ವಿಷಯಕ್ಕೆ ಹೋಗು

ಫ್ರೆಂಚ್ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರೆಂಚ್ ಭಾಷೆಯು 9ನೆಯ ಶತಮಾನದಲ್ಲಿಯೆ ಬೆಳೆದು ಬಂದು 10ನೆಯ ಶತಮಾನದಲ್ಲಿ ವೃದ್ದಿ ಹೊಂದಿದ್ದರೂ ಗಮನೀಯ ಸಾಹಿತ್ಯ ಕಾಣಿಸುವುದು 11ನೆಯ ಶತಮಾನದಲ್ಲಿ. ಅಲ್ಲಿಂದ ಮೂರೂವರೆ ಶತಮಾನ ಕಾವ್ಯ, ನಾಟಕ, ಭಾವಗೀತೆ, ವಿಡಂಬನ, ಚರಿತ್ರೆ ಇತ್ಯಾದಿ ಪ್ರಕಾರಗಳನ್ನು ಸಂತತವಾಗಿ ಯಥೇಷ್ಟವಾಗಿ ರೂಢಿಸಲಾಯಿತು.

ಹತ್ತನೆಯ ಶತಮಾನದಲ್ಲಿ ಆರಂಭ

[ಬದಲಾಯಿಸಿ]

ಫ್ರೆಂಚ್ ಸಾಹಿತ್ಯ ಆರಂಭವಾದುದು 10ನೆಯ ಶತಮಾನದಲ್ಲಿ. 10 ಮತ್ತು 11ನೆಯ ಶತಮಾನಗಳಲ್ಲಿ ರಚಿತವಾಗಿರಬಹುದೆಂದು ಸ್ಮರಣೀಯ ಕೃತಿಗಳು ಇವು: ಸೇಂಟ್ ಯೂಲೇಲಿಯಾ ಕುರಿತ ನಾಡಾಡಿ ಹಾಡುಗಳು (ಕ್ಯಾಂಟಿಲೇನೆ); ಸೇಂಟ್ ಲಿಗೆರನ ಜೀವನಚರಿತ್ರೆ; ಸೇಂಟ್ ಅಲೆಕ್ಸಿಸ್ಸನ ಜೀವನ ಚರಿತ್ರೆ (1050). ಫ್ರೆಂಚ್ ಸಾಹಿತ್ಯದ ಮೊಟ್ಟಮೊದಲ ಮಹತ್ತರ ಕೃತಿ ಚಾನ್ಸೆನ್ಸ್ ಡಿ ಗೆಸ್ಟೆ. ಇದೊಂದು ಮಹಾಕಾವ್ಯಗಳ ಸರಣಿ. ಈ ಸರಣಿಯ ಸುಮಾರು ನೂರು ಮಾದರಿಗಳು ಮಾತ್ರ ಈಗ ದೊರೆತಿವೆ. ಈ ಎಲ್ಲ ಕಾವ್ಯಗಳ ವಸ್ತು ಪರಂಪರಾಗತ ಫ್ರೆಂಚ್ ಇತಿಹಾಸದ ಮಹಾಪುರುಷರ ವೀರಸಾಧನೆಗಳು. ಷಾರ್ಲೆಮೇನ್ ಮತ್ತು ಅವನ ಸಂತತಿಗೆ ಸೇರಿದ್ದು ಒಂದು ಗುಂಪು. ಮೆಯೆನ್ಸಿಯ ಡೂನನ ವೀರಗತೆಗಳದು ಇನ್ನೊಂದು ಗುಂಪು. ಗ್ಯಾರಿನ್ ಡಿ ಮ್ಯೊಂಗ್ಲೆನನ ವೀರಗತೆಗಳದು ಮತ್ತೊಂದು. ಹೀಗೆ ಮೂರು ಮುಖ್ಯ ಗುಂಪುಗಳಿವೆ. ಧಾರ್ಮಿಕ ಯುದ್ಧಗಳದ್ದು, (ಕ್ರೂಸೇಡ್ಸ್) ಲೊರೇನರ್ಸ್ ಕುರಿತದ್ದು ಈ ಗುಂಪುಗಳೂ ಇವೆ. ಇವುಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದ ಕಾವ್ಯ ಚಾನ್ಸೆನ್ ಡಿ ರೊಲ್ಯಾಂಡ್. ಕಣ್ಣಿಗೆ ಕಟ್ಟುವಂಥ ವರ್ಣನೆ. ಮರೆಯಲಾಗದ ಪಾತ್ರಗಳ ಚಿತ್ರಣ ಈ ಕಾವ್ಯದ ವಿಶೇಷ ಗುಣ. ಭೀಕರ ಕಾಳಗಗಳು, ಮಂತ್ರಾಲೋಚನೆ, ಧಾರ್ಮಿಕ ಶ್ರದ್ಧೆಯ ಅಭಿವ್ಯಕ್ತಿ ಇವೇ ಈ ಕಾವ್ಯಗಳಲ್ಲಿ ಪ್ರಧಾನ. ಶೃಂಗಾರ ಅಲ್ಲಲ್ಲಿ ಗೌಣವಾಗಿ ಕಾಣಿಸಿಕೊಳ್ಳುತ್ತವೆ.


೧೨ ನೆಯ ಶತಮಾನ

[ಬದಲಾಯಿಸಿ]

12ನೆಯ ಶತಕದ ವೇಳೆಗೆ ಐತಿಹಾಸಿಕ ವ್ಯಕ್ತಿಗಳ ಬದಲು ಹಿಂದೆ ನಿಜವಾಗಿಯೂ ಆಗಿ ಹೋದವರು ಎಂಬಷ್ಟು ಮಟ್ಟಿಗೆ ಜನಪದದಲ್ಲಿ ನೆಲೆನಿಂತಿದ್ದ ಕಾಲ್ಪನಿಕ ವ್ಯಕ್ತಿಗಳ ವೀರಸಾಹಸಗಳನ್ನು ಕುರಿತ ರಮ್ಯ ಕಥನಕಾವ್ಯಗಳು ರಚಿತವಾದುವು. ಇವುಗಳಲ್ಲಿ ಟ್ರೋಜನ್ ವೀರರ ಮತ್ತು ಇತರ ಗ್ರೀಕ್ ಪೌರಾಣಿಕ ಕತೆಗಳನ್ನು ಕುರಿತ ಕಾವ್ಯಗಳು, ಆರ್ಥರ್ ದೊರೆ ಮತ್ತು ಅವನ ದುಂಡು ಮೇಜು, ಅವನ ನೂರು ಜನ ವೀರಯೋಧರುಗಳನ್ನು ಕುರಿತ ಕಾವ್ಯಗಳು ಎಂದು ಎರಡು ಬಗೆ. ವೀರ ಯೋಧರ ಸಾಹಸ, ಪ್ರಣಯಗಳ ರಮ್ಯಕಥನಗಳು ಜನಪ್ರಿಯವಾದುವು. ಗೆಸ್ಟೆ ಕಾವ್ಯಗಳ ಸರಳತೆ ಮಾಯವಾಗಿ ಆಡಂಬರದ ಶೈಲಿ, ಆಲಂಕಾರಿಕ ಭಾಷೆ ಈ ರಮ್ಯ ಕಥಾನಕಗಳಲ್ಲಿ ತಲೆದೋರಿದವು. ಈ ಬಗೆಯ ಕಾವ್ಯಗಳನ್ನು ರಚಿಸಿದವರಲ್ಲಿ ಕ್ರಿಷಿಯನ್ ಡಿ ಟ್ರೋಯ್ ಸುಪ್ರಸಿದ್ಧನಾದವ. ಇಂಗ್ಲಿಷ್ ಸಾಹಿತ್ಯದ ಸರ್ ತಾಮಸ್ ಮೆಲೊರಿಯ ಪುಸ್ತಕಕ್ಕೆ ಸಾಮಗ್ರಿಯೊದಗಿಸಿದವ ಈತನೇ. ಯೂರೋಪಿನ ಎಲ್ಲ ಭಾಷೆಗಳ ಮೇಲೂ ಈತನ ಕೃತಿಗಳ ಪ್ರಭಾವ, ಎಲ್ಲ ಕಡೆ ಈತನ ಅನುಕರುಣೆ ಆ ಕಾಲದ ಸಾಮಾನ್ಯ ಲಕ್ಷಣವಾಯಿತು. ಕಾಲ್ಪನಿಕ ರಮ್ಯಕಥನಗಳು ಕ್ರಮೇಣ ಧರ್ಮ ಮತ್ತು ನೀತಿಪ್ರಸಾರಕ ರೂಪಕ ಕಥೆಗಳ ಸೃಷ್ಟಿಗೆ ದಾರಿ ಮಾಡಿದುವು.

ಈ ಎಲ್ಲ ಸಾಹಿತ್ಯಕೃತಿಗಳಿಗಿಂತ ಬೇರೆಯಾಗಿ ನಿಲ್ಲುವ, ವಿಶಿಷ್ಟವಾದ ಕೆಲವು ಲಕ್ಷಣಗಳುಳ್ಳ ಕೃತಿ ರೊಮಾನ್ ಡಿ ಲಾ ರೋಸ್. ಇದರ ಪೂರ್ವಾರ್ಧವನ್ನು ಗಿಲ್ಲಾಮೆ ಡಿ ಲೋರಿಸ್ 1230ರ ಸುಮಾರಿನಲ್ಲಿ ಬರೆದ. ಉತ್ತರಾರ್ಧವನ್ನು ಈ ಶತಕದ ಕಡೆಯ ವರ್ಷಗಳಲ್ಲಿ ಜೀನ್ ಡಿ ಮೋಂಗ್ ಬರೆದು ಮುಗಿಸಿದ. ಮೊದಲ ಭಾಗದ ರೀತಿಯೆ ಬೇರೆ. ಎರಡನೆಯ ಭಾಗದ ಗತ್ತುಗುರಿಗಳೆ ಬೇರೆ. ಆದರೂ ಒಟ್ಟು ಕಾವ್ಯದ ಸಾವಯವ ಸಂಪೂರ್ಣತೆಗೆ, ಐಕ್ಯತೆಗೆ ಭಂಗ ಬಂದಿಲ್ಲ. ಮೋಂಗ್ ಅದೇ ಕಥನದ ಚೌಕಟ್ಟನ್ನು ಉಳಿಸಿಕೊಂಡರೂ ಹಲವಾರು ಘಟನೆಗಳನ್ನು ಸಂದರ್ಭಗಳನ್ನು ಸಮಕಾಲೀನ ಸಮಾಜದ ಲೋಪದೋಷಗಳನ್ನು ವಿಡಂಬಿಸಲು ಬಳಸಿಕೊಂಡ. ಸರಳ, ಸುಂದರ ಹಾಗೂ ಸತ್ತ್ವ ಶಾಲಿಯಾದ ಭಾಷೆ, ಹೃದಯಸ್ಪಂದಿಯಾದ ಪ್ರೇಮಕಥೆ ಈ ಕೃತಿಯ ಜನಪ್ರಿಯತೆಗೆ ಕಾರಣ. ನವೋದಯ ಕಾಲದವರೆಗೆ ರೂಪಕ ಕಥೆಗಳ ಮಹತ್ತರ ಸಾಹಿತ್ಯಕ್ಕೆ ನಿದರ್ಶನವಾಗಿರುವ ಇಂಥ ಕೃತಿ ಮತ್ತೊಂದು ಬರಲಿಲ್ಲ.

೧೩ ನೆಯ ಶತಮಾನ

[ಬದಲಾಯಿಸಿ]

ಫ್ರೆಂಚಿನ ವಿಶಿಷ್ಟ ಸಾಹಿತ್ಯ ಪ್ರಕಾರವೆನ್ನಿಸಿದ ಫೇಬ್ಲಿಯಾ(ಜ್) 13ನೆಯ ಶತಮಾನದಲ್ಲಿ ತುಂಬ ಜನಪ್ರಿಯವಾಯಿತು. ರೂಪದಲ್ಲಿ ಕವನ, ವಸ್ತುಸ್ವಾರಸ್ಯವಾದ ಒಂದು ಸಣ್ಣಕಥೆ ಅಥವಾ ಪ್ರಸಂಗ, ಕಥೆ ಪ್ರಧಾನ. ನೀತಿಗೆ ಎರಡನೆಯ ಸ್ಥಾನ. ಕಥೆಯ ಸ್ವಾರಸ್ಯ, ನೀತಿಯ ಬೋಧನೆ ಪರಸ್ಪರ ಮಾರಕವಾಗದಂಥ ರಚನೆ, ಅಂದಿನ ಸಮಾಜದ, ಜನಜೀವನದ ಸ್ಥಿತಿಗತಿಗಳನ್ನು ಕುರಿತ ಚಿಂತನೆ, ನಿರೂಪಣೆಯ ಕೌಶಲ, ಹಾಸ್ಯ, ಬುದ್ಧಿ ಚತುರತೆ, ವಿಡಂಬನೆಯ ಮೊನಚು ಎಲ್ಲ ಹದವಾಗಿ ಬೆರೆತು ಬಂದುದರಿಂದ ಕಥನಕ್ಕೆ ವಿಶೇಷ ಮೆರಗು. ನಿತ್ಯಜೀವನದಲ್ಲಿ ನಡೆದ ಇಲ್ಲವೆ ನಡೆಯಬಹುದಾದ ನೂರಾರು ಘಟನೆಗಳು ಜೀವಂತಿಕೆಯಿಂದ ಲವಲವಿಕೆಯಿಂದ ಈ ಕಥನ ಕವನಗಳಲ್ಲಿ ಮೂಡಿವೆ. ಫ್ರೆಂಚ್ ಭಾಷೆ ತಿಳಿಯದ ಇಬ್ಬರು ಇಂಗ್ಲಿಷರು ಅನೇಕ ಬಗೆಯ ತಪ್ಪು ಗೊಂದಲಗಳನ್ನುಂಟು ಮಾಡಿ ಹಾಸ್ಯಕ್ಕೆ ಪಕ್ಕಾಗುವ ಪ್ರಸಂಗ; ಅತಿ ಮೂರ್ಖನಾದವನೊಬ್ಬ ವೀರಯೋಧ ಒಳ್ಳೆಯವಳೂ ಚತುರಮತಿಯೂ ಆದ ಅತ್ತೆಯಿಂದ ಭಾಗ್ಯಶಾಲಿಯಾಗುವುದು; ಪಾದ್ರಿಯೊಬ್ಬ ತನ್ನ ಲೋಭ, ದುರಾಸೆ, ಕೀಳು ನಡತೆಗಳ ಫಲವನ್ನನುಭವಿಸುವುದು-ಹೀಗೆ ಈ ಕಥೆಗಳು ವಿವಿಧ ಬಗೆಯವು. ಒಂದು ಬಗೆಯ ಲಘು ವಿನೋದ, ಕುಹಕ, ಕುಚೋದ್ಯ, ಬೈಯುವ ಕಲೆ-ಎಲ್ಲ ಫ್ರೆಂಚ್ ಸಾಹಿತ್ಯದ ವಿಶಿಷ್ಟ ಲಕ್ಷಣವಾಗಿ ಬೆಳೆಯಲು ಇಲ್ಲಿಂದ ಆರಂಭವಾಯಿತು. ಲೇವಿಲೇನ್ ಮೈರ್, ಎಸ್ತೂಲ ಲೆ ಪೆಡ್ರ್ರಿಕ್ಸ್-ಇವು ಕೆಲವು ಹೆಸರಾಂತ ಕೃತಿಗಳು. ಇದೇ ಕಾಲದಲ್ಲಿ ಈಸೋಪ್, ಫೀಡ್ರಸ್, ಬ್ಯಾಬ್ರಿಯಸ್ಸರ ಕತೆಗಳು ಭಾಷಾಂತರಗಳೂ ಫ್ರೆಂಚ್ ಭಾಷೆಯಲ್ಲಿ ಬಂದುವು.

ಇದೇ ಬಗೆಯದಾದರೂ ನೇರವಾದ ವಿಡಂಬನೆಯಾಗಿ ತಾನೇ ತಾನಾಗಿ ನಿಲ್ಲುವ ರೋಮನ್ ಡಿ ರೆನಾರ್ಟ್ (ರೆನಾರ್ಡ್ ದಿ ಫಾಕ್ಸ್) ಎಂಬ ಪ್ರಾಣಿಕಥೆ ಸುಪ್ರಸಿದ್ಧವಾದುದು. 12ರಿಂದ 14ನೆಯ ಶತಕದವರೆಗೂ ಈ ಕಥೆ ಬಹುಜನ ಕವಿಗಳ ಮೆಚ್ಚಾಗಿ ಬೇರೆ ಬೇರೆ ಭಾಷೆಗಳಲ್ಲೂ ಕಥಾವಸ್ತುವಾಗಿ ಅನೇಕ ಮಾರ್ಪಾಡುಗಳನ್ನೂ ಪಡೆದು ಜನಪ್ರಿಯ ಕಥನಕವನವಾಯಿತು. ಇದರಲ್ಲಿ ಬರುವ ನರಿ, ತೋಳ ಕರಡಿ, ಸಿಂಹರಾಜ ಮರೆಯಲಾಗದ ಪಾತ್ರಗಳ ಪ್ರತೀಕವಾದುವು.

ಆತ್ಮೀಯ ಶೈಲಿಯ ಪ್ರಸಿದ್ಧ ಕವಿ ರೂಟ್‍ಬೊ, ಭಾವನಾತ್ಮಕ ಕವಿ ಆಡಂ ಡಿ ಲಾ ಹೇಲ್ 13ನೆಯ ಶತಕದ ಮಧ್ಯಭಾಗದಲ್ಲಿ ರಾಜಿಸುವ ದೊಡ್ಡ ಕವಿಗಳು. ರೂಟ್‍ಬೊ ಹಲವಾರು ಸೊಗಸಾದ ವಿಡಂಬನಾತ್ಮಕ ಫೇಬ್ಲಿಯಾಗಳನ್ನು ಬರೆದ.

ಟ್ರುಬೆಡೂರ್ಸ್ ಮತ್ತು ಟ್ರೂವರ್ಸರ ಯುಗ

[ಬದಲಾಯಿಸಿ]

11ರಿಂದ 13ನೆಯ ಶತಕದವರೆಗಿನ ಕಾಲವನ್ನು ಟ್ರುಬೆಡೂರ್ಸ್ ಮತ್ತು ಟ್ರೂವರ್ಸರ ಯುಗವೆಂದು ಕರೆಯಬಹುದು. ದಕ್ಷಿಣ ಫ್ರಾನ್ಸಿನಲ್ಲಿ ದೇಶಿಯ ಭಾಷೆಯಲ್ಲಿ ಹೊಸಬಗೆಯ ಹಾಡುಗಬ್ಬಗಳನ್ನು ರಚಿಸಿದ ಕವಿಗಾಯಕರನ್ನು ಟ್ರೋಬೆ ಡೋರ್ಸ್ (ಚಾರಣರು) ಎಂದು ಕರೆದರು. ಇವರ ಹಾಡುಗಳಿಂದ ಪ್ರಭಾವಿತರಾಗಿ ಉತ್ತರ ಫ್ರಾನ್ಸಿನ ಪ್ರಾದೇಶಿಕ ಭಾಷೆಯಲ್ಲಿ ಅಂಥದೇ ಬಗೆಯ ಹಾಡುಗಳನ್ನು ರಚಿಸಿ ಹಾಡಿದವರಿಗೆ ಟ್ರೂವೆರ್ಸ್ ಎಂಬ ಹೆಸರು ಬಂತು. ಟೂಬಿಡೂರ್ ಅಥವಾ ಟ್ರೂವೆರ್ ಎಂದರೆ ಹೊಸದನ್ನು ಹುಡುಕುವ, ಸೃಚಿಸುವವ ಎಂದು ಅರ್ಥ. ಈ ಹಾಡುಗಳ ವಸ್ತು ಸಾಮಾನ್ಯವಾಗಿ ಪ್ರಣಯ ಇಲ್ಲವೆ ಶೌರ್ಯಸಾಹಸ. ಈ ಪಂಥದ ಗಾಯಕರು ಅಥವಾ ಚಾರಣರಂದರೆ ಊರಿಂದೂರಿಗೆ ಅಲೆಯುವ ಭಿಕ್ಷುಕರಲ್ಲ. ರಾಜಕುಮಾರರೂ ಶ್ರೀಮಂತರೂ ಈ ಹಾಡುಗಳನ್ನು ರಚಿಸುತ್ತಿದ್ದರು. ಈ ಕವಿಗಾಯಕರಲ್ಲಿ ಅಂತಸ್ತಿನ ಭೇದವಿರಲಿಲ್ಲ. ತಾವೇ ಹಾಡಲಾಗದ ಕವಿಗಳು ಜೋಗ್ಲಾರ್ ಎಂಬ ಗಾಯನಪಟುಗಳನ್ನು ಜೊತೆಗಿರಿಸಿಕೊಳ್ಳುತ್ತಿದ್ದರು.

ಈ ಎರಡು ಶತಕಗಳ ಅವಧಿಯಲ್ಲಿ ಸುಮಾರು ನಾಲ್ಕು ನೂರು ಕವಿಗಾಯಕರು ಆಗಿ ಹೋದರೆಂದು ತಿಳಿದುಬಂದಿದೆ. ಚಾನ್ಸನಿಯರ್ಸ್ (ಹಾಡುಗಳ ಪುಸ್ತಕ) ಎನ್ನುವ ಹಸ್ತಪ್ರತಿಗಳಲ್ಲಿ ಈ ಹಾಡುಗಬ್ಬಗಳ ಹಲವಾರು ಮಾದರಿಗಳಿವೆ. ಯೂರೋಪಿನ ಹೊಸ ಭಾವಗೀತೆಗಳಿಗೆ ಸ್ಫೂರ್ತಿ ಮೂಲವಾಗಿದ್ದ ಈ ಕಾವ್ಯಪ್ರವಾಹ ಎಷ್ಟು ಆಕಸ್ಮಿಕವಾಗಿ ಉಕ್ಕಿಬಂದಿತೊ ಅಷ್ಟೆ ಆಕಸ್ಮಿಕವಾಗಿ ಇಳಿದು ಮರೆಯಾಯಿತು. ಅದರೇನು ಈ ಹಾಡುಗಳಿಂದಲೆ ಫ್ರಾನ್ಸ್ ಮಧುರವಾದ ಹಾಡುಗಳ ತೌರು ಎನಿಸಿತು. ಸಮೃದ್ಧವಾದ ವೈವಿಧ್ಯಮಯವಾದ ಭಾವಗೀತಾ ಪರಂಪರೆಗೆ ಇವು ಕಾರಣವಾದುವು. ವಿವಿಧ ಛಂದೋಮಾದರಿಗಳನ್ನು ಸಿದ್ಧಪಡಿಸಿ ಇಟ್ಟುವು. ಮೊದಲು ಕವಿಗಾಯಕ ಏಳನೆಯ ಗಿಲ್ಹೆಮ್‍ನಿಂದ (1071-1127) ಹಿಡಿದು ಕೊನೆಯ ಕವಿಗಾಯಕ ಗಿರಾಟ್ ರಿಕ್ವಿಯರ್ (1230-94) ವರೆಗೆ ಪ್ರಯೋಗಶೀಲ ಗ್ಯಾಸ್ಕೊನ್ ಮಾರ್ಕಾಬ್ರನ್ ಕೀರ್ತಿಶೀಖರವನ್ನೇರಿದ ಬೆರ್ನಾರ್ಟ್ ಡಿ ವೆಂಟಾಡೊರ್, ಪಿಯರೆ ವಿಡಲ್, ಪಿಯರೆ, ಬೆಟ್ರ್ರಾನ್ ಡಿ ಬೋರ್ನ್, ಆರ್ನಾಟ್ ಡೇನಿಯಲ್, ಗಿರಾಟ್ ಡಿ ಬೋರ್ನೆಲ್ಡ್, ಸೋರ್ಡೆಲ್ಲೊ, ಗಿಲ್ಹೆಮ್ ಫಿಗ್ಯುಯಿರಾ ಎಂಬ ಕವಿಗಾಯಕರು ಚರಿತ್ರಾರ್ಹರಾಗಿದ್ದಾರೆ. ಟ್ರೋಬಿಡೂರ್ಸ್ ರಚಿಸಿದ ಹಾಡುಗಳ ಸೊಗಸು ನಯ ನವುರು ನಾವಿನ್ಯತೆ ವೈವಿಧ್ಯ ಟ್ರೂವೆರ್ಸರ ಹಾಡುಗಳಲ್ಲಿ ಕಾಣದಿದ್ದರೂ ಅನುಕರಣೆಯಾಗಿದೆ. ಸ್ವಂತಿಕೆಯನ್ನೂ ಪ್ರತಿಭೆಯನ್ನೂ ತೋರಿಸಿದ ಅನೇಕ ಹಾಡುಗಳನ್ನು ನೋಡಬಹುದು. 13ನೆಯ ಶತಕದ ಪೂರ್ವಾರ್ಧ ಈ ಹಾಡುಗಳ ಸುವರ್ಣಕಾಲ. ಅರ್ರಾಸ್ ಈ ಹಾಡುಗಳ ಕೇಂದ್ರ. ಜಾಕ್ವೆಸ್ ಬ್ರಾಟೆಲ್, ಅಡಂ ಡಿ ಲಾ ಹೇಲ್ ಈ ಪರಂಪರೆಯ ಹೆಸರಾದ ಕವಿಗಾಯಕರು.

೧೪ ನೆಯ ಶತಮಾನ

[ಬದಲಾಯಿಸಿ]

14ನೆಯ ಶತಮಾನದಲ್ಲಿ ಪ್ರತಿಭಾಪೂರ್ಣವಾದ ಯಾವ ಕಾವ್ಯವೂ ಬರಲಿಲ್ಲ. ಬ್ಯಾಲಡ್, ರೋಂಡೆಲ್, ಟ್ರಿಯೊಲೆಟ್, ಚಾಂಟ್ ರಾಯಲ್ ಮೊದಲಾದ ಛಂದೋರೂಪಗಳ ನಿಯಮಗಳನ್ನು ಈ ಸುಮಾರಿನಲ್ಲಿ ಕಟ್ಟುನಿಟ್ಟು ಮಾಡಲಾಯಿತು.

ಈ ಕಾಲದಲ್ಲಿ ಇತಿಹಾಸವನ್ನು ಸಹ ಪದ್ಯರೂಪದಲ್ಲಿ ಬರೆಯುವುದು ಪದ್ಧತಿಯಾಗಿತ್ತು. ವಿಲೆ ಹಾರ್ಡೂನ್ 13ನೆಯ ಶತಕದಲ್ಲೆ 4ನೆಯ ಕ್ರೂಸೇಡ್ ಯುದ್ಧವನ್ನು ನಿರೂಪಿಸುವ ಚರಿತ್ರೆಯನ್ನು ಗದ್ಯದಲ್ಲಿ ಬರೆದು ಮೊದಲಿಗನಾಗಿದ್ದ, ಅದರೆ ನೂರು ವರ್ಷ ಕಾಲದ ಅನಂತರವೆ ಚರಿತ್ರೆಯನ್ನು ಮತ್ತೆ ಗದ್ಯದಲ್ಲಿ ಬರೆಯುವ ಸಂದರ್ಭ ಬಂದುದು, ಜೀನ್ ಡಿ ಚೋಯಿನ್ ವಿಲೆ 6ನೆಯ ಕ್ರೂಸೇಡ್ ಯುದ್ಧದ ಇತಿಹಾಸವನ್ನು ಬರೆದ. ಈ ಶತಕದ ಕಡೆಯ ಭಾಗದಲ್ಲಿ ಬಂದ ಸರ್ ಜಾನ್ ಫ್ರಾಯ್‍ಸಾರ್ಟನ ಇಂಗ್ಲೆಂಡ್, ಫ್ರಾನ್ಸ್, ಫ್ಲಾಂಡರ್ಸ್ ಇತಿಹಾಸ ವೃತ್ತಾಂತ ಹೆಸರಿಗೆ ಇತಿಹಾಸವಾದರೂ ರಮ್ಯಕ ಕಥೆಗಿಂತಲೂ ಸ್ವಾರಸ್ಯವಾಗಿ, ಅತ್ಯಂತ ವಾಸ್ತವ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತ ತನ್ನ ಮನೋಹರವಾದ ಗದ್ಯಶೈಲಿಯಿಂದ ಉತ್ಕøಷ್ಟ ಸಾಹಿತ್ಯಕೃತಿ ಎನಿಸಿದೆ.

೧೫ನೆಯ ಶತಮಾನ

[ಬದಲಾಯಿಸಿ]

15ನೆಯ ಶತಮಾನ ಅನೇಕ ಪ್ರತಿಭಾವಂತ ಕವಿಗಳನ್ನು ಕಂಡಿತು. ಚಾಲ್ರ್ಸ್ ಡಿ ಆರ್ಲಿಯನ್ಸ್, ಫ್ರಾಂಕೊ ವಿಲ್ಲೋನ್ ಅವರಲ್ಲಿ ಮುಖ್ಯರು. ಆರ್ಲಿಯನ್ಸನ ಕವಿತೆಗಳಲ್ಲಿ ನೈಜಸೌಂದರ್ಯವಿದೆ. ಕಳ್ಳ ಕೊಲೆಗಡುಕ ಎಂದು ಕುಖ್ಯಾತನಾದರೂ ವಿಲ್ಲೋನನ ಹೃದಯಸ್ಪರ್ಶಿ ಭಾವಗೀತೆಗಳು ಶ್ರೇಷ್ಠವಾದ, ಪ್ರತಿಭಾವಪೂರ್ಣವಾದ ಸೃಷ್ಟಿ. ಮಾನವಾಂತಃಕರಣವನ್ನು ಅವು ಮಿಡಿಯುತ್ತವೆ.

ಕ್ರಿಸ್ಟೇನ್ ಡಿ ಪಿಸಾನ್, ಅಲೇನ್ ಚಾರ್ಟಿಯರ್ ಒಳ್ಳೆಯ ಕವಿಗಳಾಗಿದ್ದಂತೆ ಶ್ರೇಷ್ಠ ಗದ್ಯಲೇಖಕರೂ ಆಗಿದ್ದರು. ಗದ್ಯಲೇಖಕರಲ್ಲಿ ಫಿಲಿಪ್ ಡಿ ಕೊಮಿನ್ಸ್‍ನನ್ನು ಮೀರಿಸುವವರು ಬೇರೆ ಇರಲಿಲ್ಲ. ಕಲೆ ವಿಜ್ಞಾನ ನೀತಿಗಳನ್ನು ಕುರಿತ ಪಾಂಡಿತ್ಯ ಪೂರ್ಣವಾದ ಶಾಸ್ತ್ರಗ್ರಂಥಗಳು ಪ್ರವಾಸ ಕಥನಗಳು ಖಾಸಗಿ ಪತ್ರಗಳು ಈ ಕಾಲದ ಗದ್ಯಸಾಹಿತ್ಯದಲ್ಲಿ ಗಮನಾರ್ಹವಾಗಿವೆ. ಫ್ರಾಯ್‍ಸಾರ್ಟಿನ ನೆನಪು ತರುವ ಇತಿಹಾಸ ವೃತ್ತಾಂತಕಾರ ಎಂಗ್ಯು ರ್ರಾಂಡ್ ಡಿ ಮಾನಸ್ಟ್ರೆಲೆಟ್ (1400-53), ಕಿರು ಕಾದಂಬರಿಗಳನ್ನು ಬರೆದ ಅಂಟೋಯಿನ್ ಡಿ ಲಾ ಸಲ್ಲೆ (1388-1462) ಗದ್ಯಸಾಹಿತ್ಯದಲ್ಲಿ ಪ್ರಸಿದ್ಧರು. ಈ ನಾವೆಲ್ ಎಂಬುದು ಫೇಬ್ಲಿಯಾದ ಬೆಳದ ರೂಪವೇ ಆದರೂ ಅದರಂತೆ ಪದ್ಯರೂಪಿಯಾಗಿರದೆ ಗದ್ಯದಲ್ಲಿರುವುದೇ ವಿಶೇಷ.

ನಾಟಕಗಳು

[ಬದಲಾಯಿಸಿ]

ಮಾಧ್ಯಮ ಯುಗದ ಫ್ರೆಂಚ್ ನಾಟಕ ರೂಪುಗೊಂಡುದು ಮೂಲತಃ ಚರ್ಚುಗಳ ಆವರಣದಲ್ಲಿ. ಕ್ರೈಸ್ತಧರ್ಮವನ್ನು ಎತ್ತಿ ಹಿಡಿಯುವ ನೀತಿಬೋಧಕ ಪ್ರಸಂಗಗಳನ್ನು ಹಬ್ಬ ಹರಿದಿನಗಳಲ್ಲಿ ನಾಟಕರೂಪವಾಗಿ ಪ್ರದರ್ಶಿಸುತ್ತಿದ್ದರು. ಮೊದಲಿಗೆ ಈ ನಾಟಕಗಳಲ್ಲಿ ಕಂಡು ಬರುತ್ತಿದ್ದ ಲ್ಯಾಟಿನ್ನಿನ ಪ್ರಭಾವ ಕ್ರಮೇಣ ಕಡಿಮೆಯಾಯಿತಾಗಿ ನಾಟಕದ ಭಾಷೆ ಜನಸಾಮಾನ್ಯರಿಗೂ ಹಿಡಿಸುವಂತಾಯಿತು. ಹೆಚ್ಚು ಹೆಚ್ಚು ದೇಶೀಯ ಭಾಷೆಯ ನಾಟಕಗಳು ರಚಿತವಾದವು.

12ನೆಯ ಶತಕದಲ್ಲಿ ಚರ್ಚಿನ ಹೊರಗೆ ಪ್ರದರ್ಶಿತವಾದ ಮೊಟ್ಟಮೊದಲ ನಾಟಕ ಜೊ ಡಿ ಆ್ಯಡಂ ಎಂದು ತಿಳಿದುಬಂದಿದೆ. ಇಂಥ ಪ್ರದರ್ಶನಗಳು ಬಹು ವಿರಳ, 13, 14 ಮತ್ತು 15ನೆಯ ಶತಮಾನಗಳಲ್ಲಿ ನಾಟಕರಂಗದಲ್ಲಿ ಮಿರೆಕಲ್ ನಾಟಕಗಳು ಮಿಸ್ಟರಿ ನಾಟಕಗಳು ಮತ್ತು ಮೊರ್ಯಾಲಿಟಿ ನಾಟಕಗಳು ಎಂದು ಮೂರು ಬಗೆಯವು ಪ್ರಚಲಿತವಾಗಿದ್ದವು. ಭಕ್ತಿ ಧರ್ಮಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಸಂತರ ದೇವರ ಮಹಿಮೆಗಳ (ಪವಾಡ) ಕತೆಗಳು ಮಿರೆಕಲ್ ನಾಟಕಗಳ ವಸ್ತು, ಮಾಯ, ಮಂತ್ರ, ಇಂದ್ರಜಾಲ, ಸಾತ್ವಿಕ ಸಿದ್ಧಿಗಳಿಂದ ಪಡೆದ ಅತೀಂದ್ರಿಯ ಅತಿಮಾನುಷ ಶಕ್ತಿಗಳಿಗೂ ದುಷ್ಟಶಕ್ತಿಗಳಿಗೂ ಸೆಣಸಾಟ ಇದು ಮಿಸ್ಟರಿ ನಾಟಕಗಳ ವಸ್ತು. ಇವುಗಳನ್ನು ಸಹ ಧರ್ಮಗ್ರಂಥಗಳಿಂದ ಆರಿಸಿ ಬೇಕಾದ ರೀತಿ ಅದ್ಬುತ ಸಂಗತಿಗಳನ್ನು ತುಂಬಿ ರಚನೆ ಮಾಡುತ್ತಿದ್ದರು. ಇವು ತುಂಬ ದೀರ್ಘವಾಗಿರುತ್ತಿದ್ದುವು. ನೂರಾರು ಪಾತ್ರಗಳೂ ಪ್ರದರ್ಶನಕ್ಕೆ ಹಲವಾರು ದಿನಗಳೂ ಬೇಕಾಗುವ ದೀರ್ಘನಾಟಕಗಳೂ ಇದ್ದವೂ. ಮಿಸ್ಟೆರಿ ಡಿ ಲಾ ಪ್ಯಾಷನ್ ಎಂಬ ನಾಟಕ ಇದಕ್ಕೊಂದು ನಿದರ್ಶನ. ಈ ನಾಟಕಗಳ ಕರ್ತೃಗಳು ಬಹುಮಟ್ಟಿಗೆ ಯಾರೆಂದು ತಿಳಿಯದಿದ್ದರೂ ಆರ್ನೌಲ್ ಮತ್ತು ಸೈಮನ್ ಗ್ರೇಬನ್ (1450). ಜೀನ್ ಮೈಖೆಲ್ (1493) ಎಂಬ ಕೆಲವು ಪ್ರಸಿದ್ಧ ನಾಟಕಕಾರರನ್ನು ಹೆಸರಿಸಬಹುದು. ಕೇವಲ ನೀತಿಬೋಧನೆ ಮೊರ್ಯಾಲಿಟಿ ನಾಟಕಗಳ ಗುರಿ. ವಸ್ತು ಕಾಲ್ಪನಿಕವಾದ ಪ್ರಸಂಗಗಳೇ. ಸದ್ಗುಣಗಳ ಪ್ರತಿಪಾದನೆ ದುರ್ಗುಣಗಳ ಖಂಡನೆ ಇರುವ ಈ ನಾಟಕಗಳಲ್ಲಿ ಪಾತ್ರಗಳಿಗೆ ಆಯಾ ಸುಗುಣಗಳ ದುರ್ಗುಣಗಳ ಹೆಸರನ್ನೆ ಇಡುವುದು ವಾಡಿಕೆ. ಬೋಧನಾ ದೃಶ್ಯಗಳು ಉದ್ದವಾಗಿದ್ದು ಬೇಸರ ತರುವ ಸಂಭವ ಇದ್ದುದರಿಂದ ಮೊರ್ಯಾಲಿಟಿ ನಾಟಕಗಳಲ್ಲಿ ನಡುನಡುವೆ ಹಾಸ್ಯದ ಕಿರುದೃಶ್ಯಗಳನ್ನು ಮಧ್ಯಂತರ ಮನೋರಂಜನೆಗಳಾಗಿ ಸೇರಿಸುತ್ತಿದ್ದರು. ಮೇಯ್ತ್ರೆಪಾತೆಲಿನ್ ಎಂಬುದು ಇಂಥ ಮಧ್ಯಂತರ ಪ್ರಹಸನಗಳಲ್ಲಿ ಪ್ರಸಿದ್ಧವಾದುದು.

11, 12ನೆಯ ಶತಮಾನಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ನಾಟಕಗಳ ಭಾಷಾಂತರಗಳೇ ಹೆಚ್ಚು.

ಫ್ರೆಂಚ್ ಹರ್ಷಕದ ಉಗಮದ ಕಾಲ ನಿರ್ದಿಷ್ಟವಾಗಿ ತಿಳಿದಿಲ್ಲ. ಅಡಂಡಿ ಲಾ ಹಾಲ್ಲೆ ರಚಿಸಿ 1262ರಲ್ಲಿ ಪ್ರದರ್ಶಿದ ಜುಡಿ ಲಾ ಫ್ಯೂಯಿಲ್ಲೀ ಎಂಬುದೆ ಪ್ರಥಮ ಸುಖಾಂತ ನಾಟಕ. ಇದೇ ನಾಟಕಕಾರನ ರಾಬಿನ್ ಎಟ್ ಮ್ಯಾರಿಯೋನ್ ಎಂಬ ಸಂಗೀತ ನಾಟಕವನ್ನು 1285ರಲ್ಲಿ ನೇಪಲ್ಸಿನಲ್ಲಿ ಪ್ರದರ್ಶಿಸಲಾಯಿತು.

ನವೋದಯ ಸಾಹಿತ್ಯ( ೧೬ ನೆಯ ಶತಮಾನ)

[ಬದಲಾಯಿಸಿ]

16ನೆಯ ಶತಮಾನದಲ್ಲಿ ನವೋದಯದ (ರಿನೇಸಾನ್ಸ್) ಗಾಳಿ ಫ್ರೆಂಚ್ ಸಾಹಿತ್ಯದ ಮೇಲೆ ಬೀಸಿತು. ಇದರ ಪ್ರಭಾವದಿಂದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಚೈತನ್ಯ ಮೂಡಿತು. ಹೊಸ ಯುಗದ ಸುಪ್ರಭಾತವನ್ನು ಹಾಡಿದವ ಕವಿ ಕ್ಲೆಮೆಂಟ್ ಮ್ಯಾರಟ್. ಸರಳವಾದ ನಿತ್ಯ ಬಳಕೆಯ ಮಾತು. ಸ್ವಚ್ಛಂದವಾದ ಛಂದ ಇವನ ಮುದ್ದಾದ ಕವಿತೆಗಳ ವೈಶಿಷ್ಟ್ಯ. ಈತನ ಎಪಿಸಲ್ (1525) ಭಾವಗೀತೆಗಳ ಅತ್ಯುತ್ತಮ ಸಂಕಲನ. ನಾವೀನ್ಯ ಲವಲವಿಕೆ ಚತುರೋಕ್ತಿ ಈ ಕವಿತೆಗಳಲ್ಲಿ ಕಾಣುತ್ತವೆ.

ಈ ಕಾವ್ಯಶೈಲಿಯನ್ನು ಖಂಡಿಸಿ ಡಿಫೆನ್ಸ್ ಅಂಡ್ ಇಲಸ್ಟ್ರೇಷನ್ಸ್ ಆಫ್ ಫ್ರೆಂಚ್ ಲ್ಯಾಂಗ್ವೇಜಸ್ ಎಂಬ ಪುಸ್ತಕವನ್ನು ಬರೆದು ಜೋಖಿಮ್ ಡು ಬೆಲ್ಲೆ (1522-60) ಭಾವಗೀತೆಯ ಹೊಸ ದಾರಿಯನ್ನು ತೆರೆದ. ಜೋಖಿಮ್ ಮತ್ತು ಪಿಯರೆ ಡಿ ರೊನ್ಸಾರ್ಡ (1524-85) ನವೋದಯದ ಪ್ರಭಾವಶಾಲಿ ಕವಿಗಳು. ಡು ಬೆಲ್ಲೆಯ ಎಪಿಟಾಪ್ ಆನ್ ಎ ಲಿಟ್ಲ್‍ಡಾಗ್ ಸುಪ್ರಸಿದ್ಧವಾದ್ದು. ಫ್ರೆಂಚ್ ಕಾವ್ಯದಲ್ಲಿ ಭಾವದ ಕಾವೇ ಇರುವುದಿಲ್ಲ ಎಂಬ ಅಪವಾದವನ್ನು ಇದು ತೊಡೆದು ಹಾಕಿತು. ಡು ಬೆಲ್ಲೆ ನಿಜಕ್ಕೂ ದೊಡ್ಡ ಕವಿ. ಆಲಿವ್. ದಿ ರಿಗ್ರೆಟ್ಸ್. ದಿ ಆಂಟಿಕ್ವಿಟೀಸ್ ಆಫ್ ರೋಮ್‍ರಸ್ಟಿಕ್ ಗೇಮ್ ಎಂಬುವು ಅವನ ಕೆಲವು ಮುಖ್ಯ ಕೃತಿಗಳು. ಸಾನೆಟ್ಟು ಪ್ರಗಾಥಗಳು ಅವನ ಅಚ್ಚುಮೆಚ್ಚು. ಅನೇಕ ಹಿರಿಯ ಕವಿಗಳಿಗೆ ಆತ ಸ್ಪೂರ್ತಿಯೂ ಮೇಲ್ಪಂಕ್ತಿಯೂ ಆಗಿದ್ದ. ರೋನ್ಸಾರ್ಡ ಎಲ್ಲ, ಛಂದೋ ರೂಪಗಳಲ್ಲೂ ಕವಿತೆ ಬರೆದರೂ ಸಾನೆಟ್ಟಿನಲ್ಲಿ ಮಾತ್ರ ಪರಿಣತ.

ನವೋದಯದಿಂದ ಪ್ರಭಾವಿತರಾಗಿ ಪ್ರಾಚೀನ ಗ್ರೀಕ್ ಮಾದರಿಯನ್ನೇ ಅನುಸರಿಸಿ ಫ್ರೆಂಚ್ ಭಾಷೆಯ ಮತ್ತು ಸಾಹಿತ್ಯದ ಪರಿಷ್ಕರಣಕ್ಕೆ ಹೊರಟ ಪ್ಲೀಯೆದ್ ಎಂಬ ಪಂಥದ ಕವಿಗಳು ದೊಡ್ಡ ಕೋಲಾಹಲವನ್ನೇ ಎಬ್ಬಿಸಿದರಲ್ಲದೆ ತಮ್ಮ ಉದ್ದೇಶ ಸಾಧನೆಯಲ್ಲಿ ಕೊಂಚ ಯಶಸ್ಸನ್ನೂ ಪಡೆದರು. ಪ್ರೌಢ ಶೈಲಿಯ ಕಟ್ಟುನಿಟ್ಟಾದ ಬಿಗಿಯಾದ ಕಾವ್ಯಬಂಧ ಇವರ ನಿರ್ಮಾಣ. 19ನೆಯ ಶತಕದಲ್ಲಿ ಮುಕ್ತ ಛಂದಸ್ಸು ಪ್ರಾಧಾನ್ಯಕ್ಕೆ ಬರುವವರೆಗೂ ಈ ಪಂಥದ ಸಂಪ್ರದಾಯವೇ ಮುಂದುವರಿಯಿತು.

ನವೋದಯ ಕಾಲ

[ಬದಲಾಯಿಸಿ]

ನವೋದಯ ಕಾಲದ ಮೂವರು ಪ್ರಸಿದ್ಧ ಗದ್ಯ ಸಾಹಿತ್ಯಗಳು ರ್ಯಾಬಲೆ, ಕ್ಯಾಲ್ವಿನ್ ಮತ್ತು ಮಾಂಟೇನ್, ಮೂವರೂ ಚಿಂತನಶೀಲರು. ಎಲ್ಲ ಕಾಲ ದೇಶಗಳಲ್ಲೂ ಶ್ರೇಷ್ಠನಾಗಿ ನಿಲ್ಲಬಲ್ಲವ ರ್ಯಾಬೆಲೆ (1490-1553). ಇಂಗ್ಲೆಂಡಿಗೆ ಷೇಕ್ಸ್‍ಪಿಯರ್ ಸ್ಪೇನಿಗೆ ಸರ್ವಾಂಟಿಸ್ ಇದ್ದಂತೆ ಫ್ರಾನ್ಸಿಗೆ ಈತ ಪ್ರಾಚೀನ ಶ್ರೇಷ್ಠಗ್ರಂಥಗಳಲ್ಲಿ ಆಸಕ್ತಿ, ಆಶಾವಾದ, ಜೀವನೋತ್ಸಾಹ. ಧೈರ್ಯ ಸಾಹಸ ಮುಂತಾದ ನವೋದಯದ ಎಲ್ಲ ಲಕ್ಷಣಗಳೂ ರ್ಯಾಬೆಲೆಯ ಗಾರ್ಗಾಂಟುವಾ ಮತ್ತು ಪೆಂಟಾಗ್ರುಯೆಲ್ ಎಂಬ ಎರಡು ಮೇರುಕೃತಿಗಳಲ್ಲಿ ಇವೆ. ರ್ಯಾಬೆಲೆಯ ಹಾಸ್ಯದಲ್ಲಿ ಕಟು, ಚುಚ್ಚು ಇಲ್ಲ. ಮಾನವಾಂತಃಕರಣ ಸಹಾನುಭೂತಿಗಳಿವೆ. ಒಂದು ಪೀಳಿಗೆಯ ಅನಂತರ ಬಂದ ಮಾಂಟೇನ್ ಲಲಿತಪ್ರಬಂಧ ಪ್ರಕಾರದ ಜನಕ. ಶ್ರೇಷ್ಠ ಮಾನವತಾವಾದಿ. ಬರಹಕ್ಕಿಂತ ಬದುಕು ದೊಡ್ಡದು ಎಂದು ತಿಳಿದವ. ತನಗೆ ಗೊತ್ತಿರುವುದಷ್ಟೆ ಪೂರ್ಣಸತ್ಯ ಮತ್ತು ಸರಿ ಎಂಬ ಭ್ರಾಂತಿಗೊಳಗಾಗದ ವಿನಯಶಾಲಿ. ಪ್ರಾಟೆಸ್ಟಂಟ್ ಪಂಥದ ಹಿರಿಯ ವ್ಯಕ್ತಿ. ಕ್ಯಾಲ್ವಿನ್ ಇನ್ನೊಬ್ಬ ಮಾನವತಾವಾದಿ, ಮಹಾಸಾಹಿತಿ. ಸೊಗಸಾದ ಗದ್ಯಶೈಲಿಯ ಈತನ ಇನ್ಸ್‍ಟಿಟ್ಯೂಷನ್ ಆಫ್ ಕ್ರಿಶ್ಚಿಯನ್ (1541) ಒಂದು ದೊಡ್ಡ ಕೃತಿ. ಈತನದು ಅಡಕವಾದ ಬಿಗಿಯಾದ ಶೈಲಿ.

ಕ್ವೀನ್ ಮಾರ್ಗರೇಟ್ ಡಿ ನವರ್ರೆ 16ನೆಯ ಶತಕದ ಶ್ರೇಷ್ಠ ಕತೆಗಾರ್ತಿ. ಬೊಕ್ಯಾಚಿಯೋನ ಡಿ ಕ್ಯಾಮರಾನ್ ಮಾದರಿಯ ಹೆಪ್ತಾಮೆರಾನ್ (ಕ್ರಿ.ಶ. 1558) ಈಕೆಯ ಕಥಾಗುಚ್ಚ. ಅದೇ ಲವಲವಿಕೆ. ಅದೇ ಸ್ವಚ್ಛಂದತೆ ಇದ್ದರೂ ಬೊಕ್ಯಾಚಿಯೋ ಸಾಧಿಸಿದ ಎಲ್ಲ ಶ್ರೇಷ್ಠ ಅಂಶಗಳ ಕಲಾತ್ಮಕ ಸಮನ್ವಯ ಮಾತ್ರ ಇಲ್ಲಿ ಕಾಣುವುದಿಲ್ಲ. 16ನೆಯ ಶತಕ ಭಾಷಾಂತರದ ಯುಗ ಎಂಬಷ್ಟರ ಮಟ್ಟಿಗೆ ಆ ಕಾಲದಲ್ಲಿ ಶ್ರೇಷ್ಠವಾದ ಭಾಷಾಂತರಗಳು ಬಂದುವು. ಅವುಗಳಲ್ಲಿ ಅಮ್ಯೋಟ್ ಮಾಡಿರುವ ಪ್ಲುಟಾರ್ಕನ ಪ್ಯಾರೆಲಲ್ ಲೈವ್ಸ್‍ನ ಭಾಷಾಂತರ ಶಿಖರಪ್ರಾಯವಾಗಿದೆ. ಅಮ್ಯೋಟ್ ಫ್ರೆಂಚ್ ಗದ್ಯಕ್ಕೆ ಇಂಪು, ಲಾಲಿತ್ಯಗಳನ್ನು ಕೊಟ್ಟ.

ನವೋದಯ ತಂದ ಇನ್ನೊಂದು ಮಹತ್ತರ ಬದಲಾವಣೆ ಎಂದರೆ ನಾಟಕ ಧಾರ್ಮಿಕ ವಲಯದಿಂದೀಚೆಗೆ ಬಂದು ಲೌಕಿಕ ಮನೋರಂಜನೆಗೆ ತೊಡಗಿದ್ದು. 16ನೆಯ ಶತಕದ ಫ್ರೆಂಚ್ ನಾಟಕಕ್ಕೆ ತನ್ನದೇ ಆದ ಮಹತ್ತ್ವದ ಸಾಧನೆಯಾಗಲಿ ವೈಶಿಷ್ಟ್ಯವಾಗಲಿ ಇಲ್ಲ. ಹಲವಾರು ಗ್ರೀಕ್ ಮತ್ತು ಲ್ಯಾಟಿನ್ ನಾಟಕಗಳು ಭಾಷಾಂತರಗಳೆ ರಂಗವನ್ನು ತುಂಬಿದ್ದವು. ಸ್ವತಂತ್ರವಾದ ನಾಟಕಗಳಲ್ಲಿ ಜೊಡೆಲ್ಲೆ ಬರೆದು ಪ್ರದರ್ಶಿಸಿದ ಕ್ಲಿಯೋಪಾತ್ರ ಎಂಬ ದುರಂತನಾಟಕ. ಲ್ಯಾರಿವೆಯ ಹರ್ಷಕಗಳು ಪ್ರಹಸನಗಳು. ಫ್ರೆಂಚ್ ಜನರ ವಿಶಿಷ್ಟ ಮನೋಧರ್ಮವನ್ನು (1550-1612) ಪ್ರತಿಬಿಂಬಿಸುತ್ತವೆ. ಲ್ಯಾರಿವೆಯ ಲಘು ವೈನೋದಿಕಗಳು ಮೊಲ್ಯೇರನ ನಾಟಕಗಳ ಮುಂಗೋಳಿಗಳಾಗಿವೆ. ಈ ಶತಕದ ಪೂರ್ವಾರ್ಧದಲ್ಲೆ ಮಧ್ಯಮ ಯುಗದ ಮಿಸ್ಟರಿ ಮತ್ತು ಮೊರ್ಯಾಲಿಟಿ ಧಾರ್ಮಿಕ ನಾಟಕಗಳ ಕಾಲ ಮುಗಿದುಹೋಯಿತು. ಪಿಯರ್ರೆ ಗ್ರಿಂಗೋಯರನ (1480-1547) ಪ್ರಿನ್ಸ್ ಡೆ ಸಾಟ್ಸ್ ಮತ್ತು ಮಿಸ್ಟರಿ ಡಿ ಸೇಂಟ್ ಲೂಯಿ ಹಳೆಯ ಧಾರ್ಮಿಕ ಸಂಪ್ರದಾಯದ ನಾಟಕಗಳಲ್ಲಿ ಅತ್ಯುತ್ತಮವಾದುವು.

ವಿಲೆ ಹಾರ್ಡೊಯಿನ್, ಜೊಯಿನ್ ವಿಲ್ಲೆ, ಫ್ರಾಯ್‍ಸಾರ್ಟ ಮತ್ತು ಕೊಮೈನ್ಸ್‍ರಂಥ ಇತಿಹಾಸಕಾರರನ್ನು ಕೊಟ್ಟಿದ್ದ ಫ್ರಾನ್ಸ್‍ದೇಶದಲ್ಲಿ ಈ ಶತಕದಲ್ಲಿ ಆ ಮಟ್ಟದ ಇತಿಹಾಸಕಾರರು ಕಾಣದಿದ್ದರೂ ಇತಿಹಾಸ ಕ್ಷೇತ್ರದಲ್ಲಿ ಶುದ್ಧ ಇತಿಹಾಸ ಮತ್ತು ಜೀವನಚರಿತ್ರೆ. ನಡೆದ ಘಟನೆಗಳ ವೃತ್ತಾಂತ, ಸ್ಮøತಿಗಳು ಎಂಬ ಬೇರೆ ಬೇರೆ ಬಗೆಯ ಗ್ರಂಥಗಳ ವಿಂಗಡನೆಯಾಯಿತು. ವಿಶ್ವ ಸಾಹಿತ್ಯದಲ್ಲೆ ಮೇಲ್ಪಂಕ್ತಿಯಾಗಿ ನಿಲ್ಲುವ ಸ್ಮøತಿಗಳು ಮತ್ತು ಸಾಹಿತ್ಯಕ ಪತ್ರಮಾಲೆಗಳು ಈ ಶತಮಾನದ ವಿಶೇಷವಾದ ಫ್ರೆಂಚ್ ಕಾಣಿಕೆ. ಸ್ಮøತಿಗಳಲ್ಲಿ ಫ್ರ್ಯಾಂಕೊ ಡಿ ಲ್ಯಾನೊ (1531-91). ಬ್ಲೇಸ್ ಡಿ ಮಾಂಟ್ಲುಕ್ (1502-77) ತೀಯೊಡೋರ್ ಅಗ್ರಿಪ್ಪಾಡಿ ಆಬಿಗ್ನೆ ಮತ್ತು ಪಿಯರೆ ಡಿ ಬೊರ್ಡಿಲ್ಲೆ, ಸೀನ್ಯೋರ್ ಡಿ ಬ್ರಾಂಟೋಮ್ ಇವರ ನಾಲ್ಕು ಸಂಗ್ರಹಗಳು ಶ್ರೇಷ್ಠ ಸಾಹಿತ್ಯಕ ಗುಣಗಳಿಂದ ಕೂಡಿ ಅಮೂಲ್ಯ ಕೃತಿಗಳಾಗಿವೆ. ಈ ಸ್ಮøತಿಗಳಲ್ಲಿ ಅಂದಿನ ಫ್ರೆಂಚ್ ಸಾಮಾಜಿಕ ಹಾಗು ರಾಜಕೀಯ ಸ್ಥಿತಿಗತಿಗಳ ನೈಜ ಚಿತ್ರಣವಿದೆ. ಈ ನಾಲ್ವರಲ್ಲಿ ಬ್ರಾಟೋಮ್ ಹೊರ ದೇಶಗಳಲ್ಲೂ ಚಿರಪರಿಚಿತನಾಗುವಷ್ಟು ಪ್ರಸಿದ್ಧನಾದ. ಉಳಿದ ಮೂವರು ಗುಣದಲ್ಲಿ ಈತನಿಗೇನು ಕಡಿಮೆಯವರೇ, ಆದರೂ ಬ್ರಾಂಟೋಮ್ ಕೃತಿಯಲ್ಲಿರುವ ವಿಶ್ವ ಸಾಮಾನ್ಯವಾದ ಆಕರ್ಷಣೆ ಇವರ ಕೃತಿಗಳಲ್ಲಿಲ್ಲ.

ಇವಲ್ಲದೆ ಅನೇಕ ವ್ಶೆಜ್ಞಾನಿಕ, ತತ್ತ್ವ ಶಾಸ್ತ್ರೀಯ ಗ್ರಂಥಗಳು ಈ ಕಾಲದಲ್ಲಿ ಹೊರಬಂದುವು.

೧೭ನೆಯ ಶತಮಾನ

[ಬದಲಾಯಿಸಿ]

17ನೆಯ ಶತಕದಲ್ಲಿ ಫ್ರೆಂಚ್ ಸಾಹಿತ್ಯ ಕಾವ್ಯಕ್ಷೇತ್ರವೊಂದುಳಿದು ಮಿಕ್ಕೆಲ್ಲ ಪ್ರಕಾರಗಳಲ್ಲೂ ಅಭ್ಯುದಯದ ಶಿಖರಕ್ಕೇರಿತು. ಕಾವ್ಯ ಕ್ಷೇತ್ರದಲ್ಲಿ ಗಮನಿಸಬಹುದಾದ ಒಬ್ಬನೇ ಕವಿ ಮ್ಯಾಲ್‍ಹರ್ಬ (1555-1628). ಶುದ್ಧಾಂಗ ಫ್ರೆಂಚ್ ಪದಗಳನ್ನೇ ಬಳಸುವ ಮತ್ತು ಬಿಗಿಯಾದ ಛಂದಸ್ಸಿನಲ್ಲೇ ಬರೆಯುವ ಛಲ ಈತನದು. ಕ್ಲ್ಯಾಸಿಕಲ್ ಕಾವ್ಯಪದ್ಧತಿಯ ಪ್ರವರ್ತಕನಾಗಿ ಈತ ಪ್ರಸಿದ್ಧನಾದ. ಸಾಹಿತ್ಯದ ಮೇಲೆ ತುಂಬ ಪ್ರಭಾವವನ್ನು ಬೀರಿದ ಡೆಕಾರ್ಟನ ಡಿಸ್ಕೊರ್ಸ ಡಿ ಲಾ ಮೆತೆಡ್ ಎಂಬ ತತ್ತ್ವಶಾಸ್ತ್ರಗ್ರಂಥ ಕ್ಲ್ಯಾಸಿಕಲ್ ಪದ್ಧತಿಗೆ ಸ್ಫೂರ್ತಿಯೂ ಪ್ರೇರಣೆಯೂ ಆಯಿತು. 1634ರಲ್ಲಿ ರಿಷ್ಲೂನಿಂದ ಸ್ಥಾಪಿತವಾದ ಫ್ರೆಂಚ್ ಅಕಾಡೆಮಿ ಭಾಷೆಯ ಐಕ್ಯತೆಗೆ ಬಹುವಾಗಿ ಶ್ರಮಿಸಿತು. ಫ್ರೆಂಚ್ ಭಾಷಾಶಾಸ್ತ್ರವನ್ನು ಬರೆದ ವಾಗೆಲಾಸ್ (1585-1650) ಭಾಷೆಯ ಪರಿಷ್ಕರಣ ಮತ್ತು ಬೆಳವಣಿಗೆಗೂ ತನ್ನ ಸೊಗಸಾದ ಪತ್ರಮಾಲೆಯಿಂದ ಬಾಲ್ಜಾಕ್ ಗದ್ಯ ಶೈಲಿಯ ಶ್ರೇಷ್ಠ ಮಾದರಿಗೂ ಕಾರಣರಾದರು.

ಕಾರ್ನೀಲ್, ರಾಸೀನ್ ಮತ್ತು ಮೋಲ್ಯೇರ್ 17ನೆಯ ಶತಕದ ಶ್ರೇಷ್ಠ ನಾಟಕಕಾರರು. ಈ ಕಾಲದ ನಾಟಕಗಳ ಆದ್ಯಪುರುಷ ಅಲೆಕ್ಸಾಂಡರ್ ಹಾರ್ಡಿ(1569-1630) ಸುಮಾರು ಎಂಟುನೂರು ನಾಟಕಗಳನ್ನು ಬರೆದ. ಆದರೆ ಅವುಗಳಲ್ಲಿ ಈಗ ಲಭ್ಯವಿರುವುದು ಕೇವಲ ನಲವತ್ತು. ಜೀನ್ ಟಿ ಮೈರಟ್ (1604-86) ಕ್ಲ್ಯಾಸಿಕಲ್ ಮಾದರಿಯ ಮೊದಲ ಗಂಭೀರ ನಾಟಕವನ್ನು ಬರೆದ. ಕಾರ್ನಿಲ್‍ನ ನೀತಿ ಆದರ್ಶಗಳ ನಾಟಕಗಳು. ರಾಸೀನನ ವಾಸ್ತವ ಭಾವ-ಸಂವೇದನೆಗಳು. ಜನರನ್ನಾಕರ್ಷಿಸಿದವಾದರೂ ಮೊಲ್ಯೇರ್‍ನ (1622-73) ಹರ್ಷಕಗಳು (ವೈನೋದಿಕ) ಪಡೆದ ಅತ್ಯಂತ ವ್ಯಾಪಕವಾದ ಜನಪ್ರಿಯತೆಯ ಮುಂದೆ ಮರೆಯಾಗಿ ಹೋದುವು. ಮೋಲ್ಯೇರ್‍ನ ಇನ್ನೊಂದು ಹೆಸರು ಜೀನ್ ಬ್ಯಾಪ್ಟಿಸ್ಟ್ ಪೊಕೆಲಿನ್. ಈತನ ಹಲವಾರು ಶ್ರೇಷ್ಠ ನಾಟಕಗಳಲ್ಲಿ ತಾರ್ತೂಫ್ ರತ್ನಪ್ರಾಯವಾದ್ದು. ಜಗತ್ಪ್ರಸಿದ್ಧವಾದ್ದು. ಈತನ ಪ್ರಭಾವ ಯೂರೋಪಿನ ಎಲ್ಲ ನಾಟಕಕಾರರ ಮೇಲೂ ಬಿತ್ತು.

ಆಧುನಿಕ ಫ್ರೆಂಚ್ ಭಾಷೆಯ ನಿರ್ಮಾಪಕನೆನಿಸಿರುವ ಬ್ಲೇಸ್ ಪಾಸ್ಕಲ್ (1623-62) ಈ ಕಾಲದ ಶ್ರೇಷ್ಠ ಗದ್ಯಶಿಲ್ಪಿ. ಪತ್ರಲೇಖನವೆ ಒಂದು ವಿಶೇಷ-ಸ್ವತಂತ್ರ ಸಾಹಿತ್ಯ ಪ್ರಕಾರವಾಗಿ ಬೆಳೆದದ್ದು ಈ ಶತಕದಲ್ಲೇ. ಹೇಳಿಕೊಳ್ಳುವಂಥ ಉತ್ತಮ ಕಾದಂಬರಿಗಳಾವೂ ಈ ಕಾಲದಲ್ಲಿ ಬರಲಿಲ್ಲ. ಜೀನ್ ಡಿ ಲಾಫಾಂಟೇನನ ಆರು ಸಂಪುಟಗಳ ಫೇಬಲ್ಸ್ (1668) ಹೆಸರಿಸಬಹುದಾದ ಒಳ್ಳೆಯ ಕೃತಿ. ನಿಕೊಲಾಸ್ ಬೋಯ್ಲೊ (1636-1711) ಕ್ಲ್ಯಾಸಿಸಿಜಮ್ಮಿನ ಬೆಂಬಲಿಗ. ಈತನ ಕಾವ್ಯಮೀಮಾಂಸೆ ಲಾ ಆರ್ಟ್ ಪೊಯೆಟಿಕ್ ಸುಮಾರು ಒಂದು ನೂರು ವರ್ಷ ಕಾಲ ಕಾವ್ಯ ವಿಮರ್ಶೆಯ ಅಧಿಕೃತವಾಣಿಯಾಗಿ ಮೆರೆಯಿತು. ಪ್ರಾಚೀನ ಕವಿಗಳ ಅನುಕರಣಿಯೇ ಸರಿ ಎಂಬ ಈತನ ಸಿದ್ಧಾಂತವನ್ನು ಮುಂದೆ ಆಧುನಿಕತೆಯ ಪ್ರತಿಪಾದಕ ಚಾಲ್ರ್ಸಪೆರ್ರಾಲ್ಟ್ ಖಂಡಿಸಿದ. ಈ ಇಬ್ಬರ ವಾದಗಳಲ್ಲೂ ನಿಷ್ಪಕ್ಷಪಾತವಾದ ನ್ಯಾಯನಿಷ್ಕರ್ಷೆ ಕಾಣುವುದಿಲ್ಲವಾದರೂ ಆಧುನಿಕರ ಕೈಯೆ ಮೇಲಾಗಿ ಕ್ರಮೇಣ ಪ್ರಾಚೀನರ ಪ್ರಭಾವ ತಗ್ಗಿತು.

೧೮ ನೆಯ ಶತಮಾನ

[ಬದಲಾಯಿಸಿ]

ರಾಜಾಶ್ರಯದ ಸಂಕೋಲೆಯನ್ನು ಕಡಿದೊಗೆದುದೇ 18ನೆಯ ಶತಕದ ಫ್ರೆಂಚ್ ಸಾಹಿತ್ಯದ ಬಹು ದೊಡ್ಡ ಸಾಧನೆ. ದೊರೆ 14ನೆಯ ಲೂಯಿಯ ಸಾವಿನೊಂದಿಗೆ ಬಹುಕಾಲದ ಒಂದು ಪರಂಪರೆಯ ಯುಗ ಮುಗಿಯಿತು. ಸಾಹಿತ್ಯದಲ್ಲಿ ಮಹತ್ತರವಾದ ಪ್ರಗತಿಯೇನೂ ಕಂಡುಬರದಿದ್ದರೂ ಸ್ವೋಪಜ್ಞ ಚೇತನ, ವೈಜ್ಞಾನಿಕ, ವೈಚಾರಿಕ ಸಂಶೋಧನೆ. ಗ್ರಂಥರಚನೆಗಳಲ್ಲಿ ಹರಿಯತೊಡಗಿದುವು. ಸಾಮಾಜಿಕ ಮತ್ತು ಐತಿಹಾಸಿಕ ಬದಲಾವಣೆಗಳಿಗೆ ದಾರಿಕಂಡಿತು. ಫ್ರಾಂಕೊ ವಾಲ್ಟೇರ್ (1624-1778) ಮತ್ತು ಜೀನ್ ಜಾಕ್ವೆಸ್ ರೂಸೊ (1712-78) ಇವರ ಕೃತಿಗಳು ಫ್ರಾನ್ಸಿನ ಅಂದಿನ ಸಾಮಾಜಿಕ ರಾಜಕೀಯ ದುಸ್ಥಿತಿಯನ್ನು ವಿಡಂಬಿಸಿ, ಜನತೆಯನ್ನು ಮಹಾಕ್ರಾಂತಿಗೆ ಪ್ರಚೋದಿಸಿದುವು, ಹೊಸ ಸಮಾಜದ ನಿರ್ಮಾಣದ ರೂಪ-ರೇಖೆಗಳನ್ನು ಸೂಚಿಸಿದುವು. ಲಿಸ್ಭೆಜ್, ಮಾರಿವ್ಯಾ ಮತ್ತು ಪ್ರೆವೋಸ್ಟ್ ಕಾದಂಬರಿ ಜಗತ್ತಿನಲ್ಲೂ ರೂಸೊ, ಲೆಬ್ರುನ್ ಪಿಂಡಾರೆ ಕಾವ್ಯಕ್ಷೇತ್ರದಲ್ಲೂ ಆ ಕಾಲಕ್ಕೆ ಹೆಸರಾದವರು. ಆಂದ್ರೆ ಚೆನಿಯರ್ (1762-94 ಭಾವಗೀತೆಗಳಲ್ಲಿ ಗ್ರೀಕ್ ಕ್ಲ್ಯಾಸಿಕಲ್ ಮಾದರಿಗಳ ಸೊಗಸನ್ನು ಹೊರಹೊಮ್ಮಿಸಿದ.

೧೯ ನೆಯ ಶತಮಾನದಿಂದ ಈಚೆ

[ಬದಲಾಯಿಸಿ]

19ನೆಯ ಶತಕದಲ್ಲಿ ಹಲವಾರು ನೂತನ ಸಾಹಿತ್ಯ ಪಂಥಗಳು ಆರಂಭವಾದುವು. ಅವುಗಳಲ್ಲಿ ಮೊದಲನೆಯದು ರೊಮ್ಯಾಂಟಿಕ್ ಕಾವ್ಯಮಾರ್ಗ. ವ್ಯಕ್ತಿ ವಿಶಿಷ್ಟತೆಗೆ ಮನ್ನಣೆ ಕೊಡುವುದೆ ಈ ಪಂಥದ ಮುಖ್ಯ ಧ್ಯೇಯ. ಫ್ರಾಂಕೊ ಡಿ ಷಾಟುಬ್ರಿಯಾಂಡ್ (1768-1848) ಈ ಪಂಥದ ಪ್ರವರ್ತಕ. ಆಲ್ಪಾನ್ಸ್ ಡಿ ಲಾಮಾರ್ಟಿನ್ ಇದನ್ನು ಬೆಳೆಸಿದ. ವಿಕ್ಟರ್ ಹ್ಯೂಗೊ ರೊಮ್ಯಾಂಟಿಕ್ ಸಾಹಿತಿಗಳಲ್ಲಿ ಅದ್ವಿತೀಯ. ಈತನ ಕವನಗಳಲ್ಲಿನ ಶಬ್ದಸಂಪತ್ತಿನ. ವಿವಿಧ ಛಂದೋ ಪ್ರಯೋಗಗಳು ಗಣನೀಯವಾಗಿವೆ. ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲೆತ್ನಿಸಿ ವಿಫಲನಾದ. ಈತನ ಲೆ ಮಿಸೆರಬಲೆ, ಹಂಚ್ ಬ್ಯಾಕ್ ಆಫ್ ನಾತರ್‍ದಾಮ್ ಸುಪ್ರಸಿದ್ಧ ಕಾದಂಬರಿಗಳು.

ಸೊಗಸಾದ ಭಾವಗೀತೆಗಳನ್ನೂ ಬರೆದು ಉತ್ಕøಷ್ಟ ನಾಟಕಗಳನ್ನು ಬರೆದು ಜನಮನದಲ್ಲಿ ನಿಂತ ಆಲ್ಪ್ರೆಡ್ ಡಿ ಮಸ್ಸೆಟ್ಸ್ (1810-57). ಈ ಶತಕದ ಮಧ್ಯ ಭಾಗದಲ್ಲಿ ತಿಯೊ ಫಿಲೆ ಗಾಟಿಯರ ಎಂಬ ಕವಿಯ ನೇತೃತ್ವದಲ್ಲಿ ಪಾರ್ನಾಸಿಯನ್ ಕಾವ್ಯಪಂಥ ಆರಂಭವಾಯಿತು. ಈ ಕವಿಯ ಪ್ರಾತಿನಿಧಿಕ ಕಾವ್ಯಸಂಕಲನ ಇಮಾ ಎಟ್ ಕ್ಯಾಮಿ (1852). ಲೆಕಾಂಟೆ ಡಿ ಲಿಸ್ಲೆ, ಜೋಸ್ ಡಿ ಹೆರೆಡಿಯಾ ಮತ್ತು ಚಾರ್ಲ್ಸ್ ಬೊದಿಲೇರ್ ಈತನ ಪ್ರಮುಖ ಅನುಯಾಯಿಗಳು. ಸಲ್ಲಿ ಪ್ರುದೋಮೆ ತಾತ್ತಿಕ-ಚಿಂತನಶೀಲ ಕವಿ. ಸ್ಪಷ್ಟವಾದ ಲಲಿತವಾದ ಶೈಲಿ ಈತನದು. ಫ್ರಾಂಕೊ ಕಾಪ್ಪಿ ದಲಿತ ಜನರ ನೋವು-ನಲಿವುಗಳನ್ನು ಚಿತ್ರಿಸಿದ ಕವಿ. ಪಾರ್ಲ ವರ್ಲೇನ್ (1844-96). ಅರ್ಥರ್ ರಿಂಬಾಡ್ (1854-91) ಮತ್ತು ಸ್ಟೀಪೆನ್ ಮಲಾರ್ಮೆ ಸಿಂಬಾಲಿಸಮ್ ತತ್ತ್ವದ. ನವ್ಯಕಾವ್ಯದ ಪ್ರವರ್ತಕರು. ಸಾಂಕೇತಿಕತೆ, ಅಸ್ಪಷ್ಟತೆ ಇವರ ಕಾವ್ಯದ ವಿಶಿಷ್ಟ ಲಕ್ಷಣಗಳು.

ಐತಿಹಾಸಿಕ ಮತ್ತು ತೌಲನಿಕ ವಿಮರ್ಶೆಯನ್ನಾರಂಭಿಸಿದ ಅಬೆಲ್ ವಿಲ್ಲೆಮೇನ್ (1790-1870), ಅಗಸ್ಟೀನ್ ಸೇಂಟ್ ಬವ್ (1804-69) (ಪೋರ್ಟ ರಾಯಲ್ ಪೋಸ್ಕ್ರೈಟ್ರ್ರೆಯ್ಟ್ಸಲಿಟರೇರಿಸ್ ಮತ್ತು ಲೆ ಲುಂಡಿ ಕೃತಿಗಳ ಕರ್ತೃ) ಮತ್ತು ಹಿಪ್ಪೋಲಿಟ್ ಟೇನ್ ಸಾಹಿತ್ಯ ವಿಮರ್ಶೆಯನ್ನು ಬಲಗೊಳಿಸಿದವರು.

ಫ್ರಾಂಕೊ ಗಿಜೋಟ್, ಅಡಾಲ್ಪ್ ತಿಯೆರ್ಸ್. ಜೂಲ್ಸ್ ಮಿಚ್ಲೆಟ್. ಫಸ್ಟಲ್ ಡಿ ಕೌಲಾಂಜಿ ಸುಪ್ರಸಿದ್ಧ ಇತಿಹಾಸಕಾರರು. ಇವರಲ್ಲಿ ಒಬ್ಬೊಬ್ಬರದು ಒಂದೊಂದು ಮಾದರಿಯ ದೃಷ್ಟಿ.

ಕಲಾತ್ಮಕ ರಚನೆಗೆ ಹೆಸರಾದ ಅಗಸ್ಟೀನ್‍ಸ್ಕ್ರೈಬ್ (1791-1861) ನೈತಿಕ ಹಾಗೂ ಕೌಟುಂಬಿಕ ನಾಟಕಗಳ ಕಿಮಿಲ್ ಆಜಿಯರ್. ವಿಕ್ಟೋರಿಯನ್ ಸಾರ್ಡು. ಅಲೆಕ್ಸಾಂಡರ್ ಡ್ಯೂಮಾ-ಇವರು ಪ್ರಹಸನ ಪ್ರಪಂಚದಲ್ಲಿ ಪ್ರಸಿದ್ಧರು. ಸ್ಕ್ರೈಬ್‍ನಾಲ್ಕು ನೂರಕ್ಕೂ ಮಿಕ್ಕು ನಾಟಕಗಳನ್ನು ಬರೆದ.

ಕಾದಂಬರಿ ಕ್ಷೇತ್ರ ಮಾತ್ರ ಈ ಕಾಲದಲ್ಲಿ ಅತ್ಯಂತ ಸಮೃದ್ಧವೂ ಶ್ರೀಮಂತವೂ ಆಗಿರುವುದು ಸುಸ್ಪಷ್ಟವಾಗಿದೆ. ಜಾರ್ಜ ಸ್ಯಾಂಡ್ ಎಂಬಾಕೆ ಬರೆದ ಸಾಮಾಜಿಕ ಗ್ರಾಮಜೀವನದ ರಮ್ಯ ಕಾದಂಬರಿಗಳು ಹೇರಳವಾಗಿವೆ. ಸ್ಪಂಡಾಲ್ ಮನೋವೈಜ್ಞಾನಿಕ ಮತ್ತು ವಾಸ್ತವಿಕ ಕಾದಂಬರಿಗಳನ್ನು ಬರೆದು ಹೆಸರಾದ. ಬಾಲ್ಜಾಕ್ ಈ ಕಾಲದ ಶ್ರೇಷ್ಠ ಕಾದಂಬರಿಕಾರ. ಗಸ್ಟಾವ್ ಪ್ಲೂಬೆರ್‍ನ ಸುಪ್ರಸಿದ್ಧ ಕಾದಂಬರಿ ಮದಾಂಬಾವರಿ (1857) ವಾಸ್ತವಿಕತೆಯ ನಾಂದಿಯನ್ನು ಹಾಡಿತು. ಸಹಜ ನೈಸರ್ಗಿಕತೆಯ ಹೊಸಪಂಥದ ಮೊದಲಿಗ ಎಮಿಲಿ ಜೋಲಾ (1840-1902). ಈತನದು ಸತ್ತ್ವಶಾಲಿ ಬರಹ. ಸಣ್ಣಕಥೆಗಳಲ್ಲಿ ಗಾಯ್‍ ಡಿ ಮೋಪಸಾ (1850-93). ಐತಿಹಾಸಿಕ ರಮ್ಯ ಕಾದಂಬರಿಗಳಲ್ಲಿ ಅಲೆಕ್ಸಾಂಡರ್ ಡ್ಯೂಮಾ (1830-70) ಸುವಿಖ್ಯಾತರಾಗಿದ್ದಾರೆ. ಡ್ಯೂಮಾನ ಕೌಂಟ್ ಆಫ್ ಮಾಂಟೆಕ್ರಿಸ್ಟೊ ಮತ್ತು ದಿತ್ರೀ ಮಸ್ಕಟೀರ್ಸ್ ಚಿರಕಾಲಿಕ ಕೃತಿಗಳು. ಪ್ರಾಸ್ಪರ್‍ಮೆರಿಮೀಯ (ಕೊಲಂಬಾ ಎಂಬ ಕಾದಂಬರಿ ಕಾರ್ಸಿಕಾದ ಕತೆ) ಕಾದಂಬರಿಗಳಲ್ಲಿ ಲೌಕಿಕ ತಿಳಿವಳಿಕೆ. ಸಂಕ್ಷಿಪ್ತತೆ; ಜೂಲ್ಸ್ ಮತ್ತು ಎಡ್ಮಂಡ್ ಗೊನ್ಕೋರ್ಟ ಸೇರಿ ಬರೆದ ಕಾದಂಬರಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಅವಲೋಕನ. ತದ್ವತ್ ಚಿತ್ರಣ ವಿಶೇಷ ಗುಣಗಳು. ಆಲ್ಪೋನ್ಸ್ ಡಾಡೆಟ್ ಉತ್ತಮ ಹಾಸ್ಯಸಾಹಿತಿ. ಆತ ಸೃಷ್ಟಿಸಿದ ತಾರಸ್ಕೋನಿನ ಟಾರ್ಟೆರಿನ್ ಚಿರಸ್ಮರಣೀಯ ಹಾಸ್ಯ ಪಾತ್ರ. ಡಾಡೆಟ್ಟನನ್ನು ಫ್ರಾನ್ಸಿನ ಡಿಕನ್ಸ್ ಎಂದು ಕರೆದಿದ್ದಾರೆ. ಹೀಗೆ ಹೆನ್ರಿ ಬೇಲ್ (ಸ್ಪಂಡಾಲ್.) ಪ್ರಾಸ್ಪರ್ ಮೆವಿವೀ, ಡಾಡೆಟ್, ಜೋಲಾ, ಫ್ಲೊಬೆರ್, ಗೊನ್‍ಕೋರ್ಟ, ಜೂಲ್ಸ್, ಜಿ.ಕೆ.ಹೈಸ್‍ಮನ್, ಪಿಯರೆಲೋಟಿ (ಇಂಪ್ರೆಷನಿಸ್ಟ್), ಪಾಲ್ ಬೋರ್ಗೆಟ್, ರೊಮೇನ್ ರೋಲಾ, ಮಾರ್ಸೆಲ್‍ಪ್ರೂಸ್ಟ್-ಇವರೆಲ್ಲ ಪ್ರಥಮ ಪಂಕ್ತಿಯಲ್ಲಿ ನಿಲ್ಲಬಲ್ಲ ಶ್ರೇಷ್ಠ ಕಾದಂಬರಿಕಾರರು. ವೈಜ್ಞಾನಿಕ. ಮನೋವೈಜ್ಞಾನಿಕ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆ ಈ ಕಾದಂಬರಿಗಳಲ್ಲಿ ಪ್ರಧಾನ. ಆಧುನಿಕ ಜೀವನದ ಸಂಕೀರ್ಣತೆಯನ್ನು ಅಭಿವ್ಯಕ್ತಿಸುವ ವಿವಿಧ ತಂತ್ರಗಳ ಪ್ರಯೋಗಗಳನ್ನು ಈ ಕೃತಿಗಳಲ್ಲಿ ಕಾಣಬಹುದು. 19ನೆಯ ಶತಮಾನದ ಕಡೆಯ ವರ್ಷಗಳಲ್ಲಂತೂ ಕಾದಂಬರಿ ರಚನೆ ಒಂದು ವ್ಯಾಪಾರೋದ್ಯಮವೇ ಆಯಿತು. ಅಗ್ಗದ ಜನಪ್ರಿಯತೆ, ಹಣಸಂಪಾದನೆ ಕಾದಂಬರಿಕಾರರ ಗುರಿಯಾದುವು. ರೆನೆ ಬಾಜಿûನ್‍ಪಾಲ್ ಬೋರ್ಗೆಟ್, ಅಬೆಲ್ ಹವ್ರ್ಮೆಂಟ್, ಮಾರ್ಸೆಲ್ ಪ್ರೂಸ್ಟ್ ಇವರ ಕೃತಿಗಳು ಅಸಂಖ್ಯಾತವಾಗಿ ಖರ್ಚಾದುವು. ಆದರೆ ಅವರ ಒಂದು ಕೃತಿಯೂ ವಸ್ತುನಿಷ್ಠವಾದ, ಪ್ರತಿಭಾವಪೂರ್ಣವಾದ ಸಾಹಿತ್ಯಕೃತಿ ಎನಿಸಿಕೊಳ್ಳಲಿಲ್ಲ. ಪಿಯರ್ ಲೋಟಿ (1850-1927). ಅನಾಟೋಲ್ ಫ್ರಾನ್ಸ್ (1844-1924) ರೊಮೇನ್ ರೋಲಾ (1866-1944) 19ನೆಯ ಶತಕದ ಕಡೆಯ ಭಾಗದಲ್ಲಿ ಬಂದ ಶ್ರೇಷ್ಠ ಕಾದಂಬರಿಕಾರರು. 20ನೆಯ ಶತಮಾನದ ಮೊದಲ ಭಾಗದಲ್ಲೂ ಇವರ ಬರೆವಣಿಗೆ ತನ್ನ ಯಶಸ್ಸನ್ನು ಉಳಿಸಿಕೊಂಡಿತ್ತು. ಲೋಟಿ ಪ್ರತಿಭಾವಂತ. ವಸ್ತುನಿಷ್ಠವಾದ ಮನೋಧರ್ಮವುಳ್ಳ ಶ್ರೇಷ್ಠ ಕಲಾವಿದ. ಆನಟೋಲ್ ಫ್ರಾನ್ಸ್ ವಿಲಕ್ಷಣ ಸ್ವಭಾವದ ದೊಡ್ಡ ಸಾಹಿತಿ. ಸ್ವೋಪಜ್ಞತೆ, ಸ್ವತಂತ್ರವಾದ ವಿಚಾರಧಾರೆ ಮುಂತಾದ ಫ್ರೆಂಚ್ ಪರಂಪರೆಯ ಶ್ರೇಷ್ಠಾಂಶಗಳು ಈತನ ಮನೋಧರ್ಮದಲ್ಲಿ ಬೆರೆತು ಹೋಗಿದ್ದುವು. ಈತನ ಪುಸ್ತಕಗಳಷ್ಟನ್ನು ಮಾತ್ರ ಓದಿದರೆ ಸಾಕು ಈತನ ನಾಡಿನ, ಈತನ ಕಾಲದ ಎಲ್ಲವನ್ನೂ ತಿಳಿದಂತಾಗುತ್ತದೆ. ಈತನ ಮಹತ್ತರ ಕೃತಿ, ಪೆಂಗ್ವಿನ್ ಐಲೆಂಡ್ ನಾಗರಿಕತೆಯ ಚರಿತ್ರೆಯ ವಿಡಂಬನೆ. ಸ್ವಿಫ್ಟ್, ವಾಲ್ಟೇರ್ ಮುಂತಾದ ಹಿರಿಯ ವಿಡಂಬನಕಾರರೂ ಮೆಚ್ಚಿ ನಮಿಸಿರುವ ಕೃತಿ. ಕಾಂಟೆಂಪೊರೆರಿ ಹಿಸ್ಟರಿ ಎಂಬ ಹೆಸರಿನ ಕಾದಂಬರಿ ಚತುಷ್ಟಯ. ದಿ ಕ್ರೈಮ್ ಆಫ್ ಸಿಲ್ವೆಸ್ಟರ್ ಬೊನಾರ್ಡ ಎಂಬುವು ಈತನ ಇತರ ಶ್ರೇಷ್ಠ ಕೃತಿಗಳು. ಫ್ರಾನ್ಸ್‍ನದು ಸರಳವಾದ, ಶುದ್ಧವಾದ ಶೈಲಿ. ವಿಚಾರಗಳು ಕ್ರಾಂತಿಕಾರಕ ಸೋಗು. ಆಷಾಡಭೂತಿತನಗಳನ್ನು ಕಂಡರೆ ಬೆಂಕಿಯಾಗುವ ಈತನ ಕೋಪ ಸಾತ್ತ್ವಿಕವಾದ್ದು. ಅದರಲ್ಲಿ ಆಕ್ರೋಶದ ಕಡುತಾಪವಿಲ್ಲ. ತಾತ್ತ್ವಿಕ ಸಮಚಿತ್ತ. ವ್ಯಂಗ್ಯ ಮತ್ತು ಆರೋಗ್ಯಕರ ಸೂಕ್ಷ್ಮ ವಿಮರ್ಶನ ದೃಷ್ಟಿ ಇವನಲ್ಲಿವೆ.

ರೊಮೆನ್ ರೋಲಾನ ಜೀನ್ ಕ್ರಿಸ್ಟೋಫೆ (ಹತ್ತು ಸಂಪುಟಗಳ ಸುದೀರ್ಘ ಕಾದಂಬರಿ) ಒಂದು ಅಮರ ಕೃತಿ.

1870ರಿಂದೀಚೆಗೆ ಫ್ರೆಂಚ್ ಸಾಹಿತ್ಯ ಮೊದಲಿಗಿಂತ ಹೆಚ್ಚು ಸಂಕೀರ್ಣವಾಗಿ ವಿಪುಲವಾಗಿ ಬೆಳೆದಿದೆ. ಕಾದಂಬರಿಗಳ ವೈವಿಧ್ಯ ಹಾಗೂ ಶಾಖೋಪಶಾಖೆಗಳಾಗಿ ಬೆಳೆದು ಬಂದ ಪ್ರಯೋಗಗಳಂತೂ ಯಾವ ವರ್ಗೀಕರಣಕ್ಕೂ ಸಿಕ್ಕುವುದಿಲ್ಲ. ಕವಿಯೂ ಆಗಿದ್ದ ಜೂಲ್ಸ್ ರೊಮೇನನ ಲೆ ಹೋಮೆ ಡಿ ಬಾನ್ ವೊಲೊಂಟೆ 27 ಸಂಪುಟಗಳ ಬೃಹತ್ ಕಾದಂಬರಿ. ಈತನ ನಾಕ್ (1923) ಎಂಬ ಹೆಸರಿನ ವೈದ್ಯವೃತ್ತಿಯನ್ನು ವಿಡಂಬಿಸುವ ಸಾಮಾಜಿಕ ಕಾದಂಬರಿ ಬಹು ಯಶಸ್ವಿಯಾಯಿತು. ಆಂದ್ರೆ ಷೀಡ್ ಪ್ರಭಾವ 20ನೆಯ ಶತಕದ ಪೂರ್ವಾರ್ಧವನ್ನೆಲ್ಲ ವ್ಯಾಪಿಸಿತು. ಪಿಯರೆ ಹಂಪ್ ಎಂಬ ಕಾದಂಬರಿಕಾರ ನಾಯಕ ಅಥವಾ ಕೇಂದ್ರ ವ್ಯಕ್ತಿಯೇ ಇಲ್ಲದ ಕಾದಂಬರಿಯ ಪ್ರಯೋಗ ಮಾಡಿದೆ. ಇಲ್ಲಿ ಕೈಗಾರಿಕಾ ಕ್ಷೇತ್ರ ಹಿನ್ನೆಲೆ, ಮಾನವೀಯ ಮೌಲ್ಯಗಳಿಗೆ ಮಾತ್ರ ಪ್ರಾಮುಖ್ಯತೆ. ಜೀನ್ ರಿಚರ್ಡ ಬ್ಲೋಷ್, ಯೂಜಿನ್ ಮಾಂಟ್‍ಪೋರ್ಟ, ಜೋಲಾನ ಮಾದರಿಯನ್ನೇ ಅನುಸರಿಸಿದರು. ಜೀನ್ ಷ್ಲೂಂಬೆರ್ಗರ್‍ನ (1877) ಸೇಂಟ್ ಸ್ಯಾಟರ್ನಿನ್ ಈ ಕಾಲದ ಶ್ರೇಷ್ಠ ಕಾದಂಬರಿಗಳಲ್ಲೊಂದು.


ಕೊಲೆಟ್ಟೆ 20ನೆಯ ಶತಕದ ಪೂರ್ವಾರ್ಧದ ಅತ್ಯಂತ ಜನಪ್ರಿಯ ಕಾದಂಬರಿಕಾರ. ಆಲ್ಬರ್ಟ ಕಾಮು ಒಬ್ಬ ಪ್ರಭಾವಶಾಲಿ ಬರಹಗಾರ. ಈತನ ಎಲ್ಲ ಕಾದಂಬರಿಗಳ ಪಲ್ಲವಿ. ವ್ಯಕ್ತಿಯ ಸಮಸ್ಯೆ ಮತ್ತು ಆಗುಹೋಗುಗಳೆಲ್ಲ ಹೇಗೆ ಸಮಾಜ ವ್ಯವಸ್ಥೆಯ ಒಂದು ಅವಿಭಾಜ್ಯ ಭಾಗವಾಗಿರುತ್ತವೆ ಎಂಬುದನ್ನು ತೋರಿಸುವುದೇ. ಈತನ ಕಾಲಿಗುಲ ಹಾಗೂ ಇತರ ಕೃತಿಗಳು 1965ರ ಈಚಿನ ಕನ್ನಡ ಲೇಖಕರ ಮೇಲೂ ಹೆಚ್ಚಿನ ಪರಿಣಾಮ ಬೀರಿವೆ. 1956ರಲ್ಲಿ ಪ್ರಕಟವಾದ ಲಾ ಷೂಟ್ ಮಾನವನ ಕೋಟಲೆ-ಸಂಕಷ್ಟಗಳನ್ನು ಕುರಿತ ಕಾದಂಬರಿ. ಆಂದ್ರೆ ಷೀಡ್ ಇನ್ನೊಬ್ಬ ಅತ್ಯಂತ ಪ್ರಭಾವಶಾಲಿ ಕಾದಂಬರಿಕಾರ. ಈತನ ಮನೋವೈಜ್ಞಾನಿಕ ಕಾದಂಬರಿಗಳು ಮತ್ತು ಈ ಕಾಲದ ವಿಮರ್ಶಾ ಮಾನದಂಡವನ್ನೇ ನಿರ್ಮಿಸಿದ ಸಾಹಿತ್ಯ ವಿಮರ್ಶಾ ಲೇಖನಗಳು ಫ್ರೆಂಚ್ ಸಾಹಿತ್ಯಕ್ಕೆ ಬಹುದೊಡ್ಡ ಕಾಣಿಕೆಗಳು. ಈತ ಮೊದಲು ಮಲ್ಲಾರ್ಮೆ. ವೇಲರಿ. ಮೆಟರ್‍ಲಿಂಕ್‍ರಿಂದ ಪ್ರಭಾವಿತನಾಗಿ ಸಂಕೇತ ವಿಧಾನದ ಕೃತಿಕಾರನಾಗಿದ್ದ.


ಜಾರ್ಜಸ್ ದುಹಾಮೆಲ್ (ಮೊದಲ ಮಹಾಯುದ್ಧರಂಗದ ವೈದ್ಯಶಿಬಿರದಲ್ಲಿ 2.300 ಶಸ್ತ್ರಚಿಕಿತ್ಸೆಗಳನ್ನು ಮಾಡಿದ ಮಹಾ ಶಸ್ತ್ರವೈದ್ಯ). ಒಂದು ಕಾದಂಬರಿ ಸರಣಿಯನ್ನೇ ಬರೆದ. ರೋಜರ್ ಮಾರ್ಟಿನ್ ಡು ಗಾರ್ಡನ ಹತ್ತು ಸಂಪುಟಗಳ ಕಾದಂಬರಿ ದಿ ತಿಬಾಲ್ಟ್ಸ್ 1937ರ ನೊಬಲ್ ಪಾರಿತೋಷಕ ಗಳಿಸಿತು. ಈ ಇಬ್ಬರೂ ಬದಲಾಗುತ್ತಿರುವ ಸಮಾಜ ಜೀವನವನ್ನೂ ಹಳೆಯ ಕುಟುಂಬಗಳು ನಶಿಸಿ ಹೋಗಿ ಹೊಸ ಬಗೆಯ ಜೀವನ ಬರುತ್ತಿರುವುದನ್ನೂ ಚಿತ್ರಿಸಿದ್ದಾರೆ. ಆಂದ್ರೆ ಮೋರ್ವಾ. ಜೀನ್‍ಗಿಯೊನೊ (1895) ಜೂಲಿಯನ್ ಗ್ರೀನ್, ರೇಮುeóï, ಹಾಸ್ಯ ಕಾದಂಬರಿ, ನಾಟಕಗಳನ್ನು ಬರೆದು ಕೀರ್ತಿ ಪಡೆದ ಮಾರ್ಸೆಲ್ ಎಯ್ಮಿ (1902), ಮಾರ್ಸೆಲ್ ಪ್ಯಾಗ್ನೊಲ್ ಇತರ ಹೆಸರಾಂತಕಾರರು. ಕಿರಿಯ ಪೀಳಿಗೆಯವರಲ್ಲಿ ಫ್ರಾಂಕೊಸೇಗಾನ್ (1935) ಗಮನ ಸೆಳೆವ ಕಾದಂಬರಿಕಾರ.

19ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಬಲವಾದ `ಸಿಂಬಲಿಸ್ಟ್ ಸಿದ್ಧಾಂತವು ಸಾಂಪ್ರದಾಯಿಕ ಪದ್ಯರೂಪಗಳಿಂದ ಬಿಡುಗಡೆಯನ್ನು ತಂದಿತು. ಕವಿಯ ದರ್ಶನಕ್ಕೆ ಪ್ರಾಧಾನ್ಯ ನೀಡಿತು. 20ನೆಯ ಶತಮಾನದ ಪ್ರಾರಂಭದಲ್ಲಿ ಎಮಿಲಿ ವರ್‍ಹಂಟ್, ಷೀನ್ ವ್ರೆರಿಯಾಸ್, ಹೆನ್ರಿಡಿ ಕೇನ್ಯೆ ಎಲ್ಲರೂ `ಸಿಂಬಲಿಸ್ಟ್ ಪಂಥದಲ್ಲಿಯೇ ಪ್ರಾರಂಭಿಸಿ ಅನಂತರ ಬೇರೆ ಸಿದ್ಧಾಂತಗಳಿಗೆ ತಿರುಗಿದರು.

1896ರ ವರೆಗೆ ಅಂದ್ರೆ ಆಂತಾಯಿನ್‍ನ `ಥಿಯೇಟರ್ ಲಿಬ್ರೆ `ನ್ಯಾಚುರಲಿಸ್ಟ್ ನಾಟಕಕ್ಕೆ ಪ್ರೋತ್ಸಾಹ ನೀಡಿತ್ತು. ಅನಂತರ ಇದು ವಾಸ್ತವಿಕ (ರಿಯಲಿಸ್ಟ್) ನಾಟಕಕಾರರಿಗೆ ಪ್ರೋತ್ಸಾಹ ನೀಡಿತು. ಜಾರ್ಜ್‍ಸ್ ಪೋರ್ಪೊರಿಷೆ, ಹೆನ್ರಿ ಬಟೇಟಿ, ಹೆನ್ರಿ ಬನ್ರ್ಸ್‍ಟೇನ್ ಮೊದಲಾದವರು ಈ ಪಂಥದವರು. ಅರೋಲೀನ್‍ಲುನೆಪೊ ತನ್ನ ನಾಟಕಮಂದಿರದು. ಮಾರಿಸ್ ಮೆಟರ್‍ಲಿಂಕದಂಥ `ಸಿಂಬಲಿಸ್ಟರ ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಿದ್ದ. ಈ ದಿನಗಳ ನಂತರ ಸಮರ್ಥ ನಾಟಕಕಾರರು ಕಾಣಿಸಿಕೊಂಡರು. ಪ್ರಸಿದ್ಧ ನಾಟಕಕಾರ ಷೀನ್ ಅಸೌಲಿಯ ನಾಟಕಗಳ ವಸ್ತು, ಭ್ರಷ್ಟ ಜಗತ್ತಿನಲ್ಲಿ ಮನುಷ್ಯನ ಮುಗ್ಧತೆಯ ನಾಶ. ಇವನೂ ಇವನ ಕಾಲದ ಇತರ ನಾಟಕಕಾರರೂ ಪ್ರಾಚೀನ ಪೌರಾಣಿಕ ಕಥೆಗಳನ್ನು ಆಧುನಿಕ ರೂಪದಲ್ಲಿ ಬಳಸಿಕೊಂಡರು. ಪಾಲ್ ಕೇನೇಲ್ ವಾಸ್ತವಿಕ ನಾಟಕಗಳಲ್ಲಿ ಸಮಕಾಲೀನ ಸಮಸ್ಯೆಗಳನ್ನು ವಿಶ್ಲೇಷಿಸಿದ. ಹೆನ್ರಿ ದ ಮಾಸೆಕೇ ಐತಿಹಾಸಿಕ ನಾಟಕಗಳನ್ನು ಬರೆದ. ಆಧುನಿಕ ಜಗತ್ತಿನಲ್ಲಿ ಧರ್ಮವು ಸೃಷ್ಟಿಸುವ ಬಿಕ್ಕಟ್ಟುಗಳನ್ನು ವಿಶ್ಲೇಷಿಸಿದ.

ಆಲ್ಬರ್ಟ್ ಕಾಮು ಅಸಂಗತ ಜಗತ್ತಿನಲ್ಲಿ ಮನುಷ್ಯನ ಸ್ಥಿತಿಯನ್ನು ಶೋಧಿಸಿದ. ಷೀನ್‍ಪಾಟ್ ಸಾತ್ರ್ಸ್ ಅಸ್ಮಿತೆ ಸ್ವಾತಂತ್ರ್ಯ, ಮನುಷ್ಯನ ಹೊಣೆಗಾರಿಕೆ-ಇಂಥ ವಸ್ತುಗಳನ್ನು ಆರಿಸಿಕೊಂಡ. ಆನ್‍ತನಿಸ್ ಆರ್‍ಟೋ `ಥಿಯೇಟರ್ ಆಫ್ ಕ್ರೂಯೆಲ್ಟಿ ಯನ್ನು ಪ್ರಾರಂಭಿಸಿದ. ಇವನ ನಾಟಕಗಳು ಮೂಲಭೂತವಾಗಿ ಮನುಷ್ಯನಲ್ಲಿರುವ ಕ್ರೌರ್ಯವನ್ನು ಬಯಲಿಗೆಳೆಯುತ್ತವೆ. ಷೀನ್ ಜೆನ್ನೆ ಇವನ ಮೇಲ್ಪಂಕ್ತಿಯನ್ನನುಸರಿಸಿ `ದ ಮೆಯ್ಡ್‍ನ್ (1947) ಮತ್ತು `ದ ಬಾಲ್ಕನಿ (1957)ಗಳಂಥ ನಾಟಕಗಳನ್ನು ಬರೆದ. (ಇಲ್ಲಿ ಕೊಟ್ಟಿರುವುದು ಫ್ರೆಂಚ್ ನಾಟಕಗಳ ಹೆಸರುಗಳ ಇಂಗ್ಲಿಷ್ ಅನುವಾದಗಳನ್ನು). ಯಜೀನ್ ಆಯೊನೆಸ್ಕೆನ ಪ್ರಥಮ ನಾಟಕ (ದ ಬಾಲ್ಡ್ ಪ್ರೈಮ ಡೊನ, 1950) ಸಂಭಾಷಣೆ, ಕಥಾವಸ್ತು, ಪಾತ್ರಸೃಷ್ಟಿ ಎಲ್ಲ ಅಂಶಗಳಲ್ಲಿ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿತು. ಐರ್ಲೆಂಡಿನ ಸಾಹಿತಿ ಸ್ಯಾಮ್ಯುಎಟ್ ಟಕೆಟ್‍ನ `ಎನ್ ಅಟೆಂಡೆಂಟ್ ಮೂಡೆಯು 1953ರಲ್ಲಿ ಪ್ರದರ್ಶನವಾಯಿತು. ಇವುಗಳೊಂದಿಗೆ `ಅಸಂಗತ ನಾಟಕ ಮಂದಿರ (ಅಬ್‍ಸರ್ಡ್ ಥಿಯೇಟರ್) ಪ್ರಾರಂಭವಾಯಿತು.

ಕಾದಂಬರಿ ಕ್ಷೇತ್ರದಲ್ಲಿ, ಪ್ರೊಸ್ಟನ `ರಿಮೆಂಬ್ರೆನ್ಸ್ ಆಫ್ ಥಿಂಗ್ಸ್ ಪಾಸ್ಟ್ (1913-27) ವಿಶಿಷ್ಟ ಸಾಧನೆ, ಕಾಲ, ನೆನಪು, ವಾಸ್ತವತೆ ಮತ್ತು ಸೃಜನ ಪ್ರಕ್ರಿಯೆ ಇವೆಲ್ಲವುಗಳ ಶೋಧನೆ ಈ ಬೃಹತ್ ಕಾದಂಬರಿ. ಆಂದ್ರ eóÉೀಡ್, ಸಾತ್ರ್ರ್ ಮೊದಲಾದ ಕಾದಂಬರಿಕಾರರ ಮೇಲೆ ಇದು ಪ್ರಭಾವ ಬೀರಿತು. eóÉೀಡನ `ದ ಕೌಂಟರ್-ಫಿಲರ್ಸ್ (1926)ನಲ್ಲಿ ಕಾದಂಬರಿಯೊಳಗೊಂದು ಕಾದಂಬರಿ ಇದೆ, ಈ ಕಾದಂಬರಿಯು ಇನ್ನೂ ಬರೆಯಬೇಕಾಗಿರುವ ಕಥೆಯನ್ನು ಹೇಳುತ್ತದೆ. ಸಾತ್ರ್ರ್‍ನ `ನಾಸಿಯಾ (1986' ಸತ್ಯ ಮತ್ತು ಅಸ್ತಿತ್ವದ ಸಮಸ್ಯೆಯನ್ನು ವಿಶ್ಲೇಷಿಸುತ್ತದೆ.

ಇಪ್ಪತ್ತನೆಯ ಶತಮಾನದ ಪೂರ್ವಾಧದಲ್ಲಿ ಕಾದಂಬರಿಯು ಹಲವಾರು ಆಸಕ್ತಿಗಳ ಶೋಧನೆಯ ಸಾಧನವಾಯಿತು. ಕಾಮುನ ಬರೆದ `ದ ಔಟ್‍ಸೈಡರ್ (1942), ಮತ್ತು ಸಾತ್ರ್ರ್ ಬರೆದ `ದ ಪಾತ್ಸ್ ಆಫ್ ಫ್ರೀಡಂ' (1945-49) ಕಾದಂಬರಿ ಪ್ರಿಯ ವಿಶ್ವದಲ್ಲಿ ಮನುಷ್ಯನ ಸ್ಥಿತಿಯನ್ನು ಪೃಥಕ್ಕರಿಸಿದವು. ಜಾರ್ಜಸ್ ಬರ್ನಾನೊ, ಆಂದ್ರೆ ಜಿûೀಡ್ ಇವರ ಕಾದಂಬರಿಗಳು ಮಾನಸಿಕ ಅಥವಾ ಆಧ್ಯಾತ್ಮಿಕ ಒಳತೋಟಿಗಳನ್ನು ವಿಶ್ಲೇಷಿಸಿದವು. ಸಿಮೊನ್ ದಿ ಬ್ಯುನೋನ `ದ ವುಮನ್ ಡಿಸ್ಟ್ರಾಯ್ಡ್ ಮಹಿಳೆಯ ಸ್ಥಿತಿಯನ್ನು ವಿಶ್ಲೇಷಿಸಿತು.

ಮೈಕೆಲ್ ಬುತ; ಮಾರ್ಗರೈಟ್ ಡ್ಯೂರಾಸ್, ಆಲೇನ್ ರೋಬ್-ಗಿಫೆ ನಕಾಲೆ ಸಕಾ `ಹೊಸ ಕಾದಂಬರಿ'ಯ ಪ್ರವರ್ತಕರು. ಇವರ ಕಾದಂಬರಿಗಳಲ್ಲಿ ಸಂಪ್ರದಾಯಿಕ ಕಾದಂಬರಿಗಳಲ್ಲಿನಂತೆ ಕಾದಂಬರಿಕಾರನೇ ಕಥೆ ಹೇಳಿ, ಪಾತ್ರಗಳನ್ನು ಚಿತ್ರಿಸಿ, ಘಟನೆಗಳನ್ನು ನಿರೂಪಿಸಿ ಓದುಗನಿಗೆ ಸಿದ್ಧತೆ ಮಾಡಿಕೊಡುವುದಿಲ್ಲ. ಓದುಗನೂ ಶ್ರಮಪಡಬೇಕು. `ಟೆಲ್ ಕೈಲ್ ಎನ್ನುವ ಸಾಹಿತ್ಯದ ಪತ್ರಿಕೆಯ ಸ್ಥಾಪಕ ಫಿಲಿಸೆ ಸೋಟಸ್, ಕಾದಂಬರಿಯ ಪಠ್ಯ ಕಾದಂಬರಿಕಾರನ ಅಭಿವ್ಯಕ್ತಿಯಲ್ಲ, ಅದೊಂದು ಭಾಷೆಯ ಸ್ವತಂತ್ರ ಸಾಹಸ, ನುರಿತ ಓದುಗನು ಅದನ್ನೇ ಅನುಭವಿಸಬೇಕು ಎನ್ನುತ್ತಾನೆ.

1950ರಿಂದೀಚೆಗೆ ಅನೇಕ ಮಹಿಳೆಯರು ಕಾದಂಬರಿ ಪ್ರಕಾರದಲ್ಲಿ ವಿಶೇಷ ಯಶಸ್ಸನ್ನು ಗಳಿಸಿದ್ದಾರೆ. `ಹೆಡ್ರಿಂಗನ ನೆನಪುಗಳು (1951) ಎನ್ನುವ ಐತಿಹಾಸಿಕ ಕಾದಂಬರಿಯನ್ನು ಬರೆದ ಮಾರ್ಗರೈಟ್ ಯೋಸೆನ್ನೊ (ಫ್ರೆಂಚ್ ಅಕಾಡೆಮಿಗೆ ಆಯ್ಕೆಯಾದ ಮೊದಲನೆಯ ಮಹಿಳೆ ಇವಳು), `ಗುಡ್ ಮಾರ್ನಿಂಗ್ ಸ್ಯಾಡ್‍ನೆಸ್ (1954) ಬರೆದ ಫ್ರಾನ್‍ಸೋ ಸಗಾನ್ ಮೊದಲಾದವರು ತಮ್ಮ ಕಾಲದ ಕಾದಂಬರಿಕಾರರ ಪ್ರಥಮ ಪಂಕ್ತಿಯಲ್ಲಿದ್ದವರು.

ಕಾವ್ಯದಲ್ಲಿ ಪಾಲ್ ವೇಲರಿ (1871-1945) ಹಾಗೂ ಅಪಾಲಿನೇರ್ ಅವರ ಅನಂತರ ಜೂಲ್ಸ್ ಸೂಪರ್‍ವಿಯೆಲ್ಲೆ (1884) ಶ್ರೇಷ್ಠ ಕವಿಗಳು ಎನಿಸಿದ್ದಾರೆ. ಈ ಕಾಲದಲ್ಲಿ ಕವಯಿತ್ರಿಯರು ಹಲವರಿದ್ದರೂ ಒಬ್ಬರಾದರೂ ಪ್ರಥಮ ದರ್ಜೆಯ ಕವಯಿತ್ರಿ ಎನಿಸಲಿಲ್ಲ. ಸಿಡೋನಿ ಗೇಬ್ರಿಯಲ್ ಕೋಲೆಟ್ಟೆ (1873-1954) ಬಹುಜನರ ಮೆಚ್ಚುಗೆ ಪಡೆದ ಕವಯಿತ್ರಿ. ಕಾದಂಬರಿಕಾರ್ತಿಯಾಗಿ ಇನ್ನೂ ಹೆಚ್ಚು ಗಣ್ಯಳು. ಕೌಂಟೆಸ್ ಅನ್ನಾ ಎಲಿಸಬೆತ್ ಡಿ ನೊವಾಯಿಲ್ಲೆ (1876-1933) ಸುಪ್ರಸಿದ್ಧಳಾದ ಕವಯಿತ್ರಿ.

ಅತಿವಾಸ್ತವಿಕತಾವಾದ (ಸರ್ರಿಯಲಿಸಮ್) ಮತ್ತು ಆದರ್ಶರೂಪದ ಕಮ್ಯೂನಿಸಮ್ ಫ್ರೆಂಚ್ ಕಾವ್ಯದ ಪ್ರಧಾನಶಕ್ತಿಗಳಾಗಿ ತಲೆದೋರಿದುವು. ಆಂದ್ರೆ ಬ್ರಿಟೋನ್ (1896-) ಈ ಪಂಥದ ನಾಯಕ. 1940ರಲ್ಲಿ ನವ ಅತಿವಾಸ್ತವಿಕತಾವಾದ (ನಿಯೊಸರ್ರಿಯಲಿಸಮ್) ಆರಂಭವಾಯಿತು. ವೇಲರಿಯ ಅನಂತರ ಅಂಥ ದೊಡ್ಡ ಕವಿಯಾರೂ ಬರಲಿಲ್ಲ. ಪಂಥಕ್ಕಿಂತ ತಮ್ಮದೇ ಆದ ವ್ಯಕ್ತಿ ವೈಶಿಷ್ಟ್ಯವನ್ನು ಮೆರೆದ ಕವಿಗಳೇ ಹೆಚ್ಚು ಗಮನಾರ್ಹರಾಗಿದ್ದಾರೆ.

ಅಸ್ತಿತ್ವವಾದದಲ್ಲೆ (ಎಕ್ಜಿಸ್ಟೆಂಷಿಯಲಿಸಮ್) ಕ್ರೈಸ್ತ (ಆಸ್ತಿಕ) ಮತ್ತು ನಾಸ್ತಿಕ ಎಂದು ಎರಡು ಪಂಥಗಳಾದವು. ಗೇಬ್ರಿಯಲ್ ಮಾರ್ಸೆಲ್ (1889-) ಮೊದಲನೆಯ ವರ್ಗಕ್ಕೆ ಸೇರಿದ ಗಣ್ಯನಾದರೆ ಎರಡನೆಯ ಗುಂಪಿಗೆ ಜೀನ್ ಪಾಲ್ ಸಾರ್ತೃ (1905-) ಸೇರುತ್ತಾನೆ. ಆತನ ಸಿದ್ಧಾಂತ ಹೊಸಮಾರ್ಗವನ್ನೇ ತೆರೆಯಿತು. ಕಾವ್ಯ, ಕಾದಂಬರಿ, ಪ್ರಬಂಧ, ಉಪನ್ಯಾಸ-ಈ ಎಲ್ಲ ಪ್ರಕಾರಗಳಲ್ಲೂ ಈತ ತನ್ನ ಜೀವನ ತತ್ತ್ವಗಳನ್ನು ನೂತನ ದೃಷ್ಟಿಕೋನವನ್ನು ಅಭಿವ್ಯಕ್ತಿಸಿದ್ದಾನೆ. ಮೂಲತಃ ಈತ ಮಾನವತಾವಾದಿ. ಮಾರಿಸ್ ಮೆರ್ಲೊ ಪೋಂಟಿ (1908-), ಸೈಮೊನ್ ಡಿಬೋವಾಯ್ (1908-). ವಿ-ನಾಟಕಕಾರ ಜೀನ್ ಗೆನೆಟ್ ಸಾತರ್್ೃ ತತ್ತ್ವಗಳ ಪ್ರತಿಪಾದಕರಾಗಿ ಯಶಸ್ವಿ ಕಾದಂಬರಿಗಳನ್ನು ಬರೆದರು.

ಕ್ರೈಸ್ತ ಕ್ಯಾಥೋಲಿಕ್ ಧರ್ಮದ ಪುನರುಜ್ಜೀವನ ಈ ಶತಕದ ಮಹತ್ತರ ಘಟನೆ. ಇದರ ಪ್ರಭಾವ ಸಾಹಿತ್ಯದ ಎಲ್ಲ ಪ್ರಕಾರಗಳ ಮೇಲೂ ಪ್ರಬಲವಾಗಿ ಬಿದ್ದರೂ ನಿರೀಕ್ಷಿಸಿದ ಮಹತ್ತರ ಫಲಕೊಡಲಿಲ್ಲವೆಂದು ಸಮರ್ಥ ವಿಮರ್ಶಕರ ಅಭಿಪ್ರಾಯ. ಜೂಲ್ಸ್ ಲೇಮೇಯ್ಟರ್, ಮಾರಿಸ್ ಬ್ಯಾರೆಸ್ ಹೆಸರಿಗೆ ಕ್ಯಾಥೋಲಿಕರಾದರೂ ನಿಜದಲ್ಲಿ ಸಂದೇಹವಾದಿಗಳಾಗಿದ್ದರು. ಆಗಿನ ಹಲವಾರು ಸಾಹಿತಿಗಳು ಇದೆ ಸ್ವಭಾವದವರು.

ಎರಡನೆಯ ಮಹಾಯುದ್ಧದ ಅನಂತರ ಅನೇಕ ಸಾಹಿತಿಗಳು ರಾಜಕಾರಣಕ್ಕೆ ತಿರುಗಿದರು. ಸಾರ್ತೃ, ಆರಾಗಾನ್, ಎಲ್ಯೂಯರ್ಡೆ ಲೆ-ಫೆವೆಬ್ರೆ, ಟ್ರೆಸ್ಟಾನ್ ಜಾರಾ, ಏಯ್ಮಿಸಿಜೇರ್-ಮುಂತಾದವರು ಈ ರೀತಿ ರಾಜಕೀಯ ಪ್ರಜ್ಞೆಯಲ್ಲಿ ಆಸಕ್ತರಾಗಿ ಮಾರ್ಕ್ ತತ್ತ್ವಗಳನ್ನು ಬೆಂಬಲಿಸಿದರು. ಐರಿಷ್ ಮೂಲದ ಸ್ಯಾಮ್ಯುಯೆಲ್ ಬೆಕಟ್ಟನ ನಾಟಕಗಳು ದೊಡ್ಡ ವಿವಾದವನ್ನೇ ಎಬ್ಬಿಸಿದುವು. ಈತನದು ಒಂದು ರೀತಿಯಲ್ಲಿ ನೀತಿವಾದ. ಫ್ಯಾಸಿಸ್ಟ್ ವಿರೋಧಿ ಮಾಕ್ರ್ಸಿಸ್ಟ್ ಸಾಹಿತಿಗಳು ಹೆಚ್ಚುತ್ತಿರುವುದು ಒಂದು ಲಕ್ಷಣವಾದರೆ, ಆಂದ್ರೆ ಮಾಲ್‍ರಾನಂಥ ಕಾದಂಬರಿಕಾರರು ಕಮ್ಯೂನಿಸಮ್ ತತ್ತ್ವಗಳಲ್ಲಿ ಭ್ರಮನಿರಸನ ಹೊಂದಿ ಮತ್ತೆ ಪ್ರಜಾಸತ್ತೆಯ ಕಡೆ ವಾಲುವುದು ಇನ್ನೊಂದು ಲಕ್ಷಣ. ಮಾಲ್‍ರಾನ ಮ್ಯಾನ್ಸ್‍ಫೇಟ್ ಎಂಬ ಕೃತಿ ಚೀನಿ ಅಂತಃಕಲಹವನ್ನು ಕುರಿತ, ಸತ್ಯ, ಸತ್ತ್ವೆರಡೂ ಹುರಿಗೊಂಡು ಮೂಡಿದ ಕಾದಂಬರಿ.

20ನೆಯ ಶತಕದ ಫ್ರೆಂಚ್ ನಾಟಕರಂಗದಲ್ಲಿ ಸಾಕಷ್ಟು ರಭಸದ ಚಟುವಟಿಕೆಗಳು ಕಂಡು ಬಂದರೂ ಗುಣಮಟ್ಟದಲ್ಲಿ ಕಾವ್ಯದಲ್ಲಿ ಅದಕ್ಕಿಂತ ಹೆಚ್ಚಾಗಿ ಕಾದಂಬರಿಯಲ್ಲಿ ಪಡೆದ ಉತ್ಕøಷ್ಟತೆಯನ್ನು ಫ್ರೆಂಚ್ ಸಾಹಿತಿಗಳು ನಾಟಕದಲ್ಲಿ ಸಾಧಿಸಲಿಲ್ಲ. ಅದಕ್ಕೆ ಕಾರಣ ಪ್ರತಿಭಾವಂತ ನಾಟಕಕಾರರೇ ಇಲ್ಲದಿದ್ದುದು ಒಂದು. ನಾಟಕ ಕ್ಷೇತ್ರದಲ್ಲೂ ಸುಪ್ರಸಿದ್ಧರಾದ ಕ್ಲಾಡೆಲ್, ಜೂಲ್ಸ್ ರೋಮೇನ್ಸ್, ಬ್ಲಾಖ್ ರೋಮೇನ್ ರೋಲಾ, ಗೇಬ್ರಿಯಲ್ ಮಾರ್ಸೆಲ್, ಮಂತರ್, ಲ್ಯಾಂಟ್, ಗಿರಡು, ಕಾಕ್ಟ್ಯೂ, ಸೂಪರ್ ವಿಯೆಲ್ಲೆ, ಸಾತರ್್ೃ ಮತ್ತು ಕಾಮು ಮೂಲಭೂತವಾಗಿ ಕಾವ್ಯ, ಕಾದಂಬರಿ ಮಾಧ್ಯಮಗಳಲ್ಲಿ ಸಮರ್ಥರಾದವರು. ನಾಟಕ ಕಲೆಗೆ ಒಗ್ಗದ, ಪೋಷಕವಾಗದ ಕಾವ್ಯದ, ಕಾದಂಬರಿಯ ಅಂಶಗಳನ್ನು ಬೆರೆಸಿ ನಾಟಕ ಅದರ ಸಹಜ ಧರ್ಮದಂತೆ ಪ್ರದರ್ಶನ ಕಲೆಯಾಗುವುದನ್ನು ಹಾಳು ಮಾಡಿ ಕೇವಲ ಶ್ರವ್ಯ ನಾಟಕವಾಗಿ ಉಳಿಯುವಂತೆ ಮಾಡಿದುದು ಇವರು ಎಸಗಿದ ದೊಡ್ಡ ತಪ್ಪು. ಕಾದಂಬರಿಯಲ್ಲಿ ಇಲ್ಲವೆ ಪ್ರಬಂಧಗಳಲ್ಲಿ, ಕಾವ್ಯದಲ್ಲಿ ಶ್ರೇಷ್ಠವಾಗಿ ಕಾಣಬಹುದಾದ ಅಂಶ ಅದು ಎಷ್ಟೇ ಚೆನ್ನಾಗಿದ್ದರೂ ನಾಟಕಕ್ಕೆ ಮಾರಕವಾಗುವ ಸಂಭವವುಂಟು. ನಾಟಕಕ್ಕೆ ಅತಿಕ್ರಮ ಪ್ರವೇಶ ಮಾಡಿದ ಈ ಕಾದಂಬರಿಕಾರರು, ಕವಿಗಳು ಉತ್ತಮ ನಾಟಕಕಾರರೂ ಆಗಿದ್ದಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು, ಅವರ ಪ್ರಭಾವ ಅತ್ಯಂತ ಪ್ರಬಲವಾಗಿದ್ದದ್ದರಿಂದ, ನಾಟಕವೇ ಸಹಜ ಮಾಧ್ಯಮವಾಗಿದ್ದ ನಾಟಕಕಾರರೂ ಅದೇ ಪ್ರಭಾವಕ್ಕೊಳಗಾಗಿ ಅಂಥವೇ ತಪ್ಪುಗಳನ್ನು ಮಾಡಿದರು. ಎಡ್ಮಂಡ್ ರೋಸ್ಟ್ಯಾಂಡ್, ಫ್ರಾಂಕೊಂಡಿ ಕ್ಯುರೆಲ್ ಮತ್ತು ಟ್ರಸ್ಟ್ಯಾನ್ ಬರ್ನಾಟ್ ಈ ಶತಕದ ಫ್ರೆಂಚ್ ನಾಟಕರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ ಅವರ ಖ್ಯಾತಿ ಬಹುಕಾಲ ಉಳಿಯಲಿಲ್ಲ. ಜೀನ್ ಅನೌಯಿಲ್ (1910-), ಮಾರ್ಸೆಲ್ ಪ್ಯಾಗ್ನೊಲ್, ಹೆನ್ರಿರೆನೆಲಿನೊರ್ ಮ್ಯಾಂಡ್, ಸ್ಟೀವ್ ಪ್ಯಾಸ್ಯೂರ್, ಸಾಚಾ ಗಿಟ್ರೆ 1930ರಿಂದೀಚೆಯ ಪ್ರಸಿದ್ಧ ನಾಟಕಕಾರರು.

1950ರಿಂದೀಚೆಗೆ ಫ್ರೆಂಚ್ ಸಾಹಿತ್ಯ ತನ್ನ ಕೀರ್ತಿ-ಪ್ರತಿಷ್ಠೆಗಳನ್ನು ಉಳಿಸಿಕೊಂಡು ಬಂದಿದೆ. ಗದ್ಯದಲ್ಲಿ ತನ್ನ ಶ್ರೇಷ್ಠ ಪರಂಪರೆಯಲ್ಲೆ ನಡೆಯುತ್ತ ಹೆಚ್ಚು ಸಂಪುಷ್ಟಿಯನ್ನು ಪ್ರಗತಿಯನ್ನೂ ಸಾಧಿಸಿದೆ. ಕಾವ್ಯದಲ್ಲಿ ಬೊದಿಲೇರ್ ಮತ್ತು ಮಲ್ಲಾರ್ಮೆ ಅವರ ನವ್ಯ ಪಂಥ. ಹಳೆಯ ಸಂಪ್ರದಾಯ ಪರಂಪರೆಗಳನ್ನು ತೊಡೆದುಹಾಕಿ, ಜಗತ್ತಿನ ಎಲ್ಲ ನಾಗರಿಕ ದೇಶಗಳ ಸಾಹಿತ್ಯದಲ್ಲೂ ಕ್ರಾಂತಿಕಾರಕ ಬದಲಾವಣೆಯನ್ನು ಪ್ರಚೋದಿಸಿದೆ. ಮಲ್ಲಾರ್ಮೆಯಿಂದ ಪಾಲ್ ವೇಲರಿವರೆಗೂ ಆಗಿ ಹೋದ ಫ್ರೆಂಚ್ ಕವಿಗಳ ಅನುಕರಣೆಯಿಂದಾಗಿ ಕಾವ್ಯ ಎಲ್ಲ ಕಡೆಯೂ ಕ್ಲಿಷ್ಟವೂ ಅಸ್ಪಷ್ಟವು ಆಗಿ ಸಾಧಾರಣ ಸಹೃದಯರಿಗೆ ಅಗ್ರಾಹ್ಯವಾಗಿದೆ. ರಸಾಸ್ವಾದಕ್ಕೆ ವಿಶೇಷವಾದ ಶ್ರಮ, ಪಾಂಡಿತ್ಯ, ಸಿದ್ಧತೆ ಅಗತ್ಯವಾಗಿದೆ.

1950ರ ದಶಕದಲ್ಲಿ ಒಂದು ಬಗೆಯ ಗೊಂದಲದ ವಾತಾವರಣವೇ ಕಾಣುತ್ತದೆ. ಹೊಸ ಹೊಸ ಸಾಹಿತ್ಯ ಪ್ರಯೋಗಗಳನ್ನು ದಾರಿಗಳನ್ನೂ ಹುಡುಕುವ ಉತ್ಸಾಹದಲ್ಲಿ ಕೆಲವರಿದ್ದರೆ, ಇನ್ನು ಕೆಲವರು ಆಧ್ಯಾತ್ಮಿಕ ಮೌಲ್ಯಗಳ ಕಡೆ ತಿರುಗುವ, ಮತ್ತೆ ಕೆಲವರು ಆಧ್ಯಾತ್ಮಿಕ ಹಾಗೂ ರಾಜಕೀಯ ಎರಡರಿಂದಲೂ ಸಾಹಿತ್ಯವನ್ನು ಮುಕ್ತಗೊಳಿಸುವ ಹವಣಿಕೆಯಲ್ಲಿರುವುದು ಕಂಡುಬರುತ್ತದೆ. )

ಎರಡನೆಯ ಮಹಾಯುದ್ಧದ ನಂತರ ಶೆನೆ ಷಾರ್ (ಅhಚಿಡಿ), ಜೂಲ್ಸ್ ಸುಪರ್‍ವೀಲೆ, ನೈಸ್ ಬಾನಿಫಾಯ್ ಮೊದಲಾದ ಕವಿಗಳು ಸಾಂಪ್ರದಾಯಿಕ ವಸ್ತುಗಳಿಗೆ ಮತ್ತು ಪ್ರಕಾರಗಳಿಗೆ ಅಂಟಿಕೊಂಡರು. ಆದರೆ ಹಲವರು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಫಿಲಸ್ ಜಕೊತೆಯ್ ಕವನಗಳಿಗೆ ಜಪಾನಿನ ಹೈಕು ಪ್ರಕಾರವೇ ಸ್ಫೂರ್ತಿ. ಮಾಸಿಲಿನ್ ಪ್ಲೆನೆ ಮುಂತಾದವರು ಹೊಸದೊಂದು ಪಂಥವನ್ನು ಪ್ರಾರಂಭಿಸಿದ್ದಾರೆ. ಕಾವ್ಯದ ಕಾವ್ಯಾಂಶ ಇವರಿಗೆ ಬೇಕಿಲ್ಲ, ಭಾಷೆಯು ಸಂವಹನ ಮಾಡುವ ಅರ್ಥದಲ್ಲಿ ಇವರಿಗೆ ಆಸಕ್ತಿ ಇಲ್ಲ. ಭಾಷೆಯನ್ನು ಸಂಜ್ಞೆಗಳ ವ್ಯವಸ್ಥೆಯಾಗಿ ಇವರು ಕಾಣುತ್ತಾರೆ. 20ನೆ ಶತಮಾನದ ಉತ್ತರಾರ್ಧದಲ್ಲಿ ಶ್ರೇಷ್ಠ ಕವಿ ಯಾರೂ ಮೂಡಿ ಬರಲಿಲ್ಲ.

ವಿಮರ್ಶಾ ಕ್ಷೇತ್ರ

[ಬದಲಾಯಿಸಿ]

ವಿಮರ್ಶಾ ಕ್ಷೇತ್ರದಲ್ಲಂತೂ ಫ್ರಾನ್ಸನ್ನು ಮೀರಿಸುವ ದೇಶ ಈ ಶತಕದಲ್ಲಿ ಮತ್ತೊಂದಿರಲಿಲ್ಲ. ಬಾಯ್ಲೋನಿಂದ ರೆಮಿ ಡಿ ಗೌರ್ಮಾಂಟ್‍ವರೆಗೆ ಬಂದ ಎಲ್ಲ ವಿಮರ್ಶಕರೂ ಈಚಿನ ಕಿರಿಯ ತರುಣ ವಿಮರ್ಶಕರೂ ವಿರ್ಮಶೆಯ ಸರ್ವಾಂಗೀಣ ಬೆಳವಣಿಗೆಯನ್ನು ಹಂತ ಹಂತವಾಗಿ ಸಾಧಿಸುತ್ತ ಬಂದಿದ್ದಾರೆ. ಅತ್ಯುತ್ಕøಷ್ಟವೂ ಸೃಜನಾತ್ಮಕವೂ ಆದ ಫ್ರೆಂಚ್ ವಿಮರ್ಶೆಯ ಪ್ರಭಾವದಿಂದ ಸಾಹಿತ್ಯದ ಎಲ್ಲ ಪ್ರಕಾರಗಳೂ ಸರಿಯಾದ ರೀತಿಯಲ್ಲಿ ಬೆಳೆದುವು. ಸೇಂಟ್ ಬವ್, ರೆನಾನ್, ಟೇಯ್ನ್, ಷೆರರ್, ಸಾರ್ಸಿ-ಈ ಶ್ರೇಷ್ಠ ವಿಮರ್ಶಕರ ಪರಂಪರೆಗೆ ಈಗಲೂ ಚ್ಯುತಿ ಇಲ್ಲ. ಎಮಿಲ್ ಫಾಗ್ವೆಟ್, ಫರ್ಡಿನೆಂಡ್ ಬ್ರನೆಟಿಯೆರ್, ಜೂಲ್ಸ್‍ಲ್ಸ್ ಮೇಯ್ಟರ್, ರೆಮಿ ಡಿ ಗೌರ್ಮಾಂಟ್, ಚಾಲ್ರ್ಸ ಪೆಗೈ, ಲಿಯೋನ್ ಡಾಡೆಟ್, ಚಾಲ್ರ್ಸ ಮೌರ್ರಾಸ್ ವಿಮರ್ಶಾ ಸಾಹಿತ್ಯದ ಅಧ್ವರ್ಯುರುಗಳು. ಎಮಿಲ್ Z್ಫರ್ಟಿಯರ್, ಅಲೇನ್, ಹೆನ್ರಿ ಬ್ರಿಮಂಡ್, ಜೂಲಿಯನ್ ಬೆಂಡಾ ಪ್ರಸಿದ್ಧ ಸಾಹಿತ್ಯ ಪ್ರಬಂಧಕಾರರು. ಬ್ರನೆಟಿಯೆರ್, ಫಾಗ್ವೆಟ್, ಅನಾತೋಲ್ ಫ್ರಾನ್ಸ್, ಕಿರಿಯ ಪ್ರಾಯದಲ್ಲೇ ಗತಿಸಿದ ಮಾರ್ಸೆಲ್ ಷ್ವೋಬ್, ಎಮಿಲ್ ಹೆನೆಕ್ವಿನ್ ವಿಮರ್ಶಾಸಾಹಿತ್ಯವನ್ನು ಹೊಸ ಹೊಸ ದೃಷ್ಟಿಕೋನಗಳ ವಿಚಾರಧಾರೆಗಳಿಂದ ಶ್ರೀಮಂತಗೊಳಿಸಿದುದು ಮಾತ್ರವಲ್ಲ ಪ್ರೆಂಚ್ ಮತ್ತು ಇತರ ಸಮಕಾಲೀನ ಐರೋಪ್ಯ ಸಾಹಿತ್ಯಗಳ ಸಾಧನೆ. ಸಿದ್ಧಿಗಳ ಮೌಲ್ಯ ನಿರ್ಣಯವನ್ನೂ ಸಮರ್ಪಕವಾಗಿ ಮಾಡಿದರು. ಹೀಗಾಗಿ ವಿಮರ್ಶೆಯಲ್ಲಿ ಇಡೀ ವಿಶ್ವ ಸಾಹಿತ್ಯವೇ ಫ್ರೆಂಚ್ ವಿಮರ್ಶಾತತ್ವಗಳಿಗೆ ಋಣಿ.


ಇದನ್ನೂ ನೋಡಿ

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: