ಭೂತಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂತಾನ್ ರಾಜ್ಯ
འབྲུག་ཡུལ
ದ್ರುಕ್ ಯುಲ್
Flag of ಭೂತಾನ್
Flag
Coat of arms of ಭೂತಾನ್
Coat of arms
Motto: ಒಂದು ರಾಷ್ಟ್ರ, ಒಂದು ಜನತೆ
Anthem: ದ್ರುಕ್ ತ್ಸೆಂಧೆನ್
Location of ಭೂತಾನ್
Capital
and largest city
ಥಿಂಪು
Official languagesತ್ಸೊಂಗ್‌ಖಾ, ಇಂಗ್ಲಿಷ್
Governmentರಾಜ ಪ್ರಭುತ್ವ
• ದೊರೆ
ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್
• ಪ್ರಧಾನ ಮಂತ್ರಿ
ಪ್ರಧಾನಿ ಲೊತಯ್ ಶೆರಿಂಗ್
ರಚನೆ
• ವಾಂಗ್‌ಚುಕ್ ರಾಜಮನೆತನ
ಡಿಸೆಂಬರ್ ೧೭, ೧೯೦೭
• Water (%)
ನಗಣ್ಯ
Population
• ೨೦೦೫ estimate
೨೨,೩೨,೨೯೧ (ವಿವಾದಿತ)[೧] (೧೪೨ನೇ)
• ೨೦೦೫ census
೬,೭೨,೪೨೫
GDP (PPP)೨೦೦೫ estimate
• Total
$3.007 ಬಿಲಿಯನ್ (೧೬೦ನೇ)
• Per capita
$೩,೯೨೧ (೧೧೭ನೇ)
HDI (೨೦೦೩)0.536
low · ೧೩೪ನೇ
Currencyನ್ಗುಲ್ಟ್ರುಮ್ (BTN)
Time zoneUTC+6:00 (BTT)
• Summer (DST)
UTC+6:00 (not observed)
Calling code975
Internet TLD.bt
The Tashichho Dzong in Thimphu is the seat of the Bhutanese government since 1952.
Trashigang Dzong, built in 1659.

ಭೂತಾನ್ ರಾಜ್ಯ ದಕ್ಷಿಣ ಏಷ್ಯಾದ ದೇಶವಾಗಿದ್ದು ಭಾರತ ಮತ್ತು ಚೀನಿ ಜನರ ಗಣರಾಜ್ಯಟಿಬೆಟ್ ಗಳ ಮಧ್ಯದಲ್ಲಿದೆ. ಇಡೀ ದೇಶ ಪರ್ವತಗಳಿಂದ ಕೂಡಿದ್ದು ೧೩-೧೬ ಕಿ.ಮಿ. ಗಳಷ್ಟಿರುವ ಪ್ರಸ್ಥಭೂಮಿಯನ್ನು ದುವಾರಗಲೆಂದು ಕರೆಯುತ್ತಾರೆ. ಈ ಪರ್ವತಗಳ ಎತ್ತರ ೭,೦೦೦ ಮೀಟರ್. ಥಿಂಫು ದೇಶದ ರಾಜಧಾನಿಯಾಗಿದ್ದು ಅತ್ಯಂತ ದೊಡ್ಡ ನಗರವೂ ಆಗಿದೆ. ಭೂತಾನ್ ಪ್ರಪಂಚದ ಅತಿ ಬೇರ್ಪಟ್ಟ ದೇಶಗಳಲ್ಲೊಂದು. ಸಾಂಪ್ರದಾಯಿಕ ಟಿಬೆಟನ್ ಬೌದ್ಧ ಧರ್ಮ ಹಾಗೂ ಸಂಸ್ಕೃತಿಗಳನ್ನು ಕಾಪಾಡಲು ಸರ್ಕಾರ ವಿದೇಶಿ ಪ್ರಭಾವ ಮತ್ತು ಪ್ರವಾಸಿಗಳನ್ನು ದೂರವಿಟ್ಟಿದೆ. ಅಧಿಕೃತ ಭಾಷೆ ತ್ಸೊಂಗ್‌ಖಾ. ಭೂತಾನ್ ದೇಶವನ್ನು ಸಾಂಪ್ರದಾಯಿಕ ಹಿಮಾಲಯದ ಬೌದ್ಧ ಧರ್ಮ ಉಳಿದ ಕೊನೆ ಸ್ಥಳ ಎಂದು ಪರಿಗಣಿತವಾಗಿದೆ. ಭೂತಾನ್ ದೇಶಕ್ಕೆ ೧೯೦೭ರಿಂದ ರಾಜ ಪ್ರಭುತ್ವವಿದೆ. ಈಗಿನ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಸಾಂವಿಧಾನಿಕ ಸರಕಾರದ ಕಡೆ ವಾಲುತ್ತಿದ್ದಾರೆ. ಭೂತಾನ್ ಏಷ್ಯಾ ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ.

ಭೂತಾನ ಪೂರ್ವ ಹಿಮಾಲಯ ಪರ್ವತಶ್ರೇಣಿಯ ತಪ್ಪಲಿನಲ್ಲಿರುವ ಸ್ವತಂತ್ರ ರಾಜ್ಯ. ಉ.ಅ. 26° 30 - 28°30 ಪೂ.ರೇ. 8°45'-92°25' ನಡುವೆ ಹಬ್ಬಿದೆ.

ಉತ್ತರದಲ್ಲಿ ಟಿಬೆಟ್, ದಕ್ಷಿಣದಲ್ಲಿ ಭಾರತದ ಪಶ್ಚಿಮ ಬಂಗಾಲ ರಾಜ್ಯದ ಜಲಪೈಗುರಿ ಜಿಲ್ಲೆ ಹಾಗೂ ಅಸ್ಸಾಮಿನ ಗೋಲಾಪಾರಾ, ಕಾಮರೂಪ ಮತ್ತು ದರಾಂಗ್ ಜಿಲ್ಲೆಗಳು, ಪಶ್ಚಿಮದಲ್ಲಿ ಟಿಬೆಟ್, ಸಿಕ್ಕಿಮ್, ನೈಋತ್ಯದಲ್ಲಿ ಬಂಗಾಲದ ಡಾರ್ಜಿಲಿಂಗ್ ಜಿಲ್ಲೆ ಮತ್ತು ಪೂರ್ವದಲ್ಲಿ ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆ ಸುತ್ತುವರಿದಿದೆ.

ವಿಸ್ತೀರ್ಣ ೪೬,೬೦೦ ಚಕಿಮೀ. ಜನಸಂಖ್ಯೆ ಸುಮಾರು (1). ರಾಜಧಾನಿ ಥಿಂಪೂ.(೧೯೮೩)

ಹೆಸರು[ಬದಲಾಯಿಸಿ]

ಸಂಸ್ಕೃತದ 'ಭೂ-ಉತ್ಥಾನ' (ಉನ್ನತ ನಾಡು) ಎಂಬ ಪದದಿಂದ ಭೂತಾನಿನ ಹೆಸರು ಬಂದಿರಬಹುದೆಂಬ ಶಂಕೆಯಿದೆ. ಇನ್ನೊಂದು ವಿವರಣೆಯ ಪ್ರಕಾರ 'ಭೊತ್ಸ್-ಅಂತ' ಅಂದರೆ ಟಿಬೆಟ್ಟಿನ ಅಂತ್ಯ ಎಂದೂ ಇದೆ.

ಚಾರಿತ್ರಿಕವಾಗಿ ಭೂತಾನನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.

  • 'ಲೊಪಾನ್' (ಕರಾಳ ದಕ್ಷಿಣ ನಾಡು),
  • 'ಲ್ಹೊ ತ್ಸೆಂದೆನ್‌ಜೊಂಗ್' (ದಕ್ಷಿಣದ ಗಂಧದ ನಾಡು),
  • 'ಲ್ಹೊಮೆನ್ ಖಾಝಿ' (ನಾಲ್ಕು ದ್ವಾರಗಳಿರುವ ದಕ್ಷಿಣದ ನಾಡು),
  • 'ಲ್ಹೊ ಮೆನ್‌ಜೊಂಗ್' (ವೈದ್ಯಕೀಯ ಗಿಡಮೂಲಿಕೆಗಳ ದಕ್ಷಿಣ ನಾಡು)

ಭೂವಿಜ್ಞಾನ[ಬದಲಾಯಿಸಿ]

ಭೂತಾನ ಬಿರುಸಾದ ಎತ್ತರ ಪರ್ವತ ಶ್ರೇಣಿಗಳಿಂದಲೂ ಆಳವಾದ ಕಣಿವೆಗಳಿಂದಲೂ ಸುಂದರವಾದ ಗುಡ್ಡಗಾಡು ಪ್ರದೇಶಗಳಿಂದಲೂ ಕೂಡಿದೆ. ಈ ಪ್ರದೇಶ ಲಕ್ಷಾಂತರ ವರ್ಷಗಳ ಹಿಂದೆ ಹೆಚ್ಚು ಆಳವಿಲ್ಲದ ಟೆತಿಸ್ ಸಮುದ್ರ ಇದ್ದ ಪ್ರದೇಶವಾಗಿತ್ತೆಂದೂ ಮೂರನೆಯ ಭೂಯುಗದ ಕಾಲದಲ್ಲಿ ಭೂಮಿ, ನೀರು ಮತ್ತು ಮಂಜುಗಡ್ಡೆಯ ಪರಸ್ಪರ ಒತ್ತಡದ ಕಾರಣ ಈ ಪ್ರದೇಶ ಪರ್ವತರಾಶಿಯಾಗಿ ಮಾರ್ಪಟ್ಟಿತ್ತೆಂದೂ ಮುಂದೆ ಸಾವಿರಾರು ವರ್ಷಗಳ ಕಾಲದಲ್ಲಿ ಏಕಾಭಿಮುಖವಾಗಿ ಮೇಲೆತ್ತುವಿಕೆ ಮತ್ತು ಭೂಸವೆತದಿಂದಾಗಿ ಈಗಿರುವ ಕಣಿವೆಗಳೂ ಪರ್ವತಶ್ರೇಣಿಗಳೂ ರೂಪುಗೊಂಡಿವೆಯೆಂದೂ ಹೇಳುತ್ತಾರೆ.

ಮೇಲ್ಮೈ ಲಕ್ಷಣ[ಬದಲಾಯಿಸಿ]

The Dzong in the Paro valley, built in 1646.
Trashigang Dzong, built in 1659.

ಭೂತಾನವನ್ನು ಉನ್ನತ ಹಿಮಾಲಯ ಪರ್ವತ ಶ್ರೇಣಿಗಳು, ಒಳ ಹಿಮಾಲಯ ಪ್ರದೇಶ ಮತ್ತು ಡ್ಯೂಯರ್ಸ್ ಬಯಲು ಸಿಮೆ ಎಂಬುದಾಗಿ ಮೂರು ಭೌಗೋಳಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಉತ್ತರ ಭಾಗ ಉನ್ನತ ಹಿಮಾಲಯ ಪರ್ವತ ಶ್ರೇಣಿಗಳಿಂದ ಕೂಡಿದೆ. ಇಲ್ಲಿಯ ಹಿಮಾಚ್ಛಾದಿಯ ಶಿಖರಗಳು ೭೩೦೦@@@@ ಮೀಟರುಗಳಿಗಿಂತಲೂ ಎತ್ತರವಾಗಿವೆ. ಕಣಿವೆಗಳು ೩೬೫೦ ಮೀ ಗಳಿಂದ ೫೪೭೫ ಮಿ ಗಳಷ್ಟು ಎತ್ತರದಲ್ಲಿದೆ. ಟಿಬೆಟ್ ಪ್ರಸ್ಥಭೂಮಿ ಅಂಚಿನ ಕುಲ್ಹಗಾಂಗ್ರಿ ಮತ್ತು ಜೋಮೋಲ್ಹಾರಿ ಪರ್ವತಗಳು ಭೂತಾನವನ್ನು ಟಿಬೆಟ್ಟಿನಿಂದ ಪ್ರತ್ಯೇಕಿಸಿವೆ. ಈ ಪರ್ವತಗಳ ಇಳಿಜಾರಿನಲ್ಲಿ ಹುಲ್ಲುಗಾವಲುಗಳಿವೆ. ಇವು ಬೇಸಗೆಯಲ್ಲಿ ಯಾಕ್, ದನಕರುಗಳು ಮತ್ತು ಕುರಿಗಳ ಮೇವಿನ ಪ್ರದೇಶಗಳು, ಈ ಭಾಗದಲ್ಲಿ ಜನವಸತಿ ಕಡಿಮೆ. ಒಳ ಹಿಮಾಲಯ ಪ್ರದೇಶವೇ ಭೂತಾನದ ಮಧ್ಯಭಾಗ. ಇಲ್ಲಿಯ ಪರ್ವತಗಳು ಭೂತಾನದ ಪ್ರಮುಖ ನದಿ ಹಾಗೂ ಕಣಿವೆಗಳನ್ನು ಪ್ರತ್ಯೇಕಿಸುವ ಜಲವಿಭಾಜಕಗಳು. ಬ್ಲಾಕ್ ಮೌಂಟೆನ್‍ರೇಜ್ ಸಂಕೊಷ್ ಮತ್ತು ಮಾನಸ್ ನದಿಗಳನ್ನು ಪ್ರತ್ಯೇಕಿಸುತ್ತದೆ. ಒಳ ಹಿಮಾಲಯ ಪ್ರದೇಶದಲ್ಲಿ ಅನೇಕ ಫಲವತ್ತಾದ ಕಣಿವೆಗಳಿದ್ದು ಅವುಗಳಲ್ಲಿ ಪ್ರಮುಖವಾದವು ಥಿಂಪು, ಪಾರೋ, ಪುನಾಖಾ ಮತ್ತು ವಾಂಗ್‍ಡಿಪೋಡ್ರಾಂಗ್. ಇಲ್ಲಿ ವರ್ಷಕ್ಕೆ ಸರಾಸರಿ ೧೦೬ ರಿಂದ ೧೨೧ ಸೆಂಮೀ ಮಳೆ ಆಗುತ್ತದೆ. ಬತ್ತ ಮುಖ್ಯ ಬೆಳೆ. ಜನಸಾಂದ್ರತೆ ಹೆಚ್ಚು. ಒಳ ಹಿಮಾಲಯ ಪ್ರದೇಶದ ದಕ್ಷಿಣಕ್ಕೆ ಇಕ್ಕಟ್ಟಾದ ಡ್ಯುಯರ್ಸ್ ಬಯಲಿದೆ. ಇದು ಸರಾಸರಿ ೧೨.೮೮-೧೬ ಮೀ ಅಗಲವಿದ್ದು ಭೂತಾನಿನ ದಕ್ಷಿಣಗಡಿಯುದ್ದಕ್ಕೂ ಹಬ್ಬಿದೆ. ಇಲ್ಲಿ ಉಷ್ಣವಲಯದ ಮಾನ್‍ಸೂನ್ ಹವೆ ಇದ್ದು ವರ್ಷಕ್ಕೆ ಸರಾಸರಿ ೫೦೬-೭೬೨ ಸೆಂಮೀ ಮಳೆ ಆಗುತ್ತದೆ. ಇಲ್ಲಿ ದಟ್ಟವಾದ ಕಾಡುಗಳಿದ್ದು ಆನೆ, ಹುಲಿ, ಜಿಂಕೆ ಮೊದಲಾದ ಕಾಡುಪ್ರಾಣಿಗಳಿವೆ. ಇಲ್ಲಿಯ ವಾತಾವರಣದಿಂದಾಗಿ ಜನವಸತಿ ಹೆಚ್ಚಿಲ್ಲ. ಡ್ಯೂಯರ್ಸ್‍ನ ಉತ್ತರಭಾಗದಲ್ಲಿ ಕಡಿದಾದ ಇಳಿಜಾರು ಪ್ರದೇಶವಿದೆ. ಪರ್ವತಗಳ ತಪ್ಪಲುಗಳಲ್ಲಿ ಕೆಲವು ಸಣ್ಣ ಹಳ್ಳಿಗಳಿವೆ. ಇದರ ದಕ್ಷಿಣಭಾಗ ಸವನ್ನಾ ಹುಲ್ಲುಗಾವಲು ಮತ್ತು ಬಿದಿರು ಕಾಡುಗಳಿಂದ ಕೂಡಿದ್ದು ಕೆಲವು ಭಾಗಗಳಲ್ಲಿ ಕಾಡುಕಡಿದು ಬತ್ತದ ವ್ಯವಸಾಯ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕೆಲವು ಪಟ್ಟಣ ಮತ್ತು ವ್ಯಾಪಾರ ಕೇಂದ್ರಗಳಿದ್ದು ಜನಸಾಂದ್ರತೆ ಹೆಚ್ಚಿದೆ. ಮಧ್ಯ ಭೂತಾನಿನಿಂದ ಭಾರತಕ್ಕೆ ಹೋಗುವ ನದಿ, ಕಣಿವೆಗಳ ಮಾರ್ಗಗಳು ಈ ಕೇಂದ್ರಗಳ ಮೂಲಕ ಹಾದು ಹೋಗುತ್ತದೆ.

ಚಿತ್ರಸಂಪುಟ[ಬದಲಾಯಿಸಿ]

ವಾಯುಗುಣ[ಬದಲಾಯಿಸಿ]

ಉನ್ನತ ಹಿಮಾಲಯ ಪ್ರದೇಶಗಳಲ್ಲಿ ಸಾಧಾರಣವಾಗಿ ಒಣಹವೆ ಇರುತ್ತದೆ. ಮಳೆ ಕಡಿಮೆ. ಮಧ್ಯ ಭೂತಾನಿನಲ್ಲಿ ಪುನಾಖಾ, ವಾಂಗ್‍ಡಿಫೋಡ್ರಾಂಗ್ ಮುಂತಾದ ಕೆಳಗಿನ ಭಾಗಗಳಲ್ಲಿ ಸಾಧಾರಣ ಉಷ್ಣತೆಯಿದ್ದು ಎತ್ತರಕ್ಕೆ ಹೋದಂತೆಲ್ಲಾ ಚಳಿ ಅತ್ಯಂತ ಹೆಚ್ಚಿರುತ್ತದೆ. ಡ್ಯೂಯರ್ಸ್ ಬಯಲಿನಲ್ಲಿ ಬಿಸಿ ಹೆಚ್ಚಾಗಿದ್ದು ತೇವಾಂಶವೂ ಹೆಚ್ಚಿರುತ್ತದೆ. ದೇಶದ ಸರಾಸರಿ ಉಷ್ಣತೆ ಜನವರಿಯಲ್ಲಿ ೪೪ಲಿಅ. ಜುಲೈಯಲ್ಲಿ ೧೭ಲಿಅ. ದೇಶದ ಒಟ್ಟು ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ೧೫೦-೩೦೦ ಸೆಂಮೀ. ಉನ್ನತ ಹಿಮಾಲಯ ಪ್ರದೇಶ ಹಿವಾಚ್ಛಾದಿತವಾಗಿರುತ್ತದೆ.

ನದಿಗಳು[ಬದಲಾಯಿಸಿ]

ಭೂತಾನದ ಅತ್ಯಂತ ದೊಡ್ಡನದಿ ಡಾಂಗ್ಮೆಚು. ಇದು ಭಾರತದ ಗಡಿಯಿಂದ ಭೂತಾನ ಪ್ರವೇಶಿಸಿ ನೈರುತ್ಯದಿಕ್ಕಿಗೆ ಹರಿದು ಬ್ರಹ್ಮಪುತ್ರ ನದಿ ಸೇರುತ್ತದೆ. ಇದರ ಪ್ರಮುಖ ಉಪನದಿಗಳು ಮಾಂಗ್ಡೆಚು ಮತ್ತು ಕುರಿಚು. ಆಮ್ ಮಾಚು ಅಥವಾ ಟೊರ್ಸಾ ನದಿ ಟಿಬೆಟ್ಟಿನ ಉನ್ನತ ಶಿಖರವಾದ ಟಂಗ್ಲ್‍ನಲ್ಲಿ ಹುಟ್ಟಿ ಪಾಷಾದಲ್ಲಿ ಪಶ್ಚಿಮ ಭೂತಾನ ಪ್ರವೇಶಿಸಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಇದು ಬಂಡೆಗಳಿಂದ ಕೂಡಿದ ಇಕ್ಕಾಟ್ಟಾದ ಪ್ರದೇಶದಲ್ಲಿ ವೇಗವಾಗಿ ಹರಿಯುವುದರಿಂದ ನೌಕಾಸಂಚಾರಕ್ಕೆ ಯೋಗ್ಯವಾಗಿಲ್ಲ. ಇದರ ಎಡದಂಡೆ ಮೇಲೆ ಭೂತಾನಿನ ಪ್ರಮುಖ ವ್ಯಾಪಾರ ಕೇಂದ್ರವಾದ ಪುಂಟ್‍ಷೋ ಲಿಂಗ್ ಇದೆ. ವಾಂಗ್‍ಚು ಅಥವಾ ರೈಡಕ್ ನದಿ ಟಿಬೆಟ್ಟಿನಲ್ಲಿ ಹುಟ್ಟಿ ೩೭೦ ಕಿಮೀ ದೂರ ಭೂತಾನಿನಲ್ಲಿ ಹರಿದು ಮುಂದೆ ಪಶ್ಚಿಮ ಬಂಗಾಲ ಪ್ರವೇಶಿಸುತ್ತದೆ. ಇದರ ಉಪನದಿಗಳು ಪಾರೊಚು, ಹಚು, ದೋಚು, ಇಲ್ಲಿಯ ಮತ್ತೊಂದು ಮುಖ್ಯ ನದಿ ಸಂಕೋಷ್. ಇದು ಗಾಸಾದ ಮೇಲ್ಭಾಗದ ಉನ್ನತ ಹಿಮಾಲಯ ಶ್ರೇಣಿಗಳಲ್ಲಿ ಹುಟ್ಟಿ ೩೨೨ ಕಿಮೀ ದೂರ ಭೂತಾನಿನಲ್ಲಿ ಹರಿಯುತ್ತದೆ. ಇದರ ಪ್ರಮುಖ ಉಪನದಿಗಳಾದ ಪೊಚು ವತ್ತು ಮೋಚು ಸೇರುವ ಜಾಗದಲ್ಲಿ ಪ್ರಸಿದ್ಧ ಪುನಾಖಾ ಕೋಟೆಯಿದೆ. ಈ ನದಿ ಪೂರ್ವಾಭಿಮುಖವಾಗಿ ಹರಿದು ದಕ್ಷಿಣಕ್ಕೆ ತಿರುಗಿ ಡ್ಯುಯರ್ಸ್‍ನಲ್ಲಿ ದೊಡ್ಡ ಮತ್ತು ಆಳವಾದ ನದಿಯಾಗಿ ಕೊನೆಗೆ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಇಲ್ಲಿಯ ನದಿಗಳು ಎತ್ತರದಲ್ಲಿ ಹುಟ್ಟಿ ಬಯಲಿಗೆ ಹರಿಯುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಅನುಕೂಲಕರವಾಗಿವೆ.

ಜನಜೀವನ[ಬದಲಾಯಿಸಿ]

ಹಿಮಾಲಯದ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ದೇಶಗಳಲ್ಲಿ ನೇಪಾಳ ಮೊದಲನೆಯದು, ಭೂತಾನ ಎರಡನೆಯದು. ಆದರೆ ಇದರ ಜನಸಾಂದ್ರತೆ ಕಿಮೀಗೆ ಕೇವಲ ೧೮. ಹೆಚ್ಚಿನ ಜನಸಂಖ್ಯೆ ಮಧ್ಯ ಭೂತಾನದ ಫಲವತ್ತಾದ ಕಣಿವೆಗಳಲ್ಲಿ ಕೇಂದ್ರೀಕೃತವಾಗಿದೆ. ಉತ್ತರ ಮತ್ತು ಮಧ್ಯ ಭೂತಾನಿನಲ್ಲಿ ವಾಸಿಸುವ ಜನ ಟಿಬೆಟಿಯನ್ ಮೂಲದವರಾಗಿದ್ದು ಅವರನ್ನು ಭೋಟೆ ಅಥವಾ ಭುಟಿಯಾ ಎಂದು ಕರೆಯುತ್ತಾರೆ. ಇವರು ವಿವಿಧ ಬಗಯ ಟಿಬೆಟಿಯನ್ ಭಾಷೆಗಳನ್ನು ಆಡುತ್ತಾರೆ. ಲಿಪಿ ಟಿಬೆಟಿಯನ್ ಭಾಷೆಯನ್ನು ಹೋಲುತ್ತದೆ. ಇವರು ಟಿಬೆಟಿಯನ್ ಸಂಸ್ಕøತಿಯ ಲಿಮಾ ಪರಂಪರೆಯ ಬೌದ್ದಮತಾನುಯಾಯಿಗಳು. ದಕ್ಷಿಣದ ಮತ್ತು ನೈರುತ್ಯ ಭೂತಾನಿನಲ್ಲಿ ನೇಪಾಳೀ ವಲಸೆಗಾರರೇ ಹೆಚ್ಚಾಗಿದ್ದಾರೆ. ಇವರು ರಾಯ್, ಲಿಂಬು, ಮತ್ತು ಗುರುಂಗ್ ಬುಡಕಟ್ಟಿಗೆ ಸೇರಿದ್ದು ನೇಪಾಳಿ ಭಾಷೆ ಆಡುತ್ತಾರೆ. ಇವರು ಹಿಂದೂ ಧರ್ಮಾವಲಂಬಿಗಳು. ೧೯೫೯ ರಿಂದೀಚೆಗೆ ನೇಪಾಳಿಯರ ವಲಸೆಯನ್ನು ನಿಲ್ಲಿಸಲಾಗಿದೆ. ಅವರು ಭೂತಾನದ ಪ್ರಜೆಗಳಾಗಿದ್ದರೂ ಮಧ್ಯ ಭೂತಾನದಲ್ಲಿ ನೆಲಸುವುದನ್ನು ನಿಷೇಧಿಸಲಾಗಿದೆ. ನೇಪಾಳಿಯರು ದಕ್ಷಿಣ ಭೂತಾನಿನ ಆರ್ಥಿಕ ಅಭಿವೃದ್ದಿಗೆ ಬಲುಮಟ್ಟಿಗೆ ಕಾರಣರಾಗಿದ್ದಾರೆ. ಆದರೂ ಅವರ ನೆಲಸುವಿಕೆ ರಾಜಕೀಯ ಅತೃಪ್ತಿ ಮತ್ತು ಅಸ್ಥಿರತೆಗೆ ಅನೇಕ ವೇಳೆ ಕಾರಣವಾಗಿದ್ದು ಹಲವಾರು ಸಲ ಆಂತರಿಕ ಸಮಸ್ಯೆಗಳನ್ನು ಸೃಷ್ಟಿಸಿದೆ, ಪೂರ್ವ ಭೂತಾನಿನ ಜನ ಅರುಣಾಚಲ ಪ್ರದೇಶ ನಿವಾಸಿಗಳನ್ನು ಹೋಲುತ್ತಾರೆ. ಇವರು ಬೌದ್ಧಮತವನ್ನು ಅನುಸರಿಸುತ್ತಿದ್ದರೂ ಅದರ ಧಾರ್ಮಿಕವಿಧಿಗಳಲ್ಲಿ ಹೆಚ್ಚು ನಿಷ್ಠೆ ತೋರುವುದಿಲ್ಲ. ಆದ್ದರಿಂದ ಈ ಭಾಗದಲ್ಲಿ ಬೌದ್ಧಮಠಗಳು ಹಾಗೂ ಲಾಮಗಳ ಸಂಖ್ಯೆ ಕಡಿಮೆ.

ಭೂತಾನೀಯರು ಹೊರಪ್ರಪಂಚದಿಂದ ದೂರವಿರುವುದರಿಂದ ಅನೇಕ ವಿಶಿಷ್ಟತೆಗಳನ್ನು ಹೊಂದಿದ್ದಾರೆ. ಇವರು ಕಷ್ಟಸಹಿಷ್ಣುತೆಗೆ ಹೆಸರಾಗಿದ್ದಾರೆ. ಮುಖ್ಯ ಆಹಾರ ಅಕ್ಕಿ, ಗೋದಿ, ಬಾರ್ಲಿ, ಆಲೂಗಡ್ಡೆ, ಯಾಕ್‍ನ ಮಾಂಸ, ದನ ಮತ್ತು ಹಂದಿ ಮಾಂಸ ಇತ್ಯಾದಿ. ಲಾಮಾಗಳಿಗೆ ಇಲ್ಲಿಯ ಧಾರ್ಮಿಕ ಜೀವನದಲ್ಲಿ ಪ್ರಮುಖಪಾತ್ರವಿದೆ. ಇಲ್ಲಿ ಸುಮಾರು ೫೦೦೦ ಜನ ಲಾಮಾಗಳಿದ್ದು ಅನೇಕ ಪ್ರಸಿದ್ಧ ಬೌದ್ಧಮಠಗಳಿವೆ. ಇಲ್ಲಿಯ ಅಧಿಕೃತ ಭಾಷೆ eóÉೂೀಂಗ್ ಖಾ.

ಆರ್ಥಿಕತೆ[ಬದಲಾಯಿಸಿ]

ಭೂತಾನ ಕೃಷಿಪ್ರಧಾನದೇಶ. ಇಲ್ಲಿಯ ಕಾರ್ಯಶೀಲ ಜನರಲ್ಲಿ ಶೇಕಡಾ ೯೩.೪ರಷ್ಟು (೧೯೮೧) ಜನ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಆದರೆ ದೇಶದ ಶೇಕಡ 9ರಷ್ಟು ಭೂಮಿ ಮಾತ್ರ ಕೃಷಿಮಾಡಲಾಗುತ್ತಿದೆ. ದೇಶದ ಶೇಕಡಾ ೭೦ರಷ್ಟು ಭೂಭಾಗ ಕಾಡುಗಳಿಂದ ಕೂಡಿದ್ದು ವ್ಯವಸಾಯ ಯೋಗ್ಯವಾಗಿಲ್ಲ. ಸರಾಸರಿ ಆದಾಯದಲ್ಲಿ ಭೂತಾನ ಪ್ರಪಂಚದ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿಯ ಮುಖ್ಯ ಬೆಳೆಗಳು ಬತ್ತ, ಗೋದಿ, ಬಾರ್ಲಿ, ಕಾಳುಗಳು, ಮಿಲ್ಲೇಟ್, ಆಲೂಗಡ್ಡೆ, ಕಿತ್ತಳೆ, ಹವೆ ಹಿತವಾಗಿರುವ ಕಡೆ ಸೇಬು, ಪೇರುಹಣ್ಣು, ಪೀಚ್‍ಪ್ಲಮ್, ಏಪ್ರಿಕಾಟ್ ಮತ್ತು ವಾಲ್ನಟ್ ಬೆಳಸಲಾಗುತ್ತದೆ. ಇಲ್ಲಿ ಪ್ರಾಣಿಸಂಪತ್ತು ಹೇರಳವಾಗಿದೆ. ಸಾಕುಪ್ರಾಣಿಗಳು ಯಾಕ್, ಕುರಿ, ಹಂದಿ, ಕುದುರೆ, ಕೋಳಿ ಇತ್ಯಾದಿ. ವನ್ಯಮೃಗಗಳು ಆನೆ, ಖಡ್ಗಮೃಗ, ಹುಲಿ, ಚಿರತೆ, ಸಾಂಭಾರ್ ಕರಡಿ, ಕಸ್ತೂರಿ ಮೃಗ ಇತ್ಯದಿ ಪ್ರಾಣಿಗಳನ್ನು ಇಲ್ಲಿ ನೋಡಬಹುದು, ದಕ್ಷಿಣ ಭೂತಾನದ ಮಾನಸ್‍ನಲ್ಲಿ ೧೬೦.೭೦ ಚಕಿಮೀ ವಿಸ್ತೀರ್ಣದ ವನ್ಯಮೃಗಗಳ ಅಭಯಧಾಮವಿದೆ. ಭೂತಾನದಲ್ಲಿ ಖನಿಜ ನಿಕ್ಷೇಪಗಳು ಸಾಕಷ್ಟಿದ್ದರೂ ಇವುಗಳ ಪರಿಶೋಧನೆ ಇತ್ತೀಚಿನತನಕ ದೊಡ್ಡ ಪ್ರಮಾಣದಲ್ಲಿ ನಡೆದಿರಲಿಲ್ಲ. ಇಲ್ಲಿ ಜಿಪ್ಸಮ್, ಸುಣ್ಣಕಲ್ಲು, ಗ್ರಾಫೈಟ್, ತಾಮ್ರ, ಡಾಲೊಮೈಟ್ ಮತ್ತು ಕಲ್ನಾರುಗಳ ನಿಕ್ಷೇಪಗಳಿವೆ.

ಭೂತಾನದ ಆರ್ಥಿಕ ಅಭಿವೃದ್ಧಿಗೆ ಭಾರತ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಿದೆ. ಭಾರತ ಸರ್ಕಾರದ ನೆರವಿನೊಡನೆ ಭೂತಾನದ ಅಭಿವೃದ್ಧಿಗಾಗಿ ೧೯೬೧ರಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ (೧೯೬೧-೬೧) ಭೂತಾನದ ಸಂಪನ್ಮೂಲಗಳ ಅಭಿವೃದ್ಧಿ ಕಾರ್ಯಕ್ಕಾಗಿ ಯುಕ್ತ ಸಿಬ್ಬಂದಿಯ ತರಪೇತಿ, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮುಂತಾದ ಕಾರ್ಯಗಳಿಗೆ ಆದ್ಯತೆ ನೀಡಲಾಯಿತು. ಇದರ ಒಟ್ಟು ಖರ್ಚು ರೂ ೧೭.೪೭ ಕೋಟಿ. ಇದರಲ್ಲಿ ರೂ ೧೭ ಕೋಟಿಗಳನ್ನು ಭಾರತ ನೀಡಿತು. ಎರಡನೆಯ ಪಂಚ ವಾರ್ಷಿಕ ಯೋಜನೆಯಲ್ಲಿ (೧೯೬೬-೭೧) ಕೃಷಿ ಮತ್ತು ತೋಟಗಾರಿಕೆ, ವಿದ್ಯಾಭ್ಯಾಸ, ಪ್ರಾಣಿಗಳಸಾಕಾಣೆ, ಅಭೀವೃದ್ದಿ, ಸಂಪರ್ಕ ಹಾಗೂ ರಸ್ತೆಸಾರಿಗೆಗಳ ವಿಸ್ತರಣೆ, ರಾಜ್ಯದ ಖನಿಜ ಹಾಗೂ ಅರಣ್ಯ ಸಂಪತ್ತಿಗೆ ಸಂಬಂಧಿಸಿದಂತೆ ಕೈಗಾರಿಕೆಗಳ ಸ್ಥಾಪನೆ__ಇವುಗಳಿಗೆ ಪ್ರಾಮುಖ್ಯ ನೀಡಲಾಯಿತು. ಇದರ ಒಟ್ಟು ಖರ್ಚು ೨೦ ಕೋಟಿ. ಇದನ್ನು ಸಂಪೂರ್ಣವಾಗಿ ಭಾರತವೇ ವಹಿಸಿಕೊಂಡಿತು. ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ (೧೯೭೧-೭೬) ರೂ ೩೫.೫ ಕೋಟಿ ವೆಚ್ಚವಾಗಿದ್ದು ಇದರಲ್ಲಿ ಕೃಷಿ ಉತ್ಪನ್ನಗಳ ಅಭಿವೃದ್ಧಿ ಸಹಕಾರಿ ಮಾರ್ಕೆಟಿಂಗ್ ಸೊಸೈಟಿಗಳ ಸ್ಥಾಪನೆ, ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ವಿದ್ಯುಚ್ಛಕ್ತಿಯ ಉತ್ಪತ್ತಿ. ರಾಜಧಾನಿ ಥಿಂಪುವಿನ ಅಭಿವೃದ್ಧಿ ಇತ್ಯಾದಿಗಳನ್ನು ಕೈಗೊಳ್ಳಲಾಯಿತು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ (೧೯೭೬-೮೧) ನುಗುಲ್‍ಟ್ರುಮ್ ೧೧೦೬ ಭೂತಾನದ ಹಣ ವೆಚ್ಚವಾಗಿದ್ದು ಇದರಲ್ಲಿ ಅರ್ಧಕ್ಕೂ ಹೆಚ್ಚು ಭಾಗವನ್ನು ವ್ಯವಸಾಯ, ಅದರಲ್ಲೂ ನೀರಾವರಿ ಯೋಜನೆಗಳಗಾಗಿ ವೆಚ್ಚ ಮಾಡಲಾಯಿತು. ಇದಕ್ಕೆ ೧೨.೨೫ ದಶಲಕ್ಷ ಅಮೆರಿಕನ್ ಡಾಲರ್‍ಗಳ ನೆರವು ಸಿಕ್ಕಿತು. ಐದನೆಯ ಪಂಚವಾರ್ಷಿಕ ಯೋಜನೆಗೆ (೧೯೮೧-೮೬) ಸನು ೪೪೭೭ ದಶಲಕ್ಷ ವೆಚ್ಚವನ್ನು ಅಂದಾಜು ಮಾಡಲಾಗಿದೆ.

ಭೂತಾನದ ಈ ಯೋಜನೆಗಳಿಗೆ ಭಾರತ ಸರ್ಕಾರ ಧನಸಹಾಯವಷ್ಟೇ ಅಲ್ಲದೆ ಭಾರತೀಯ ತಂತ್ರವಿದರ ಹಾಗೂ ಪರಿಣತರ ಸಹಾಯವನ್ನೂ ನೀಡಿದೆ. ಇದಲ್ಲದೆ ಭಾರತೀಯ ಗಡಿ ರಸ್ತೆ ವಿಭಾಗ ತನ್ನ ಸ್ವಂತ ಖರ್ಚಿನಲ್ಲಿ ಭೂತಾನಿನಲ್ಲಿ ಆಧುನಿಕ ರಸ್ತೆಗಳ ಜಾಲವನ್ನು ನಿರ್ಮಾಣಮಾಡಿದೆ. ಥಿಂಪು, ಪಾರೋ, ಬ್ಯಾಗಾರೆಗಳಲ್ಲಿ ಜಲವಿದ್ಯುತ್ ಸ್ಥಾವರಗಳನ್ನು ಭಾರತೀಯ ಎಂಜಿನಿಯರುಗಳೇ ಕಟ್ಟಿದ್ದಾರೆ. ಭೂತಾನಿನ ಆದಾಯದ ಮುಖ್ಯ ಬಾಬುಗಳೆಂದರೆ ಜಮೀನಿನ ಮೇಲಿನ ತೆರಿಗೆ. ಮನೆ, ಜಾನುವಾರು, ಸಾರಿಗೆ, ಮದ್ಯ ಮತ್ತು ಅರಣ್ಯ ಉತ್ಪನ್ನಗಳ ಮೇಲೂ ತೆರಿಗೆ ವಿಧಿಸಲಾಗಿದೆ. ಇದು ಪ್ರಪಂಚಚದಲ್ಲೇ ವರಮಾನ ತೆರಿಗೆಯಿಲ್ಲದ ಕೆಲವೇ ದೇಶಗಳಲ್ಲೊಂದು. ಪ್ರವಾಸೋದ್ಯಮ ಇತ್ತೀಚೆಗೆ ಸಾಕಷ್ಟು ಉತ್ತಮಗೊಂಡಿದೆ. ಭೂತಾನದ ಅಂಚೆ ಚೀಟಿಗಳು ಅತ್ಯಂತ ಆಕರ್ಷಕವಾಗಿದ್ದು ಪ್ರಪಂಚಾದ್ಯಂತ ಅವಕ್ಕೆ ಬೇಡಿಕೆಯಿದೆ. ಇದರ ಮಾರಾಟದಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವಿದೆ. ಭೂತಾನಿನ ನಾಣ್ಯ ನು ಅಥವಾ ನುಗುಲ್ ಟ್ರುಮ್. ೧ನು=೧೦೦ ಚೆಟ್ರಮ್. (೧೯೫೯ರಿಂದ ದಶಮಾಂಶ ಪದ್ಧತಿಯವನ್ನು ಜಾರಿಗೆ ತರಲಾಗಿದೆ.) ಇದರ ಜೊತೆ ಭಾರತೀಯ ನಾಣ್ಯಗಳೂ ಚಲಾವಣೆಯಲ್ಲಿವೆ.

ಸಾರಿಗೆ ಮತ್ತು ಸಂಪರ್ಕ[ಬದಲಾಯಿಸಿ]

ಹಿಂದೆ ಭೂತಾನಿನಲ್ಲಿ ಸಾಕಷ್ಟು ಸಾರಿಗೆ ಸೌಲಭ್ಯಗಳಿರಲಿಲ್ಲ. ಭಾರತ ಸರ್ಕಾರ ೧೯೫೯ರಲ್ಲಿ ಇಲ್ಲಿ ರಸ್ತೆಗಳ ನಿರ್ಮಾಣ ಪ್ರಾರಂಭಿಸಿತು. ಅನಂತರ ಪಂಚವಾರ್ಷಿಕ ಯೋಜನೆಗಳಲ್ಲಿ ರಸ್ತೆ ನಿಮಾರ್ಣ ಹಾಗೂ ಸಮಾಚಾರ ಸಂಪರ್ಕಗಳ ಅಭಿವೃದ್ದಿಗೆ ಆದ್ಯತೆ ನೀಡಲಾಯಿತು. ಗಡಿಪಟ್ಟಣವಾದ ಫುಂಟ್ ಷೋಲಿಂಗ್‍ನಿಂದ ಪಾರೋ-ಥಿಂಫುವಿಗೆ ೧೯೩ ಕಿಮೀ ಉದ್ದದ ಹೆದ್ದಾರಿಯನ್ನು ೧೯೬೨ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಪಾರೋ ಮತ್ತು ಕಲ್ಕತ್ತದ ನಡುವೆ ವಿಮಾನ ಸಂಪರ್ಕವಿದೆ. ಇತರ ಅನೇಕ ಕಡೆ ಹೆಲಿಪ್ಯಾಡ್‍ಗಳಿದ್ದು ಸಂಚಾರಕ್ಕೆ ಹೆಲಿಕಾಪ್ಟರನ್ನು ಉಪಯೋಗಿಸಲಾಗುತ್ತಿದೆ. ಭೂತಾನ ಮತ್ತು ಇತರ ದೇಶಗಳ ನಡುವೆ ಅಂಚೆ ಸೇವೆಯನ್ನು ೧೯೬೩ರಲ್ಲಿ ಪ್ರಾರಂಭಿಸಲಾಯಿತು.

ಆಡಳಿತ[ಬದಲಾಯಿಸಿ]

ಭೂತಾನಿನಲ್ಲಿ ವಂಶಪಾರಂಪರ್ಯ ರಾಜಾಡಳಿತವಿದೆ. ೧೯೫೩ರಲ್ಲಿ ಭೂತಾನ ರಾಷ್ಟ್ರೀಯ ಸಭೆ ಸ್ಥಾಪಿತವಾಯಿತು. ಷೋಗ್ಡು ಎಂದು ಕರೆಯಲಾಗುವ ಈ ಸಭೆಯಲ್ಲಿ ೧೫೦ ಸದಸ್ಯರಿದ್ದು ಇದರಲ್ಲಿ ೧೦೧ ಸದಸ್ಯರು ಜನತೆಯಿಂದ ಚುನಾಯಿತರಾಗಿರುತ್ತಾರೆ. ೧೦ ಸದಸ್ಯರು ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳಾಗಿದ್ದು ಉಳಿದವರು ಸರ್ಕಾರಿ ಅಧಿಕಾರಿಗಳಿರುತ್ತಾರೆ. ಇದು ರಾಜ್ಯದ ಪ್ರಮುಖ ಶಾಸಕಾಂಗ. ಅವಧಿ ಮೂರು ವರ್ಷಗಳು. ಲೋಡೋಷೋಗ್ಡೆ ಅಥವಾ ರಾಜನ ಸಲಹಾಸಮಿತಿ ೧೯೬೩ರಲ್ಲಿ ಸ್ಥಾಪಿತವಾಗಿದೆ. ಇದರ ಸದಸ್ಯರು ದೊರೆಯಿಂದ ನೇರ ನೇಮಕವಾದರೂ ಇದಕ್ಕೆ ರಾಷ್ಟ್ರೀಯ ಸಭೆಯ ಒಪ್ಪಿಗೆ ಅಗತ್ಯ. ಇದರಲ್ಲಿ ೯ ಜನ ಸದಸ್ಯರಿದ್ದು ಒಬ್ಬ ರಾಜನ ಪ್ರತಿನಿಧಿ. ಇಬ್ಬರು ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು, ಉಳಿದ ಆರು ಮಂದಿ ಜನತೆಯ ಪ್ರತಿನಿಧಿಗಳು. ಹೀಗೆ ಈ ಸಮಿತಿಯಲ್ಲಿ ಎಲ್ಲ ವರ್ಗದ ಪ್ರತಿನಿಧಿಗಳಿದ್ದು ಆಡಳಿತದಲ್ಲಿ ದೊರೆಗೆ ಸಲಹೆಮಾಡುತ್ತಾರೆ. ಈ ಸದಸ್ಯರೆಲ್ಲರೂ ರಾಷ್ಟ್ರೀಯ ಸಭೆಯ ಸದಸ್ಯರೂ ಆಗಿರುತ್ತಾರೆ. ಭೂತಾನದಲ್ಲಿ ರಾಜಕೀಯ ಪಕ್ಷಗಳಿಲ್ಲ. ಭೂತಾನ ಸರ್ಕಾರದ ಆಡಳಿತ ಕಚೇರಿಗಳು ರಾಜಧಾನಿಯಾದ ಥಿಂಪುವಿನಲ್ಲಿದೆ. ಗ್ಯಾಲ್ಡನ್ ಅಥವಾ ಮುಖ್ಯಕಾರ್ಯದರ್ಶಿ ಇದರ ಮುಖ್ಯಸ್ಥ. ದೇಶವನ್ನೂ ೧೭ ಜಿಲ್ಲೆಗಳಾಗಿ ಮತ್ತು ಅನೇಕ ಪ್ರಾಂತ್ಯಗಳಾಗಿ ವಿಭಾಗಿಸಿದ್ದು ಪ್ರತಿಪ್ರಾಂತ್ಯಕ್ಕೂ ಜೋಂಗ್‍ಪಾನ್ ಆಧಿಪತಿ ಯಾಗಿರುತ್ತಾನೆ. ಪ್ರತಿಯೊಂದು ಗ್ರಾಮ ಅಥವಾ ಗ್ರಾಮ ಸಮೂಹಕ್ಕೆ ಸ್ವಯಂಪರಿಪೂರ್ಣ ಆಡಳಿತ ವ್ಯವಸ್ಥೆಯಿದೆ. ಗ್ರಾಮದ ಮುಖ್ಯಸ್ಥನಿಗೆ ಗ್ಯಾಫ್ ಎಂದು ಹೆಸರು. ಈತನನ್ನು ೧ರಿಂದ ೫ ವರ್ಷಗಳ ಅವಧಿಗೆ ಚುನಾಯಿಸುವರು.

ಭೂತಾನದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದೇಶದಲ್ಲಿ ಉಚಿತ ವಿದ್ಯಾಭ್ಯಾಸ ಸೌಲಭ್ಯವಿದೆ. ಹಾಗಿದ್ದರೂ ೬ ರಿಂದ ೧೧ ವರ್ಷದ ಮಕ್ಕಳಲ್ಲಿ ಶೇಕಡಾ ೮ ರಷ್ಟು ಮಾತ್ರ ಶಾಲೆಗೆ ಹೋಗುತ್ತಾರೆ. ೧೯೮೧ರಲ್ಲಿ ದೇಶದಲ್ಲಿ ೧೫೦ಕ್ಕೂ ಹೆಚ್ಚು ಶಾಲೆಗಳಿದ್ದವು. ವೃತ್ತಿಪರ ಶಿಕ್ಷಣಕ್ಕೆ ಹಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು ಎರಡು ವೃತ್ತಿಪರ ಶಿಕ್ಷಣಶಾಲೆಗಳಿವೆ. ಇವಲ್ಲದೆ ಬೌದ್ಧ ಮಠಗಳಿಗೆ ಸೇರಿದಂತೆ ಅನೇಕಶಾಲೆಗಳೂ ಇವೆ. ಪಾರೊಪದಲ್ಲಿ ರಾಷ್ಟ್ರೀಯ ಸಂಗ್ರಹಾಲಯವಿದೆ. ಥಿಂಪುವಿನಲ್ಲಿ ಒಂದು ರಾಷ್ಟ್ರೀಯ ಗ್ರಂಥಾಲಯವನ್ನು ಪ್ರಾರಂಭಿಸುವ ಯೋಜನೆಯಿದ್ದು ಇದಕ್ಕಾಗಿ ಅಮೂಲ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ.

ಕಣಿವೆಗಳು ಮತ್ತು ಕೋಟೆಗಳು[ಬದಲಾಯಿಸಿ]

ಭೂತಾನದಲ್ಲಿ ಅನೇಕ ಕಣಿವೆಗಳಿದ್ದು ಅವುಗಳಲ್ಲಿ ಪುರಾತನ ಕೋಟೆಗಳಿವೆ. ಇವುಗಳಿಗೆ ಜೋಂಗ್ ಎಂದು ಹೆಸರು. ಇಲ್ಲಿಯ ಬುಮ್‍ಥಾಂಗ್ ಕಣಿವೆ ಜನರು ಪ್ರಾಚೀನ ಸಂಪ್ರದಾಯಗಳನ್ನು ಅನುಸರಿಸುವರು. ಇಲ್ಲಿ ಹರಿಯುವ ಬುಮ್‍ಥಾಂಗ್ ನದಿ ದಡದ ಮೇಲೆ ಭೂತಾನದ ಅತ್ಯಂತ ದೊಡ್ಡ ಕೋಟೆಗಳಲ್ಲೊಂದಾದ ಬ್ಯಾಕರ್ ಜೋಂಗ್ ಇದೆ. ಇದನ್ನು ನಾಲ್ಕನೆಯ ದೇವರಾಜನಾದ ಗ್ಯಾಲ್ಸಿ ತೇನಜಿನ್ ರಾಬ್‍ಗ್ಯೆ (೧೬೮೦-೯೪) ಕಾಲದಲ್ಲಿ ಕಟ್ಟಲಾಯಿತು. ಇದಲ್ಲದೆ ಜಾóಂಗ್ಲಿಂಗ್, ಲಾಮೆಗೊಂಪ, ಥಾಂಕಬಿ ಮತ್ತು ರಿಮುಜೆನ್ ಬೌದ್ಧಮಠಗಳಿವೆ. ಪುನಾಖಾ ಕಣಿವೆ ಥಿಂಪುವಿನ ಈಶಾನ್ಯಭಾಗದಲ್ಲಿ ೧೪೬೩ ಮೀ ಎತ್ತರದಲ್ಲಿದೆ. ಇಲ್ಲಿಯ ಪೊಚು ಮತ್ತು ಮೋಚು ನದಿಗಳು ಸೇರುವ ಸ್ಥಳದಲ್ಲಿ ೧೫೭೨ರಲ್ಲಿ ಷಾಂಬ್ ಡ್ರಂಗ್ ಗಾವಾಂಗ್ ನಾಂಗ್ಯಾಲ್ ದೊರೆ ಕಟ್ಟಿಸಿದ ಭೂತಾನಿನ ಅತ್ಯಂತ ಪ್ರಾಚೀನ ಕೋಟೆ ಪುನಾಖಾ ಇದೆ. ಇದು ಹಿಂದೆ ಭೂತಾನಿನ ಚಳಿಗಾಲದ ರಾಜಧಾನಿಯಾಗಿತ್ತು. ಈ ಕೋಟೆಗೆ ಆರು ಮಹಡಿಯುಳ್ಳ ಗೋಪುರವಿದೆ. ಇಲ್ಲಿಯ ದೇವಾಲಯದಲ್ಲಿ ಬುದ್ಧ, ಪದ್ಮಸಂಭವ ಮತ್ತು ಷಾಬ್‍ಡ್ರಂಗ್ ಗಾವಾಂಗ್ ನಾಂಗ್ಯಾಲ್‍ರ ಚಿನ್ನದ ಪ್ರತಿಮೆಗಳಿವೆ. ಇಲ್ಲಿ 600 ಜನ ಕೂಡಬಹುದಾದ ದೊಡ್ಡ ಹಜಾರವಿದೆ.

ಸುಮಾರು ೨೫೯೦ ಮೀ ಎತ್ತರದಲ್ಲಿ ಥಿಂಪು ಕಣಿವೆಯಲ್ಲಿ ಭೂತಾನಿನ ರಾಜಧಾನಿ ಥಿಂಪು ನಗರವಿದೆ. ತಾಷಿಬೋಡ್‍ಜಾಂಗ್ ಭೂತಾನಿನ ಆಧುನಿಕ ಕೋಟೆ. ಈ ಕೋಟೆಯನ್ನು ೧೩ನೆಯ ಶತಮಾನದಲ್ಲಿ ಟಿಬೆಟ್ಟಿನಿಂದ ಬಂದ ಲಾಮಾ ಕಟ್ಟಿಸಿದ್ದು. ಇದನ್ನು ೧೬೯೪ರಲ್ಲಿ ಮತ್ತು ೧೭೫೫ರಲ್ಲಿ ವಿಸ್ತರಿಸಲಾಯಿತು.

೧೯೬೯ರಲ್ಲಿ ಜಿಗ್ಮೆ ದೋರ್ಜಿವಾಂಗ್‍ಚುಕ್ ದೊರೆ ಹೊಸ ಕೋಟೆ ಕಟ್ಟಿಸಿದ. ಇದರಲ್ಲಿ ನೂರಕ್ಕೂ ಹೆಚ್ಚು ಕೊಠಡಿಗಳು ಮತ್ತು ದೊಡ್ಡ ಸಭಾಂಗಣಗಳಿವೆ. ಸರ್ಕಾರಿ ಕಚೇರಿಗಳು ಮತ್ತು ಭೂತಾನದ ರಾಷ್ಟ್ರೀಯ ಸಭೆಯೂ ಇಲ್ಲಿಯೇ ಇವೆ. ಸೂರ್ಯಾಸ್ತಾನಂತರ ಮಹಿಳೆಯರನ್ನು ಈ ಕೋಟೆಯೊಳಕ್ಕೆ ಬಿಡುವುದಿಲ್ಲ.

ಫಲವತ್ತಾದ ಪಾರೋಕಣಿವೆಯಲ್ಲಿ ಹರಿಯುವ ಪಾಂಚು ನದಿ ದಡದ ಮೇಲೆ ೧೬೪೬ರಲ್ಲಿ ಕಟ್ಟಲಾದ ರಿಂಚೆನ್ ಪುಂಗ್ ಕೋಟೆಯಿದೆ. ಪಾರೋದ ಮೂಲಕ ಟಿಬೆಟ್ಟಿಗೆ ದಾರಿ ಇದೆ. ಇಲ್ಲಿ ೪೦೦ ಕಿಲೋವ್ಯಾಟನ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗಿದೆ. ಇದು ಭೂತಾನದ ಅತ್ಯಂತ ಫಲವತ್ತಾದ ಪ್ರದೇಶ. ಇಲ್ಲಿ ಬತ್ತ, ಗೋಧಿ, ಮಿಲ್ಲೆಟ್ ಮತ್ತು ಆಲೂಗಡ್ಡೆಯನ್ನು ಬೆಳೆಸುತ್ತಾರೆ. ಷಾ, ಮಾಂಗ್ಡೆ, ಹಾ ಮತ್ತು ಟಾಷಿಗಾಂಗ್ ಇವು ಭೂತಾನದ ಇತರ ಕಣಿವೆಗಳು.

ಇತಿಹಾಸ[ಬದಲಾಯಿಸಿ]

ಭೂತಾನದ ಹೆಸರಿನ ಮೂಲದ ಬಗ್ಗೆ ಅನೇಕ ವಿಚಾರಸರಣಿಗಳಿವೆ. ಇದು ಸಂಸ್ಕತದ ಭೋತಾ ಅಂತ್ ಅಂದರೆ ಟೆಬೆಟ್ಟಿನ (ಭೋತಾ) ಅಂಚಿನಲ್ಲಿಯ ಪ್ರದೇಶ ಎಂಬ ಪದದಿಂದ ಉದ್ಭವಿಸಿರಬಹುದು. ಇನ್ನೊಂದು ಅಭಿಪ್ರಾಯದಂತೆ ಭು-ಉತ್ಥಾನ್ ಅಥವಾ ಎತ್ತರದ ಪ್ರದೇಶ ಎಂಬ ಶಬ್ದ ಇದರ ಮೂಲ. ಇನ್ನು ಕೆಲವರು ಇದು ಭೋಟಸ್ಥಾನ್ ಅಂದರೆ ಟೆಬೆಟನ್ನರ ಸ್ಥಾನ ಎಂಬ ಶಬ್ದದ ತದ್ಭವ ರೂಪವೆಂದು ಹೇಳುತ್ತಾರೆ.

ಪ್ರಾಚೀನ ಭೂತಾನ ಕ್ರಿ. ಪೂ ೫೦೦ ರಿಂದ ಕ್ರಿ. ಶ. ೬೦೦ ತನಕ ಪ್ರತ್ಯೇಕ ಪ್ರದೇಶವಾಗಿತ್ತು. ಇಲ್ಲಿ ಜನವಸತಿ ಹೆಚ್ಚಾಗಿರಲ್ಲಿಲ್ಲ. ಷಾ ಮತ್ತು ವಾಂಗ್ ಬುಡಕಟ್ಟಿನ ಜನ ವಾಸವಾಗಿದ್ದರು. ಇವರು ಯಾವ ಧಾರ್ಮಿಕಮತಕ್ಕೂ ಸೇರಿರಲಿಲ್ಲವಾದ್ದರಿಂದ ಇವರನ್ನು ಮಾನೆ ಎಂದು ಕರೆಯಲಾಗುತ್ತಿತ್ತು. ಭೂತಾನದ ಮೂಲಚರಿತ್ರೆಯ ಬಗ್ಗೆ ನಿಖರ ವಿವರಗಳು ಲಭ್ಯವಿಲ್ಲ. ಇದರ ಬಗ್ಗೆ ಬೌದ್ಧಮಠಗಳಲ್ಲಿ ಅನೇಕ ಪುರಾತನ ಹಸ್ತಲಿಪಿಗಳಿದ್ದರೂ ಇವುಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ಪುರಾತನ ದಾಖಲೆಗಲ್ಲಿ ಹೆಚ್ಚುಭಾಗ ೧೮೩೨ರಲ್ಲಿ ಪುನಾಖಾದಲ್ಲಿ ಆದ ಬೆಂಕಿಯ ಅನಾಹುತದಲ್ಲಿ ಹಾಗೂ ೧೮೯೭ರಲ್ಲಿ ಉಂಟಾದ ಭೂಕಂಪನದಲ್ಲಿ ನಾಶವಾಗಿವೆ. ಕ್ರಿ. ಶ. ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಿಂದ ಇಲ್ಲಿಗೆ ಬಂದ ಪದ್ಮಸಂಭವ ಎಂಬ ಧರ್ಮಗುರು ಭೂತಾನಿನ ಜನ ಬೌದ್ಧಮತ ಅಂಗೀಕರಿಸುವಂತೆ ಪ್ರೇರಿಸಿದ. ಆ ಕಾಲದಲ್ಲಿ ಖಿ-ಖಾ-ರಾ-ಥೋಯಿಡ್ ಮತ್ತು ನಾಗೂಚಿ ಎಂಬವರು ಕ್ರಮವಾಗಿ ಖೆಂಪ ಜೋಂಗ್ ಮತ್ತು ಸಿಂಧೂಪ್ರದೇಶದ ರಾಜರಾಗಿದ್ದರು. ನಾಗೂಚಿ ಯುದ್ಧದಲ್ಲಿ ಹಿರಿಯ ಮಗನ್ನು ಕಳೆದುಕೊಂಡು ದುಃಖತಪ್ತನಾಗಿದ್ದಾಗ ಪದ್ಮಸಂಭವ ಬಂದು ರಾಜ ದುಃಖವನ್ನು ಮರೆಯುವಂತೆ ಮಾಡಿದನೆಂದು ಹೇಳಲಾಗಿದೆ.

ಈಗ ಮೂರು ಶತಮಾನಗಳ ಹಿಂದೆ ಷೆಪ್ಟೂನ್ ಲಾ-ಫಾ ಎಂಬ ಲಾಮಾ ಟಿಬೆಟ್ಟಿನಿಂದ ಬಂದು ಭೂತಾನಿನ ಮೊದಲನೆಯ ಧರ್ಮರಾಜನಾದ. ಇವನು ಆಡಳಿತ ಪದ್ಧತಿಯಲ್ಲಿ ಅನೇಕ ಸುಧಾರಣೆಗಳನ್ನು ತಂದ. ಪ್ರತಿ ಪ್ರಾಂತ್ಯಕ್ಕೂ ಪೆನ್ಲೊಪ್ ಅಥವಾ ಪ್ರದೇಶ ಗವರ್ನರುಗಳನ್ನು ಮತ್ತು ಪ್ರತಿ ಕೋಟೆಗೂ ಜಂಗ್‍ಪೆನ್ಸ್ ಅಥವಾ ಕೋಟೆಯ ಗವರ್ನರುಗಳನ್ನು ನೇಮಿಸಿದ. ಇವನು ಲೌಕಿಕ ಹಾಗೂ ಧಾರ್ಮಿಕ ಕ್ಷೇತ್ರಗಳೆರಡಕ್ಕೂ ಅಧಿಪತಿಯಾಗಿದ್ದ. ಆದರೆ ಇವನ ಉತ್ತರಾಧಿಕಾರಿ ಕೇವಲ ಧಾರ್ಮಿಕ ಅಧಿಕಾರಿಯಾಗಿ ಧರ್ಮರಾಜನೆಂದು ಹೆಸರು ಪಡೆದ. ಲೌಕಿಕ ವ್ಯವಹಾರಗಳನ್ನು ನೋಡಿಕೊಳ್ಳಲು ಇವನು ಮಂತ್ರಿಯನ್ನು ನೇಮಿಸಿದ. ಇವನು ದೇವರಾಜನೆಂದು ಹೆಸರಾದ. ಈ ರೀತಿಯ ಇಬ್ಬಗೆಯ ಅಧಿಕಾರ ೨೦ನೆಯ ಶತಮಾನದ ಪ್ರಾರಂಭದ ತನಕವೂ ಅಸ್ತಿತ್ವದಲ್ಲಿತ್ತು.

೧೯ನೆಯ ಶತಮಾನ ಪೂರ್ತಾ ವಿವಿಧ ಪ್ರಾಂತಗಳ ಪನ್ಲೊಪರು ಪರಸ್ಪರ ಅಧಿಕಾರಕ್ಕಾಗಿ ನಡೆಸಿದ ಹೋರಾಟದಲ್ಲಿಯೇ ಕಳೆಯಿತು. ೧೯೦೭ರಲ್ಲಿ ಟೊಂಗ್ಸದ ಪೆನ್ಲೂಪ್ ಆಗಿದ್ದ ಉಗ್ಯೆಯಿನ್ ವಾಂಗ್‍ಚುಕ್ ಬಲಶಾಲಿಯಾಗಿ ಭೂತಾನದ ಮೊದಲನೆಯ ರಾಜನಾಗಿ ೧೯೨೬ರ ತನಕ ಆಳಿದ. ಇವನಿಂದಲೇ ವಂಶಪಾರಂಪರ್ಯ ರಾಜ್ಯಾಧಿಕಾರ ಮುಂದುವರಿದು ಬಂತು. ಇದರಿಂದ ಇಬ್ಬಗೆಯ ಆಡಳಿತಪದ್ಧತಿ ಅಂತ್ಯಗೊಂಡು ಭೂತಾನ ಒಂದುಗೂಡಿತು. ಇವನ ಕಾಲದಲ್ಲಿ ಚೀನಿ ಪ್ರಭಾವವನ್ನು ತಡೆಗಟ್ಟಲು ಭೂತಾನದೊಂದಿಗೆ ಬ್ರಿಟಿಷ್ ಸರ್ಕಾರ ಒಪ್ಪಂದ ಮಾಡಿ ಕೊಂಡಿತು. ಈ ಪುನಾಖಾ ಒಪ್ಪಂದದಂತೆ ಬ್ರಿಟಿಷ್ ಸರ್ಕಾರ ಭೂತಾನಿಗೆ ರೂ ೧ ಲಕ್ಷ ವಾರ್ಷಿಕ ಧನಸಹಾಯ ನೀಡುವುದೆಂದೂ ಬ್ರಿಟಿಷ್ ಸರ್ಕಾರ ಭೂತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದೂ ವಿದೇಶಾಂಗ ವ್ಯವಹಾರಗಳಲ್ಲಿ ಬ್ರಿಟಿಷ್ ಸರ್ಕಾರದ ಸಲಹೆಯಂತೆ ನಡೆಯಬೇಕೆಂದೂ ನಿರ್ಧಾರವಾಯಿತು.

೧೯೨೬ರಿಂದ ೧೯೫೨ರ ತನಕ ಈ ವಂಶದ ಎರಡನೆಯ ರಾಜ ಜಿಗ್ಮೆ ವಾಂಗ್‍ಚುಕ್ ಆಳಿದ. ಇವನು ಧಾರ್ಮಿಕ ಪ್ರವೃತ್ತಿಯವನಾಗಿದ್ದು ಧಾರ್ಮಿಕ ಸಂಪ್ರದಾಯಗಳ ಸಂಹಿತೆಯನ್ನು ರೂಪಿಸಿದ. ೧೯೪೨ರಲ್ಲಿ ಸ್ವತಂತ್ರ ಭಾರತ ಸರ್ಕಾರದೊಡನೆ ಈ ರಾಜ ಮಾಡಿಕೊಂಡ ಒಪ್ಪಂದದಂತೆ ಭೂತಾನಿಗೆ ವಾರ್ಷಿಕ ಧನಸಹಾಯವನ್ನು ರೂ. ೫ ಲಕ್ಷಕ್ಕೆ ಏರಿಸಲಾಯಿತು. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರಕ್ಕೂ ಭೂತಾನಿಗೆ ಭಾರತದ ಮೂಲಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಯಿತು. ವಿದೇಶಾಂಗ ವ್ಯವಹಾರಗಳಲ್ಲಿ ಭಾರತದ ಸಲಹೆಗೆ ಬದ್ಧವಾಗಿರಲು ಭೂತಾನ ಒಪ್ಪಿಕೊಂಡಿತು.

೧೯೫೧ರಿಂದ ೧೯೭೨ರ ತನಕ ಆಳಿದ ಮೂರನೆಯ ರಾಜ ಜಿಗ್ಮೆ ದೋರ್ಜಿ ವಾಂಗ್ ಚುಕ್ ಕಾಲದಲ್ಲಿ ಭೂತಾನ ಒಂದು ಆಧುನಿಕ ರಾಜ್ಯವಾಯಿತು. ೧೯೬೧ರಲ್ಲಿ ಚೀನಾ ಕೊಡಬಯಸಿದ ಆರ್ಥಿಕ ಸಹಾಯವನ್ನು ನಿರಾಕರಿಸಿ ಭಾರತ ಸರ್ಕಾರದ ಸಹಾಯದೊಂದಿಗೆ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಇವನ ಕಾಲದಲ್ಲಿ ಭೂ ಸುಧಾರಣೆಯನ್ನು ಜಾರಿಗೆ ತಂದು ಜೀತಪದ್ಧತಿಯನ್ನು ನಿಷೇಧಿಸಲಾಯಿತು. ನ್ಯಾಯ ಇಲಾಖೆಯನ್ನು ಆಡಳಿತ ಇಲಾಖೆಯಿಂದ ಪ್ರತ್ಯೇಕಿಸಿ ಆಧುನಿಕ ನ್ಯಾಯ ಪದ್ಧತಿಯನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಸಭೆಯನ್ನು ಸ್ಥಾಪಿಸಿ ದೇಶದಲ್ಲಿ ಶಾಸನಬದ್ಧ ರಾಜತ್ವಕ್ಕೆ ತಳಹದಿ ಹಾಕಲಾಯಿತು. ಭೂತಾನಿನ ಈಗಿರುವ ದೊರೆ ನಾಲ್ಕನೆಯ ಜಿಗ್ಮೆ ಸಿಂಗ್ಯ ವಾಂಗ್‍ಚುಕ್. ಈತ ೧೯೭೨ರಲ್ಲಿ ಆಧಿಕಾರಕ್ಕೆ ಬಂದ. ಈತನೂ ಭೂತಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ.[೧] ಪ್ರಧಾನಿ-ಪ್ರಧಾನಿ ಲೊತಯ್ ಶೆರಿಂಗ್ - ವೃತ್ತಿಯಲ್ಲಿ ವೈದ್ಯ.[೨]

ಇದನ್ನೂ ನೋಡಿ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂತಾನ
  2. ಪ್ರಧಾನಿ ಲೊತಯ್ ಶೆರಿಂಗ್ ಭೂತಾನ್‌‌ನಲ್ಲಿ ಈ ವೈದ್ಯನೆಂದರೆ ಇಡೀ ದೇಶಕ್ಕೆ ಅಚ್ಚುಮೆಚ್ಚು;d: ೧೦ ಮೇ ೨೦೧೯,
"https://kn.wikipedia.org/w/index.php?title=ಭೂತಾನ್&oldid=1217727" ಇಂದ ಪಡೆಯಲ್ಪಟ್ಟಿದೆ