ಗಣಕ ವಿಜ್ಞಾನ
ಗಣಕ ವಿಜ್ಞಾನವು (ಅಥವಾ ಗಣನಾ ವಿಜ್ಞಾನ) ಮಾಹಿತಿ ಹಾಗೂ ಗಣನೆಯ ಸೈದ್ಧಾಂತಿಕ ಆಧಾರಗಳ, ಮತ್ತು ಗಣಕಯಂತ್ರ ವ್ಯವಸ್ಥೆಗಳಲ್ಲಿ ಅವುಗಳ ಕಾರ್ಯಾನ್ವಯ (ಇಂಪ್ಲಮಂಟೇಶನ್) ಹಾಗೂ ಬಳಸುವಿಕೆಗಾಗಿ ಕಾರ್ಯೋಪಯೋಗಿ ವಿಧಾನಗಳ ಅಧ್ಯಯನ.[೧][೨][೩] ಆಗಾಗ, ಮಾಹಿತಿಯನ್ನು ವರ್ಣಿಸುವ ಮತ್ತು ರೂಪಾಂತರಿಸುವ ಕ್ರಮಾವಳಿ ಲಕ್ಷಣದ ಕ್ರಿಯಾಸರಣಿಗಳ (ಆಲ್ಗರಿತ್ಮಿಕ್ ಪ್ರೋಸೆಸ್) ಕ್ರಮಬದ್ಧವಾದ ಅಧ್ಯಯನವೆಂದು ಅದನ್ನು ವಿವರಿಸಲಾಗುತ್ತದೆ; "ಯಾವುದನ್ನು (ಸಮರ್ಥವಾಗಿ) ಯಾಂತ್ರೀಕರಿಸಬಹುದು?" ಎಂಬುದು ಗಣಕ ವಿಜ್ಞಾನಕ್ಕೆ ಆಧಾರವಾದ ಮೂಲಭೂತವಾದ ಪ್ರಶ್ನೆಯಾಗಿದೆ[೪] ಗಣಕ ವಿಜ್ಞಾನವು ಹಲವಾರು ಉಪಕ್ಷೇತ್ರಗಳನ್ನು ಹೊಂದಿದೆ; ಗಣಕಯಂತ್ರ ಚಿತ್ರ ನಿರ್ಮಾಣದಂತಹ (ಕಂಪ್ಯೂಟರ್ ಗ್ರ್ಯಾಫ಼ಿಕ್ಸ್) ಕೆಲವು ಉಪಕ್ಷೇತ್ರಗಳು ನಿರ್ದಿಷ್ಟ ಪರಿಣಾಮಗಳ ಗಣನೆಗೆ ಒತ್ತುಕೊಟ್ಟರೆ, ಗಣನಾತ್ಮಕ ಸಂಕೀರ್ಣತೆ ಸಿದ್ಧಾಂತದಂತಹ (ಕಾಂಪ್ಯುಟೇಶನಲ್ ಕಂಪ್ಲೆಕ್ಸಿಟಿ ಥೀಯರಿ) ಇತರ ಕೆಲವು ಉಪಕ್ಷೇತ್ರಗಳು ಗಣನಾತ್ಮಕ ಸಮಸ್ಯೆಗಳ (ಕಾಂಪ್ಯುಟೇಶನಲ್ ಪ್ರಾಬ್ಲಮ್) ಲಕ್ಷಣಗಳನ್ನು ಅಧ್ಯಯನಮಾಡುತ್ತವೆ. ಇನ್ನೂ ಕೆಲವು ಉಪಕ್ಷೇತ್ರಗಳು ಗಣನೆಗಳನ್ನು ಕಾರ್ಯಗತಮಾಡುವಾಗ ಬರುವ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತವೆ. ಉದಾಹರಣೆಗೆ, ಕ್ರಮವಿಧಿ ಭಾಷಾ ಸಿದ್ಧಾಂತವು (ಪ್ರೋಗ್ರ್ಯಾಮಿಂಗ್ ಲ್ಯಾಂಗ್ವಿಜ್ ಥೀಯರಿ) ಗಣನೆಗಳನ್ನು ವಿವರಿಸುವ ಕಾರ್ಯವಿಧಾನಗಳನ್ನು ಅಧ್ಯಯನಮಾಡಿದರೆ, ಗಣಕಯಂತ್ರ ಕ್ರಮವಿಧಿಕರಣವು (ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್) ನಿರ್ದಿಷ್ಟ ಗಣನಾತ್ಮಕ ಸಮಸ್ಯೆಗಳನ್ನು ಬಿಡಿಸಲು ನಿರ್ದಿಷ್ಟ ಕ್ರಮವಿಧಿ ಭಾಷೆಗಳನ್ನು ಪ್ರಯೋಗಿಸುತ್ತದೆ, ಮತ್ತು ಮಾನವ-ಗಣಕಯಂತ್ರ ಸಂವಹನವು (ಹ್ಯೂಮನ್-ಕಂಪ್ಯೂಟರ್ ಇಂಟರ್ಆಕ್ಷನ್) ಗಣಕಯಂತ್ರಗಳು ಮತ್ತು ಗಣನೆಗಳನ್ನು ಪ್ರಯೋಜನಕಾರಿ, ಉಪಯುಕ್ತ, ಹಾಗೂ ವಿಶ್ವವ್ಯಾಪಿಯಾಗಿ ಜನರಿಗೆ ಸುಲಭವಾಗಿ ತಲುಪಲು ಮಾಡುವಲ್ಲಿ ಬರುವ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತದೆ. ಸಾಮಾನ್ಯ ಜನರು ಕೆಲವೊಮ್ಮೆ ಗಣಕ ವಿಜ್ಞಾನವನ್ನು ಗಣಕಯಂತ್ರಗಳಿಗೆ ಸಂಬಂಧಿಸಿರುವ (ಮಾಹಿತಿ ತಂತ್ರಜ್ಞಾನದಂತಹ) ಉದ್ಯೋಗ ಸಂಬಂಧಿ ಕ್ಷೇತ್ರಗಳೊಂದಿಗೆ ತಪ್ಪಾಗಿ ಸಂಬಂಧಿಸುತ್ತಾರೆ, ಅಥವಾ, ವಿಶಿಷ್ಟವಾಗಿ ಗಣಕಯಂತ್ರದಲ್ಲಿ ಆಟವಾಡುವುದು (ಕಂಪ್ಯೂಟರ್ ಗೇಮ್ಸ್), ಅಂತರಜಾಲ ತಾಣಗಳ ವೀಕ್ಷಣೆ (ಬ್ರೌಸ಼ಿಂಗ್), ಮತ್ತು ಪದ ಸಂಸ್ಕರಣೆಯಂತಹ (ವರ್ಡ್ ಪ್ರೋಸೆಸಿಂಗ್) ಚಟುವಟಿಕೆಗಳನ್ನು ಒಳಗೊಂಡಂತೆ, ಗಣಕಯಂತ್ರದೊಂದಿಗಿನ ತಮ್ಮ ಸ್ವಂತ ಅನುಭವಕ್ಕೆ ಅದು ಸಂಬಂಧಿಸಿದೆಯೆಂದು ಭಾವಿಸುತ್ತಾರೆ. ಆದರೆ, ಗಣಕ ವಿಜ್ಞಾನದ ಪ್ರಾಧಾನ್ಯ ಹೆಚ್ಚಾಗಿ ಕಂಪ್ಯೂಟರ್ ಗೇಮ್ಸ್ ಹಾಗೂ ಅಂತರಜಾಲ ವೀಕ್ಷಣಾ ತಂತ್ರಾಂಶಗಳಂತಹ (ಬ್ರೌಸ಼ರ್) ತಂತ್ರಾಂಶವನ್ನು ಕಾರ್ಯಗತಮಾಡಲು ಬಳಸಲಾದ ಕ್ರಮವಿಧಿಗಳ ಲಕ್ಷಣಗಳನ್ನು ತಿಳಿಯುವುದರ ಮೇಲೆ, ಮತ್ತು ಆ ತಿಳಿವಳಿಕೆಯನ್ನು ಬಳಸಿ ಹೊಸ ಕ್ರಮವಿಧಿಗಳನ್ನು ರಚಿಸುವುದರ ಮೇಲೆ ಅಥವಾ ಅಸ್ತಿತ್ವದಲ್ಲಿರುವವುಗಳನ್ನು ಉತ್ತಮಗೊಳಿಸುವುದರ ಮೇಲಿರುತ್ತದೆ.[೫]
ಇತಿಹಾಸ
[ಬದಲಾಯಿಸಿ]ಗಣಕ ವಿಜ್ಞಾನವೆಂದು ಒಪ್ಪಲಾದ ಸಿದ್ಧಾಂತದ ಮುಂಚಿನ ತಳಹದಿಗಳು ಆಧುನಿಕ ಅಂಕೀಯ ಗಣಕಯಂತ್ರದ ಆವಿಷ್ಕರಣಕ್ಕಿಂತಲೂ ಹಿಂದಿನ ದಿನಾಂಕದ್ದಾಗಿವೆ. ಮಣಿಚೌಕಟ್ಟಿನಂತಹ (ಅಬ್ಯಾಕಸ್) ನಿಗದಿತ ಅಂಕೀಯ ಕಾರ್ಯಗಳ ಲೆಕ್ಕಮಾಡುವ ಯಂತ್ರಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ವಿಲ್‌ಹೆಲ್ಮ್ ಶಿಕಾರ್ಡ್ ಮೊದಲ ಯಾಂತ್ರಿಕ ಲೆಕ್ಕದ ಕೋಷ್ಟಕವನ್ನು (ಕ್ಯಾಲ್ಕ್ಯುಲೇಟರ್) ೧೬೨೩ರಲ್ಲಿ ರೂಪಿಸಿದನು.[೬] ಚಾರ್ಲ್ಸ್ ಬ್ಯಾಬಿಜ್ ಏಡಾ ಲವ್‌ಲೇಸ್‌ಳ ಸಹಾಯದಿಂದ ಒಂದು ವ್ಯತ್ಯಾಸ ಯಂತ್ರವನ್ನು (ಡಿಫ಼ರನ್ಸ್ ಎಂಜನ್) ರಾಣಿ ವಿಕ್ಟೋರಿಯಾಳ ಕಾಲದಲ್ಲಿ[೭] ರೂಪಿಸಿದನು.[೮] ೧೯೦೦ರ ಸರಿಸುಮಾರು, ರಂಧ್ರಕ ಯಂತ್ರಗಳನ್ನು[೯] (ಪಂಚ್-ಕಾರ್ಡ್ ಮಷೀನ್) ಪರಿಚಯಿಸಲಾಯಿತು. ಆದರೆ, ಈ ಎಲ್ಲ ಯಂತ್ರಗಳು ಒಂದೇ ಕಾರ್ಯವನ್ನು ಮಾಡಬಲ್ಲವಾಗಿದ್ದವು, ಅಥವಾ ಅತ್ಯುತ್ತಮ ಮಟ್ಟದಲ್ಲಿ ಎಲ್ಲ ಸಂಭವನೀಯ ಕಾರ್ಯಗಳ ಪೈಕಿ ಯಾವುದೋ ಒಂದು ಉಪವರ್ಗವನ್ನು ನಿರ್ವಹಿಸುತ್ತಿದ್ದವು. ೧೯೪೦ರ ದಶಕದ ಅವಧಿಯಲ್ಲಿ, ಮತ್ತಷ್ಟು ಹೊಸದಾದ ಮತ್ತು ಹೆಚ್ಚು ಶಕ್ತಿಯುಳ್ಳ ಗಣನಾ ಯಂತ್ರಗಳನ್ನು ಅಭಿವೃದ್ಧಿಗೊಳಿಸಲಾಯಿತು, ಮತ್ತು ಅವುಗಳ ಮಾನವ ಪೂರ್ವವರ್ತಿಗಳ ಬದಲಾಗಿ ಗಣಕಯಂತ್ರ ಪದವು ಈ ಯಂತ್ರಗಳನ್ನು ನಿರ್ದೇಶಿಸಲು ಬಳಸಲಾಯಿತು. ಕೇವಲ ಗಣಿತದ ಲೆಕ್ಕಾಚಾರಗಳಿಗಷ್ಟೇ ಅಲ್ಲದೆ ಇನ್ನೂ ಹೆಚ್ಚಿನದಕ್ಕೆ ಗಣಕಯಂತ್ರಗಳನ್ನು ಬಳಸಬಹುದೆಂದು ಸ್ಪಷ್ಟವಾದಾಗ, ಗಣಕ ವಿಜ್ಞಾನದ ಕಾರ್ಯಕ್ಷೇತ್ರವು ಒಟ್ಟಾರೆಯಾಗಿ ಗಣನೆಯ ಅಧ್ಯಯನವನ್ನು ಒಳಗೊಳ್ಳುವಂತೆ ವಿಸ್ತರಿಸಿತು. ೧೯೫೦ರ ದಶಕ ಮತ್ತು ೧೯೬೦ರ ದಶಕದ ಪ್ರಾರಂಭದಲ್ಲಿ ಮೊದಲ ಗಣಕ ವಿಜ್ಞಾನ ವಿಭಾಗಗಳು ಮತ್ತು ಶೈಕ್ಷಣಿಕ ಪದವಿ ಕ್ರಮಗಳ ರಚನೆಯೊಂದಿಗೆ ಗಣಕ ವಿಜ್ಞಾನವನ್ನು ಒಂದು ಪ್ರತ್ಯೇಕ ಸೈದ್ಧಾಂತಿಕ ಶಿಕ್ಷಣ ವಿಷಯವಾಗಿ ಸ್ಥಾಪನೆಯಾಗುವುದು ಪ್ರಾರಂಭವಾಯಿತು.[೪][೧೦] ಕಾರ್ಯರೂಪದ ಗಣಕಯಂತ್ರಗಳು ದೊರಕಲು ಆರಂಭವಾದಾಗಿನಿಂದ, ಗಣನೆಯ ಹಲವು ಉಪಯೋಗಗಳು ಅವುಗಳ ಸ್ವಂತ ಸಾಮರ್ಥ್ಯದಿಂದ ಪ್ರತ್ಯೇಕ ಅಧ್ಯಯನ ಕ್ಷೇತ್ರಗಳಾಗಿವೆ. ಗಣಕಯಂತ್ರಗಳು ವಾಸ್ತವಿಕವಾಗಿ ಒಂದು ವೈಜ್ಞಾನಿಕ ಕಾರ್ಯಕ್ಷೇತ್ರವಾಗುವುದು ಅಸಾಧ್ಯವೆಂದು ಹಲವರು ಪ್ರಾರಂಭದಲ್ಲಿ ನಂಬಿದ್ದರಾದರೂ, ಐವತ್ತರ ದಶಕದ ಕೊನೆಯ ವರ್ಷಗಳಲ್ಲಿ ಕ್ರಮೇಣವಾಗಿ ಶೈಕ್ಷಣಿಕ ಜನಸಂಖ್ಯೆಯ ಹಲವರಿಂದ ಅದು ಅಂಗೀಕೃತಗೊಂಡಿತು.[೧೧] ಈಗ ಹೆಸರುವಾಸಿಯಾಗಿರುವ ಆಯ್‌ಬೀಎಮ್ ಚಿಹ್ನೆಯು ಆ ಕಾಲದಲ್ಲಿ ಗಣಕ ವಿಜ್ಞಾನ ಕ್ರಾಂತಿಯ ಒಂದು ಭಾಗವಾಗಿತ್ತು. ಅಂತಹ ಸಾಧನಗಳ ಅನ್ವೇಷಣಾ ಅವಧಿಯ (ಎಕ್ಸ್‌ಪ್ಲರೇಶನ್ ಪೀರಿಯಡ್) ಕಾಲದಲ್ಲಿ ವ್ಯಾಪಕವಾಗಿ ಬಳಸಲಾದ ಆಯ್‌ಬೀಎಮ್ ೭೦೪ ಮತ್ತು ನಂತರ ಆಯ್‌ಬೀಎಮ್ ೭೦೯ ಸರಣಿಯ ಗಣಕಯಂತ್ರಗಳನ್ನು ಆಯ್‌ಬೀಎಮ್ (ಇಂಟರ್‌ನ್ಯಾಶನಲ್ ಬಿಸ಼ಿನೆಸ್ ಮಶೀನ್ಸ್ ಎಂಬುದರ ಹ್ರಸ್ವರೂಪ) ಸಂಸ್ಥೆ ಬಿಡುಗಡೆ ಮಾಡಿತು. "ಇಷ್ಟಾದರೂ, ಆಯ್‌ಬೀಎಮ್ ಗಣಕಯಂತ್ರದೊಂದಿಗೆ ಕೆಲಸಮಾಡುವುದು ನಿರಾಶಾದಾಯಕವಾಗಿತ್ತು...ಒಂದು ಆದೇಶದಲ್ಲಿ ಒಂದೇ ಒಂದು ಅಕ್ಷರವನ್ನು ನೀವು ತಪ್ಪುಜಾಗದಲ್ಲಿಟ್ಟಿದ್ದರೆ, ಕ್ರಮವಿಧಿಯು ಕಾರ್ಯಮಾಡುವುದನ್ನು ನಿಲ್ಲಿಸಿಬಿಡುತ್ತಿತ್ತು, ಮತ್ತು ನೀವು ಸಂಪೂರ್ಣ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸಬೇಕಾಗುತ್ತಿತ್ತು".[೧೧] ೧೯೫೦ರ ದಶಕದ ಕೊನೆಯ ವರ್ಷಗಳಲ್ಲಿ, ಗಣಕ ವಿಜ್ಞಾನದ ವಿಷಯವು ಅದರ ಅತ್ಯಂತ ಆರಂಭಿಕ ಬೆಳವಣಿಗೆಯ ಹಂತಗಳಲ್ಲಿತ್ತು, ಮತ್ತು ಇಂತಹ ವಿಷಯಗಳು ಸಾಮಾನ್ಯವಾಗಿದ್ದವು. ಗಣಕ ವಿಜ್ಞಾನ ತಂತ್ರಶಾಸ್ತ್ರದ ಉಪಯುಕ್ತತೆ ಮತ್ತು ಸಾಮರ್ಥ್ಯದಲ್ಲಿ ಕಾಲವು ಗಮನಾರ್ಹ ಸುಧಾರಣೆಗಳನ್ನು ಕಂಡಿದೆ. ಆಧುನಿಕ ಸಮಾಜ, ಗಣಕಯಂತ್ರಗಳ ಬಳಕೆಯು ಕೇವಲ ಪರಿಣತರು ಅಥವಾ ವೃತ್ತಿನಿರತರಿಂದ ಆಗುತ್ತಿದ್ದ ಕಾಲದಿಂದ ಹೆಚ್ಚು ವ್ಯಾಪಕ ಬಳಕೆದಾರ ನೆಲೆಗಾಗಿರುವ ಒಂದು ಗಮನಾರ್ಹ ಬದಲಾವಣೆಯನ್ನು ಕಂಡಿದೆ.
ಪ್ರಮುಖ ಸಾಧನೆಗಳು
[ಬದಲಾಯಿಸಿ]ತುಲನಾತ್ಮಕವಾಗಿ ಒಂದು ಶಾಸ್ತ್ರೋಕ್ತ ಸೈದ್ಧಾಂತಿಕ ಶಿಕ್ಷಣ ವಿಷಯವಾಗಿ ಅದರ ಲಘು ಇತಿಹಾಸದ ಹೊರತಾಗಿಯೂ, ಗಣಕ ವಿಜ್ಞಾನವು ವಿಜ್ಞಾನ ಮತ್ತು ಸಮಾಜಕ್ಕೆ ಹಲವಾರು ಮೂಲಭೂತ ಕೊಡುಗೆಗಳನ್ನು ನೀಡಿದೆ. ಇವುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
- ಪ್ರಚಲಿತ ಮಾಹಿತಿ ಯುಗ ಮತ್ತು ಅಂತರಜಾಲವನ್ನು ಒಳಗೊಂಡ "ಅಂಕೀಯ ಕ್ರಾಂತಿ"ಯನ್ನು (ಡಿಜಿಟಲ್ ರೆವಲ್ಯೂಶನ್) ಪ್ರಾರಂಭಿಸಿತು.[೧೩]
- ಗಣನೆ ಹಾಗೂ ಗಣನಾರ್ಹತೆಯ (ಕಂಪ್ಯೂಟೆಬಿಲಿಟಿ) ಒಂದು ಶಾಸ್ತ್ರೋಕ್ತ ವ್ಯಾಖ್ಯಾನ, ಮತ್ತು ಗಣನಾತ್ಮಕವಾಗಿ ಬಿಡಿಸಲಾಗದ ಹಾಗೂ ಬೇಗ ಬಿಡಿಸಲಾಗದ (ಇನ್ಟ್ರ್ಯಾಕ್ಟಬಲ್) ಸಮಸ್ಯೆಗಳಿವೆ ಎಂಬುದಕ್ಕೆ ಸಾಕ್ಷ್ಯ.[೧೪]
- ಅಮೂರ್ತಿಕರಣದ (ಅಬ್ಸ್ಟ್ರ್ಯಾಕ್ಷನ್) ವಿವಿಧ ಸ್ತರಗಳಲ್ಲಿ ಕ್ರಮಶಾಸ್ತ್ರ ಸಂಬಂಧಿತ ಮಾಹಿತಿಯ ಖಚಿತವಾದ ಅಭಿವ್ಯಕ್ತಿಗೆ ಒಂದು ಸಾಧನವಾದ ಕ್ರಮವಿಧಿ ಭಾಷೆಯ ಪರಿಕಲ್ಪನೆ.[೧೫]
- ಗೂಢಲಿಪಿ ವಿಜ್ಞಾನದಲ್ಲಿ (ಕ್ರಿಪ್ಟಾಗ್ರಫ಼ಿ), ಅನಿಗ್ಮಾ ಯಂತ್ರದ ಭೇದನವು ಎರಡನೇ ವಿಶ್ವಯುದ್ಧದಲ್ಲಿ ಮಿತ್ರರಾಷ್ಟ್ರಗಳ ಗೆಲುವಿಗೆ ನೆರವಾದ ಒಂದು ಪ್ರಮುಖ ಅಂಶವಾಗಿತ್ತು.[೧೨]
- ವೈಜ್ಞಾನಿಕ ಗಣನಾ ಪ್ರಕ್ರಿಯೆಯಿಂದ (ಸಾಯಂಟಿಫ಼ಿಕ್ ಕಂಪ್ಯೂಟಿಂಗ್) ಸಾಧ್ಯವಾದ ಮನಸ್ಸಿನ ಉನ್ನತ ಅಧ್ಯಯನ, ಮತ್ತು ಮಾನವ ತಳಿವಿಜ್ಞಾನ ಮಾಹಿತಿ ಯೋಜನೆಯಿಂದ (ಹ್ಯೂಮನ್ ಜೀನೋಮ್ ಪ್ರಾಜೆಕ್ಟ್) ಮಾನವನ ತಳಿವಿಜ್ಞಾನದ ಮಾಹಿತಿಯ (ಹ್ಯೂಮನ್ ಜೀನೋಮ್) ಗುರುತಿಸುವಿಕೆ ಸಾಧ್ಯವಾಯಿತು.[೧೩] ಫ಼ೋಲ್ಡಿಂಗ್ಅಟ್ಹೋಮ್ನಂತಹ ವಿಭಕ್ತ ಗಣನಾ ಕ್ರಿಯೆ (ಡಿಸ್ಟ್ರಿಬ್ಯೂಟಿಡ್ ಕಂಪ್ಯೂಟಿಂಗ್) ಯೋಜನೆಗಳು ಸಸಾರಜನಕ ಮಡಿಚುವಿಕೆಯನ್ನು (ಪ್ರೋಟೀನ್ ಫ಼ೋಲ್ಡಿಂಗ್) ಅಧ್ಯಯನ ಮಾಡುತ್ತವೆ.
- ಕ್ರಮಾವಳಿ ಆಧಾರಿತ ವ್ಯಾಪಾರವು (ಆಲ್ಗರಿಥಮಿಕ್ ಟ್ರೇಡಿಂಗ್) ಕೃತಕ ಬುದ್ಧಿಮತ್ತೆ (ಆರ್ಟಫ಼ಿಶಲ್ ಇಂಟೆಲಿಜನ್ಸ್), ಯಂತ್ರ ಗ್ರಹಿಕೆ (ಮಷೀನ್ ಲರ್ನಿಂಗ್), ಮತ್ತು ಇತರ ಸಂಖ್ಯಾಸಂಗ್ರಹಣ ಹಾಗೂ ಆಂಕಿಕ ವಿಧಾನಗಳನ್ನು ಒಂದು ದೊಡ್ಡ ಪ್ರಮಾಣದಲ್ಲಿ ಬಳಸಿ ಹಣಕಾಸು ಮಾರುಕಟ್ಟೆಗಳ ಫಲದಾಯಕತೆ ಮತ್ತು ದ್ರವ ಸಾಮರ್ಥ್ಯವನ್ನು ಹೆಚ್ಚಿಸಿದೆ.[೧೬]
ಗಣಕ ವಿಜ್ಞಾನದ ಕಾರ್ಯಕ್ಷೇತ್ರಗಳು
[ಬದಲಾಯಿಸಿ]ಒಂದು ಅಧ್ಯಯನ ವಿಭಾಗವಾಗಿ, ಗಣಕ ವಿಜ್ಞಾನವು ಕ್ರಮಾವಳಿಗಳ ಸೈದ್ಧಾಂತಿಕ ಅಧ್ಯಯನ ಮತ್ತು ಗಣನೆಯ ಪರಿಮಿತಿಗಳಿಂದ ಹಿಡಿದು ಯಂತ್ರಾಂಶ ಹಾಗೂ ತಂತ್ರಾಂಶಗಳಲ್ಲಿ ಗಣನಾ ವ್ಯವಸ್ಥೆಗಳನ್ನು ಕಾರ್ಯಗತಮಾಡುವ ಕಾರ್ಯೋಪಯೋಗಿ ಅಂಶಗಳವರೆಗಿನ ಹಲವಾರು ವಿಷಯಗಳ ಕ್ಷೇತ್ರವನ್ನು ವ್ಯಾಪಿಸುತ್ತದೆ.[೧೭][೧೮] ಗಣನಾ ಯಂತ್ರ ವ್ಯವಸ್ಥೆಗಳ ಸಂಘ (ಅಸೋಸಿಯೇಶನ್ ಫ಼ಾರ್ ಕಂಪ್ಯೂಟಿಂಗ್ ಮಶೀನರಿ - ಏಸೀಎಮ್), ವಿದ್ಯುಚ್ಛಕ್ತಿ ಮತ್ತು ವಿದ್ಯುನ್ಮಾನ ಇಂಜಿನಿಯರುಗಳ ಸಂಸ್ಥೆಯ (ಇನ್‌ಸ್ಟಿಟ್ಯೂಟ್ ಆಫ಼್ ಇಲೆಕ್‌ಟ್ರಿಕಲ್ ಅಂಡ್ ಇಲೆಕ್‌ಟ್ರಾನಿಕ್ ಇಂಜಿನಿಯರ್ಸ್ - ಆಯ್ಈಈಈ) ಗಣಕ ಸಂಘ, ಮತ್ತು ಮಾಹಿತಿ ವ್ಯವಸ್ಥೆಗಳ ಸಂಘಗಳ (ಅಸೋಸಿಯೇಶನ್ ಫ಼ಾರ್ ಇನ್‌ಫ಼ರ್ಮೇಶನ್ ಸಿಸ್ಟಮ್ಸ್) ಪ್ರತಿನಿಧಿಗಳಿಂದ ರಚಿತವಾದ ಗಣಕ ವಿಜ್ಞಾನಗಳ ದೃಢೀಕರಣ ಸಮಿತಿಯು (ಕಂಪ್ಯೂಟರ್ ಸಾಯನ್ಸಸ್ ಅಕ್ರೆಡಿಟೇಶನ್ ಬೋರ್ಡ್ - ಸೀಎಸ್ಏಬೀ) ಗಣಕ ವಿಜ್ಞಾನದ ಬೋಧನ ಶಾಖೆಗೆ ಅದು ನಿರ್ಣಾಯಕವೆಂದು ಪರಿಗಣಿಸುವ ನಾಲ್ಕು ಕ್ಷೇತ್ರಗಳನ್ನು ಗುರುತಿಸುತ್ತದೆ: ಗಣನಾ ಸಿದ್ಧಾಂತ (ಥೀಯರಿ ಆಫ಼್ ಕಾಂಪ್ಯೂಟೇಶನ್), ಕ್ರಮಾವಳಿಗಳು ಮತ್ತು ದತ್ತ ಸಂರಚನೆಗಳು (ಆಲ್ಗರಿದಮ್ಸ್ ಅಂಡ್ ಡೇಟಾ ಸ್ಟ್ರಕ್ಚರ್ಸ್), ಕ್ರಮವಿಧಿ ಶಾಸ್ತ್ರ ಮತ್ತು ಭಾಷೆಗಳು (ಪ್ರೋಗ್ರ್ಯಾಮಿಂಗ್ ಮೆಥಡಾಲಜಿ ಅಂಡ್ ಲ್ಯಾಂಗ್ವಿಜಸ್), ಮತ್ತು ಗಣಕಯಂತ್ರ ಘಟಕಗಳು ಮತ್ತು ರಚನೆ (ಕಂಪ್ಯೂಟರ್ ಎಲಮಂಟ್ಸ್ ಅಂಡ್ ಆರ್ಕಿಟೆಕ್ಚರ್). ಈ ನಾಲ್ಕು ಕ್ಷೇತ್ರಗಳ ಜೊತೆಗೆ, ತಂತ್ರಾಂಶ ಶಾಸ್ತ್ರ (ಸಾಫ಼್ಟ್‌ವೇರ್ ಎಂಜನಿಯರಿಂಗ್), ಕೃತಕ ಬುದ್ಧಿಮತ್ತೆ, ಗಣಕ ಜಾಲ ವಿಜ್ಞಾನ ಮತ್ತು ಸಂಪರ್ಕ ವ್ಯವಸ್ಥೆ (ಕಂಪ್ಯೂಟರ್ ನೆಟ್‌ವರ್ಕಿಂಗ್ ಅಂಡ್ ಕಮ್ಯೂನಿಕೇಶನ್), ದತ್ತಸಂಚಯ ವ್ಯವಸ್ಥೆಗಳು (ಡೇಟಬೇಸ್ ಸಿಸ್ಟಮ್ಸ್), ಸಮಕಾಲಿಕ ಗಣನೆ (ಪ್ಯಾರಲಲ್ ಕಾಂಪ್ಯೂಟೇಶನ್), ವಿಭಕ್ತ ಗಣನೆ (ಡಿಸ್ಟ್ರಿಬ್ಯೂಟಿಡ್ ಕಾಂಪ್ಯೂಟೇಶನ್), ಗಣಕಯಂತ್ರ-ಮಾನವ ಸಂವಹನ, ಗಣಕಯಂತ್ರ ಚಿತ್ರ ನಿರ್ಮಾಣ, ಕಾರ್ಯಕಾರಿ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಮ್ಸ್), ಹಾಗೂ ಆಂಕಿಕ ಮತ್ತು ಸಾಂಕೇತಿಕ ಗಣನೆಗಳಂತಹ (ನ್ಯೂಮರಿಕಲ್ ಅಂಡ್ ಸಿಂಬಾಲಿಕ್ ಕಾಂಪ್ಯೂಟೇಶನ್) ಕಾರ್ಯಕ್ಷೇತ್ರಗಳು ಸಹ ಗಣಕ ವಿಜ್ಞಾನದ ಪ್ರಮುಖ ಕ್ಷೇತ್ರಗಳೆಂದು ಸೀಎಸ್ಏಬೀ ಗುರುತಿಸುತ್ತದೆ.[೧೭]
ಗಣನಾ ಸಿದ್ಧಾಂತ
[ಬದಲಾಯಿಸಿ]ಗಣನಾ ಸಿದ್ಧಾಂತದ ಅಧ್ಯಯನವು ಯಾವುದನ್ನು ಗಣನೆ ಮಾಡಬಹುದು, ಮತ್ತು ಆ ಗಣನೆಗಳನ್ನು ನಿರ್ವಹಿಸಲು ಸಂಪನ್ಮೂಲಗಳ ಎಷ್ಟು ಪರಿಮಾಣ ಬೇಕಾಗುತ್ತದೆ ಎಂಬವುಗಳ ಬಗ್ಗೆ ಮೂಲಭೂತ ಸಮಸ್ಯೆಗಳ ಉತ್ತರ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಮೊದಲನೆಯ ಪ್ರಶ್ನೆಗೆ ಉತ್ತರನೀಡುವ ಒಂದು ಪ್ರಯತ್ನವಾಗಿ, ಗಣನಾರ್ಹತೆ ಸಿದ್ಧಾಂತವು (ಕಂಪ್ಯೂಟಬಿಲಿಟಿ ಥೀಯರಿ) ವಿವಿಧ ಸೈದ್ಧಾಂತಿಕ ಗಣನೆಯ ವಿನ್ಯಾಸಗಳ (ಮಾಡಲ್ ಆಫ಼್ ಕಾಂಪ್ಯೂಟೇಶನ್) ಆಧಾರದ ಮೇಲೆ ಯಾವ ಗಣನಾ ಸಂಬಂಧಿ ಸಮಸ್ಯೆಗಳು ಬಿಡಿಸಬಲ್ಲವಾಗಿವೆ ಎಂಬುದನ್ನು ಪರಿಶೀಲಿಸುತ್ತದೆ. ಎರಡನೆಯ ಪ್ರಶ್ನೆಯು, ಒಂದು ಗಣನಾತ್ಮಕ ಸಮಸ್ಯೆಯನ್ನು ಬಿಡಿಸುವ ವಿಭಿನ್ನ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಕಾಲಾವಧಿ ಮತ್ತು ಸ್ಥಳ ವೆಚ್ಚಗಳನ್ನು ಅಧ್ಯಯನಮಾಡುವ ಗಣನಾತ್ಮಕ ಸಂಕೀರ್ಣತೆ ಸಿದ್ಧಾಂತದಿಂದ ನಿರ್ವಹಿಸಲ್ಪಡುತ್ತದೆ. ಸಹಸ್ರಮಾನದ ಬಹುಮಾನ ಸಮಸ್ಯೆಗಳ[೧೯] (ಮಿಲೇನಿಯಮ್ ಪ್ರೈಜ಼್ ಪ್ರಾಬ್ಲಮ್ಸ್) ಪೈಕಿ ಒಂದಾದ ಪ್ರಸಿದ್ಧ "ಬಹುಪದೀಯ = ಅನಿಶ್ಚಯಾತ್ಮಕ ಬಹುಪದೀಯ?" (ಪೀ = ಎನ್‌ಪೀ) ಸಮಸ್ಯೆಯು ಗಣನಾ ಸಿದ್ಧಾಂತದಲ್ಲಿ ಒಂದು ನಿರ್ಧಾರವಾಗದ ಸಮಸ್ಯೆಯಾಗಿದೆ (ಓಪನ್ ಪ್ರಾಬ್ಲಮ್).
ಬಹುಪದೀಯ = ಅನಿಶ್ಚಯಾತ್ಮಕ ಬಹುಪದೀಯ ? ಗಣನಾರ್ಹತೆ ಸಿದ್ಧಾಂತ ಗಣನಾ ಸಂಕೀರ್ಣತೆ ಸಿದ್ಧಾಂತ
ಸೈದ್ಧಾಂತಿಕ ಗಣಕ ವಿಜ್ಞಾನ
[ಬದಲಾಯಿಸಿ]ಹೆಚ್ಚು ವಿಶಾಲವಾದ ಕಾರ್ಯಕ್ಷೇತ್ರವಾದ ಸೈದ್ಧಾಂತಿಕ ಗಣಕ ವಿಜ್ಞಾನವು (ಥೀಯರೆಟಿಕಲ್ ಕಂಪ್ಯೂಟರ್ ಸಾಯನ್ಸ್)ಗಣನೆಯ ಶಾಸ್ತ್ರೀಯ ಸಿದ್ಧಾಂತ ಮತ್ತು ಗಣನಾ ಶಾಸ್ತ್ರದ ಹೆಚ್ಚು ಅಮೂರ್ತ, ತಾರ್ಕಿಕ, ಹಾಗೂ ಗಣಿತಶಾಸ್ತ್ರದ ಅಂಶಗಳ ಮೇಲೆ ಕೇಂದ್ರೀಕರಿಸುವ ಇತರ ವಿಷಯಗಳ ಒಂದು ವಿಸ್ತಾರವಾದ ವ್ಯಾಪ್ತಿಕ್ಷೇತ್ರ ಎರಡನ್ನೂ ಒಳಗೊಳ್ಳುತ್ತದೆ.
ಗಣಿತೀಯ ತರ್ಕಶಾಸ್ತ್ರ ಸ್ವಯಂಚಾಲಿತ ವ್ಯವಸ್ಥೆ ಸಿದ್ಧಾಂತ ಸಂಖ್ಯಾಸಿದ್ಧಾಂತ ಗ್ರಾಫ಼್ ಸಿದ್ಧಾಂತ ವರ್ಗಗಣ ಸಿದ್ಧಾಂತ ವರ್ಗ ಸಿದ್ಧಾಂತ ಗಣನಾ ರೇಖಾಗಣಿತ ಕ್ವಾಂಟಮ್ ಗಣನಾ ಸಿದ್ಧಾಂತ
ಕ್ರಮಾವಳಿಗಳು ಮತ್ತು ದತ್ತ ಸಂರಚನೆಗಳು
[ಬದಲಾಯಿಸಿ]ಕ್ರಮವಿಧಿ ಶಾಸ್ತ್ರ ಮತ್ತು ಭಾಷೆಗಳು
[ಬದಲಾಯಿಸಿ]ಗಣಕಯಂತ್ರ ಘಟಕಗಳು ಮತ್ತು ರಚನೆ
[ಬದಲಾಯಿಸಿ]ಆಂಕಿಕ ಮತ್ತು ಸಾಂಕೇತಿಕ ಗಣನೆ
[ಬದಲಾಯಿಸಿ]ಜೀವಮಾಹಿತಿ ವಿಜ್ಞಾನ ಸಂವೇದನಾ ವಿಜ್ಞಾನ ಗಣನಾತ್ಮಕ ರಸಾಯನಶಾಸ್ತ್ರ ಗಣನಾತ್ಮಕ ನರವಿಜ್ಞಾನ ಗಣನಾತ್ಮಕ ಭೌತಶಾಸ್ತ್ರ ಆಂಕಿಕ ಕ್ರಮಾವಳಿಗಳು ಸಾಂಕೇತಿಕ ಗಣಿತಶಾಸ್ತ್ರ
ಅನ್ವಯಗಳು
[ಬದಲಾಯಿಸಿ]ಈ ಕೆಳಗೆ ನಮೂದಿಸಿದ ಅಧ್ಯಯನ ವಿಭಾಗಗಳನ್ನು ಹಲವುವೇಳೆ ಒಂದು ಹೆಚ್ಚು ಸೈದ್ಧಾಂತಿಕ, ಗಣಕ ವಿಜ್ಞಾನ ದೃಷ್ಟಿಕೋನದಿಂದ, ಜೊತೆಗೆ ಒಂದು ಹೆಚ್ಚು ವ್ಯಾವಹಾರಿಕ, ಯಂತ್ರ ವಿಜ್ಞಾನದ ದೃಷ್ಟಿಕೋನದಿಂದಲೂ ಅಧ್ಯಯನಮಾಡಲಾಗುತ್ತದೆ.
ಕಾರ್ಯಕಾರಿ ವ್ಯವಸ್ಥೆಗಳು ಗಣಕಯಂತ್ರ ಜಾಲಗಳು ಗಣಕಯಂತ್ರ ಚಿತ್ರರಚನೆಗಳು ಗಣಕಯಂತ್ರ ದೃಷ್ಟಿವಿಜ್ಞಾನ ದತ್ತಸಂಚಯಗಳು ಗಣಕಯಂತ್ರ ಭದ್ರತಾ ವಿಜ್ಞಾನ ಕೃತಕ ಬುದ್ಧಿಮತ್ತೆ ಯಂತ್ರಮಾನವ ವಿಜ್ಞಾನ ಮಾನವ-ಗಣಕಯಂತ್ರ ಸಂವಹನ ಸರ್ವವ್ಯಾಪಿ ಗಣಕಯಂತ್ರ ಬಳಕೆ
ಇತರ ಕಾರ್ಯಕ್ಷೇತ್ರಗಳೊಂದಿಗಿನ ಸಂಬಂಧ
[ಬದಲಾಯಿಸಿ]ಅದರ ಹೆಸರು ಹಾಗಿದ್ದರೂ, ಗಣಕ ವಿಜ್ಞಾನದ ಪ್ರಧಾನ ಭಾಗವು ಗಣಕಯಂತ್ರಗಳದ್ದೇ ಅಧ್ಯಯನವನ್ನು ಒಳಗೊಳ್ಳುವುದಿಲ್ಲ. ಈ ಕಾರಣದಿಂದ, ಹಲವು ಪರ್ಯಾಯ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಮುಖ ವಿಶ್ವವಿದ್ಯಾಲಯಗಳ ಕೆಲವು ವಿಭಾಗಗಳು ಕರಾರುವಾಕ್ಕಾಗಿ ಆ ವ್ಯತ್ಯಾಸಕ್ಕೆ ಒತ್ತುಕೊಡಲು ಗಣನಾ ವಿಜ್ಞಾನ ಪದವನ್ನು ಇಷ್ಟಪಡುತ್ತವೆ. ಡೆನ್‌ಮಾರ್ಕ್‌ನ ವಿಜ್ಞಾನಿ ಪೀಟರ್ ನಾವರ್ ಈ ಶಾಖೆಯು ಕಡ್ಡಾಯವಾಗಿ ಗಣಕಯಂತ್ರಗಳ ಅಧ್ಯಯನವನ್ನು ಒಳಗೊಳ್ಳದೇ ದತ್ತಾಂಶ ಮತ್ತು ದತ್ತಾಂಶದ ಸಂಸ್ಕರಣದ ಮೇಲೆ ಕೇಂದ್ರೀಕರಿಸುತ್ತದೆಂಬ ವಸ್ತುಸ್ಥಿತಿಯನ್ನು ಪ್ರತಿಬಿಂಬಿಸಲು ದತ್ತ ಶಾಸ್ತ್ರ (ಡೇಟಾಲಜಿ) ಎಂಬ ಪದವನ್ನು ಸೂಚಿಸಿದರು. ಪೀಟರ್ ನಾವರ್ ದತ್ತ ಶಾಸ್ತ್ರದ ಮೊದಲ ಪ್ರಾಧ್ಯಾಪಕರಾಗಿದ್ದ, ೧೯೬೯ರಲ್ಲಿ ಸ್ಥಾಪಿತವಾದ ಕೋಪನ್‌ಹೇಗನ್ ವಿಶ್ವವಿದ್ಯಾಲಯದ ದತ್ತ ಶಾಸ್ತ್ರ ವಿಭಾಗ ಈ ಪದವನ್ನು ಬಳಸಿದ ಮೊದಲನೆಯ ವೈಜ್ಞಾನಿಕ ಸಂಸ್ಥೆಯಾಗಿತ್ತು. ಈ ಪದವನ್ನು ಮುಖ್ಯವಾಗಿ ಸ್ಕ್ಯಾಂಡನೇವಿಯಾದ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ. ಜೊತೆಗೆ, ಗಣಕಯಂತ್ರ ಬಳಕೆಯ ಮುಂಚಿನ ದಿನಗಳಲ್ಲಿ, ಗಣನಾ ಕಾರ್ಯಕ್ಷೇತ್ರದಲ್ಲಿ ವೃತ್ತಿ ನಡೆಸುವವರಿಗಾಗಿ ಕಮ್ಯುನಿಕೇಶನ್ಸ್ ಆಫ಼್ ದೀ ಏಸೀಎಮ್ ನಲ್ಲಿ ಹಲವು ಪದಗಳನ್ನು ಸೂಚಿಸಲಾಗಿತ್ತು – ಟ್ಯೂರಿಂಜಿನಿಯರ್, ಟ್ಯೂರಾಲಜಿಸ್ಟ್, ಕ್ರಮಸೂಚಿ ನಕ್ಷೆಗಳವನು (ಫ಼್ಲೋಚಾರ್ಟ್ಸ್-ಮ್ಯಾನ್), ವ್ಯಾವಹಾರಿಕ ಅತೀತ ಗಣಿತಜ್ಞ (ಮೆಟಾ-ಮ್ಯಾಥಮ್ಯಾಟೀಶಿಯನ್), ಮತ್ತು ವ್ಯಾವಹಾರಿಕ ಜ್ಞಾನಶಾಸ್ತ್ರಜ್ಞ (ಅಪ್ಲಾಯ್ಡ್ ಇಪಿಸ್ಟಮಾಲಜಿಸ್ಟ್).[೨೦] ಮೂರು ತಿಂಗಳ ನಂತರ ಅದೇ ಪತ್ರಿಕೆಯಲ್ಲಿ, ಕಾಂಪ್ಟಾಲಾಜಿಸ್ಟ್ ಎಂಬ ಪದವನ್ನು ಸೂಚಿಸಲಾಗಿತ್ತು, ಮರುವರ್ಷ ಹಾಯ್ಪಾಲಾಜಿಸ್ಟ್ ಪದವು ಅದನ್ನು ಅನುಸರಿಸಿತು.[೨೧] ಕಾಂಪ್ಯುಟಿಕ್ಸ್ ಎಂಬ ಪದವನ್ನೂ ಸೂಚಿಸಲಾಗಿದೆ.[೨೨] ಇನ್‌ಫ಼ೋರ್ಮಾಟಿಕ್ ಯೂರಪ್‌ನಲ್ಲಿ ಹೆಚ್ಚಾಗಿ ಬಳಸಲಾದ ಒಂದು ಪದವಾಗಿತ್ತು. "ಖಗೋಳ ವಿಜ್ಞಾನ ಹೇಗೆ ದೂರದರ್ಶಕ ಯಂತ್ರಗಳ ಬಗ್ಗೆಯಲ್ಲವೋ ಹಾಗೇ ಗಣಕ ವಿಜ್ಞಾನವು ಗಣಕಯಂತ್ರಗಳ ಬಗ್ಗೆಯ ವಿಜ್ಞಾನವಾಗಿ ಉಳಿದಿಲ್ಲ" ಎಂದು ಪ್ರಖ್ಯಾತ ಗಣಕ ವಿಜ್ಞಾನಿ ಎಟ್‌ಸ್ಕರ್ ಡೆಯ್ಕ್‌ಸ್ಟ್ರಾ ಹೇಳಿದರು. ಗಣಕಯಂತ್ರಗಳು ಹಾಗೂ ಗಣಕಯಂತ್ರ ವ್ಯವಸ್ಥೆಗಳ ರಚನೆ ಮತ್ತು ನಿಯೋಜನೆಯು ಗಣಕ ವಿಜ್ಞಾನಕ್ಕಿಂತ ಬೇರೆಯದಾದ ಬೋಧನ ಶಾಖೆಗಳ ಕಾರ್ಯಕ್ಷೇತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಗಣಕ ಯಂತ್ರಾಂಶದ (ಕಂಪ್ಯೂಟರ್ ಹಾರ್ಡ್‌ವೇರ್)ಅಧ್ಯಯನವು ಗಣಕಯಂತ್ರ ಶಾಸ್ತ್ರದ (ಕಂಪ್ಯೂಟರ್ ಇಂಜಿನಿಯರಿಂಗ್) ಭಾಗವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ, ಮತ್ತು ಹಾಗೆಯೇ ವಾಣಿಜ್ಯ ಗಣಕಯಂತ್ರ ವ್ಯವಸ್ಥೆಗಳು (ಕಂಪ್ಯೂಟರ್ ಸಿಸ್ಟಮ್) ಮತ್ತು ಅವುಗಳ ನಿಯೋಜನೆಯ ಅಧ್ಯಯನವನ್ನು ಹಲವುವೇಳೆ ಮಾಹಿತಿ ತಂತ್ರಜ್ಞಾನ ಅಥವಾ ಮಾಹಿತಿ ವ್ಯವಸ್ಥೆಗಳೆಂದು ಇನ್‌ಫ಼ರ್ಮೇಶನ್ ಸಿಸ್ಟಮ್ಸ್) ಕರೆಯಲಾಗುತ್ತದೆ. ಆದರೆ, ವಿವಿಧ ಗಣಕಯಂತ್ರ-ಸಂಬಂಧಿತ ಅಧ್ಯಯನ ವಿಭಾಗಗಳ ನಡುವೆ ವಿಚಾರಗಳ ಬಹಳಷ್ಟು ಅದಲು ಬದಲಾಗಿದೆ. ಗಣಕ ವಿಜ್ಞಾನ ಸಂಶೋಧನೆಯು ಹಲವುವೇಳೆ ಸಂವೇದನಾ ವಿಜ್ಞಾನ (ಕಾಗ್ನಿಟಿವ್ ಸಾಯನ್ಸ್), ಅರ್ಥಶಾಸ್ತ್ರ, ಗಣಿತಶಾಸ್ತ್ರ, ಭೌತವಿಜ್ಞಾನ (ಕ್ವಾಂಟಮ್ ಗಣನಾ ಸಿದ್ಧಾಂತ ನೋಡಿ), ಮತ್ತು ಭಾಷಾಶಾಸ್ತ್ರಗಳಂತಹ ಇತರ ಅಧ್ಯಯನ ವಿಭಾಗಗಳಲ್ಲಿ ಹಾದಿದೆ. ಹಲವು ವೈಜ್ಞಾನಿಕ ಅಧ್ಯಯನ ವಿಭಾಗಗಳಿಗಿಂತ ಗಣಕ ವಿಜ್ಞಾನವು ಗಣಿತಶಾಸ್ತ್ರದೊಂದಿಗೆ ಒಂದು ಹೆಚ್ಚು ಹತ್ತಿರದ ಸಂಬಂಧವನ್ನು ಹೊಂದಿದೆಯೆಂದು ಕೆಲವರಿಂದ ಪರಿಗಣಿತವಾಗಿದೆ, ಮತ್ತು ಕೆಲವು ವೀಕ್ಷಕರು ಗಣನಾ ಶಾಸ್ತ್ರವು ಒಂದು ಗಣಿತ ವಿಜ್ಞಾನವೆಂದು ಹೇಳಿದ್ದಾರೆ.[೪] ಮುಂಚಿನ ಗಣಕ ವಿಜ್ಞಾನವು ಕರ್ಟ್ ಗಽಡಲ್ ಮತ್ತು ಅಲನ್ ಟೂರಿಂಗ್‌ರಂತಹ ಗಣಿತಜ್ಞರ ವ್ಯಾಸಂಗದಿಂದ ಪ್ರಬಲವಾಗಿ ಪ್ರಭಾವಿತಗೊಂಡಿತ್ತು, ಮತ್ತು ಗಣಿತೀಯ ತರ್ಕಶಾಸ್ತ್ರ (ಮ್ಯಾಥಮ್ಯಾಟಿಕಲ್ ಲಾಜಿಕ್), ವರ್ಗ ಸಿದ್ಧಾಂತ (ಕ್ಯಾಟಿಗಾರಿ ಥೀಯರಿ), ಸಂಖ್ಯಾಸಮೂಹ ಸಿದ್ಧಾಂತ (ಡೋಮೇಯ್ನ್ ಥೀಯರಿ), ಹಾಗೂ ಬೀಜಗಣಿತಗಳಂತಹ ಕ್ಷೇತ್ರಗಳಲ್ಲಿ ಎರಡೂ ಕಾರ್ಯಕ್ಷೇತ್ರಗಳ ನಡುವೆ ವಿಚಾರಗಳ ಒಂದು ಪ್ರಯೋಜನಕಾರಿ ವಿನಿಮಯ ಮುಂದುವರಿದಿದೆ. ಗಣಕ ವಿಜ್ಞಾನ ಮತ್ತು ತಂತ್ರಾಂಶ ಶಾಸ್ತ್ರಗಳ ನಡುವಿನ ಸಂಬಂಧವು ಒಂದು ವಿವಾದಾಸ್ಪದ ವಿಷಯವಾಗಿದೆ, ಮತ್ತು ಇದು, "ತಂತ್ರಾಂಶ ಶಾಸ್ತ್ರ" ಪದವು ಏನು ಅರ್ಥಸೂಚಿಸುತ್ತದೆ ಹಾಗೂ ಗಣಕ ವಿಜ್ಞಾನವನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬಂತಹ, ವಿವಾದಗಳಿಂದ ಇನ್ನಷ್ಟು ಗೊಂದಲಗೊಂಡಿದೆ. ಇತರ ಯಂತ್ರವಿಜ್ಞಾನ ಹಾಗೂ ವಿಜ್ಞಾನದ ಬೋಧನ ಶಾಖೆಗಳ ನಡುವಿನ ಸಂಬಂಧದಿಂದ ಬಂದ ಸೂಚನೆಗಳನ್ನು ಆಧರಿಸಿ, ಒಂದೆಡೆ ಗಣಕ ವಿಜ್ಞಾನದ ಪ್ರಧಾನ ಕೇಂದ್ರಬಿಂದು ಒಟ್ಟಾರೆಯಾಗಿ ಗಣನೆಯ ಲಕ್ಷಣಗಳನ್ನು ಅಧ್ಯಯನಮಾಡುವುದಾಗಿದ್ದರೆ, ಇನ್ನೊಂದೆಡೆ ಸಾಮಾನ್ಯವಾಗಿ ತಂತ್ರಾಂಶ ಶಾಸ್ತ್ರದ ಪ್ರಧಾನ ಕೇಂದ್ರಬಿಂದು ಕಾರ್ಯೋಪಯೋಗಿ ಗುರಿಗಳನ್ನು ಸಾಧಿಸಲು ನಿರ್ದಿಷ್ಟ ಗಣನೆಗಳ ರಚನೆಯಾಗಿದೆಯೆಂದು ಡೇವಿಡ್ ಪಾರ್‌ನ್ಯಾಸ್ ಸಾಧಿಸಿದ್ದಾರೆ, ಮತ್ತು ಹಾಗಾಗಿ ಎರಡೂ ಶಾಖೆಗಳು ಪ್ರತ್ಯೇಕವಾದ ಆದರೆ ಪೂರಕವಾದ ಬೋಧನ ಶಾಖೆಗಳಾಗಿವೆ.[೨೩] ಗಣಕ ವಿಜ್ಞಾನದ ಶಿಕ್ಷಣ ಸಂಬಂಧಿತ, ರಾಜಕೀಯ, ಮತ್ತು ಹಣಕಾಸು ಸಂಪನ್ಮೂಲ ಸಂಬಂಧಿತ ಅಂಶಗಳು ಒಂದು ವಿಭಾಗವು ಗಣಿತದ ಅವಧಾರಣೆಯೊಂದಿಗೆ ಅಥವಾ ಯಂತ್ರವಿಜ್ಞಾನದ ಅವಧಾರಣೆಯೊಂದಿಗೆ ರಚನೆಗೊಂಡಿದೆಯೆ ಎಂಬುದರ ಮೇಲೆ ಅವಲಂಬಿಸಲು ಪ್ರವೃತ್ತವಾಗಿರುತ್ತವೆ. ಗಣಿತಶಾಸ್ತ್ರದ ಮೇಲೆ ಒತ್ತು ನೀಡುವ ಮತ್ತು ಆಂಕಿಕ ನಿಲವುಳ್ಳ ಗಣಕ ವಿಜ್ಞಾನ ವಿಭಾಗಗಳು ಗಣನಾತ್ಮಕ ವಿಜ್ಞಾನ (:en:Computational science|ಕಾಂಪ್ಯೂಟೇಶನಲ್ ಸಾಯನ್ಸ್]])ವಿಭಾಗದೊಂದಿಗೆ ಹೊಂದಾಣಿಕೆಯನ್ನು ಹೊಂದಿರುತ್ತವೆ. ಎರಡೂ ಪ್ರಕಾರಗಳ ವಿಭಾಗಗಳು ಎಲ್ಲ ಸಂಶೋಧನೆಯಲ್ಲಿ ಸಮಾನವಾಗಿಲ್ಲದಿದ್ದರೂ ಶೈಕ್ಷಣಿಕವಾಗಿ ಕಾರ್ಯಕ್ಷೇತ್ರವನ್ನು ಸೇರಿಸಲು ಪ್ರಯತ್ನಮಾಡುವುದರಲ್ಲಿ ಪ್ರವೃತ್ತವಾಗಿರುತ್ತವೆ.
ಗಣಕ ವಿಜ್ಞಾನ ಶಿಕ್ಷಣ
[ಬದಲಾಯಿಸಿ]ಕೆಲವು ವಿಶ್ವವಿದ್ಯಾಲಯಗಳು ಗಣಕ ವಿಜ್ಞಾನವನ್ನು ಗಣನೆ ಮತ್ತು ಕ್ರಮಾವಳಿ ಆಧಾರಿತ ತರ್ಕದ ಸೈದ್ಧಾಂತಿಕ ವ್ಯಾಸಂಗವಾಗಿ ಬೋಧಿಸುತ್ತವೆ. ಈ ಬೋಧನಾ ಕ್ರಮಗಳು ಹಲವುವೇಳೆ ಮುಖ್ಯಭಾಗವಾಗಿ ಇತರ ವಿಷಯಗಳ ಜೊತೆಗೆ ಗಣನಾ ಸಿದ್ಧಾಂತ, ಕ್ರಮಾವಳಿಗಳ ವಿಶ್ಲೇಷಣೆ (ಅನ್ಯಾಲಸಿಸ್ ಆಫ಼್ ಆಲ್ಗರಿದಮ್ಸ್), ಶಾಸ್ತ್ರೋಕ್ತ ವಿಧಾನಗಳು (ಫ಼ಾರ್ಮಲ್ ಮೆಥಡ್ಸ್), ಸಮಕಾಲೀನತೆ ಸಿದ್ಧಾಂತ (ಕನ್ಕರನ್ಸಿ), ದತ್ತಸಂಚಯ, ಗಣಕಯಂತ್ರ ನಿರ್ಮಿತ ಚಿತ್ರಗಳು ಮತ್ತು ವ್ಯವಸ್ಥಾ ವಿಶ್ಲೇಷಣೆಗಳನ್ನು (ಸಿಸ್ಟಮ್ಸ್ ಅನ್ಯಾಲಸಿಸ್) ಹೊಂದಿರುತ್ತವೆ. ಜೊತೆಗೆ ಅವು ವಿಶಿಷ್ಟವಾಗಿ ಗಣಕಯಂತ್ರ ಕ್ರಮವಿಧಿಕರಣವನ್ನೂ ಬೋಧಿಸುತ್ತವೆ, ಆದರೆ ಉನ್ನತ ಮಟ್ಟದ ಅಧ್ಯಯನದ ಪ್ರಧಾನ ಕೇಂದ್ರಬಿಂದು ಎಂದು ಕಾಣುವ ಬದಲು ಅದನ್ನು ಗಣಕ ವಿಜ್ಞಾನದ ಇತರ ಕಾರ್ಯಕ್ಷೇತ್ರಗಳ ಬೆಂಬಲಕ್ಕಿರುವ ಒಂದು ಸಾಧನವಾಗಿ ಕಾಣುತ್ತವೆ. ಇತರ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು, ಮತ್ತು ಗಣಕ ವಿಜ್ಞಾನವನ್ನು ಬೋಧಿಸುವ ಪ್ರೌಢಶಾಲೆಗಳು ಹಾಗೂ ಉದ್ಯೋಗ ಸಂಬಂಧಿ ಬೋಧನಾ ಕ್ರಮಗಳು ಸಹ ತಮ್ಮ ಗಣಕ ವಿಜ್ಞಾನ ಪಾಠಕ್ರಮಗಳಲ್ಲಿ ಕ್ರಮಾವಳಿಗಳ ಹಾಗೂ ಗಣನಾ ಸಿದ್ಧಾಂತಕ್ಕಿಂತ ಹೆಚ್ಚಾಗಿ ಉನ್ನತ ಕ್ರಮವಿಧಿಕರಣದ ಅಭ್ಯಾಸದ ಮೇಲೆ ಒತ್ತುಕೊಡುತ್ತವೆ. ಅಂತಹ ಪಾಠಕ್ರಮಗಳು ತಂತ್ರಾಂಶ ಉದ್ಯಮವನ್ನು ಸೇರಿಕೊಳ್ಳುತ್ತಿರುವ ಉದ್ಯೋಗಸ್ಥರಿಗೆ ಅತಿಮುಖ್ಯವಾದ ಕೌಶಲಗಳ ಮೇಲೆ ಕೇಂದ್ರೀಕರಿಸುವತ್ತ ಪ್ರವೃತ್ತವಾಗಿರುತ್ತವೆ. ಗಣಕಯಂತ್ರ ಕ್ರಮವಿಧಿಕರಣದ ಕಾರ್ಯೋಪಯೋಗಿ ಅಂಶಗಳನ್ನು ಹಲವುವೇಳೆ ತಂತ್ರಾಂಶ ಶಾಸ್ತ್ರವೆಂದು ನಿರ್ದೇಶಿಸಲಾಗುತ್ತದೆ. ಆದರೆ, ಪದದ ಅರ್ಥ, ಮತ್ತು ಅದು ಕ್ರಮವಿಧಿಕರಣ ವಿಷಯಕ್ಕೆ ಸಮಾನವಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಬಹಳ ಅಸಹಮತವಿದೆ.
ಇವನ್ನೂ ನೋಡಿ
[ಬದಲಾಯಿಸಿ]- ಗಣಕ ವಿಜ್ಞಾನದಲ್ಲಿನ ಜೀವನೋಪಾಯ ಕ್ಷೇತ್ರಗಳು
- ಗಣಕ ವಿಜ್ಞಾನಿ
- ಗಣಕ ಕ್ರಿಯೆ
- ಗಣಕ ವಿಜ್ಞಾನದಲ್ಲಿ ಆಂಗ್ಲ ಭಾಷೆ
- ಮಾಹಿತಿ ವಿಜ್ಞಾನ
- ಮಾಹಿತಿ ವಿಜ್ಞಾನದ ಬೋಧನಾ ಕಲೆ
- ಗಣಕ ವಿಜ್ಞಾನದ ಇತಿಹಾಸ
- ಅಭಿವೃದ್ಧಿಶೀಲ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳು
- ಶೈಕ್ಷಣಿಕ ಗಣಕ ವಿಜ್ಞಾನ ವಿಭಾಗಗಳ ಪಟ್ಟಿ
- ಗಣಕ ವಿಜ್ಞಾನ ಸಮ್ಮೇಳನಗಳ ಪಟ್ಟಿ
- ಗಣಕ ವಿಜ್ಞಾನಿಗಳ ಪಟ್ಟಿ
- ಗಣಕ ವಿಜ್ಞಾನದಲ್ಲಿನ ತೆರೆದ ಸಮಸ್ಯೆಗಳ ಪಟ್ಟಿ
- ಗಣಕ ವಿಜ್ಞಾನದಲ್ಲಿನ ಪ್ರಕಾಶನಗಳ ಪಟ್ಟಿ
- ಗಣಕ ವಿಜ್ಞಾನದಲ್ಲಿನ ಆದಿ ಶೋಧಕರ ಪಟ್ಟಿ
- ತಂತ್ರಾಂಶ ಶಾಸ್ತ್ರದ ವಿಷಯಗಳ ಪಟ್ಟಿ
- ತಂತ್ರಾಂಶ ಶಾಸ್ತ್ರ
- ಗಣಕ ಕ್ಷೇತ್ರದಲ್ಲಿ ಮಹಿಳೆಯರು
- ಗಣಕ ವಿಜ್ಞಾನದ ತತ್ತ್ವಶಾಸ್ತ್ರ
ಉಲ್ಲೇಖಗಳು
[ಬದಲಾಯಿಸಿ]- ↑ "Computer science is the study of information" New Jersey Institute of Technology Archived 2009-05-29 ವೇಬ್ಯಾಕ್ ಮೆಷಿನ್ ನಲ್ಲಿ., Gutenberg Information Technologies
- ↑ "Computer science is the study of computation." Computer Science Department, College of Saint Benedict Archived 2007-02-03 ವೇಬ್ಯಾಕ್ ಮೆಷಿನ್ ನಲ್ಲಿ., Saint John's University
- ↑ "Computer Science is the study of all aspects of computer systems, from the theoretical foundations to the very practical aspects of managing large software projects." Massey University Archived 2006-06-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೪.೦ ೪.೧ ೪.೨ Denning, P.J. (2000). "[[೧]] (Computer Science: The Discipline)}}" (PDF). Encyclopedia of Computer Science, https://web.archive.org/web/20060525195404/http://www.idi.ntnu.no/emner/dif8916/denning.pdf. ಉಲ್ಲೇಖ ದೋಷ: Invalid
<ref>
tag; name "Denning_cs_discipline" defined multiple times with different content - ↑ "Common myths and preconceptions about Cambridge Computer Science" Computer Science Department Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ., Cambridge University
- ↑ Nigel Tout (2006). "Calculator Timeline". Vintage Calculator Web Museum.
- ↑ "Science Museum - Introduction to Babbage". Retrieved on 2006-09-24.
- ↑ "A Selection and Adaptation From Ada's Notes found in "Ada, The Enchantress of Numbers," by Betty Alexandra Toole Ed.D. Strawberry Press, Mill Valley, CA". Retrieved on 2006-05-04.
- ↑ "IBM Punch Cards in the U.S. Army". Retrieved on 2006-09-24.
- ↑ http://www.cl.cam.ac.uk/conference/EDSAC99/statistics.html
- ↑ ೧೧.೦ ೧೧.೧ Levy, Steven (1984). Hackers: Heroes of the Computer Revolution. Doubleday. ISBN 0-385-19195-2.
- ↑ ೧೨.೦ ೧೨.೧ David Kahn, The Codebreakers, 1967, ISBN 0-684-83130-9.
- ↑ ೧೩.೦ ೧೩.೧ http://www.cis.cornell.edu/Dean/Presentations/Slides/bgu.pdf
- ↑ Constable, R.L. (March 2000). "Computer Science: Achievements and Challenges circa 2000" (PDF).
{{cite journal}}
: Cite journal requires|journal=
(help) - ↑ Abelson, H.; G.J. Sussman with J.Sussman (1996). Structure and Interpretation of Computer Programs, 2nd, MIT Press. ISBN 0-262-01153-0. "The computer revolution is a revolution in the way we think and in the way we express what we think. The essence of this change is the emergence of what might best be called procedural epistemology — the study of the structure of knowledge from an imperative point of view, as opposed to the more declarative point of view taken by classical mathematical subjects."
- ↑ Black box traders are on the march Archived 2008-06-21 ವೇಬ್ಯಾಕ್ ಮೆಷಿನ್ ನಲ್ಲಿ. The Telegraph, August 26, 2006
- ↑ ೧೭.೦ ೧೭.೧ Computing Sciences Accreditation Board (28 May 1997). "Computer Science as a Profession". Retrieved on 2008-09-01.
- ↑ Committee on the Fundamentals of Computer Science: Challenges and Opportunities, National Research Council (2004). Computer Science: Reflections on the Field, Reflections from the Field. National Academies Press. ISBN 978-0-309-09301-9.
- ↑ Clay Mathematics Institute Archived 2013-07-04 ವೇಬ್ಯಾಕ್ ಮೆಷಿನ್ ನಲ್ಲಿ. P=NP
- ↑ Communications of the ACM 1(4):p.6
- ↑ Communications of the ACM 2(1):p.4
- ↑ IEEE Computer 28(12):p.136
- ↑ Parnas, David L. (1998). "[[]] ([[:Software Engineering Programmes are not Computer Science Programmes:|Software Engineering Programmes are not Computer Science Programmes]])}}". Annals of Software Engineering 6: 19–37. doi: ., p. 19: "Rather than treat software engineering as a subfield of computer science, I treat it as an element of the set, Civil Engineering, Mechanical Engineering, Chemical Engineering, Electrical Engineering, .."
ಹೆಚ್ಚಿನ ವಾಚನ
[ಬದಲಾಯಿಸಿ]- Association for Computing Machinery. 1998 ACM Computing Classification System Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.. 1998.
- IEEE Computer Society and the Association for Computing Machinery. Computing Curricula 2001: Computer Science. December 15, 2001.
- Peter J. Denning. Is computer science science?, Communications of the ACM, April 2005.
- Donald E. Knuth. Selected Papers on Computer Science, CSLI Publications, Cambridge Univ. Press, 1996.
- Peter J. Denning, Great principles in computing curricula, Technical Symposium on Computer Science Education, 2004.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಮುಕ್ತ ಸೂಚಿಕಾ ಯೋಜನೆಯಲ್ಲಿ ಗಣಕ ವಿಜ್ಞಾನ
- ಗಣಕ ವಿಜ್ಞಾನದಲ್ಲಿನ ಉಚಿತ ವಿಶ್ವವಿದ್ಯಾಲಯ ಉಪನ್ಯಾಸಗಳ ಸೂಚಿಕೆ Archived 2008-05-12 ವೇಬ್ಯಾಕ್ ಮೆಷಿನ್ ನಲ್ಲಿ.
- ಗಣಕ ವಿಜ್ಞಾನ ಉಪನ್ಯಾಸಗಳ ಸಂಗ್ರಹ Archived 2011-04-28 ವೇಬ್ಯಾಕ್ ಮೆಷಿನ್ ನಲ್ಲಿ.
- ಗ್ರಂಥಸೂಚಿ/ ಗಣಕ ವಿಜ್ಞಾನ ಗ್ರಂಥಸೂಚಿಗಳ ಸಂಗ್ರಹ Archived 2017-06-14 ವೇಬ್ಯಾಕ್ ಮೆಷಿನ್ ನಲ್ಲಿ.
- ಗಣಕ ವಿಜ್ಞಾನ ಸೂಚಿಕೆ ಮತ್ತು ಸಂಪನ್ಮೂಲಗಳು
- ಗಣಕ ವಿಜ್ಞಾನಿಗಳ ಛಾಯಾಚಿತ್ರಗಳು (ಬರ್ಟ್ರಂಡ್ ಮಾಯರ್ರ ಚಿತ್ರಶಾಲೆ)