮೆಂಬ್ರೇನ್) ಮೂಲಕ ದ್ರವದ ಸ್ವಯಂವಹನ.[೧]

ಆಸ್ಮಾಸಿಸ್ ನಡೆಯುವ ಬಗೆ[ಬದಲಾಯಿಸಿ]

ಪೊರೆ ಬೇರ್ಪಡಿಸಿರುವ ದ್ರವಗಳ ರಚನೆಗಳನ್ನು ಅವಲಂಬಿಸಿ ವಹನದ ದಿಕ್ಕೂ ಇದೆ. ನೀರಿನಲ್ಲಿ ಲೀನವಾದ ಒಂದು ವಸ್ತು ದ್ರಾವಣದ ಎಲ್ಲೆಡೆಯಲ್ಲೂ ಏಕಪ್ರಕಾರ ವ್ಯಾಪಿಸಿರುವುದು (ಉದಾಹರಣೆಗೆ ನೀರಿನಲ್ಲಿ ಸಕ್ಕರೆಯ ದ್ರಾವಣ). ಇಂಥ ಒಂದು ದ್ರಾವಣದ ಎರಡು ಭಾಗಗಳನ್ನು ತೆಗೆದುಕೊಳ್ಳಬೇಕು. ಒಂದನೆಯದು ಪ್ರಬಲ, ಎರಡನೆಯದು ದುರ್ಬಲವೆಂದು ಭಾವಿಸಬಹುದು. ಇವೆರಡನ್ನೂ ದ್ರವದ ಅಣುಗಳನ್ನು ಮಾತ್ರ ಒಳಬಿಡುವ, ವಿಲೀನ ವಸ್ತುವಿನ (ಸೊಲ್ಯೂಟ್) ಅಣುಗಳನ್ನು ಒಳಬಿಡದಂಥ ಒಂದು ಪೊರೆಯಿಂದ ಪ್ರತ್ಯೇಕಿಸಿದಾಗ ದುರ್ಬಲ ದ್ರಾವಣದ ದ್ರವದ ಅಣುಗಳು ಮಾತ್ರ ಪೊರೆಯ ಮುಖಾಂತರ ಹಾದು ಪ್ರಬಲ ದ್ರಾವಣದೆಡೆಗೆ ಹೋಗುವುವು.[೨][೩] ಇಂಥ ಪೊರೆಯ ಹೆಸರು ಅರ್ಧಪಾರಗಮ್ಯ ಪೊರೆ (ಸೆಮಿ ಪರ್ಮಿಯೆಬಲ್ ಮೆಂಬ್ರೇನ್), ಪಾರ್ಚ್‌ಮೆಂಟ್ ಕಾಗದ, ಸೆಲೊಫೇನ್ ಅಥವಾ ಸೂಕ್ಷ್ಮಚರ್ಮದ ಪೊರೆಗಳನ್ನು ಈ ಕಾರ್ಯದಲ್ಲಿ ಉಪಯೋಗಿಸಬಹುದಾದರೂ ನಿಖರ ಪ್ರಯೋಗಗಳಲ್ಲಿ ಅವನ್ನು ಬಳಸಲಾಗದು. ಕಾರಣ ಅಲ್ಲಿ ಉದ್ಭವಿಸುವ ಸಂಮರ್ದವನ್ನು ತಡೆದು ನಿಲ್ಲುವ ಚೈತನ್ಯ ಅವುಗಳಿಗಿರುವುದಿಲ್ಲ. ಅಲ್ಲದೆ ಅವುಗಳ ಮುಖಾಂತರ ವಿಲೀನವಾದ ವಸ್ತುವಿನ ಅಣುಗಳು ಸ್ವಲ್ಪಮಟ್ಟಿಗೆ ಹಾದುಹೋಗುತ್ತವೆ.[೪] ಅಂದರೆ ಅವು ಪೂರ್ಣ ಅರ್ಧಪಾರಗಮ್ಯ ಪೊರೆಗಳಲ್ಲ. ಲೋಳೆಯಂತಿರುವ ತಾಮ್ರದ ಫೆರೋಸೈಯನೈಡನ್ನು ಸರಂಧ್ರ ಬಟ್ಟಲಿನ ಮೇಲೆ ಒತ್ತರಿಸಿ ಪಡೆಯುವ ಪೊರೆಯೇ ಅತ್ಯುತ್ತಮ. ಇದು ಸೂಕ್ಷ್ಮ ಪ್ರಯೋಗಗಳಲ್ಲಿ ಉಪಯೋಗಿಸಲು ಯೋಗ್ಯ. ಈ ರೀತಿಯ ಪೊರೆಯನ್ನು ಅಳವಡಿಸಿಕೊಂಡು ಡಬ್ಲ್ಯು ಫೆಫರ್ ಮೊಟ್ಟಮೊದಲಿಗೆ 1877ರಲ್ಲಿ ಆಸ್ಮಾಸಿಸ್ಸನ್ನು ಅಭ್ಯಸಿಸಿದ.[೫] ಇದೇ ರೀತಿ ಅಮೆರಿಕದ ಮೋರ್ಸ್ ಮತ್ತು ಫ್ರೇಜರ್ 1914 ರಲ್ಲೂ ಇಂಗ್ಲೆಂಡಿನ ಬರ್ಕಲೇ ಮತ್ತು ಹಾರ್ಟಲೇ 1919ರಲ್ಲೂ ಆಸ್ಮಾಟಿಕ್ ಪ್ರಯೋಗಗಳನ್ನು ಮಾಡಿದರು. ಇವುಗಳ ಪರಿಣಾಮವಾಗಿ ಆಸ್ಮಾಸಿಸ್ ಸೂತ್ರ ನಿರೂಪಿತವಾಯಿತು: ಭಿನ್ನಸಾಂದ್ರತೆಗಳ ಎರಡು ದ್ರವಗಳನ್ನು ಒಂದು ಅರ್ಧಪಾರಗಮ್ಯ ಪೊರೆ ಪ್ರತ್ಯೇಕಿಸಿದ್ದರೆ ಸಾಂದ್ರತೆಗಳು ಸಮಾನವಾಗುವವರೆಗೂ ದುರ್ಬಲ ದ್ರವ ಪ್ರಬಲ ದ್ರವದೆಡೆಗೆ ಪ್ರವಹಿಸುತ್ತದೆ.

ಆಸ್ಮಾಟಿಕ್ ಸಂಮರ್ದ[ಬದಲಾಯಿಸಿ]

ಒಂದು ಆಸ್ಮಾಟಿಕ್ ವಹನದ ಕಾರಣ ಆ ಎರಡು ದ್ರವಗಳ ಸಂಮರ್ದಗಳ ವ್ಯತ್ಯಾಸ, ಪೊರೆಯ ಎರಡೂ ಪಕ್ಕಗಳಲ್ಲಿ ದ್ರವಗಳ ಪ್ರಬಲತೆ ಒಂದೇ ಆಗುವವರೆಗೂ ಅಂದರೆ ಅಲ್ಲಿದ್ದ ಸಂಮರ್ದ ಸಮಸ್ಥಿತಿಗೆ ಬರುವವರೆಗೂ ಈ ವಹನ ನಡೆಯುತ್ತದೆ. ದ್ರವದ ಅಣುಗಳು ಪೊರೆಯಿಂದಾಚೆ ಹಾದು ಹೋಗುವುದನ್ನು ತಡೆಗಟ್ಟಲು ಅಂದರೆ ಸ್ವಾಭಾವಿಕ ಆಸ್ಮಾಟಿಕ್ ವಹನವನ್ನು ನಿಲ್ಲಿಸಲು ಪ್ರಯುಕ್ತಿಸಬೇಕಾದ ಕನಿಷ್ಠ ಬಾಹ್ಯ ಸಂಮರ್ದದ ಹೆಸರು ಆಸ್ಮಾಟಿಕ್ ಸಂಮರ್ದ. ಇದರ ಬೆಲೆ 273 ವಾಯುಮಾನಗಳವರೆಗೊ (ಅಟ್‍ಮಾಸ್ಫಿಯರ್ಸ್) ಇರುವುದನ್ನು ಸರಂಧ್ರಬಟ್ಟಲ ಪ್ರಯೋಗಗಳಿಂದ ತಿಳಿಯಲಾಗಿದೆ.[೬]

ದ್ರವಗಳ ವರ್ತನೆ[ಬದಲಾಯಿಸಿ]

ಒಂದು ದ್ರಾವಣದ ಆಸ್ಮಾಟಿಕ್ ಸಂಮರ್ದ ವಿಲೀನಕ ವಸ್ತುವಿನ ಅಣುಗಳ ಸ್ವಭಾವವನ್ನು ಅವಲಂಬಿಸಿರುವುದಿಲ್ಲ. ಅದು ವಿಲೀನವಾದ ವಸ್ತುವಿನ ಪ್ರಬಲತೆಗೆ ಅನುಗುಣವಾಗಿರುತ್ತದೆ. ಸಮನಾದ ಅಣುಪ್ರಬಲತೆಯುಳ್ಳ ಭಿನ್ನ ದ್ರಾವಣಗಳು ಸಮನಾದ ಆಸ್ಮಾಟಿಕ್ ಸಂಮರ್ದ ಪಡೆದಿರುತ್ತವೆ. ಒಂದು ದ್ರಾವಣದ ಆಸ್ಮಾಟಿಕ್ ಸಂಮರ್ದ ನಿರಪೇಕ್ಷ ಶೂನ್ಯ (ಆಬ್ಸಲ್ಯೂಟ್ ಜೀರೋ) ಉಷ್ಣತೆಯ ಅನುಲೋಮ ಪ್ರಮಾಣದಲ್ಲಿರುತ್ತವೆ. ಈ ಎಲ್ಲ ಅಂಶಗಳು ವ್ಯಾಂಟ್ ಹಾಫ್‍ನ ದುರ್ಬಲ ದ್ರಾವಣಗಳ ವಾದಕ್ಕೆ ನಾಂದಿಯಾಗಿವೆ. ಅವನ ಪ್ರಕಾರ ದುರ್ಬಲ ದ್ರಾವಣದಲ್ಲಿ ವಿಲೀನವಾದ ವಸ್ತು ಒಂದು ಅನಿಲದಂತೆ ವರ್ತಿಸುತ್ತದೆ. ವಿಲೀನವಸ್ತು ಆ ದ್ರಾವಣದ ಗಾತ್ರದೆಲ್ಲೆಡೆಯಲ್ಲೂ ಏಕಸಮವಾಗಿ ವ್ಯಾಪಿಸಿರುತ್ತದೆ; ಮತ್ತು ಬಾಯಲ್ಲನ ಮತ್ತು ಚಾರ್ಲ್ಸ್‌ನ ನಿಯಮಗಳನ್ನು ಅನುಸರಿಸುತ್ತದೆ. ಒಂದು ಶುದ್ಧದ್ರವ ಮತ್ತು ದ್ರಾವಣಗಳ ಮಧ್ಯದಲ್ಲಿ ಮುಚ್ಚಿರುವ ಸ್ಥಳದಲ್ಲಿನ ಗಾಳಿ ಅವೆರಡರ ಮಧ್ಯೆ ಅರ್ಧಪಾರಗಮ್ಯ ಪೊರೆಯಾಗಿ ವರ್ತಿಸಬಹುದು. ಶುದ್ಧ ನೀರನ್ನು ಒಂದು ಬೀಕರಿನ ಅರ್ಧ ಭಾಗದಲ್ಲಿ ತುಂಬಿ ಮತ್ತೊಂದು ಬೀಕರಿನಲ್ಲಿ ಅರ್ಧಭಾಗ ಒಂದು ದ್ರಾವಣ ತುಂಬಿ ಎರಡನ್ನೂ ಒಂದು ಘಂಟಾಪಾತ್ರೆಯಿಂದ ಮುಚ್ಚಿ ಸ್ವಲ್ಪ ಕಾಲ ಬಿಟ್ಟು ನೋಡಿದರೆ ಅನಿಲರೂಪದಲ್ಲಿ ನೀರು ಗಾಳಿಯ ಮುಖಾಂತರ ದ್ರಾವಣಕ್ಕೆ ಪಸರಿಸಿರುವುದು ಗೋಚರವಾಗುತ್ತದೆ. ಆಸ್ಮಾಟಿಕ್ ಸಂಮರ್ದಕ್ಕೆ ನೇರ ಸಂಬಂಧ ಹೊಂದಿರುವ ಅನಿಲ ಸಂಮರ್ದಗಳಲ್ಲಿನ ವ್ಯತ್ಯಾಸವೇ ಈ ಕ್ರಿಯೆಗೆ ಕಾರಣ.

ಸಿದ್ಧಾಂತಗಳು[ಬದಲಾಯಿಸಿ]

ಆಸ್ಮಾಟಿಕ್ ಕ್ರಿಯೆಯನ್ನು ವಿವರಿಸುವ ಅನೇಕ ಸಿದ್ಧಾಂತಗಳನ್ನು ಮುಂದಿಡಲಾಗಿದೆ. ಆದರೆ ಅವುಗಳ ಪೈಕಿ ಯಾವುದೊಂದೂ ಎಲ್ಲ ಸಂದರ್ಭಗಳಿಗೂ ಅನ್ವಯಿಸುವುದಿಲ್ಲ. ಹೀಗಾಗಿ ಯಾವ ಒಂದು ಸಿದ್ಧಾಂತವನ್ನೂ ಸಾರ್ವತ್ರಿಕವಾಗಿ ತಜ್ಞರು ಒಪ್ಪಿಕೊಂಡಿಲ್ಲ. ಕ್ಯಾಲ್ಸಿಯಂ ಸಲ್ಫೇಟ್‍ನಂಥ (CaSO4.2H2O) ಹರಳುಗಳ ಮುಖಾಂತರವೂ ನೀರು ಹಾದು ಹೋಗುತ್ತದೆ. ಏಕೆಂದರೆ ಆ ಹರಳು ನೀರನ್ನು ಪ್ರಬಲ ದ್ರಾವಣಕ್ಕೆ ಬಿಟ್ಟುಕೊಡುತ್ತದೆ. ಹಾಗೆ ಕಳೆದುಕೊಂಡ ನೀರಿನ ಅಂಶವನ್ನು ಶುದ್ಧ ದ್ರವದಿಂದ ಪಡೆದ ನೀರಿನ ಅಣುಗಳು ತುಂಬಿಕೊಡುವುದು ಬಹುಶಃ ಕಾರಣವಿರಬಹುದು. ಯಾವ ಪೊರೆಯಲ್ಲಿ ದ್ರವ ಹೆಚ್ಚಾಗಿ ಕರಗುತ್ತದೆಯೋ ಆ ಪೊರೆಯ ಮುಖಾಂತರವೂ ಆಸ್ಮಾಟಿಕ್ ಕ್ರಿಯೆ ಅತ್ಯಂತ ವೇಗದಲ್ಲಿ ನಡೆಯುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಪೊರೆಯ ಮೇಲೆ ದ್ರವದ ಅಧಿಶೋಷಣೆ (ಅಡ್‍ಸಾರ್ಪ್‌ಷನ್) ಸಹ ಆಸ್ಮಾಟಿಕ್ ಕ್ರಿಯೆಗೆ ಕಾರಣವಾಗಬಹುದು. ಅರ್ಧಪಾರಗಮ್ಯ ಪೊರೆಯಿಂದ ಬೇರ್ಪಡಿಸಿರುವ ಎರಡು ದ್ರಾವಣಗಳ ಮಧ್ಯೆ ಯಾವಾಗ ಎರಡೂ ದಿಕ್ಕುಗಳಲ್ಲೂ ಆಸ್ಮಾಟಿಕ್ ಚಲನೆ ಇರುವುದಿಲ್ಲವೊ ಆಗ ಅವನ್ನು ಐಸೊಟಾನಿಕ್ ದ್ರಾವಣಗಳು ಎನ್ನುತ್ತಾರೆ. ಕೆಂಪು ರಕ್ತಕಣಗಳು 0.85% ಉಪ್ಪು ನೀರಿನಲ್ಲಿರಿಸಿದಾಗ ಅವು ಸುಕ್ಕಾಗುವುದಿಲ್ಲ ಅಥವಾ ಉಬ್ಬುವುದೂ ಇಲ್ಲ. ಅಂದರೆ ಆ ನಾರ್ಮಲ್ ಉಪ್ಪು ನೀರಿನ ದ್ರಾವಣ ಕೆಂಪು ರಕ್ತಕಣದೊಡನೆ ಐಸೊಟಾನಿಕ್ ಆಗಿದೆ ಎಂದರ್ಥ. ರಕ್ತಕ್ಕೆ ಸೇರಿಸುವ ದ್ರಾವಣಗಳಾಗಲೀ ಅಥವಾ ಸೂಕ್ಷ್ಮಶರೀರ ಜೀವಕಣಗಳೊಡನೆ ಇಡುವ ದ್ರಾವಣಗಳಾಗಲೀ ಜೀವಕಣಗಳೊಡನೆ ಐಸೊಟಾನಿಕ್ ಆಗಿರಬೇಕಾದದ್ದು ಬಲು ಮುಖ್ಯ. ಒಂದು ಜೀವಕಣದ ಆಸ್ಮಾಟಿಕ್ ಸಂಮರ್ದಕ್ಕಿಂತ ಹೆಚ್ಚು ಸಂಮರ್ದ ಪಡೆದಿರುವ ದ್ರಾವಣವನ್ನು ಜೀವಕಣಕ್ಕೆ ಹೋಲಿಸಿದಾಗ ಆ ದ್ರಾವಣ ಹೈಪರ್‌ಟಾನಿಕ್ ಎನಿಸುತ್ತದೆ. ಈ ಸಂದರ್ಭದಲ್ಲಿ ಜೀವಕಣದಿಂದ ಹೈಪರ್‌ಟಾನಿಕ್ ದ್ರಾವಣದ ಕಡೆಗೆ ಆಸ್ಮಾಟಿಕ್ ಕ್ರಿಯೆ ಆಗುತ್ತಿರುತ್ತದೆ. ಹೀಗಾಗುವುದರಿಂದ ಜೀವಕಣ ಸುಕ್ಕಾಗಿ ಜೋತು ಬೀಳುತ್ತದೆ (ಪ್ಲಾಸ್ಮೋಲಿಸಿಸ್). ಹಾಗೆಯೇ ಅತಿ ಹೆಚ್ಚು ಗೊಬ್ಬರ ಅಥವಾ ಉಪ್ಪು ದ್ರಾವಣದಿಂದ ಸಸಿಗಳ ಬೇರುಗಳು ಆವೃತವಾದಾಗ ಆ ಸಸಿಗಳು ಬಾಡುತ್ತವೆ. ಒಂದು ಜೀವಕಣದ ಆಸ್ಮಾಟಿಕ್ ಸಂಮರ್ದಕ್ಕಿಂತ ಕಡಿಮೆ ಸಂಮರ್ದ ಪಡೆದಿರುವ ದ್ರಾವಣವನ್ನು ಜೀವಕಣಕ್ಕೆ ಹೋಲಿಸಿದಾಗ ಆ ದ್ರಾವಣ ಹೈಪೊಟಾನಿಕ್ ಎನಿಸುತ್ತದೆ. ಇಲ್ಲಿ ದ್ರಾವಣದಿಂದ ಜೀವಕಣದ ಕಡೆಗೆ ಆಸ್ಮಾಟಿಕ್ ಕ್ರಿಯೆ ಆಗುತ್ತಿರುತ್ತದೆ. ತತ್ಪರಿಣಾಮವಾಗಿ ಜೀವಕಣ ಉಬ್ಬುತ್ತದೆ ಮತ್ತು ಸಾಧ್ಯವಾದಲ್ಲಿ ಜೀವಕಣದ ಪೊರೆಯನ್ನು ಹರಿದು ಹಾಕುತ್ತದೆ (ಪ್ಲಾಸ್ಮೋಪ್ಟಿಸಿಸ್).[೭]

ಸಸ್ಯಗಳಲ್ಲಿ ಆಸ್ಮಾಸಿಸ್[ಬದಲಾಯಿಸಿ]

ಪ್ರಾಣಿಗಳ ಮತ್ತು ಸಸ್ಯಗಳ ಜೀವನದಲ್ಲಿ ಆಸ್ಮಾಸಿಸ್‍ನ ಪಾತ್ರ ಪ್ರಮುಖವಾದದ್ದು. ಸಸ್ಯಗಳ ಬೇರಿನಿಂದ ನೀರು ಎಲೆಗಳಿಗೆ ತಲಪುವುದಕ್ಕೆ ಆಸ್ಮಾಸಿಸ್ ಕ್ರಿಯೆಯೂ ಒಂದು ಕಾರಣ. ಸಸ್ಯದ ಬೇರು ಅಥವಾ ಕಾಂಡದಲ್ಲಿ ಅದರ ಅಸಂಖ್ಯಾತ ಕಣಗಳೆಂಬುವು ಅತಿಸೂಕ್ಷ್ಮ ಪೊರೆಯುಳ್ಳ ಕೋಶಗಳಿಂದ ಆವರಿಸಲ್ಪಟ್ಟಿದ್ದು ಹೊರಗಣ ಅನಿಲ ದ್ರವಗಳು ಒಳಗೂ ಒಳಗಿನವು ಹೊರಗೂ ಹೋಗಬಲ್ಲಂಥ ಪೊರೆಯುಳ್ಳವು. ಆ ಪೊರೆಗಳನ್ನು ಕಣದ ಗಾತ್ರಕ್ಕೆ ಹೋಲಿಸಿದಲ್ಲಿ ಅವು ಸಾಕಷ್ಟು ವಿಶಾಲವಾಗಿರುವುದರಿಂದ ಆಸ್ಮಾಸಿಸ್‍ಗೆ ಬಲು ಅನುಕೂಲವಾಗಿದೆ. ಬೇರಿನ ಕುಡಿಯಲ್ಲಿರುವ ರೋಮಗಳು ನೆಲದೊಳಕ್ಕೆ ಚಾಚುತ್ತ ತಮಗೆ ನೀರು ದೊರೆಯುವ ತನಕವೂ ಮುಂದೊತ್ತಿ ಹೋಗುವಾಗ ನೀರೂ ಅದರಲ್ಲಿ ವಿಲೀನವಾಗಿರುವ ಯಾವುದೇ ಲವಣಗಳೂ ಸಾರಗಳೂ ಆಸ್ಮಾಸಿಸ್ ಆಗುವುದಕ್ಕೆ ಸಾಧ್ಯವಾಗುತ್ತದೆ. ಬೇರಿನ ಹೊರಮೈಯಿಂದ ಒಳಗಿನ ತಿರುಳಿನ ಕಡೆಗೆ ಈ ದ್ರವಗಳು ಬರಬೇಕಾದರೆ ಪ್ರತಿಯೊಂದು ಕಣದ ಕೋಶವನ್ನೂ ನುಗ್ಗಿ ಆಚಿಂದೀಚೆ ಹರಿಯುತ್ತಿರಬೇಕಾಗುತ್ತದೆ. ಹೀಗೆ ಬೇರುಗಳ ನಾಳಗಳಲ್ಲಿ ಕಲೆತ ನೀರು ವಾಯುವಿನ ಸಂಮರ್ದ ಮತ್ತು ಆಸ್ಮಾಸಿಸ್‍ನಿಂದ ಮೇಲಕ್ಕೇರಿ ಎಲೆಗಳನ್ನು ತಲಪುತ್ತದೆ. [೮]

ಮಾನವ ಶರೀರದಲ್ಲಿ ಆಸ್ಮಾಸಿಸ್[ಬದಲಾಯಿಸಿ]

ರಕ್ತಕಣಗಳ ವಿಭಿನ್ನ ದ್ರಾವಣಗಳ ಪ್ರಭಾವಗಳು

ಮಾನವ ಶರೀರದಲ್ಲಿ ಕಣಗಳಿಂದ ಕಣಗಳಿಗೆ ಇದೇ ರೀತಿಯ ಆಸ್ಮಾಸಿಸ್ ನಡೆಯುತ್ತದೆ. ರಕ್ತ ಒಯ್ಯುವ ಆಹಾರ ವಿವಿಧ ಅವಯವಗಳ ಕಣಗಳ ಬಳಿಗೆ ಹೋದಾಗ ಇದೇ ಬಗೆಯಲ್ಲಿ ಆ ಕಣಗಳಿಗೆ ಆಹಾರ ಸಿಗುತ್ತದೆ. ಕಣಗಳಲ್ಲಿ ದಹನವಾಗಿ ಉಂಟಾದ ಕಾರ್ಬನ್ ಡೈಆಕ್ಸೈಡ್ ಹೀಗೆಯೇ ರಕ್ತವನ್ನು ಸೇರುತ್ತದೆ. ಅಲ್ಲಿಂದ ಮುಂದೆ ಶ್ವಾಸಕೋಶದ ವಾಯುವಿಗೆ ಪಸರಿಸುತ್ತದೆ. ಮೂತ್ರವಿಸರ್ಜನೆ, ಕಣಕೂಟ ಮತ್ತು ಅದರ ಆ ವೃತ್ತದೊಡನೆ ನಡೆಯುವ ಪೋಷಕ ವಸ್ತುಗಳ (ನ್ಯೂಟ್ರಿಯೆಂಟ್ಸ್) ಮತ್ತು ಕಲ್ಮಷಗಳ ವಿನಿಮಯ ಕ್ರಿಯೆ, ಜೀವರಸ ಪರಿಚಲನೆ ಇನ್ನೂ ಮುಂತಾದ ಜೀವ ವ್ಯಾಪಾರಗಳಲ್ಲೆಲ್ಲ ಆಸ್ಮಾಸಿಸ್ ಮುಖ್ಯ ಪಾತ್ರವಹಿಸುತ್ತದೆ. ಜೀವಕಣಗಳ ಒಳಹೊಕ್ಕು ಹರಡಿಕೊಳ್ಳುವ ಕರಗುವ ವಸ್ತುಗಳು, ಗಾತ್ರ ಬದಲಾವಣೆಗೆ ಕಾರಣವಾಗುತ್ತದೆ. ಈ ಬದಲಾವಣೆಯನ್ನು ಜೀವಕಣ ಪಾರಗಮ್ಯತೆಯ (ಸೆಲ್ ಪರ್ಮಿಯೆಬಿಲಿಟಿ) ಪರಿಮಾಣ ವಿಶ್ಲೇಷಣಗಳ ಅಳತೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ಕೆಲವೊಂದು ಔಷಧಗಳ ಜೀವಕಣ ಪಾರಗಮ್ಯತೆಯನ್ನು ಬದಲಾಯಿಸುವ ಸಾಮರ್ಥ್ಯವುಳ್ಳವು. ರಕ್ತ ಸೋರುವ ಲೋಮ ರಕ್ತನಾಳಗಳ ಮುಖಾಂತರ ಸಂಮರ್ದಕ್ಕೆ ಒಳಪಟ್ಟು ಹರಿದು ಹೋಗುತ್ತಿರುವಾಗ ಪ್ಲಾಸ್ಮಾವನ್ನು ಕಳೆದುಕೊಳ್ಳುವುದಿಲ್ಲ. ಇದು ಸಸ್ತನಿ ಪ್ರಾಣಿಗಳ ಶರೀರ ವಿಜ್ಞಾನದಲ್ಲಿ ಒಂದು ವಿಶಿಷ್ಟ ಅಂಶ. ಪ್ರೋಟೀನ್ ರಹಿತ ದ್ರಾವಣದ ಹೊರಸೋಸಿಕೆ (ಫಿಲ್‍ಟ್ರೇಷನ್) ಮತ್ತು ಒಳಹೋಗುವ ಆಸ್ಮಾಸಿಸ್‍ಗಳೆರಡರ ನಡುವೆ ಒಂದು ಸಮಸ್ಥಿತಿ ಏರ್ಪಟ್ಟುದೇ ಅದಕ್ಕೆ ಕಾರಣವೆಂದು ಇ.ಎಚ್.ಸ್ಟಾರ್ಲಿಂಗ್‍ನ ಅಭಿಪ್ರಾಯ. ಕೆಲವು ಪ್ರಾಣಿಗಳ ಜೀವಕಣಗಳು ನೀರನ್ನು ತಮ್ಮ ದೇಹದೊಳಕ್ಕೆ ಹೀರಿಕೊಳ್ಳುವಲ್ಲಿ ಕೂಡ ಆಸ್ಮಾಸಿಸ್ ಕ್ರಿಯೆಯಿಂದ ಸಾಧ್ಯವಾಗಿದೆ. ಆಸ್ಮಾಟಿಕ್ ಸಂಮರ್ದದ ನೆರವಿನಿಂದ ವಸ್ತುಗಳ ಅಣುತೂಕ ನಿರ್ಣಯ ಸಾಧ್ಯವಾಗಿದೆ.[೯]

ಉಲ್ಲೇಖಗಳು[ಬದಲಾಯಿಸಿ]

  1. https://dictionary.cambridge.org/dictionary/english/osmosis
  2. "Osmosis | A Level Notes".{{cite web}}: CS1 maint: url-status (link)
  3. Haynie, Donald T. (2001). Biological Thermodynamics. Cambridge: Cambridge University Press. pp. 130–136. ISBN 978-0-521-79549-4.
  4. http://www.britannica.com/EBchecked/topic/434057/osmosis
  5. https://books.google.com/books?id=Su8AAAAAYAAJ&pg=PA177
  6. https://www.sciencedirect.com/topics/agricultural-and-biological-sciences/plasmolysis
  7. https://biologydictionary.net/plasmolysis/
  8. http://www.biologydiscussion.com/plants/osmosis/process-of-osmosis-in-plants-with-experiments/51422
  9. https://www.researchgate.net/post/Why_is_osmosis_important_in_the_human_body_ie_red_blood_cells

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: