ಆಂಜನಯ್ಯನ ವೇಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಜನಯ್ಯನ ವೇಷ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಆಂಜನೇಯ ರಾಮನ ನಿಷ್ಠಾವಂತ ಭಕ್ತ. ಜನಪದ ರಂಗಭೂಮಿಯಲ್ಲಿ ಆಂಜನೇಯನ ವೇಷ ವಿಶಿಷ್ಟವಾಗಿರುತ್ತದೆ. ದೊಡ್ಡ ಆಟ ಮೂಡಲ ಪಾಯ, ಯಕ್ಷಗಾನ ಮುಂತಾದ ಜನಪದ ನಾಟಕಗಳ ರಾಮಾಯಣದ ಕಥಾ ವಸ್ತುವಿನಲ್ಲಿ ಇದು ಕಂಡುಬರುತ್ತದೆ. ಇಲ್ಲಿ ಜಾತಿಗಾರರು, ವೇಷಗಾರರು ಈ ವೇಷ ಹಾಕಿ ಬರುತ್ತಾರೆ. ಜತೆಗೆ ಹಾರ್ಮೋನಿಯಂ, ತಬಲ, ಚಿಟಕಿ, ವಾದ್ಯಗಳನ್ನು ತಂದಿರುತ್ತಾರೆ. ವಾದ್ಯ ನುಡಿಸುತ್ತಾ ಮನೆಮನೆಗೆ ಹೋಗಿ ಹಾಡಿ ನಟನೆ ಮಾಡುತ್ತಾರೆ. ಯಾವುದೋ ಒಂದು ಆಂಜನೇಯನ ಕಥೆಯನ್ನು ಹಾಡುತ್ತಾ ಹೋಗುತ್ತಾರೆ. ಇವರ ಹಾಡು, ನಟನೆ, ಹಾವ-ಭಾವಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಜನರು, ತಮ್ಮಲ್ಲಿದ್ದ ದವಸ-ಧಾನ್ಯ, ಹಣ, ಅರಿವೆ ಕೊಟ್ಟು ಕಳಿಸುತ್ತಾರೆ. ಹನುಮ ಜಯಂತಿಯ ದಿನ ಬಾಲಕರು ಹನುಮನ ವೇಷ ಧರಿಸಿ ಊರಲ್ಲೆಲ್ಲಾ ಸಂಭ್ರಮದಿಂದ ತಿರುಗುತ್ತಿದ್ದ ಸಂದರ್ಭ ಒಂದು ಕಾಲದಲ್ಲಿತ್ತು. ಇಂದೂ ಕೂಡ ಚಿಕ್ಕ ಚಿಕ್ಕ ಮಕ್ಕಳು ಆಂಜನೇಯ ವೇಷವನ್ನು ಹಾಕುವುದು ಎಲ್ಲಾ ಕಡೆ ಕಂಡುಬರುತ್ತದೆ.

ಆಂಜನಯ್ಯನ ವೇಷಭೂಷಣ[ಬದಲಾಯಿಸಿ]

ಮನರಂಜನೆಯ ಕುಣಿತಗಳ ಸಾಲಿನಲ್ಲಿ ಬರುವ ಒಂದು ಕಲೆ 'ಆಂಜನಯ್ಯನ ವೇಷ'. 'ಆಂಜನೇಯ'ನ ವೇಷ ಹೋಗಿ ಹಳ್ಳಿಗರ ಮಾತಿನಲ್ಲಿ 'ಆಂಜನಯ್ಯ'ನ ವೇಷವಾಗಿದೆ! ತಲೆಗೆ ಕಿರೀಟ, ಮುಖಕ್ಕೆ ಕಪ್ಪು ಮಿಶ್ರಿತ ನೀಲಿ ಬಣ್ಣ, ಮೈಗೆಲ್ಲಾ ಹಸಿರು ಬಣ್ಣ, ಬಾಯಿಯ ಸುತ್ತ ಕೆಂಪು ಬಣ್ಣ, ಎದೆಗೆ ಪದಕ, ಕೊರಳಿಗೆ ಹೂವಿನ ಹಾರ, ತುಳಸಿ ಮಾಲೆ, ಜಪಮಾಲೆ, ತೊಡಲು ಒಂದು ಚಡ್ಡಿ ಅಥವಾ ಹಸಿರು ಬಣ್ಣದ ಉದ್ದನೆಯ ಅಂಗಿ ಬಿಗಿಯಾದ ಪ್ಯಾಂಟನ್ನು ಹೊಲಿಸಿರುತ್ತಾರೆ. ಹಿಂಬಾಗದಲ್ಲಿ ಕಬ್ಬಿಣ ತಂತಿಯನ್ನು ಬಾಲದ ಆಕಾರದಲ್ಲಿ ಮಾಡಿ ಅದಕ್ಕೆ ಹಸಿರು ಬಟ್ಟೆ ಸುತ್ತಿ ಒಂದು ಬಾಲ ಮಾಡಿಕೊಂಡಿರುತ್ತಾರೆ, ಕೆಲವರು ಬಾಲವನ್ನು ಕೆಳಗೆ ಬಿಟ್ಟಿರುತ್ತಾರೆ, ಕೆಲವರು ಮೇಲೇರಿಸಿಕೊಂಡಿರುತ್ತಾರೆ. ಹಣೆಗೆ ಕೈಗೆ ಹಾಗೂ ತೋಳಿನ ಮೇಲೆ ನಾಮ, ಅವರವರ ಅನುಕೂಲಕ್ಕೆ ತಕ್ಕಂತೆ ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ, ಕೈಗೆ ಹಾಗೂ ತೋಳುಗಳಿಗೆ (ರಟ್ಟೆಗಳಿಗೆ) ಮಣಿಸರ ಧರಿಸಿರುತ್ತಾರೆ. ಇವಿಷ್ಟು ಆಂಜನಯ್ಯನ ವೇಷಭೂಷಣ. ಎಡಗೈಯಲ್ಲಿ ಗಂಟೆ, ಬಲಗೈಯಲ್ಲಿ ಬಿದಿರಿನಿಂದ ಇಲ್ಲವೆ ತಗಡಿನಿಂದ ತಯಾರು ಮಾಡಿದ ಗದೆ ಇರುತ್ತದೆ. ನಾಟಕದ ಆಂಜನೇಯನ ಪಾತ್ರವೇ ಆಂಜನಯ್ಯನ ವೇಷವಾಗಿ ಮನರಂಜಿಸುತ್ತದೆ.

ಕುಣಿತ[ಬದಲಾಯಿಸಿ]

ಹಳ್ಳಿಯ ಹಬ್ಬಗಳು ಮತ್ತು ಜಾತ್ರೆ ಉತ್ಸವಗಳಲ್ಲಿ ಆಂಜನಯ್ಯನ ಕುಣಿತ ಕಾಣಬಹುದು. ಈ ಕುಣಿತವನ್ನು ವಿಶೇಷವಾಗಿ ಮೊಹರಂ ಮತ್ತು ಶ್ರೀರಾಮನವಮಿಯ ಸಂದರ್ಭದಲ್ಲಿ ಕಾಣಬಹುದು, ಹಳ್ಳಿಯ ವಿಶಾಲವಾದ ಬಯಲಲ್ಲಿ, ಹಗಲು ವೇಳೆಯಲ್ಲಿ ತಮಟೆ, ಡೊಳ್ಳು ಮುಂತಾದ ವಾದ್ಯಗಳ ಗತ್ತಿಗೆ ತಕ್ಕಂತೆ ವೇಷಧಾರಿಗಳು ಹೆಜ್ಜೆ ಹಾಕುತ್ತಾ ಗಂಟೆ ಬಾರಿಸುತ್ತಾ, ಗದೆ ತಿರುಗಿಸಿಕೊಂಡು ಕುಣಿಯುತ್ತಾರೆ. ಮನರಂಜನೆಯ ಕಲೆಯಾದರೂ ಒಮ್ಮೊಮ್ಮೆ ಆಂಜನಯ್ಯನ ವೇಷಧಾರಿ ಆವೇಶದಿಂದ ಮೈಮರೆಯುವುದೂ ಉಂಟು. ಆಗ ವೇಷಧಾರಿಯ ಬಗ್ಗೆ ಪ್ರೇಕ್ಷಕರಿಗೆ ಶ್ರೀ ರಾಮ ಭಂಟನೆಂಬ ಭಯ - ಭಕ್ತಿ ಉಂಟಾಗುತ್ತದೆ. ಮನರಂಜನೆಯ ಮೂಲಕ ಈ ಕಲೆ ಭಕ್ತಿ ಪ್ರಸಾರ ಮಾಡುತ್ತದೆ!

ಆಂಜನಯ್ಯನ ವೇಷ ಪ್ರಚಲಿತದಲ್ಲಿರುವ ಜಿಲ್ಲೆಗಳು[ಬದಲಾಯಿಸಿ]

ಬೆಳಗಾವಿ, ಧಾರವಾಡ, ಬಿಜಾಪುರ ಜಿಲ್ಲೆಗಳಲ್ಲಿ ಹನುಮನ ವೇಷ ಧರಿಸುವುದು ಅಲ್ಲಲ್ಲಿ ಕಂಡುಬರುತ್ತದೆ. ದಕ್ಷಿಣ ಕರ್ನಾಟಕಮೈಸೂರು, ಬೆಂಗಳೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆಯುವ ಗ್ರಾಮ ದೇವತೆಯರ ಜಾತ್ರೆಗಳ ಸಂದರ್ಭದಲ್ಲಿ ಗಾರುಡಿ ಗೊಂಬೆ, ಹುಲಿವೇಷ ಹಾಕುವುದಲ್ಲದೆ ಆಂಜನೇಯನ ವೇಷವನ್ನೂ ಧರಿಸುತ್ತಾರೆ. ತುಮಕೂರು ಜಿಲ್ಲೆಮಧುಗಿರಿ ತಾಲೂಕಿನ ಗೊಂಬೆ ಹಳ್ಳಿಯಲ್ಲಿ ನಡೆದ ನಾಟಕವೊಂದರಲ್ಲಿ ವ್ಯಕ್ತಿಯೊಬ್ಬ ಆಂಜನೇಯನ ಪಾತ್ರ ಧರಿಸುತ್ತಿದ್ದ. ಅದೇ ಪ್ರಭಾವ ಅವನ ಮೇಲಾಗಿ ಸದಾ ಆಂಜನೇಯನ ವೇಷದಲ್ಲಿರುತ್ತಿದ್ದ. ಅವನು ಸುತ್ತಮುತ್ತಲಿನ ಗ್ರಾಮದ ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಆತ ವಾಹನಗಳಲ್ಲಿ ಪ್ರಯಾಣ ಮಾಡುತ್ತಿರಲಿಲ್ಲ. ಜನ ಅವನನ್ನು ಗೌರವ ಭಕ್ತಿಯಿಂದ ಕಾಣುತ್ತಿದ್ದರು. ಹೀಗೆಲ್ಲಾ ಆಂಜನೇಯನ ವೇಷಧಾರಿಗಳನ್ನು ಕುರಿತು ಕಥೆಗಳೂ ಪ್ರಚಲಿತದಲ್ಲಿವೆ. ಕೆಲವು ಭಾಗಗಳಲ್ಲಿ ಪ್ರಚಲಿತವಿರುವ ಈ ಕಲೆಯಲ್ಲಿ ಎಲ್ಲಾ ವರ್ಗದ ಜನರೂ ಪಾಲ್ಗೊಳ್ಳುತ್ತಾರೆ. ಉತ್ತರ ಕನ್ನಡಸುಗ್ಗಿ ಕೋಲಾಟದಲ್ಲಿ ಹನುಮಂತನ ವೇಷ ಬರುವುದುಂಟು. ವೇಷಗಾರ ಹನುಮಂತನ ಮುಖವು ರಟ್ಟಿನ ಅಥವಾ ಕಟ್ಟಿಗೆಯ ಮುಖವಾಡ ಮತ್ತು ಕಿರೀಟ, ಮೈಗೆ ನಾರಿನ ಕೂದಲುಗಳುಳ್ಳ ಹಸಿರು ಬಣ್ಣದ ಅಂಗಿ ಧರಿಸುತ್ತಾರೆ. ಸುಗ್ಗಿ ಕೋಲಾಟದವರ ತಾಳದ ಗತ್ತಿಗೆ ಕುಣಿಯುವ ಈ "ಹನುಮಂತ" ಕೋಲಾಟದ ಕಲಾವಿದರ ಮಧ್ಯೆಯಾಗಲಿ, ಒಂದು ಬದಿಯಲ್ಲಾಗಲಿ ಇರುತ್ತಾರೆ. ಕುಣಿತ ಮುಗಿದ ಮೇಲೆ ಪ್ರೇಕ್ಷಕರಿಂದ ಕಾಣಿಕೆ ಸಂಗ್ರಹಿಸುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. ಗೊ.ರು. ಚನ್ನಬಸಪ್ಪ ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಪುಟಸಂಖ್ಯೆ ೬-೭.
  2. ಪ್ರೊ. ಹಿ. ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೧೯೯೬, ಪುಟ ಸಂಖ್ಯೆ: ೨೪೧.