ವಿಷಯಕ್ಕೆ ಹೋಗು

ಫ್ರೆಂಚ್ ವಿಮರ್ಶೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಫ್ರೆಂಚ್ ಭಾಷೆ 9ನೆಯ ಶತಮಾನದಲ್ಲಿಯೆ ಬೆಳೆದು ಬಂದು 10ನೆಯ ಶತಮಾನದಲ್ಲಿ ವೃದ್ದಿ ಹೊಂದಿದ್ದರೂ ಗಮನೀಯ ಸಾಹಿತ್ಯ ಕಾಣಿಸುವುದು 11ನೆಯ ಶತಮಾನದಲ್ಲಿ. ಅಲ್ಲಿಂದ ಮೂರೂವರೆ ಶತಮಾನ ಕಾವ್ಯ, ನಾಟಕ, ಭಾವಗೀತೆ, ವಿಡಂಬನ, ಚರಿತ್ರೆ ಇತ್ಯಾದಿ ಪ್ರಕಾರಗಳನ್ನು ಸಂತತವಾಗಿ ಯಥೇಷ್ಟವಾಗಿ ರೂಢಿಸಲಾಯಿತು. ಅಷ್ಟೊಂದು ವಿಪುಲವಾದ ಮಧ್ಯಯುಗದ ಸಾಹಿತ್ಯದಲ್ಲಿ ವಿಮರ್ಶೆಯೆಂದು ಕರೆಯಬಹುದಾದ ಲೇಖನ ಇರಲೇ ಇಲ್ಲವೆಂದು ಕೆಲವು ತಜ್ಞರ ಅಭಿಪ್ರಾಯ. ಆದನ್ನು ಒಪ್ಪುವುದು ಕಷ್ಟ. ಏತಕ್ಕೆಂದರೆ ವಿಚಾರಶೀಲತೆ ಫ್ರೆಂಚ್ ಕವಿಗಳಲ್ಲಿ ಬೇರೂರಿರುವಷ್ಟು ಯೂರೋಪಿನ ಮಿಕ್ಕ ಕವಿಗಳಲ್ಲಿ ಇಲ್ಲವೆಂಬುದು ಅಂಗೀಕೃತ ತತ್ತ್ವ. ಯುಕ್ತ ಮಾದರಿಗಳನ್ನು ಪರಿಶೀಲಿಸಿ ಮೇಲ್ಪಂಕ್ತಿಗಳನ್ನಾಗಿಸಿಕೊಂಡು ಕಾವ್ಯ ಕಟ್ಟಿದವರಿಗೆ ಅಲ್ಪಸ್ವಲ್ಪ ತಾರತಮ್ಯ ವಿವೇಚನೆ ಇದ್ದೇ ಇದ್ದಿರಬೇಕು. ಕಾವ್ಯಕೃತಿಯ ವಸ್ತುವಿಗಿಂತಲೂ ಹೆಚ್ಚಾಗಿ ಆಕೃತಿಯ ಕಡೆಗೇ ಮಧ್ಯಯುಗದ ಸಾಹಿತಿಗಳ ಲಕ್ಷ್ಯವಿತ್ತು.

ಅಲಂಕಾರಶಾಸ್ತ್ರ[ಬದಲಾಯಿಸಿ]

ಗೀಯೋಮ್ ಡ ಮಾಶೊ ಎಂಬ 14ನೆಯ ಶತಮಾನದ ಕವಿ ಪ್ರಚಾರಕ್ಕೆ ತಂದ ಬಲಾದ್ ಮತ್ತು ರಾನ್ದೊ ಪಂಕ್ತಿಪುಂಜಗಳನ್ನು ಬಹುವಾಗಿ ಬೆಳೆಸಿಕೊಂಡ ಕೀರ್ತಿ ಆತನ ಸಂಬಂಧಿ ಯೂಸ್ಟೇಶ್ ಡೆಷಾಂಪ್‍ಗೆ ಸಲ್ಲುತ್ತದೆ. ಆಗಿನ ಪಂಡಿತವರ್ಗ ಭಾಷಣಕಲೆ ಕಾವ್ಯಮೀಮಾಂಸೆ ಎರಡನ್ನೂ ಒಳಗೊಂಡ ತತ್ತ್ವ ವಿಚಾರಣೆಯನ್ನು ಅಲಂಕಾರಶಾಸ್ತ್ರ ಎನ್ನುತ್ತಿದ್ದರು. ಡೆಷಾಂಪ್ ಒಂದು ಕೈಪಿಡಿಯನ್ನು ಹೊರತಂದರೆ; ಆದರ ತುಂಬ ಬಲಾದ್ ರಾನ್ದೊ ಮತ್ತು ಇತರ ಪಂಕ್ತಿಪುಂಜಗಳ ವಿವರಣೆಯೇ; ಮುಖ್ಯವಾಗಿ ಅಂತ್ಯಪ್ರಾಸ ಮತ್ತು ಯತಿಗಳ ಚರ್ಚೆ. ಆಮೇಲೆ ಆಲಂಕಾರಿಕರು ಎಂಬೊಂದು ಕವಿಪಂಥ ಏರ್ಪಟ್ಟಿತು. ಅವರಲ್ಲಿ ಒಬ್ಬನಾದ ಜೀನ್ ಮೋಲಿನೆ ಅಲಂಕಾರ ಕಲೆ ಎಂಬ ಗ್ರಂಥವನ್ನು ರಚಿಸಿದ. ಆ ಪಂಥ ಅಂಗೀಕರಿಸಿದ ಸೂತ್ರಗಳು ಇವು: ಪ್ರಾಮಾಣಿಕವಾದ ಭಾವೋದ್ರೇಕ ಕವಿಗೆ ಅಗತ್ಯವಿಲ್ಲ. ಅದರ ಸೋಗು ಸಾಕು, ಪ್ರಕೃತಿ ಪ್ರಪಂಚವನ್ನು ಅಸಡ್ಡೆಗೈಯತಕ್ಕದ್ದು; ಲ್ಯಾಟಿನ್ ಸಾಹಿತ್ಯವೇ ಮೆಚ್ಚತಕ್ಕ ಮತ್ತು ಮಾರ್ಗ ತೋರಿಸುವ ಸಾಹಿತ್ಯ; ಹಳೆಯ ಪರಿಚಿತ ವಿಷಯಗಳನ್ನೇ ಆರಿಸಿಕೊಳ್ಳತಕ್ಕದ್ದು; ಅನ್ಯಾರ್ಥ ಸ್ವಪ್ನ ಸಂಕೇತ ಆದಿ ಕಥಾವಳಿಗಳನ್ನು ಉಪಯೋಗಿಸಿಕೊಂಡು ಕಾವ್ಯ ಬೋಧಿಸಬೇಕು; ಛಂದೋವಿಚಾರಕ್ಕೂ ಪ್ರಾಸದ ಸಂಕೀರ್ಣತೆಗೂ ವಿಶೇಷ ಶ್ರದ್ಧೆ ಅತ್ಯಗತ್ಯ. ಆಲಂಕಾರಿಕರು ಫ್ರಾನ್ಸಿನ ಬೌದ್ಧಿಕ ಯಾಜಮಾನ್ಯ ತಮ್ಮ ಕೈಯಲ್ಲಿದೆಯೆಂದು ಗರ್ವ ಪಡುತ್ತಿದ್ದರು.

ಪ್ಲೆಯಡೆ ಕಾವ್ಯತತ್ತ್ವ ಮತ್ತು ನವೀನ ಮಾರ್ಗ[ಬದಲಾಯಿಸಿ]

15ನೆಯ ಶತಮಾನದ ಮಧ್ಯಭಾಗದಲ್ಲಿ ಎದ್ದುಬಂದು ಹರಡಿ ಹಬ್ಬಿದ ಸಾಂಸ್ಕೃತಿಕ ಕ್ರಾಂತಿ ಬಹಳ ಪ್ರಭಾವಿಯಾದ್ದು. ಅದಕ್ಕೆ ಹೊಸಹುಟ್ಟು ಎಂಬ ಅಂಕಿತ. ಪ್ರಾಚೀನ ಗ್ರೀಕ್ ಲ್ಯಾಟಿನ್ ಗ್ರಂಥಗಳು ತಮ್ಮ ಮೂಲರೂಪದಲ್ಲಿ ಯೂರೋಪಿನ ವಿದ್ವಜ್ಜನರಿಗೆ ಲಭಿಸಿದುವು. 1470ರಲ್ಲಿ ಮುದ್ರಣವಿದ್ಯೆ ಜನ್ಮತಾಳಿತು: ಅದರ ಮೂಲಕ ಪುಸ್ತಕ ಜ್ಞಾನ ಅಪೇಕ್ಷಿಸಿದವರಿಗೆಲ್ಲ ದೊರಕಲಾರಂಭಿಸಿತು. ಜೊತೆಯಲ್ಲೆ ಉದ್ಭವಗೊಂಡ ಧಾರ್ಮಿಕ ಸುಧಾರಣೆ ಮತಧರ್ಮ ಜಿಜ್ಞಾಸೆಗೆ ಬಳಸುವ ಭಾಷೆಗೂ ಸಾಹಿತ್ಯದ ಭಾಷೆಗೂ ಇರುವ ವ್ಯತ್ಯಾಸವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕೊಟ್ಟಿತು. ಆ ಕೆಲಸವನ್ನು ಕೈಗೊಂಡು ನಿಜವಾದ ಸಾಹಿತ್ಯ ವಿಮರ್ಶೆಯನ್ನು ಸ್ಥಾಪಿಸಿದ ಹಿರಿಮೆ ಪ್ಲೆಯಡೆ ಗುಂಪಿಗೆ ಸೇರಿದ್ದು. ಏಳು ಕವಿಗಳ ಕೂಟವಾದ ಪ್ಲೆಯಡೆಗೆ ಸಿಯರ್ ದ ರಾನ್ಸಾ ಮುಖಂಡ, ಜೋಕಿಮ್ ಡು ಬೆಲೆ ಅದರ ಗಣ್ಯ ಸದಸ್ಯರಲ್ಲಿ ಒಬ್ಬ; ಕೂಟದ ಪ್ರಣಾಳಿಕೆಯನ್ನು ತಯಾರಿಸಿದವ ಆತ. ಅವರಿಬ್ಬರಿಗೂ ಇನ್ನೊಬ್ಬ ಸದಸ್ಯ ಬಾಈಫನಿಗೂ ಕ್ಲಾಸಿಕಲ್ ಸಾಹಿತ್ಯದ ಹುಚ್ಚು ಹಿಡಿಸಿದ ಮಹಾಪಂಡಿತನ ಹೆಸರು ಜೀನ್ ದೋರಾ; ಕೆಲವು ವಿಮರ್ಶಕರು ಅವನನ್ನೂ ಪ್ಲೆಯಡೆ ಸಂಘಕ್ಕೆ ಸೇರಿಸಿದ್ದಾರೆ; ಪ್ಲೆಯಡೆ ಗುಂಪು ಏಳು ಕಿರುನಕ್ಷತ್ರಗಳ ಗುಂಪಾದ್ದರಿಂದ ಪೆಲೆತಿಯರ್ ಎಂಬಾತನನ್ನು ಕಿತ್ತು ಹಾಕಿದ್ದಾರೆ. ಪ್ಲೆಯಡೆ ಸಾಧಿಸಿದ ಬದಲಾವಣೆಗಳಿಂದ ಫ್ರೆಂಚ್ ಸಾಹಿತ್ಯ ನವೀನ ಮಾರ್ಗಕ್ಕೆ ಪ್ರವೇಶಿಸಿದಂತಾಯಿತು. ಬದಲಾವಣೆಗಳು ಇವು: 1. ಮಧ್ಯಯುಗದ ಸಾಹಿತ್ಯ ಪದ್ಧತಿಯನ್ನೂ ಅದರ ಲಘುವೂ ಹುಡುಗಾಟದ್ದೂ ಆದ ವಿಷಯಗಳನ್ನೂ ಅದರ ಸೂಕ್ಷ್ಮಾತಿರೇಕ ರೀತಿಯನ್ನೂ ಸಂಪೂರ್ಣವಾಗಿ ತಳ್ಳಿಹಾಕಿದ್ದು. 2. ನವ್ಯ ಕವಿತೆಯ ನಿರ್ಮಾಣ. ಅದಕ್ಕೆ ಆಧಾರವೂ ಬೆಂಬಲವೂ ಪ್ರಾಚೀನ ಗ್ರೀಕ್ ಲ್ಯಾಟಿನ್ ಮತ್ತು ಇಟಾಲಿಯನ್ ಸಾಹಿತ್ಯದಿಂದ ಬರಬೇಕು. ಆ ಮಾದರಿಗಳನ್ನು ಅನುಸರಿಸಿ ಗಂಭೀರವೂ ಶ್ರೀಮಂತ ಕುಲೀನವೂ ಆದ ಕಥಾವಸ್ತುವನ್ನು ಪ್ರತಿಪಾದಿಸತಕ್ಕದ್ದು. 3. ತನ್ನ ಸ್ಥಾನಮಾನ ಅತ್ಯಂತ ಎತ್ತರದ್ದು ಎಂಬ ಸಂಗತಿಗಳನ್ನು ಕವಿ ಮರೆಯಬಾರದು. 4. ಗ್ರೀಕ್ ಲ್ಯಾಟಿನ್ ಶಬ್ದಗಳನ್ನು ಎರವಲು ಪಡೆದು ಹಳೆಯ ಫ್ರೆಂಚ್ ಮತ್ತು ಪ್ರಾಂತನುಡಿಗಳಿಂದಲೂ ವೃತ್ತಿಯವರ ಪರಿಭಾಷೆಯಿಂದಲೂ ಪದಗಳನ್ನು ಚುನಾಯಿಸಿಕೊಂಡು, ಸಾಹಿತ್ಯ ಭಾಷೆಗೆ ಪುಷ್ಟಿ ಒದಗಿಸತಕ್ಕದ್ದು. 5. ಛಂದಸ್ಸಿನ ವಿಚಾರದಲ್ಲಿ ಕೃತಕತೆ ಶುಷ್ಕತ್ವಗಳನ್ನು ತೊಡೆದುಹಾಕಿ ಕ್ರಮಬದ್ಧವೂ ಸ್ವತಂತ್ರವೂ ಆದ ಮರ್ಯಾದೆಯನ್ನು ಪಾಲಿಸತಕ್ಕದ್ದು. ಯತಿ, ಮುಂಚಾಚಿಕೆ, ಗಂಡು ಪ್ರಾಸ, ಹೆಣ್ಣು ಪ್ರಾಸ, ತಿರುಗುಮುರುಗು, 12 ಉಚ್ಚಾರಾಂಶದ ಅಲೆಕ್ಸಾಂಡ್ರಿನ್ ಪಂಕ್ತಿ ಮುಂತಾದುವನ್ನು ಕುರಿತು ಪ್ಲೆಯಡೆ ಗುಂಪು ನಿಗದಿ ಮಾಡಿದ ನಿಯಮಗಳು ಮುಂದಿನ ತಲೆಮಾರುಗಳ ಕವಿಗಳಿಗೂ ವಿಮರ್ಶಕರಿಗೂ ಸ್ವಾಗತಯೋಗ್ಯ ಎನಿಸಿದುವು. 6. ಫ್ರೆಂಚ್ ಭಾಷೆಯನ್ನೂ ಸಾಹಿತ್ಯವನ್ನೂ ಪ್ರಾಚೀನರ ಸಮಮಟ್ಟಕ್ಕೆ ಏರಿಸಲು ಪ್ರಯತ್ನಿಸಬೇಕು. ಡು ಬೆಲೆ 1549ರಂದು ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಕೆಲವು ವೈಪರೀತ್ಯಗಳಿದ್ದರೂ ಹಲವು ಹೇಳಿಕೆಗಳು ಸಾಹಿತ್ಯಕ್ಕೆ ತಕ್ಕುದಾದ ಸತ್ಯಾಂಶದಿಂದ ಕೂಡಿದ್ದುವು. ಆದರೆ 16ನೆಯ ಶತಮಾನದ ಅಂತ್ಯ ಸಮೀಪಿಸುತ್ತ ಬಂದಾಗ ಪ್ಲೆಯಡೆ ಕಾವ್ಯತತ್ತ್ವಕ್ಕೆ ಪ್ರಬಲ ವಿರೋಧ ಪ್ರಾರಂಭವಾಯಿತು.

ಪ್ರಾಚೀನರನ್ನು ಕಂಡು ವಿಪರೀತ ಗೌರವ ಮತ್ತು ದಾಸ್ಯಭಾವ, ಅಲಂಕಾರ ಮತ್ತು ಎರವಲಿನ ಹೆಚ್ಚಳ, ಭಾಷೆಯಲ್ಲೂ ಛಂದಸ್ಸಿನಲ್ಲೂ ಸಂಯಮರಹಿತ ಶೈಥಿಲ್ಯ-ಈ ಅಪೇಕ್ಷೆಗಳನ್ನು ಪ್ಲೆಯಡೆಯ ಮೇಲೆ ಹೊರಿಸಿ, ತಿದ್ದುಪಾಟು ಅತ್ಯಾವಶ್ಯಕವೆಂದು ಸಾರಿದವ ಫಾನ್ವ್ಸಾದ ಮಾಲ್‍ಹರ್ಬ್. ಅವನು 1605ರಲ್ಲಿ ಆಸ್ಥಾನಕವಿಯಾಗಿ ನೇಮಿತನಾದ. 17 ಮತ್ತು 18ನೆಯ ಶತಮಾನದುದ್ದಕ್ಕೂ ಫ್ರೆಂಚ್ ವಿಮರ್ಶೆಗೆ ಅವನೇ ಸೂತ್ರಧಾರ. ಅವನಿಂದ ಸೂಚಿತವಾಗಿ ಆಮೇಲೆ ಜಾರಿಗೆ ಬಂದ ಕಟ್ಟುನಿಟ್ಟು ಹೀಗಿತ್ತು: 1. ಕವಿಗೆ ಯಾವ ಸಡಿಲತೆಗೂ ಆಸ್ಪದ ಕೊಡದೆ ಬಲಿಷ್ಟವಾಗಿರಬೇಕು: ಸ್ವರಲೋಪ ಬರಕೂಡದು; ಪಂಕ್ತಿಯ ಮುಂಚಾಚಿಕೆ ನಿಷಿದ್ಧ; ಯತಿ ಅಧ್ಯಾಹಾರ ಪ್ರಾಸಗಳ ಬಗೆಗೆ ನಿಯಮಗಳು ಕಠಿಣವಾಗಿರತಕ್ಕದ್ದು. ಬರವಣಿಗೆ ಎಷ್ಟು ವ್ಯಾಕರಣಶುದ್ಧವಾಗಿದ್ದರೆ ಅಷ್ಟು ಒಳ್ಳೆಯದು. 2. ತನ್ನ ಭಾವ ಭಾವನೆಗಳನ್ನು ಕವಿ ಸ್ಪಷ್ಟವಾಗಿಯೂ ಖಚಿತವಾಗಿಯೂ ನಿರೂಪಿಸತಕ್ಕದ್ದು. 3. ಲ್ಯಾಟಿನ್ ಶಬ್ದ ಪ್ರಾಂತೀಯ ಶಬ್ದ ಮುಂತಾದುವನ್ನು ಉಪಯೋಗಿಸಲೇ ಕೂಡದು. ಪ್ಯಾರಿಸ್ ನಗರದ ಸಾಧಾರಣ ನುಡಿಗಟ್ಟನ್ನೇ ಬಳಸಬೇಕು. 4. ಭಾಷಾಭೂಷಣಗಳಿಗೂ ನವ್ಯತೆಗಳಿಗೂ ಮನಸ್ಸು ಕೊಡಲೇಬಾರದು. ನಿರ್ದಿಷ್ಟ ವಾಕ್ಕೂ ತಿಳಿಯಾದ ಅರ್ಥವೂ ಏಕೈಕ ಧ್ಯೇಯವಾಗಿರತಕ್ಕದ್ದು.

ನವಶಿಷ್ಟಯುಗ[ಬದಲಾಯಿಸಿ]

ಸುಮಾರು 1590ರಿಂದ 1715ರವರೆಗಿನ ಕಾಲವನ್ನು ತಮ್ಮ ಸಾಹಿತ್ಯದ ಶಿಷ್ಟ ಯುಗವೆಂದು ಫ್ರೆಂಚರು ಹೇಳಿಕೊಳ್ಳುತ್ತಾರೆ. ಇತರರು ಅದನ್ನು ನವಶಿಷ್ಟಯುಗ ಎಂದು ಕರೆಯುತ್ತಾರೆ. ಅದು ಮೂರು ಅವಧಿಗಳಿಂದ ಕೂಡಿದ್ದು; 1590-1660-ಸ್ಥಾಪನೆಯ ಸಮಯ, 1660-1690-ಉಚ್ಛ್ರಾಯ ಕಾಲ, 1690-1715-ಇಳಿಗಾಲ ಅಥವಾ ಸಂಧಿಕಾಲ. ಶಿಷ್ಟ ಸಂಪ್ರದಾಯವನ್ನು ಸ್ಥಾಪಿಸುವ ಉದ್ಯಮಕ್ಕೆ ಮೊದಲಿಗರಾದವರಲ್ಲಿ ಮಾಲ್‍ಹರ್ಬ್ ಒಬ್ಬ ಮತ್ತು ಪ್ರಭಾವಶಾಲಿ. ಆದರೆ ಅವನಿಂದ ಸಮರ್ಥ ಸೂಚನೆಗಳು ಬಂದುವೇ ವಿನಾ ವ್ಯವಸ್ಥಿತ ನಿಯಮಾವಳಿ ಬರಲಿಲ್ಲ. ಅದು ರಚಿತವಾಗಿ ತನ್ನ ಆಧಿಪತ್ಯ ಹೂಡುವುದಕ್ಕೆ ನ್ಯಾಯವಾಗಿಯೆ ಹಲವು ದಶಕಗಳು ಹಿಡಿದವು. 1633-37ರಲ್ಲಿ ರೂಪುಗೊಂಡು ಅಧಿಕೃತ ಸಂಸ್ಥೆಯಾದ ಫ್ರೆಂಚ್ ಅಕಾಡೆಮಿ ಶಿಷ್ಟತೆಯನ್ನು ಕಾಪಾಡಿಕೊಳ್ಳುವ ಕಾವಲುನಾಯಿಯಾಯಿತು. ಅದರ 40 ಸದಸ್ಯರಲ್ಲಿ ಒಬ್ಬನಾದ ಮೌಗೆಲಾಸ್ ಪ್ರಸಿದ್ಧ ವೈಯಾಕರಣಿ. ಬಳಕೆಯ ಪದಗಳನ್ನೇ ಉಪಯೋಗಿಸಬೇಕೆಂದು ಅವನ ಉಪದೇಶ; ಬಳಕೆ ಎಂದರೆ ಸುಶಿಕ್ಷಿತರ ಬಳಕೆ. ಶೈಲಿ ಶುದ್ಧವೂ ಸ್ಪಷ್ಟವೂ ಹಾಳಿತವೂ ಆಗಿರಬೇಕೆಂಬುದೂ ಅವನ ಹೇಳಿಕೆ. ಬಾಲ್ಜಾಕ್ ಕೂಡ ಶುದ್ಧ ಶೈಲಿಯನ್ನೇ ಅನುಮೋದಿಸಿದ. ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಕವಿಗಳು ಕವಿತೆಯ ಶಿಖರವನ್ನು ಮುಟ್ಟಿದವರೆಂಬ ಸಿದ್ಧಾಂತ ಅನೇಕರಿಗೆ ಚರ್ಚಾಸ್ಪದವೇ ಆಗಿರಲಿಲ್ಲ. ಅವರನ್ನು ಮೇಲ್ಪಂಕ್ತಿಯಾಗಿ ಇರಿಸಿಕೊಳ್ಳುವುದು ಸರಿ ಎಂಬ ಅನುಸಿದ್ಧಾಂತಕ್ಕೂ ಸಮ್ಮತಿ ಇತ್ತು. ಭವ್ಯಕಾವ್ಯಕ್ಕೆ ಹೋಮರ್ ವರ್ಜಿಲರೂ ಲಘುಕಾವ್ಯಕ್ಕೆ ವರ್ಜಿಲ್ ಹಾರೆಸ್ಸರೂ ಇರುವಾಗಿ ಅವರ ದಾರಿಯನ್ನು ಬಿಟ್ಟು ಬೇರೆ ಹೊರಳುವುದೇತಕ್ಕೆ? ಬೇರೆ ಹೋದ ಇಟಲಿಯ ಅರಿಯಾಸ್ಟೋನ ಸುದೀರ್ಘ ಕಾವ್ಯದಿಂದ ಏನು ಆನಂದ ಉಂಟಾದೀತು? ನಾಟಕದ ವಿಚಾರವಾಗಿ ಪ್ರಾಚೀನರ ಪದ್ಧತಿ ಅನುಸರಣೆಗೆ ಕೊಂಚ ತ್ರಾಸ ಕೊಡುವಂತೆ ಕಾಣಿಸಿತು. ಮಿತಸಂಖ್ಯೆಯ ಪಾತ್ರವರ್ಗ, ಗಾಂಭೀರ್ಯ ಹಾಸ್ಯಗಳನ್ನು ಪ್ರತ್ಯೇಕವಾಗಿಡುವಿಕೆ, ಐದು ಅಂಕಗಳ ವಸ್ತುವಿನ್ಯಾಸ, ಇತ್ಯಾದಿಯಿಂದ ಕವಿಗಳಿಗೆ ಹೆಚ್ಚು ತೊಂದರೆ ಉಂಟಾಗಲಿಲ್ಲ. ಆದರೆ ಮೂರು ಏಕತೆಗಳು ವಿವಾದವನ್ನು ಕೆರಳಿಸಿದುವು. ಓಜಿಯರ್ ಮುಂತಾದ ಕೆಲವೇ ಕೆಲವರು ನಾಟಕದ ಕಾರ್ಯಾವಳಿಯೆಲ್ಲ ಒಂದೇ ಸ್ಥಳದಲ್ಲಿ ನಡೆದಂತೆಯೂ 24 ಗಂಟೆಗಳ ಒಂದೇ ದಿವಸದಲ್ಲಿ ಜರುಗಿದಂತೆಯೂ ಕವಿ ನಿಯಂತ್ರಿಸುವುದು ಅಸಾಧ್ಯ. ಹಾಗೆ ನಿಯಂತ್ರಿಸಿದರೆ ಅದು ಅಸಹಜವಾಗುತ್ತದೆ ಎಂದು ವಾದಿಸಿದರು. ಅವರಿಗೆದುರಾಗಿ ಚಾಪಿಲೇನ್ ಡೌಬಿಗ್ನಾಕ್ ಸ್ಕೂಡೆರಿ ಮೊದಲಾದವರು ವಿಮರ್ಶಕ ಮೌಳಿ ಅರಿಸ್ಟಾಟಲನನ್ನು ಮುಂದಿಟ್ಟುಕೊಂಡು ಏಕತೆಗಳ ಪರವಾಗಿ ಕೂಗೆಬ್ಬಿಸಿದರು. ತಾವು ಅರಿಸ್ಟಾಟಲನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ನಿಜಾಂಶ ಅವರ ಅರಿವಿಗೆ ಬರಲೇ ಇಲ್ಲ. ಅಂತೂ ಮೂರು ಏಕತೆಗಳು ಎಂಬ ವಿಧಿ ಕಬ್ಬಿಣದ ಕಟ್ಟಾದರೂ ಕಡ್ಡಾಯವಾಯಿತು. ಅದನ್ನು ಉಲ್ಲಂಘಿಸಿದೆಯೆಂಬ ಕಾರಣದಿಂದ ಕಾರ್ನೀಲನ ಲುಸಿಡ್ ಎಂಬ ಅತ್ಯುತ್ತಮ ರೂಪಕ ಅಕಾಡೆಮಿಯ ಆಗ್ರಹಕ್ಕೂ ಖಂಡನೆಗೂ ಗುರಿಯಾಯಿತು. ತಾನು ಮಾಡಿದ್ದು ತಪ್ಪೆಂದು ಕಾರ್ನೀಲನೆ ಒಪ್ಪಿಕೊಂಡ. ಏತಕ್ಕೆಂದರೆ ಸರ್ವಾಧಿಕಾರದ ದಬ್ಬಾಳಿಕೆಯ ರಿಷ್‍ಲೂ ಅಕಾಡೆಮಿ ಆ ಖಂಡನೆಯ ಠರಾವನ್ನು ಪೋಷಿಸಬೇಕೆಂದು ಸಂಕಲ್ಪಿಸಿದ್ದ.

ಐವತ್ತು ಅರುವತ್ತು ವರ್ಷದ ಸಾಮೂಹಿಕ ಮಥನದಿಂದ ಹೊರಬಂದ ಸಾಹಿತ್ಯ ಸೂತ್ರಗಳನ್ನು ಕ್ರೋಢೀಕರಿಸಿ ಉಚಿತ ರೀತಿಯಲ್ಲೂ ಉತ್ಕøಷ್ಟ ಭಾಷೆಯಲ್ಲೂ ಅವುಗಳಿಗೆ ಆಕಾರ ಕೊಟ್ಟು ಅನುಪಮ ನಿಬಂಧನೆಯನ್ನು ಒದಗಿಸಿದ ಯಶಸ್ಸು ನಿಕೊಲಸ್ ಬ್ವಾಲೊಗೆ ಮೀಸಲು. 1674ರಲ್ಲಿ ಪ್ರಕಟವಾದ ಅವನ ಕಾವ್ಯಕಲೆ ಬಹುಕಾಲ ವಿಮರ್ಶೆಯ ಪ್ರಸ್ಥಾನ ಗ್ರಂಥಗಳಲ್ಲಿ ಒಂದಾಗಿತ್ತು. ಅದೊಂದು ಉಪದೇಶ ಕಾವ್ಯ ಪದ್ಯರೂಪದ ನಾಲ್ಕು ಪರಿಚ್ಛೇದಗಳಿಂದ ಆಗಿದೆ. ಮೊದಲನೆಯದರಲ್ಲಿ ಕಾವ್ಯರಚನೆಯ ಸಾಧಾರಣ ತತ್ತ್ವಗಳ ಪ್ರತಿಪಾದನೆಯಿದೆ. ಕವಿಗೆ ಅಗತ್ಯವಾದದ್ದು ಯುಕ್ತ ವಿವೇಕ ತಿಳಿಯಾದ ಆಲೋಚನೆ ನೈಸರ್ಗಿಕತೆ ಮತ್ತು ನಿಯಮಾವಳಿಯನ್ನು ಪಾಲಿಸುವುದು. ಎರಡನೆಯದರಲ್ಲಿ ಪ್ರಗಾಥ ಗ್ರಾಮೀಣಕಥೆ ಶೋಕಗೀತ ಮುಂತಾದ ಕಾವ್ಯಪ್ರಭೇದಗಳ ವಿವರಣೆಯಿದೆ. ಅವುಗಳಲ್ಲೆಲ್ಲ ಪ್ರಾಚೀನರ ಪದ್ಧತಿಯನ್ನೆ ಹಿಂಬಾಲಿಸತಕ್ಕದ್ದು. ಮೂರನೆಯ ಪರಿಚ್ಛೇದ ಟ್ರಾಜಡಿ ಮತ್ತು ಕಾಮಿಡಿಗಳನ್ನು ಕುರಿತದ್ದು, ಪ್ರಾಸಂಗಿಕವಾಗಿ ಏಕತೆಗಳ ಚರ್ಚೆ ಬರುತ್ತದೆ. ಭವ್ಯಕಾವ್ಯವನ್ನು ವಿವರಿಸುತ್ತ ಬ್ವಾಲೊ ಅದಕ್ಕೆ ಕ್ರಿಶ್ಚನ್ ಮತಕ್ಕೆ ಸಂಬಂಧಿಸಿದ ವಿಷಯಗಳೂ ದೇಶದ ಚರಿತ್ರೆಗೆ ಸಂಬಂಧಿಸಿದ ವಿಷಯಗಳೂ ಹೊಲ್ಲ ಎಂದು ಸ್ಪಷ್ಟಪಡಿಸುತ್ತಾನೆ. ನಾಲ್ಕನೆಯದರಲ್ಲಿ ಕವಿಗೆ ಆವಶ್ಯಕವಾದ ಸಾಧಾರಣ ಬುದ್ಧಿವಾದ ತುಂಬಿಕೊಂಡಿದೆ. ಮುಖ್ಯವಾಗಿ ಅವನು ತನ್ನ ವೃತ್ತಿಯ ಉದಾತ್ತತೆಯನ್ನೂ ಮಹಿಮೆಯನ್ನೂ ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಬ್ವಾಲೋನ ಶ್ರದ್ಧೆ ಒಳ್ಳೆಯ ಬರವಣಿಗೆಯ ಕಡೆಗೇ ನೆಟ್ಟಿತ್ತು. ಶುಷ್ಕ ಪಾಂಡಿತ್ಯ ಪಟಾಟೋಪ ನೀರಸತೆಗಳೆಂದರೆ ಅವನಿಗೆ ತುಂಬ ಅಸಹ್ಯ, ಅವನ್ನು ನೇರ ನುಡಿಗಳಿಂದ ಧಿಕ್ಕರಿಸಿದ. ಸಾಹಿತ್ಯ ಶಾಸಕನೆಂದು ಅವನನ್ನು ಸಮಸ್ತರೂ ಗೌರವಿಸಿದರು.

ಯಾವ ಹೊಸ ವಿಧಿಯನ್ನೂ ಬ್ವಾಲೋ ನಿರ್ಮಿಸಲಿಲ್ಲ. ಹೊಸ ತಂತ್ರವನ್ನೂ ಕಂಡುಹಿಡಿಯಲಿಲ್ಲ. ಸುಮಾರು 1650ರ ಹೊತ್ತಿಗೆ ಸುಸಂಸ್ಕೃತ ವರ್ಗ ಆಲೋಚಿಸಿ ಚರ್ಚೆಗೈದು ಹೆಚ್ಚು ಕಡಿಮೆ ಒಮ್ಮತದಿಂದ ಅಂಗೀಕರಿಸಿದ್ದ ಅಭಿಪ್ರಾಯಗಳಿಗೆ ಗ್ರಂಥರೂಪದ ಮಾನ್ಯತೆ ತಂದುಕೊಟ್ಟ. ವಿಧಿಗಳೂ ತಂತ್ರಗಳೂ, ಎದ್ದುಬಂದದ್ದು ಹೆಸರಾಂತ ಸಾಹಿತಿಗಳು ಎಡೆಬಿಡದೆ ಗೋಷ್ಠಿಯಲ್ಲಿ ಭಾಗವಹಿಸಿ ವಾದ ವಿವಾದ ನಡೆಸುತ್ತಿದ್ದುದರಿಂದ. ಅಂಥ ಗೋಷ್ಠಿಗೆ ಸೆಲಾನ್ ಎಂದು ಅಂಕಿತ. ಬಹಳ ಪ್ರಖ್ಯಾತ ಗೋಷ್ಠಿ ಸೇರುತ್ತಿದ್ದುದು ಪ್ರಭುವಿದ ರಾಮ್ಬೂಯಿಯ ಉನ್ನತ ಸೌಧದಲ್ಲಿ. ವಾರಕ್ಕೊಮ್ಮೆಯಾದರೂ ಅಲ್ಲಿ ಮಾಲ್‍ಹರ್ಬ್, ರಾಕಾನ್, ವೌಗಲಾಸ್, ಚಾಪಿಲೇನ್ ವಾಯ್ತೂರ್, ಸೇಂಡ್ ಎವ್ರಿಮಾನ್, ಸ್ಕೂಡೆರಿ, ಮಾನಾಜ್, ರಾಷ್‍ಫೂಕೊ, ಬಾಸುಎ ಮೊದಲಾದವರು ಗುಂಪಾಗಿ ಸಾಮಾಜಿಕ ಮತ್ತು ಸಾಹಿತ್ಯಕ ವಿಚಾರಗಳನ್ನು ಆಸಕ್ತಿಯಿಂದ ಪರಿಶೀಲಿಸುತ್ತಿದ್ದರು. ಸುಮಾರು 1661 ರಿಂದ 1715ರವರೆಗೆ ಹದಿನಾಲ್ಕನೆಯ ಲೂಯಿಯ ಆಸ್ಥಾನದ ಒಳಕೊಠಡಿಗಳೇ ಭಾರಿ ಸೆಲಾನ್ ಆದುವು. ಆತನ ಅರಸೊತ್ತಿಗೆ ಯುದ್ಧ ವಿಜಯಗಳಿಗೆ ಹೇಗೋ ಹಾಗೆ ಕಲೆ ಸಾಹಿತ್ಯಗಳ ಮುನ್ನಡೆಗೂ ಖ್ಯಾತವಾಯಿತು. 18ನೆಯ ಶತಮಾನದ ದ್ವಿತೀಯ ಭಾಗದಲ್ಲಿ ಖಾಸಗಿ ಸೆಲಾನ್‍ಗಳು ಮತ್ತೆ ಕಾರ್ಯತತ್ಪರವಾದುವು. ಅವುಗಳಲ್ಲಿ ಕೆಲವು ಕಲೆ ಕಾವ್ಯ ವಿಮರ್ಶೆಗೇ ಸೀಮಿತವಾದವು.

ಕಾವ್ಯಸೂತ್ರಗಳ ಹಿಡಿತ ಬಿಗಿಯಾದ್ದಕ್ಕೆ ಸಾಹಿತಿಗಳು ಮಾತ್ರವೇ ಕಾರಣರಲ್ಲ. ಒಳಜಗಳದಿಂದ ನೊಂದು ನಲುಗಿ ರೋಸಿಹೋಗಿದ್ದ ಫ್ರಾನ್ಸು ರೋಮನ್ ಕ್ಯಾಥೋಲಿಕ್ ಮತಧರ್ಮದ ಕಟ್ಟುನಿಟ್ಟನ್ನು ಇಚ್ಛೆಪಟ್ಟು ಅವಲಂಬಿಸಿತು; ಹಾಗೆಯೇ ಹದಿನಾಲ್ಕನೆಯ ಲೂಯಿಯ ನಿರಂಕುಶ ರಾಜ್ಯಭಾರವನ್ನೂ ಎದುರಾಡದೆ ಒಪ್ಪಿಕೊಂಡಿತು. ಲಲಿತಕಲೆಗಳಲ್ಲೂ ನೀತಿ ನೇಮದ ಶಿಸ್ತು ಬೇಕೇ ಬೇಕಾಯಿತು. ಫ್ರೆಂಚ್ ಶಿಷ್ಟತೆ ಮುಂದೆ ಬಂದ ರೊಮ್ಯಾಂಟಿಕ್ ಪಂಥದವರ ತೀಕ್ಷ್ಣ ಅವಹೇಳನೆಗೆ ಪಕ್ಕಾದರೂ ಅದರ ತಾರ್ಕಿಕತೆಯನ್ನೂ ನ್ಯಾಯಬದ್ಧತೆಯನ್ನೂ ಉಪಯುಕ್ತತೆಯನ್ನೂ ಯಾರೂ ಅಲ್ಲಗೆಳೆಯುವಂತಿಲ್ಲ. ಅದರ ಪ್ರಧಾನ ಆಧಾರತತ್ತ್ವ ಬುದ್ಧಿವಿವೇಕ. ಮನುಷ್ಯನ ಮನಸ್ಸಿಗೆ ಚಿಂತನ ಸಾಮಥ್ರ್ಯವನ್ನು ಕೊಟ್ಟು ಚಿಂತನೆಯ ರೀತಿಯನ್ನೂ ಸುವ್ಯವಸ್ಥಿತವಾಗಿ ನಡೆಸಿಕೊಳ್ಳುವ ಕೆಲಸ ಬುದ್ಧಿವಿವೇಕದ್ದು. ಅದರಲ್ಲಿ ಮತಿ, ವಿವೇಚನೆ, ಸತ್ಯಾನ್ವೇಷಣೆ ಮೂರೂ ಕೂಡಿಕೊಂಡಿವೆ. ಅದು ಸಕ್ರಮವನ್ನು ಒಪ್ಪುತ್ತದೆ, ಕ್ರಮಭಂಗವನ್ನಲ್ಲ; ವ್ಯಾವಹಾರಿಕ ಜ್ಞಾನವನ್ನು ಮೆಚ್ಚುತ್ತದೆ, ಅಚಾತುರ್ಯವನ್ನಲ್ಲ; ಎಚ್ಚರಿಕೆ ಬೇಕು ಎನ್ನುತ್ತದೆ, ಆವೇಶದ ದುಡುಕು ಬೇಡ ಎನ್ನುತ್ತದೆ; ಸರ್ವಸಾಧಾರಣತ್ವ ಅದಕ್ಕೆ ಇಷ್ಟ, ವೈಯಕ್ತಿಕತೆಯಲ್ಲ. ಆದ್ದರಿಂದ ಕವಿಗಳು ಪ್ರಾಪ್ತಿಸಿಕೆಗೆ ಬೆನ್ನು ತಿರುಗಿಸಿ ಪ್ರಾಯಿಕತೆಯನ್ನು ಅನುಸರಿಸತಕ್ಕದ್ದು; ಜಾತಿಯನ್ನು ವಿವರಿಸಿ ವ್ಯಕ್ತಿಯನ್ನು ಬಿಡತಕ್ಕದ್ದು. ತನ್ನ ಕವಿತೆಯ ವಿಷಯವನ್ನು ಕವಿ ಕೂಲಂಕಷವಾಗಿ ತಿಳಿದುಕೊಂಡಿದ್ದರೆ ತಾನೇ ಅದನ್ನು ಓದುಗನಿಗೆ ಪೂರ್ಣ ಸ್ಪಷ್ಟತೆಯಿಂದ ತಿಳಿಸಬಲ್ಲ. ಕೃತಿ ನಿರ್ಮಾಣದಲ್ಲಿ ಕವಿಗೆ ಇರಬೇಕಾದ್ದು ಒಂದೇ ಧ್ಯೇಯ; ಅನ್ಯೂನ್ಯತೆ ಅಥವಾ ನಿರ್ದಿಷ್ಟತೆ. ಅದನ್ನು ಸಾಧಿಸುವುದಕ್ಕೆ ಅವನಿಗೆ ಸಾಹಿತ್ಯ ಪ್ರಕಾರಗಳ ಔಚಿತ್ಯಗಳ ಪರಿಜ್ಞಾನವೂ ನಿಯಮಪಾಲನೆಯ ಶ್ರದ್ಧೆಯೂ ಆವಶ್ಯಕ. ಹೀಗೆ ಅಧ್ಯಯನ ಅಭ್ಯಾಸಗಳಿಂದ ಸುಶಿಕ್ಷಿತನಾದ ಕವಿಯನ್ನು ಹರಿತವೂ ಹದವೂ ಆದ ಅಭಿರುಚಿ ಉಳ್ಳವನೆಂದು ಗುರ್ತಿಸಬಹುದು. ಶಿಷ್ಟತೆಯ ಕಾಲದಲ್ಲಿ ಅಭಿರುಚಿಗೆ ವಿಶೇಷ ಪ್ರಾಬಲ್ಯ ಸಂದುಬಂತು. ಅದಕ್ಕೆ ವಿಶಿಷ್ಟ ಲಕ್ಷಣವೂ ವಿಶಿಷ್ಟ ಅರ್ಥವೂ ಹೊಂದಿಕೊಂಡುವು. ಯುಕ್ತಾಯುಕ್ತತೆಯ ಕ್ಷಿಪ್ರ ಪರಿಜ್ಞಾನ, ಅಲ್ಲಾಡದ ಸಮಚಿತ್ತ, ಕಲಾನೈಪುಣ್ಯಗಳ ಒಕ್ಕೂಟದಿಂದ ಉಂಟಾದ ದಕ್ಷತೆಯೇ ಸರಿಯೂ ಸುಂದರವೂ ಆದ ಅಭಿರುಚಿ. ಇವೇ ಫ್ರೆಂಚ್ ಕ್ಲಾಸಿಸಮ್ಮಿನ ರೂಪರೇಖೆ. ಇನ್ನೊಂದು ಮಾತು. ಫ್ರೆಂಚರ ಆಚಾರಬದ್ಧ ಸಾಂಪ್ರದಾಯಿಕತೆ ಎಷ್ಟು ಬಲಿಷ್ಠವೆಂದರೆ, ಕ್ಲಾಸಿಸಮ್ ಎಂಬ ಪದವನ್ನು ಅವರ ಅಕಾಡೆಮಿ ಶಬ್ದಕೋಶಕ್ಕೆ ಸೇರಿಸಲು ಅದು ಸಮ್ಮತಿಸಲಿಲ್ಲ: 1933ರ ನಿಘಂಟಿನಲ್ಲೂ ಅದನ್ನು ನವ್ಯತೆಯೆಂದೇ ತಿರಸ್ಕರಿಸಲಾಗಿದೆ.

ಅಕಾಡೆಮಿಯೂ ಸೆಲಾನುಗಳು ಚರ್ಚಿಸುತ್ತಿದ್ದ ವಿಚಾರಗಳು ಮುಖ್ಯವಾಗಿ ಇವು; ಯಾವುದು ಉತ್ತಮ ಸಾಹಿತ್ಯ, ಯಾವುದು ಅಧಮ? ಸಾಹಿತಿ ಅನುಸರಿಸುವುದಕ್ಕೆ ತಕ್ಕುದಾದ ಮೇಲ್ಪಂಕ್ತಿ ಯಾವುದು? ಸಾಹಿತ್ಯದಿಂದ ಆನಂದ ಉಂಟಾಗಬೇಕು. ನಿಯಮಾವಳಿಯನ್ನು ಪಾಲಿಸಿದರೆ ತಾನೆ ಯೋಗ್ಯ ಆನಂದ ಉಂಟಾಗುವುದು? ನಿಯಮೋಲ್ಲಂಘನೆಯಿಂದ ಉಂಟಾಗಬಹುದಾದ ಆನಂದ ನೈಜ ಆನಂದವೆ? ಯಾವ ನಿಯಮಗಳು ಶಾಶ್ವತ, ಯಾವುವು ಕಾಲಕಾಲಕ್ಕೆ ಮಾರ್ಪಾಟು ಹೊಂದತಕ್ಕವು? ಭೌತಪ್ರಕೃತಿಯನ್ನು ಕಲೆ ಹೇಗೆ ಅನುಸರಿಸಬೇಕು? ಎರಡಕ್ಕೂ ಇರುವ ವ್ಯತ್ಯಾಸವೇನು? ತರ್ಕಬದ್ಧ ಚಿಂತನ ವ್ಯವಸ್ಥೆ ಕವಿಗೆ ಅತ್ಯಗತ್ಯವಲ್ಲವೆ? ಹಾಗಾದರೆ ಸ್ಫೂರ್ತಿಗೆ ಯಾವ ಜಾಗ, ಎಷ್ಟು ಜಾಗ? ಪ್ರಗತಿಯನ್ನು ಪೂರ್ತಿ ಹಿಮ್ಮೆಟ್ಟಿಸುವುದು ಅಸಾಧ್ಯವಾದ್ದರಿಂದ ಅದನ್ನು ಪರಂಪರೆಯೊಂದಿಗೆ ಸಮನ್ವಯಗೊಳಿಸುವುದೆಂತು? ಅಂತೂ ಕಾವ್ಯದ ವಿಚಾರವಾಗಿ ವಿಪುಲ ಜಿಜ್ಞಾಸೆ ನಡೆಸದೆ ಯಾರೂ ಕಾವ್ಯವನ್ನು ರಚಿಸುತ್ತಿರಲಿಲ್ಲ. ಪರಿಣಾಮವಾಗಿ ಸಾಹಿತ್ಯ ಪಾಂಡಿತ್ಯ ಪೂರ್ಣ ಪ್ರೌಢ ಲೇಖನವಾಗುತ್ತ ಹೋಯಿತು. ಸಹಜಶಕ್ತಿಯ ಪ್ರೇರಣೆಯಿಂದ ಬರೆಯುವುದು ಕಣ್ಮರೆಯಾಯಿತು. ಅಥವಾ ಮನ್ನಣೆ ಪಡೆಯಲಿಲ್ಲ. 1715ರ ಅನಂತರ ಬಂದ ಸಾಹಿತ್ಯ ಹೆಚ್ಚು ಹೆಚ್ಚಾಗಿ ಅಸ್ವಾಭಾವಿಕವೂ ಪ್ರಯಾಸಜನ್ಯವೂ ಆಯಿತು.

ಕ್ಲಾಸಿಸಿಸಮ್ ಪಂಥ[ಬದಲಾಯಿಸಿ]

18ನೆಯ ಶತಮಾನದ ವಿಮರ್ಶೆಯಲ್ಲಿ ಮುಖ್ಯಸ್ಥರಾದವರು ವಾಲ್ಟೇರ್ ಮತ್ತು ಡಿಡಿರೊ. ಅದ್ಭುತ ಮೇಧಾಶಕ್ತಿಯೂ ಪ್ರಚಂಡ ತರ್ಕತೇಜಸ್ಸೂ ವಾಲ್ಟೇರನಿಗಿತ್ತು. ಆದರೂ ಅವನು ಅಷ್ಟುಹೊತ್ತಿಗೆ ರೂಢಮೂಲವಾಗಿದ್ದ ಶಿಷ್ಟತೆಯ ತತ್ತ್ವಗಳಿಗೇ ತಲೆ ಬಗ್ಗಿಸಿದನಾದ್ದರಿಂದ ಕಾರ್ನೀಲ್ ಷೇಕ್ಸ್‍ಪಿಯರರ ಮೇಲೆ ಅವನು ಮಾಡಿದ ಟೀಕೆಗಳು ಅವನಿಗೆ ಹೆಸರು ತರುವಂಥವಲ್ಲ. ಕ್ಲಾಸಿಸಿಸಮ್ ಪಂಥಕ್ಕೆ ಅವನ ಬೆಂಬಲ ಸಿಕ್ಕಿದ್ದು ಅದರ ಸುಯೋಗ. ಡಿಡಿರೊ ಬಹುವಿಧ ಜ್ಞಾನದಿಂದ ತುಂಬಿದವನಾಗಿದ್ದ. 1772ರಲ್ಲಿ ಹೊರಬಂದ ವಿಶ್ವಕೋಶಕ್ಕೆ ಅವನೇ ನಿರ್ದೇಶಕ. ವಿಷಯ ಯಾವುದೇ ಆಗಲಿ ಅದನ್ನು ವೈಜ್ಞಾನಿಕ ದೃಷ್ಟಿಯಿಂದ ಅವಲೋಕಿಸಬೇಕು ಎಂಬುದು ಡಿಡಿರೋನ ಸಂದೇಶ. ನಾಟಕವನ್ನು ಸುಮ್ಮನೆ ಟ್ರಾಜಡಿ ಕಾಮೆಡಿಯೆಂದು ವಿಭಾಗಿಸಿದರೆ ಸಾಲದು; ಎರಡಕ್ಕೂ ನಡುವೆ ಮಿಶ್ರರೂಪಕ ಒಂದಿದೆ ಎಂದು ಅವನ ವಾದ. ಅದನ್ನು ಉದಾಹರಿಸಲು ಎರಡು ಗದ್ಯರೂಪಗಳನ್ನು ತಾನೇ ರಚಿಸಿದ. ನಾಟಕದಲ್ಲಿ ಉಪದೇಶ ಹಿಡಿದಿರತಕ್ಕದ್ದು ಎಂದೂ ಅವನು ವಾದಿಸಿದ. ಅಲ್ಲದೆ, ಕಲಾವಿಮರ್ಶೆ ಪ್ರಾರಂಭವಾದದ್ದು ಅವನಿಂದಲೇ. ಸುಮಾರು 22 ವರ್ಷ ಸತತವಾಗಿ ಪ್ರದರ್ಶಿತ ಚಿತ್ರಗಳನ್ನು ಕುರಿತು ಅವನು ಸಮೀಕ್ಷೆ ಬರೆದ.

ವಿಮರ್ಶಕರೆಂದು ಕರೆಯಿಸಿಕೊಳ್ಳುವ ಮಿಕ್ಕವರಾರೂ ಸಾಧಾರಣ ಮಟ್ಟದಿಂದ ಮೇಲಕ್ಕೆ ಏಳಲಿಲ್ಲ. ಕ್ಲಾಸಿಕಲ್ ಸಂಪ್ರದಾಯದ ಇಳಿಗಾಲದಲ್ಲಿ ತಮಗೆ ಸಾಕಷ್ಟು ಬುದ್ಧಿಯಾಗಲಿ ವಿದ್ವತ್ತಾಗಲಿ ಅವರಿಗೆ ಇಲ್ಲದಿದ್ದರೂ ಅವರು ಸಾಹಿತ್ಯ ಸಂರಕ್ಷಕರಾಗಬೇಕಾಯಿತು. ಮಾರ್ಮಾಂಟೆಲ್ ಹೇಳಿದ್ದು ಇಷ್ಟೆ: ಬ್ವಾಲೊ ರಾಸೀನ್ ಇತ್ಯಾದಿ ಸಾಹಿತಿಗಳು ಅತ್ಯುತ್ತಮ ಮಾದರಿಗಳಾಗಿದ್ದಾರೆ. ಅವರ ಹೆಜ್ಜೆ ಹಿಡಿದು ಹೋಗೋಣ. ವಿಚಿತ್ರ ಕಾರಣಗಳ ಪ್ರತಿಪಾದನೆಯ ಮಾರ್ಮಾಂಟೆಲನಿಂದ ಆಗಿದೆ: ಪದ್ಯಕಾವ್ಯದಲ್ಲಿ ಇಂಗ್ಲಿಷರು ಫ್ರೆಂಚರಿಗಿಂತ ಮೇಲಾಗಿರುವುದಕ್ಕೆ ಕಾರಣ ಮೂರು: ಜಾಯಮಾನದಿಂದ ಇಂಗ್ಲಿಷರು ಕೀರ್ತಿಕಾಮಿಗಳು, ಪದ್ಯಕಾವ್ಯ ಪ್ರಖ್ಯಾತಿ ತರುತ್ತದೆಂದು ಅವರು ಬೇಗ ಮನಗಂಡರು; ದುಗುಡಪೂರಿತ ಜನವಾದ್ದರಿಂದ ಅವರಿಗೆ ಭಾವಾವೇಶದ ಪರಿಹಾರ ಅಗತ್ಯ; ಅವರಿಗಿರುವ ಪ್ರತಿಭೆಗೆ ಪದ್ಯದ ಕಡೆಗೇ ವಾಲಿಕೆ; ಲ ಹಾರ್ಪ್ ಸ್ವಲ್ಪ ವಾಸಿ: ಆದರೆ ಅವನ ಧೋರಣೆ ಚಿಕ್ಕವರಿಗೆ ಪಾಠಕಲಿಸುವ ಉಪಾಧ್ಯಾಯನ ತರಹೆಯದು. ಚರ್ವಿತಚರ್ವಣವಾಗಿದ್ದ ಸೂತ್ರಗಳ ಮೂಲಕ ಅವನು ಸಮಕಾಲೀನ ಸಾಹಿತಿಗಳನ್ನು ಅಳೆದಿದ್ದರಿಂದ ಅವರಿಗೆ ಒಂದು ರೀತಿ ಪ್ರಿಯನಾದ. ವಾಲ್ಟೇರನನ್ನು ಪ್ರತಿಭಟಿಸುವುದಕ್ಕೆ ಎದೆ ತಂದುಕೊಂಡು ಫ್ರೇರಾನ್, ಡೆಫಾಂಟೇನ್ಸ್ ಮತ್ತು ಪ್ಯಲಿಸೊ ಕೊಂಚ ಯಶಸ್ಸು ಗಳಿಸಿದರು. ಅವರ ಕೆಲವು ಹೇಳಿಕೆಗಳಲ್ಲಿ ಸ್ವಂತಿಕೆಯ ಕಂಪು ಇತ್ತು.

18ನೆಯ ಶತಮಾನದುದ್ದಕ್ಕೂ ಫ್ರೆಂಚ್ ಸಾಹಿತ್ಯ ಮತ್ತು ವಿಮರ್ಶೆಯ ಮೇಲೆ ಅಕಾಡೆಮಿಯ ಪ್ರಭಾವ ದಟ್ಟವಾಗಿತ್ತು. ಅದರ ಒಪ್ಪಿಗೆಯೂ ಆಶ್ರಯವೂ ಯಾವನಿಗೆ ಲಭಿಸಲಿಲ್ಲವೊ ಅವನು ಸಾಹಿತ್ಯಕ್ಷೇತ್ರದಲ್ಲಿ ತಬ್ಬಲಿಯಾದಂತೆ. ಪ್ರತಿಯೊಬ್ಬ ಸಾಹಿತಿಗೂ ಅದರ ನಲವತ್ತು ಸದಸ್ಯರಲ್ಲಿ ಒಬ್ಬನಾಗುವ ಹೆಬ್ಬಯಕೆ. ಶಬ್ದವೊಂದರ ಸಾಧುತ್ವದಿಂದ ಹಿಡಿದು ಮಹಾನಾಟಕವೊಂದರ ಮೌಲ್ಯನಿರ್ಣಯದವರೆಗೂ ಅದರ ಪರಾಮರ್ಶೆಯ ವ್ಯಾಪ್ತಿ. ಅಕಾಡೆಮಿ ಅಧಿಕೃತವಾಗಿ ಎದ್ದು ನಿಂತದ್ದು 1634-37ರಲ್ಲಿ. 1690ರವರೆಗೆ ಫ್ರೆಂಚ್ ಸಾಹಿತ್ಯದ ವೈಭವಯುಕ್ತ ಅವಧಿ ಧರ್ಮಕರ್ಮ ಸಂಯೋಗದಿಂದ ಹೀಗೆ ಅಕಾಡೆಮಿಗೂ ಉತ್ಕøಷ್ಟ ಸಾಹಿತ್ಯಕ್ಕೂ ಹೊಂದಾವಣೆ ಸಂಭವಿಸಿತು. 17ನೆಯ ಶತಮಾನದ ಪೂರ್ತ ಮತ್ತು 18ನೆಯ ಶತಮಾನದ ಪ್ರಾರಂಭ ದಶಕಗಳಲ್ಲಿ ಆ ಸಂಸ್ಥೆಯ ಕಾರ್ಯ ಶ್ರೇಯಸ್ಕರವಾಗಿತ್ತು. ಮುಂದಣ ದಶಕಗಳಲ್ಲಾದರೂ ಅದು ಪ್ರಚೋದನೆಗಿಂತ ಹೆಚ್ಚಾಗಿ ಗಮನವಿತ್ತು, ಸೂತ್ರಾವಳಿಯ ಸರ್ವಾಧಿಕಾರವನ್ನು ಬಲಪಡಿಸಿ, ಸಾಹಿತ್ಯದ ವಿಚಾರದಲ್ಲಿ ಶುಷ್ಕವೂ ಸಂಕುಚಿತವೂ ನಿರ್ಬಂಧಮಯವೂ ಆದ ಅಭಿಪ್ರಾಯ ನೆಲೆಗೊಳ್ಳುವಂತೆ ಮಾಡಿಬಿಟ್ಟಿತು. ಒಂದು ಆಶ್ಚರ್ಯವೇನೆಂದರೆ ಅದೇ ಸಮಯದಲ್ಲಿ ರೂಸೊ, ವಾಲ್ಟೇರ್, ಡಿಡಿರೊ ಮೊದಲಾದವರ ಪ್ರಬಂಧಗಳು ಮತ ನೀತಿ ರಾಜಕೀಯ ವಿಚಾರಗಳಲ್ಲಿ ಸಂದೇಹ ಪ್ರಶ್ನೆ ಸ್ವಾತಂತ್ರ್ಯ ಹೊಸತನ ಮುಂತಾದುವನ್ನು ಕೆರಳಿಸುತ್ತಿದ್ದುವು.

ಫ್ರಾನ್ಸಿನ ಮಹಾಕ್ರಾಂತಿ, ನವೋದಯ ಮತ್ತು ರೊಮ್ಯಾಂಟಿಕತೆ[ಬದಲಾಯಿಸಿ]

1789ರಲ್ಲಿ ಫ್ರಾನ್ಸಿನ ಮಹಾಕ್ರಾಂತಿ ಪ್ರಾರಂಭವಾಯಿತು. ಫ್ರಾನ್ಸಿನಲ್ಲಿ ನವೋದಯ ಕಾಲಿಟ್ಟಿತು.

19ನೆಯ ಶತಮಾನದಲ್ಲಿ ಜರುಗಿದ ಬದಲಾವಣೆಗಳಲ್ಲಿ ಮುಖ್ಯವಾದದ್ದು ವಿಮರ್ಶೆಯೂ ಸಾಹಿತ್ಯವೂ ಶಿಷ್ಟತೆ ಅಥವಾ ನವಶಿಷ್ಟತೆಯಿಂದ ರೊಮ್ಯಾಂಟಿಕತೆಗೆ ತಿರುಗಿದುದು. ಆ ತಿರುಗಣೆ ತತ್‍ಕ್ಷಣ ಆಗಲಿಲ್ಲ; ಸುಮಾರು 40 ವರ್ಷ (1789-1830) ಅತ್ತ ಇತ್ತ ತುಯ್ಯಾಟ, ಸಣ್ಣ ಪುಟ್ಟ ಘರ್ಷಣೆ, ಬಿರುಸು ವಾಕ್ಕಾಳಗಗಳ ಸಂಧಿ ಕಾಲ ನಡೆದು ಆಮೇಲೆ ರೊಮ್ಯಾಂಟಿಕತೆ ವಿಜಯ ಸಂಪಾದಿಸಿತು. ಮಹಾಕ್ರಾಂತಿಯ ಪರಿಣಾಮವಾಗಿ ಸಾಮಾನ್ಯ ಜನರ ಪರಿಸ್ಥಿತಿ ಸುಧಾರಣೆಗೊಂಡಿತು; ಹೆಚ್ಚು ಹೆಚ್ಚು ಮಂದಿಗೆ ವಿದ್ಯಾಭ್ಯಾಸ ದೊರೆತು ಅವರಲ್ಲಿ ಓದುವ ಅಪೇಕ್ಷೆ ವೃದ್ಧಿಸಿತು. ವೃತ್ತಪತ್ರಿಕೆಗಳು ಆವಶ್ಯಕವೆನ್ನಿಸಿದುವು. ಅಂದಿನ ನಾನಾ ಬಗೆಯ ಪತ್ರಿಕೆಗಳಲ್ಲಿ ಪ್ರಸ್ತಾಪಿಸಬೇಕಾದವು ಕಲೆ ಸಾಹಿತ್ಯಗಳಿಗೆ ಸಂಬಂಧಪಟ್ಟವು. ಸ್ಥೂಲವಾಗಿ ಹೇಳುವುದಾದರೆ ಅವು ಮೂರು ವಿಧವಾಗಿದ್ದವು: ಹಿಂದಣ ಶಿಷ್ಟತೆಯನ್ನೇ ಅನುಮೋದಿಸುವ ಶ್ರದ್ಧಾವಂತರವು; ಅವಕ್ಕೆ ಎದುರಾಗಿ ರೊಮ್ಯಾಂಟಿಕತೆ ಅಥವಾ ಅತಿ ರೊಮ್ಯಾಂಟಿಕತೆಯನ್ನು ಸಾರುವಂಥವು; ಅವೆರಡಕ್ಕೂ ನಡುವಣ ಸಮನ್ವಯ ಮಾರ್ಗ ಹಿತಕರವೆಂದು ಸಲಹೆ ಕೊಡುವುವು. ಸಮರ್ಥಶಕ್ತಿಗಳೆಲ್ಲ ಅದಕ್ಕೆ ಪುಷ್ಟಿಕೊಟ್ಟದರಿಂದ ಕ್ರಮೇಣ ರೊಮ್ಯಾಂಟಿಕತೆಯ ಆಕರ್ಷಣೆ ಹೆಚ್ಚಿತು. 1. ಮನುಷ್ಯನಿಗೆ ಸ್ವಾಭಾವಿಕವಾದ ರಾಗಾವೇಶಗಳನ್ನು ನಿರ್ಲಕ್ಷಿಸಕೂಡದು; ನಿಸರ್ಗ ಪ್ರಪಂಚ ಎಂದಿಗೂ ಬರಿ ನೀರಸ ಹಿನ್ನೆಲೆಯಲ್ಲ ಎಂಬುದು ರೂಸೋನ ಮಾತು. ನವಶಿಷ್ಟತೆ ಬುದ್ಧಿವಿವೇಕಕ್ಕೆ ಅತ್ಯಂತ ಪ್ರಾಧಾನ್ಯ ಕೊಟ್ಟು ಕೃತಕ ಸಂಪ್ರದಾಯವಾಗಿತ್ತು. 2. ಚಾಟೊ ಬ್ರಯಾನನ ಭಾವಪೂರ್ಣ ಲಾವಣ್ಯಮಯ ಪ್ರಕೃತಿ ವರ್ಣನೆ. 3. ಅನ್ಯ ಸಾಹಿತ್ಯಗಳ ಪ್ರಭಾವ: ಚಾಟೊ ಬ್ರಯಾನನ ಇಂಗ್ಲಿಷ್‍ಸಾಹಿತ್ಯದ ಶ್ಲಾಘನೆ: ಮದಾಂದ ಸ್ಟೀಲಳ ಜರ್ಮನ್ ಕಾವ್ಯ ನಾಟಕ ಕಲೆಗಳ ಪ್ರಶಂಸೆ; ಮದಾಂ ದ ಸ್ಟೀಲ್, ವಿಸ್ಮಂಡಿ, ಸ್ಟೆಂಡಲ್ ಮೊದಲಾದವರ ಇಟಲಿಯ ಹೊಗಳಿಕೆ. ಅಲ್ಲದೆ ಸ್ಕಿಲರ್ ಗಯೆಟೆ ಷೇಕ್ಸ್‍ಪಿಯರ್ ಬೈರನ್ನರ ಮೇಲ್ಮೆ. ತಮ್ಮಲ್ಲಿಲ್ಲದ ಅನುಕರಣೀಯ ಕಲಾಜಾಣ್ಮೆಯನ್ನು ಫ್ರೆಂಚರು ಆ ಸಾಹಿತ್ಯಗಳಲ್ಲಿ ಕಂಡು ವಿಸ್ಮಿತರಾದರು. 4. ದೇಶ ವಾತ್ಸಲ್ಯ ಹೊರಹೊಮ್ಮಿ ಮಧ್ಯಯುಗದ ಕಥನಕಾವ್ಯಗಳು ರಸಿಕರ ಚಿತ್ತವನ್ನು ಸೂರೆಗೊಂಡುವು. ಮದಾಂ ದ ಸ್ಟೀಲ್ ಕ್ಲಾಸಿಸಮ್ ಮತ್ತು ರೊಮ್ಯಾಂಟಿಸಿಸಮ್ಮುಗಳ ವ್ಯತ್ಯಾಸವನ್ನು ಬೆರಳಿಟ್ಟು ತೋರಿಸಿ ವಿಮರ್ಶಕರಿಗೆ ದಾರಿತೋರುಗಳಾದಳು.

ನೋದಿಯರ್, ವಿಕ್ಟರ್ ಹ್ಯೂಗೊ, ಸೇಂತ್‍ಬವ್ ಅವರ ಗೃಹಗಳಲ್ಲಿ ನೆರೆಯುತ್ತಿದ್ದ ಖಾಸಗಿ ಗೋಷ್ಠಿಗಳು ರೊಮ್ಯಾಂಟಿಕ್ ಚಳವಳಿಯನ್ನು ನಡೆಸಿ ರೊಮ್ಯಾಂಟಿಕ್ ಪಂಥವನ್ನು ಸ್ಥಾಪಿಸಿದುವು. ರೊಮ್ಯಾಂಟಿಕ್ ಕಾವ್ಯಮೀಮಾಂಸೆಯ ಮುಖ್ಯ ಅಂಶಗಳು ಇವು: 1. ಕವಿಗೆ ಕಲಾಸ್ವಾತಂತ್ರ್ಯ ಅತ್ಯಗತ್ಯ, ವಿಷಯದ ಆಯ್ಕೆಯಲ್ಲೂ ವಿಷಯ ನಿರೂಪಣೆಯ ರೀತಿಯಲ್ಲೂ ಭಾಷೆಯ ಒಪ್ಪ ಓರಣದಲ್ಲೂ ಅವನ ನಿರ್ಧಾರವೇ ಸಲ್ಲತಕ್ಕದ್ದು. 2. ಭಾವ ಭಾವನೆ ಶೈಲಿ ಸಂಪ್ರದಾಯಗಳ ವಿಚಾರದಲ್ಲಿ ನಿಯಮಗಳು ಜೀವನದ ಸತ್ಯಪ್ರತಿಬಿಂಬನಕ್ಕೆ ಅಡ್ಡಿತಂದಲ್ಲಿ ಅವನ್ನು ತೊಡೆದು ಹಾಕಬೇಕು. 3. ತನ್ನ ಆಂತರ್ಯದ ಚಲನವಲನಗಳಿಗೆ ಕಲಾತ್ಮಕ ಆಕಾರ ಹೊಂದಿಸುವುದು ಕವಿಯ ನೈಜಕರ್ತವ್ಯ. 4. ನಿಸರ್ಗದ ಬಣ್ಣ ವೈವಿಧ್ಯ ಸೊಬಗು ಒಪ್ಪಂದಗಳನ್ನು ತನ್ನ ಚಿತ್ತದ ಹೊಗಳಿಕೆಗೆ ಅನುಗುಣವಾಗಿ ಚಿತ್ರಿಸತಕ್ಕದ್ದು. 5. ಪದ ವಾಕ್ಯ ಛಂದಸ್ಸಿನ ಮೇಲೆ ಆಡಳಿತ ನಡೆಸುತ್ತ ಅತ್ಯಾವಶ್ಯಕ ಮಾರ್ಪಾಟನ್ನು ಮಾಡುವುದಕ್ಕೆ ಅವನು ಹಿಂಜರಿಯಬೇಕಾದ್ದಿಲ್ಲ. 6. ಪ್ರತಿಯೊಂದು ಕಾವ್ಯಕೃತಿಗೂ ತನ್ನ ಗುಣಾವಗುಣದ ಮೇಲೆಯೇ ಪರಿಶೀಲನೆಗೊಳ್ಳುವ ಹಕ್ಕು ನ್ಯಾಯವಾಗಿ ಸಲ್ಲಬೇಕು: ಅನ್ಯ ವಿಧಿಗಳನ್ನು ಅದಕ್ಕೆ ಅನ್ವಯಿಸಹೋಗುವುದು ಅನ್ಯಾಯ. ಮಹಾಕವಿ ವಿಕ್ಟರ್ ಹ್ಯೂಗೋನ ಮುನ್ನುಡಿಗಳೂ ಅವನು ಬರೆದ ಷೇಕ್ಸ್‍ಪಿಯರ್ ವಿಮರ್ಶೆಯೂ ರೊಮ್ಯಾಂಟಿಕತೆಯ ಹಿರಿಯ ಘೋಷಣೆಯಂತೆ ಮೊಳಗಿದುವು. ಜಿರಾರ್ಡಿನ್, ನಿಸಾರ್ಡ್, ಫೌರಿಯೆಲ್, ಮಾಗ್ನಿನ್, ಮಾರ್ಮಿಯರ್, ವಿಲ್ಲೆಮೆಯ್ನ್ ಮೊದಲಾದವರೂ ವಿಮರ್ಶೆಯಲ್ಲಿ ಖ್ಯಾತರಾದರು.

ವೃತ್ತಿ ವಿಮರ್ಶಕರು, ಅಧ್ಯಾಪಕ ವಿಮರ್ಶಕರು[ಬದಲಾಯಿಸಿ]

ವಿಮರ್ಶಕರನ್ನು ಎರಡು ಗುಂಪಾಗಿ ಒಡೆಯಬಹುದು: ವೃತ್ತಿ ವಿಮರ್ಶಕರು, ಅಧ್ಯಾಪಕ ವಿಮರ್ಶಕರು. ಮೊದಲನೆಯ ಗುಂಪಿನವರಿಗೆ ಕಲೆ ಸಾಹಿತ್ಯಗಳ ವಿಮರ್ಶೆಯೇ ನಿತ್ಯಜೀವನದ ಉದ್ಯೋಗ: ಅವರ ಲೇಖನಗಳನ್ನು ವೃತ್ತಪತ್ರಿಕೆಗಳು ಪ್ರಕಟಿಸುತ್ತಿದ್ದುವು. ಅಂಥವರಲ್ಲಿ ವಿಶೇಷ ಕೀರ್ತಿಗಳಿಸಿ, ಅತ್ಯುತ್ತಮ ಪ್ರಬಂಧಗಳ ಮೂಲಕ ವಿಮರ್ಶೆಯನ್ನು ಸೃಜನಸಾಹಿತ್ಯವೂ ಎಂಬಂತೆ ನಿಯೋಜಿಸಿದ ಗಣ್ಯ ವ್ಯಕ್ತಿ ಚಾಲ್ರ್ಸ್-ಅಗಸ್ತಿನ್ ಸೇಂತ್‍ಬವ್ ಅವನ ವ್ಯಕ್ತಿಚಿತ್ರಗಳು ಮತ್ತು ವಿಚಾರಲಹರಿ ಎರಡರಲ್ಲೂ ಕಂಡುಬರುವ ನಿಷ್ಪಕ್ಷಪಾತ, ವಸ್ತುನಿಷ್ಠ ದೃಷ್ಟಿ, ಕೃತಿಯಲ್ಲಿರುವುದನ್ನೇ ಗ್ರಹಿಸುವಿಕೆ, ಸೂಕ್ಷ್ಮಾವಲೋಕನ, ಕೃತಿಕಾರನೊಂದಿಗೆ ಸಹೃದಯತ್ವಗಳು ಆದರ್ಶ ವಿಮರ್ಶಕನ ಲಕ್ಷಣಗಳು. ಅವನ ಸುಲಲಿತವಾದ ಆಡುಮಾತಿನ ಶೈಲಿಯೂ ಮನಮೋಹಕ. 19ನೆಯ ಶತಮಾನದ ಫ್ರೆಂಚ್ ವಿಮರ್ಶೆಯಲ್ಲಿ ಸೇಂಟ್ ಬವ್‍ನೇ ನಾಯಕನಾಗಿದ್ದ. ಅದೇ ಗುಂಪಿಗೆ ಸೇರಿದ ಇನ್ನೊಬ್ಬ ಎಡ್ಮಾನ್‍ಷೇರರ್ ತನ್ನದೇ ಒಂದು ಪತ್ರಿಕೆಯನ್ನು ಪ್ರಕಟಿಸಿದ. ತತ್ತ್ವಗಳನ್ನೂ ಪ್ರಯೋಗವನ್ನೂ ಆತ ಉತ್ತಮ ರೀತಿಯಲ್ಲಿ ಪ್ರತಿಪಾದಿಸಬಲ್ಲವನಾಗಿದ್ದ. ನೀತಿಬೋಧನೆಯ ಗೀಳು ಅವನಿಗೆ ಇದ್ದಿತಾಗಿ ಅವನ ವಿಮರ್ಶೆಗೆ ಕೊಂಚ ಲೋಪ ಉಂಟಾಯಿತು. ಇನ್ನೊಬ್ಬ ವಿಮರ್ಶಕ ಏಮೀಲ್ ಮಾಂಟೆಗ್ಯು: ಇಂಗ್ಲಿಷ್ ಮತ್ತು ಅಮೆರಿಕನ್ ಸಾಹಿತ್ಯಗಳನ್ನು ಕುರಿತ ಅವನ ಲೇಖನಗಳೂ ಸಮಕಾಲೀನ ಫ್ರೆಂಚ್ ಸಾಹಿತಿಗಳ ವಿಮರ್ಶೆಯೂ ಮೆಚ್ಚಿಕೆ ಆರ್ಜಿಸಿದುವು. ಪತ್ರಿಕೆಗಳ ಮೂಲಕ ವಿಮರ್ಶೆ ನಡೆಸಿದವರಲ್ಲಿ ಇನ್ನಿಬ್ಬರನ್ನು ಮರೆಯಲಾಗದು. ಜೂಲ್ಸ್-ಗೇಬ್ರಿಯೆಲ್ ಜಾನಿನ್ ಮತ್ತು ತಿಯೊಫೈಲ್ ಗೌತಿಯರ್. ಇಬ್ಬರೂ ದೊಡ್ಡ ವಿಮರ್ಶಕರೆಂಬ ಪ್ರಖ್ಯಾತಿಗೆ ಪಾತ್ರರಾದವರು. ಜಾನಿನ್ ವಿಷಯದ ಜೊತೆಗೆ ವಿಷಯದಿಂದ ಬೇರೆಯಾದ ಪ್ರಾಸಂಗಿಕ ವಿಚಾರಗಳನ್ನು ಪ್ರತಿಪಾದಿಸುವುದರಲ್ಲಿ ನಿಷ್ಣಾತ. ಆದರೆ ಅವನ ಬರವಣಿಗೆ ಬಲಿಷ್ಠ, ಸುಂದರ, ಹರ್ಷಕರ. ಸುಮಾರು 30 ವರ್ಷದ ನಾಟಕಶಾಲೆಯ ಚರಿತ್ರೆ ಅವನಲ್ಲಿ ಕಲಾತ್ಮಕವಾಗಿ ವಿವರಿಸಲ್ಪಟ್ಟಿದೆ. ಗೌತಿಯರ್ ರೊಮ್ಯಾಂಟಿಕತೆಯ ನಿಶ್ಚಲ ಭಕ್ತ: ವಿಕ್ಟರ್ ಹ್ಯೂಗೊ ಅವನ ಆರಾಧ್ಯಮೂರ್ತಿ. ಯೌವನದ ಕಸುವೂ ಕುದಿಯೂ ತಗ್ಗಿದ ಮೇಲೆ ಬಾಲ್ಜಾಕನ ಸಹಾಯದಿಂದ ಅವನು ಪತ್ರಿಕೋದ್ಯಮಿಯಾಗಿ 40 ವರ್ಷ ತೀವ್ರಾಸಕ್ತಿಯಿಂದ ದುಡಿಮೆಗೈದ. ಕಾವ್ಯ ನಾಟಕ ಚಿತ್ರಕಲೆ ಮೂರಲ್ಲೂ ಅವನ ಸಮೀಕ್ಷೆ ಮೇಲ್ಮಟ್ಟದ್ದಾಗಿತ್ತು. ಎಲ್ಲರಿಗೂ ಅವನು ಸಜ್ಜನತಿಯೂ ಆಗಿದ್ದ. 1830ರ ಈಚಿನ ಫ್ರೆಂಚ್ ವಿಮರ್ಶೆಯೆಲ್ಲಕ್ಕೂ ಸೇಂತ್‍ಬವ್, ಜಾನಿನ್, ಗೌತಿಯರ್ ಮೂವರೇ ಮೂಲ ಎಂಬ ಸಾಮತಿಯುಂಟು.

ಅಧ್ಯಾಪಕ-ವಿಮರ್ಶಕರ ಗುಂಪಿಗೆ ಪುಷ್ಕಲ ಪಾಂಡಿತ್ಯವು ವಾಗ್ಮಿತೆಯೂ ಇದ್ದದ್ದು ದಿಟ, ಆದರೆ ಕೆಲವು ಪ್ರಬಲ ಕೊರತೆಗಳಿಗೆ ಅವರು ಈಡಾಗಿದ್ದರು. ತಾವೇ ಸರಿಯೆಂಬ ಗರ್ವ, ಅದರಿಂದ ಆದ ದೃಢನುಡಿ ನುಡಿಯುವಿಕೆ, ಒಂದು ಬಗೆಯ ಸೂತ್ರಾಂಧತೆ-ಇವುಗಳಿಂದ ಅವರ ವಿಮರ್ಶೆ ಸ್ವಲ್ಪ ಸೆಟೆದುಕೊಂಡಿತ್ತು, ಬಳುಕಬೇಕಾದ ಕಡೆಗಳಲ್ಲೂ ಬಳುಕಲಾರದ್ದಾಗಿತ್ತು. ಹಿಪ್ಟೊಲಿಟ್ ಟೇನನನ್ನು ಮೊದಲು ಪರಿಭಾವಿಸತಕ್ಕದ್ದು. ಸುಮಾರು ಇಪ್ಪತ್ತು ಸಂವತ್ಸರ ಆತ ಕಲಾಶಾಸ್ತ್ರದ ಪ್ರಾಧ್ಯಾಪಕನಾಗಿ ಭಾಷಣ ಬರಹಗಳು ಮೂಲಕ ತನ್ನ ತಲೆಮಾರಿನ ರಸಿಕರ ಮೇಲೆ ಪ್ರಭಾವ ಬೀರಿದ. ಅವನ ಮತದಂತೆ, ಮನುಷ್ಯನ ನಡೆನುಡಿಗೆ ಕಾರಣ ಎರಡು: ಮಾನಸಿಕ, ದೈಹಿಕ ಅಥವಾ ಆಂತರಿಕ, ಬಾಹ್ಯ. ಎರಡಕ್ಕೂ ನಿಕಟಸಂಬಂಧ ಇರುವುದರಿಂದ ಒಂದನ್ನು ಬಿಟ್ಟು ಇನ್ನೊಂದನ್ನು ಗಮನಿಸಿ ನಿಂತಲ್ಲಿ ತಪ್ಪರ್ಥಕ್ಕೆ ದಾರಿ. ಆದ್ದರಿಂದ ಸಾಹಿತ್ಯ ವಿಮರ್ಶೆ ಸಮರ್ಪಕವಾಗಿ ನೆರವೇರಬೇಕಾದರೆ ಸಾಹಿತಿ ಯಾವ ಜನಾಂಗದವ, ಅವನ ಪರಿಸರ ಯಾವುದು ಆ ಸಮಯದ ಪ್ರಭಾವ ಏನು ಈ ಮೂರನ್ನೂ ಪರೀಕ್ಷಿಸಬೇಕು, ಹಾಗೆ ಮಾಡಿದರೆ ಸಾಹಿತಿಯ ಗುಣದೋಷವೆಲ್ಲವೂ ಸುಸ್ಪಷ್ಟವಾಗುತ್ತವೆ. ಹೀಗೆ ಪುರುಷ-ಪರಿಸರ-ಪ್ರಭಾವ ಎಂಬುದನ್ನು ವಿಮರ್ಶೆಗೆ ಧ್ಯೇಯಮಂತ್ರವನ್ನಾಗಿ ಟೇನ್ ಧಾರೆಯೆರೆದ. ಸ್ಥಿತಿಗತಿ ಸಂಗತಿಗಳನ್ನು ಅಂಕಿ ಅಂಶದಂತೆ ಶೇಖರಿಸಿ ಅವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಸಾಹಿತ್ಯದ ಆಗುಹೋಗೆಲ್ಲ ಕರತಲಾಮಲಕ. ಈ ನಿಲವಿನ ವೈಪರೀತ್ಯವನ್ನು ವರ್ಣಿಸಬೇಕಾದಿಲ್ಲ. ಇನ್ನೊಬ್ಬ ಪ್ರಾಧ್ಯಾಪಕ ಫರ್ಡಿನೆಂಟ್ ಬ್ರೂನೆತಿಯೇರ್ ವಿಜ್ಞಾನದ ಸಿದ್ಧಾಂತಗಳಿಂದ ಪ್ರಭಾವಿತನಾಗಿ ವಿಕಾಸವಾದವನ್ನು ಸಾಹಿತ್ಯಕ್ಕೂ ಅಚ್ಚುಕಟ್ಟಾಗಿ ಅನ್ವಯಿಸಬಹುದೆಂದು ನಂಬಿದ, ಬರುತ್ತ ಬರುತ್ತ ಉಪದೇಶದ ಕಡೆಗೆ ಅವನ ಒಲವು ಬೆಳೆಯಿತು. ನೀತಿಬೋಧೆ ಮಾಡದಿದ್ದರೆ ಸಾಹಿತ್ಯ ವ್ಯರ್ಥ ಎಂದು ಹೇಳಿದ.

ವಾಸ್ತವಿಕತೆ ಮತ್ತು ಸ್ವಾಭಾವಿಕತೆ[ಬದಲಾಯಿಸಿ]

19ನೆಯ ಶತಮಾನದ ಮಧ್ಯದಲ್ಲಿ ಎದ್ದುಬಂದ ವಾಸ್ತವಿಕತೆ ಮತ್ತು ಸ್ವಾಭಾವಿಕತೆ ಎರಡೂ ರೊಮ್ಯಾಂಟಿಕ್ ಸಾಹಿತ್ಯವನ್ನು ಪ್ರತಿಭಟಿಸಿದುವು. ಜೀವನದ ಮತ್ತು ವ್ಯಕ್ತಿಗಳ ಯಥಾರ್ಥ ಪ್ರತಿಬಿಂಬ ಕಾದಂಬರಿಯಲ್ಲೂ ನಾಟಕದಲ್ಲೂ ಬರಬೇಕು ಎಂಬುದೇ ಅವುಗಳ ಮುಖ್ಯ ಆಶಯ. ನಡೆದ ಸಂಗತಿಗಳ ವರದಿಯ ಮೇಲೆ ಸಾಹಿತ್ಯ ಸೃಷ್ಟಿಯಾಗತಕ್ಕದ್ದು, ಎಂದರೆ ಸಾಹಿತಿಗೆ ದಾಖಲಿಸಿಕೆ ಆವಶ್ಯಕ ಮತ್ತು ಬೆಂಬಲ. ಸ್ವಾಭಾವಿಕತೆ ವಾಸ್ತವಿಕತೆಗಿಂತ ಎರಡು ಹೆಜ್ಜೆ ಮುಂದೆ ಹೋಗಿ, ವಿಜ್ಞಾನಿ ಹೇಗೆ ತನ್ನ ಪ್ರಯೋಗಶಾಲೆಯಲ್ಲಿ ಪದಾರ್ಥಗಳ ವಿಶ್ಲೇಷಣೆಯನ್ನು ಕೈಗೊಳ್ಳುತ್ತಾನೋ ಹಾಗೆಯೇ ಕಾದಂಬರಿಕಾರ ತನ್ನ ಕಲ್ಪಿತ ಪಾತ್ರಗಳ ವಿವರ ಪರೀಕ್ಷೆಯನ್ನು ನಡೆಸಬೇಕು, ಎಂದು ಸಲಹೆಕೊಟ್ಟವು. ಸುಮಾರು 1895ರ ವರೆಗೂ ಅವುಗಳ ಆಳ್ವಿಕೆ ಅಲ್ಲಲ್ಲಿ ಜರುಗಿತು. ಸುತ್ತಮುತ್ತಣ ಲೋಕಕ್ಕೆ ಸಾಹಿತಿ ಲಕ್ಷ್ಯ ಕೊಡಬೇಕು ಎಂಬ ಸೂಕ್ತ ಅಭಿಪ್ರಾಯವನ್ನು ಒತ್ತಿಹೇಳಿದಂತಾಯಿತು.

ಸಾಂಕೇತಿಕತೆ[ಬದಲಾಯಿಸಿ]

19ನೆಯ ಶತಮಾನ ಮುಕ್ಕಾಲು ಭಾಗ ಕಳೆದಂದು ಚಿತ್ರಕಲೆಗೂ ಸಾಹಿತ್ಯಕ್ಕೂ ವಿಶಿಷ್ಟ ತರಹೆಯ ನಂಟು ಏರ್ಪಡಲಾರಂಭಿಸಿತು. ಚಿತ್ರಕಾರರು ತಮ್ಮ ತಮ್ಮ ಸ್ವಂತ ಪ್ರೇರೇಪಣೆಯಿಂದ ನವೀನ ವಿಧಾನಗಳನ್ನೂ ತಂತ್ರಗಳನ್ನೂ ಹೊರತಂದಂತೆ ಅವನ್ನು ಸಾಹಿತಿಗಳು ಅನುಕರಿಸಲಾರಂಭಿಸಿದರು. ಎರಡು ಮುಖ್ಯ ನಿದರ್ಶನಗಳನ್ನು ನೋಡೋಣ. 1874ರಲ್ಲಿ ಮಾನೆ, ಪಿಸಾರೊ, ಸೆಜಾನ್, ಡೇಗಾಸ್, ಮೋನೆ ಮುಂತಾದವರು ತಮ್ಮ ಹೊಸ ಚಿತ್ರಗಳ ಪ್ರದರ್ಶನ ಹೂಡಿದರು. ಮೋನೆ ತಯಾರಿಸಿದ್ದ ಒಂದು ಚಿತ್ರದ ಅಂಕಿತ ಉದಯ ಸೂರ್ಯನ ತೋಚಿಕೆ ಪ್ರದರ್ಶನವನ್ನು ಹಳಿದು ಅಪಹಾಸ್ಯ ಗೈಯುವ ಉದ್ದೇಶದಿಂದ ಒಂದು ಪತ್ರಿಕೆ ಚಿತ್ರಕಾರರನ್ನು ತೋಚಿಕರು ಎಂದೂ ಅವರ ಕಲಾತಂತ್ರವನ್ನು ತೋಚಿಕತೆ ಎಂದೂ ಅಣಕಿಸಿತು. ಆ ಅಂಕಿತ ರಸಿಕವರ್ಗಕ್ಕೆ ಸ್ವೀಕರಣೀಯವಾಯಿತು. ಕೂಡಲೆ ಆ ಧೋರಣೆ ಸಾಹಿತ್ಯಕ್ಕೂ ಧುಮ್ಮಿಕ್ಕಿತು. ಅಂಕಿತದ ಹಿಂದಣ ತತ್ತ್ವ ವಿಮರ್ಶೆಯಲ್ಲಿ ತಕ್ಷಣ ಒಂದು ಮುಖ್ಯ ತತ್ತ್ವವಾಯ್ತು. ಇಂದಿಗೂ ಅದಕ್ಕೆ ಸಾವಿಲ್ಲ. ಯಾವ ವಿಮರ್ಶಕನೆ ಆಗಲಿ ಕೃತಿಯನ್ನು ಪಠಿಸುವಾಗಲೂ ಪಠಿಸಿಯಾದ ಮೇಲೂ ತನಗೆ ಏನೇನು ತೋಚಿತೊ ಅದನ್ನು ವ್ಯಕ್ತಪಡಿಸುವುದು ತಾನೆ ಅವನ ವಿಮರ್ಶೆ, ಬಾರ್ಬಿ ಡೌರೆವಿಲ್ಲಿ, ಏಮೀಲ್ ಫಾಗುಎ ಮೊದಲಾದವರು ಅಂಥ ಲೇಖನ ಬರೆದರು. ಪ್ರಸಿದ್ಧ ಸಾಹಿತಿ ಆನತೋಲ್ ಫ್ರಾನ್ಸ್ ವಿಮರ್ಶೆಯನ್ನು ಹೀಗೆ ನಿರ್ದೇಶಿಸಿದ: ಶ್ರೇಷ್ಠ ಗ್ರಂಥಗಳ ಪರಿಸರದಲ್ಲಿ ಒಂದು ಆತ್ಮಕ್ಕೆ ಆಗುವ ಸಾಹಸೋದ್ಯಮಗಳು. ತೋಚಿಕೆಯನ್ನು ಯದ್ವಾತದ್ವಾ ಬಿಡದೆ ಕ್ರಮವಿಡಿದು ರೂಢಿಸಿಕೊಂಡಲ್ಲಿ ಅದು ಸ್ವತಿಷ್ಠ ವ್ಯಾಖ್ಯಾನಕ್ಕೆ ಕಾಯಿಯಾಗುತ್ತದೆ. ಸ್ವತಿಷ್ಠತೆ ಮಿತ ಪ್ರಮಾಣದಲ್ಲಿ ಇದ್ದರೆ ಕೇಡಿಲ್ಲ. ಎರಡನೆಯ ನಿದರ್ಶನ ಸಾಂಕೇತಿಕತೆ. ಛಂದಸ್ಸಿನ ರೀತಿಯಲ್ಲಿ ಬಿಗಿಯಾಗಿ ಕಟ್ಟಿಡುವ ಕ್ರಮವೆಲ್ಲವನ್ನೂ ಬದಿಗೊತ್ತಿ ಸಡಿಲಗೊಳಿಸಿ, ಯಾವೊಂದೂ ಘನೀಭೂತವಾಗದಂತೆ ನೋಡಿಕೊಂಡು, ಕಾವ್ಯದ ಸರಣಿಗೆ ಪ್ರವಾಹಿತೆ ಹೊಂದಿಸುವುದೇ ಸಾಂಕೇತಿಕರ ಮಹೋತ್ಸಾಹ. ಕವಿಯ ಕೆಲಸ ವರ್ಣನೆಯಲ್ಲ. ತನ್ನ ಆಂತರ್ಯದ ಸಂವೇದನೆ ಅನಿಸಿಕೆ ಗೂಢಚಲನೆಗಳನ್ನು ಓದುಗನ ಚಿತ್ತಕ್ಕೆ ಸೂಕ್ತ ಪ್ರತಿಮೆಗಳ ಮೂಲಕ ಮೂಡಿಸುವುದು. ಪದ್ಯಕಾವ್ಯಕ್ಕೂ ಸಂಗೀತಕ್ಕೂ ಬಾಂಧವ್ಯ ಉಂಟೆಂದೂ ವಾಸನೆ ಶಬ್ದ ಬಣ್ಣಗಳಿಗೂ ಭಾಷೆಗೂ ಹೋಲಿಕೆ ಉಂಟೆಂದು ಸಾಂಕೇತಿಕತೆ ವಾದಿಸಿತು. ರೆಮಿ ಡ ಗೂರ್ಮಾನ್ ಮತ್ತು ಮಾರ್ಸೆಲ್ ಷ್ವಾಬ್ ಆ ಪಂಥದ ಮುಖ್ಯ ವಿಮರ್ಶಕರು.

1887 ರಿಂದ 1913ರವರೆಗಿನ ಅವಧಿಯ ಹೊಸ ಪಂಥಗಳು[ಬದಲಾಯಿಸಿ]

ಪುಟ್ಟ ಪುಟ್ಟ ಕವಿಕೂಟಗಳ ಉತ್ಪತ್ತಿಗೆ ಎಡೆಕೊಟ್ಟಿದ್ದು 19ನೆಯ ಶತಮಾನದ ಅಂತ್ಯಭಾಗದ ವೈಲಕ್ಷಣ್ಯ, 20ನೆಯ ಶತಮಾನದ ಆದಿಯಲ್ಲೂ ಅವು ತಲೆಯೆತ್ತಿ ನಾಲ್ಕು ದಿವಸ ಕೊಂಚ ಗಲಭೆಗೈದು ಬೇಗ ಬೇಗ ಅದೃಶ್ಯವಾದುವು. ಪ್ರತಿಯೊಂದಕ್ಕೂ ಒಂದೊಂದು ಕೇವಲ ವೈಯಕ್ತಿಕ ವಿಚಿತ್ರ ಸಿದ್ಧಾಂತವೇ ಚಾಲಕಶಕ್ತಿ. ಸುಮಾರು 1887 ರಿಂದ 1913ರವರೆಗಿನ ಕಾಲು ಶತಮಾನದಲ್ಲಿ ಹುಟ್ಟಿ ಸತ್ತು ಹೋದ ಪಂಥಗಳು ನಲವತ್ತಕ್ಕೂ ಮೀರಿದ್ದು ವೈಯಕ್ತಿಕತೆಯ ಅತಿಶಯದಿಂದಲೆ ಕಾವ್ಯ ಆಗಬೇಕು ಎನ್ನುವ ಆನಾರ್ಕಿಸಮ್, ಇಂಪು ನುಡಿಯಿಂದಲೇ ಕಾವ್ಯ ಎನ್ನುವ ಮ್ಯೂಸಿಸಮ್, ತೀವ್ರ ಉತ್ಸುಕತೆ ಇಲ್ಲದಿದ್ದರೆ ಕಾವ್ಯ ಹುಟ್ಟದು ಎನ್ನುವ ಘೋರಲಿಸಮ್, ಗದ್ಯವಾಗಲಿ ಪದ್ಯವಾಗಲಿ ಅಕ್ಕಸಾಲೆ ತಯಾರಿಸುವ ಆಭರಣದಂತಿರಬೇಕು ಎನ್ನುವ ಸಂಪ್‍ಚ್ಯುಯರಿಸಮ್, ರಹಸ್ಯಾದ್ಭುತ ಕಾವ್ಯಕ್ಕೆ ಅತ್ಯಗತ್ಯ ಎನ್ನುವ ಮೇಜಿಸಮ್ ಮುಂತಾದವು ಸಾಹಿತ್ಯದ ಇತಿಹಾಸದಲ್ಲಿ ಅಲ್ಪಾವಧಿ ಕೌತುಕಗಳಾಗಿ ಉಲ್ಲೇಖಗೊಂಡಿವೆ. 20ನೆಯ ಶತಮಾನದ ವಿಮರ್ಶೆ ನಡೆದು ಬಂದದ್ದು ಇಂಥ ಸಿದ್ಧಾಂತಗಳಿಂದಲೇ, ಅವುಗಳ ಪ್ರಚಾರಕ್ಕೋಸ್ಕರವೇ 20ನೆಯ ಶತಮಾನ ನಾನಾ ಅರ್ಥದಲ್ಲಿ ಜಾಹಿರಾತಿನ ಯುಗ. ಅಲ್ಲದೆ ಎದ್ದುಬಂದ ಎಲ್ಲ ಸಿದ್ಧಾಂತಗಳೂ ಅಳಿದು ಬೀಳಲಿಲ್ಲ. ಕೆಲವು ತಮ್ಮೊಳಗಣ ಜೀವಸತ್ವದಿಂದಲೊ ಇತರ ಸಂಗತಿಗಳಿಂದಲೊ ಉಳಿದು ಬಂದುವು, ಫ್ರಾನ್ಸಿನ ನೆರೆಹೊರೆ ದೇಶಗಳಿಗೂ ಹರಡಿದುವು.

(1) ಡಾಡೆಸಮ್: ಒಂದನೆಯ ಮಹಾಯುದ್ಧದ ಸಮಯದಲ್ಲಿ ರೂಮೇನಿಯ ಅಲ್ಸೇಷಿಯ ಜರ್ಮನಿಗಳಿಂದ ಆತ್ಮರಕ್ಷಣೆಗಾಗಿ ಓಡಿಬಂದ ಜನರಲ್ಲಿ ಕೆಲವರು ಮಾತುಕತೆಗೆ ಬಳಸಿಕೊಂಡ ಹರುಕುಮುರುಕು ಫ್ರೆಂಚನ್ನು ಆಧಾರವಾಗಿಟ್ಟುಕೊಂಡು, ಪದಕ್ಕೆ ಅಂಟಿಕೊಂಡಿರುವ ಭಾವಾರ್ಥ ಕೇವಲ ಅನುದ್ದಿಷ್ಟ ಮತ್ತು ಆಕಸ್ಮಿಕ, ಆದ್ದರಿಂದ ಒಂದು ಪದಕ್ಕೆ ಯಾವ ಅರ್ಥ ಬೇಕಾದರೂ ಸಲ್ಲುತ್ತದೆ. ಯಾವ ಅರ್ಥವೂ ಇಲ್ಲದಿರಬಹುದು ಎಂಬ ವಾದವನ್ನು ರಭಸದಿಂದ ಪ್ರಸಾರ ಮಾಡಿದ ಪಂಥ. ತಮ್ಮ ಪಂಥಕ್ಕೆ ನಾಮಕರಣ ಮಾಡುವ ಪ್ರಸಂಗದಲ್ಲಿ ನಾಯಕನಾದ ಟ್ರಿಸ್ಟನ್ ಟ್ಸಾರಾ ಎಂಬಾತ ಡಾಡಾ ಎಂದನಂತೆ. ಅಸಂಗತತ್ವವೂ ಅಬದ್ಧತೆಯೂ ಸ್ವೀಕರಣೀಯವೆಂಬುದೇ ಡಾಡಾ ಸಿದ್ಧಾಂತದ ತಿರುಳು. ಮೇಧಾಶಕ್ತಿ ಹೊರತರುವುದಕ್ಕಿಂತ ಸಹಜಪ್ರವೃತ್ತಿ ಅಭಿವ್ಯಕ್ತಗೊಳಿಸುವುದೇ ಪ್ರಶಸ್ತವೆಂದೂ ಅದರ ವಾದ. ಡಾಡಾಇಸಮ್ ತನ್ನ ಹೆಸರಿನಿಂದಲೇ ಹೆಚ್ಚು ದಿವಸ ಉಳಿಯದೆ ಸರ್ರಿಯಲಿಸಮ್ (ಅತಿವಾಸ್ತವಿಕತೆ) ಎಂಬ ಇನ್ನೂ ಚೈತನ್ಯಯುಕ್ತವಾಗಿರುವ ಸಿದ್ಧಾಂತದಲ್ಲಿ ಲೀನವಾಯಿತು.

(2) ಸರ್ರಿಯಲಿಸಮ್: ಮನಸ್ಸು ಪ್ರಜ್ಞೆ ಅರಿವುಗಳಿಗೆ ಗುಲಾಮರಾಗದೆ ಕವಿಗಳು ಇನ್ನೂ ಒಳಕ್ಕೆ ಪ್ರವೇಶಿಸಿ ಪ್ರಜ್ಞಾಪೂರ್ವ ಸುಪ್ತಸ್ಥಿತಿಯನ್ನು ಮುಟ್ಟಬೇಕು. ಆಗ ಅವರಿಗೆ ಅವ್ಯವಸ್ಥಿತವೂ ಚೆಲ್ಲಾಪಿಲ್ಲಿಯೂ ಆದ ಪ್ರತಿಮಾಪುಂಜದ ಸಂದಾಯ ಲಭ್ಯವಾಗುತ್ತದೆ. ಜೊತೆಗೆ ಅವುಗಳ ನಿರೂಪಣೆಯೂ ಸಂಕಲ್ಪವಿಲ್ಲದೆ ನಡೆಯುವ ಪ್ರಕೃತಿ ಚೋದಿತ ಕ್ರಿಯೆಯಾಗಿ ನೆರವೇರುತ್ತದೆ. ಆ ಅಂತರ್ದರ್ಶನಕ್ಕಾಗಲಿ ಬಾಹ್ಯಾಭಿವ್ಯಕ್ತಿಗಾಗಲಿ ಧೀಶಕ್ತಿಯ ಅಥವಾ ನೀತಿತತ್ತ್ವದ ಹಂಗು ಏನೇನೂ ಇರುವುದಿಲ್ಲ. ಈ ಸಿದ್ಧಾಂತದ ಉಚ್ಛ್ರಾಯ ನಂದಿಹೋಗಿ ದಶಕಗಳು ಕಳೆದಿದ್ದರೂ ಕವಿಯ ಮನೋಗತದ ಸಂಕೀರ್ಣತೆಯ ಮೇಲೆ ಅದು ಕೊಂಚ ಬೆಳಕು ಚೆಲ್ಲಬಲ್ಲುದು. ಸೃಜನ ಕಾರ್ಯದಲ್ಲಿ ವಾಸ್ತವಿಕತೆಯೊಂದಿಗೆ ಅವಾಸ್ತವಿಕತೆಯೂ ಸ್ವಲ್ಪ ಇರುತ್ತದೆಯೆಂದು ಅದು ತಿಳಿಸುತ್ತದೆ. ಹಾಗಿರುವುದರಿಂದಲೇ ಕವಿನಿರ್ಮಾಣ ಸಹೃದಯರಿಗೆ ಚೋದ್ಯವೆನ್ನಿಸುತ್ತದೆ, ಆಧುನಿಕ ವಿಮರ್ಶೆ ಬೆರಗುಗೊಳಿಸುವುದು ಕಾವ್ಯದ ದೊಡ್ಡ ಗುಣವೆಂದು ಒಪ್ಪಿಕೊಂಡಿದೆ.

(3) ಚಾಲ್ತಿಯಲ್ಲಿರುವ ಇನ್ನೊಂದು ಸಿದ್ಧಾಂತ ಎಕ್ಸಿಸ್ಟೆಂಷಿಯಲಿಸಮ್ (ವಾಸ್ತವಿಕತಾವಾದ). ಅದರ ಮುಖ್ಯ ಪ್ರತಿಪಾದಕ ಜೀನ್-ಪಾಲ್ ಸಾರ್ತ್. ವಿಮರ್ಶಾ ಕ್ಷೇತ್ರಕ್ಕಿಂತ ಹೆಚ್ಚಾಗಿ ನಾಟಕ ಕಾದಂಬರಿಗಳಲ್ಲಿ ಇದರ ಪ್ರಸಾರ ಪ್ರಭಾವ ಕಂಡುಬರುತ್ತದೆ.

ಸಾಹಿತ್ಯ ವಿಮರ್ಶೆಗೆ ಧೀಶಕ್ತಿ ಆವಶ್ಯಕ. ಅದರ ನ್ಯಾಯ ತೀರ್ಮಾನವೇ ಕಾವ್ಯದ ಸತ್ವ ಪರೀಕ್ಷೆ ಎನ್ನುವ ಪಂಗಡ ಈ ಶತಮಾನದಲ್ಲಿ ಇದ್ದೇ ಇದೆ. ಕಾರ್ಯವಾಸಿಯಾಗಿಯೂ ಇದೆ. ಹಾಗು ಅದು ಹಿಂದಣ ತನ್ನ ನ್ಯಾಯಾಧೀಶ ಸೋಗನ್ನು ಪರಿತ್ಯಜಿಸದೆ ಹೆಚ್ಚು ಹೆಚ್ಚಾಗಿ ವಿಶ್ಲೇಷಣ ಸಾದೃಶ್ಯ ಸಾಪೇಕ್ಷತೆಗಳನ್ನು ಬಳಸುತ್ತ ಬಂದಿದೆ. ನ್ಯಾಯಾಧೀಶನಂತೆ ತೀರ್ಪು ಉಚ್ಚರಿಸುವ ವ್ಯವಹಾರಕ್ಕೆ ಉತ್ತಮ ನಿದರ್ಶನ ಜೂಲಿಯೆನ್ ಬೆಂಡಾ (ಸತ್ತದ್ದು 1956) ಹಿಂದಣ ಶಿಷ್ಟತೆಯನ್ನು ಆತ ಎತ್ತಿ ಹಿಡಿದ. ಅವನ ದೃಢನಂಬಿಕೆಯಂತೆ, ಮಾನವನ ಭಾವ ಭಾವನೆ ಸಂಕಲ್ಪ ಕಾರ್ಯವೆಲ್ಲಕ್ಕೂ ಬುದ್ಧಿವಿವೇಚನೆ ಮತ್ತು ಮೇಧಾಶಕ್ತಿಗಳ ಪ್ರೇರಣೆಯೂ ಹತೋಟಿಯೂ ಅತ್ಯಗತ್ಯ. ಜೀವನದಲ್ಲಾಗಲಿ ಸಾಹಿತ್ಯದಲ್ಲಾಗಲಿ ರೊಮ್ಯಾಂಟಿಕ್ ಅಥವಾ ಭಾವಾತಿರೇಕದ ಅಥವಾ ಸಹಜಪ್ರವೃತ್ತಿಯ ದೃಷ್ಟಿಯೂ ಮಾರ್ಗವೂ ಖಂಡಿತ ಸಲ್ಲದು. ಕವಿಯ ಸ್ಪಷ್ಟನುಡಿಗಟ್ಟನ್ನು ಸರಿಯಾಗಿ ಗ್ರಹಿಸುವ ಬದಲು ಅದರ ಹಿಂದೆ ಯಾವುದೊ ಶುದ್ಧ ಚಿಂತನೆ ಇದೆಯೆಂದು ಬಗೆಯುವುದು ಅಧಿಕಪ್ರಸಂಗವೆ. ಅರ್ವಾಚೀನ ಸಾಹಿತಿಗಳಿಗೂ ಓದುಗರಿಗೂ ನೈಜ ಕಾವ್ಯಾನಂದದ ಅರಿವೇ ಇಲ್ಲ. ಏತಕ್ಕೆಂದರೆ ಅವರಿಗೆ ರುಚಿಸುವ ಸಾಹಿತ್ಯದ ತುಂಬ ಬರಿ ಸಂವೇದನೆ ಮತ್ತು ರಾಗೋತ್ಕರ್ಷ. ಬುದ್ಧಿ ವ್ಯಾಯಾಮಕ್ಕೆ ಆಸ್ಪದವಿಲ್ಲ. ವ್ಯಾಲೇರಿ, ಜೀಡ್ ಮೊದಲಾದ ಆಧುನಿಕ ಕವಿಗಳನ್ನು ಬೆಂಡಾ ವಾಗ್ದಂಡದಿಂದ ಬಡಿದು ಕೆಡವುತ್ತಾನೆ. ಸಾಹಿತಿ ಕಲಾವಿದ ಮೇಧಾವಿಗಳ ಮೇಲೆ ಅವನ ಇನ್ನೊಂದು ಆಕ್ಷೇಪ, ಅವರೆಲ್ಲ ತಮ್ಮ ಉಚ್ಚಸ್ಥಾನಕ್ಕೆ ಎರಡು ಬಗೆದಿದ್ದಾರೆ ಎಂದು. ಗಯಟೆ ತನ್ನ ಜೀವಿತವನ್ನು ಸಾಹಿತ್ಯಕ್ಕೆ ಮೀಸಲಾಗಿಟ್ಟ. ವಾಲ್ಟೇರ್ ಕಾಂಟ್‍ರೀನನ್ ಅವರು ನ್ಯಾಯ ಸತ್ಯ ಮಾನವವರ್ಗ ಇತ್ಯಾದಿ ಘನ ತತ್ತ್ವಗಳಿಗೆ ಶರಣಾಗಿದ್ದರು. ಈಚಿನ ವಿದ್ವಾಂಸರಾದರೂ ದೇಶೀಯ, ಸಾಮಾಜಿಕ ಅಥವಾ ರಾಜಕೀಯ ಪಕ್ಷಗಳ ಆವೇಶಕ್ಕೆ ತುತ್ತಾಗಿ ಕೆಳಗಿಳಿದಿದ್ದಾರೆ, ದ್ರೋಹಿಗಳಾಗಿದ್ದಾರೆ. ಇನ್ನೊಬ್ಬ ಪ್ರಖ್ಯಾತ ವಿಮರ್ಶಕ ಆಲ್ಬರ್ಟ್ ತೀ ಬೊಡೆಟ್. ಜಿನಿವಾ ವಿಶ್ವವಿದ್ಯಾನಿಲಯದಲ್ಲಿ ಫ್ರೆಂಚ್ ಸಾಹಿತ್ಯದ ಪ್ರಾಧ್ಯಾಪಕನಾಗಿದ್ದ. ಸಾಹಿತಿಗಳ ಮತ್ತು ಸಾಹಿತ್ಯ ವಿಚಾರಗಳ ವ್ಯಾಖ್ಯಾನಕಾರ ಆತ ಖಂಡನೆ ಮಂಡನೆ ಅವರಲ್ಲಿ ವಿರಳ. ಎಡ್ಮಾನ್ ಜಾಲೂಸ್ ಕೂಡ ಅದೇ ಬಗೆಯ ವ್ಯಾಖ್ಯಾನಿ. ಇಂಗ್ಲಿಷ್ ಮತ್ತು ಜರ್ಮನ್ ಸಾಹಿತಿಗಳನ್ನು ಪರಿಶೀಲಿಸಿದ್ದು ಅವನ ವೈಶಿಷ್ಟ್ಯ. ಪಿಯರ್ ಲಾಸೆರ್ ಹಳೆಯ ವಿವಾದವಾಗಿದ್ದ ಶಿಷ್ಟತೆಯೊ ರೊಮ್ಯಾಂಟಿಕತೆಯೊ ಎಂಬುದಕ್ಕೆ ಹೊಸ ಜೀವ ತಂದುಕೊಟ್ಟ. ಸಾಹಿತಿಗಳ ಸಣ್ಣ ಕೂಟಗಳ ಮೇಲೂ ಟೀಕೆಮಾಡಿದ. ಬೆಂಡಾನನ್ನು ಬಿಟ್ಟರೆ ಮಿಕ್ಕೆಲ್ಲರೂ ಸದ್ದು ಗಲಭೆಗೆ ಅವಕಾಶ ಕೊಡದ ಸಭ್ಯ ಲೇಖಕರು. ಆದ್ದರಿಂದ ಬುದ್ಧಿಗೆ ಪ್ರಾಮುಖ್ಯ ನಿಗದಿಸುವ ವಿಮರ್ಶೆ ಅಷ್ಟೊಂದಾಗಿ ವರ್ಧಿಸಲಿಲ್ಲ.

ಧೀಶಕ್ತಿಯನ್ನು ವಿರೋಧಿಸುವ ಅಥವಾ ಹಿಂದಕ್ಕೆ ದೂಡುವ ಅಭ್ಯಾಸವೇ ವಿಮರ್ಶೆಯ ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿದೆ. 1860ಕ್ಕೆ ಮೊದಲೇ ಬೋದಿಲೆರ್ ವಿವರಿಸಿದ ವಿಚಿತ್ರ ಸಂವೇದನ ಶಕ್ತಿ, ಎಂದರೆ ಬಾಳಿನ ಭೀಷಣತೆ ಕುರೂಪ ಕುತ್ಸಿಕತೆಗಳಿಂದ ಕವಿತ್ವಕ್ಕೆ ಒದಗುವ ಅಂದಚೆಂದವನ್ನು ಎಳೆದು ಗ್ರಹಿಸುವುದು. ದಾರ್ಶನಿಕ ಬರ್ಗ್‍ಸನ್ ಗುರ್ತಿಸಿ ತೋರಿಸಿ ಕೊಟ್ಟ ಒಳ ಅರಿವು. ರೆಮಿ ಡ ಗೂರ್ಮಾನ್ ಪ್ರತಿಪಾದಿಸಿದ ತತ್ತ್ವ ಚಿಂತನೆ ಪ್ರತಿಮೆಗಳ ಮೂಲಕ ನಡೆಯಬೇಕು; ಅಭಿಪ್ರಾಯಗಳ ಮೂಲಕವಲ್ಲ, ಎಂಬುದು ಮತ್ತು ಶಬ್ದಗಳ ಅಂತರಂಗ ಲಕ್ಷಣ ಇವುಗಳಿಂದ ವಿಮರ್ಶೆಗೆ ಹೊಸ ಆಯಾಮವೊಂದು ದೊರಕಿತು. ಎಮೀಲ್-ಅಗಸ್ತ್ ಚಾರ್ಟೀರ್-ಅಲೇನ್ ಅವನ ಕಾವ್ಯನಾಮ-ಸುಮಾರು 40 ವರ್ಷ ಬೋಧಕನಾಗಿ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯವನ್ನೂ ವಿವೇಚನೆಯನ್ನು ಪ್ರೋತ್ಸಾಹಿಸಿದ. ಪಾರಂಪರ್ಯವಾಗಿ ಬಂದ ಅಭಿಪ್ರಾಯಗಳನ್ನು ಒಲವುಗಳನ್ನೂ ದಾಕ್ಷಿಣ್ಯವಿಲ್ಲದೆ ಪರೀಕ್ಷಿಸಬೇಕು; ಅವುಗಳ ಸುತ್ತ ಕವಿದಿರುವ ಮೋಹಕ ಆವರಣವನ್ನು ಕಿತ್ತೊಗೆಯಬೇಕು; ಪದಗಳನ್ನೂ ನಿಜವಾದ ಅರ್ಥದಲ್ಲಿ ಮಾತ್ರ ಗ್ರಹಿಸಬೇಕು; ಹಲವು ಬಾರಿ ಆಲೋಚಿಸಿ ಪುನಃ ಆಲೋಚಿಸಿ ಸ್ವಂತ ತೀರ್ಮಾನಕ್ಕೇ ಬರಬೇಕು-ಇದು ಅವನ ಉಪದೇಶದ ಸಾರಾಂಶ. ವ್ಯಾಖ್ಯಾನ ಅವನ ವಿಮರ್ಶಾತ್ಮಕ ಪುಸ್ತಕಗಳಲ್ಲಿ ಒಂದು. ಸಂಗೀತಾದಿ ಇತರ ಲಲಿತಕಲೆಗಳ ವಿಷಯವಾಗಿಯೂ ಅವನಿಂದ ಪ್ರಬಂಧಗಳು ರಚಿತವಾದವು.

ಆಧುನಿಕ ಫ್ರೆಂಚ್ ವಿಮರ್ಶೆ[ಬದಲಾಯಿಸಿ]

ಆಧುನಿಕ ಫ್ರೆಂಚ್ ವಿಮರ್ಶೆಯ ಸಮರ್ಪಕ ಪ್ರತಿನಿಧಿಗಳಾದ ಆಂದ್ರೆ ಜೀಡ್ ಮತ್ತು ಪಾಲ್ ವ್ಯಾಲೇರಿ ಸಮಕಾಲೀನರು. ಜೀಡ್ ಹುಟ್ಟಿದ್ದು 1869ರಲ್ಲಿ. ವ್ಯಾಲೇರಿ 1871ರಂದು, ಇಬ್ಬರೂ ಸತ್ತದ್ದು ಕ್ರಮವಾಗಿ 1951, 1945ರಲ್ಲಿ. ಜೀಡ್ ತನ್ನ ಕೃತಿಗಳಲ್ಲೇ ಸಂಪ್ರದಾಯಬದ್ಧತೆ ಸಾಹಿತ್ಯದಲ್ಲಿ ಒಳಿತಲ್ಲವೆಂದು ಅವಹೇಳನಗೈದ; ಒಳಗಿನಿಂದ ಚಿಮ್ಮುವ ಆವೇಗಗಳನ್ನು ನಿರಾಕರಿಸಿ ತಡೆಗಟ್ಟದೆ ಅವನ್ನು ಹಿಂಬಾಲಿಸಿ ಉಂಟಾಗುವ ಸಂವೇದನೆಗಳನ್ನು ಅನುಭೋಗಿಸಿ ಎಂದು ಯುವಕರಿಗೆ ಉಪದೇಶ ಹೇಳಿದ. 1908ರಲ್ಲಿ ಫ್ರಾನ್ಸಿನ ನವೀನ ಸಮೀಕ್ಷೆ ಎಂಬ ಪತ್ರಿಕೆಯ ಸ್ಥಾಪಕರಲ್ಲಿ ಒಬ್ಬನಾಗಿ ಮುಂಗಾಮಿ ಸಾಹಿತಿಗಳಿಗೆ ಮಾರ್ಗದರ್ಶಕನೂ ಗುರುವೂ ಆದ. ತಪ್ಪೊಪ್ಪಿಗೆ, ಅಂತರಂಗ ಶೋಧನೆ, ಆತ್ಮಪರೀಕ್ಷೆ ಇತ್ಯಾದಿ ವ್ಯಾಪಾರಗಳ ವರ್ಣನೆಯಲ್ಲಿ ಅಗ್ರಗಣ್ಯನಾದ. ಲೈಂಗಿಕ ವಿಕಾರಗಳಿಗೆ ಹೇರಳ ಜಾಗವನ್ನು ಕೊಟ್ಟ. ಆತಂಕ ಭೀತಿ ಪಶ್ಚಾತ್ತಾಪ ಮುಂತಾದವನ್ನೂ ರಸಮಯವಾಗಿ ವಿವರಿಸಿ ಚರ್ಚಿಸಿ ಅತ್ಯಾಕರ್ಷಕ ಲೇಖಕನಾದ. ವಿಮರ್ಶಕರ ಮಧ್ಯೆ ವಿಶೇಷ ಗೌರವಸ್ಥನಾದ. ಕಾದಂಬರಿಗಿಂತಲೂ ಹೆಚ್ಚಾಗಿ ತನಗೆ ಒಗ್ಗಿಬಂದ ಕಥಾರೂಪದ ಕೃತಿಗೆ ಅವನು ರೇಸಿಟ್ ಎಂದು ಹೆಸರಿಟ್ಟ: ಕಾದಂಬರಿಯನ್ನು ರೊಮಾನ್ ಎಂದು ಕರೆದ. ರೇಸಿಟ್ ರೂಢಿಯಾಗಿದ್ದ ಕಥೆಯಂತಲ್ಲ; ಒಂದು ಪಾತ್ರ ಬಲು ಸರಳವಾಗಿ ಕಥೆ ಹೇಳುತ್ತ ಹೋಗುತ್ತದೆ; ಸರಳತೆಯ ಹಿಂದೆ ಸ್ವಾರಸ್ಯವಾದ ಕಟಕಿಯನ್ನು ಇಟ್ಟಿರುತ್ತದೆ. ಕಥೆಯಲ್ಲಾಗಲಿ ಪ್ರಬಂಧದಲ್ಲಾಗಲಿ ಜೀಡ್ ಜೀವನ ಮತ್ತು ಸಾಹಿತ್ಯಗಳ ಆಸಕ್ತ ವಿಮರ್ಶಕ. ಪಾಲ್ ವ್ಯಾಲೇರಿ ಮೊದ ಮೊದಲು ಸಾಂಕೇತಿಕತೆಗೆ ಮಾರುಹೋಗಿ ಬೇಗ ತನ್ನ ಶ್ರದ್ಧಾಶಕ್ತಿಯನ್ನು ತತ್ತ್ವಸಮಸ್ಯೆಗಳ ಕಡೆಗೆ ತಿರುಗಿಸಿದ. ಪ್ರತಿಭೆಯ ಸ್ವರೂಪ; ಕಲಾಸೃಷ್ಟಿ ಜರುಗುವ ರೀತಿ; ಭಾಷೆಯ ವಿಚಾರ; ಕಲಾವಿದನಿಗೆ ಅಗತ್ಯವಾದ ಬುದ್ಧಿಶಕ್ತಿ ಮತ್ತು ರಾಗೋತ್ಕರ್ಷಗಳ ಅನ್ಯೋನ್ಯ ವಿರೋಧ; ವಿಶ್ವ ಮನುಷ್ಯ ಮನುಷ್ಯನ ಕಾರ್ಯಾವಳಿ ಇವುಗಳ ಸಂಬಂಧ-ಇಂಥ ಜಟಿಲ ಪ್ರಶ್ನೆಗಳ ಚಿಂತನೆಯಲ್ಲಿ ಅವನು ತಿಂಗಳುಗಟ್ಟಲೆ ಮಗ್ನನಾಗಿರುತ್ತಿದ್ದ. ಇಲ್ಲದಿರುವಿಕೆಯಿಂದ ಇರುವಿಕೆ ಜನ್ಯವಾಗುವ ಸಂಗತಿ ಅವನ ಲೇಖನದಲ್ಲಿ ಮತ್ತೆಮತ್ತೆ ಚರ್ಚಿತವಾಗಿದೆ. ವಿಶ್ವ ವ್ಯಾಪ್ತ ಮೆದುಳಿನ ಅವತಾರವೆಂದು ಬೃಹದಾಕೃತಿಯ ಪೆಡಂಭೂತವನ್ನು ನಿರ್ಮಾಣಗೈದು ಅದಕ್ಕೆ ಶ್ರೀಮಾನ್ ಟೆಸ್ಟೆ ಎಂದು ನಾಮಕರಣ ಮಾಡಿದ. ಅದರೊಡನೆ ಸಂಭಾಷಣೆ ನಡೆಸಿದ. ಟೆಸ್ಟೆಯ ದಿನಚರಿ ರಚಿಸಿದ; ಟೆಸ್ಟೆಗೆ ಎಮಿಲಿ ಎಂಬ ಭಾರ್ಯೆಯನ್ನೂ ತಂದುಕೂಡಿಸಿದ. ಟೆಸ್ಟೆಯ ಪ್ರಬಲ ಸಾಹಸವಾವುವೆಂದರೆ ಸಾಧ್ಯ ಅಸಾಧ್ಯಗಳನ್ನು ಸಮನ್ವಯಿಸುವುದು; ಲಲಿತಕಲೆಗಳನ್ನೂ ಕುರಿತು ವ್ಯಾಲೇರಿ ಬರೆದ; ಅವನ ದೃಷ್ಟಿಯಲ್ಲಿ ನೃತ್ಯ ಚಲನೆಯ ಅತ್ಯಂತ ಶ್ರೇಷ್ಠ ನಿರೂಪಣೆ, ವಾಸ್ತುಶಿಲ್ಪ ಸ್ತಬ್ಧತೆಯ ಅತ್ಯಂತ ಶ್ರೇಷ್ಠರೂಪ.

ಇಪ್ಪತ್ತನೇ ಶತಮಾನದಲ್ಲಿ ಸಾಹಿತ್ಯವಿಮರ್ಶೆಗೆ ಹೆಚ್ಚಿನ ಅವಕಾಶ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಇದ್ದರೂ ಕೇವಲ ಸಾಹಿತ್ಯ ಅಥವಾ ರಸಾಸ್ವಾಧನೆಯ ದೃಷ್ಟಿಯಿಂದ ಮಾಡಿದ ಬರವಣಿಗೆ ಕಡಿಮೆ. ವಿಮರ್ಶೆಯನ್ನೇ ತಮ್ಮ ಮುಖ್ಯ ಗುರಿಯಾಗಿಟ್ಟು ಬರೆದಿರುವವರು ಹೆಚ್ಚಾಗಿಲ್ಲ. ಬದಲಾಗಿ "ಸಾಹಿತ್ಯಕ ತಿಳಿವಳಿಕೆ"ಯನ್ನು ಕೊಡುವವರು ಅನೇಕರು. ಮಾರ್ಸೆಲ್ ಕಿಬೋ "ಪೂರ್ವಾಗ್ರಹರಹಿತ"ವಾಗಿ ಬರೆಯಲು ಪ್ರಯತ್ನಿಸುತ್ತಾರೆ. ಈ ಶತಮಾನದ ಉತ್ತರಾರ್ಧದಲ್ಲಿ ವಿಮರ್ಶೆಯ ಕ್ಷೇತ್ರದಲ್ಲಿ ಕಂಡುಬರುವುದು. ಮಾರ್ಸೆಲ್ ಆರ್ಲಾಂಡ್ ಅವರೂ ಹೇಳಿದಂತೆ "ಸಂಪೂರ್ಣ ಅರಾಜಕತೆ". ಜ್ಷಾಕ್ ರಿವೀಯರ್ ಅವರ ಮಾತಿನಲ್ಲಿ "ಸಾಹಿತ್ಯವೆಂದರೆ ಪರಿಕಲ್ಪನೆಯಲ್ಲಿ ಒಂದು ಸಂಧಿಕಾಲ". ವಿವಿಧ ಸಾಹಿತ್ಯಪ್ರಕಾರಗಳ ಮಧ್ಯೆ ಇದ್ದ ವ್ಯತ್ಯಾಸಗಳು ಅಳಿಸಿಹೋಗಿ ತಾಂತ್ರಿಕ ವಿಷಯಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯ ಲೇಖಕರಿಗೆ. ಆಂದ್ರೆ ರೂಸೋ ಅವರು ಹೇಳಿದ್ದು : "ನಮ್ಮ ಕೆಲಸ ಒಂದು ಕೃತಿ ಉತ್ತಮ ಇಲ್ಲ ಕೀಳು ಎಂದಲ್ಲ; ಅದು ಗುಲಾಬಿಯೇ, ನೆಗ್ಗಲು ಮುಳ್ಳೇ ಎಂಬುದು ಮಾತ್ರ".

ವಿಮರ್ಶೆಯ ರೂಪರೇಷೆಗಳು ಅಳಿಸಿಹೋಗಿದ್ದರೂ ಅದು ಜೀವಂತವಾಗಿದೆ. ವಿಮರ್ಶೆ ಮಾನವತಾವಾದದ ಒಂದು ಅಂಗವಾಗಿ ನಡೆಯುತ್ತಿದೆ.

ಇದನ್ನೂ ನೋಡಿ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: