ರೇನಾಡ್ ರೋಗ
ರೇನಾಡ್ ರೋಗವು ಸಾಮಾನ್ಯವಾಗಿ ಕೈಬೆರಳುಗಳಿಗೆ ತಗಲುವ ರೋಗ (ರೇನಾಡ್ಸ್ ಡಿಸೀಸ್).[೧] ಮೊದಲಿಗೆ ರೇನಾಡ್ ಎಂಬ ವೈದ್ಯ ಇದನ್ನು ಕಂಡುಕೊಂಡನಾದ್ದರಿಂದ ಈ ಹೆಸರು.[೨] ಶೀತ ವಾತಾವರಣದಿಂದಾಗಿ ಕೈಬೆರಳುಗಳ ಚರ್ಮದ ಬಣ್ಣ ಮಂಕಾಗಿ ಕ್ರಮೇಣ ನೀಲಿ ಬಣ್ಣಕ್ಕೆ ತಿರುಗುತ್ತದೆ.[೩] ಕಾಲುಬೆರಳುಗಳಿಗೆ ತಗಲುವುದಾದರೂ ಅದು ಬಲು ವಿರಳ. ಮಾನಸಿಕ ಉದ್ವೇಗಗಳಿಂದಲೂ ರೋಗ ಕಾಣಿಸಿಕೊಳ್ಳುವುದುಂಟು. ಹೆಬ್ಬೆಟ್ಟಿಗೆ ರೋಗ ಸಾಮಾನ್ಯವಾಗಿ ತಗಲದಿದ್ದರೂ ಹಸ್ತಕ್ಕೆ ಹರಡುವ ಸಾಧ್ಯತೆ ಇದೆ.
ಈ ರೋಗದ ಸನ್ನಿವೇಶದಲ್ಲಿ ಕೈಬೆರಳುಗಳಲ್ಲಿಯ ರಕ್ತನಾಳಗಳು ಹೆಚ್ಚಿನ ಪ್ರತಿಕ್ರಿಯೆಯನ್ನು (ಸಂಕೋಚನ ಮತ್ತು ವ್ಯಾಕೋಚನ) ಪ್ರದರ್ಶಿಸುತ್ತವೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಅನುವೇದನ ನರಗಳು (ಸಿಂಪೆತಟಿಕ್ ನರ್ವ್ಸ್) ಬಲು ಚುರುಕಾಗಿರುವುದು ಕಂಡುಬರುತ್ತದೆ. ಇಂಥ ರೋಗಸ್ಥಿತಿ ವಂಶಪಾರಂಪರ್ಯವಾಗಿ ಬಂದಿರುವಂಥ ಸಂದರ್ಭಗಳೂ ಉಂಟು. ರೋಗ ಶಮನವಾಗುವ ಸನ್ನಿವೇಶದಲ್ಲಿ ನೀಲಿಬಣ್ಣಕ್ಕೆ ತಿರುಗಿದ ಬೆರಳುಗಳು ಕ್ರಮೇಣ ಬುಡದಿಂದ ಕೆಂಪುಬಣ್ಣ ತಳೆದು ಮೊದಲಿನ ಸ್ಥಿತಿಗೆ ಮರಳುತ್ತವೆ. ಈ ರೋಗಪೀಡಿತನಾದವನ ಕೈಬೆರಳುಗಳಲ್ಲಿ ಕೊಂಚಮಟ್ಟಿಗೆ ಊತ, ಆ ಭಾಗದ ಸ್ಥಳೀಯ ಅರಿವಳಿಕಾ ಸ್ಥಿತಿ ಹಾಗೂ ನಾಡಿಬಡಿತಗಳು ಕಾಣಿಸಿಕೊಳ್ಳಬಹುದು.
ರೇನಾಡ್ ರೋಗದ ಲಕ್ಷಣಗಳು ಕ್ರಮೇಣ ತಂತಾನೇ ಕೊನೆಗಾಣಿಸಿಕೊಳ್ಳುವುದಾದರೂ ಉಷ್ಣತೆ ಕೊಂಚಮಟ್ಟಿಗೆ ಅಧಿಕವಾಗಿರುವ ಕೊಠಡಿಯಲ್ಲಿ ವಾಸಮಾಡುವುದರಿಂದಲೊ ಕೈಕಾಲುಗಳನ್ನು ಬಿಸಿ ನೀರಿನಲ್ಲಿ ಅದ್ದಿಟ್ಟುಕೊಳ್ಳುವುದರಿಂದಲೊ ಕ್ರಮೇಣ ಶಮನಗೊಳ್ಳುತ್ತವೆ. ಈ ರೋಗದ ಸಲುವಾಗಿ ನರ, ರಕ್ತನಾಳಗಳಲ್ಲಿ ಜಡತ್ವ, ಆಯಾ ಅಂಗಗಳಲ್ಲಿ ಕಾವೇರುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂಥ ಪರಿಸ್ಥಿತಿಯಲ್ಲಿ ದೇಹದಲ್ಲಿನ ಕೊಬ್ಬಿನ ಸಿಂಬೆಗಳು (ಫ್ಯಾಟ್ ಪ್ಯಾಡ್ಸ್) ನಾಶಗೊಂಡು ಕೊನೆಗೆ ಸಂಪೂರ್ಣವಾಗಿ ನಶಿಸಿಹೊಗಲೂಬಹುದು. ಬೆರಳುಗಳ ಚರ್ಮ ಹಾಗೂ ತುದಿಭಾಗದಲ್ಲಿ ಗ್ಯಾಂಗ್ರೀನ್ ಹುಣ್ಣುಗಳೇರ್ಪಡಬಹದು. ಉಷ್ಣವಾತಾವರಣದಲ್ಲಿ ರೋಗಿಯನ್ನು ಇಟ್ಟಿರುವುದರಿಂದ ಈ ಹುಣ್ಣುಗಳು ಒಣಗಿಹೋಗುತ್ತವೆ. ರೇನಾಡ್ ರೋಗ ಬರಿಸುವಂಥ ವಿದ್ಯಮಾನ (ರೇನಾಡ್ಸ್ ಫಿನಾಮಿನನ್) ಸಾಮಾನ್ಯವಾಗಿ ಒಂದೋ ಎರಡೋ ಕೈಬೆರಳುಗಳಲ್ಲಿ ಮಾತ್ರ ಇರುವುದಾದರೂ ಎರಡೂ ಕೈಗಳ ಬೆರಳುಗಳಲ್ಲೂ ಸಮಾಂಗೀಯವಾಗಿ (ಸಿಮಟ್ರಿಕಲ್) ಬರುವುದುಂಟು.
ಉಲ್ಲೇಖಗಳು
[ಬದಲಾಯಿಸಿ]- ↑ "What Is Raynaud's?". nhlbi.nih.gov. US: National Heart, Lung, and Blood Institute, National Institutes of Health. 21 ಮಾರ್ಚ್ 2014. Archived from the original on 4 ಅಕ್ಟೋಬರ್ 2016. Retrieved 1 ಅಕ್ಟೋಬರ್ 2016.
- ↑ Koehler, Ulrich; Portig, Irene; Hildebrandt, Olaf; Koehler, Niklas Alexander (December 2019). "Maurice Raynaud (1834-1881) and the Mystery of 'Raynaud's Phanomenon'". Dtsch Med Wochenschr (in ಜರ್ಮನ್). 144 (25): 1778–1783. doi:10.1055/a-0869-9899. PMID 31847013. S2CID 209409136. Retrieved October 4, 2023.
- ↑ "What Are the Signs and Symptoms of Raynaud's?". nhlbi.nih.gov. US: National Heart, Lung, and Blood Institute, National Institutes of Health. 21 ಮಾರ್ಚ್ 2014. Archived from the original on 5 ಅಕ್ಟೋಬರ್ 2016. Retrieved 1 ಅಕ್ಟೋಬರ್ 2016.
ಹೊರಗಿನ ಕೊಂಡಿಗಳು
[ಬದಲಾಯಿಸಿ]- What Is Raynaud's Disease at National Heart, Lung, and Blood Institute
- Questions and Answers about Raynaud's Phenomenon at National Institutes of Health
- Bakst R, Merola JF, Franks AG, Sanchez M (October 2008). "Raynaud's phenomenon: pathogenesis and management". Journal of the American Academy of Dermatology. 59 (4): 633–53. doi:10.1016/j.jaad.2008.06.004. PMID 18656283.