ಹಾರುವ ತಟ್ಟೆಗಳು
ಬ್ರಹ್ಮಾಂಡಕ್ಕೆ ಆದಿ, ಅಂತ್ಯಗಳಿಲ್ಲ. ಬ್ರಹ್ಮಾಂಡ ಕಲ್ಪನಾತೀತವಾದುದು. ಭೂಮಿ ಇರುವ ಸೌರಮಂಡಲ ಕ್ಷೀರ ಪಥ (Milky way) (ಆಕಾಶ ಗಂಗೆ) ವೆಂದು ಕರೆಯಲ್ಪಡುವ ಗ್ಯಾಲಕ್ಸಿಯಲ್ಲಿದೆ. ಆಕಾಶಗಂಗೆ ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ಸೌರ ಮಂಡಲದ ಸದಸ್ಯರಾದ ಸೂರ್ಯ, ಭೂಮಿ ಮತ್ತಿತರ ಗ್ರಹಗಳಿವೆ. ವೀಕ್ಷಕನಿಂದ ಅಥವಾ ವೀಕ್ಷಕನಿಗೆ ಸುಲಭವಾಗಿ ವಿವರಿಸಲಾಗದ ವಾಯವಿಕ ವಸ್ತು ಅಥವಾ ದ್ಯುತಿ ವಿದ್ಯಮಾನದ ಜನಪ್ರಿಯ ನಾಮವೇ ಹಾರುವ ತಟ್ಟೆ. ವರದಿಯಾದವುಗಳ ಪೈಕಿ ಹೆಚ್ಚಿನವು ಸಾಸರು ಅಥವಾ ಬಿಲ್ಲೆಯ ಆಕಾರದವಾಗಿದ್ದರಿಂದ ಈ ಹೆಸರು.
ಕಿರು ಪರಿಚಯ
[ಬದಲಾಯಿಸಿ]ಖಗೋಳ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಹಾರುವ ತಟ್ಟೆಗಳು ಅಪರಿಚಿತ ಹಾರಾಡುವ ವಸ್ತುಗಳು (Unidentified Flying Objects - UFO) ಎಂಬ ಗುಂಪಿಗೆ ಸೇರುತ್ತವೆ. ಇದುವರೆಗೂ ಗುರುತಿಸಲ್ಪಡದೇ ಇರುವಂಥಹ ವಿಸ್ಮಯಕಾರಿ ವಸ್ತುಗಳೆಲ್ಲವೂ ಇದೇ ಗುಂಪಿಗೆ ಸೇರುತ್ತವೆ. ಹಾಗಾಗಿ ಅಂತರಿಕ್ಷದಲ್ಲಿ ಹಾರಾಡಿದಂತೆ ಕಾಣುವ ವಿಸ್ಮಯಕಾರಿ ಅಪರಿಚಿತ ಆಕಾಶ ಕಾಯಗಳೇ ಹಾರುವ ತಟ್ಟೆಗಳು ಎಂಬುದಾಗಿ ವ್ಯಾಖ್ಯಾನಿಸಬಹುದು. ಭೂಮಿಯನ್ನು ಬಿಟ್ಟು ಜೀವಿಗಳನ್ನು ಹೊಂದಿರುವ ಗ್ರಹಗಳು ಈ ಬ್ರಹ್ಮಾಂಡದಲ್ಲಿ ಬೇರೆಲ್ಲೋ ಇದ್ದು ಅಲ್ಲಿಂದಲೇ ಈ ಹಾರಾಡುವ ವಸ್ತುಗಳು ಬರುತ್ತವೆ ಎಂದೂ ಸಹ ಹಲವರು ನಂಬುತ್ತಾರೆ.
ಹಾರುವ ತಟ್ಟೆಗಳ ಕಿರು ಇತಿಹಾಸ
[ಬದಲಾಯಿಸಿ]ಈ ಹಾರುವ ತಟ್ಟೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಿಂದಲೂ ಇಂಥ ಅಸಾಧಾರಣ ವಾಯವಿಕ ವಿದ್ಯಮಾನಗಳು ಗೋಚರಿಸಿದ ವರದಿಗಳಿದ್ದರೂ ಎರಡನೆಯ ಜಾಗತಿಕ ಯುದ್ಧಾನಂತರ ವಾಯುಯಾನ ಹಾಗೂ ಆಕಾಶಯಾನ ವಿಜ್ಞಾನಗಳಲ್ಲಿ ಆದ ಬೆಳೆವಣಿಗೆಗಳು ಮತ್ತು ಅಮೆರಿಕದಲ್ಲಿ ಗೋಚರಿಸಿತೆಂದು (1947) ಹೇಳಲಾದ ವರದಿಯೊಂದಕ್ಕೆ ದೊರೆತ ಪ್ರಚಾರದಿಂದಾಗಿ ಈ ವಿದ್ಯಮಾನ ವಿಜ್ಞಾನಿಗಳ ಆಸಕ್ತಿ ಕೆರಳಿಸಿತು. ತದನಂತರ ಇವು ಗೋಚರಿಸಿದ ಸಹಸ್ರಗಟ್ಟಳೆ ವರದಿಗಳು ಜಗತ್ತಿನಾದ್ಯಂತ ದಾಖಲಾಗಿವೆ.
ಶತಮಾನಗಳಿಂದಲೂ ಈ ವಿಷಯದ ಮೇಲೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ೧೯೪೭ ರಲ್ಲಿ ಅಮೇರಿಕದ ವಾಶಿಂಗ್ಟನ್ ನಗರದ ಕೆನತ್ ಆರ್ನಾಲ್ಡ್ ಎಂಬ ವ್ಯಕ್ತಿಯೋರ್ವನು ಖಾಸಗಿ ವಿಮಾನವೊಂದರಲ್ಲಿ ಪಯಣಿಸುತ್ತಿದ್ದಾಗ ವಿಚಿತ್ರವಾದ, ತಟ್ಟೆಯಂತಹ ಆಕೃತಿಯುಳ್ಳ ಸುಮಾರು ೯ ವಸ್ತುಗಳು ಪರ್ವತಗಳ ಮೇಲಿನಿಂದ ಹಾದು ಹೋದವು,[೧] ಹಾಗೂ ಅವು ಅತ್ಯಂತ ವೇಗವಾಗಿ ಅಂದರೆ ಗಂಟೆಗೆ ಸುಮಾರು ೧೯೦೦ ಕಿ.ಮೀ, ಗೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದವು ಎಂಬುದಾಗಿ ವರದಿ ಮಾಡಿದನು.[೨]
ವರ್ಗೀಕರಣ ಪ್ರಯತ್ನಗಳು
[ಬದಲಾಯಿಸಿ]ಹಾರುವ ತಟ್ಟೆಗಳ ವೀಕ್ಷಣಾ ವರದಿಗಳನ್ನು ‘ರಾತ್ರಿಯಲ್ಲಿಯ ದೃಗ್ಗೋಚರ ಬೆಳಕುಗಳು’, ‘ಹಗಲಿನಲ್ಲಿಯ ದೃಗ್ಗೋಚರ ತಟ್ಟೆಗಳು’, ‘ರೇಡಾರ್ ಮುಖೇನ (ಕೆಲವೊಮ್ಮೆ ದೃಗ್ಗೋಚರಸಹಿತ) ಗೋಚರಿಸಿದವು’, ‘1, 2 ಅಥವಾ 3ನೆಯ ಬಗೆಯ ನಿಕಟ ಮುಖಾಮುಖಿಗಳು’ ಎಂದು ವರ್ಗೀಕರಿಸುವ ಪ್ರಯತ್ನಗಳೂ ಆಗಿವೆ. ಸಮೀಪದಲ್ಲಿ ಗೋಚರಿಸಿಯೂ ವೀಕ್ಷಕನ ಮೇಲಾಗಲೀ ಪರಿಸರದ ಮೇಲಾಗಲೀ ಯಾವುದೇ ಪರಿಣಾಮ ಉಂಟುಮಾಡದವು 1ನೆಯ, ಏನಾದರೂ ಪರಿಣಾಮ ಉಂಟುಮಾಡಿದವು 2ನೆಯ ಬಗೆಯ ನಿಕಟ ಮುಖಾಮುಖಿಗಳು. ‘ಹಾರುವ ತಟ್ಟೆಗಳಲ್ಲಿ’ ಪಯಣಿಸುತ್ತಿದ್ದವರೊಂದಿಗೆ ವೈಯಕ್ತಿಕ ಸಂಪರ್ಕ ಉಂಟಾದವು 3ನೆಯ ಬಗೆಯ ನಿಕಟ ಮುಖಾಮುಖಿ.
ಸತ್ಯಾಸತ್ಯತೆಯ ಪರೀಕ್ಷಣೆ
[ಬದಲಾಯಿಸಿ]ಎಲ್ಲ ವರದಿಗಳ ಸತ್ಯಾಸತ್ಯತೆಯ ಪರೀಕ್ಷಣೆ ಸಾಧ್ಯವಾಗಿಲ್ಲವಾದರೂ ಪರೀಕ್ಷಿಸಿದವುಗಳ ಪೈಕಿ ಶೇಕಡಾ 90ರಷ್ಟು ಉಜ್ಜ್ವಲ ಗ್ರಹ ಅಥವಾ ನಕ್ಷತ್ರ, ವಿಮಾನ, ಪಕ್ಷಿ, ಬಲೂನ್, ಗಾಳಿಪಟ, ವಾಯವಿಕ ಫ್ಲೇರ್, ಉಲ್ಕೆ, ಉಪಗ್ರಹ, ವಿಶಿಷ್ಟ ಮೋಡ[೩] ಅಥವಾ ವೈದ್ಯುತ ವಿದ್ಯಮಾನಗಳಾಗಿದ್ದುವು. ಉಳಿದವುಗಳ ಪೈಕಿ ಕೆಲವು ಅಸಮರ್ಪಕ ವೀಕ್ಷಣೆ, ತಮಾಷೆಗಾಗಿ ಮಾಡಿದ ವಂಚನೆ ಅಥವಾ ಭ್ರಮೆ ಪ್ರಕರಣಗಳಾಗಿದ್ದವು. ಕೆಲವೇ ಕೆಲವು ಪ್ರಕರಣಗಳನ್ನು ವಿವರಿಸಲು ಸಾಧ್ಯವಾಗಿಲ್ಲ.
ಹಾರುವ ತಟ್ಟೆಗಳಿಂದ ರಾಷ್ಟ್ರೀಯ ಭದ್ರತೆಗೆ ಏನಾದರೂ ಧಕ್ಕೆ ಉಂಟಾದೀತೇ ಎಂಬುದನ್ನು ನಿರ್ಧರಿಸಲೋಸುಗ ಅಮೆರಿಕದ ವಾಯುಪಡೆ 12,618 ಗೋಚರ ಪ್ರಕರಣ ವರದಿಗಳನ್ನು ಪರಿಶೀಲಿಸಿತು (1947-69). ಇವುಗಳ ಪೈಕಿ 701 ಪ್ರಕರಣಗಳನ್ನು (5.6%) ತೃಪ್ತಿಕರವಾಗಿ ವಿವರಿಸಲು ಸಾಧ್ಯವಾಗಲಿಲ್ಲ.
ಅನ್ಯಗ್ರಹ ವಾಸಿಗಳ ಅಂತರಿಕ್ಷಯಾನ ನೌಕೆಗಳಿವು ಎಂದು ವಾದಿಸುವವರ ದೊಡ್ಡ ಗುಂಪೂ ಇದೆ. ಇವರ ವಾದ ನಿಜವೆಂದು ಸಾಧಿಸಬಲ್ಲ ಸಂಶಯಾತೀತವಾದ ಅಥವಾ ವಿಜ್ಞಾನ ಸ್ವೀಕಾರಾರ್ಹವಾದ ಸಾಕ್ಷ್ಯಾಧಾರ ಇನೂ ದೊರೆತಿಲ್ಲ.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Invaders from Elsewhere". Strange Magazine. Retrieved 23 March 2013.
- ↑ Bloecher, Ted (2005) [1967]. Report on the UFO Wave of 1947 (PDF). National Investigations Committee on Aerial Phenomena. Retrieved January 7, 2013.
- ↑ "Lenticular cloud UFOs". UFO Mistakes. Archived from the original on 4 ಮಾರ್ಚ್ 2012. Retrieved 23 ಮಾರ್ಚ್ 2013.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)