ಅರ್ನ್‌ಸ್ಟ್ ಮ್ಯಾಕ್
ಅರ್ನ್‌ಸ್ಟ್ ಮ್ಯಾಕ್ | |
---|---|
ಜನನ | ಅರ್ನ್‌ಸ್ಟ್ ಮ್ಯಾಕ್ ೧೮ ಫೆಬ್ರವರಿ ೧೮೩೮ ಆಸ್ಟ್ರಿಯ |
ರಾಷ್ಟ್ರೀಯತೆ | ಆಸ್ಟ್ರಿಯ |
ಅರ್ನ್‌ಸ್ಟ್ ಮ್ಯಾಕ್ ಆಸ್ಟ್ರಿಯಾದ ಭೌತವಿಜ್ಞಾನಿ.[೧] ಇವರು ೧೮೩೮ರ ಫೆಬ್ರವರಿ ೧೮ರಂದು ಆಸ್ಟ್ರಿಯಾ-ಹಂಗರಿಯಲ್ಲಿದ್ದ (ಈಗ ಝೆಕೋಸ್ಲಾವಾಕಿಯಾದಲ್ಲಿರುವ) ಚಿರ‍್ಲಿಟ್ಝ್-ಟುರಾಸ್ ಎಂಬ ಪ್ರದೇಶದಲ್ಲಿ ಜನಿಸಿದರು.
ಫೆಖ್ನರ್‌ನ ಪ್ರಭಾವ
[ಬದಲಾಯಿಸಿ]ಈತ ಭೌತ ವಿಜ್ಞಾನದಲ್ಲಿ ಶಿಕ್ಷಣ ಪಡೆದರೂ ಫೆಖ್ನರ್ ತತ್ಪೂರ್ವ ಪ್ರವರ್ತಿಸಿದ್ದ ಮನೋಭೌತ ವಿಜ್ಞಾನದಿಂದ (ಸೈಕೊಫಿಸಿಕ್ಸ್) ಪ್ರಭಾವಿತನಾಗಿ ಸಮಸ್ತ ಜ್ಞಾನವೂ ಸಂವೇದನೆಯ ಪರಿಣಾಮವೆಂದು ವಾದಿಸಿದ. (1872).
ಮೂಲತಃ ಭೌತ ವಿಜ್ಞಾನಿಯಾಗಿದ್ದ ಜರ್ಮನಿಯ ತಿಯೊಡೋರ್ ಫೆಖ್ನರ್ (1801 - 87) ತತ್ತ್ವಶಾಸ್ತ್ರ, ಕಾವ್ಯ, ಸಾಹಿತ್ಯ ಮತ್ತು ಮನಶ್ಶಾಸ್ತ್ರಗಳತ್ತ ತಿರುಗಿ ಮನೋಭೌತ ವಿಜ್ಞಾನ ಎಂಬ ನೂತನ ಅಧ್ಯಯನ ಪ್ರಕಾರವನ್ನು ಪ್ರಾರಂಭಿಸಿದ. ಉಷ್ಣ, ತೂಕ, ಬೆಳಕು, ಶಬ್ದ ಮುಂತಾದವುಗಳಲ್ಲಿಯ ಏರಿಳಿತಗಳನ್ನು ಮಾನವಮತಿ ಒಟ್ಟು ಮೊತ್ತದ ಶೇಕಡಾ 10 ರ ವ್ಯತ್ಯಾಸಗಳಲ್ಲಿ ಗುರುತಿಸಬಲ್ಲುದು ಎಂಬುದಾಗಿ ವೆಬರ್ ಶೋಧಿಸಿದ್ದ ನಿಯಮವನ್ನು ಪರಿಷ್ಕರಿಸಿ ಪ್ರಚಾರಕ್ಕೆ ತಂದುದರಿಂದ ಇದಕ್ಕೆ ಫೆಖ್ನರ್-ವೆಬರ್ ನಿಯಮವೆಂದು ಹೆಸರಿದೆ.
ಮ್ಯಾಕ್‍ನ ವಿಚಾರಗಳು
[ಬದಲಾಯಿಸಿ]ಜಗತ್ತಿನ ಸಮಸ್ತ ವಿದ್ಯಮಾನಗಳನ್ನೂ ನ್ಯೂಟನ್‌ಪ್ರಣೀತ ಸೂತ್ರಗಳನ್ನು ಆಧರಿಸಿ ವಿವರಿಸಬಹುದೆಂಬ ಅತಿ ಆತ್ಮವಿಶ್ವಾಸ ವಿಜ್ಞಾನಿಗಳ ಉಸಿರಾಗಿದ್ದ ದಿನಗಳಂದು ಮ್ಯಾಕ್ ಪ್ರವರ್ಧಮಾನಸ್ಥಿತಿಗೆ ಬಂದ. ಯಾಂತ್ರಿಕಾಧಾರದಿಂದ ಎಲ್ಲವನ್ನೂ ಅರ್ಥವಿಸಬಹುದೆಂಬುದು ವಿಜ್ಞಾನಿಗಳು ನಂಬಿದ್ದರು.
ನಿಸರ್ಗ ನಿಯಮಗಳು ಮಾನವಕೃತ ಸಾರ್ವತ್ರೀಕರಣಗಳು. ಅಸಮ್ಯಕ್ ವೀಕ್ಷಣೆಗಳನ್ನು ಅರ್ಥವಿಸಲು ಆತ ಸೃಷ್ಟಿಸಿರುವ ಅನುಕೂಲತೆಗಳು, ಸಂವೇದನೆಯ ಸಾಧುತ್ವವನ್ನು ಒಪ್ಪುವುದಾದರೆ ವೀಕ್ಷಣೆಗಳು ಮಾತ್ರ ಸತ್ಯವಾದವು ಎಂದು ಮ್ಯಾಕ್ ಒತ್ತಿ ಹೇಳಿದ.[೨]
ಪರಮಾಣವಿಕ ಸಿದ್ಧಾಂತವನ್ನು ಈತ ತೀವ್ರವಾಗಿ ವಿರೋಧಿಸಿದ. ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸುವ ಸಲುವಾಗಿ ಅಗೋಚರ ಮತ್ತು ಸಂವೇದನಾತೀತ ವಸ್ತುಗಳನ್ನು ಬಳಸುವ ವಿಧಾನವನ್ನು ನಿರಾಕರಿಸಿದ. ಉಷ್ಣದ ಹರಿವು ವೀಕ್ಷಿತ ಸಂಗತಿ. ಉಷ್ಣಗತಿ ವಿಜ್ಞಾನದ ನಿಯಮಗಳು ಇಂಥ ವೀಕ್ಷಿತ ಸಂಗತಿಗಳ ವ್ಯಾಖ್ಯಾನಗಳು, ಇವು ಸೊಗಸಾಗಿವೆ. ಇನ್ನೇನೂ ಅವಶ್ಯವಿಲ್ಲ ಎಂಬುದು ಈತನ ನಿಲುವು. ಹೀಗಲ್ಲದೇ ವೀಕ್ಷಿತ ಸಂಗತಿಗಳನ್ನು ಉದಾಹರಣೆಗೆ ಅನಿಲದ ವರ್ತನೆ ಅಥವಾ ಉಷ್ಣದ ಹರಿವು ವಿವರಿಸಲು ಮ್ಯಾಕ್ಸ್‌ವೆಲ್ಲನ ರೀತಿಯಲ್ಲಿ ಬಿಲಿಯರ್ಡ್ ಚಂಡು ಪರಿಕಲ್ಪನೆಯನ್ನು ಪ್ರವೇಶಗೊಳಿಸುವುದು ಮಾನವನ ಸಂವೇದನೆಗಳಿಗೆ ಅತೀತವಾದದ್ದು. ಆದ್ದರಿಂದ ಅನುಭಾವಿಕವಾದದ್ದು (ಮಿಸ್ಟಿಕಲ್) ಎಂದು ಭಾವಿಸಿದ.
ಅಲ್ಲದೇ ಆಕಾಶ ಮತ್ತು ಕಾಲ ಎಂಬವು ನಮ್ಮ ವೀಕ್ಷಣೆಗಳನ್ನು ಆಧರಿಸಿ ನಿರ್ಮಿಸಲಾದ ಸಾರ್ವತ್ರೀಕರಣಗಳು ಎಂಬ ಭಾವನೆಗಿಂತ ಹೆಚ್ಚಿನ ಮಹತ್ತ್ವವನ್ನು ಇವುಗಳಿಗೆ ನೀಡುವುದನ್ನು ವಿರೋಧಿಸಿದ. ಆಕಾಶದ ಗುಣಗಳು ಅದರೊಳಗಿನ ದ್ರವ್ಯರಾಶಿಯ ಮೊತ್ತ ಹಾಗೂ ಅದರ ವಿತರಣೆಯನ್ನು ಅವಲಂಬಿಸಿದೆ. ಅವುಗಳಿಗೆ ಪ್ರತ್ಯೇಕ ಅಸ್ತಿತ್ವವೇನೂ ಇಲ್ಲ ಎಂದು ವಾದಿಸಿದ.[೩] ಇದೇ ಮ್ಯಾಕನ ತತ್ತ್ವ. ಶಿಷ್ಟೀಕೃತ ಚಲನೆಗಳೊಂದಿಗೆ (ಉದಾಹರಣೆಗೆ ಗಡಿಯಾರದ ಮುಳ್ಳುಗಳ ಸರಿತಗಳು) ಹೋಲಿಸಬಹುದಾದ ಯಾವುದೇ ಇತರ ಚಲನೆಗಳ ಸಮುದಾಯವೇ ಕಾಲ ಎಂದು ನಿರೂಪಿಸಿದ.
ಮ್ಯಾಕನ ತತ್ತ್ವಶಾಸ್ತ್ರಕ್ಕೆ ಆತನ ಕಾಲದಲ್ಲಿ ಯಾವ ಉತ್ಸಾಹದಾಯಕ ಪ್ರತಿಕ್ರಿಯೆಯೂ ಲಭಿಸಲಿಲ್ಲ. ಪರಮಾಣುವಾದಿಗಳು ಆ ವೇಳೆಗಾಗಲೇ ಉಚ್ಛ್ರಾಯ ಪರ್ವವೈದಿದ್ದರು. ದಶಕಗಳು ಉರುಳಿದಂತೆ ಅವರ ಪ್ರಭಾವ ಪ್ರಬಲ ಆಯಿತು. ಅಲ್ಲಿಯ ತನಕ ಭಾವನಾ ಲೋಕದ ಅಮೂರ್ತ ಘಟಕಗಳಾಗಿದ್ದ ಪರಮಾಣುಗಳು ಐನ್‌ಸ್ಟೈನ್ ಮತ್ತು ಪೆರಿನ್ ಪ್ರಸಕ್ತ ಶತಮಾನದ ಆದಿಭಾಗದಲ್ಲಿ ಮಾಡಿದ ಆವಿಷ್ಕಾರಗಳ ಫಲವಾಗಿ ವಾಸ್ತವ ಲೋಕದ ಮೂರ್ತವಸ್ತುಗಳಾಗಿದ್ದವು. ಪರಿಸ್ಥಿತಿ ಹೀಗೆ ಮ್ಯಾಕ್ ಚಿಂತನಗಳಿಗೆ ಪ್ರತಿಕೂಲವಾಗಿದ್ದರೂ ಮ್ಯಾಕ್ ತತ್ತ್ವಶಾಸ್ತ್ರದ ಕೆಲವು ಅಂಶ ಮುಖ್ಯವಾಗಿ ಮ್ಯಾಕನ ತತ್ತ್ವ, ಐನ್‌ಸ್ಟೈನ್‌ರ ಚಿಂತನೆಯ ಮೇಲೆ ವಿಶೇಷ ಪ್ರಭಾವ ಬೀರಿತು ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ.
ಐನ್‌ಸ್ಟೈನರ ಸಾಪೇಕ್ಷತಾ ಸಿದ್ಧಾಂತ ಮ್ಯಾಕನ ಅನೇಕ ಚಿಂತನೆಗಳನ್ನು ಸಮನ್ವಯಿಸಿದ್ದರೂ ಮ್ಯಾಕ್ ಮಾತ್ರ ಈ ಸಿದ್ಧಾಂತವನ್ನು ಒಪ್ಪಲಿಲ್ಲ.
ಕೊಡುಗೆಗಳು
[ಬದಲಾಯಿಸಿ]ಮ್ಯಾಕ್‍ನ ಹೆಸರು ವಿಜ್ಞಾನ ಪ್ರಪಂಚದಲ್ಲಿ ಚಿರಸ್ಥಾಯಿಯಾಗಿರುವುದು ಆತ ವಾಯು ಪ್ರವಾಹ ಕುರಿತು ಮಾಡಿದ ಮೂಲಭೂತ ಚಿಂತನೆಗಳಿಂದ. ಯಾವುದೇ ವಸ್ತು ಶಬ್ದದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿರುವಾಗ ಅದು ಉಂಟುಮಡುವ ಒತ್ತಡ ಕ್ಷೇತ್ರ ವಸ್ತುವಿನ ಮುಂದೆ ಅತಿ ದೂರದವರೆಗೆ ವಿಸ್ತರಿಸಿರುವುದು. ಆದರೆ ವಸ್ತು ಶಬ್ದವೇಗಕ್ಕಿಂತ ಮಿಗಿಲಾದ ವೇಗದಲ್ಲಿ (ಇದಕ್ಕೆ ಪರಾಸ್ವನಿಕ (ಸೂಪರ್‌ಸಾನಿಕ್) ವೇಗವೆಂದು ಹೆಸರು) ಚಲಿಸುತ್ತಿರುವಾಗ ಒತ್ತಡ ಕ್ಷೇತ್ರ ಆ ಚಲಿಸುವ ವಸ್ತುವಿನ ಹಿಂಬದಿಯಲ್ಲಿ ಮಾತ್ರ ವಿಸ್ತರಿಸಿರುವುದು. ಈ ಅಧ್ಯಯನವನ್ನು ಮ್ಯಾಕ್ 1881 ರಲ್ಲಿ ನಡೆಸಿದ.
ನ್ಯೂಟನ್ ಸಿದ್ಧಾಂತದಲ್ಲಿದ್ದ ರಾಶಿಯ ಬಗೆಗಿನ ತಾರ್ಕಿಕ ಕ್ಲಿಷ್ಟತೆಯನ್ನು ಮ್ಯಾಕ್ ತೊಡೆದುಹಾಕಿದ. ಪರಸ್ಪರ ವರ್ತಿಸುವ ಎರಡು ವಸ್ತುಗಳ ರಾಶಿಗಳ ನಿಷ್ಪತ್ತಿ ಒಂದು ನಿರ್ದಿಷ್ಟ ಜಡತ್ವ ಚೌಕಟ್ಟಿಗೆ ಸಂಬಂಧಿಸಿದ ಅವುಗಳ ವೇಗೋತ್ಕರ್ಷಗಳ ಋಣಾತ್ಮಕ ವಿಲೊಮ ನಿಷ್ಪತ್ತಿಗೆ ಸಮ ಎಂಬುದನ್ನು ತೋರಿಸಿಕೊಟ್ಟ. ಇದರಿಂದಾಗಿ ಯಾವುದೇ ನಿರ್ದಿಷ್ಟ ಕಣದ ರಾಶಿಯನ್ನು ಏಕಮಾನವಾಗಿ ಗಣಿಸಿ ಉಳಿದೆಲ್ಲ ಕಣಗಳ ರಾಶಿಗಳನ್ನು ಅವು ಇದರೊಂದಿಗೆ ವರ್ತಿಸುವಂತೆ ಮಾಡಿ ನಿಷ್ಕರ್ಷಿಸಬಹುದಾಗಿದೆ.
ಹಾರಾಟದಲ್ಲಿರುವ ಪ್ರಕ್ಷೇಪ್ಯಗಳ (projectiles) ಛಾಯಾಚಿತ್ರಗಳನ್ನು ಪರೀಕ್ಷಿಸಿದ ಮ್ಯಾಕ್‌ರವರು ಅನಿಲದಿಂದ ಉತ್ಪತ್ತಿಯಾದ ಆಘಾತದ ಅಲೆಗಳು (shock waves) ಪ್ರಕ್ಷೇಪ್ಯದ ತುದಿಯ ಸುತ್ತಲೂ ಕಂಡುಬರುತ್ತದೆ ಎಂಬುದಾಗಿ ೧೮೮೭ರಲ್ಲಿ ಕಂಡುಹಿಡಿದರು. ಪ್ರಕ್ಷೇಪ್ಯ ಶಬ್ದದ ವೇಗವನ್ನು ತಲುಪಿದಾಗ ಅನಿಲಗಳ ಹರಿವಿನ ಸ್ವಭಾವವೂ ಬದಲಾಗುತ್ತದೆ ಎಂಬುದಾಗಿ ಅವರು ಕಂಡುಹಿಡಿದರು. ಚಲನೆಯಲ್ಲಿರುವ ಯಾವುದೇ ವಸ್ತುವಿನ ವೇಗ ಮತ್ತು ಅದು ಚಲಿಸುತ್ತಿರುವ ಮಾಧ್ಯಮದಲ್ಲಿನ ಶಬ್ದದ ವೇಗ ಒಂದಕ್ಕೊಂದು ನಿಷ್ಪತ್ತಿಯಾಗಿರುವುದು (ratio) ಎಂಬುದಾಗಿಯೂ ಅವರು ಕಂಡುಹಿಡಿದರು. ನಂತರದ ದಿನಗಳಲ್ಲಿ ಅಂದರೆ ೧೯೨೯ರಲ್ಲಿ ‘ಮ್ಯಾಕ್ ಸಂಖ್ಯೆ’ (Mach number) ರೂಢಿಗೆ ಬಂದಿತು. ಅಂದರೆ ಯಾವುದೇ ನಿಗದಿತ ಎತ್ತರದಲ್ಲಿ ಒಂದು ವಿಮಾನ ಶಬ್ದದ ವೇಗಕ್ಕಿಂತ ಎರಡು ಪಟ್ಟು ವೇಗದಲ್ಲಿ ಹಾರುತ್ತಿದ್ದರೆ, ಆ ವಿಮಾನ ‘ಮ್ಯಾಕ್ ೨’ರ ವೇಗದಲ್ಲಿ ಹಾರುತ್ತಿದೆ ಎಂಬುದಾಗಿ ಹೇಳುವುದು ವಾಡಿಕೆಯಾಗಿದೆ.[೪] ಆ ಸಂಶೋಧನೆ ವಾಯುಬಲವಿಜ್ಞಾನದ ಕ್ಷೇತ್ರದಲ್ಲಿ (aerodynamics) ಅದರಲ್ಲಿಯೂ ಜೆಟ್ ವಿಮಾನಗಳ ಸೂಪರ್‌ಸಾನಿಕ್ ಹಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು.
ನಿಧನ
[ಬದಲಾಯಿಸಿ]ಜರ್ಮನಿಯ ಮ್ಯೂನಿಕ್ ಸಮೀಪದ ಹಾರ್ ಎಂಬಲ್ಲಿ ಮರಣ, 19-2-1916.[೫]
ಉಲ್ಲೇಖಗಳು
[ಬದಲಾಯಿಸಿ]- ↑ "Ernst Mach". Encyclopædia Britannica. 2016. Retrieved 6 January 2016.
- ↑ Sonnert 2005, p. 221.
- ↑ Mach 1919: [The] investigator must feel the need of ... knowledge of the immediate connections, say, of the masses of the universe. There will hover before him as an ideal insight into the principles of the whole matter, from which accelerated and inertial motions will result in the same way.
- ↑ http://www.spaceandmotion.com/Physics-Ernst-Mach.htm
- ↑ Reichenbach, H (January 1983). "Contributions of Ernst Mach to Fluid Mechanics". Annual Review of Fluid Mechanics (in ಇಂಗ್ಲಿಷ್). 15 (1): 1–29. doi:10.1146/annurev.fl.15.010183.000245. ISSN 0066-4189. Retrieved 23 February 2023.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Ernst Mach bibliography of all of his papers and books from 1860 to 1916, compiled by Vienna lecturer Dr. Peter Mahr in 2016
- Various Ernst Mach links, compiled by Greg C Elvers
- Klaus Hentschel: Mach, Ernst, in: Neue Deutsche Biographie 15 (1987), pp. 605–609.
- Works by Ernst Mach at Project Gutenberg
- Works by or about ಅರ್ನ್‌ಸ್ಟ್ ಮ್ಯಾಕ್ at Internet Archive