ಜೀನ್ ರಾಸೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀನ್ ರಾಸೀನ್ (1639-99) ಫ್ರಾನ್ಸ್‍ನ ಪ್ರಸಿದ್ಧ ದುರಂತನಾಟಕಕಾರ.

ಬದುಕು ಮತ್ತು ನಾಟಕಗಳು[ಬದಲಾಯಿಸಿ]

ಪಿಕಾರ್ಡಿಯಲ್ಲಿನ ಲಾಫರ್ಟೆ-ಮಿಲಾನ್‍ನಲ್ಲಿ 1639 ಡಿಸೆಂಬರ್ ನಲ್ಲಿ ಜನಿಸಿದ. ಚಿಕ್ಕವಯಸ್ಸಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡ ಇವನನ್ನು ತಂದೆಯ ಅಜ್ಜ ಅಜ್ಜಿ ಬೆಳೆಸಿದರು. ಮೊದಲು ಇವನು ಕಾಲೇಜ್-ಡಿ-ಬ್ಯೂವಾಯ್‍ನಲ್ಲಿ ಓದಿದ. ಅನಂತರ ಪ್ರಸಿದ್ಧ ಪೋರ್ಟ್ ರಾಯಲ್ ಶಾಲೆಯನ್ನು ಸೇರಿದ. ಅಲ್ಲಿ ಅಭಿಜಾತ ಸಾಹಿತ್ಯದ ಬಗೆಗೆ ಅದರಲ್ಲೂ ಗ್ರೀಕ್ ಅಭಿಜಾತ ಸಾಹಿತ್ಯದ ಬಗೆಗೆ ಆಸಕ್ತಿಯುಂಟಾಗಿ ಅದನ್ನು ಆಳವಾಗಿ ಅಧ್ಯಯನ ಮಾಡಿದ.

1658ರಲ್ಲಿ ಇವನು ಪ್ಯಾರಿಸ್‍ಗೆ ಬಂದು, ಅಲ್ಲಿ ತನ್ನ ತಂದೆಯ ದಾಯಾದಿಯ ಮನೆಯಲ್ಲಿ ವಾಸಿಸತೊಡಗಿದ. ಅಲ್ಲಿ ಇವನಿಗೆ ಸಾಹಿತಿಗಳ ಮತ್ತು ಫ್ಯಾಷನ್ ಕಲಾವಿದರ ಪರಿಚಯವಾಯಿತು. ಮುಖ್ಯವಾಗಿ ಲಾ-ಫಾಂಟೇನ್ ಜೊತೆಗಿನ ಇವನ ಸಂಬಂಧ ಗಾಢವಾಯಿತು. ಅನಂತರ 1661ರಲ್ಲಿ ಇವನ ಚಿಕ್ಕಪ್ಪನ ಆಹ್ವಾನದಂತೆ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಲು ಹೋದ. ಆ ಮೂಲಕವಾಗಿ ಕ್ರೈಸ್ತಮತದ ಒಪ್ಪಿಗೆಯನ್ನು ಪಡೆಯುವುದು ಇವನ ಉದ್ದೇಶವಾಗಿತ್ತು. ಅಲ್ಲಿದ್ದ ಸುಮಾರು ಒಂದು ವರ್ಷದ ಅವಧಿಯಲ್ಲಿ ತತ್ತ್ವಶಾಸ್ತ್ರ, ಪ್ರಾಚೀನ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯಗಳ ಬಗೆಗೆ ಅಧ್ಯಯನ ಮಾಡಿದ. ಕಾವ್ಯರಚನೆಯನ್ನು ಆರಂಭಿಸಿದ. ಆದರೆ ಕ್ರೈಸ್ತಮಠದ ಒಪ್ಪಿಗೆ ಪಡೆಯುವಲ್ಲಿ ವಿಫಲನಾಗಿ ಪ್ಯಾರಿಸ್‍ಗೆ ಹಿಂತಿರುಗಿದ. ಲಾ ಫಾಂಟೇನ್ ಜೊತೆಗೆ ಮೋಲಿಯರ್‍ನ ಸ್ನೇಹವೂ ಇವನಿಗೆ ಲಭಿಸಿತು. ಆದರೆ ಸ್ವಲ್ಪಕಾಲದಲ್ಲಿಯೇ ಮೋಲಿಯರ್ ನೊಡನೆ ಇವನಿಗೆ ವಿರಸವುಂಟಾಯಿತು. ಇದಕ್ಕೆ ಕಾರಣ ತಿಳಿಯದು. ಪರಿಣಾಮವಾಗಿ ಮೋಲಿಯರ್‍ನ ನಾಟಕ ಕಂಪನಿಯಲ್ಲಿ ಪ್ರದರ್ಶನ ವಾಗುತ್ತಿದ್ದ ಇವನ ಅಲೆಗ್ಸಾಂಡ್ರೆ-ಲೆ-ಗ್ರಾಂಟ್ ಎಂಬ ನಾಟಕವನ್ನು ಇನ್ನೊಂದು ನಾಟಕ ಕಂಪನಿಗೆ ವರ್ಗಾವಣೆ ಮಾಡಲಾಯಿತು. ಮೋಲಿಯರ್ ಕಂಪನಿಯ ಮುಖ್ಯ ನಟಿಯಾಗಿದ್ದ ಮೆಡಮಾಯ್ಸಿಲ್-ಡು-ಪಾರ್ಕ್‍ಳನ್ನು ತನ್ನ ಪ್ರೇಯಸಿಯನ್ನಾಗಿ ಮಾಡಿಕೊಂಡು ಅವಳು ಆ ಕಂಪನಿಯಿಂದ ಹೊರಬರುವಂತೆ ಮಾಡಿದ. ಈತ ಫ್ರೆಂಚ್ ಅಕಾಡೆಮಿಗೆ 1623ರಲ್ಲಿ ಆಯ್ಕೆಯಾದ. ಇವನಿಗೆ ಲಾ-ಫಾಂಟೇನ್, ಬಾಯ್ಲೂರಂತಹ ಗಾಢಸ್ನೇಹಿತರು ಇದ್ದಂತೆ ಕಡುವೈರಿಗಳೂ ಇದ್ದರು. ವಿಮರ್ಶೆಯೆಂದರೆ ರಾಸೀನನಿಗೆ ಆಗುತ್ತಿರಲಿಲ್ಲ. ಆದ್ದರಿಂದ ತನ್ನ ಕೃತಿಯ ವಿಮರ್ಶಕರ ವಿರುದ್ಧ ಕಟುವಾಗಿ ತಿರುಗುಬಾಣ ಬಿಡುವ ಪ್ರವೃತ್ತಿ ಇವನದು. ಇವನು ತನ್ನ ಪತ್ರಗಳಲ್ಲಿ, ತನ್ನ ನಾಟಕಗಳಿಗೆ ಬರೆದ ಮುನ್ನುಡಿಗಳಲ್ಲಿ ತನ್ನ ಎದುರಾಳಿಗಳು ಮತ್ತು ವಿಮರ್ಶಕರನ್ನು ಕುರಿತು ಕಟುವಾಗಿ ಟೀಕಿಸಿದ್ದಾನೆ. ಇವನು ಪೋರ್ಟ್‍ರಾಯಲ್ ಶಾಲೆಯ ಅಧ್ಯಾಪಕರ ವಿರುದ್ಧ ಮಾಡಿದ ಟೀಕೆಗಳು ಬಹಳ ತೀಕ್ಷ್ಣವಾದವು. ಏಕೆಂದರೆ ಧರ್ಮಶೋಧನಾವಾದಿ ದೃಷ್ಟಿಯುಳ್ಳ ಅವರು ನಾಟಕವನ್ನು ಮತ್ತು ರಂಗಭೂಮಿಯನ್ನು ಅನೈತಿಕವಾದದ್ದೆಂದೂ ಆ ಚಟುವಟಿಕೆಯಲ್ಲಿ ತೊಡಗುವವರು ನೇರವಾಗಿ ನರಕಕ್ಕೆ ಹೋಗುವವರೆಂದೂ ಟೀಕಿಸುತ್ತಿ ದ್ದರು. ಇವನ ಅಧ್ಯಾಪಕನಾಗಿದ್ದ ನಿಕೋಲ್ ತನ್ನ ಒಂದು ಲೇಖನ ಲೆವಿಷನರೀಸ್‍ನಲ್ಲಿ (1666) ಕಾದಂಬರಿಕಾರರು ಹಾಗೂ ನಾಟಕಕಾರರನ್ನು ಸಾರ್ವಜನಿಕ ಜೀವನದಲ್ಲಿ ವಿಷ ಬೆರೆಸಿದವರೆಂದು ಬರೆದ. ಈತ ಇದಕ್ಕೆ ಉತ್ತರ ರೂಪದಲ್ಲಿ ಎರಡು ಬಹಿರಂಗ ಪತ್ರಗಳನ್ನು ಬರೆದು ಟೀಕಿಸಿದ.

1664-77ರ ಅವಧಿ ಇವನ ಸೃಜನಶೀಲತೆಯ ದೃಷ್ಟಿಯಿಂದ ಬಹಳ ಮುಖ್ಯವಾದ ಕಾಲ. ಈ ಅವಧಿಯಲ್ಲಿ ಇವನ ಪ್ರಸಿದ್ಧ ಕೃತಿಗಳು ರಚನೆಗೊಂಡವು. ಆದರೆ ಈ ಅವಧಿಯಲ್ಲಿನ ಇವನ ವೈಯಕ್ತಿಕ ಜೀವನದ ಬಗೆಗೆ ಹೆಚ್ಚು ತಿಳಿಯುವುದಿಲ್ಲ. ಇವನಿಗೆ ಈ ಅವಧಿಯಲ್ಲಿ ಮೆಡಮಾಯ್ಸಿಲ್-ಡು-ಪಾರ್ಕ್ ಅಲ್ಲದೆ ಇನ್ನೊಬ್ಬಳೂ ಪ್ರಸಿದ್ಧ ನಟಿ ಮೆಡಮಾಯ್ಸಿಲ್-ಚಾಮ್ ಎಮೆಸ್ಲೆ ಎನ್ನುವವಳ ಜೊತೆ ನಿಕಟ ಸಂಪರ್ಕವಿತ್ತೆಂದು ತಿಳಿದುಬರುತ್ತದೆ. ಈ ಇಬ್ಬರು ನಟಿಯರೂ ಇವನ ನಾಟಕಗಳಲ್ಲಿ ನಟಿಸುತ್ತಿದ್ದರು. ಇವನಿಗೆ ಪ್ಯಾರಿಸ್‍ನ ಅಧೋಲೋಕ ಚಿರಪರಿಚಿತವಾಗಿತ್ತು. ಆ ಕಾಲದ ಪ್ಯಾರಿಸ್ಸಿನ ಅಧೋಲೋಕದ ಪ್ರಸಿದ್ಧ ಮಾಟಗಾತಿಯೆನಿಸಿದ್ದ ಲವಾಯ್ಸಿನ್ ಎಂಬುವಳ ಸಹಾಯದಿಂದ ತನ್ನ ಪ್ರೇಯಸಿಯರಲ್ಲಿ ಒಬ್ಬಳನ್ನು ವಿಷಹಾಕಿ ಕೊಲ್ಲಿಸಿದನೆಂದ ಪ್ರತೀತಿಯಿತ್ತು. ಆದರೆ ಇವೆಲ್ಲ ಕಟ್ಟುಕಥೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದಿದೆ. ಇವನ ನಾಟಕಗಳಲ್ಲಿ ಈ ರೀತಿಯ ಹಿಂಸೆ ಅದರಲ್ಲೂ ಸ್ತ್ರೀಯರಿಂದಾಗುವ ಹಿಂಸೆ ತೀವ್ರವಾಗಿ ಚಿತ್ರಣಗೊಂಡಿದೆ. ಆ ಕಾಲದಲ್ಲಿ ಪ್ಯಾರಿಸ್ ಮತ್ತು ವರ್ಸೆಲ್ಸ್‍ಗಳಲ್ಲಿದ್ದ ಹಿಂಸಾತ್ಮಕ ಜೀವನದ ಮೇಲೆ ಈತ ಮಾಡಿದ ವ್ಯಂಗ್ಯ ವ್ಯಾಖ್ಯಾನವೆಂದು ಈಗಿನ ವಿಮರ್ಶಕರು ಗುರುತಿಸಿದ್ದಾರೆ.

ಈತ ನಾಟಕರಚನೆಯನ್ನು ಆರಂಭಿಸಿದಾಗ, ಸಾಮಾನ್ಯವಾಗಿ ಎರಡು ರೀತಿಯ ದುರಂತನಾಟಕಗಳು ಫ್ರಾನ್ಸ್‍ನಲ್ಲಿ ಪ್ರ್ರಾಚುರ್ಯದಲ್ಲಿದ್ದವು. 1) ಗಂಭೀರ ವಸ್ತುಗಳನ್ನುಳ್ಳ, ರಾಜಕೀಯ ಒಳಸಂಚು ಕುತಂತ್ರಗಳನ್ನೊಳ ಗೊಂಡ, ಮಹತ್ವಾಕಾಂಕ್ಷೆಯ ಕ್ರೂರ ನಾಯಕ, ನಾಯಿಕೆಯರನ್ನುಳ್ಳ ಕಾರ್ನೀಲನ ನಾಟಕಗಳು (ಇವುಗಳಲ್ಲಿ ಪ್ರೇಮಪ್ರಸಂಗಗಳಿಗೆ ಪ್ರಾಮುಖ್ಯ ವಿರುತ್ತಿರಲಿಲ್ಲ) 2) ಯುವಜನಾಂಗಕ್ಕೆ ಪ್ರಿಯವಾಗುವಂತಹ, ರಾಜಕೀಯ ಕುತಂತ್ರಗಳಿಗೆ ಪ್ರಾಮುಖ್ಯ ಕೊಡದೆ, ಅಂತರಂಗದ ವಿಷಯಗಳಿಗೆ ಪ್ರಾಮುಖ್ಯ ಕೊಡುವ ಕ್ವಿನಾಲ್ವನ ನಾಟಕಗಳು. ಕೆಲವು ನಾಟಕಗಳು ಈ ಎರಡೂ ಅಭಿರುಚಿಗಳನ್ನು ಸಮಾನವಾಗಿ ಒಳಗೊಂಡಿರುವುದನ್ನು ಕಾಣಬಹುದು.

ಇವನ ಮೊದಲ ನಾಟಕ ಲಾ ಥೆಬೈಡೆ (1664) ಕಾರ್ನೀಲನ ಪ್ರಕಾರಕ್ಕೆ ಸೇರಿದ್ದು, ಇಲ್ಲಿ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳು ಸಿಂಹಾಸನ ಕ್ಕಾಗಿ ಹೋರಾಡುತ್ತಾರೆ.

ಇವನ ಅಲೆಗ್ಸಾಂಡ್ರೆ-ಲೆ-ಗ್ರಾಂಟ್ (1665) ನಾಟಕದ ಮೇಲೆ ಕ್ವಿನಾಲ್ವ ನ ಪ್ರಭಾವ ಗಾಢವಾಗಿರುವುದನ್ನು ಕಾಣಬಹುದು. ಇದರ ನಾಯಕ ಕೇವಲ ಪ್ರೇಮಜ್ವರದಿಂದ ಪೀಡಿತನಾದ ಒಬ್ಬ ಗ್ರಾಮ್ಯ ಪ್ರಣಯಿ. ಆ್ಯಂಡ್ರೋಮ್ಯಾಕೆ (1667) ನಾಟಕ ರಚನೆಯೊಂದಿಗೆ ಇವನ ವಿಶಿಷ್ಟ ನಾಟಕ ಪ್ರತಿಭೆ ಪ್ರಕಾಶಕ್ಕೆ ಬಂದಿತು. ಮಾನವೀಯ ಭಾವನೆಗಳ ಪಾರಸ್ಪರಿ ಕ ಪ್ರಭಾವ ಅಥವಾ ಅನ್ಯೋನ್ಯ ಕ್ರಿಯೆಯ ಚಿತ್ರಣ, ಚಿತ್ತಕ್ಷೋಭೆಯಂಟು ಮಾಡುವ ಪ್ರೇಮಕಾಮದ ಚಿತ್ರಣ, ಇದೇ ತೀಕ್ಷ್ಣ ಅಸೂಯೆಯಾಗಿ, ದ್ವೇಷವಾಗಿ, ಬುದ್ಧಿಭ್ರಮಣೆ ಮತ್ತು ಅಪರಾಧದಲ್ಲಿ ಕೊನೆಯಾಗುವುದು ಇವುಗಳನ್ನು ಇವನು ಚಿತ್ರಿಸುವ ರೀತಿ, ಈ ನಾಟಕದಿಂದ ಆರಂಭವಾಯಿ ತು. ಅರಿಸ್ಟೋಫೆನಿಸ್‍ನ ಪ್ರಭಾವವುಳ್ಳ-ಲೆ-ಪ್ಲೆಡ್ಯೂರ್ಸ್ ಎಂಬ ಏಕಮಾತ್ರ ವಿನೋದ ನಾಟಕವನ್ನೂ ಇವನು ಬರೆದಿದ್ದಾನೆ. ಬ್ರಿಟಾನಿಕಸ್ (1669) ನಾಟಕದಲ್ಲಿ ಟಾಸಿಟಸ್‍ನಿಂದ ವಸ್ತುವನ್ನು ತೆಗೆದುಕೊಂಡು, ರೋಮನ್ ಚಕ್ರಾಧಿಪತ್ಯದ ಅತ್ಯಂತ ಕರಾಳ ಯುಗವನ್ನು ಚಿತ್ರಿಸಿದ್ದಾನೆ. ಬೇರೇನಿಸೆಲ್ (1670) ನಾಟಕದಲ್ಲಿ ಶುದ್ಧ ಮನಶ್ಶಾಸ್ತ್ರೀಯ ವಸ್ತುವನ್ನು ಬಳಸಿಕೊಳ್ಳಲಾ ಗಿದೆ. ಕರುಣಾಜನಕ ಸ್ಥಿತಿಯಲ್ಲಿರುವ ನಾಯಕಿಯ ಅಂತರಂಗದ ತುಮುಲ ವನ್ನು ಇದು ಚಿತ್ರಿಸುತ್ತದೆ. ಕ್ರಿಯೆ ಅತ್ಯಂತ ಸರಳವಾಗಿದೆ. ಆದರೆ ಬಜಾಜೆಟ್ ನಾಟಕ (1672) ಅಷ್ಟೇ ಸಂಶ್ಲಿಷ್ಟ ಕ್ರಿಯೆಯನ್ನುಳ್ಳದ್ದಾಗಿದೆ. ಇದರ ವಸ್ತು ಟರ್ಕಿಯಲ್ಲಿ ನಡೆದಂತೆ ಇದೆ. ಹಿಂಸಾತ್ಮಕ ಒಳಸಂಚುಗ ಳಿಂದ ಕೂಡಿದೆ. ಮತ್ರಿದಾತೆ (1673) ಕಾರ್ನೀಲನ ಸಂಪ್ರದಾಯದ ನಾಟಕ. ಇದರಲ್ಲಿ ಪ್ರೇಮಕಥೆ, ರಾಜಕೀಯ ಮಹತ್ವಾಕಾಂಶೆಗೆ ಅಧೀನ

ವಾಗಿ ಬರುತ್ತದೆ. ಇಫಿಜೀನಿ (1674) ನಾಟಕದಲ್ಲಿ ರಾಜಕೀಯ ದುರಂತ ಮತ್ತು ವೈಯಕ್ತಿಕ ಕಾಮದ ವಸ್ತುಗಳಲ್ಲಿ ಹೊಂದಾಣಿಕೆ ಮಾಡುವ ಪ್ರಯತ್ನವನ್ನು ಕಾಣಬಹುದು. ಆದರೆ ಫೀಡ್ರೆ (1677) ವಸ್ತು ಮತ್ತು ಅದರ ನಿರ್ವಹಣೆಯ ದೃಷ್ಟಿಯಿಂದ ಬಹಳ ಧೈರ್ಯದ ನಾಟಕ. ಇದರಲ್ಲಿ ಅಕ್ರಮ ಪ್ರಣಯದ ಚಿತ್ರಣ ಅತ್ಯಂತ ತೀವ್ರವಾಗಿ ರೂಪಗೊಂಡಿದೆ. ಗ್ರೀಕ್ ಕಥೆಯನ್ನು ಆಧರಿಸಿ ಇದರಲ್ಲಿ ಪ್ರಾಚೀನ ಗ್ರೀಕರ ಅದೃಷ್ಟದ ಪರಿಕಲ್ಪನೆ, ಕ್ರಿಶ್ಚಿಯನ್ ಧರ್ಮದ ಕರುಣೆ, ದೈವದ ಅನಂತಶಕ್ತಿ, ಮಾನವೀಯ ಕಾಮ ಇವುಗಳ ಸಂಕೀರ್ಣ ಸಂಬಂಧವನ್ನು ಅತ್ಯಂತ ಸಮರ್ಪಕವಾಗಿ ಕಾವ್ಯಾತ್ಮಕವಾಗಿ ಚಿತ್ರಿಸಲಾಗಿದೆ.

1678ರಲ್ಲಿ ಈತ ಮತ್ತು ಬಾಯ್ಲೂರನ್ನು ರಾಜಾಸ್ಥಾನದ ಅಧಿಕೃತ ಇತಿಹಾಸ ಲೇಖಕರನ್ನಾಗಿ ನೇಮಿಸಲಾಯಿತು. ಇದರಿಂದ ಇವನಿಗೆ ಆರ್ಥಿಕವಾಗಿ ಒಂದು ನೆಲೆ ಸಿಕ್ಕಂತಾಯಿತು. ಅದೇ ವರ್ಷ ಈತ ಮದುವೆಯಾದ, ಅನಂತರ ಇವನಿಗೆ ಇಬ್ಬರು ಗಂಡುಮಕ್ಕಳು ಐವರು ಹೆಣ್ಣುಮಕ್ಕಳು ಹುಟ್ಟಿದರು. ಅನಂತರ ರಂಗಮಂದಿರದೊಂದಿಗಿನ ತನ್ನ ಎಲ್ಲ ಸಂಬಂಧಗಳನ್ನೂ ಕಡಿದುಕೊಂಡನಾದರೂ ನಾಟಕರಚನೆಯನ್ನು ನಿಲ್ಲಿಸಲಿಲ್ಲ. ಎಸ್ತರ್ (1689) ಮತ್ತು ಅಥೀಲಿ (1691)ಇವು ಈ ಅವಧಿಯಲ್ಲಿ ಬರೆದ ನಾಟಕಗಳು; ರೂಪ ಮತ್ತು ವಸ್ತುವಿನ ದೃಷ್ಟಿಯಿಂದ ಸ್ವೋಪಜ್ಞತೆಯಿಂದ ಕೂಡಿವೆ. ಹಳೆಯ ಒಡಂಬಡಿಕೆಯ ಮೇಲೆ ಆಧರಿತವಾದ ಅಥೀಲಿ ಅತ್ಯಂತ ಶಕ್ತಿಯುತವಾದ ನಾಟಕ. ದೈವಕೋಪ ಮತ್ತು ದೈವಾನುಗ್ರಹದ ವಸ್ತುವನ್ನುಳ್ಳ ಈ ನಾಟಕ ಕ್ಯಾಥೊಲಿಕ್ ಧರ್ಮದ ನಿಷ್ಠೆಯಿಂದ ಕೂಡಿದೆ. ಮೇಳದ ವಿಶಿಷ್ಟ ಚೆಲುವು, ಪರಿಣಾಮಕಾರಿಯಾದ ರಂಗತಂತ್ರ, ಸೂಕ್ಷ್ಮ ಪಾತ್ರಚಿತ್ರಣಗಳಿಂದ ಕೂಡಿ ಶ್ರೇಷ್ಠ ನಾಟಕಗಳಲ್ಲೊಂದಾಗಿದೆ. ಇದರಿಂದ ನಾಟಕಕಾರನಾಗಿ ರಾಜಾಸ್ಥಾನ ದಲ್ಲಿ ಇವನ ಸ್ಥಾನ ಭದ್ರವಾಯಿತು. ಈತ 1699ರ ಏಪ್ರಿಲ್‍ನಲ್ಲಿ ನಿಧನಹೊಂದಿದ. ಇವನ ಇಚ್ಛೆಯಂತೆ ಪೋರ್ಟ್‍ರಾಯಲ್‍ನಲ್ಲಿ ಇವನನ್ನು ಸಮಾಧಿ ಮಾಡಲಾಯಿತು. ಅನಂತರ ಪೋರ್ಟ್‍ರಾಯಲ್ ನಾಶವಾದಾಗ ಇವನ ಅಸ್ಥಿಗಳನ್ನು ಪ್ಯಾರಿಸ್‍ನ ಸೆಯಿಂಟ್-ಎಟಿಯಾನ್ನೆ-ಡು ಮಾಂಟ್ ಚರ್ಚ್‍ಗೆ ತಂದು ಅಲ್ಲಿ ಮರು ಸಮಾಧಿ ಮಾಡಲಾಯಿತು.

ಈತ ಅತ್ಯಂತ ತೀಕ್ಷ್ಣ ಪ್ರತಿಭೆಯ ನಾಟಕಕಾರ. ಇವನ ನಾಟಕಗಳು ಸರಳವಾಗಿದ್ದರೂ ಪ್ರಭಾವಶಾಲಿಯಾದಂಥವು. ಪ್ರಾಚೀನ ಗ್ರೀಕ್ ದುರಂತನಾಟಕಗಳು ಮತ್ತು ಅರಿಸ್ಟಾಟಲನ ದುರಂತ ನಾಟಕ ಪರಿಕಲ್ಪನೆ ಇವನಿಗೆ ಮಾರ್ಗದರ್ಶಕವಾಗಿದ್ದವು. ವಸ್ತುವಿಗನುಗುಣವಾಗಿ ಗಂಭೀರ ಅಥವಾ ಸರಳವಾಗುವ ಇವನ ನಾಟಕಗಳ ಶೈಲಿ ವಿಶಿಷ್ಟವಾದದ್ದು. ಅಲೆಗ್ಸಾಂಡ್ರೈನ್ ಛಂದದಲ್ಲಿ ರಚನೆಗೊಂಡರುವ ಇವನ ನಾಟಕಗಳು ಅಭಿಜಾತ ಶೈಲಿಗೆ ಶ್ರೇಷ್ಠ ಉದಾಹರಣೆಗಳಾಗಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: