ಶ್ರೀಮಾ ಪ್ರಿಯದರ್ಶಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮಾ ಪ್ರಿಯದರ್ಶಿನಿ (ಜನನ: 28th February 1987) ಮೂಲತಃ ಮಂಗಳೂರಿನವರು. ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.ರೈಲ್ವೇ ಇಲಾಖೆಯಲ್ಲಿ ಉದ್ಯೋಗಿ. ರೈಲ್ವೇ ಇಲಾಖೆಯ ಕ್ರೀಡಾವಿಭಾಗದ ಸಕ್ರಿಯ ಸದಸ್ಯೆಯಾಗಿರುವ ಇವರು ಮಂಗಳೂರಿನ 'ಚಿನ್ನದ ಹುಡುಗಿ' ಎಂದೇ ಪ್ರಸಿದ್ಧರಾಗಿದ್ದಾರೆ.[೧]

ಬಾಲ್ಯ[ಬದಲಾಯಿಸಿ]

ಶ್ರೀಮಾ ಪ್ರಿಯದರ್ಶಿನಿ 28th February 1987 ಮಂಗಳೂರಿನಲ್ಲಿ ಜನಿಸಿದರು. ಸಹಜವಾಗಿಯೇ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಶ್ರೀಮಾ ಪದವಿಪೂರ್ವ ಶಿಕ್ಷಣ ಪೂರೈಸುವ ಹೊತ್ತಿಗೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರದ ಗಮನ ಸೆಳೆದರು. ಪ್ರಸ್ತುತ ಅವರು ಮಂಗಳೂರಿನ ಯೆಯ್ಯಾಡಿಯ ನಿವಾಸಿಯಾಗಿದ್ದಾರೆ.

ಶಿಕ್ಷಣ[ಬದಲಾಯಿಸಿ]

ಶ್ರೀಮಾ ಅವರು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜು ಹಾಗೂ ಕೆನರಾ ಕಾಲೇಜುಗಳಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದರು. ಕೋಚ್ ದಿನೇಶ್ ಕುಂದರ್ ಎಂಬವರಲ್ಲಿ ತರಬೇತಿ ಪಡೆದರು. 100 ಮೀಟರ್, 200 ಮೀಟರ್ ಓಟ, 4x100 ಮೀ. ರಿಲೇ, ಹರ್ಡಲ್ಸ್, ಹೆಪ್ಟತ್ಲಾನ್, ಉದ್ದ ಜಿಗಿತ, ಟ್ರಿಪಲ್ ಜಂಪ್ ಮುಂತಾದವು ಅವರ ಮೆಚ್ಚಿನ ಕ್ರೀಡೆಗಳು.

ಸಾಧನೆ[ಬದಲಾಯಿಸಿ]

ಶ್ರೀಮಾ 100 ಮೀ. ಹರ್ಡಲ್ಸ್‌, ಡಿಸ್ಕಸ್‌ ತ್ರೋನಲ್ಲಿ ರಾಷ್ಟ್ರ ಮಟ್ಟದ ಚಿನ್ನದ ಪದಕ, ಹೆಪ್ಟತ್ಲಾನ್‌ನಲ್ಲಿ ರಾಷ್ಟ್ರ ಮಟ್ಟದ ಬೆಳ್ಳಿ ಪದಕ ಸೇರಿ ವಿವಿಧ ಕ್ರೀಡಾಕೂಟಗಳಲ್ಲಿ ಸಾಕಷ್ಟು ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಏಶ್ಯನ್‌ ಗ್ರ್ಯಾನ್‌ಪ್ರಿ, ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಹಿರಿಯರ ಕ್ರೀಡಾ ಕೂಟಗಳಲ್ಲಿ ಭಾರತವನ್ನು ಪ್ರತಿ ನಿಧಿಸಿದ್ದಾರೆ.

ತಮ್ಮ ಒಂಬತ್ತನೇ ತರಗತಿಯಿಂದಲೇ ಶ್ರೀಮಾ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಪ್ರೌಢಶಾಲಾ ಹಂತದಲ್ಲಿ ಡಿಸ್ಕಸ್ ಎಸೆತ, ಜ್ಯಾವೆಲಿನ್ ಎಸೆತ, ಶಾಟ್ ಪುಟ್ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಶ್ರೀಮಾ, 10ನೇ ತರಗತಿಯ ನಂತರ ಹರ್ಡಲ್ಸ್, ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಹೆಚ್ಚು ಆಸಕ್ತಿ ತೋರಿಸಿದರು. ಹೆಪ್ಟಾತ್ಲಾನ್ ಅವರ ಮೆಚ್ಚಿನ ಆಟವಾಗಿತ್ತು.

2002ರಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ ಚಾಂಪಿಯನ್'ಷಿಪ್'ನಲ್ಲಿ ಶ್ರೀಮಾ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಪಡೆದರು. 2002-03ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಹಾಗೂ ಶಾಟ್ ಪುಟ್ ನಲ್ಲಿ ಬೆಳ್ಳಿಯ ಪದಕ ಪಡೆದರು. ಸಿರ್ಸಿ ಮಾರಿಕಾಂಬ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಪಡೆದರು.

2003ರಲ್ಲಿ ಬೆಂಗಳೂರಿನ ಬಿಇಐ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಶ್ರೀಮಾ ಡಿಸ್ಕಸ್ ಎಸೆತ, 100 ಮೀಟರ್ ಓಟ ಹಾಗೂ 4x100 ಮೀಟರ್ ರಿಲೇಯಲ್ಲಿ ಮೂರು ಪ್ರತ್ಯೇಕ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಅದೇ ವರ್ಷ ಕಂಠೀರವ ಕ್ರೀಡಾಂಗಣದಲ್ಲಿ ಹಾಗೂ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಕಿರಿಯರ ಕ್ರೀಡಾಕೂಟಗಳಲ್ಲಿ ಅವರು ಪದಕಗಳೊಂದಿಗೆ ಹಿಂತಿರುಗಿದರು.

ಬೆಳಗಾವಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಹೆಪ್ಟತ್ಲಾನ್ ನಲ್ಲಿ 3977 ಅಂಕಗಳನ್ನು ಗಳಿಸುವುದರೊಂದಿಗೆ ಬಿ. ಎಲ್. ಭಾರತಿಯವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.ಫೆಡರೇಶನ್ ಆಫ್ ಇಂಡಿಯಾದವರು ಪಂಜಾಬಿನ ಪಾಟಿಯಾಲದಲ್ಲಿ ಆಯೋಜಿಸಿದ್ದ ಎರಡು ತಿಂಗಳ ವಿಶೇಷ ತರಬೇತಿಗೆ ಆಯ್ಕೆಯಾದರು.

ಕೇರಳದ ಕೊಲ್ಲಂನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೀಮಾ 2004ರಲ್ಲಿ ಢಾಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಅತ್ಲೆಟಿಕ್ಸ್ ಚಾಂಪಿಯನ್'ಷಿಪ್'ಗೆ ಆಯ್ಕೆಯಾದರು. ಅದೇ ವರ್ಷ ಇಂಡೋನೇಷ್ಯಾದ ಜಕಾರ್ತದಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಅತ್ಲೆಟಿಕ್ಸ್ ಫೆಡರೇಶನ್ಸ್ ಮಹಿಳಾ ಕ್ರೀಡಾಪಟುಗಳಿಗಾಗಿ ನಡೆಸಿದ 15 ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡರು. ಹ್ಯಾನ್ಸ್ ಪೀಟರ್ ಥಮ್ ರಂತಹ ಅಂತಾರಾಷ್ಟ್ರೀಯ ತರಬೇತುದಾರರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಅವರಿಗೆ ದೊರಕಿತು.

ಕ್ರೀಡಾಕ್ಷೇತ್ರದ ಮೂಲಕವೇ ಭಾರತೀಯ ರೈಲ್ವೇಯಲ್ಲಿ 2007ರಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಅವರು 2015ರಲ್ಲಿ ನಡೆದ ರಾಷ್ಟ್ರ ಮಟ್ಟದ ಇಂಟರ್‌ ಡಿವಿಜನ್‌ ರೈಲ್ವೇ ಮೀಟ್‌ನಲ್ಲಿ 3 ಚಿನ್ನದ ಪದಕ ಗಳಿಸಿ ಕ್ರೀಡೆಯಲ್ಲಿ ಸಾಧನೆಯ ಉತ್ತುಂಗಕ್ಕೇರಿದರು.[೨]

2008ರಲ್ಲಿ ಕೊಚ್ಚಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ 100 ಮೀ. ಹರ್ಡಲ್ಸ್ ಅನ್ನು 14.29 ಸೆಕೆಂಡ್ ಗಳಲ್ಲಿ ಪೂರೈಸಿದರು. 2009ರಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ 200 ಮೀ. ಓಟವನ್ನು 25.35 ಸೆಕೆಂಡುಗಳಲ್ಲಿ ಪೂರೈಸಿ ಚಿನ್ನ ಗೆದ್ದರು.[೩] ಹಾಗೆಯೇ, 100 ಮೀ. ಹರ್ಡಲ್ಸ್, 4 x 100 ಮೀ. ರಿಲೇ ಹಾಗೂ ಡಿಸ್ಕಸ್ ತ್ರೋಗಳಲ್ಲೂ ಬಂಗಾರ ಪಡೆದರು.[೪] 2010ರಲ್ಲಿ ನವದೆಹಲಿಯಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಉದ್ದ ಜಿಗಿತದಲ್ಲಿ 6.17 ಮೀ. ಸಾಧನೆ ಮಾಡಿದರು. 2016ರಲ್ಲಿ ಟರ್ಕಿಯ ಟ್ರಾಬ್ಸಾನ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ನಲ್ಲಿ 12.41 ಮೀ. ಹಾಗೂ 12.66 ಮೀ. ಸಾಧನೆ ಮಾಡಿದರು.[೫]

ಗೌರವ[ಬದಲಾಯಿಸಿ]

2007ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ Archived 2019-12-30 ವೇಬ್ಯಾಕ್ ಮೆಷಿನ್ ನಲ್ಲಿ. ಮಟ್ಟದ 100 ಮೀ. ಹರ್ಡಲ್ಸ್‌ನ ದಾಖಲೆ ಶ್ರೀಮಾ ಅವರ ಹೆಸರಿನಲ್ಲೇ ಇದೆ. 14.2 ಸೆಕೆಂಡ್ಸ್‌ನಲ್ಲಿ ಇವರು ಮಾಡಿದ ದಾಖಲೆಯನ್ನು ಕಳೆದ 11 ವರ್ಷದಿಂದ ಯಾರೂ ಮುರಿದಿಲ್ಲ. ಅಲ್ಲದೆ, ಹೆಪ್ಟತ್ಲಾನ್‌ನಲ್ಲಿಯೂ ಅವರ ದಾಖಲೆಯನ್ನು 10 ವರ್ಷದಿಂದ ಮುರಿಯಲು ಇತರರಿಗೆ ಸಾಧ್ಯವಾಗಿಲ್ಲ. [೬]

ಶ್ರೀಮಾ ಅವರ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರೊತ್ಸವ ಪ್ರಶಸ್ತಿ, ಗಣ ರಾಜ್ಯೋತ್ಸವ ಪ್ರಶಸ್ತಿ, ಕ್ರೀಡಾಭಾರತಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.[೭]

ಉಲ್ಲೇಖಗಳು[ಬದಲಾಯಿಸಿ]

  1. https://www.udayavani.com/news-section/sports-news/quiet-girl-golden-girl-in-mangalore
  2. https://www.udayavani.com/news-section/sports-news/quiet-girl-golden-girl-in-mangalore
  3. https://www.deccanherald.com/content/26953/shreema-bags-200m-gold.html
  4. https://www.deccanherald.com/content/27164/shreema-steals-show.html
  5. https://www.worldathletics.org/athletes/india/shreema-priyadarshini-236250
  6. https://www.udayavani.com/news-section/sports-news/quiet-girl-golden-girl-in-mangalore
  7. https://www.udayavani.com/news-section/sports-news/quiet-girl-golden-girl-in-mangalore