ಕರ್ನಾಟಕದ ಚಿತ್ರಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕರ್ನಾಟಕದ ಚಿತ್ರಕಲೆ: ಭಾರತದ ಇತರ ಭಾಗಗಳಲ್ಲಿರುವಂತೆ ಕರ್ನಾಟಕದಲ್ಲೂ ಚಿತ್ರಕಲಾ ಸಂಪ್ರದಾಯ ಪ್ರಾಚೀನಕಾಲದಿಂದಲೂ ಬಂದಿದೆ.

ದೇವಾಲಯಗಳು ಮತ್ತು ಚಿತ್ರಕಲೆ[ಬದಲಾಯಿಸಿ]

ಕನ್ನಡ ನಾಡಿನ ಚಿತ್ರಕಲೆಯ ಬಹುಭಾಗ ದೇವಾಲಯಗಳಿಗೆ ಸಂಬಂಧಿಸಿದ್ದು. ಮರದಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದಾಗ, ಮರದಲ್ಲಿಯೇ ಮೂರ್ತಿಗಳನ್ನು ಕಡೆಯುತ್ತಿದ್ದಾಗ, ರಮ್ಯತೆಗಾಗಿ ಅವುಗಳ ಮೇಲೆ ಬಣ್ಣ ಮೂಡಿಸುತ್ತಿದ್ದರು. ಹಿಂದಿನ ದೇವಾಲಯಗಳಲ್ಲಿ ಉತ್ಸವಮೂರ್ತಿಯಲ್ಲದೆ ಮರದ ಮೂಲಮೂರ್ತಿಯಲ್ಲೇ ಎರಡು ಬಗೆ ಇರುತ್ತಿದ್ದುವು. ಧ್ರುವಬೇರ ಎನಿಸಿಕೊಳ್ಳುವ ಮೂಲದೇವರಿಗೆ ಅಭಿಷೇಕವಿಲ್ಲ; ಅದರ ಮೇಲೆ ಸ್ಟಕ್ಕೋ ಲೇಪನ ಬಳಿದು ಬಣ್ಣಗಳಿಂದ ಅಲಂಕರಿಸುತ್ತಿದ್ದರು. ನಿತ್ಯದ ಅಭಿಷೇಕಕ್ರಿಯೆಗಳಿಗೆ ಸ್ನಪನಬೇರ ಎನಿಸಿಕೊಳ್ಳುವ ಮೂರ್ತಿಗಳು ಇರುತ್ತಿದ್ದುವು. ವರ್ಣಚಿತ್ರಕಲೆಯ ಉಗಮ ಧ್ರುವಬೇರ ಮೂರ್ತಿಗಳಲ್ಲಿ ಆಯಿತು. ಪ್ರಾಚೀನ ಚಿತ್ರಕಲೆ ದೇವಾಲಯದಲ್ಲೇ ಆರಂಭವಾಗಿ ಬಹುಕಾಲ ಶಿಲ್ಪಕ್ಕೆ ಸಹಕಾರಿ ಮಾತ್ರ ಆಗಿದ್ದಿತು. ಆದರೆ ಎಂಟನೆಯ ಶತಮಾನದ ವೇಳೆಗೆ ಈ ಕಲೆ ಪ್ರತ್ಯೇಕವಾಗಿ ವಿಶಿಷ್ಟವಾಗಿದ್ದಿತೆನ್ನಲು ನೆಲಮಂಗಲದ ಮನ್ನೆಫಲಕ ಆಧಾರ ; ಗಂಗರಾಜರ ಆಶ್ರಯದಲ್ಲಿದ್ದ ಶಾಸನದ ಲಿಪಿಕಾರ ತನ್ನನ್ನು ಸರ್ವಕಲಾಧಾರಭೂತ, ಚಿತ್ರಕಲಾಭಿಜ್ಞೇಯ ಎಂದು ಕರೆದುಕೊಂಡಿದ್ದಾನೆ.

ಹೊಯ್ಸಳರ ಕಾಲಕ್ಕೇ ಶಿಲ್ಪಿಗಳು ದೇವಾಲಯದ ಸೊಬಗನ್ನು ಹೆಚ್ಚಿಸಲು ಚಿತ್ರ ಕಲಾವಿದರನ್ನು ಕರೆಯುತ್ತಿದ್ದರು. ದೇವಾಲಯದ ಭುವನೇಶ್ವರಿ, ಮತ್ತು ಹಜಾರದ ಒಳಗೋಡೆಗಳು ಚಿತ್ರಗಳಿಂದ ತುಂಬಿರುತ್ತಿದ್ದುವು. ಇದರಲ್ಲಿದ್ದ ಗೊಂಬೆಗಳು ಚಿತ್ರಾಭಾಸವೆನಿಸಿಕೊಳ್ಳುತ್ತಿದ್ದುವು. ಎಂದರೆ ನಿಜವಾಗಿಯೇ ಇರುವಂತೆ ಭಾಸವಾಗುತ್ತಿದ್ದುವೆಂದರ್ಥ. ಶಿಲ್ಪದಲ್ಲಿ ಘನರೂಪವಿದೆ; ದುಂಡುಮೂರ್ತಿಗಳು ಶಕ್ಯ. ಆದರೆ ಚಿತ್ರಕಲೆಯಲ್ಲಿ ಘನರೂಪವನ್ನು ಸಾಂಕೇತಿಕವಾಗಿ ತೋರಿಸಬೇಕಷ್ಟೆ. ತಿರುಗಿಕೊಂಡ ಗೊಂಬೆಗಳಿದ್ದರೆ, ಮುಖದ ಒಂದು ಪಾಶರ್ವ್‌ ಮಾತ್ರ ಕಾಣುವಂತಿದ್ದರೆ ಅವು ಅರ್ಧ ಚಿತ್ರ ಎನಿಸಿಕೊಳ್ಳುತ್ತಿದ್ದುವು. ಇತ್ತೀಚೆಗೆ ದೊರಕಿರುವ ಹಸ್ತಪ್ರತಿಯೊಂದರಲ್ಲಿ ಆ ಕಾಲದ ವರ್ಣಚಿತ್ರವೊಂದಿದೆ. ಹೊಯ್ಸಳ ಕಾಲದ ವರ್ಣಚಿತ್ರಗಳಲ್ಲಿ ನಮಗೆ ದೊರಕಿರುವುದು ಇದೊಂದೆ.

ವಿಜಯನಗರದ ಅರಸರ ಕಾಲದಲ್ಲಿ[ಬದಲಾಯಿಸಿ]

ವಿಜಯನಗರದ ಕಾಲಕ್ಕೆ ಮುಂಚಿನವೆಂಬ ಒರಟು ಚಿತ್ರಗಳು ಆನೆಗೊಂದಿಯ ಅರಮನೆಯಲ್ಲಿವೆ. ಇವು ಬಂಗಾಳದ ಪಟವರ್ಣಚಿತ್ರಗಳ (ಪಾಟ್ ಪೇಂಟಿಂಗ್) ಮಾದರಿಯಲ್ಲಿವೆ. ವಿಜಯನಗರದ ಕಾಲದಲ್ಲಿ ಹಂಪಿಯ ಪಂಪಾವತಿಯ ದೇವಾಲಯದಲ್ಲಿ ರಂಗಮಂಟಪದ ಭುವನೇಶ್ವರಿಯ ಮೇಲೆ ಕಲ್ಯಾಣಸುಂದರ ಮತ್ತಿತ್ತರ ಚಿತ್ರಗಳಿವೆ. ಇವು ತಂಜಾವೂರು ಶೈಲಿಯವೆನ್ನಬಹುದು. ಸಿತ್ತನ್ನವಾಸಲ್, ಮಾಮಂಡೂರು, ಎಲ್ಲೂರ ಮತ್ತು ತಂಜಾವೂರು ಶೈಲಿಗಳು ಸಮ್ಮಿಳಿತವಾದ ಕಾಲ ಅದು. ಲೇಪಾಕ್ಷಿಯ ಚಿತ್ರಗಳು, ಸೋಮಪಲ್ಲಿಯ ಚೆನ್ನಕೇಶವ ದೇವಾಲಯದ ಚಿತ್ರಗಳು, ತಂಜಾವೂರಿನ ಬೃಹದೀಶ್ವರ ದೇವಾಲಯದ ಚಿತ್ರಗಳು- ಇವೆಲ್ಲವೂ ಈ ಸಮ್ಮಿಳಿತಶೈಲಿಯ ನಿದರ್ಶನಗಳು. ಇಮ್ಮಡಿ ವೆಂಕಟಪತಿ ದೇವರಾಯನ ಕಾಲದಲ್ಲಿ (೧೫೮೬ ರಿಂದ ೧೬೧೪), ಪೋರ್ಚುಗೀಸ್ ಚಿತ್ರಕಾರರು ಹಲವಾರು ಮಂದಿ ಆಸ್ಥಾನದಲ್ಲಿದ್ದರು. ಇವರ ಪ್ರಭಾವ ಕರ್ಣಾಟಕ ಚಿತ್ರಕಾರರ ಮೇಲೆ ಬಿತ್ತು.

ಹಾಸನ ತಾಲ್ಲೂಕಿನ ಜಕ್ಕನಹಳ್ಳಿಯಲ್ಲಿರುವ ಕಾಳೇಶ್ವರ ದೇವಾಲಯದ ನವರಂಗದಲ್ಲಿ ಭುವನೇಶ್ವರಿಯು ವರ್ಣಚಿತ್ರಿತವಾಗಿರುವುದನ್ನು ನೋಡಬಹುದು. ಇದು ಹೊಯ್ಸಳ ನರಸಿಂಹನ ಕಾಲದಲ್ಲಿ (ಸು. ೧೧೭೦) ಕಾಳಿಮಯ್ಯ ಹೆಗ್ಗಡೆಯೆಂಬವನಿಂದ ಕಟ್ಟಿಸಲ್ಪಟ್ಟಿತು. ಅದೇ ಕಾಲದ ಶ್ರವಣಬೆಳಗೊಳದ ಶಾಂತಿನಾಥ ಬಸದಿಯಲ್ಲೂ ವರ್ಣಚಿತ್ರಗಳು ಬರೆಸಲ್ಪಟ್ಟುವು ; ಈಗ ಅದರ ಬಹುಭಾಗ ಅಳಿಸಿಹೋಗಿದೆ. ಎಡೆಯೂರಿನ ತೋಂಟದ ಸಿದ್ದಲಿಂಗೇಶ್ವರ ದೇವಸ್ಥಾನದ ಮಹಾದ್ವಾರದಲ್ಲಿ ಬಹುಶಃ ೧೫ನೆಯ ಶತಮಾನದಲ್ಲಿ ಚಿತ್ರಗಳನ್ನು ಮೂಡಿಸಿದ್ದಾರೆ ; ಅದರ ಮುಖಮಂಟಪದಲ್ಲಿ ಜಂಗಮ ಗುರುವಾದ ಸಿದ್ಧಲಿಂಗನ ಜೀವಿತಕ್ಕೆ ಸಂಬಂಧಪಟ್ಟ ಚಿತ್ರಗಳೂ ಶಿವನ ಪಂಚವಿಂಶತಿ ಲೀಲಾಮೂರ್ತಿಗಳೂ ಚಿತ್ರಿತವಾಗಿವೆ. (ಈಗ ನಾಶವಾಗಿವೆ).

ಹಿರಿಯೂರಿನ ತಿರುಮಲ್ಲೇಶ್ವರ ಗುಡಿಯಲ್ಲಿ (೧೬ನೆಯ ಶತಮಾನ) ಶೈವಪುರಾಣದ ಪ್ರಸಂಗಗಳು ಚಿತ್ರಿತವಾಗಿವೆ. ೧೭ನೆಯ ಶತಮಾನದ ವಸ್ತಾರೆಯ ಪದ್ಮಾವತೀ ಗುಡಿಯಲ್ಲಿ, ೧೮ನೆಯ ಶತಮಾನದ ಮಾಗಡಿ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಹರದನಹಳ್ಳಿಯ ದಿವ್ಯಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ವರ್ಣಚಿತ್ರಿತ ಭುವನೇಶ್ವರಿಗಳಿವೆ.

ತುಮಕೂರು ಜಿಲ್ಲೆಯ ಗುಬ್ಬಿ ಮೈಲಪ್ಪನ ಗುಡಿಯ ಮುಖಮಂಟಪದಲ್ಲಿ ಶಿವನ ಪಂಚವಿಂಶತಿ ಲೀಲಾಮೂರ್ತಿಗಳನ್ನು ಚಿತ್ರಿಸಿದ್ದಾರೆ. ಮಾಗಡಿಯ ಸೋಮೇಶ್ವರ ದೇವಾಲಯದ ಎಡಪಕ್ಕದಲ್ಲಿ ೧೭೧೨ರಲ್ಲಿ ಮೂರನೆಯ ಕೆಂಪವೀರಗೌಡ ನಿರ್ಮಿತವಾದ ಕೆಂಪೇಗೌಡನ ಹಜಾರದ ಗೋಡೆಗಳ ಮತ್ತು ಭುವನೇಶ್ವರಿಯ ಮೇಲೂ ವರ್ಣಚಿತ್ರಗಳಿದ್ದ ಗುರುತಿವೆ. ಬೆಳಕವಾಡಿಯ ಮಂಠೇಸ್ವಾಮಿ ಮಠದ ಹಜಾರದ ಮರದ ಕಂಬದ ಮೇಲೆ ರಾಮಾಯಣದ ಮತ್ತು ಶಿವ ಪುರಾಣ ಪ್ರಸಂಗಗಳನ್ನು ಚಿತ್ರಿಸಲಾಗಿದ್ದು ಈಗ ಸುಣ್ಣ ಬಳಿಯಲಾಗಿದೆ. ವಿಜಯನಗರ ಕಾಲದ ಲೇಪಾಕ್ಷಿಯ ಪಾಪನಾಶೇಶ್ವರ ದೇವಸ್ಥಾನದಲ್ಲಿ ಸಾವಿರಾರು ಸೊಗಸಾದ ವರ್ಣಚಿತ್ರಗಳಿವೆ; ಇವನ್ನು ಮೂಡಿಸಿದ ವಿರೂಪಣ್ಣ ಕನ್ನಡನಾಡಿನವ; ಚಿತ್ರಕಾರರೂ ಕನ್ನಡದವರು.

ಮೈಸೂರು ಅರಸರ ಕಾಲದಲ್ಲಿ[ಬದಲಾಯಿಸಿ]

ಮೈಸೂರಿನಲ್ಲಿ ವರ್ಣಚಿತ್ರಕಲೆಗೆ ಬಹುವಾಗಿ ಪ್ರೋತ್ಸಾಹವಿತ್ತವರೆಂದರೆ ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು. ೧೮ನೆಯ ಶತಮಾನದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಾಸಸ್ಥಾನವಾಗಿದ್ದ ಶ್ರೀರಂಗಪಟ್ಟಣದ ದರಿಯಾದೌಲತ್ ಅರಮನೆಯ ಹೊರಗೋಡೆಗಳ ಮೇಲೆ ಮುಸಲ್ಮಾನ ಮಾದರಿಯ ನೂರಾರು ವರ್ಣ ಚಿತ್ರಗಳಿವೆ. ಅಲ್ಲಲ್ಲಿ ನಡೆದ ಯುದ್ಧದ ದೃಶ್ಯಗಳು, ದಳವಾಯಿಗಳ ಚಿತ್ರಗಳು, ಮದಕರಿ ನಾಯಕ, ಚಿತ್ತೂರಿನ ರಾಣಿ ಮತ್ತು ಸವಣೂರಿನ, ಆರ್ಕಾಟಿನ ನವಾಬರು ಮುಂತಾದವರ ವ್ಯಕ್ತಿ ಚಿತ್ರಗಳೂ ಇಲ್ಲಿವೆ. ಬೆಂಗಳೂರಿನ ಟಿಪ್ಪು ಸುಲ್ತಾನನ ಅರಮನೆಯಲ್ಲೂ ೧೭೯೧ರ ಕಾಲಕ್ಕೆ ಸೇರಿದ ವರ್ಣಚಿತ್ರಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವತಃ ರಸಿಕರು, ಕಲಾಭಿಮಾನಿಗಳು. ಅವರ ಆಪ್ತವರ್ಗದಲ್ಲೇ ಹಲವಾರು ಚಿತ್ರಗಾರರಿದ್ದರು. ಅವರಲ್ಲಿ ಕೆ.ವೆಂಕಟಪ್ಪನವರ ತಾತಂದಿರೂ ಒಬ್ಬರಾಗಿದ್ದರು. ತಮ್ಮ ತಂದೆ ಖಾಸಾ ಚಾಮರಾಜ ಒಡೆಯರ ಸ್ಮಾರಕವಾಗಿ ಅರಸರು ಚಾಮರಾಜನಗರದಲ್ಲಿ ೧೮೧೦ರ ಸುಮಾರಿಗೆ ಚಾಮರಾಜೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಇದರ ಜನ್ಮಮಂಟಪದಲ್ಲಿ ಅನೇಕ ಭಿತ್ತಿಚಿತ್ರಗಳಿವೆ. ತಲಕಾಡಿನ ಬಳಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಿತ್ರಮಂಟಪವೆಂದೇ ಪ್ರತ್ಯೇಕ ಸ್ಥಳವಿದೆ. ಇಲ್ಲಿನ ಗೋಡೆಗಳ ತುಂಬ ಶೈವ ಪುರಾಣದ ಚಿತ್ರಗಳಿವೆ. ಮೈಸೂರಿನ ಪ್ರಸನ್ನ ವೆಂಕಟರಮಣಸ್ವಾಮಿ ಗುಡಿಯಲ್ಲಿಯೂ ಒಂದು ಚಿತ್ರಮಂಟಪವಿದೆ. ಇಲ್ಲಿ ಪೌರಾಣಿಕ ಚಿತ್ರಗಳು ಮಾತ್ರವಲ್ಲದೆ ಪ್ರಕೃತಿಚಿತ್ರಗಳೂ ವ್ಯಕ್ತಿಚಿತ್ರಗಳೂ ಇವೆ. ವ್ಯಾಸ, ಮಧ್ವಾಚಾರ್ಯರು, ಪೂರ್ಣಯ್ಯ, ಸುಬ್ಬರಾಯದಾಸರು, ಸೀನಪ್ಪ, ಮುಮ್ಮಡಿ ಕೃಷ್ಣರಾಜ ಒಡೆಯರು ಮುಂತಾದವರ ವ್ಯಕ್ತಿಚಿತ್ರಗಳು ತುಂಬ ಚೆನ್ನಾಗಿವೆ. ೧೯ನೆಯ ಶತಮಾನದ ಶ್ರವಣಬೆಳಗೊಳದ ಜೈನಮಠಗಳಲ್ಲಿ ಪಂಚಪರಮೇಷ್ಠಿಗಳ, ಜಿನರ, ಜೈನರಾಜರ ಚಿತ್ರಗಳು ಅನೇಕ ಇವೆ. ಇವುಗಳಲ್ಲಿ ಮುಮ್ಮಡಿ ಕೃಷ್ಣರಾಜರ ಒಡೆಯರು ದಸರಾ ದರ್ಬಾರಿನ ಚಿತ್ರವೂ ಒಂದು ಸೇರಿದೆ. ಪಾರ್ಶ್ವನಾಥನ ಸಮವಸರಣದ ದೃಶ್ಯ ಸೊಗಸಾಗಿದೆ. ಲೇಶ್ಯದ ಚಿತ್ರಣ ಸ್ವಾರಸ್ಯವಾಗಿದೆ.

೧೮೬೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನಲ್ಲಿ ಜಗನ್ಮೋಹನ ಅರಮನೆಯನ್ನು ಕಟ್ಟಿಸಲು ಆರಂಭಿಸಿದರು. ಕಾಲಕ್ರಮೇಣ ಇದು ಸಂಸ್ಥಾನದ ಅತ್ಯುತ್ತಮ ಚಿತ್ರಶಾಲೆಯಾಗಿ ಪರಿಣಮಿಸಿತು. ಇದರಲ್ಲಿ ೧೯ನೆಯ ಶತಮಾನಕ್ಕೆ ಸೇರಿದ ಅನೇಕ ಕಲಾಕೃತಿಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಸಚಿತ್ರ ವಂಶವೃಕ್ಷ, ಮೈಸೂರು ಆಳರಸರ ವಂಶಾವಳಿಯನ್ನು ಚಿತ್ರಿಸುವ ಸಂತಾನಾಂಬುಜ, ವಿಜಯ ದಶಮಿಯಂದು ನಡೆದ ಮುಮ್ಮಡಿ ಕೃಷ್ಣರಾಜ ಒಡೆಯರ ಜಂಬೂಸವಾರಿ (ಇದರಲ್ಲಿ ರಾಜರು ಆರು ಆನೆಗಳನ್ನು ಕಟ್ಟಿದ ರಥದಲ್ಲಿ ಕುಳಿತಿದ್ದಾರೆ), ಇವುಗಳಲ್ಲದೆ ಕಿತ್ತೂರು, ಗೊತ್ತಗಾಲ, ಚಟ್ಟನಹಳ್ಳಿಗಳಲ್ಲಿ ನಡೆದ ಹುಲಿಶಿಕಾರಿ, ಚಾಮರಾಜನಗರದ ಕಾಡಿನಲ್ಲಿ ಪಟ್ಟದಾನೆಯಾದ ಕೆಂಪನಂಜಯ್ಯನನ್ನು ಹಿಡಿದ ದೃಶ್ಯ, ಕೃಷ್ಣರಾಜ ಒಡೆಯರು ಚದುರಂಗದಾಟವನ್ನು ಆಡುತ್ತಿರುವ ದೃಶ್ಯಗಳು, ವಸಂತೋತ್ಸವದ ದೃಶ್ಯ, ದೇವೀಸಾಯುಜ್ಯ, ಶ್ರೀಕಂಠಸಾಯುಜ್ಯ ಎಂಬ ಆಟಗಳು ಸೊಗಸಾದ ಬಣ್ಣಗಳಲ್ಲಿ ಚಿತ್ರಿತವಾಗಿವೆ. ಅಲ್ಲದೆ, ರಣಜಿತ್ಸಿಂಗ್, ಕೊಡಗಿನ ವೀರರಾಜೇ ಅರಸು, ಪೇಷ್ವೆಗಳು, ನಾನಾ ಫಡ್ನವೀಸ್, ಕೇರಳ ಮತ್ತು ತಿರುವಾಂಕೂರಿನ ರಾಜರು, ಅರಮನೆ ಅಧಿಕಾರಿಗಳು, ಪರಕಾಲಮಠದ ಸ್ವಾಮಿಗಳು, ಮಹಾರಾಜರ ಬಂಧುಗಳು ಹೀಗೆ ನೂರಾರು ವ್ಯಕ್ತಿಚಿತ್ರಗಳಿವೆ.

ನಾಲ್ವಡಿ ಕೃಷ್ಣರಾಜ ಒಡೆಯರೂ ಚಿತ್ರಕಲೆಯ ಪಕ್ಷಪಾತಿಗಳು. ಅವರ ಆಸ್ಥಾನದಲ್ಲಿ ಕೆ.ವೆಂಕಟಪ್ಪ, ಕೇಶವಯ್ಯ ಮುಂತಾದ ನಿಪುಣ ಕಲೆಗಾರರಿದ್ದರು. ಈಚೆಗೆ ನಾಡಿನ ಲಲಿತಕಲಾ ಅಕೆಡಮಿಯವರಿಂದ ಪುರಸ್ಕೃತರಾದ ಕೆ.ವೆಂಕಟಪ್ಪ ಅವರು ಕಲ್ಕತ್ತೆಯ ಕಲಾಶಾಲೆಯಲ್ಲಿ ಪರ್ಸಿಬ್ರೌನ್ ಮತ್ತು ಅವನೀಂದ್ರನಾಥ ಠಾಕೂರರ ಬಳಿ ಏಳು ವರ್ಷಗಳು ಅಭ್ಯಾಸ ಮಾಡಿದ ನಂತರ ಆಸ್ಥಾನ ಕಲಾವಿದರಾಗಿದ್ದು ಕೊಂಡು ನೂರಾರು ಅತ್ಯುತ್ತಮ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಇವುಗಳಲ್ಲಿ ನೀಲಗಿರಿಯ ದೃಶ್ಯಗಳು ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಸೇರಿವೆಯೆಂದು ತಜ್ಞರ ಮತ. ಇವರು ದಂತದ ಮೇಲೆ ತಮ್ಮ ಗುರು ಅವನೀಂದ್ರನಾಥರ ಮತ್ತು ತಮ್ಮ ಆಶ್ರಯದಾತ ಕೃಷ್ಣರಾಜ ಒಡೆಯರ ಪ್ರತಿ ಕೃತಿಗಳನ್ನು ನೈಜವಾದ ವರ್ಣಗಳಲ್ಲಿ ಚಿತ್ರಿಸಿದ್ದಾರೆ. ಮೊಗಲರ ಕಾಲಕ್ಕೇ ಅಸ್ತಂಗತವಾಗಿದ್ದ ಈ ಕ್ಲಿಷ್ಟ ಕಲೆಯನ್ನು ವೆಂಕಟಪ್ಪನವರು ಪುನರುಜ್ಜೀವನ ಗೊಳಿಸಿದ್ದಾರೆ. ಇವರು ವರ್ಣಚಿತ್ರಕಾರರಲ್ಲದೆ ಉತ್ತಮ ಶಿಲ್ಪಿಯೂ, ನಿಪುಣ ವೈಣಿಕರೂ ಆಗಿದ್ದರು.

ಈಚಿನವರಲ್ಲಿ ವೆಂಕಟಪ್ಪನವರಲ್ಲದೆ ಮೈಸೂರು ವೀರಪ್ಪ ಮತ್ತು ಸುಬ್ಬುಕೃಷ್ಣ, ಬೆಳಗಾಂವಿಯ ಕೆ.ಎಸ್.ಕುಲಕರ್ಣಿ, ಗೋವದ ಲಕ್ಷ್ಮಣ ಪೈ, ದಕ್ಷಿಣ ಕನ್ನಡ ಜಿಲ್ಲೆಯ ಕೆ.ಕೆ.ಹೆಬ್ಬಾರ್, ಹುಬ್ಬಳ್ಳಿಯ ಆರ್.ಎಸ್.ಮಿಣಜಿಗಿ, ಕಮಡೋಳಿ ಮುಂತಾದ ಚಿತ್ರಕಾರರು ಕರ್ಣಾಟಕಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

ಕರ್ನಾಟಕ ಶೈಲಿಯ ಚಿತ್ರಕಲೆ[ಬದಲಾಯಿಸಿ]

ಕರ್ನಾಟಕ ಶೈಲಿಯ ಚಿತ್ರಕಲೆಯ ಉಗಮ ಅಜಂತ ಗುಹಾಂತ ರ್ದೇವಾಲಯಗಳಲ್ಲಿ ಎಂಬುದು ನಿರ್ವಿವಾದ. ಪ್ರ.ಶ.ಪೂ. ೧ನೆಯ ಶತಮಾನದಲ್ಲಿ ಅಜಂತದ ಗುಹೆಗಳಲ್ಲಿ ಬೋಧಿಸತ್ವಯಾನಕ್ಕೆ ಸೇರಿದ ಬೌದ್ಧಬಿಕ್ಷುಗಳು ವಾಸಿಸುತ್ತಿದ್ದು, ತಮ್ಮ ಯೋಗಾಭ್ಯಾಸ ಧ್ಯಾನಕ್ರಿಯೆಗಳಿಗೆ ಸಹಕಾರಿಯಾಗಿ ಭಿತ್ತಿಚಿತ್ರಗಳನ್ನು ಮೂಡಿಸಿದರು. ಈ ಭಿತ್ತಿಚಿತ್ರಗಳಲ್ಲಿ ಸಾಂಕೇತಿಕ ಅರ್ಥವೇ ಹೆಚ್ಚು. ಆ ವೇಳೆಗಾಗಲೇ ಅಭಿಜಾತ ಚಿತ್ರಶೈಲಿ ಬಳಕೆಯಲ್ಲಿದ್ದು ಪ್ರೌಢದೆಶೆಯನ್ನು ಮುಟ್ಟಿದಂತೆ ತಿಳಿದುಬರುತ್ತದೆ. ವರ್ಣಗಳ ನಿರ್ಮಾಣ, ಮೆರುಗು ಕೊಡುವ ಪದ್ಧತಿ, ಸ್ಥೂಲರೇಖೆಗಳನ್ನು ರೂಪಿಸಿ ಒಳಭಾಗಗಳನ್ನು ಸ್ಪಷ್ಟವಾಗಿ ವಿವಿಕ್ತವಾಗಿ ಬಣ್ಣಗಳಿಂದ ತುಂಬಿಸುವ ಸಂವಿಧಾನ - ಇವು ಇಲ್ಲಿ ಕಾಣುತ್ತವೆ. ರೇಖಾಚಿತ್ರದ ಹಿರಿಮೆಯನ್ನೂ ಲತಾವಿನ್ಯಾಸದ ಭಂಗಿಗಳನ್ನೂ ಆ ಭಿಕ್ಷುಕಲಾವಿದರು ಚೆನ್ನಾಗಿ ಅರಿತಿದ್ದರು. ಇವು ಕನ್ನಡ ಕಲಾವಿದರ ಕೈಚಳಕವೆಂಬುದನ್ನು ಸೂಚಿಸಲು ಅಜಂತ ೧ನೆಯ ಗುಹೆಯಲ್ಲಿ ಗೋಡೆಯ ಮೇಲೆ ಬಿಡಿಸಿರುವ ೨ನೆಯ ಪುಲಕೇಶಿಯ ಒಡ್ಡೋಲಗದ ಚಿತ್ರಣ ನೆರವಾಗುತ್ತದೆ. ಬಾದಾಮಿಯಲ್ಲಿ ಕಾಣುವ ಚಿತ್ರಶೈಲಿಗೂ ಈ ಚಿತ್ರಶೈಲಿಗೂ ತುಂಬ ಸಾಮ್ಯವಿದೆ. ಎರಡೂ ಕಡೆಯ ಕಲಾವಿದರು ಒಂದೇ ಸಂಪ್ರದಾಯಕ್ಕೆ ಸೇರಿದವರು. ಇದು ಹೇಗೇ ಇರಲಿ, ಕರ್ನಾಟಕದ ರಾಜಪರಂಪರೆಗಳಲ್ಲಿ ಪ್ರಮುಖವಾದ ಚಾಳುಕ್ಯ ಅರಸರ ಉಲ್ಲೇಖವಂತೂ ನಿರ್ವಿವಾದವಾದ ನಿದರ್ಶನ. ಚಾಳುಕ್ಯ ಚಕ್ರೇಶ್ವರನೆಂದು ಪ್ರಖ್ಯಾತನಾದ ಇಮ್ಮಡಿ ಪುಲಿಕೇಶಿಯ ಬಳಿ ಪರ್ಷಿಯ ದೇಶದ ರಾಯಭಾರಿಗಳು ಬಂದು ಉಡುಗೊರೆಗಳನ್ನು ಅರ್ಪಿಸುತ್ತಿದ್ದ ಹಾಗೆ ಈ ಚಿತ್ರ ತೋರಿಸುತ್ತದೆ. ಆ ಕಾಲಕ್ಕೆ ಈ ಪ್ರದೇಶ ಚಾಳುಕ್ಯರ ಅಧೀನದಲ್ಲಿತ್ತು. ರಾಷ್ಟ್ರಕೂಟ ಕೃಷ್ಣರಾಜ ಈ ಗುಹೆಯ ನಿರ್ಮಾತೃವೆಂದು ಹೇಳುವವರೂ ಇದ್ದಾರೆ. ಅಜಂತ ದೇವಾಲಯಗಳ ಭಿತ್ತಿಗಳ ಮೇಲೆ ಮಹಾಯಾನ ಬೌದ್ಧಪಂಥಕ್ಕೆ ಸೇರಿದ ದೇವದೇವತೆಗಳ ಚಿತ್ರಣ ಬಹುವಾಗಿ ಮೂಡಿಬಂದಿವೆ. ಇವುಗಳಲ್ಲಿ ಪದ್ಮಪಾಣಿ ಅವಲೋಕಿತೇಶ್ವರ ಬೋಧಿಸತ್ತ್ವನ ಚಿತ್ರಣ ತುಂಬ ಪ್ರಸಿದ್ಧವಾಗಿದೆ. ಈ ಸಂಪ್ರದಾಯವನ್ನು ಒಳಗೊಂಡ ಪದ್ಧತಿ ಮುಂದೆ ದಕ್ಷಿಣದೇಶ, ಅದರಲ್ಲೂ ಕರ್ನಾಟಕದಲ್ಲಿ, ವಿಶೇಷವಾಗಿ ಪ್ರಚಲಿತವಾಯಿತು. ಬಾದಾಮಿಯ ಭಿತ್ತಿಚಿತ್ರಗಳು ಈ ಪದ್ಧತಿಗೆ ಸೇರಿದುವು. ಈ ಪದ್ಧತಿಯಲ್ಲಿ ಪ್ರಕೃತಿಚಿತ್ರಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ೭ನೆಯ ಶತಮಾನದವರೆಗೂ ಬೆಳೆದುಬಂದ ಈ ಸಂಪ್ರದಾಯ ಕಾರಣಾಂತರದಿಂದ ಮರೆಯಾದ ಅನಂತರ ಚಿತ್ರಕಲೆ ೧೬, ೧೭ನೆಯ ಶತಮಾನಗಳವರೆಗೆ ಏಳಿಗೆಗೆ ಬರಲಿಲ್ಲ. ವಿಜಯನಗರಕಾಲದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿಯೂ ಆನೆಗೊಂದಿಯಲ್ಲಿರುವ ಉಚ್ಚಪ್ಪ ಮಠದಲ್ಲಿಯೂ ಕಂಚಿಯ ವರದರಾಜಸ್ವಾಮಿ ದೇವಾಲಯದಲ್ಲಿಯೂ ಲೇಪಾಕ್ಷಿಯ ವೀರಭದ್ರಸ್ವಾಮಿ ಗುಡಿಯಲ್ಲಿಯೂ ಕಂಡುಬರುವ ಚಿತ್ರಗಳು ವಿಜಯನಗರದ ಕಾಲದಲ್ಲಿ ಕನ್ನಡಿಗ ಕಲೆಗಾರರು ಬಿಡಿಸಿದ ಚಿತ್ರಗಳು. ಈ ಸಂಪ್ರದಾಯಕ್ಕೆ ಸೇರಿದ ಚಿತ್ರಗಳೆಂದರೆ ತಂಜಾವೂರಿನಲ್ಲಿ ನಾಯಕರ ಆಳ್ವಿಕೆಯಲ್ಲಿ ಬೃಹದೀಶ್ವರ ದೇವಾಲಯದಲ್ಲಿ ಮೂಡಿಸಿರುವ ಚಿತ್ರಗಳು.

೧೭ನೆಯ ಶತಮಾನದ ಅಂತ್ಯಭಾಗದಿಂದ ಕರ್ನಾಟಕದಲ್ಲಿ ಚಿತ್ರಕಲೆಯ ಅವನತಿ ಮೊದಲಾಯಿತು. ಕನ್ನಡನಾಡಿನ ಪುಣ್ಯವಿಶೇಷದಿಂದ ಭಾರತದಲ್ಲಿ ಚಿತ್ರಕಲೆಯ ಪನರುಜ್ಜೀವನಕಾರ್ಯಕ್ಕೆ ಕನ್ನಡ ಕಲಾವಿದರು ಅಜಂತ ಗುಹೆಗಳಲ್ಲಿ ಬಿಡಿಸಿದ ಕಲಾಕೃತಿಗಳೇ ಸ್ಫೂರ್ತಿಯನ್ನಿತ್ತುವು. ೧೯೦೬ರಲ್ಲಿ ಲೇಡಿ ಹೆರ್ರಿಂಗ್ಹ್ಯಾಂ ಎಂಬಾಕೆ ಭಾರತಕ್ಕೆ ಬಂದು ಅವನೀಂದ್ರನಾಥ ಠಾಕೂರರ ಆದೇಶದಂತೆ ಅಜಂತ ಭಿತ್ತಿಚಿತ್ರಗಳ ರೇಖಾಪ್ರತಿಕೃತಿಗಳನ್ನು ಮಾಡುತ್ತಿದ್ದಾಗ ಈ ಕೆಲಸದಲ್ಲಿ ನೆರವಾದ ಕಲಾವಿದರಲ್ಲಿ ಕೆ. ವೆಂಕಟಪ್ಪನವರು ಪ್ರಮುಖರು. ಅವನೀಂದ್ರ ಠಾಕೂರರಿಂದ ಆರಂಭವಾದ ನವ್ಯಸಂಪ್ರದಾಯದಲ್ಲಿ ಪ್ರಾಚೀನಸತ್ತ್ವ ತುಂಬಲು ಈ ಪ್ರತಿಕೃತಿಗಳು ನೆರವಾದುವು. ಹಳೆಯ ಕನ್ನಡಶೈಲಿಗೆ ಹೊಸ ಸಂವಿಧಾನದ ಉಡುಗೆಯನ್ನು ತೊಡಿಸಿ ಕಲಾರಾಧನೆ ಮಾಡಿದವರು ವೆಂಕಟಪ್ಪನವರು. ಆಧುನಿಕ ಚಿತ್ರ ಕಲಾವಿದರಲ್ಲಿ ಇವರು ಪ್ರಮುಖರು, ವಿಶ್ವವಿಖ್ಯಾತರು. ಬಂಗಾಲೀ ಪದ್ಧತಿಯ ಸ್ಫೂರ್ತಿ ಪಡೆದು ಕರ್ಣಾಟಕದಲ್ಲಿ ಚಿತ್ರಕಲೆ ಈ ಕಾಲದಲ್ಲಿ ಮತ್ತೆ ತಲೆಯೆತ್ತಿತ್ತು.

ಆಧುನಿಕ ಕಾಲದಲ್ಲಿ[ಬದಲಾಯಿಸಿ]

ಈ ಸಂಪ್ರದಾಯವಲ್ಲದೆ ಪಾಶ್ಚಾತ್ಯ ದೇಶಗಳ ಪ್ರಗತಿಯ ಪ್ರಕಾರಗಳನ್ನು ಅಧ್ಯಯನ ಮಾಡಿ ಬೊಂಬಾಯಿಯ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್, ಬೆಂಗಳೂರಿನ ಕೆನ್ಸ್ಕೂಲ್ ಮುಂತಾದೆಡೆ ತಾಂತ್ರಿಕ ಶಿಕ್ಷಣ ಪಡೆದ ಕಲೆಗಾರರು ಸ್ವತಂತ್ರ ಮನೋವೃತ್ತಿಯಿಂದ ಕಲಾಸೇವೆ ಮಾಡುತ್ತಿದ್ದಾರೆ. ಇವರಲ್ಲಿ ಹಲವರು ನಾಡಿನ ಗೌರವ ಪಡೆದಿದ್ದಾರೆ. ಈ ಬಗ್ಗೆ ಕೆಲವಾರು ವರ್ಷಗಳಿಂದ ಬೆಂಗಳೂರಿನಲ್ಲಿರುವ ಚಿತ್ರಕಲಾವಿದರು ಚಿತ್ರಕಲಾಪರಿಷತ್ ಎಂಬ ಸಂಸ್ಥೆಯನ್ನು ರೂಪಿಸಿಕೊಂಡು ಆ ಸಂಸ್ಥೆಯ ವತಿಯಿಂದ ಕಲಾಶಾಲೆಯೊಂದನ್ನು ನಡೆಸುತ್ತಿದ್ದಾರೆ. ಕರ್ನಾಟಕದ ಕಲೆಗಾರರ ಆಶೋತ್ತರಗಳನ್ನು ಈಡೇರಿಸಿ ಅವರ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲು ಈ ಸಂಸ್ಥೆ ಶ್ರಮಿಸುತ್ತಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: