ವಿಷಯಕ್ಕೆ ಹೋಗು

ಮ್ಯಾಸಿಡೋನಿಯೊ ಮೆಲ್ಲೋನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಸಿಡೋನಿಯೊ ಮೆಲ್ಲೋನಿ

ಮ್ಯಾಸಿಡೋನಿಯೊ ಮೆಲ್ಲೋನಿ (1798 - 1854) ಇಟಲಿಯ ಒಬ್ಬ ಭೌತವಿಜ್ಞಾನಿ.[] ಜನನ 11 - 4 - 1798.

ಜೀವನ, ಸಾಧನೆಗಳು

[ಬದಲಾಯಿಸಿ]

ಗೋಚರ ಬೆಳಕಿನ ಬಗೆಗಿನ ತಿಳಿವಳಿಕೆಯೇ ಸಾಕಷ್ಟಿಲ್ಲದಿದ್ದಾಗ, ಅಗೋಚರ ಬೆಳಕು ಹಾಗೂ ಉಷ್ಣಕಿರಣಗಳ ಬಗ್ಗೆ ಸಂಶೋಧನೆ ನಡೆಸಿದ ಮಹಾಮೇಧಾವಿ.[] ಇಟಲಿಯ ಪಾರ್ಮ ನಗರದಲ್ಲಿ ಜನಿಸಿದ ಮೆಲ್ಲೋನಿ ಭೌತವಿಜ್ಞಾನದಲ್ಲಿ ಪ್ರೌಢಶಿಕ್ಷಣ ಪಡೆದು 1824 ರಿಂದ 1831ರ ತನಕ ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. 1831ರಲ್ಲಿ ನಡೆದ ವಿಫಲ ಕ್ರಾಂತಿಯೊಂದರಲ್ಲಿ ಭಾಗವಹಿಸಿದ ಈತ ಆತ್ಮರಕ್ಷಣೆಗಾಗಿ ಫ್ರಾನ್ಸಿಗೆ ಪಲಾಯನ ಮಾಡಬೇಕಾಯಿತು. ಅಲ್ಲಿ 1839ರ ತನಕ ನಿರುದ್ಯೋಗಿಯಾಗಿದ್ದು ಕ್ರಾಂತಿಯ ಬಿಸಿ ಆರಿದ ತರುವಾಯ ತಾಯಿನಾಡಿಗೆ ಹಿಂತಿರುಗಿ 1848ರ ತನಕ ನೇಪಲ್ಸ್ ನಗರದ ಭೌತವಿಜ್ಞಾನ ನಿಗಮದ ಹಾಗೂ ಅಲ್ಲಿಯ ಹವಾ ವೀಕ್ಷಣಾಲಯದ ನಿರ್ದೇಶಕನಾಗಿ ಕೆಲಸ ಮಾಡಿದ.

ವೃತ್ತಿಯ ಮೊದಲ ಆರಂಭದಿಂದಲೂ ಈತನ ಆಸಕ್ತಿ ವಿಷಯಗಳೆಂದರೆ ಅತಿರಕ್ತ ಕಿರಣಗಳು, ಗೋಚರ ಬೆಳಕು ಹಾಗೂ ಉಷ್ಣಕಿರಣಗಳ ನಡುವಣ ಸಾದೃಶ್ಯ ಹಾಗೂ ವೈದೃಶ್ಯ. ಸುಮಾರು ಒಂದು ಶತಮಾನದ ಹಿಂದೆಯೇ ಹರ್ಷೆಲ್ ಎಂಬ ವಿಜ್ಞಾನಿಯಿಂದ ಗುರುತಿಸಲ್ಪಟ್ಟಿದ್ದ ಅತಿರಕ್ತ ಕಿರಣಗಳ ಬಗೆಗಿನ ಸಂಶೋಧನಾ ಕಾರ್ಯ ಆವಶ್ಯ ಉಪಕರಣಗಳ ಸೌಕರ್ಯವಿಲ್ಲದೆ ಸ್ಥಗಿತವಾಗಿತ್ತು. 1830ರಲ್ಲಿ ವಿನ್ಯಾಸಗೊಳಿಸಲ್ಪಟ್ಟ ಉಷ್ಣವಿದ್ಯುತ್ ಕೋಶಶ್ರೇಣಿ (ಥರ್ಮೋಪೈಲ್) ಸಹಾಯದಿಂದ ಅತಿಸೂಕ್ಷ್ಮಪ್ರಮಾಣದ ಉಷ್ಣವನ್ನೂ ಗುರುತಿಸುವುದು ಸುಲಭವಾಯಿತು. ಈ ಉಪಕರಣದ ರಚನೆಯನ್ನು ಸುಧಾರಿಸಿದ ಮೆಲ್ಲೋನಿ ಇದನ್ನು ಅತಿರಕ್ತ ಕಿರಣಗಳ ಪತ್ತೆಗಾಗಿ ಉಪಯೋಗಿಸಿದ. ಇದರಿಂದ ಚಂದ್ರನ ಬೆಳಕಿನಿಂದ ಉಂಟಾಗುವ ಅತ್ಯಲ್ಪ ಉಷ್ಣವನ್ನು ಸಹ ನಿರ್ಧರಿಸುವಂತಾಯಿತು (1846). ಅತಿರಕ್ತ ಕಿರಣಗಳು ಪ್ರತಿಫಲನ, ವಕ್ರೀಭವನ, ಧ್ರುವೀಕರಣ ಮುಂತಾದ ಕ್ರಿಯೆಗಳಲ್ಲಿ ಗೋಚರ ಬೆಳಕಿನಂತೆಯೇ ವರ್ತಿಸುತ್ತವೆಂದು ಕಂಡುಕೊಂಡು ಮೆಲ್ಲೋನಿ ತನ್ನ ಅಸಂಖ್ಯಾತ ಪ್ರಯೋಗಗಳ ಅನಂತರ ಅತಿರಕ್ತ ಕಿರಣಗಳು ಹಾಗೂ ಗೋಚರ ಬೆಳಕುಗಳ ನಡುವಣ ಭೇದ ಕೇವಲ ಅಲೆಯುದ್ದಗಳದ್ದೆಂದು ಘೋಷಿಸಿದ. ಇದಲ್ಲದೆ ಕಲ್ಲುಪ್ಪು ಅತಿರಕ್ತ ಕಿರಣಗಳಿಗೆ ಪಾರದರ್ಶಕವೆಂದು ಕಂಡುಕೊಂಡ ಈತ, ಕಲ್ಲುಪ್ಪಿನಿಂದ ಮಸೂರ ಮತ್ತು ಪಟ್ಟಕಗಳನ್ನು ತಯಾರಿಸಿ ತನ್ನ ಪ್ರಯೋಗಗಳಲ್ಲಿ ಬಳಸಿದ.

ಯಂಗ್, ಫ್ರೆಸ್ನಲ್ ಮುಂತಾದ ವಿಜ್ಞಾನಿಗಳ ಪ್ರಕಾರ ಬೆಳಕು ಎಂಬುದು ಈಥರ್ ಎಂಬ ಸರ್ವವ್ಯಾಪಿ, ತೇಜೋವಾಹಿಯ ಮೂಲಕ ಪ್ರಸರಣ ಹೊಂದುವ ಅಡ್ಡಅಲೆಗಳೆಂದೂ (ಟ್ರಾನ್ಸ್ವರ್ಸ್ ವೇವ್ಸ್) ಉಷ್ಣದ ಕಿರಣಗಳು ಈ ತರಂಗಗಳ ಒಂದು ಬಗೆಯ ರೂಪಾಂತರಗಳೆಂದು ನಂಬಲಾಗಿತ್ತು. ಆದರೆ ಯಾವುದೇ ಒಂದು ವಸ್ತು ಮಾಧ್ಯಮದ ಮೂಲಕ ಹರಿಯುವ ಉಷ್ಣ ಅಥವಾ ಬೆಳಕಿನ ಕಿರಣಗಳ ಪ್ರಮಾಣವನ್ನು ವಿವರಿಸುವ ಬಗ್ಗೆ ಈ ಸಿದ್ಧಾಂತಗಳು ಭಾಗಶಃ ವಿಫಲಗೊಂಡಿದ್ದವು. ಉಷ್ಣ ಹಾಗೂ ಬೆಳಕಿನ ಕಿರಣಗಳು ಒಂದೇ ಶಕ್ತಿಯ ಭಿನ್ನ ತರಂಗ ಶ್ರೇಣಿಗಳೆಂಬ ನಂಬಿಕೆ ಪ್ರಕಾರ ಬೆಳಕಿಗೆ ಪಾರದರ್ಶಕವಾಗಿರುವ ಯಾವುದೇ ಮಾಧ್ಯಮ ಉಷ್ಣಕಿರಣಗಳಿಗೂ ಅಷ್ಟೇ ಪಾರದರ್ಶಕವಾಗಿರಬೇಕು. ಆದರೆ ಈ ಬಗ್ಗೆ ನಡೆಸಿದ ಪ್ರಯೋಗಗಳು, ಮೇಲಿನ ತರ್ಕವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದವು.

ತನ್ನ ವೃತ್ತಿಯ ಮೊದಲ ದಿವಸಗಳಿಂದಲೂ ಮೆಲ್ಲೋನಿ ಉಷ್ಣ ಕಿರಣಗಳು ಬೆಳಕಿನ ಕಿರಣಗಳಂತೆ ಈತರ್ ಸಾಗರದಲ್ಲಿ ಪ್ರಸರಣ ಹೊಂದುವ ಶಕ್ತಿಯ ರೂಪವೆಂದೂ ಆದರೆ ಅದರ ಸ್ಪಂದನ ಬೆಳಕಿನ ಅಲೆಗಳ ರೀತಿಯದಕ್ಕಿಂತ ಭಿನ್ನವಾಗಿವೆಯೆಂದೂ ತಿಳಿದುಕೊಂಡಿದ್ದ. ತನ್ನ ಪ್ರಯೋಗಗಳಿಂದ ಮೆಲ್ಲೋನಿ ಯಾವುದೇ ವಸ್ತುವಿನ ಮೂಲಕ ಹರಿಯುವ ಉಷ್ಣಶಕ್ತಿಗೂ ಅದರ ಪಾರದರ್ಶಕತೆಗೂ (ಬೆಳಕಿನ) ಸಂಬಂಧವಿಲ್ಲವೆಂದೂ ಉಷ್ಣ ಹಾಗೂ ಬೆಳಕಿನ ಕಿರಣಗಳು ಯಾವುದೇ ಮಾಧ್ಯಮದ ಮೂಲಕ ಸಮಪ್ರಮಾಣದಲ್ಲಿ ಹರಿಯುವುದಿಲ್ಲವೆಂದೂ ದೃಢೀಕರಿಸಿದ.  ಉಷ್ಣಕಿರಣಗಳ ಧ್ರುವೀಕರಣ ಸಾಧ್ಯ. ಆದರೆ ಇಲ್ಲಿಯ ರೀತಿ ಗೋಚರ ಬೆಳಕಿನ ಕ್ರಿಯೆಗಿಂತ ಭಿನ್ನ - ಇದು ಆತ ನಡೆಸಿದ ಪ್ರಯೋಗಗಳ ಮತ್ತೊಂದು ಫಲಿತಾಂಶ. ಇವಲ್ಲದೆ ಒಂದು ವಸ್ತು ಪ್ರಸರಿಸುವ ಬೆಳಕಿನ ಪ್ರಮಾಣ ಆ ವಸ್ತುವಿನ ಮೇಲ್ಮೈಯ ನುಣುಪನ್ನು ಅವಲಂಬಿಸುತ್ತದೆಂದು ಸಹ ತೋರಿಸಿಕೊಟ್ಟ.

ಉಲ್ಲೇಖಗಳು

[ಬದಲಾಯಿಸಿ]
  1. "Melloni, Macedonio ." Complete Dictionary of Scientific Biography. . Encyclopedia.com. 26 May. 2023 <https://www.encyclopedia.com>.
  2.  Chisholm, Hugh, ed. (1911). "Melloni, Macedonio" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help)