ವಿಷಯಕ್ಕೆ ಹೋಗು

ಉಡುಪಿ ಮಟ್ಟುಗುಳ್ಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಡುಪಿ ಮಟ್ಟುಗುಳ್ಳ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. melongena
Binomial name
Solanum melongena
Synonyms

Solanum ovigerum Dunal
Solanum trongum Poir.
and see text

'ಉಡುಪಿ ಗುಳ್ಳ' ಎಂಬ ಹೆಸರಿನ ಪ್ರಾದೇಶಿಕ ವಿಶೇಷ ಬದನೆಕಾಯಿ ತಳಿ

ಮಟ್ಟುಗುಳ್ಳ(ವಾದಿರಾಜ ಗುಳ್ಳ ಎಂದೂ ಹೆಸರಿದೆ.) ಉಡುಪಿ ಜಿಲ್ಲೆಮಟ್ಟು ಎಂಬ ಗ್ರಾಮದಲ್ಲಿ ಬೆಳೆಯುವ ಒಂದು ವಿಶಿಷ್ಟ ರುಚಿ ಹೊಂದಿದ ಬದನೆಯ ಒಂದು ಪ್ರಭೇದ.ಮಟ್ಟು ಎಂಬುದು ಒಂದು ಸ್ಥಳನಾಮ. ಕರ್ನಾಟಕ ರಾಜ್ಯದ ಉಡುಪಿ ತಾಲೂಕಿನ ಒಂದು ಊರು ಮಟ್ಟು. ಉಡುಪಿ ಪಟ್ಟಣದಿಂದ ದಕ್ಷಿಣ ದಿಕ್ಕಿಗೆ ೧೨ ಕಿ.ಮೀ ದೂರದಲ್ಲಿರುವ ಮಟ್ಟು ಎಂಬ ಹಳ್ಳಿಯಿದೆ. ಮಟ್ಟು ಗುಳ್ಳ ಎಂಬುದು ಬದನೆ ಎಂಬ ತರಕಾರಿ ಹೆಸರು. ಮಟ್ಟು ಗುಳ್ಳ ಎಂಬ ಪ್ರಭೇದ ಹೆಸರು ಅದನ್ನು ಬೆಳೆಯುವ ಪ್ರದೇಶದಿಂದ ಬಂದಿದೆ. ಈ ಪ್ರದೇಶ ಕರ್ನಾಟಕ ರಾಜ್ಯಉಡುಪಿ ಜಿಲ್ಲೆಯಲ್ಲಿದೆ. ಉಡುಪಿ ಜಿಲ್ಲೆಯ ಮಟ್ಟು ಪ್ರದೇಶದಲ್ಲಿ ಮಾತ್ರಾ ಈ ರುಚಿಯ ಪ್ರಭೇದ ಬದನೆ ಬೆಳೆಯುವುದರಿಂದ ಉಡುಪಿ ಮಟ್ಟು ಗುಳ್ಳ ಎಂಬ ಹೆಸರು ಬಂದಿದೆ. ತುಳು ಭಾಷೆಯಲ್ಲಿ ಗುಳ್ಳ ಎಂದರೆ ಉರುಂಟು ಎಂಬ ಅರ್ಥವಿದೆ. ತುಳುವಿನ ಉರುಂಟು ಪದದ ಅನುಸ್ವಾರ ಲೋಪವಾಗಿ ಕನ್ನಡದಲ್ಲಿ ಉರುಟು ಆಗಿದೆ. ತುಳುವರು ಗುಳ್ಳಬದನೆ ಎಂದು ಕರೆಯುತ್ತಾರೆ.[]

ಭೌಗೋಳಿಕ ವಿವರ

[ಬದಲಾಯಿಸಿ]

ಉಡುಪಿ ತಾಲ್ಲೂಕಿನ ಮಟ್ಟು ಸುತ್ತಮುತ್ತ ಬೆಳೆಯುವ ಮಟ್ಟು ಗುಳ್ಳ ಬದನೆ ವಿಶಿಷ್ಟ ರುಚಿ. ಮಟ್ಟು ಗುಳ್ಳ ಎಂದೇ ಹೆಸರಾದ ಈ ಬದನೆ ಕರಾವಳಿಯ ಉದ್ದಗಲದಲ್ಲಿ ಜನಪ್ರಿಯವಾಗಿದೆ. ಉಡುಪಿ ತಾಲ್ಲೂಕಿನ ಮಟ್ಟು ಗ್ರಾಮದ ಸುತ್ತಮುತ್ತ ಬೆಳೆಯುವ ವಿಶಿಷ್ಟ ರುಚಿಯ ಬದನೆ ಮಟ್ಟು ಗುಳ್ಳ’ ಎಂದೇ ಹೆಸರುವಾಸಿ. ಕಟಪಾಡಿ ಬಳಿಯ ಮಟ್ಟು ಪ್ರದೇಶದಲ್ಲಿ ಬೆಳೆಯುವ ಗುಳ್ಳ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬೇರೆಡೆಯೂ ಬೆಳೆದರೂ ಮಟ್ಟು ಗುಳ್ಳದ ರುಚಿ ಅವಕ್ಕಿಲ್ಲ. ಮಾರುಕಟ್ಟೆಯಲ್ಲಿ ಮಟ್ಟು ಗುಳ್ಳಕ್ಕೆ ಬೇಡಿಕೆ ಹೆಚ್ಚು. ಮಳೆಗಾಲದಲ್ಲಿ ನೆರೆಯೊಂದಿಗೆ ಕೊಚ್ಚಿಕೊಂಡು ಬರುವ ಫಲವತ್ತಾದ ಮಣ್ಣು ಗದ್ದೆಗಳಲ್ಲಿ ನಿಲ್ಲುವುದರಿಂದ ಇಲ್ಲಿ ಗುಳ್ಳ ಸಮೃದ್ಧವಾಗಿ ಬೆಳೆಯುತ್ತದೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೂರಾರು ಎಕರೆಗಳಲ್ಲಿ ಇದೇ ತಳಿಯ ಬದನೆ ಬೆಳೆದು ಅವನ್ನೇ ಮಟ್ಟು ಗುಳ್ಳ ಎಂದು ಹೇಳಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡುವವರೂ ಇದ್ದಾರೆ. ಇದು ಉಡುಪಿಯಿಂದ ಸುಮಾರು ೧೨ ಕಿ.ಮೀ ದೂರದಲ್ಲಿರುವ ಮಟ್ಟು ಎಂಬ ಹಳ್ಳಿಯಲ್ಲಿ ಮಾತ್ರ ಬೆಳೆಯುವ ಬದನೆಯಾದರೂ ಪರಿಸರದ ಗ್ರಾಮಗಳಾದ ಕೋಟೆ,ಇನ್ನಂಜೆ,ಕೈಪುಂಜಲು,ಉಳಿಯಾರಗೋಳಿ ಗ್ರಾಮಗಳಲ್ಲಿಯೂ ಇದೇ ರುಚಿಯ ಬದನೆ ಬೆಳೆಯುತ್ತಾರೆ.ಒಟ್ಟಾರೆಯಾಗಿ ಈ ಪ್ರದೇಶದ ರೇಖಾಂಶ ೭೪˚ ೪೩' ೦೦ – ೭೪˚ ೪೬' ೦೦ ಮತ್ತು ಅಕ್ಷಾಂಶ ೧೩˚ ೧೩' ೦೦– ೧೩˚ ೧೫' ೦೦ಆಗಿದೆ.[]

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಸೊಲನೇಸಿ ಕುಟುಂಬಕ್ಕೆ ಸೇರಿದ್ದು, ಸೊಲನಮ್ ಮೆಲಾಂಗೇನ ಎಂದು ಸಸ್ಯಶಾಸ್ತ್ರೀಯ ಹೆಸರು.ಇದು ಬದನೆಯ ಸಾಮಾನ್ಯ ಹೆಸರು. ಮಟ್ಟುಗುಳ್ಳವು ಇದರಲ್ಲಿಯೇ ಒಂದು ವಿಶಿಷ್ಟ ಪ್ರಭೇದ.[]

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]

ಮಟ್ಟುಗುಳ್ಳವು ಕಡು ಹಸಿರು ಬಣ್ಣದಾಗಿದ್ದು ಮೈಮೇಲೆ ತಿಳಿ ಹಸಿರು ಗೆರೆಗಳಿರುತ್ತವೆ.ಸಾಧಾರಣೆ ಉರುಟಾದ ಆಕಾರ,ಸಿಪ್ಪೆ ಬಾಡಿದಂತಿರುತ್ತದೆ.ತೊಟ್ಟಿನಲ್ಲಿ ಸಣ್ಣ ಮುಳ್ಳುಗಳಿರುತ್ತವೆ.ಬೀಜ ಬಿಳಿ ಬಣ್ಣವಿದ್ದು,ಚಪ್ಪಟೆಯಾಗಿ,ದೊಡ್ಡ ಪ್ರಮಾಣದಲ್ಲಿರುತ್ತವೆ.ಗಿಡವು ಒಂದು ಪೊದೆಸಸ್ಯವಾಗಿದ್ದು ನೇರವಾಗಿರುತ್ತದೆ.ಎಲೆಗಳು ದೊಡ್ಡದಾಗಿದ್ದು, ಉರುಟಾದ,ಪರ್ಯಾಯವಾಗಿರುತ್ತದೆ. ಎಲೆಯ ತಳಭಾಗ ಉಣ್ಣೆಯಂತಹ ಸಣ್ಣ ಕೂದಲಿನಿಂತಹ ರಚನೆಯನ್ನು ಒಳಗೊಂಡಿದೆ.ಹೂವುಗಳು ನೇರಳೆ ಬಣ್ಣವಾಗಿದ್ದು ದೊಡ್ಡಗಾತ್ರವಿರುತ್ತದೆ.ಹೆಚ್ಚಾಗಿ ಒಂದೊಂದೇ ಹೂವು ಬಿಟ್ಟರೂ ಕೆಲವೊಮ್ಮ ಗೊಂಚಲಿನಲ್ಲಿಯೂ ಇರುತ್ತದೆ.[]

ಮಟ್ಟು ಗುಳ್ಳದ ಗಿಡವೊಂದು ೧೫ರಿಂದ ೨೦ ಕಾಯಿಗಳನ್ನು ಬಿಡುತ್ತದೆ. ಒಂದು ಎಕರೆಯಲ್ಲಿ ೫ ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ಎಕರೆಗೆ ೧೦ ರಿಂದ ೧೨ ಕ್ವಿಂಟಲ್ ಇಳುವರಿ ಬರುತ್ತದೆ. ಬೇರೆ ಪ್ರದೇಶದಲ್ಲಿ ಬೆಳೆಯುವ ಗುಳ್ಳಗಳಿಗೆ ಹೋಲಿಸಿದರೆ ಮಟ್ಟು ಪ್ರದೇಶದ ರೈತರು ಐದಾರು ಪಟ್ಟು ಹೆಚ್ಚು ಆದಾಯ ಪಡೆಯುತ್ತಾರೆ. ಇದು ಮೂರು ತಿಂಗಳ ಬೆಳೆ. ಮುಂಗಾರು ಭತ್ತ ಕಟಾವು ಮಾಡಿ ನಂತರ ಬಿತ್ತನೆ ಮಾಡಿದರೆ ಜನವರಿ ಮೊದಲ ವಾರದಲ್ಲಿ ಗುಳ್ಳ ಕೊಯ್ಲಿಗೆ ಬರುತ್ತದೆ. ಬೇಡಿಕೆಗೆ ಅನುಗುಣವಾಗಿ ವಾರಕ್ಕೆ ಮೂರು-ನಾಲ್ಕು ಸಲ ಕಾಯಿಗಳನ್ನು ಕೀಳುತ್ತಾರೆ. ನಾಲ್ಕು ತಿಂಗಳವರೆಗೆ ಕಾಯಿಗಳು ಸಿಗುತ್ತವೆ. ರಾಜ್ಯದ ಬೇರೆ ಊರುಗಳಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರೂ ಉಡುಪಿ ಮಾರುಕಟ್ಟೆಯಿಂದ ಮಟ್ಟು ಗುಳ್ಳ ತರಿಸಿಕೊಂಡು ಬಳಸುತ್ತಾರೆ.ಮಟ್ಟು ಗ್ರಾಮದಲ್ಲಿ ಸುಮಾರು ೩೦೦ ಎಕರೆ ಪ್ರದೇಶದಲ್ಲಿ ಗುಳ್ಳ ಬೆಳೆಯಲಾಗುತ್ತಿತ್ತು. ಇದೀಗ ಸಮುದ್ರ ಕೊರೆತ, ಉಕ್ಕುವ ಉಪ್ಪು ನೀರು, ಭೂ ಸವೆತ ಹಾಗೂ ಮಾಯವಾಗುತ್ತಿರುವ ಕೃಷಿ ಭೂಮಿಯಿಂದಾಗಿ ಗುಳ್ಳ ಬೆಳೆಯುವ ಪ್ರದೇಶ ಅರ್ಧದಷ್ಟು ಕಡಿಮೆಯಾಗಿದೆ.

ಹೆಸರಿನ ಹಿನ್ನೆಲೆ

[ಬದಲಾಯಿಸಿ]

ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮೀಜಿಯವರು ತಮ್ಮ ನಿತ್ಯಪೂಜೆಯ ಅಂಗವಾಗಿ ತಮ್ಮ ಇಷ್ಟ ದೇವರಾದ ಹಯಗ್ರೀವ (ವಿಷ್ಣುವಿನ ಕುದುರೆಯ ರೂಪ) ದೇವರಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದರು. ಇದನ್ನು ಕುದುರೆಯು ಸ್ವಾಮೀಜಿಯ ಹಿಂಬದಿಯಿಂದ ಬಂದು ತಿನ್ನುತ್ತಿತ್ತು. ನೈವೇದ್ಯದ ನಂತರ ಸ್ವಾಮೀಜಿಯವರು ಯಾವಾಗಲೂ ಖಾಲಿ ಪಾತ್ರೆಯನ್ನು ಕೊಡುತ್ತಿದ್ದುದರಿಂದ ಶಂಕಿತರಾದ ಉಳಿದ ಬ್ರಾಹ್ಮಣರು ಒಂದು ಸಲ ನೈವೇದ್ಯದಲ್ಲಿ ವಿಷವನ್ನು ಬೆರೆಸಿಕೊಟ್ಟರು.ಎಂದಿನಂತೆ ಸ್ವಾಮೀಜಿ ನೈವೇದ್ಯವನ್ನು ಅರ್ಪಿಸಿದಾಗ ಕುದುರೆ ಬಂದು ಪಾತ್ರೆಯಲ್ಲಿದ್ದ ನೈವೇದ್ಯವನ್ನು ಪೂರ್ತಿಯಾಗಿ ತಿಂದಿತು.ಆದರೆ ಬ್ರಾಹ್ಮಣರಿಗೆ ಆಶ್ಚರ್ಯವಾಗುವಂತೆ ಉಡುಪಿಯ ಶ್ರೀ ಕೃಷ್ಣನ ವಿಗ್ರಹ ನೀಲಿ ಬಣ್ಣಕ್ಕೆ ತಿರುಗಿತು.ಇದರ ಗುಟ್ಟನ್ನು ತಿಳಿದ ಬ್ರಾಹ್ಮಣರಿಗೆ ತಮ್ಮ ತಪ್ಪಿನ ಅರಿವಾಗಿ ವಾದಿರಾಜ ಸ್ವಾಮೀಜಿಯವರಲ್ಲಿ ಕ್ಷಮೆ ಯಾಚಿಸಿದರು.ಸ್ವಾಮೀಜಿಯವರು ತಮ್ಮ ದಿವ್ಯ ಶಕ್ತಿಯಿಂದ ಮಟ್ಟುವಿನ ಬ್ರಾಹ್ಮಣರಿಗೆ ಬದನೆ ಗಿಡದ ಬೀಜವನ್ನು ಕೊಟ್ಟು ಬದನೆ ಬೆಳೆಸಿ ದೇವರಿಗೆ ಸಮರ್ಪಿಸುವಂತೆ ತಿಳಿಸಿದರು. ಅದರಂತೆ ಮಟ್ಟು ಗ್ರಾಮದ ಬ್ರಾಹ್ಮಣರು ತಮ್ಮ ಗ್ರಾಮದಲ್ಲಿ ಬದನೆ ಬೆಳೆಸಿ ಅದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲು ಪ್ರಾರಂಭಿಸಿದಂತೆ ನೀಲಿ ಬಣ್ಣಕ್ಕೆ ತಿರುಗಿದ್ದ ಕೃಷ್ಣನ ವಿಗ್ರಹ ಪುನಹ ತನ್ನ ಹಿಂದಿನ ಬಣ್ಣಕ್ಕೆ ತಿರುಗಿತು.ಮಟ್ಟುಗುಳ್ಳವು ಇಂದಿಗೂ ತನ್ನ ನಂಜುನಿರೋಧಕ ಗುಣಕ್ಕೆ ಹೆಸರುವಾಸಿಯಾಗಿದೆ.ಇದರ ಮೂಲ ಬೀಜವನ್ನು ಸ್ವಾಮೀಜಿ ಅನುಗ್ರಹಿಸಿದುದರಿಂದ ಜನ ಇದನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮ ನಡೆಯುವ ಪರ್ಯಾಯ ಉತ್ಸವದಲ್ಲಿ ಇದನ್ನು ವ್ಯಾಪಕವಾಗಿ ಅಡುಗೆಯಲ್ಲಿ ಬಳಸುತ್ತಾರೆ.[]

ಇನ್ನೊಂದು ಐತಿಹ್ಯದ ಪ್ರಕಾರ, ಉಡುಪಿಯ ವಾದಿರಾಜ ಮಠದ ಕುದುರೆಗೆ ವಿಷಪ್ರಾಶನವಾದಾಗ ಭಗವನ್ ಕೃಷ್ಣ, ವಾದಿರಾಜ ಸ್ವಾಮಿಯ ಕನಸಿನಲ್ಲಿ ಬಂದು ಬಂಗಾಳ ಕೊಲ್ಲಿಯಿಂದ ಬದನೆಯ ಬೀಜ ತಂದು ಅದನ್ನು ಉಡುಪಿ ತಾಲೂಕಿನ ಮಟ್ಟು ಗ್ರಾಮದ ರೈತರಿಗೆ ನೀಡಿ ಅವರ ಕೈಯಿಂದ ಬೆಳೆಸಿ, ಆ ಬದನೆಯ ನೈವೇದ್ಯವನ್ನು ಮಾಡಿ ಕುದುರೆಗೆ ತಿನ್ನಿಸಿದರೆ ಕುದುರೆ ಹಿಂದಿನ ಸ್ಥಿತಿಗೆ ಮರಳುತ್ತದೆ ಎಂಬ ಆಜ್ಞೆಯಾಯಿತು. ಅದರಂತೆ ಮಾಡಲು ಕುದುರೆ ಯಥಾಸ್ಥಿತಿಗೆ ಮರಳಿತು. ನಂತರದ ದಿನಗಳಿಂದ ಈ ಊರಿನಲ್ಲಿ ಈ ತಳಿಯನ್ನು ಬೆಳೆಸಲಾಯಿತು ಎಂಬ ಪ್ರತೀತಿ ಇದೆ. ಗುಳ್ಳದ ಬೀಜಗಳನ್ನು ರೈತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದ ಕಾರಣದಿಂದ, ಈ ಬದನೆಗೆ ರೈತರು ಗೌರವದಿಂದ ವಾದಿರಾಜ ಗುಳ್ಳ ಎಂದೂ ಕರೆಯಲು ಆರಂಭಿಸಿದರು. ಮಟ್ಟುಗುಳ್ಳದಿಂದ ಮಾಡಿದ ವಿಶೇಷ ಖಾದ್ಯಗಳನ್ನು ಉಡುಪಿ ಪರ್ಯಾಯ ಪೀಠಾರೋಹಣ ಉತ್ಸವದ ಸಂದರ್ಭದಲ್ಲಿ ಬಳಸುವ ಸಂಪ್ರದಾಯ ಇದೆ.

ಪೇಟೆಂಟ್ ವಿವಾದ

[ಬದಲಾಯಿಸಿ]

ಅಮೆರಿಕ ಮೂಲದ ಮಾನ್ಸಂಟೊ ಕಂಪೆನಿ ಮಟ್ಟು ಗುಳ್ಳವನ್ನು ಬಿ.ಟಿ. ಅಥವಾ ಕುಲಾಂತರಿ ತಳಿಯಾಗಿ ಮಾಡಲು ಯತ್ನಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ರೀತಿ ಮಟ್ಟುಗುಳ್ಳವನ್ನು ಕುಲಾಂತರಿಸಿದಲ್ಲಿ ಮೂಲ ಬೆಳೆಗಾರರು ಸಂಕಷ್ಟಕ್ಕೀಡಾಗುತ್ತಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ಈ ನಡುವೆ ಉಡುಪಿಯ ಪ್ರಸಿದ್ಧ ವಾಣಿಜ್ಯ ಬೆಳೆ ಮಟ್ಟುಗುಳ್ಳಕ್ಕೆ ಚೆನ್ನೈನ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರೇಶನ್ ಇಲಾಖೆ ಅಧಿಕೃತವಾಗಿ ಪೇಟೆಂಟ್ (ಹಕ್ಕುಸ್ವಾಮ್ಯ) ಅಧಿಕಾರವನ್ನು ಮಟ್ಟುಗುಳ್ಳಬೆಳೆಗಾರರಿಗೆ ನೀಡಿದೆ (ಮಟ್ಟು ಗುಳ್ಳ) ಈ ಬದನೆಗೆ ಪೇಟೆಂಟ್ ದಕ್ಕಿದೆ ಏನ್ನಲಾಗುತಿದ್ದರೂ, ನಿಜವಾಗಿ ಮಟ್ಟುಗುಳ್ಳಕ್ಕೆ ಲಭಿಸುತ್ತಿರುವುದು ಜಿಐಆರ್ (ಭೌಗೋಳಿಕ ಗುರುತಿಸುವಿಕೆ ನೋಂದಣಿ) ಹೊರತು ಪೇಟೆಂಟ್ ಅಲ್ಲ ಎಂದೂ ಹೇಳುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://vijaykarnataka.com/news/udupi/-/articleshow/29217099.cms
  2. ೨.೦ ೨.೧ ೨.೨ "GOVERNMENT OF INDIA GEOGRAPHICAL INDICATIONS JOURNAL NO. 40" (PDF). Archived from the original (PDF) on 2013-08-09. Retrieved 2016-01-26.
  3. "ಆರ್ಕೈವ್ ನಕಲು". Archived from the original on 2020-09-28. Retrieved 2019-11-03.