ವಿಷಯಕ್ಕೆ ಹೋಗು

ಹರಪ್ಪ

ನಿರ್ದೇಶಾಂಕಗಳು: 30°38′N 72°52′E / 30.633°N 72.867°E / 30.633; 72.867
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರಪ್ಪ
ದೇಶ ಪಾಕಿಸ್ತಾನ
ರಾಜ್ಯಪಂಜಾಬ್
ಜಿಲ್ಲೆಸಹಿವಾಲ್ ಜಿಲ್ಲೆ
Time zoneUTC+5 (Pakistan Standard Time)

ಹರಪ್ಪ (ಉರ್ದು/ಪಂಜಾಬಿ: ہڑپہ, pronounced [ɦəɽəpːaː]) ಸಾಹಿವಾಲ್ ನ ಪಶ್ಚಿಮಕ್ಕೆ 20 km (12 mi)ದೂರದಲ್ಲಿರುವ, ಪಾಕಿಸ್ತಾನದ ಈಶಾನ್ಯದಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಮಹತ್ವದ ಪ್ರಾಚ್ಯವಸ್ತು ಸಂಶೋಧನಾ ಕುತೂಹಲಗಳ ಆಗರವಾದಂತಹ ಸ್ಥಳ. ಹಿಂದೆ ರಾವಿ ನದಿ ಹರಿಯುತ್ತಿದ್ದ ಸ್ಥಳದಲ್ಲಿ ಈಗ ಇರುವಂತಹ ಒಂದು ಆಧುನಿಕ ಹಳ್ಳಿಯ ಹೆಸರಿನಿಂದ ಇದಕ್ಕೂ ಈ ಹೆಸರು ಬಂದಿದ್ದು, ಈ ಹಳ್ಳಿಯು ಸಂಶೋಧನಾ ಸ್ಥಳದ ಆಗ್ನೇಯಕ್ಕೆ ಸುಮಾರು 5 km (3 mi) ದೂರದಲ್ಲಿದೆ. ಈ ಸ್ಥಳದಲ್ಲಿ ಕಂಚಿನ ಯುಗದ ಕೋಟೆಕೊತ್ತಲಗಳುಳ್ಳ ನಗರದ ಅವಶೇಷಗಳಿದ್ದು,ಇದು ಸಿಮೆಟ್ರಿ H ವಿಧಾನದ ಒಂದು ಭಾಗವಾಗಿದೆ ಹಾಗೂ ಸಿಂಧು ಕಣಿವೆ ನಾಗರಿಕತೆಯ ಅವಶೇಷಗಳ ಆಗರವಾಗಿದೆ; ಸಿಂಧ್ ಮತ್ತು ಪಂಜಾಬ್ ಗಳಲ್ಲಿ ಇದು ಕೇಂದ್ರಿತವಾಗಿದೆ.[] ಈ ನಗರದಲ್ಲಿ ಸುಮಾರು 23,500 ನಿವಾಸಿಗಳಿದ್ದರೆಂದು ನಂಬಲಾಗಿದೆ —ಆಗಿನ ಕಾಲಕ್ಕೆ ಅದು ಬಹಳ ದೊಡ್ಡ ಜನಸಂಖ್ಯೆ. 2005ರಲ್ಲಿ ಒಂದು ವಿವಾದಾತ್ಮಕ ಮೋಜಿನ ಉದ್ಯಾನದ ಯೋಜನೆಯನ್ನು ಈ ಸ್ಥಳದಲ್ಲಿ ಹಮ್ಮಿಕೊಳ್ಳುವುದನ್ನು ಕೈಬಿಡಲಾಯಿತು; ನಿರ್ಮಾಣ ಕಾರ್ಯದ ಪ್ರಪ್ರಥಮ ಹಂತದಲ್ಲೇ ಭೂಮಿಯನ್ನು ಅಗೆಯುತ್ತಿರುವಾಗ ನಿರ್ಮಾಣಗಾರರಿಗೆ ಹಲವಾರು ಪ್ರಾಚೀನ ಕಾಲದ ಮಾನವ ನಿರ್ಮಿತ ವಸ್ತುಗಳು ದೊರಕಲಾರಂಭಿಸಿದುದೇ ಈ ನಿಲುಗಡೆಗೆ ಕಾರಣ. ಪ್ರಮುಖ ಪಾಕಿಸ್ತಾನಿ ಪ್ರಾಚ್ಯವಸ್ತು ಸಂಶೋಧಕರಾದ ಅಹ್ಮದ್ ಹಸನ್ ದಾನಿಯವರು ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿದ ಮನವಿಯ ಮೇರೆಗೆ ಈ ಸ್ಥಳವನ್ನು ಯಥಾಸ್ಥಿತಿಯಲ್ಲಿ ಕಾದಿರಿಸಲಾಯಿತು.[]

ಇತಿಹಾಸ

[ಬದಲಾಯಿಸಿ]
ಸಿಂಧು ಕಣಿವೆಯಲ್ಲಿ ಹರಪ್ಪ ಇರುವ ಜಾಗ ಮತ್ತು ಸಿಂಧು ಕಣಿವೆ ನಾಗರಿಕತೆಯ ಹರಹು(ಹಸಿರು).

ಸಿಂಧು ಕಣಿವೆ ನಾಗರಿಕತೆಯ (ಹರಪ್ಪನ್ ನಾಗರಿಕತೆ ಎಂದೂ ಕರೆಯಲಾಗುತ್ತದೆ) ಮೂಲದ ಬೇರುಗಳು ಮೆಹರ್ಗರ್ ಸಂಸ್ಕೃತಿಯಲ್ಲಿ, ಸುಮಾರು ಕ್ರಿ.ಪೂ. 6000ದಷ್ಟು ಹಿಂದಿನ ಕಾಲದಲ್ಲೇ ಕಂಡು ಬರುತ್ತವೆ. ಎರಡು ಮಹತ್ವದ ನಗರಗಳಾದ ಮೊಹೆಂಜೊ-ದಾರೋ ಮತ್ತು ಹರಪ್ಪ ಸುಮಾರು ಕ್ರಿ.ಪೂ. 2600ರಲ್ಲಿ ಸಿಂಧು ನದಿ ಕಣಿವೆಯ ಗುಂಟ ಪಂಜಾಬ್ ಮತ್ತು ಸಿಂಧ್ ಗಳಲ್ಲಿ ತಲೆಯೆತ್ತಿತು..[] ಬರವಣಿಗೆಯ ವ್ಯವಸ್ಥೆ, ನಗರ ಪ್ರದೇಶಗಳು, ಮತ್ತು ವಿವಿಧಮುಖಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೊಂದಿದ್ದ ಈ ನಾಗರಿಕತೆಯನ್ನು 1920ರ ದಶಕದಲ್ಲಿ ಸಿಂಧ್ ಪ್ರಾಂತ್ಯದ ಸುಕ್ಕೂರ್ ನ ಬಳಿಯ ಮೊಹೆಂಜೊ-ದಾರೋ(ಎಂದರೆ "ಸತ್ತವರ ದಿಣ್ಣೆ" ಎಂದರ್ಥ)ವಿನಲ್ಲಿ ಮತ್ತು ಲಾಹೋರ್ ನ ದಕ್ಷಿಣ ಭಾಗದಲ್ಲಿರುವ ಪಶ್ಚಿಮ ಪಂಜಾಬ್ ನ ಹರಪ್ಪದಲ್ಲಿ ಉತ್ಖನನ ಕಾರ್ಯಗಳನ್ನು ಕೈಗೊಂಡ ನಂತರ ಮರುಸಂಶೋಧಿಸಲಾಯಿತು. ಈ ಉತ್ಖನನ ಸ್ಥಳದ ಉತ್ತರಕ್ಕಿರುವ ಭಾರತಪಂಜಾಬ್ ನ ಪಶ್ಚಿಮ ಭಾಗದಲ್ಲಿರುವ ಹಿಮಾಲಯದ ತಪ್ಪಲಿನಿಂದ ಆರಂಭವಾಗಿ,ಪಶ್ಚಿಮ ಮತ್ತು ಪೂರ್ವಕ್ಕೆ ಗುಜರಾತ್ ನ ವರೆಗೆ ಮತ್ತು ಪಶ್ಚಿಮದಲ್ಲಿ ಬಲೂಚಿಸ್ತಾನ್ ನವರೆಗೆ ಹಲವಾರು ಪ್ರಾಚ್ಯವಸ್ತು ನಿವೇಶನಗಳನ್ನು ಹುಡುಕಿ ತೆಗೆದು, ಅಧ್ಯಯನ ನಡೆಸಲಾಯಿತು. 1857ರಲ್ಲಿ [] ಲಾಹೋರ್-ಮುಲ್ತಾನ್ ರೈಲುಮಾರ್ಗವನ್ನು (ಸಿಂಧ್ ಮತ್ತು ಪಂಜಾಬ್ ರೈಲುಮಾರ್ಗದ ಅಂಗವಾಗಿ) ನಿರ್ಮಿಸುತ್ತಿದ್ದಾಗ ಸಂಬಂಧಿತ ಇಂಜಿನಿಯರ್ ಗಳು ಹರಪ್ಪದ ಅವಶೇಷಗಳಲ್ಲಿದ್ದ ಇಟ್ಟಿಗೆಗಳನ್ನು ತೆಗೆದು ಹಳಿ ಭರಾವಣೆಗಾಗಿ ಬಳಸಿಕೊಂಡದ್ದರಿಂದ ಹರಪ್ಪ ಪ್ರಾಚ್ಯವಸ್ತು ಸಂಶೋಧನಾ ನಿವೇಶನವು ಭಾಗಶಃ ಜಖಂಗೊಂಡಿತಾದರೂ, ಅಲ್ಲಿ ಸಾಕಷ್ಟು ಮಾನವನಿರ್ಮಿತ (ಕೃತಕ) ಪ್ರಾಚ್ಯವಸ್ತುಗಳು ದೊರಕಿದವು.[]

ಸಂಸ್ಕೃತಿ ಮತ್ತು ಆರ್ಥಿಕತೆ

[ಬದಲಾಯಿಸಿ]
ಗಾಡಿ ಚಾಲಕ ಕ್ರಿ.ಪೂ. 2000 ಹರಪ್ಪ, ಸಿಂಧು ಕಣಿವೆ ನಾಗರಿಕತೆ

ಸಿಂಧು ಕಣಿವೆ ನಾಗರಿಕತೆಯು ಪ್ರಧಾನವಾಗಿ ಒಂದು ನಗರ ಕೇಂದ್ರಿತ ಸಂಸ್ಕೃತಿಯನ್ನು ಹೊಂದಿದ್ದುದಾಗಿದ್ದು, ಹೆಚ್ಚುವರಿ ಕೃಷಿ ಉತ್ಪನ್ನ ಮತ್ತು ವ್ಯಾಪಾರಗಳ ಆಧಾರದ ಮೇಲೆ ಸುಗಮವಾಗಿ ನಡೆಯುವ ನಗರವಾಗಿತ್ತು; ದಕ್ಷಿಣ ಮೆಸೊಪೊಟಾಮಿಯಾದ ಸ್ಯೂಮರ್ ವರೆಗೆ ಇದು ವ್ಯಾಪಾರ, ವಹಿವಾಟುಗಳನ್ನು ಹೊಂದಿದ್ದಿತು. ಮೊಹೆಂಜೊ-ದಾರೋ ಮತ್ತು ಹರಪ್ಪ ಎರಡೂ "ವರ್ಗೀಕೃತ ವಸತಿ ಗೃಹಗಳನ್ನು ,ಸಮತಟ್ಟಾದ ಛಾವಣಿಗಳುಳ್ಳ ಇಟ್ಟಿಗೆಯ ಮನೆಗಳೂ ಮತ್ತು ಕೋಟೆಯಂತಹ ಆಡಳಿತ ಅಥವಾ ಧಾರ್ಮಿಕ ಕೇಂದ್ರಗಳ"ನ್ನು ಹೊಂದಿದ್ದವೆಂದು ಸಾಮಾನ್ಯವಾಗಿ ವಿವರಿಸಲಾಗಿದೆ.[] ಈ ವಿಧದ ಹೋಲಿಕೆಗಳು ನಾಗರಿಕ ಬಡಾವಣೆಯ ಮಾದರಿ ವ್ಯವಸ್ಥೆ ಮತ್ತು ಯೋಜನೆಗಳನ್ನು ಹೊಂದಿದ್ದವೆಂಬ ವಾದಕ್ಕೆ ಎಡೆ ಮಾಡಿಕೊಡುತ್ತವಾದರೂ, ಈ ಹೋಲಿಕೆಗಳು ಪ್ರಮುಖವಾಗಿ ಪಾರ್ಶ್ವ-ಲಂಬಕೋನದ ಮಾದರಿಯ ನಾಗರಿಕ ಬಡಾವಣೆಯ ಇರುವಿಕೆಯ ಕಾರಣ ಹುಟ್ಟಿಕೊಂಡಂತಹವಾಗಿದೆ ಹಾಗೂa ಮೊಹೆಂಜೊ-ದಾರೋ ಮತ್ತು ಹರಪ್ಪಗಳ ಬಡಾವಣೆಗಳನ್ನು ಹೋಲಿಸಿ ನೋಡಿದಾಗ, ವಾಸ್ತವವಾಗಿ ಎರಡೂ ಬಡಾವಣೆಗಳು ಸುಮಾರು ವ್ಯತಿರಿಕ್ತ ರೀತಿಯಲ್ಲಿ ವ್ಯವಸ್ಥೆಗೊಂಡಿರುವುದು ಕಂಡುಬರುತ್ತದೆ. ಸಿಂಧು ಕಣಿವೆ ನಾಗರಿಕತೆಯ ಚೆರ್ಟ್ ತೂಕಗಳು ಮತ್ತು ಅಳತೆಗಳು ಬಹಳವೇ ಉತ್ತಮಮಟ್ಟದ್ದಾಗಿದ್ದು,ಒಂದು ನಿಗದಿತ ಅಳತೆಯ ಅನುಕ್ರಮಕ್ಕೆ ಅನುಗುಣವಾದ ಮಾದರಿಯಲ್ಲಿದ್ದವು. ಇತರ ಸಲಕರಣೆಗಳಲ್ಲದೆ, ವಿಶಿಷ್ಟವಾದ ಮುದ್ರೆಗಳನ್ನು ಸಹ ಪ್ರಾಯಶಃ ಆಸ್ತಿ ಮತ್ತು ಹಡಗಿನಲ್ಲಿ ಕಳುಹಿಸುವ/ಪಡೆಯುವ ಸರಕು/ಸರಂಜಾಮುಗಳನ್ನು ಗುರುತ ಹಿಡಿಯುವ ಸಲುವಾಗಿ, ಬಳಸಲಾಗುತ್ತಿದ್ದಿತು ತಾಮ್ರ ಮತ್ತು ಕಂಚು ಗಳು ಬಳಕೆಯಲ್ಲಿದ್ದವಾದರೂ, ಕಬ್ಬಿಣ ಇನ್ನೂ ಬಳಕೆಯಲ್ಲಿರಲಿಲ್ಲ. "ಹತ್ತಿ ಯನ್ನು ನೇಯ್ದು, ಬಣ್ಣ ಹಾಕಿ ಬಟ್ಟೆಗಳಾಗಿ ಉಪಯೋಗಿಸಲಾಗುತ್ತಿತ್ತು; ಗೋಧಿ, ಭತ್ತ, ಹಾಗೂ ಹಲವಾರು ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು; ಹಾಗೂ ಡುಬ್ಬದ ಗೂಳಿಯನ್ನೊಳಗೊಂಡಂತೆ ಹಲವಾರು ಪ್ರಾಣಿಗಳನ್ನು ಸಾಕಲಾಗುತ್ತಿತ್ತು."[] ತಿಗುರಿಯಲ್ಲಿ ತಯಾರಿಸಿದ ಮಡಕೆ,ಕುಡಿಕೆಗಳು - ಕೆಲವು ಪ್ರಾಣಿಗಳ ಮತ್ತು ರೇಖಾಗಣಿತದ ಚಿಹ್ನೆಗಳನ್ನು ಹೊಂದಿರುವಂತಹವು - ಎಲ್ಲಾ ಪ್ರಮುಖ ಸಿಂಧು ನಿವೇಶನಗಳಲ್ಲೂ ಹೇರಳವಾಗಿ ದೊರೆತಿವೆ. ಸಮಗ್ರ ನಾಗರಿಕತೆಗೆ ಅಲ್ಲವಾದರೂ, ಪ್ರತಿ ನಗರಕ್ಕೂ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯು ಇದ್ದಿತೆಂದು ಪ್ರಕಟಿತ ಏಕರೂಪದ ಸಂಸ್ಕೃತಿಯಿಂದ ಅಂದಾಜು ಮಾಡಬಹುದಾಗಿದೆ; ಆದರೆ ಆ ಆಡಳಿತವು ಒಂದು ವಾಣಿಜ್ಯದವರ ಸಣ್ಣಗುಂಪಿನ ಆಡಳಿತವಾಗಿದ್ದಿತೋ, ಅಲ್ಲವೋ ಎಂಬುದನ್ನು ಖಚಿತವಾಗಿ ನಿರ್ಧರಿಸಲಾಗಿಲ್ಲ. ಪಾದ್ರಿವರ್ಗದವರ "ಆಡಂಬರ ಅಥವಾ ದುಂದುಗಾರಿಕೆಯ ಪ್ರದರ್ಶನ"ದ ಯಾವ ಕುರುಹೂ ಇಲ್ಲಿ ಇರಲಿಲ್ಲವೆನಿಸುತ್ತದೆ; ಅಂದಿನ ದಿನಗಳಲ್ಲಿ ಅಂತಹ ಆಡಂಬರವು ಇತರ ನಾಗರಿಕತೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]
ಹರಪ್ಪ ನಿವಾಸದ ಕೊನೆಯ ಹಂತಗಳ ಅವಶೇಷಗಳು: ಒಂದು ದೊಡ್ಡ ಬಾವಿ ಮತ್ತು ಸ್ನಾನಘಟ್ಟಗಳು
ಹರಪ್ಪದ ಪುಟ್ಟ ಹರಕೆಗೆ ಸಂಬಂಧಿಸಿದ ಪ್ರತಿಮೆಗಳು ಅಥವಾ ಪ್ರತಿಮೆಗಳು, ಸುಮಾರು2500ನೆಯ ಇಸವಿ. ಕರ-ಕುಶಲ ಟೆರ್ರಾ-ಕೋಟಾ (ಮಣ್ಣಿನ) ಬಹುವರ್ಣಭೂಷಿತ ಸಣ್ಣ ಪ್ರತಿಮೆಗಳು.

ಇಂದಿನವರೆಗೆ ಸಂಶೋಧಿಸಿ ಉತ್ಖನನ ಮಾಡಿ ಹೊರತೆಗೆಯಲಾದ ಅತ್ಯಂತ ಸೂಕ್ಷ್ಮವಾದ ಮತ್ತು ಅಪರೂಪದ ಮಾನವ ನಿರ್ಮಿತ ವಸ್ತುಗಳೆಂದರೆ ಚಿಕ್ಕ, ಚೌಕಾಕಾರದ, ಮಾನವನ ಅಥವಾ ಪ್ರಾಣಿಗಳ ಚಿಹ್ನೆಗಳ ಕೆತ್ತನೆ ಕೆಲಸ/ ಕುಸುರಿ ಕೆಲಸ ಇರುವಂತಹ ಸ್ಟಿಯಟೈಟ್ ಮುದ್ರೆಗಳು. ಮೊಹೆಂಜೊ-ದಾರೋದಲ್ಲಿ ಈ ಮಾದರಿಯ ಮುದ್ರೆಗಳು ಬಲು ದೊಡ್ಡ ಪ್ರಮಾಣದಲ್ಲಿ ದೊರಕಿದ್ದು, ಹಲವಾರು ಮುದ್ರೆಗಳ ಮೇಲೆ ಸಾಮಾನ್ಯವಾಗಿ ಸಿಂಧು ಲಿಪಿಯೆಂದು ಹೇಳಲಾದ ಲಿಪಿಯಲ್ಲಿ ಚಿತ್ರರೂಪದ ಕೆತ್ತನೆಗಳಿವೆ. ಜಗತ್ತಿನ ಎಲ್ಲಾ ಭಾಗಗಳಿಂದ ಬಂದ ಹಲವಾರು ಲಿಪಿತಜ್ಞರು ಶತಪ್ರಯತ್ನಟ್ಟರೂ ಹಾಗೂ ಆಧುನಿಕ ಸಂಕೇತಗಳ ವಿಶ್ಲೇಷಣೆಯ ತಂತ್ರಗಳನ್ನು ಬಳಸಿದರೂ, ಈ ಲಿಪಿ ಇಂದಿಗೂ ಯಾರಿಗೂ ಅರ್ಥವಾಗದ ಕಬ್ಬಿಣದ ಕಡಲೆಯಾಗಿದೆ. ಇದು ಪ್ರೋಟೋ-ದ್ರವಿಡಿಯನ್ ಬಿಂಬಿಸುತ್ತದೋ, ಪ್ರೋಟೋ-ಸ್ಟ್ರಮಾನಿಕ್ (ಜೈನ) ಬಿಂಬಿಸುತ್ತದೋ, ಅಥವಾ ವೇದಸಂಬಂಧಿತಕ್ಕೆ ವಿರೋಧವಾದುದನ್ನೋ, ಅಥವಾ ಇದು ಬ್ರಾಹ್ಮೀ ಲಿಪಿಗೆ ಸಂಬಂಧಿಸುದುದೋ ಎಂದು ಅರಿಯಲು ಇಂದಿನವರೆಗೆ ಸಾಧ್ಯವಾಗಿಲ್ಲ. ಸಿಂಧು ಕಣಿವೆ ನಾಗರಿಕತೆಯ ಪ್ರತಿಮಾಶಾಸ್ತ್ರ ಮತ್ತು ಶಿಲಾಶಾಸನಗಳನ್ನು ಐತಿಹಾಸಿಕವಾಗಿ ತಿಳಿದಿರುವಂತಹ ಸಂಸ್ಕೃತಿಗಳಿಂದ ಬಂದುವೆಂದು ಆರೋಪಿಸುವುದು ಬಹಳ ಸಮಸ್ಯಾತ್ಮಕವಾದುದು; ಅಷ್ಟೇನೂ ದೃಢವಲ್ಲದ ಪುರಾತತ್ವ ಸಂಶೋಧನೆಗಳ ಪುರಾವೆಗಳ ಆಧಾರ ಮತ್ತು ಈ ಪ್ರದೇಶದ ಸಂಶೋಧನಾ ದಾಖಲೆಗಳ ಬಗ್ಗೆ ಆಧುನಿಕ ದಕ್ಷಿಣ ಏಷ್ಯಾದ ರಾಜಕೀಯವು ತೋರುತ್ತಿರುವ ಕಾಳಜಿಗಳ ಕಾರಣಗಳಿಂದ ಈ ವಿಧವಾಗಿ ಆರೋಪಣೆ ದುಃಸಾಧ್ಯವಾಗಿದೆ. ವಿಶೇಷತಃ ಹರಪ್ಪದ ವಸ್ತು ಸಂಸ್ಕೃತಿಯ ಬಗ್ಗೆ ಮೂಲತಃ ಪಾಕಿಸ್ತಾನ ಮತ್ತು ಭಾರತದ ಪಂಡಿತರು ಬೇರೆಯದೇ ಆದ ವ್ಯಾಖ್ಯಾನಗಳನ್ನು ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಟಿಪ್ಪಣಿಗಳು

[ಬದಲಾಯಿಸಿ]
ಹರಪ್ಪ. ದೊಡ್ಡ ಆಳವಾದ ಪಾತ್ರೆಯ ಒಂದು ಚೂರು, ಸುಮಾರು 2500 B.C.E. ಕೆಂಪು ಮತ್ತು ಕಪ್ಪನೆಯ ಸ್ಲಿಪ್-ಮಾದರಿಯ ಬಣ್ಣದ ಅಲಂಕಾರವಿರುವ ಕೆಂಪು ಮಡಿಕೆ-ಕುಡಿಕೆಗಳು, 4 15/16 x 6 1/8 ಅಂಗುಲ (12.5 x 15.5 ಸೆಂ.ಮೀ). ಬ್ರೂಕ್ಲಿನ್ ವಸ್ತುಸಂಗ್ರಹಾಲಯ
  • ಜಾಲತಾಣದಲ್ಲಿ ಉಲ್ಲೇಖಿಸಿರುವ ಮೊಟ್ಟಮೊದಲ ರೇಡಿಯೋಕಾರ್ಬನ್ ಡೇಟಿಂಗ್ 2725+-185 BCE (ದೃಢವಲ್ಲದ ಕಾಲಮಾನ) ಅಥವಾ 3338, 3213, 3203 BCE ದೃಢೀಕೃತ, ಸರಾಸರಿ ಕಾಲಮಾನ 3251 BCE. ಕೆನೋಯರ್, ಜೊನಾಥನ್ ಮಾರ್ಕ್ (1991) ಅರ್ಬನ್ ಪ್ರೋಸೆಸ್ ಇನ್ ದ ಇಂಡಸ್ ಟ್ರೆಡಿಷನ್: ಎ ಪ್ರಿಲಿಮಿನರಿ ರಿಪೋರ್ಟ್. ಹರಪ್ಪ ಉತ್ಖನನದಲ್ಲಿ, 1986-1990: ಎ ಮಲ್ಟಿಡಿಸಿಪ್ಲಿನೇರಿಯನ್ ಅಪ್ರೋಚ್ ಟು ಥರ್ಡ್ ಮಿಲೆನಿಯಂ ಅರ್ಬನಿಸಂ, ಸಂಪಾದಕರು ರಿಚರ್ಡ್ ಹೆಚ್. ಮೆಡೋ: 29-59. ಮಾನೋಗ್ರಾಫ್ಸ್ ಇನ್ ವರ್ಲ್ಡ್ ಆರ್ಕಿಯಾಲಜಿ ನಂ.3. ಪ್ರಿಹಿಸ್ಟರಿ ಪ್ರೆಸ್, ಮ್ಯಾಡಿಸನ್ ವಿಸ್ಕಾನ್ಸಿನ್.
  • ಅವಧಿ ನಾಲ್ಕು ಮತ್ತು ಐದುಗಳು ಹರಪ್ಪದಲ್ಲಿ ದಿನಾಂಕ ನಿರ್ಧರಿತವಾದುವಲ್ಲ. ಹರಪ್ಪದಲ್ಲಿ ಹರಪ್ಪದ ಸಂಪ್ರದಾಯವು ಕೊನೆಗೊಳಿಸಲ್ಪಟ್ಟದ್ದು ಸುಮಾರು1900 ಮತ್ತು 1500 ಬಿಸಿಇಯ ಮಧ್ಯಕಾಲದಲ್ಲಾಗುತ್ತದೆ.
  • ಮೊಹೆಂಜೊ-ದಾರೋ ಅದೇ ಕಾಲದ ಮತ್ತೊಂದು ಪ್ರಮುಖ ನಗರ; ಇದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದೆ. ಬಹಳ ಪ್ರಸಿದ್ಧವಾದ ಕಟ್ಟಡಗಳ ಪೈಕಿ ಮೊಹೆಂಜೊ-ದಾರೋವಿನ ಬೃಹತ್ ಸ್ನಾನಘಟ್ಟವೂ ಒಂದು.
  • ಧೋಲಾವಿರಾ ಒಂದು ಪುರಾತನ ಮೆಟ್ರೋಪಾಲಿಟನ್ ನಗರ. ಧೋಲಾವಿರಾ ಮತ್ತು ಮೊಹೆಂಜೊ-ದಾರೋವಿನಂತಹ ಇತರ ಸಿಂಧು ನಗರಗಳಲ್ಲಿ ಉಪಯೋಗಿಸುತ್ತಿದ್ದಂತಹ ಅಳತೆಯ ಇಟ್ಟಿಗೆಗಳು ಮತ್ತು ಮಾಪನಗಳನ್ನೇ ಹರಪ್ಪದವರೂ ಉಪಯೋಗಿಸುತ್ತಿದ್ದರು. ಈ ನಗರಗಳು ಉತ್ತಮವಾಗಿ ರೂಪಿಸಲ್ಪಟ್ಟಿದ್ದವು, ಅಗಲವಾದ ರಸ್ತೆಗಳು, ಸಾರ್ವಜನಿಕ ಮತ್ತು ಖಾಸಗಿ ಬಾವಿಗಳು, ಸ್ನಾನಘಟ್ಟಗಳು ಮತ್ತು ಜಲಾಶಯಗಳು ಇದ್ದವು.

ಉಲ್ಲೇಖಗಳು

[ಬದಲಾಯಿಸಿ]
  1. ಬಶಾಂಮ್.ಎ.ಎಲ್1968. ರಿವ್ಯೂ ಆಫ್ ಎ ಶಾರ್ಟ್ ಹಿಸ್ಟರಿ ಆಫ್ ಪಾಕಿಸ್ತಾನ್ ಲೇಖಕ ಎ. ಹೆಚ್. ದಾನಿ (ಪರಿಚಯಾತ್ಮಕ ನುಡಿಗಳು ಐ. ಹೆಚ್. ಖುರೇಷಿ). ಕರಾಚಿ: ಯೂನಿವರ್ಸಿಟಿ ಆಫ್ ಕರಾಚಿ ಪ್ರೆಸ್/1}. 1967 ಪೆಸಿಫಿಕ್ ಅಫೇರ್ಸ್ 41(4) : 641-643.
  2. ತಾಹಿರ್, ಝುಲ್ಕರ್ನೈನ್. 26 ಮೇ 2005. ಪ್ರೋಬ್ ಬಾಡಿ ಆನ್ ಹರಪ್ಪ ಪಾರ್ಕ್, ಡಾನ್ . ಮರುಸಂಪಾದಿಸಿದ್ದು 23 ಜನವರಿ 2010.
  3. Beck, Roger B. (1999). World History: Patterns of Interaction. Evanston, IL: McDougal Littell. ISBN 0-395-87274-X. {{cite book}}: Unknown parameter |coauthors= ignored (|author= suggested) (help)CS1 maint: extra punctuation (link)
  4. ಮೈಕೆಲ್ ಡೆನಿನೊ. "ದ ಲೋಸ್ಟ್ ರಿವರ್ ".ಪೆಂಗ್ವಿನ್ ಇಂಡಿಯಾ .
  5. ಕೆನೋಯರ್, ಜೆ.ಎಂ., 1997, ಟ್ರೇಡ್ ಎಂಡ್ ಟೆಕ್ನಾಲಜಿ ಆಫ್ ದ ಇಂಡಸ್ ವ್ಯಾಲಿ: ನ್ಯೂ ಇಂಸೈಟ್ಸ್ ಫ್ರಂ ಹರಪ್ಪ ಪಾಕಿಸ್ತಾನ್, ವರ್ಲ್ಡ್ ಆರ್ಕಿಯಾಲಜಿ, 29(2), ಪುಟಗಳು 260-280, ಹೈ ಡೆಫನೆಷನ್ ಆರ್ಕಿಯಾಲಜಿ
  6. ೬.೦ ೬.೧ ಲೈಬ್ರರಿ ಆಫ್ ಕಾಂಗ್ರೆಸ್: ಕಂಟ್ರಿ ಸ್ಟಡೀಸ್. (1995). ಹರಪ್ಪನ್ ಕಲ್ಚರ್. ಮರುಸಂಪಾದಿಸಿದ್ದು 23 ಜನವರಿ 2010.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

30°38′N 72°52′E / 30.633°N 72.867°E / 30.633; 72.867

"https://kn.wikipedia.org/w/index.php?title=ಹರಪ್ಪ&oldid=1171347" ಇಂದ ಪಡೆಯಲ್ಪಟ್ಟಿದೆ