ಅಶೋಕ ಬಾದರದಿನ್ನಿ
ಅಶೋಕ ಬಾದರದಿನ್ನಿ | |
---|---|
ಜನನ | 1951 |
ಮರಣ | ನವೆಂಬರ್ 24, 2016 |
Resting place | ಚಿತ್ರದುರ್ಗ, ಕರ್ನಾಟಕ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ರಂಗಕರ್ಮಿ, ಚಿತ್ರನಟ |
ಸಂಗಾತಿ | ಅನಸೂಯಾ |
ಮಕ್ಕಳು | ಶಿಲ್ಪಾ, ಶುಭಾಂಗಿ, ಪ್ರಕಾಶ |
ಪ್ರಶಸ್ತಿಗಳು | ರಾಜ್ಯೋತ್ಸವ ಪ್ರಶಸ್ತಿ |
ಬಾಗಲಕೋಟೆ ಜಿಲ್ಲೆ ಅಚನೂರುನಲ್ಲಿ ಜನಿಸಿ ವಿಜಯಪುರದಲ್ಲಿ ರಂಗಪ್ರವೇಶ ಮಾಡಿದ ಅಶೋಕ- ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವಿ (1980) ಪಡೆದು ಬಂದ ನಂತರ ಇಡೀ ರಾಜ್ಯವೇ ತನ್ನ ಕಾರ್ಯಕ್ಷೇತ್ರ ಎಂಬಂತೆ ಓಡಾಡಿದರು. ಕಾಲಲ್ಲಿ ಚಕ್ರಕಟ್ಟಿಕೊಂಡವರಂತೆ ರಾಜ್ಯದ ಹಲವು ಊರುಗಳಲ್ಲಿ ಸಂಚರಿಸಿ ರಂಗಶಿಬಿರ, ನಾಟಕಗಳನ್ನು ಅವರು ನಿರ್ದೇಶಿಸಿದರು. ರೂಪಕಗಳನ್ನು ಆಯೋಜಿಸಿದರು.
1990 ರಿಂದ ಈಚೆಗೆ ಸಿರಿಗೆರೆ ತರಳಬಾಳು ಮಠ ಹಾಗೂ ಮುರುಘಾ ಶರಣರ ನಾಟಕ, ರೂಪಕಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಚಿತ್ರದುರ್ಗದಲ್ಲಿ ನೆಲೆನಿಂತರು. ತೀವ್ರ ಅನಾರೋಗ್ಯದ ಮಧ್ಯೆಯೂ ಅವರ ಲೋಕ ಸಂಚಾರ ಎಂದಿಗೂ ನಿಂತಿರಲಿಲ್ಲ. ಲೋಕಾಪುರದಲ್ಲಿ ‘ಪಾರಿಜಾತ’ ಮಾಡಿಸಿದರು. ವಿಜಯಪುರದಲ್ಲಿ ‘ವೀತರಾಗ ವೈಭವ’ ಮಾಡಿಸಿದರು. ದಾವಣಗೆರೆ ಪ್ರತಿಮಾಕ್ಕೆ ಮಾಡಿಸಿದ್ದ ‘ಸಂಕ್ರಾಂತಿ’ಯನ್ನು ವಿಜಯಪುರದಲ್ಲಿ ಮತ್ತೆ ಭಿನ್ನವಾಗಿ ಕಟ್ಟಿಕೊಟ್ಟರು -ಇವೆಲ್ಲ ತೀರಾ ಇತ್ತೀಚೆಗೆ. ಅಷ್ಟರಮಟ್ಟಿಗೆ ಅವರಿಗೆ ಕೊನೆಯ ಉಸಿರಿನವರೆಗೆ ನಾಟಕವೇ ಸರ್ವಸ್ವವಾಗಿತ್ತು.
ಬಾದರದಿನ್ನಿ ನಾಟಕಗಳೆಂದರೆ ಮಿತವೆಚ್ಚ. ಅದ್ದೂರಿ, ಆಡಂಬರಗಳಿಗೆ ಅವಕಾಶ ಇಲ್ಲ. ಕಾರ್ಪೊರೇಟ್ ಸಂಸ್ಥೆ ಅಥವಾ ಸಂಸ್ಕೃತಿ ಇಲಾಖೆಯಿಂದ ಭಾರಿ ಹಣ ವೆಚ್ಚ ಮಾಡಿಸಿ ಅವರೆಂದೂ ನಾಟಕ ಮಾಡಿದವರಲ್ಲ. ಅಂತೆಯೇ ಮಧ್ಯಮವರ್ಗದ ಹವ್ಯಾಸಿ ತಂಡಗಳಿಗೆ ಅಶೋಕರ ನಾಟಕಗಳು ಹೇಳಿಮಾಡಿಸಿದಂತಿದ್ದವು.
ಪಾರಿಜಾತ, ಬಯಲಾಟ, ವೃತ್ತಿ ಕಂಪನಿ ನಾಟಕಗಳನ್ನು ನೋಡುತ್ತ ಅರಗಿಸಿಕೊಳ್ಳುತ್ತ ಬೆಳೆದ ಬಾದರದಿನ್ನಿ ಆಧುನಿಕತೆಯ ಅವಿಷ್ಕಾರದೊಂದಿಗೆ ನಿರ್ದೇಶಿಸಿದ ಲಂಕೇಶರ ‘ಸಂಕ್ರಾಂತಿ’ ರಾಜ್ಯದ ಹಲವೆಡೆ ಜಯಭೇರಿ ಬಾರಿಸಿತು. ‘ಹ್ಯಾಮ್ಲೆಟ್’ ಅಂತೂ ತನ್ನ ಹೊಸತನಕ್ಕೆ ಹಾಗೂ ಶ್ರೀನಿವಾಸಪ್ರಭು ಅವರ ನಟನೆಗೆ ದೊಡ್ಡ ಹೆಸರು ಮಾಡಿತು. ಸಿ.ಆರ್.ಸಿಂಹ ‘ತುಘಲಕ್’ ಮಾಡಿದ ನಂತರ ಬೇರಾರಿಗೂ ಅದು ಸಾಧ್ಯವಿಲ್ಲ ಎಂಬ ಮೂಢನಂಬಿಕೆ ಅಳಿಸಿಹಾಕುವಂತೆ ಇಳಕಲ್ ಸ್ನೇಹರಂಗಕ್ಕೆ ಅಶೋಕ ಆ ನಾಟಕ ಮಾಡಿಸಿದರು. ಬೆಂಗಳೂರಿನಲ್ಲಿ ಈ ನಾಟಕ ಪ್ರಯೋಗವಾದಾಗ ಸ್ವತಃ ಸಿಂಹ ಅವರೇ ತುಘಲಕ್ ಪಾತ್ರ ಮಾಡಿದ್ದ ಇಳಕಲ್‌ನ ಮಹಮ್ಮದ ಹನೀಫ್ ಖಾಜಿ ಅವರನ್ನು ಅಪ್ಪಿಕೊಂಡು ಈ ಮಾತು ಆಡಿದ್ದರು.
ರಂಗಭೂಮಿ
[ಬದಲಾಯಿಸಿ]ರುದ್ರಗೌಡ- ಗೌರಮ್ಮ ದಂಪತಿಗೆ 1951ರಲ್ಲಿ ಜನಿಸಿದ ಅಶೋಕ ಮಿತ್ರಮಂಡಳಿ ರಚಿಸಿಕೊಂಡು ನಾಟಕವಾಡಲು ಶುರುಮಾಡಿದ್ದು ಶಾಲಾ ದಿನಗಳಿಂದಲೆ. ವಿಜಯಪುರಕ್ಕೆ ಹೊಸ ನಾಟಕಗಳನ್ನು ಪರಿಚಯಿಸುತ್ತಿದ್ದ ರಂಗಪರಿಚಾರಕ ಶ್ರೀನಿವಾಸ ತಾವರಗೇರಿ ಅವರಿಗೆ ಕೆಲಕಾಲ ಹೆಗಲೆಣೆಯಾಗಿ ನಿಂತರು. ನಂತರ ದೆಹಲಿ ನಾಟಕ ಶಾಲೆ ಸೇರಿದರು. ವಾಪಸ್ ಬಂದ ಮೇಲೆ ರಾಜ್ಯದ ಹಲವು ಹಳ್ಳಿ ಪಟ್ಟಣಗಳಲ್ಲಿ ತಿಂಗಳುಗಟ್ಟಲೆ ಕ್ಯಾಂಪ್ ಮಾಡಿ ರಂಗಶಿಬಿರ ನಡೆಸಿಕೊಟ್ಟರು. ಹೊಸ ಹೊಸ ನಾಟಕ ಕಲಿಸಿದರು. ನಾಟಕ ಶಾಲೆಗಳಿಗೆ ಮೇಷ್ಟ್ರಾಗಿ ಕೆಲಸ ಮಾಡಿದರು.
1981 ರಲ್ಲಿ ಬೆಂಗಳೂರಿನ ಅಭಿನಯ ತರಂಗದಲ್ಲಿ ಎ.ಎಸ್.ಮೂರ್ತಿ, ಪುಟ್ಟಣ್ಣ ಕಣಗಾಲ್, ಡಾ.ವಿಜಯಾ, ರಾಜೀವ ತಾರಾನಾಥ ಅವರೊಂದಿಗೆ ಭಾನುವಾರದ ಶಾಲೆ ಆರಂಭಿಸಿದರು. ಒಂದು ವರ್ಷ ಪ್ರಾಂಶುಪಾಲರಾಗಿ ದುಡಿದರು.
ಶಿವಮೊಗ್ಗ, ಉಡುಪಿ, ಮೈಸೂರು, ಕೋಲಾರ, ಮಂಡ್ಯ, ಮಾಲೂರು, ಭದ್ರಾವತಿ -ಹೀಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಸುತ್ತಿ ರಂಗಶಿಬಿರ ನಡೆಸಿಕೊಟ್ಟರು. ಮ್ಯಾಕ್‌ಬೆತ್, ಟಿಂಗರ ಬುಡ್ಡಣ್ಣ, ಕುಂಟ ಕುಂಟ ಕುರುವತ್ತಿ, ಮರಣವೇ ಮಹಾನವಮಿ, ಉದ್ಭವ, ದುರ್ಗಾಸ್ತಮಾನ, ಈಡಿಪಸ್, ಸಿರಿಸಂಪಿಗೆ, ಮಹಾಬೆಳಗು ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ರೂಪಕಗಳನ್ನು ಸಾಲು ಸಾಲಾಗಿ ರಚಿಸಿ ನಿರ್ದೇಶಿಸಿದರು. ಮುರುಘಾಮಠ, ವಿಜಯಮಹಾಂತ ಕಲಾಲೋಕದಿಂದ ಶುರುವಾದ ರೂಪಕಗಳ ಅಭಿಯಾನ ರಾಜ್ಯದ ಹಲವಡೆ ಜೈತ್ರಯಾತ್ರೆ ನಡೆಸಿತು. ರೂಪಕಗಳ ಜನಕ ಎಂದೇ ಹೆಸರಾದರು.
ಸಿನಿಮಾ
[ಬದಲಾಯಿಸಿ]ಈ ಮಧ್ಯೆ ಸಿನಿಮಾ ಹಾಸ್ಯನಟರಾಗಿ ಜನಪ್ರಿಯರಾದರು. ನಾಟಕಗಳಲ್ಲಿ ಪಳಗಿದ ಕಲಾವಿದನಿಗೆ ಸಿನಿಮಾ ನಟನೆ ಸಲೀಸು ಎಂಬುದಕ್ಕೆ ಬಾದರದಿನ್ನಿಯವರ ಲೀಲಾಜಾಲ ಅಭಿನಯವೇ ನಿದರ್ಶನ.
ಪ್ರಶಸ್ತಿ
[ಬದಲಾಯಿಸಿ]ತನ್ನ ಅನಾರೋಗ್ಯ ಉಪೇಕ್ಷಿಸಿ ರಂಗಭೂಮಿ ಆರೋಗ್ಯಕ್ಕೆ ಶ್ರಮಿಸಿದ ಅಶೋಕ ಬಾದರಿದಿನ್ನಿ ಅವರಿಗೆ ರಾಜ್ಯೋತ್ಸವ, ಸಾಣೇಹಳ್ಳಿ ಶಿವಸಂಚಾರದ ಶ್ರೀ ಶಿವಕುಮಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮುಡಿಗೇರಿವೆ.
ಪುಸ್ತಕ
[ಬದಲಾಯಿಸಿ]‘ರಂಗಸಂಪನ್ನರು’ ಮಾಲಿಕೆಯಡಿ ಕರ್ನಾಟಕ ನಾಟಕ ಅಕಾಡೆಮಿಯು ವಿಶ್ವನಾಥ ವಂಶಾಕೃತಮಠ ಅವರಿಂದ ‘ಅಶೋಕ ಬಾದರದಿನ್ನಿ’ ಪುಸ್ತಕ ಬರೆಸಿದೆ.
ನಿಧನ
[ಬದಲಾಯಿಸಿ]ದೀರ್ಘಕಾಲ ಅನಾರೋಗ್ಯದಿಂದ ಬಳಲಿದ್ದ ರಂಗಕರ್ಮಿ, ಚಿತ್ರನಟ ಅಶೋಕ ಬಾದರದಿನ್ನಿ (65) ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ 2016ರ ನವೆಂಬರ್ 24 ಗುರುವಾರ ಬೆಳಗಿನ ಜಾವ ನಿಧನರಾದರು.[೧].ಮೃತರಿಗೆ ಪತ್ನಿ ಅನಸೂಯಾ, ಪುತ್ರಿ ಶಿಲ್ಪಾ, ಶುಭಾಂಗಿ ಮತ್ತು ಪುತ್ರ ಪ್ರಕಾಶ ಇದ್ದಾರೆ. 2016ರ ನವೆಂಬರ್ 24 ಗುರುವಾರ ಮಧ್ಯಾಹ್ನ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಉಲ್ಲೇಖ
[ಬದಲಾಯಿಸಿ]- ↑ Theatre personality Ashok Badaradinni no more[ಶಾಶ್ವತವಾಗಿ ಮಡಿದ ಕೊಂಡಿ]