ವಿಷಯಕ್ಕೆ ಹೋಗು

ಪೋಲೆಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪೋಲಂಡ್ ಇಂದ ಪುನರ್ನಿರ್ದೇಶಿತ)
ಪೋಲೆಂಡ್ ಗಣರಾಜ್ಯ
Rzeczpospolita Polska
Flag of Poland
Flag
Coat of arms of Poland
Coat of arms
Location of ಪೋಲೆಂಡ್ (orange) – in Europe (tan & white) – in the European Union (tan)  [Legend]
Location of ಪೋಲೆಂಡ್ (orange)

– in Europe (tan & white)
– in the European Union (tan)  [Legend]

Capital
and largest city
ವಾರ್ಸಾ
Official languagesಪೋಲಿಷ್
Demonym(s)Pole/Polish
Governmentಸಂಸದೀಯ ಗಣರಾಜ್ಯ
ಲೆಖ್ ಕಾಝಿನ್‌ಸ್ಕಿ
ಡೊನಾಲ್ಡ್ ಟಸ್ಕ್
ರಚನೆ
• ಪೋಲೆಂಡಿನ ರಚನೆ
ಎಪ್ರಿಲ್ 14 966
• ದ್ವಿತೀಯ ಪೋಲಿಷ್ ಗಣರಾಜ್ಯ
ನವೆಂಬರ್ 11 1918
• Water (%)
3.07
Population
• 2013 estimate
38,502,396 (34ನೆಯದು)
• 2002 census
38,530,080
GDP (PPP)2007 (IMF) estimate
• Total
$631.8 ಬಿಲಿಯನ್ (24ನೆಯದು)
• Per capita
$16,599 (52ನೆಯದು)
GDP (nominal)2007 (IMF) estimate
• Total
$413.3 ಬಿಲಿಯನ್ (24ನೆಯದು)
• Per capita
$10,858 (49ನೆಯದು)
HDI (2005)Increase 0.870
Error: Invalid HDI value · 37ನೆಯದು
Currencyಜ್ಲಾಟಿ (PLN)
Time zoneUTC+1 (CET)
• Summer (DST)
UTC+2 (CEST)
Calling code48
ISO 3166 codePL
Internet TLD.pl

ಪೋಲೆಂಡ್ (ಅಧಿಕೃತವಾಗಿ ಪೋಲೆಂಡ್ ಗಣರಾಜ್ಯ) ಯುರೋಪಿನ ಮಧ್ಯಭಾಗದಲ್ಲಿನ ಒಂದು ಜನತಾ ಗಣರಾಜ್ಯ.. ಪೋಲೆಂಡಿನ ಪಶ್ಚಿಮಕ್ಕೆ ಜರ್ಮನಿ, ದಕ್ಷಿಣದಲ್ಲಿ ಜೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ, ಪೂರ್ವದಲ್ಲಿ ಉಕ್ರೇನ್ ಮತ್ತು ಬೆಲಾರುಸ್ ಹಾಗೂ ಉತ್ತರದಲ್ಲಿ ಲಿಥುವೇನಿಯ, ರಷ್ಯಾದ ಭಾಗವಾದ ಕಾಲಿನಿನ್‌ಗ್ರಾಡ್ ಮತ್ತು ಬಾಲ್ಟಿಕ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ವಾರ್ಸಾ.

ಪೂ.ರೇ. 14º 67' - 24º 08' (ಸುಮಾರು 684 ಕಿ.ಮೀ.) ಹಾಗೂ ಉ.ಅ. 49º-54' (648 ಕಿ.ಮೀ.) ನಡುವೆ ಹಬ್ಬಿದೆ. 446 ಕಿಮೀ ಉದ್ದದ ತೀರ ಪ್ರದೇಶವಿದೆ. ಪೂರ್ವಪಶ್ಚಿಮವಾಗಿ 692 ಕಿಮೀ, ದಕ್ಷಿಣ ಉತ್ತರವಾಗಿ 636 ಕಿಮೀ ಇರುವ ಈ ದೇಶದ ಒಟ್ಟು ವಿಸ್ತೀರ್ಣ 3,23,250 ಚ. ಕಿಮೀ ಜನಸಂಖ್ಯೆ 38,786,000 (2000).

ಭೌತಿಕ ಭೂವಿವರಣೆ

[ಬದಲಾಯಿಸಿ]

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಪೋಲ್ ಎಂದರೆ ಮೈದಾನ ಎಂದರ್ಥ. ಇದು ಬಹುತೇಕ ತಗ್ಗು ನೆಲ. ದೇಶದ ಬಹುಭಾಗ ಯೂರೋಪಿನ ಬೃಹತ್ ಮೈದಾನ ಪ್ರದೇಶದಲ್ಲಿದೆ. ಪೋಲೆಂಡಿನ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ ಸುಮಾರು 168.8 ಮೀ. ದೇಶದ ದಕ್ಷಿಣ ಭಾಗದಲ್ಲಿ ಕಾರ್ಪೇತಿಯನ್ ಪರ್ವತಶ್ರೇಣಿ ವೃತ್ತಾಕಾರವಾಗಿ ಹಬ್ಬಿದೆ. ಈ ಶ್ರೇಣಿಯ ಉತ್ತರಕ್ಕೆ, ಕಣಿವೆಯಿಂದಾಚೆಗೆ ಬೊಹಿಮಿಯನ್ ಪರ್ವತ ಗ್ರಂಥಿ ಇದೆ. ಇದರಲ್ಲಿ ಸುಡೆಟೀಸ್ ಮುಂತಾದ ಪರ್ವತಗಳಿವೆ. ಇದು ಉನ್ನತ ಸೀಮೆ. ಪೋಲೆಂಡನ್ನು ಪೂರ್ವ ಪಶ್ಚಿಮವಾಗಿ ಹಬ್ಬಿದ ಹಲವು ವಲಯಗಳಾಗಿ ವಿಂಗಡಿಸಬಹುದು. ಉತ್ತರದ ವಲಯ ದಕ್ಷಿಣ ಬಾಲ್ಟಿಕ್ ಕರಾವಳಿ ಮೈದಾನದ ಭಾಗ. ಇದು ಅಲ್ಲಲ್ಲಿ ಜೌಗು ನೆಲದಿಂದಲೂ, ಕುಪ್ಪೆಗಳಿಂದಲೂ ಕೂಡಿದೆ. ಇದಕ್ಕೆ ದಕ್ಷಿಣದಲ್ಲಿರುವುದು ಮಡಿಕೆಗಳಿಂದಲೂ ಹಿಮನದಿಗಳಿಂದ ಉಂಟಾದ ಹಲವು ಸರೋವರಗಳಿಂದಲೂ ಕೂಡಿದ ವಲಯ. ಈಶಾನ್ಯದಲ್ಲಿ ಮಸುರಿಯ ಪ್ರದೇಶದಲ್ಲಿ ಸರೋವರಗಳು ಹೆಚ್ಚು ಒತ್ತಾಗಿವೆ. ಅವುಗಳ ಪೈಕಿ ಸ್ನಿಯಾರ್ಡೀ ಅತ್ಯಂತ ದೊಡ್ಡದು. ದೇಶದಲ್ಲಿ 1 ಹೆಕ್ಟೇರ್‍ಗಿಂತ ಹೆಚ್ಚು ವಿಸ್ತೀರ್ಣವಿರುವ ಸುಮಾರು 9,300 ಸರೋವರಗಳಿವೆ. ಇವುಗಳ ಒಟ್ಟು ವಿಸ್ತೀರ್ಣ 3,200 ಚ.ಕಿ.ಮೀ. ಇದು ಪೋಲೆಂಡಿನ ವಿಸ್ತೀರ್ಣದ ಸೇ. 1 ರಷ್ಟಾಗುತ್ತದೆ. ಮೂರನೆಯ ವಲಯ ಮಧ್ಯ ಪೋಲೆಂಡ್ ತಗ್ಗು ನೆಲ. ಇದು ಪೋಲೆಂಡಿನ ಹೃದಯ ಸದೃಶ ಪ್ರದೇಶ. ಕೃಷಿ ಕೈಗಾರಿಕೆಗಳ ತೊಟ್ಟಿಲು. ಪೋಲೆಂಡಿನ ರಾಜಧಾನಿಯಾದ ವಾರ್ಸಾ ಇಲ್ಲಿದೆ. ಇದಕ್ಕೆ ದಕ್ಷಿಣದಲ್ಲಿರುವುದು ಎತ್ತರದ ನೆಲ. ಇಲ್ಲಿ ಪೋಲೆಂಡಿನ ಹಲವು ನಿಸರ್ಗಪ್ರದೇಶಗಳಿವೆ.

ಪೋಲೆಂಡಿನಲ್ಲಿ ಹರಿಯುವ ನೀರಿನ ಸೇ. 99.8 ರಷ್ಟು ಭಾಗ ಬಾಲ್ಟಿಕ್ ಸಮುದ್ರವನ್ನು ಸೇರುತ್ತದೆ. ಇದರಲ್ಲಿ ಅರ್ಧದಷ್ಟು ವಿಸ್ಚಲ ನದಿಯಲ್ಲಿ, ಮೂರನೆಯ ಒಂದು ಭಾಗ ಓಡರ್‍ನಲ್ಲಿ ಹರಿಯುತ್ತದೆ. ವಿಸ್ಚಲ ನದಿ ಕಾರ್ಪೇತಿಯನ್ ಪರ್ವತದ ಉತ್ತರ ಇಳಿಜಾರಿನಲ್ಲಿ ಹುಟ್ಟಿ ಈಶಾನ್ಯ, ಉತ್ತರ ಹಾಗೂ ವಾಯವ್ಯಾಭಿಮುಖವಾಗಿ ವೃತ್ತಾಕಾರದಲ್ಲಿ ಗಡಾನ್ಸ್ಕ್‍ನಲ್ಲಿ ಬಾಲ್ಟಿಕ್ ಸಮುದ್ರ ಸೇರುತ್ತದೆ. ಡುನಾಯೆಟ್ಸ್, ಸಾನ್, ಬಗ್ ಅದರ ಕೆಲವು ಉಪನದಿಗಳು.

ವಾಯುಗುಣ

[ಬದಲಾಯಿಸಿ]

ಪೋಲೆಂಡಿನದು ಪಶ್ಚಿಮದ ಮಾರುತಗಳಿಂದ ಪ್ರಭಾವವಿತವಾದ, ಮೇಲಿಂದ ಮೇಲೆ ಬದಲಾಗುವ ಖಂಡೀಯ ವಾಯುಗುಣ. ಇಲ್ಲಿ ಆರು ಶ್ರಾಯಗಳನ್ನು ಗುರುತಿಸಬಹುದಾಗಿದೆ. 1. ಹಿಮ ಬೀಳುವ, ಸುಮಾರು ಮೂರು ತಿಂಗಳುಗಳ ಅವಧಿಯ ಚಳಿಗಾಲ. 2. ಚಳಿ ಮತ್ತು ವಸಂತ ಕಾಲಗಳ ನಡುವೆ ಹೊಯ್ದಾಡುವ ಪೂರ್ವವಸಂತ. 3. ಬಿಸಿಲಿನಿಂದ ಕೂಡಿದ ವಸಂತ. 4 ಮಳೆ ಮತ್ತು ಬಿಸಿಲಿನಿಂದ ಕೂಡಿದ ಬೇಸಗೆ, 5. ಬಿಸಿಲಿನಿಂದ ಕೂಡಿದ ಶರತ್ಕಾಲ. 6. ಮುಂಬರುವ ಚಳಿಗಾಲವನ್ನು ಸೂಚಿಸುವ, ಮಂಜಿನಿಂದ ಕೂಡಿದ ಆದ್ರ್ರ ಹವೆಯ ಕಾಲ. ಪೋಲೆಂಡಿನ ಸ್ಥಾನದಿಂದಾಗಿ ಅದರ ಮೇಲೆ ಸಂಭವಿಸುವ ಸಾಗರೀಯ, ತಂಪು ಹಾಗೂ ಬಿಸಿ ಗಾಳಿಗಳ ಸಂಘಟನೆ ಇದಕ್ಕೆ ಕಾರಣವಾಗಿದೆ. ಜನವರಿ ಅತ್ಯಂತ ಹೆಚ್ಚು ಚಳಿಯ ತಿಂಗಳು. ದೇಶವೆಲ್ಲ ಹಿಮಾಚ್ಛಾದಿತವಾಗುತ್ತದೆ. ಮಧ್ಯವಾರ್ಷಿಕ ಉಷ್ಣತೆ ನೈಋತ್ಯದ ತಗ್ಗಿನ ನೆಲದಲ್ಲಿ 80ಅ ಯಿಂದ ಈಶಾನ್ಯದಲ್ಲಿ 60ಅ ವರೆಗೆ ವ್ಯತ್ಯಾಸವಾಗುತ್ತದೆ. ಪರ್ವತ ಪ್ರದೇಶದಲ್ಲಿ ಎತ್ತರಕ್ಕೆ ಅನುಗುಣವಾಗಿ ಉಷ್ಣತೆ ಬದಲಾಗುತ್ತದೆ. ವಾರ್ಷಿಕ ಸರಾಸರಿ ಅವಪಾತ 600 ಮಿ.ಮೀ. ಪರ್ವತ ಪ್ರದೇಶದಲ್ಲಿ 800 ಮಿ.ಮೀ.ಗಳಿಂದ 1,200 ಮಿ.ಮೀ.ವರೆಗೆ ಇದರಲ್ಲಿ ಬಹುಭಾಗ ಹಿಮರೂಪದಲ್ಲಿ ಬೀಳುತ್ತದೆ.

ನೈಸರ್ಗಿಕ ಸಸ್ಯಪ್ರಾಣಿಗಳು

[ಬದಲಾಯಿಸಿ]

ಇಲ್ಲಿ ಯೂರೋಪಿನ ಉತ್ತರ ಮಧ್ಯ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವ ಸಸ್ಯಗಳೂ ಪ್ರಾಣಿಗಳೂ ಇವೆ. ಬದಲಾಗುವ ವಾಯುಗುಣದಿಂದಾಗಿ ಅವುಗಳಲ್ಲಿ ವೈವಿಧ್ಯವಿದೆ. ದೇಶದ ಸೇ. 27 ಭಾಗ ಅರಣ್ಯಾವೃತ. ಅರಣ್ಯಗಳು ಹೆಚ್ಚಾಗಿರುವುದು ಪರ್ವತ ಪ್ರದೇಶಗಳಲ್ಲಿ. ಪೈನ್ ಅಧಿಕವಾಗಿರುವ ಶಂಕುಧಾರಿಗಳೂ (ಅರಣ್ಯ ಪ್ರದೇಶದ ಸೇ. 70) ಬರ್ಚ್, ಬೀಚ್ ಮತ್ತು ಎಲ್ಮ್ ಹೆಚ್ಚಾಗಿರುವ ಪರ್ಣಪಾತಿಗಳೂ ಇಲ್ಲಿ ಇವೆ. ಹಣ್ಣಿನ ಮರಗಳು ದೇಶದಲ್ಲೆಲ್ಲಾ ವಿಪುಲವಾಗಿವೆ. ಅಲ್ಪಸಂಖ್ಯೆಯಲ್ಲಿ ಇನ್ನೂ ಉಳಿದುಕೊಂಡಿರುವ ದೊಡ್ಡ ವನ್ಯಮೃಗಗಳಲ್ಲಿ ಲಿಂಕ್ಸ್, ಕಾಡು ಬೆಕ್ಕು. ಐರೋಪ್ಯ ಕಾಡುಕೋಣ, ಮೂಸ್, ಟಾರ್ಪಾನ್ ಮತ್ತು ಕಾಡು ಮೇಕೆ ಮುಖ್ಯವಾದವು. ಕಾರ್ಪೇತಿಯನ್ ಪರ್ವತ ಪ್ರದೇಶದ ಒಳಭಾಗವನ್ನು ಬಿಟ್ಟರೆ ಉಳಿದೆಡೆಗಳಲ್ಲಿ ವನ್ಯಮೃಗಗಳು ವಿರಳ. ಪಕ್ಷಿಗಳು, ಮೀನು ಮತ್ತು ಕೀಟಗಳು ಅಧಿಕ ಸಂಖ್ಯೆಯಲ್ಲಿವೆ.

ಜನ, ಭಾಷೆ, ಮತ

[ಬದಲಾಯಿಸಿ]

ಎರಡನೆಯ ಮಹಾಯುದ್ಧದ ಪೂರ್ವದಲ್ಲಿ ಸೇ. 30 ಕ್ಕೂ ಹೆಚ್ಚು ನಿವಾಸಿಗಳು ವಿದೇಶಿಯರಾಗಿದ್ದರು. ಆದರೆ, ಈಗ ಸೇ. 98 ಜನರು ರಾಷ್ಟ್ರೀಯರೇ ಆಗಿದ್ದಾರೆ. 1970 ರ ಸುಮಾರಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರಲ್ಲಿ ದೇಶದ ಪಶ್ಚಿಮ ಭಾಗದಲ್ಲಿ 1,65,000 ಬೈಲೊರಷ್ಯನ್ನರು, ಉತ್ತರ ಪ್ರಾಂತ್ಯಗಳಲ್ಲಿ ಹರಡಿದ್ದ 1,80,000 ಉಕ್ರೇನಿಯನ್ನರು, ಪಟ್ಟಣ ಪ್ರದೇಶಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಯಹೂದ್ಯ ಮೂಲದವರು, ಲಿಥುವೇನಿಯದ ಮೇರೆಯುದ್ದಕ್ಕೂ ಸುಮಾರು 10,000 ಲಿಥುವೇನಿಯರು ಹಾಗೂ ತೀರ ಅಲ್ಪಸಂಖ್ಯೆಯಲ್ಲಿ ಜರ್ಮನ್ನರು ಇದ್ದರು. ಅಲ್ಲದೆ, ಸುಮಾರು 20,000 ರಷ್ಯನ್ನರು, 10,000 ಗ್ರೀಕರು ಮತ್ತು ಮ್ಯಾಸಿಡೋನಿಯನ್ನರು ಹಾಗೂ ಸುಮಾರು 12,000 ಅಲೆಮಾರಿಗಳು ಇದ್ದರು.

ಲ್ಯಾಟಿನ ವರ್ಣಮಾಲೆಯನ್ನು ಬಳಸುವ ಪೋಲಿಷ್ ಭಾಷೆ ಪಶ್ಚಿಮೀ ಸ್ಲಾಪೋನಿಕ್ ಗುಂಪಿನದು. ಇದರಲ್ಲಿ ಹಲವು ಉಪಭಾಷೆಗಳಿವೆ. ಬಹಳಷ್ಟು ಪೋಲರು ಜರ್ಮನ್, ರಷ್ಯನ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಆಡಬಲ್ಲರು. ಅನೇಕರು ಇತರ ಸ್ಲಾವೊನಿಕ್ ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು.

ಸುಮಾರು ಸೇ. 95 ರಷ್ಟು ಜನರು ರೋಮನ್ ಕ್ಯಾತೊಲಿಕರೆಂದು ಅಂದಾಜಿದೆ. ಉಳಿದವರಲ್ಲಿ ರಷ್ಯನ್ ಸಂಪ್ರದಾಯಸ್ಥರು, ಪ್ರಾಟಿಸ್ಟೆಂಟರು ಮತ್ತು ಯಹೂದಿಗಳು ಇದ್ದಾರೆ.

ಆರ್ಥಿಕತೆ

[ಬದಲಾಯಿಸಿ]

ಪೋಲೆಂಡ್ ಕೃಷಿ ಪ್ರಧಾನ ದೇಶವಾಗಿತ್ತು. ಆದರೆ, ಎರಡನೆಯ ಮಹಾಯುದ್ಧದ ಅನಂತರ ಪಶ್ಚಿಮದಲ್ಲಿ ಹೊಸಪ್ರದೇಶಗಳು ಸೇರಿದ್ದು ಹೊಸ ಔದ್ಯೋಗೀಕರಣದ ನೀತಿ ಇವುಗಳಿಂದಾಗಿ ಉದ್ಯೋಗ ಮತ್ತು ಕೈಗಾರಿಕೆಗಳು ರಾಷ್ಟ್ರೀಯ ಆದಾಯದಲ್ಲಿ ಅರ್ಧಕ್ಕೂ ಹೆಚ್ಚಳಕ್ಕೆ ಕಾರಣವಾಗಿವೆ. ಐದು ಮುಖ್ಯ ಬಂದರುಗಳುಳ್ಳ ವಿಸ್ತಾರ ಸಾಗರತೀರ, ಊರ್ಜಿತಗೊಳ್ಳುತ್ತಿರುವ ಹಡಗು ನಿರ್ಮಾಣ ಕೈಗಾರಿಕೆ ಇವುಗಳಿಂದಾಗಿ ಪೋಲೆಂಡ್ ಗಮನಾರ್ಹ ಸಾಗರೀಯ ರಾಷ್ಟ್ರವಾಗಿದೆ. ಪೋಲೆಂಡಿನ ಆರ್ಥಿಕತೆ ಮುಖ್ಯವಾಗಿ ಸರ್ಕಾರ ಕೇಂದ್ರೀಕೃತ ಯೋಜನೆಯ ಸಿದ್ಧಾಂತದ ತಳಹದಿಯ ಮೇಲೆ ಬೆಳೆದಿದೆ. ಕೃಷೇತರ ಆರ್ಥಿಕತೆಯಲ್ಲಿ ಸಮಾಜೀಕೃತ ವಲಯಕ್ಕೆ ಪ್ರಾಧಾನ್ಯವಿದೆ.

1970 ರ ದಶಕದ ಆದಿಯಲ್ಲಿ ಆರ್ಥಿಕವಾಗಿ ಕಾರ್ಯನಿರತರಾದ ಜನರಲ್ಲಿ ಸೇ. 35 ರಷ್ಟು ಮಂದಿ ಕೃಷಿನಿರತರಾಗಿದ್ದರು. ರೈ ಗೋಧಿ, ಬಾರ್ಲಿ, ತೋಕೆ ಗೋಧಿ, ಆಲೂಗೆಡ್ಡೆ, ಸಕ್ಕರೆ ಬೀಟ್, ತಂಬಾಕು ಮತ್ತು ಫ್ಲಾಕ್ಸ್ ಮುಖ್ಯ ಬೆಳೆಗಳು. 1970 ರ ದಶಕದ ಆದಿಯಲ್ಲಿ ಪೋಲೆಂಡ್ ವರ್ಷಕ್ಕೆ 50,00,000 ಟನ್ ಗೋದಿ, ಅಷ್ಟೇ ರೈತ 20,00,000 ಟನ್‍ಗಳಿಗೂ ಹೆಚ್ಚು ಬಾರ್ಲಿ, 30,00,000 ಟನ್ನುಗಳಿಗೂ ಹೆಚ್ಚು ತೋಕೆ ಗೋದಿ ಉತ್ಪಾದಿಸುತ್ತಿತ್ತು. ವರ್ಷದಲ್ಲಿ 5,00,000 ಆಲೂಗೆಡ್ಡೆ ಬೆಳೆಯುತ್ತಿದ್ದ ದೇಶ ಆಲೂಗೆಡ್ಡೆ ಮತ್ತು ರೈ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಎರಡನೆಯ ಸ್ಥಾನ ಪಡೆದಿತ್ತು. ಅನೇಕ ಮುಖ್ಯ ಉತ್ಪನ್ನಗಳು ಅದರಲ್ಲೂ ವಿಶೇಷವಾಗಿ ಧಾನ್ಯ ಮತ್ತು ಮೇವಿನ ಬೆಳೆಗಳು ದೇಶಕ್ಕೆ ಸಾಕಾಗುತ್ತಿಲ್ಲ. ಪೋಲೆಂಡಿನ ನೆಲದ ಮಣ್ಣು ವಿಶೇಷ ಫಲವತ್ತಾದ್ದಲ್ಲ.

ಪಶುಪಾಲನೆ

[ಬದಲಾಯಿಸಿ]

ಯುದ್ಧಪೂರ್ವದಲ್ಲಿ ಪೋಲೆಂಡಿನಲ್ಲಿ ಪಶುಪಾಲನೆ ಕೃಷಿಗೆ ಗೌಣವಾಗಿತ್ತಾದ ಕಾರಣ ಆ ಸಂಬಂಧದಲ್ಲಿ ಜನತೆಯ ಆಸ್ತೆ ವಿಶೇಷವಾಗಿರಲಿಲ್ಲ. ಯುದ್ಧದಿಂದಾಗಿ ಪಶುಗಳಲ್ಲಿ ಬಹುಪಾಲು ನಾಶವಾಯಿತು. ಹೆಚ್ಚು ಪ್ರಮಾಣದಲ್ಲಿ ಮೇವನ್ನು ಒದಗಿಸುವುದು, ಬೀಜದ ಪಶುಗಳ ಸುಧಾರಣೆ, ಹಂದಿ ಸಾಕಣೆಗೆ ಭಾಗಶಃ ತೆರಿಗೆ ಪರಿಹಾರ ಮೊದಲಾದ ಉಪಾಯಗಳ ಮೂಲಕ ಸರ್ಕಾರ ಪಶುಪಾಲನೆಗೆ ಪ್ರೋತ್ಸಾಹ ನೀಡುತ್ತಿದೆ. ಸಂಸ್ಕರಿಸಿದ ಮಾಂಸವನ್ನು ಪೋಲೆಂಡ್ ರಫ್ತು ಮಾಡುತ್ತಿದೆ.

ಮೀನುಗಾರಿಕೆ

[ಬದಲಾಯಿಸಿ]

ಆಧುನಿಕ ಸಮುದ್ರ ಸಂಚಾರಿ ಮೀನುಗಾರಿಕೆ ಹಡಗುಗಳ ಸಂಖ್ಯೆಯಲ್ಲಿ ಏರಿಕೆ ಹಾಗೂ ಬಂದರು ಮತ್ತು ಬಂದರುಕಟ್ಟೆಗಳ ಸುಧಾರಣೆ ಇವುಗಳಿಂದಾಗಿ ಮೀನುಗಾರಿಕೆ ರಾಷ್ಟ್ರೀಯ ಆರ್ಥೀಕತೆಯ ಒಂದು ಮುಖ್ಯ ವಿಕಾಸಶೀಲ ಅಂಗವಾಗಿದೆ. ಉದ್ಯೋಗದ ಬಹುಪಾಲು ಸರ್ಕಾರದ ಸ್ವಾಮ್ಯದಲ್ಲಿದೆ. ಬಾಲ್ಟಿಕ್ ಸಮುದ್ರ, ಉತ್ತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಮೀನುಗಾರಿಕೆ ನಡೆಯುತ್ತದೆ. ಸರೋವರ, ಕೊಳ ಮತ್ತು ನದಿಗಳು ಒಳವಾಡಿನ ಮೀನುಗಾರಿಕೆಗೆ ಯೋಗ್ಯವಾಗಿವೆ. ವರ್ಷದಲ್ಲಿ 5,00,000 ಟನ್ ಸಮುದ್ರ ಮೀನು ಹಿಡಿಯಲಾಗುತ್ತಿದೆಯೆಂದು ಅಂದಾಜಿದೆ.

ಗಣಿಗಾರಿಕೆ

[ಬದಲಾಯಿಸಿ]

ಪ್ರಪಂಚದ ಕಲ್ಲಿದ್ದಲು ಉತ್ಪಾದನೆಯ ಸೇ. 6 ಇಲ್ಲಿ ಉತ್ಪತ್ತಿಯಾಗುತ್ತದೆ. 1970 ರ ದಶಕದ ಆದಿಯಲ್ಲಿ ಗಟ್ಟಿ ಕಲ್ಲಿದ್ದಲಿನ ವಾರ್ಷಿಕ ಉತ್ಪಾದನೆ 14,00,000 ಟನ್‍ಗಳಷ್ಟಿತ್ತು. ಕಂದು ಕಲ್ಲಿದ್ದಲು ಲಿಗ್ನೈಟುಗಳ ಉತ್ಪಾದನೆ 3,00,000 ಟನ್‍ಗಳಿಗೂ ಮೀರಿತ್ತು. ಖನಿಜ ತೈಲದ ಉತ್ಪಾದನೆ ಸುಮಾರು 4,00,000 ಟನ್‍ಗಳಷ್ಟಿದ್ದು ದೇಶದ ಒಟ್ಟು ಅವಶ್ಯಕತೆಯನ್ನು ಇದು ಭಾಗಶಃ ಪೂರೈಸುತ್ತಿತ್ತು. ಸ್ವಾಭಾವಿಕ ಅನಿಲದ ಉತ್ಪಾದನೆ ಸುಮಾರು 1,83,00,000 ಘನ ಅಡಿಗಳಷ್ಟು ದಶಕದ ಅಂತ್ಯದೊಳಗೆ ಉತ್ಪಾದನೆ ಮೂರು ಪಟ್ಟು ಹೆಚ್ಚುವುದೆಂದು ನಿರೀಕ್ಷಿಸಲಾಗಿತ್ತು. ಗಂಧಕ ದೇಶದ ಎರಡನೆಯ ಮುಖ್ಯ ಖನಿಜ. ಇದರ ಉತ್ಪಾದನೆ 1960 ರಲ್ಲಿ 21,000 ಟನ್ನುಗಳಷ್ಟಿದ್ದದ್ದು ಒಂದು ದಶಕದಲ್ಲಿ 27,00,000 ಟನ್‍ಗಳಿಗೆ ಏರಿತು. ಇನ್ನೂ ಭಾರೀ ನಿಕ್ಷೇಪಗಳ ಅಂದಾಜಿದೆ. ಉಪ್ಪು, ಕೆಯೋಲಿನ್, ಸುಣ್ಣದ ಕಲ್ಲು, ಜಿಪ್ಸಮ್, ಅಮೃತಶಿಲೆ ಇವು ಇತರ ಕೆಲವು ಖನಿಜಗಳು. ಬಾಲ್ಟಿಕ್ ಸಮುದ್ರ ತೀರ ಪ್ರದೇಶದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಉಪ್ಪು, ದೊರಕುತ್ತವೆ. ಲೋಹ ಖನಿಜಗಳಲ್ಲಿ ಸತು ಮುಖ್ಯ. ಸತು ಮತ್ತು ಸೀಸಗಳ ನಿಕ್ಷೇಪಗಳು ಹೆಚ್ಚಾಗಿರುವ ದೇಶಗಳ ಪೈಕಿ ಪೋಲೆಂಡ್ ಒಂದು ಎಂದು ಹೇಳಲಾಗಿದೆ. ಈ ದಶಕದ ಪ್ರಾರಂಭದ ವರ್ಷಗಳಲ್ಲಿ ಅವುಗಳ ಉತ್ಪಾದನೆ 3,50,00,000 ಟನ್‍ಗಳನ್ನು ಮೀರಿತ್ತು. ಈ ದೃಷ್ಟಿಯಿಂದ ಇದು ಯೂರೋಪಿನ ದೇಶಗಳಲ್ಲಿ ಎರಡನೆಯದಾಗಿತ್ತು. ತಾಮ್ರ, ಕಬ್ಬಿಣ ಅದುರು, ವೆನೇಡಿಯಮ್, ಕೋಬಾಲ್ಟ್, ಬೆಳ್ಳಿ ಇವು ಇಲ್ಲಿ ದೊರಕುವ ಇತರ ಖನಿಜಗಳು.

ಕೈಗಾರಿಕೆ

[ಬದಲಾಯಿಸಿ]

ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ಮಹತ್ವ ನೀಡುತ್ತದೆ. ಬಂಡವಾಳದ ಅಧಿಕಾಂಶ ಕೈಗಾರಿಕೆ ವಿಭಾಗಕ್ಕೆ ಮೀಸಲಾಗಿದೆ. ರಾಷ್ಟ್ರೀಯ ವರಮಾನದ ಅರ್ಧಕ್ಕೂ ಹೆಚ್ಚು ಭಾಗಕ್ಕೆ ಕೈಗಾರಿಕೆಗಳು ಕಾರಣ. ಇಂಜಿನಿಯರಿಂಗ್, ಆಹಾರ ಸಂಸ್ಕರಣ, ಕಬ್ಬಿಣ ಮತ್ತು ಇತರ ಲೋಹಗಾರಿಕೆ, ಬಟ್ಟೆ, ಇಂಧನ, ಕೋಕ್ ರಾಸಾಯನಿಕ ಮತ್ತು ಇತರ ರಾಸಾಯನಿಕ, ಹಡಗು ನಿರ್ಮಾಣ - ಇವು ಕೆಲವು ಮುಖ್ಯ ಕೈಗಾರಿಕೆಗಳು. ಮೋಟಾರು ವಾಹನ, ಟ್ರಾಕ್ಟರ್, ಭಾರೀ ಯಂತ್ರ, ವಿಮಾನ, ಮನೆಬಳಕೆಯ ವಸ್ತು, ಶೀತಕ, ಬಟ್ಟೆ ಒಗೆಯುವ ಯಂತ್ರ, ದೂರದರ್ಶಕ, ಮೋಟಾರ್ ಸೈಕಲ್, ಬಟ್ಟೆ - ಇವು ಮಹತ್ವದ ತಯಾರಿಕಾ ವಸ್ತುಗಳು. ಮೂಲ ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡಲಾಗಿದೆ. ಅವು ಆಯೋಜಿತ ಆರ್ಥಿಕತೆಯ ಅಡಿಯಲ್ಲಿವೆ. 1961-80 ರ ದೀರ್ಘಾವಧಿ ಯೋಜನೆಯಲ್ಲಿ ಕೈಗಾರಿಕೋತ್ಪಾದನೆಯಲ್ಲಿ ಹೆಚ್ಚಿನ ವೈವಿಧ್ಯಕ್ಕೆ ಅವಕಾಶ ನೀಡಲಾಗಿದೆ. ವಿದೇಶಿ ವ್ಯಾಪಾರ: ಪೋಲೆಂಡಿನ ಮುಖ್ಯ ವ್ಯಾಪಾರಿ ಪಾಲುದಾರ ಸೋವಿಯತ್ ದೇಶ. ಅದು ದೇಶದ ರಫ್ತಿನ ಮೂರನೆಯ ಒಂದು ಭಾಗವನ್ನು ಕೊಳ್ಳುತ್ತದೆ ಮತ್ತು ಆಮದಿನ ಸೇ. 40 ರಷ್ಟನ್ನು ಒದಗಿಸುತ್ತದೆ. 1970 ರ ದಶಕದ ಪ್ರಾರಂಭಕ್ಕೆ ಯಂತ್ರೋಪಕರಣ, ಶಕ್ತಿ ಮತ್ತು ವಿದ್ಯುತ್ ಯಂತ್ರಗಳು ಹಾಗೂ ಹಡಗುಗಳು ಒಟ್ಟು ರಫ್ತಿನ ಮೂರನೆಯ ಒಂದರಷ್ಟಿದ್ದುವು. ಇವು ಹೆಚ್ಚಾಗಿ ಸಮಾಜವಾದಿ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರವಾನೆಯಾಗುತ್ತವೆ. ಉಳಿದ ಮೂರನೆಯ ಒಂದು ಭಾಗದಲ್ಲಿ ಕಲ್ಲಿದ್ದಲು, ಕೋಕ್, ಕಬ್ಬಿಣ ಮತ್ತು ಉಕ್ಕು, ಇಂಧನ ಮತ್ತು ಕಚ್ಚಾ ಮಾಲು ಸೇರುತ್ತವೆ. ಅನುಭೋಗ ಸರಕು ಮತ್ತು ಆಹಾರವೂ ರಫ್ತಾಗುತ್ತವೆ. ಎಣ್ಣೆ, ಲೋಹಗಳ ಅದುರುಗಳು, ರಾಸಾಯನಿಕ ಮತ್ತು ಪ್ರಾಣಿ ಮೂಲ ಉತ್ಪನ್ನಗಳು, ಇಂಧನ ಮತ್ತು ಕಚ್ಚಾ ಸಾಮಗ್ರಿ, ಯಂತ್ರ, ಆಹಾರ, ಅನುಭೋಗ ಸರಕು - ಇವು ಆಮದುಗಳು.

ಸಾರಿಗೆ

[ಬದಲಾಯಿಸಿ]

ಎಲ್ಲ ತರಹದ ಸಾರಿಗೆಯ ರಾಷ್ಟ್ರೀಕರಣವಾಗಿದೆ. ಪ್ರಯಾಣಿಕರ ಹಾಗೂ ಸರಕಿನ ಸಾರಿಗೆಯ ಅಧಿಕಾಂಶ ನಡೆಯುವುದು ರೈಲು ಮಾರ್ಗಗಳ ಮೂಲಕ. 1968 ರಲ್ಲಿ ಸೇ. 60 ರಷ್ಟು ಸರಕನ್ನು ಮತ್ತು ಸೇ. 55 ರಷ್ಟು ಪ್ರಯಾಣಿಕರನ್ನು ರೈಲುಗಳ ಮೂಲಕ ಸಾಗಿಸಲಾಯಿತು. 1967 ರಲ್ಲಿ ರೈಲುಗಳು 36,56,00,000 ಟನ್ ಸರಕನ್ನೂ 1,01,25,00,000 ಪ್ರಯಾಣಿಕರನ್ನೂ ಸಾಗಿಸಿದುವು. 1968 ರ ಅಂತ್ಯದಲ್ಲಿ ದೇಶದಲ್ಲಿ ಒಟ್ಟು 26,628 ಕಿ.ಮೀ. ಉದ್ದದ ರೈಲು ಮಾರ್ಗಗಳಿದ್ದವು. ಅದರಲ್ಲಿ 3,206 ಕಿ.ಮೀ. ಉದ್ದದ ಮಾರ್ಗ ವಿದ್ಯುಚ್ಚಾಲಿತ. 1969 ರಲ್ಲಿ ಒಟ್ಟು 1,24,547 ಚ.ಕಿ.ಮೀ. ಉದ್ದದ ರಸ್ತೆಗಳಿದ್ದವು.

1968 ರಲ್ಲಿ ದೇಶದಲ್ಲಿ ಒಟ್ಟು ನೋಂದಣಿಯಾದ 11,91,782 ಟನ್ನುಗಳ 237 ಹಡಗುಗಳಿದ್ದವು. ಎರಡನೆಯ ಮಹಾಯುದ್ಧದ ಪೂರ್ವದಲ್ಲಿ ಹಡಗು ಸಾರಿಗೆ ಸಂಪರ್ಕ ವಿಶೇಷವಾಗಿ ಪಶ್ಚಿಮದ ರಾಷ್ಟ್ರಗಳೊಡನೆ ಅದರಲ್ಲೂ ವಿಶೇಷವಾಗಿ ಅಮೆರಿಕದೊಡನೆ ಇತ್ತು. ಈಗ ಅದು ವಿಶೇಷವಾಗಿ ಏಷ್ಯನ್ ಹಾಗೂ ಆಫ್ರಿಕನ್ ದೇಶಗಳೊಡನೆ ಇದೆ. ಓಡರ್, ವಿಸ್ಚುಲ ಮತ್ತು ವಾರ್ಟ ನದಿಗಳು ಮುಖ್ಯ ಜಲಸಂಚಾರ ಮಾರ್ಗಗಳು. 1922 ರಲ್ಲಿ ಸ್ಥಾಪನೆಗೊಂಡು ಯುದ್ಧಾನಂತರ ಪುನರ್ಘಟನೆ ಹೊಂದಿದ ಪೋಲೆಂಡಿನ ರಾಷ್ಟ್ರೀಕೃತ ವಿಮಾನ ವ್ಯವಸ್ಥೆ ಇದೆ. ವಾರ್ಸಾ ಮುಖ್ಯ ರೈಲ್ವೆ, ರಸ್ತೆ ಹಾಗೂ ವಿಮಾನ ಕೇಂದ್ರ.

ಇತಿಹಾಸ

[ಬದಲಾಯಿಸಿ]

ಪೋಲೆಂಡಿನ ಇತಿಹಾಸ 966 ರಿಂದ ಆರಂಭವಾಗುತ್ತದೆ. 16 ನೆಯ ಶತಮಾನದ ಮಧ್ಯದ ಸುಮಾರಿಗೆ ಪಿಯಾಸ್ಟ್ ಮನೆತನದ ದೊರೆಗಳು ವಿಸ್ಚುಲ ಮತ್ತು ಓಡರ್ ನದೀ ಕಣಿವೆಯ ಪೋಲ್ ಬಣಗಳನ್ನು ಒಂದುಗೂಡಿಸಿದರು. 966 ರಲ್ಲಿ 1 ನೆಯ ಮೈಷ್ಕಾ ಕ್ರೈಸ್ತ ಮತಕ್ಕೆ ಸೇರಿದ. ಅಂದಿನಿಂದ ಇದು ಕ್ರೈಸ್ತ ದೇಶವಾಯಿತು. 33 ವರ್ಷಗಳ ಅನಂತರ ಮಗ 1 ನೆಯ ಬಾಲೆಸ್ಲಾಫನ (ಆ. 992-1025) ಆಳ್ವಿಕೆಯ ಕಾಲದಲ್ಲಿ ರೋಮನ್ ಚಕ್ರವರ್ತಿ 3 ನೆಯ ಆಟೋಪೋಲಿಷ್ ಪರಮಾಧಿಕಾರವನ್ನು ಮಾನ್ಯ ಮಾಡಬೇಕಾಯಿತು. 15 ಮತ್ತು 16 ನೆಯ ಶತಮಾನಗಳು ಪೋಲೆಂಡಿನ ಸ್ವರ್ಣಯುಗ. ಆಗ ಅದು ಕಪ್ಪು ಸಮುದ್ರದಿಂದ ಬಾಲ್ಟಿಕ್ ಸಮುದ್ರದವರೆಗೂ ಹಬ್ಬಿತು. 17 ನೆಯ ಶತಮಾನದಲ್ಲಿ ದೇಶ ಬಲಹೀನವಾಗುತ್ತಾ ನಡೆಯಿತು. ರಷ್ಯನ್ ಪ್ರಷ್ಯನ್ ಮತ್ತು ಆಸ್ಟ್ರಿಯನ್ ಒಪ್ಪಂದದ ಫಲವಾಗಿ 1772 ರಲ್ಲೂ, 1793, 1795 ರಲ್ಲು ಪೋಲೆಂಡ್ ವಿಭಜನೆಯಾಗಿ ಅದರ ಪರಮಾಧಿಕಾರವೇ ಅಳಿದು ಹೋಯಿತು. 1795 ರಿಂದ ಸುಮಾರು 123 ವರ್ಷಗಳ ಕಾಲ ಅದರ ಅಸ್ತಿತ್ವವೇ ಇರಲಿಲ್ಲ. ಒಂದನೆಯ ಮಹಾಯುದ್ಧದವರೆಗೂ ಈ ಮೂರೂ ರಾಷ್ಟ್ರಗಳು ಪೋಲೆಂಡನ್ನು ಆಳಿದುವು. ಈ ನಡುವೆ 1830 ರಲ್ಲೂ 1863 ರಲ್ಲೂ ಪೋಲರು ಜಾರ್ ದೊರೆಗಳ ವಿರುದ್ಧ ದಂಗೆಯೆದ್ದಿದ್ದರು. ಒಂದನೆಯ ಮಹಾಯುದ್ಧದ ಅನಂತರ ಪೋಲೆಂಡ್ ಮತ್ತೆ ಸ್ವಾತಂತ್ರ್ಯ ಗಳಿಸಿತು. ಆದರೆ ಪಾಮಾಷಾ (ಪಾಮರೇನಿಯ), ಮಜೂರಿಯ ಮತ್ತು ಸೈಲೀಸಿಯ ಪ್ರಾಂತ್ಯಗಳು ಜರ್ಮನ್ನರ ಕೈಯಲ್ಲಿ ಉಳಿದುವು. ಗಡಾನ್ಸ್ಕ್ (ಡ್ಯಾನ್‍ಜಿಗ್) ಪ್ರದೇಶ ಅಂತರ ರಾಷ್ಟ್ರೀಯ ವಲಯವಾಯಿತು. ಜರ್ಮನಿಯಲ್ಲಿ ನಾಟ್ಸಿಗಳು ಪ್ರಾಬಲ್ಯಕ್ಕೆ ಬಂದ ಮೇಲೆ ಅದನ್ನು ತಿರುಗಿ ಆಕ್ರಮಿಸಿಕೊಂಡರು. 1939 ರ ಸೆಪ್ಟೆಂಬರ್ 1 ರಂದು ಜರ್ಮನಿಯೂ 17 ರಂದು ಸೋವಿಯತ್ ದೇಶವೂ ಪೋಲೆಂಡಿನ ಮೇಲೆ ಆಕ್ರಮಣ ನಡೆಸಿದುವು. ಸೋವಿಯತ್ ದೇಶ ಪೂರ್ವ ಪೋಲೆಂಡನ್ನೂ ಜರ್ಮನಿ ಉಳಿದ ಭಾಗವನ್ನೂ ವಶಪಡಿಸಿಕೊಂಡವು. ಜರ್ಮನಿ, ಸೋವಿಯತ್ ದೇಶದ ಮೇಲೆ ಆಕ್ರಮಣ ನಡೆಸಿದಾಗ ಇಡೀ ಪೋಲೆಂಡ್ ಜರ್ಮನ್ನರ ವಶವಾಯಿತು. 1943 ರಲ್ಲಿ ಜರ್ಮನ್ ಪಡೆಗಳು ವಾರ್ಸಾದ ಯಹೂದ್ಯರ ವಸತಿ ಪ್ರದೇಶವನ್ನು (ಗೆಟೊ) ಅದರ ನಿವಾಸಿಗಳೊಂದಿಗೆ ಪೂರ್ಣವಾಗಿ ನಾಶಗೊಳಿಸಿದವು. ದೇಶಭ್ರಷ್ಟ ಸರ್ಕಾರವೊಂದು ಮೊದಲಿಗೆ ಫ್ರಾನ್ಸಿನಲ್ಲೂ ಅನಂತರ ಇಂಗ್ಲೆಂಡಿನಲ್ಲೂ ಕಾರ್ಯನಿರತವಾಗಿತ್ತು. ಪೋಲಿಷ್ ಸೈನ್ಯದ ತುಕಡಿಗಳೂ ಭೂಗತ ಸಂಸ್ಥೆಗಳ ಹೋರಾಟ ಮುಂದುವರಿಸಿದುವು. ಯುದ್ಧದಿಂದ ದೇಶಕ್ಕೆ ಅಪಾರ ಹಾನಿಯಾಯಿತು. 1945 ರಲ್ಲಿ ಸೋವಿಯತ್ ಸೈನ್ಯ ಜರ್ಮನ್ ಆಕ್ರಮಣವನ್ನು ತೆರವು ಮಾಡಿದಾಗ ಪೋಲೆಂಡಿನಲ್ಲಿ ತಾತ್ಪೂರ್ತಿಕ ಸರ್ಕಾರ ಅಸ್ತಿತ್ವದಲ್ಲಿ ಬಂದಿತು. ಪೋಟ್ರ್ಸ್‍ಡ್ಯಾಮ್ (ಜರ್ಮನಿ) ಸಮ್ಮೇಳನದ ಅನಂತರ ಪೋಲೆಂಡ್ ಪೂರ್ವದ ಸ್ವಲ್ಪ ಭಾಗವನ್ನು ಸೋವಿಯತ್ ದೇಶಕ್ಕೆ ಕೊಟ್ಟಿತು. ಅದಕ್ಕೆ ಬದಲಾಗಿ ಓಡರ್‍ನೈಸ್ ರೇಖೆಯ ಪೂರ್ವಕ್ಕೆ ಜರ್ಮನಿಯ ವಶದಲ್ಲಿದ್ದ ಕೆಲವು ಪ್ರದೇಶಗಳು ಪೋಲೆಂಡಿಗೆ ಬಂದವು. 1947 ರ ಚುನಾವಣೆಗಳಲ್ಲಿ ಸಂಯುಕ್ತ ಕಾರ್ಮಿಕ ಪಕ್ಷ ಅಧಿಕಾರಕ್ಕೆ ಬಂತು.

ಆಡಳಿತ, ಸಮಾಜ ಕಲ್ಯಾಣ

[ಬದಲಾಯಿಸಿ]

ಸರ್ಕಾರ

[ಬದಲಾಯಿಸಿ]

1952 ರ ಸಂವಿಧಾನದ ಪ್ರಕಾರ ಪೋಲೆಂಡ್ ಜನತಾ ಗಣರಾಜ್ಯವಾಗಿದೆ. ಸೆಜ್ಮ್ (ಸಂಸತ್ತು) ಮತ್ತು ರಾಜ್ಯ ಪರಿಷತ್ತು ಆಡಳಿತದ ಪರಮೋಚ್ಚ ಅಂಗಗಳು. ಏಕಸದನದಿಂದ ಕೂಡಿದ 460 ಸದಸ್ಯರ ಸೆಜ್ಮ್‍ಗೆ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. 18 ವರ್ಷ ವಯಸ್ಸಿಗೆ ಮೇಲ್ಪಟ್ಟ ಎಲ್ಲರಿಗೂ ಮತ ನೀಡುವ ಅಧಿಕಾರವಿದೆ. ಸೆಜ್ಮ್‍ನ ಅಧಿವೇಶನಗಳು ಸಾಮಾನ್ಯವಾಗಿ ಅಲ್ಪಾವಧಿಯವು. ಇವುಗಳ ನಡುವೆ ವಿಧಾನಾಧಿಕಾರ ರಾಜ್ಯ ಮಂಡಲಿಯ ಕೈಯಲ್ಲಿರುತ್ತದೆ. ಮಂಡಲಿಯ ಸದಸ್ಯರನ್ನು ಸೆಜ್ಮ್‍ನ ಸದಸ್ಯರೊಳಗಿಂದ ಆರಿಸಲಾಗುತ್ತದೆ. ಇದರಲ್ಲಿ ಅಧ್ಯಕ್ಷ ಅವನ ನಾಲ್ವರು ಪ್ರತಿನಿಧಿಗಳು, ಕಾರ್ಯದರ್ಶಿ ಹಾಗೂ ಹನ್ನೊಂದು ಸದಸ್ಯರಿರುತ್ತಾರೆ. ಇದು ಪರರಾಷ್ಟ್ರಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತದೆ. ರಾಯಭಾರಿಗಳನ್ನು ನೇಮಿಸುವುದು, ಹಿಂದಕ್ಕೆ ಕರೆಯುವುದು, ಪರರಾಷ್ಟ್ರಗಳ ರಾಯಭಾರಿಗಳ ಪರಿಚಯ ಪತ್ರಗಳನ್ನು ಸ್ವೀಕರಿಸುವುದು, ಅಂತರ ರಾಷ್ಟ್ರೀಯ ಒಪ್ಪಂದಗಳನ್ನು ಘೋಷಿಸುವುದು ಮತ್ತು ಸ್ವೀಕರಿಸುವುದು, ಸೆಜ್ಮ್‍ಗೆ ಚುನಾವಣೆ ನಡೆಸುವುದು ಮತ್ತು ಅಧಿವೇಶನವನ್ನು ಕರೆಯುವುದು ಇದರ ಕೈಯಲ್ಲಿವೆ. ಕಾರ್ಯ ನಿರ್ವಾಹಕ ಅಧಿಕಾರ ಪ್ರಧಾನ ಮಂತ್ರಿ, ಉಪಪ್ರಧಾನ ಮಂತ್ರಿಗಳು ಮತ್ತು ಮಂತ್ರಿಗಳು ಇರುವ ಮಂಡಲದಲ್ಲಿ ನಿಹಿತವಾಗಿದೆ. ಇವರನ್ನು ಸೆಜ್ಮ್ ನೇಮಿಸುತ್ತದೆ. ಉಚ್ಚತಮ ಲೆಕ್ಕ ಪರಿಶೋಧನ ಕಚೇರಿ ಸರ್ಕಾರದಿಂದ ಸ್ವತಂತ್ರವಾಗಿರುತ್ತದೆ.

ಸ್ಥಳೀಯ ಸರ್ಕಾರ: ಕೇಂದ್ರಕ್ಕಿಂತ ಕೆಳಗೆ ಮೂರು ಹಂತಗಳಲ್ಲಿ ಜನತಾ ಮಂಡಲಿಗಳಿವೆ. ನಾಲ್ಕು ವರ್ಷಗಳಿಗೊಮ್ಮೆ ಸಂಸದೀಯ ಚುನಾವಣೆಯ ಸಮಯದಲ್ಲಿ ಇವಕ್ಕೂ ಚುನಾವಣೆ ನಡೆಯುತ್ತದೆ. ದೇಶವನ್ನು 22 ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ದೇಶದ ಐದು ಬೃಹತ್ ನಗರಗಳು ಸೇರಿವೆ. ಇವುಗಳ ಕೆಳಗೆ 391 ಗ್ರಾಮೀಣ ಮತ್ತು 74 ನಗರಕೌಂಟಿಗಳು, ಇವಕ್ಕೂ ಕೆಳಗೆ ಪಟ್ಟಣ ಮತ್ತು ಗ್ರಾಮೀಣ ಜಿಲ್ಲೆಗಳು ಇವೆ.

ನ್ಯಾಯ ವ್ಯವಸ್ಥೆ

[ಬದಲಾಯಿಸಿ]

ನ್ಯಾಯ ವ್ಯವಸ್ಥೆಯ ಮೇಲ್ವಿಚಾರಣೆಯ ಹೊಣೆ ನ್ಯಾಯ ಮಂತ್ರಾಲಯದ್ದು. ನ್ಯಾಯವಾದಿಗಳ ತರಬೇತು ಮತ್ತು ಆಚರಣೆಯ ಮೇಲ್ವಿಚಾರಣೆಯನ್ನೂ ನ್ಯಾಯಾಂಗ ಮಂತ್ರಾಲಯ ಮಾಡುತ್ತದೆ. ಸಾಮಾನ್ಯವಾಗಿ ಪ್ರಥಮ ಹಂತದಲ್ಲಿ ಪ್ರಕರಣಗಳ ವಿಚಾರಣೆಯನ್ನೂ ಕೌಂಟಿ ಅಥವಾ ಪ್ರಾಂತೀಯ ನ್ಯಾಯಾಲಯಗಳು ತೀರ್ಪುಗಳ ಮೇಲೆ ಅಪೀಲು ನ್ಯಾಯಾಲಯಗಳಾಗುತ್ತವೆ. ಪರಮೋಚ್ಚ ನ್ಯಾಯಾಲಯ ದೇಶದ ಅತ್ಯುಚ್ಚ ನ್ಯಾಯಿಕ ಅಂಗ. ಅದು ಮುಖ್ಯವಾಗಿ ಅಪೀಲು ನ್ಯಾಯಾಲಯದಂತೆ ಕೆಲಸ ಮಾಡುತ್ತದೆ. ವಿಶೇಷವಾಗಿ ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅದಕ್ಕೆ ಮೂಲ ಅಧಿಕಾರ ವ್ಯಾಪ್ತಿ ಇದೆ. ಅದರ ನ್ಯಾಯಾಧೀಶರನ್ನು ರಾಜ್ಯ ಮಂಡಲಿ ಐದು ವರ್ಷಗಳ ಅವಧಿಗೆ ಆರಿಸುತ್ತದೆ. ನ್ಯಾಯಾಧಿಕರಣಗಳು, ಬಾಲಕರ ನ್ಯಾಯಾಲಯಗಳು ಸಾಮಾಜಿಕ ವಿಮೆಗೆ ಸಂಬಂಧಿಸಿದ ಪ್ರಕರಣಗಳ ನ್ಯಾಯಾಲಯಗಳು ಬೇಡಲಾದ ವಿಶೇಷ ನ್ಯಾಯಾಲಯಗಳೂ ಇವೆ.

ಆರೋಗ್ಯ, ಕಲ್ಯಾಣ, ಕಲೆ, ಸಂಸ್ಕøತಿ.

[ಬದಲಾಯಿಸಿ]

ಆರೋಗ್ಯ

[ಬದಲಾಯಿಸಿ]

ಆರೋಗ್ಯ ವ್ಯವಸ್ಥೆಯ ಆಡಳಿತ ಸಾರ್ವಜನಿಕ ಆರೋಗ್ಯ ಮಂತ್ರಾಲಯದ ಕೈಯಲ್ಲಿದೆ. ಅದು ಅಧೀನ ನಿಯೋಗಗಳಿಗೆ ಸಿಬ್ಬಂದಿಯನ್ನು ನೇಮಿಸುತ್ತದೆ ಮತ್ತು ಕಟ್ಟಡ ಹಾಗೂ ಸಾಮಗ್ರಿಗಳನ್ನು ಒದಗಿಸುತ್ತದೆ.

ಸಮಾಜ ಕಲ್ಯಾಣ

[ಬದಲಾಯಿಸಿ]

1960 ರ ಅಧಿನಿಯಮದ ಅಡಿಯಲ್ಲಿ ಕಾರ್ಮಿಕರ ಹಾಗೂ ವೇತನಗಳ ಸಮಿತಿಯನ್ನೂ ಸಾಮಾಜಿಕ ವಿಮಾ ಸಂಸ್ಥೆಯನ್ನೂ ಸ್ಥಾಪಿಸಲಾಗಿದೆ. ಮಂತ್ರಿ ಮಂಡಲಿಯ ಅಧಿಕಾರ ವ್ಯಾಪ್ತಿಯಲ್ಲಿರುವ ಈ ಸಂಸ್ಥೆ ಪ್ರಾಂತೀಯ ಜನತಾ ಮಂಡಲಿಗಳ ಮೇಲ್ವಿಚಾರಣೆಗೆ ಒಳಪಟ್ಟಿರುವ ಶಾಖಾ ಕಚೇರಿಗಳ ಮೂಲಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ವೃದ್ಧರಿಗೂ, ದುರ್ಬಲರಿಗೂ ಮೃತರ ಆಶ್ರಿತರಿಗೂ ವೇತನಗಳನ್ನೂ, ನಿರುದ್ಯೋಗ ಪರಿಹಾರವನ್ನೂ ಅನಾರೋಗ್ಯ ಮತ್ತು ಹೆರಿಗೆ ಭತ್ಯಗಳನ್ನೂ ಕೊಡಲಾಗುತ್ತದೆ.

ವಾಚನಾಲಯ ಮತ್ತು ವಸ್ತು ಸಂಗ್ರಹಾಲಯಗಳು: ವಾರ್ಸಾದಲ್ಲಿ 1928 ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ವಾಚನಾಲಯ ದೇಶದಲ್ಲಿ ಅತ್ಯಂತ ದೊಡ್ಡ ವಾಚನಾಲಯ. ಕ್ರಾಕೋದಲ್ಲಿ 1364 ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದ ವಾಚನಾಲಯವೂ ವ್ರಾಕ್ಲಾದ ವಾಚನಾಲಯವೂ ಪ್ರಸಿದ್ಧವಾಗಿವೆ. 1968 ರ ಅಂತ್ಯದಲ್ಲಿ 8,451 ಸಾರ್ವಜನಿಕ ವಾಚನಾಲಯಗಳೂ 31,000 ಶಾಲಾ ಮತ್ತು ವಿಶ್ವವಿದ್ಯಾಲಯ ವಾಚನಾಲಯಗಳೂ ಅಲ್ಲದೆ ಕಾರ್ಮಿಕ ಸಂಘಗಳು ನಡೆಸುತ್ತಿದ್ದ ಹಾಗೂ ವಿಜ್ಞಾನ ಸಂಸ್ಥೆಗಳಿಗೆ ವಾಚನಾಲಯಗಳೂ ಇದ್ದುವು.

1968 ರ ಅಂತ್ಯದಲ್ಲಿದ್ದ 311 ವಸ್ತು ಸಂಗ್ರಹಾಲಯಗಳಲ್ಲಿ ಗಮನಾರ್ಹ ಕಲಾವಸ್ತುಗಳಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಅತ್ಯಂತ ಮಹತ್ವದ್ದು. ತೀರ ಅಪೂರ್ವ ಕಲಾವಸ್ತುಗಳಿರುವ ಕ್ರಾಕೋರ ರಾಷ್ಟ್ರೀಯ ವಸ್ತು ಸಂಗ್ರಹಾಲಯವೂ ಸಂಗೀತ ಸಾಧನಗಳು ಹೆಚ್ಚಾಗಿರುವ ಪೋಸ್ನಾನ್ ವಸ್ತು ಸಂಗ್ರಹಾಲಯವೂ ಪ್ರಸಿದ್ಧವಾಗಿವೆ. ರಾಜಧಾನಿಯಲ್ಲಿರುವ ಪ್ರಾಣಿ ಮತ್ತು ಸಸ್ಯ ಉದ್ಯಾನಗಳು ಆಕರ್ಷಕವಾಗಿವೆ.

ಸಂಸ್ಕೃತಿ

[ಬದಲಾಯಿಸಿ]

ಪೋಲೆಂಡಿನದು ಯೂರೋಪಿನ ಮಹತ್ತರ ಸಂಸ್ಕೃತಿಗಳಲ್ಲೊಂದು. ಪೋಲೆಂಡಿನ ಸ್ವಾತಂತ್ರ್ಯ ಒಂದೆರಡು ಸಲ ನಷ್ಟವಾಗಿದ್ದರೂ ಅದು ತನ್ನ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆ. ಅದರ ಮೂಲ ಸ್ಲಾವಿಕ್ ಸಂಪ್ರದಾಯದ ಮೇಲೆ ರೋಮನ್ ಕ್ಯಾತೊಲಿಕ್ ಮತ್ತು ಪಾಶ್ಚಾತ್ಯ ಪ್ರಭಾವ ಮುಖ್ಯವಾಗಿ ಇಟಲಿ ಮತ್ತು ಫ್ರಾನ್ಸುಗಳ ಪ್ರಭಾವ, ಅಧಿಕವಾಗಿದೆ. ಕಲೆ: ಪೋಲೆಂಡಿನ ಕಲೆಗಳ ಮೇಲೆ ಹೊರಗಿನ, ಅದರಲ್ಲೂ ವಿಶೇಷವಾಗಿ ಯೂರೋಪಿನ ಪ್ರಭಾವ ಬಿದ್ದಿದೆಯಾದರೂ ಅವುಗಳಲ್ಲಿ ತೀವ್ರವಾದ ರಾಷ್ಟ್ರೀಯ ಮೂಲಾಂಶವನ್ನು ಗುರುತಿಸಬಹುದು. ಕ್ರಾಕೋದಲ್ಲಿರುವ ಸೇಂಟ್ ಮರೀಯ ಗಾತಿಕ್ ಚರ್ಚಿನ ಶೋಭಾಯಮಾನ ಮತ್ತು ವರ್ಣಭರಿತ ಒಳಭಾಗ ಇಲ್ಲಿಯ ಪ್ರಾಚೀನ ಕಲೆಗೆ ನಿದರ್ಶನ. ಮಧ್ಯಯುಗದ ಚರ್ಚುಗಳ ವರ್ಣಚಿತ್ರಣದ ಮೇಲೆ ಬಿಜಾಂಟೀನ್ ಪ್ರಭಾವ ವಿಶೇಷವಾಗಿತ್ತು. ಅದು ಜಾನಪದ ಕಲೆಯ ಮೇಲೆ ಶಾಶ್ವತವಾದ ಮುದ್ರೆಯನ್ನೊತ್ತಿತ್ತು. 16 ನೆಯ ಶತಮಾನದಿಂದ ಶ್ರೀಮಂತ ಪಾದ್ರಿಗಳು ಮತ್ತು ಕುಲೀನರು ತಮ್ಮ ಚರ್ಚು, ಅರಮನೆ ಮತ್ತು ಭವನಗಳಲ್ಲಿ ಪಾಶ್ಚಾತ್ಯ ಶೈಲಿಗಳನ್ನು ಬಳಸಿಕೊಳ್ಳತೊಡಗಿದರು. 18 ನೆಯ ಶತಮಾನದಲ್ಲಿ ವಿದೇಶಿ ವರ್ಣಚಿತ್ರಕಾರರಿಗೆ ಪೋಲೆಂಡಿನಲ್ಲಿ ವಿಶೇಷ ಪ್ರೋತ್ಸಾಹ ದೊರೆಯಿತು. 10 ನೆಯ ಶತಮಾನದಲ್ಲಿ ದೇಶ ಸ್ವಾತಂತ್ರ್ಯವನ್ನು ಕಳೆದುಕೊಂಡಾಗ ಕಲೆಯಲ್ಲಿ ರಾಷ್ಟ್ರೀಯತೆ ರೂಪುಗೊಳ್ಳತೊಡಗಿತ್ತು. ಎರಡನೆಯ ಮಹಾಯುದ್ಧದಿಂದ ಅಪಾರ ನಷ್ಟ, ಅದನ್ನು ಹಿಂಬಾಲಿಸಿದ ಕೈಗಾರಿಕಾ ಕ್ರಾಂತಿ ಇವು ವಾಸ್ತು ಶಿಲ್ಪದಲ್ಲಿ ಹೊಸ ರೂಪ ಮತ್ತು ವಿಚಾರಗಳಿಗೆ ಎಡೆ ಮಾಡಿಕೊಟ್ಟಿವೆ. ಜಾನಪದ ಕಲೆಯನ್ನೂ ಕಡೆಗಣಿಸಿಲ್ಲ. ಪೋಲೆಂಡಿನ ಸೊಗಸಾದ ಅಲಂಕಾರಭರಿತ ಕುಂಭಕಲೆ ಮತ್ತು ಬಟ್ಟೆಗಳು, ಅಲಂಕಾರಿಕ ಮತ್ತು ಪ್ರಾಚೀನ ವರ್ಣಚಿತ್ರಕಲೆ ಮತ್ತು ಶಿಲ್ಪಕಲೆ ಪೋಲಿಷ್ ಸಂಸ್ಕøತಿಯ ವೈಶಿಷ್ಟ್ಯಗಳಾಗಿವೆ. ಇವಕ್ಕೆ ಸಂಸ್ಕøತಿ ಮತ್ತು ಕಲೆಗಳ ಇಲಾಖೆ ಪ್ರೋತ್ಸಾಹ ನೀಡುತ್ತಿದೆ.

ಶಿಕ್ಷಣ ಪದ್ಧತಿ

[ಬದಲಾಯಿಸಿ]

ಪೋಲೆಂಡಿನ ಶಿಕ್ಷಣ ಆರೇಳು ಶತಮಾನಗಳಷ್ಟು ಪ್ರಾಚೀನ ಇತಿಹಾಸವನ್ನು ಹೊಂದಿದೆ. ಮಧ್ಯಯುಗದಲ್ಲಿ ಚರ್ಚ್ ದೇಶಾದ್ಯಂತ ಶಾಲೆಗಳನ್ನು ಆರಂಭಿಸಿ ಸಾರ್ವತ್ರಿಕವಾಗಿ ಶಿಕ್ಷಣಕ್ಕೆ ತಳಹದಿ ಹಾಕಿತು. ಅಲ್ಲದೆ ಕ್ರಾಕೋನಲ್ಲಿ ವಿಶ್ವವಿದ್ಯಾಲಯವೊಂದನ್ನು ಆರಂಭಿಸಿ ಉನ್ನತ ಶಿಕ್ಷಣಕ್ಕೂ ವ್ಯವಸ್ಥೆ ಮಾಡಿತು. ಅಲ್ಲಿ ಗಣಿತ ಮತ್ತು ಖಗೋಳ ವಿಜ್ಞಾನದಲ್ಲಿ ಆಳವಾದ ಶಿಕ್ಷಣವೀಯುವ ವ್ಯವಸ್ಥೆಯಿತ್ತು. ಪ್ರಸಿದ್ಧ ಖಗೋಳ ವಿಜ್ಞಾನಿ ಕೋಪರ್ನಿಕಸ್ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನವೋದಯ ಕಾಲದಲ್ಲಿ ಶಿಕ್ಷಣ ವಿಸ್ತರಿಸುತ್ತಾ ಬಂತು. ದೊಡ್ಡ ಪಟ್ಟಣಗಳಲ್ಲಿ ಶಿಕ್ಷಣ ಸೌಲಭ್ಯ ಹೆಚ್ಚತೊಡಗಿತು. ಆದರೆ, ಎಲ್ಲವೂ ಚರ್ಚಿನ ಆಡಳಿತದಲ್ಲೇ ನಡೆಯುತ್ತಿತ್ತು.

ಹದಿನೆಂಟನೆಯ ಶತಮಾನದಲ್ಲಿ ಶಿಕ್ಷಣ ಮಂಡಲಿ ಎಂಬ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ಅದು ಚರ್ಚಿನ ಹಿಡಿತದಿಂದ ಶಿಕ್ಷಣವನ್ನು ಬಿಡುಗಡೆ ಮಾಡಿ ಪಾದ್ರಿಗಳಿಗೆ ಬದಲಾಗಿ ತರಬೇತು ಪಡೆದ ಶಿಕ್ಷಕರನ್ನು ನೇಮಿಸುವ ಕಾರ್ಯ ಆರಂಭಿಸಿತು. ಅಧ್ಯಾಪಕರ ಶಿಕ್ಷಣಕ್ಕಾಗಿ ಕಾಲೇಜುಗಳನ್ನು ಆರಂಭಿಸಿದ್ದಲ್ಲದೆ ಶಾಲಾಕಾಲೇಜುಗಳ ಪಠ್ಯಕ್ರಮವನ್ನು ನವೀಕರಿಸಲಾಯಿತು. ಪೋಲೆಂಡು ಹದಿನೆಂಟನೆಯ ಶತಮಾನದ ಉತ್ತರಾರ್ಧದಿಂದ ಹತ್ತೊಂಬತ್ತನೆಯ ಶತಮಾನದ ಆರಂಭದವರೆಗೆ ರಷ್ಯ, ಪ್ರಷ್ಯ, ಆಸ್ಟ್ರಿಯ ದೇಶಗಳ ಭಾಗವಾಗಿದ್ದುದರಿಂದ ಆಗ ಪೋಲಿಷ್ ಸಂಸ್ಕøತಿ ಮತ್ತು ಭಾಷೆಯ ಪ್ರಚಾರಕ್ಕೆ ಅಡ್ಡಿಯಾಗಿತ್ತು. ಅನಂತರ 1918 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತಾಗಿ ಮತ್ತೆ ಶಿಕ್ಷಣ ವ್ಯವಸ್ಥೆಯನ್ನು ನವೀಕರಿಸಬೇಕಾಯಿತು. ಅಧ್ಯಾಪಕರ ಕೊರತೆ, ಕಟ್ಟಡಗಳ ಅಭಾವ, ರಾಜಕೀಯ ಹಾಗೂ ಸಾಮಾಜಿಕ ಕ್ಷೋಭೆ, ಇವನ್ನೆಲ್ಲ ಶಿಕ್ಷಣ ಎದುರಿಸಬೇಕಾಯಿತು. ಈ ಕಾಲದಲ್ಲೇ 7 ರಿಂದ 14 ವಯಸ್ಸಿನ ವರೆಗಿನ ಕಡ್ಡಾಯ ಶಿಕ್ಷಣ ಯೋಜನೆ ಆಚರಣೆಗೆ ಬಂದದ್ದು. 1932 ರ ಸುಧಾರಣೆಯಿಂದ ರಾಷ್ಟ್ರೀಯ ಶಿಕ್ಷಣ ಪದ್ಧತಿಗೆ ಅನುವು ದೊರೆಯಿತು. 1938 ರ ಸುಧಾರಣೆಗಳು ಶಿಕ್ಷಣಕ್ಕೆ ಏಕರೂಪವನ್ನು ತರಲು ಯತ್ನಿಸಿತು. ಆದರೆ, ಮರುವರ್ಷವೇ ಯುದ್ಧ ಆರಂಭವಾರಿ ರಾಷ್ಟ್ರ ನಾಟ್ಸೀ ಒಡೆತನಕ್ಕೆ ಒಳಗಾಗಿ ಶಿಕ್ಷಣ ಕ್ಷೇತ್ರ ಕರಾಳ ಸ್ಥಿತಿಯನ್ನು ಕಂಡಿತು. ಸಹಸ್ರಾರು ಅಧ್ಯಾಪಕರು ಸತ್ತರು. ಶಾಲಾ ಕಟ್ಟಡಗಳು ನಾಶವಾದವು. 1944 ರಲ್ಲಿ ಯುದ್ಧ ನಿಂತು ಮತ್ತೆ ಎಲ್ಲವೂ ಪುನರ್ ವ್ಯವಸ್ಥೆಗೊಳ್ಳಬೇಕಾಯಿತು. ಲೋಕಸತ್ತಾತ್ಮಕ ದೃಷ್ಟಿಯಲ್ಲಿ ಶಿಕ್ಷಣದ ಸರ್ವಮುಖಗಳೂ ಪುನವ್ರ್ಯವಸ್ಥೆಗೊಂಡು ಪೋಲಿಷ್ ಭಾಷೆ ಮತ್ತು ಸಂಸ್ಕøತಿಗಳ ವ್ಯಾಸಂಗವೂ ಪುನರುಜ್ಜೀವನವೂ ಆರಂಭವಾದುವು.

ಪೋಲೆಂಡಿನ ಎಲ್ಲ ಜನರಿಗೂ ಶಿಕ್ಷಣ ಪಡೆಯುವ ಹಕ್ಕು ಲಭಿಸಿತು. ಅದಕ್ಕಾಗಿ ಸರ್ಕಾರ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತಂದು ತಕ್ಕಷ್ಟು ಪ್ರಾಥಮಿಕ ಶಾಲೆಗಳನ್ನೂ ಪ್ರೌಢ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಆರಂಭಿಸಿದ್ದಲ್ಲದೆ ವೃತ್ತಿ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿತು. 1961 ರ ಶಿಕ್ಷಣ ಶಾಸನದ ಪ್ರಕಾರ 7 ರಿಂದ ಆರಂಭವಾಗಿ 8 ನೆಯ ತರಗತಿಯವರೆಗೆ ಹಾಜರಾತಿ ಕಡ್ಡಾಯವಾಯಿತು.

ಶಿಕ್ಷಣ ನಾಲ್ಕು ಅಂತಸ್ತುಗಳಲ್ಲಿ ವ್ಯವಸ್ಥೆಗೊಂಡಿದೆ. 4 ವರ್ಷದ ಕಿಂಡರ್‍ಗಾರ್ಟನ್, 8 ವರ್ಷದ ಪ್ರಾಥಮಿಕ ಶಿಕ್ಷಣ, 4 ವರ್ಷದ ಪ್ರೌಢ ಶಿಕ್ಷಣ ಮತ್ತು 4 ಅಥವಾ 6 ವರ್ಷದ ಕಾಲೇಜು ಅಥವಾ ಉನ್ನತ ಶಿಕ್ಷಣ.

ಮೂರನೆಯ ವಯಸ್ಸಿನಲ್ಲಿ ಆರಂಭವಾಗುವ ಕಿಂಡರ್‍ಗಾರ್ಟನ್ ಶಿಕ್ಷಣ 6 ನೆಯ ವಯಸ್ಸಿನವರೆಗೆ ವಿಸ್ತರಿಸಿದೆ. ನಗರದ ಕಿಂಡರ್‍ಗಾರ್ಟನ್‍ಗಳಲ್ಲಿ ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಮುಖ್ಯವಾಗಿ ಕಾರ್ಖಾನೆ ಹಾಗೂ ಕಾರ್ಯಾಲಯಗಳಲ್ಲಿ ಕೆಲಸಕ್ಕೆ ಹೋಗುವ ತಾಯಂದಿರ ಮಕ್ಕಳ ರಕ್ಷಣೆಗಾಗಿ ಇಂಥವು ಏರ್ಪಟ್ಟಿವೆ.

ನಾಲ್ಕು ವರ್ಷದ ಕಿರಿಯ ಮತ್ತು ನಾಲ್ಕು ವರ್ಷದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಇದೆ. ಸಣ್ಣ ಗ್ರಾಮಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು ಮಾತ್ರ ಇರುತ್ತವೆ. ಅಲ್ಲಿ ಶಿಕ್ಷಣ ಮುಗಿಸಿದವರು ಹಲವು ಕೇಂದ್ರಗಳಲ್ಲಿ ಏರ್ಪಟ್ಟಿರುವ ಹಿರಿಯ ಪಾಠಶಾಲೆಗಳಲ್ಲಿ ಶಿಕ್ಷಣ ಮುಂದುವರಿಸುವರು. ಇವನ್ನು ಸಮುದಾಯ ಶಾಲೆಗಳು (ಕಲೆಕ್ಟೀವ್ ಸ್ಕೂಲ್ಸ್) ಎಂದು ಕರೆಯುವರು. ಎರಡು ಅಂತಸ್ತುಗಳಲ್ಲಿ ಏರ್ಪಟ್ಟಿರುವ ಪ್ರೌಢಶಿಕ್ಷಣಕ್ಕೆ ಪ್ರಾಥಮಿಕ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು. 4 ವರ್ಷದ ಲೈಸಿಯಮ್ ಎಂಬ ಪ್ರೌಢ ಶಿಕ್ಷಣದ ಅಂತ್ಯದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಉನ್ನು ಪ್ರೌಢಶಾಲೆಗೆ (ಹೈಯರ್ ಸ್ಕೂಲ್) ಸೇರುವರು. ಅಲ್ಲಿಗೆ ಸೇರಲು ಅವಕಾಶವಿಲ್ಲದವರು ವೃತ್ತಿ ಶಿಕ್ಷಣದ ತಾಂತ್ರಿಕ ಪ್ರೌಢಶಾಲೆಗೆ ಸೇರುವರು. ಅಲ್ಲಿ ಯಂತ್ರ ವಿಜ್ಞಾನ, ಸಂಸ್ಥೆಗಳ ಕಾರ್ಯ ನಿರ್ವಹಣೆ ಮುಂತಾದ ವೃತ್ತಿಗಳಲ್ಲಿ ಶಿಕ್ಷಣ ಪಡೆಯುವರು. ಪ್ರಾಥಮಿಕ ಶಾಲೆಯನ್ನು ಮುಗಿಸಿದವರೂ ನೇರವಾಗಿ ಇಲ್ಲಿಗೆ ಸೇರಿ ಶಿಕ್ಷಣ ಪಡೆದು ಅನಂತರ ಬೇಕಾದರೆ ಉನ್ನತ ಪ್ರೌಢಶಾಲೆಗೆ ಪ್ರವೇಶ ಪಡೆಯುವ ಅವಕಾಶವುಂಟು. ಅವರಿಗೆ ಅಲ್ಲಿ 4-5 ವರ್ಷಗಳ ಕಾಲ ಶಿಕ್ಷಣವೀಯಲಾಗುವುದು. ತಾಂತ್ರಿಕ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದವರಿಗೆ ಟೆಕ್ನೀಷಿಯನ್ ಎಂಬ ಪದವಿ ಲಭಿಸಿ ಅವರು ಸಂಬಂಧಪಟ್ಟ ಉದ್ಯೋಗಗಳಲ್ಲಿ ತೊಡಗುವರು. ಕಿರಿಯ ತಾಂತ್ರಿಕ ಪ್ರೌಢಶಾಲೆಗಳೂ ಇವೆ. ಅಲ್ಲಿ ಎರಡು ವರ್ಷದ ಶಿಕ್ಷಣ ಪಡೆದವರು ವೃತ್ತಿ ನಿರತರಾಗುವರು. ಗ್ರಾಮಾಂತರ ಪ್ರದೇಶದಲ್ಲಿನ ಅಂಥ ಶಾಲೆಗಳು ಎರಡು ವರ್ಷದ ಕೃಷಿ ಶಿಕ್ಷಣವೀಯುವುವು.

ಪೋಲೆಂಡಿನಲ್ಲಿ ಎರಡನೆಯ ಮಹಾಯುದ್ಧದ ಅನಂತರ ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಗಮನ ಕೊಡಲಾಗಿದೆ. ಆ ಮೂಲಕ ರಾಷ್ಟ್ರದ ನಿಸರ್ಗ ಸಂಪತ್ತನ್ನು ಆರ್ಥಿಕಾಭಿವೃದ್ಧಿ ಸಾಧನೆಗೆ ಬಳಸಿಕೊಳ್ಳಲು ಅವಕಾಶವಾಗಿದೆ. ಅಲ್ಲಿ ಈಗ 1980 ಯುದ್ಧಪೂರ್ವದಲ್ಲಿದ್ದುದ್ದಕ್ಕಿಂತ ಸೇ. 100 ರಷ್ಟು ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ತಾಂತ್ರಿಕ ಪ್ರೌಢಶಾಲೆಗಳ ಕೊನೆಯ ತರಗತಿಯಲ್ಲಿ ಯಂತ್ರ ವಿಜ್ಞಾನ, ವಿದ್ಯುತ್ತು, ಔದ್ಯೋಗಿಕ ಮಾಪನಶಾಸ್ತ್ರ, ಸ್ವತಶ್ಚಲಿ ವಿಜ್ಞಾನ, ಗಣಿವಿದ್ಯೆ, ಕಟ್ಟಡ ನಿರ್ಮಾಣ, ಹಡಗು ಕಟ್ಟುವಿಕೆ, ರಸಾಯನ ಶಾಸ್ತ್ರ ಮುಂತಾದವುಗಳಲ್ಲಿ ವಿಶಿಷ್ಟ ಶಿಕ್ಷಣವೀಯುವ ವ್ಯವಸ್ಥೆಯುಂಟು. ಇದರ ಫಲವಾಗಿ ರಾಷ್ಟ್ರದಲ್ಲಿ ಆಯಾ ಉದ್ಯೋಗಗಳು ಅಧಿಕವಾಗಿ ಬೆಳೆಯುವಾವಕಾಶವಾಗಿದೆ. ಗ್ರಾಮಾಂತರ ಪ್ರದೇಶದ ತಾಂತ್ರಿಕ ಪ್ರೌಢಶಾಲೆಗಳು ರಾಷ್ಟ್ರದ ಕೃಷಿಕ್ಷೇತ್ರದಲ್ಲಿ ಅಗಾಧವಾದ ಪ್ರಗತಿ ಸಾಧಿಸಲು ನೆರವಾಗುತ್ತಿವೆ.

ಉನ್ನತ ಶಿಕ್ಷಣ ಸಾಂಸ್ಕøತಿಕ ಮತ್ತು ಟೆಕ್ನಲಾಜಿಕಲ್ ವಿಶ್ವವಿದ್ಯಾಲಯಗಳಲ್ಲೂ ವೈದ್ಯಕೀಯ ಕಾಲೇಜುಗಳಲ್ಲೂ ಕಲಾಶಾಸ್ತ್ರ, ವಿಜ್ಞಾನ, ಶಿಕ್ಷಣ ಶಾಸ್ತ್ರ, ಅರ್ಥಶಾಸ್ತ್ರ, ಕೃಷಿ, ಎಂಜಿನಿಯರಿಂಗ್, ದೈಹಿಕ ಶಿಕ್ಷಣ - ಈ ಕಾಲೇಜುಗಳಲ್ಲೂ ಏರ್ಪಟ್ಟಿದೆ.

ದೇಶದಲ್ಲಿ ಒಟ್ಟು 9 ವಿಶ್ವವಿದ್ಯಾಲಯಗಳಿವೆ. ಕ್ರಾಕೌ ನಗರದ ಜಾಗಿಲೋನಿಯನ್ ವಿಶ್ವವಿದ್ಯಾಲಯ 1364 ರಲ್ಲಿ ಆರಂಭವಾದ ಬಹು ಪ್ರಾಚೀನ ವಿದ್ಯಾಸಂಸ್ಥೆ. ವಾರ್ಸಾ ಪೋಸ್ನಾನ್ ಮತ್ತು ರಾಕ್ಲಾ ವಿಶ್ವವಿದ್ಯಾಲಯಗಳು ವಿಜ್ಞಾನ ಶಾಸ್ತ್ರದ ಶಿಕ್ಷಣಕ್ಕೆ ಹೆಸರಾದವು. ಲೂಬ್ಲಿನ್ ವಿಶ್ವವಿದ್ಯಾಲಯ ಒಂದು ಖಾಸಗಿ (ಕ್ಯಾತೊಲಿಕ್) ವಿಶ್ವವಿದ್ಯಾಲಯ. ಇಲ್ಲಿನ ವಿಶ್ವವಿದ್ಯಾಲಯಗಳ ಶಿಕ್ಷಣ ಐದು ವರ್ಷಗಳದ್ದಾಗಿದ್ದು ಅದನ್ನು ಮುಗಿಸಿದವರು ಮಾಸ್ಟರ್ ಪದವಿ ಪಡೆಯುತ್ತಾರೆ. ಇರುವ ಹತ್ತು ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ 51/2 ವರ್ಷದ ಶಿಕ್ಷಣ ವ್ಯವಸ್ಥೆಯಿದೆ. ಅಲ್ಲಿನ ಶಿಕ್ಷಣ ಮುಗಿಸಿದವರು ಕಮಿಷನ್ಡ್ ಎಂಜಿನಿಯರ್ ಎಂಬ ಪದವಿ ಪಡೆಯುತ್ತಾರೆ. ಇವುಗಳ ಜೊತೆಗೆ 7 ಎಂಜಿನಿಯರಿಂಗ್ ಕಾಲೇಜುಗಳಿದ್ದು ಅಲ್ಲಿ ಪ್ರಯೋಗ ಕಾರ್ಯದಲ್ಲಿ ತರಪೇತು ನೀಡಲಾಗುತ್ತಿದೆ. 1966 ರಲ್ಲಿ ಟಿ.ವಿ. ಟೆಕ್ನಿಕಲ್ ವಿಶ್ವವಿದ್ಯಾಲಯವೆಂಬ ಹೊಸ ಸಂಸ್ಥೆ ಆರಂಭವಾಗಿದೆ. ಅಲ್ಲಿ ದೂರದರ್ಶನ (ಟಿ.ವಿ.) ವಿಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣವೀಯಲಾಗುತ್ತಿದೆ.

ಕೃಷಿ ಕಾಲೇಜುಗಳಲ್ಲಿ 4 ಅಥವಾ 5 ವರ್ಷಗಳ ಮಾಸ್ಟರ್ ಪದವಿ ಶಿಕ್ಷಣ ವ್ಯವಸ್ಥೆ ಇದೆ. ಅಧ್ಯಾಪಕರ ಶಿಕ್ಷಣ ಎರಡು ಅಂತಸ್ತುಗಳಲ್ಲಿ ಏರ್ಪಟ್ಟಿದೆ. ದೇಶದಲ್ಲಿರುವ ಶಿಕ್ಷಣ ಶಾಸ್ತ್ರದ ಕಾಲೇಜುಗಳಲ್ಲಿ ಮಾಸ್ಟರ್ ಪದವಿಗೆ ಶಿಕ್ಷಣವೀಯಲಾಗುತ್ತಿದೆ. ಎರಡು ವರ್ಷದ ಅಧ್ಯಾಪಕರ ಕಾಲೇಜುಗಳಲ್ಲಿ (ಟೂ ಇಯರ್ ಟೀಚರ್ಸ್ ಕಾಲೇಜ್) ಪ್ರಾಥಮಿಕ ಅಧ್ಯಾಪಕ ವೃತ್ತಿ ಶಿಕ್ಷಣವೀಯಲಾಗುತ್ತಿದೆ. ವೈದ್ಯಶಾಸ್ತ್ರ ಮತ್ತು ಔಷಧಿ ನಿರ್ಮಾಣ ಶಾಸ್ತ್ರದಲ್ಲಿ ಮೆಡಿಕಲ್ ಅಕಾಡೆಮಿಗಳು 5 ವರ್ಷದ ಶಿಕ್ಷಣವೀಯುತ್ತವೆ. ಸಂಗೀತ, ನವ್ಯಕಲೆ (ಪ್ಲ್ಯಾಸ್ಟಿಕ್ ಆಟ್ರ್ಸ್) ನಾಟಕ ಮತ್ತು ಚಲನಚಿತ್ತಕಲೆ ಮುಂತಾದ ಲಲಿತಕಲೆಗಳ ಅಧ್ಯಾಪಕರಿಗೆ ಪ್ರಶಿಕ್ಷಣವೀಯಲು ಉನ್ನತ ವಿದ್ಯಾಲಯಗಳಿವೆ. ದೈಹಿಕ ಶಿಕ್ಷಣದ ಕಾಲೇಜುಗಳಲ್ಲಿ ಅಧ್ಯಾಪಕರ ದೈಹಿಕ ಪ್ರಶಿಕ್ಷಣದ ವ್ಯವಸ್ಥೆಯಿದೆ.

ಪ್ರಾಥಮಿಕ ಶಾಲೆ, ಮತ್ತು ವೃತ್ತಿ ಪ್ರೌಢಶಾಲೆ, ಉನ್ನತ ವಿದ್ಯಾಲಯ (ಹೈಯರ್ ಸ್ಕೂಲ್) - ಈ ಹಂತಗಳ ಶಿಕ್ಷಣ ಪೂರ್ಣವಾಗಿ ಕೇಂದ್ರ ವಿದ್ಯಾ ಸಚಿವಾಲಯದ ಆಡಳಿತಕ್ಕೆ ಸೇರಿದೆ. ಆದರೆ, ಕೆಲವು ವಿಶಿಷ್ಟ ವೃತ್ತಿ ವಿದ್ಯಾಲಯ ತಾಂತ್ರಿಕ ಸಚಿವಾಲಯಕ್ಕೂ ದೈಹಿಕ ಶಿಕ್ಷಣದ ಆಡಳಿತ ಆರೋಗ್ಯ ಅಥವಾ ದೈಹಿಕ ಶಿಕ್ಷಣ ಮಂಡಲಿಗಳಿಗೂ ಸೇರಿವೆ. ಶಿಕ್ಷಣ ಸಚಿವಾಲಯ ತನಗೆ ಸೇರಿದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಣಕಾಸು, ಪಠ್ಯಕ್ರಮ, ಅಧ್ಯಾಪಕರ ತರಪೇತಿ ಮತ್ತು ನೇಮಕ, ಕಟ್ಟಡ ನಿರ್ಮಾಣ, ಈ ಅಂಶಗಳನ್ನು ನೋಡಿಕೊಳ್ಳುತ್ತದೆ.

ಪೋಲೆಂಡಿನ 19 ಆಡಳಿತದ ವಿಭಾಗಗಳನ್ನನುಸರಿಸಿ ಶಿಕ್ಷಣ ಕ್ಷೇತ್ರವನ್ನು 19 ವಿಭಾಗಗಳನ್ನಾಗಿ ಮಾಡಲಾಗಿದೆ. ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ಶಾಲಾ ಇನ್ಸ್‍ಪೆಕ್ಟರ್ ಇರುತ್ತಾನೆ. ಆತ ಶಾಲೆಗಳ ಕಟ್ಟಡ ನಿರ್ಮಾಣ, ಆಡಳಿತ, ಅಧ್ಯಾಪಕರ ಹಾಗೂ ಉಪಕರಣಾದಿಗಳ ವೆಚ್ಚ ಮುಂತಾದವನ್ನು ನಿರ್ವಹಿಸುತ್ತಾನೆ. ಅಧ್ಯಾಪಕರ ಮತ್ತು ಶಾಲಾ ಮುಖ್ಯರ ನೇಮಕವನ್ನೂ ಮಾಡುತ್ತಾನೆ. ಅಧ್ಯಾಪಕರ ವೃತ್ತಿ ವರ್ಧನಕ್ಕಾಗಿ ಕೇಂದ್ರ ಮೆತಡಲಾಜಿಕಲ್ ಇನ್ಸ್‍ಟಿಟ್ಯೂಟ್ ಎಂಬ ಸಂಸ್ಥೆ ಸ್ಥಾಪನೆಯಾಗಿದ್ದು ಪ್ರತಿ ಜಿಲ್ಲೆಯಲ್ಲೂ ಅದರ ಶಾಖೆಗಳಿವೆ. ಅವು ಅಧ್ಯಾಪಕರಿಗೆ ಎಲ್ಲ ರೀತಿಯ ಶಿಕ್ಷಣ ಸೌಲಭ್ಯಗಳನ್ನೂ ಒದಗಿಸುತ್ತವೆ.

ಕೇಂದ್ರ ಸಚಿವಾಲಯ ರೂಪಿಸುವ ಪಠ್ಯಕ್ರಮವನ್ನು ಅದರೊಡನೆ ಸೂಚಿಸಿರುವ ವಿಧಾನದಲ್ಲಿ ದೇಶಾದ್ಯಂತ ಅನುಸರಿಸಲಾಗುತ್ತದೆ. ದೇಶದ ಸಾಮಾನ್ಯ ಸಂಸ್ಕøತಿಯನ್ನೂ ವೈಜ್ಞಾನಿಕ ದೃಷ್ಟಿಯನ್ನೂ ಏಕರೂಪತೆ ಇರುವಂತೆ ಶಾಲಾಕಾಲೇಜುಗಳಲ್ಲಿ ಬೋಧಿಸುವುದರಿಂದ ದೇಶದ ಏಕತೆಯೂ ಸಮಗ್ರತೆಯೂ ದೃಢಗೊಳ್ಳುವುದೆಂಬ ಸರ್ಕಾರದ ನಂಬಿಕೆಗೆ ಈ ವ್ಯವಸ್ಥೆ ಅನುಗುಣವಾಗಿದೆ. ಆದರೂ, ಸ್ಥಳೀಯ ವೈಶಿಷ್ಟ್ಯಗಳಿಗೆ ಅವಕಾಶವೇನೋ ಉಂಟು. ಪ್ರೌಢಶಾಲೆಯ ಕೊನೆಯ ವರ್ಷದಲ್ಲಿ ಸ್ಥಳೀಯ ಆವಶ್ಯಕತೆ, ವಿದ್ಯಾರ್ಥಿ ಅಭಿರುಚಿ, ಆಸಕ್ತಿ - ಇವಕ್ಕೆ ಅನುಗುಣವಾದ ಐಚ್ಚಿಕ ವಿಷಯಗಳನ್ನು ವ್ಯಾಸಂಗ ಮಾಡುವ ಅವಕಾಶವುಂಟು. ಪಠ್ಯೇತರ ಚಟುವಟಿಕೆಗಳೂ ವೈವಿಧ್ಯಮಯವಾಗಿವೆ. ಈಚೆಗೆ ಕೇಂದ್ರ ನಿಯಂತ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ತಕ್ಕಷ್ಟು ನಮ್ಯತೆಯನ್ನು (ಇಲಾಸ್ಟಿಸಿಟಿ) ತರುವ ಯತ್ನವೇನೋ ನಡೆಯುತ್ತಿದೆ.

ಸಾಮಾನ್ಯ ಶಿಕ್ಷಣದಿಂದ ವಿದ್ಯಾರ್ಥಿಗಳ ನಿಸರ್ಗ ಪ್ರೇಮ, ಸಮಾಜ ಜೀವನ ಮತ್ತು ಸಂಸ್ಕøತಿ ಪರಿಚಯ - ಇವನ್ನು ಸಾಧಿಸಬೇಕೆಂಬ ಉದ್ದೇಶದಿಂದ ನಿಸರ್ಗ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಖಗೋಳ ವಿಜ್ಞಾನ, ಭೌತ ಮತ್ತು ರಸಾಯನಶಾಸ್ತ್ರ, ಭೂಗೋಳ ಶಾಸ್ತ್ರ, ಆರೋಗ್ಯ ಶಾಸ್ತ್ರ ಮತ್ತು ಸಂಗೀತ ಇವನ್ನು - ಬೋಧಿಸಲಾಗುವುದು. ಪೋಲಿಷ್ ಭಾಷೆ, ಆಧುನಿಕ ವ್ಯವಹಾರಿಕ ಪರಭಾಷೆ, ಅರ್ಥಶಾಸ್ತ್ರ, ಸಮಾಜಪಾಠ, ದೈಹಿಕ ಶಿಕ್ಷಣ, ಮುಂತಾದ ವಿಷಯಗಳೂ ಸೇರಿವೆ. ಕಿರಿಯ ಪ್ರಾಥಮಿಕ ಶಾಲೆ ಎಲ್ಲ ದೇಶಗಳಂತೆ ಮೂರು ಮೂಲಭೂತ ಕೌಶಲ್ಯಗಳಲ್ಲಿ ಶಿಕ್ಷಣವೀಯುತ್ತದೆ. ಗಣಿತ, ಪೋಲಿಷ್, - ಇವುಗಳ ಬೋಧನೆಗೆ ಪ್ರಾಮುಖ್ಯ ಉಂಟು. 1 - 2 ನೆಯ ತರಗತಿಗಳಲ್ಲಿ ವಸ್ತುಪಾಠವನ್ನು ಬೋಧಿಸುವರು. 4 ನೆಯ ತರಗತಿಯಲ್ಲಿ ಭೂಗೋಳವನ್ನೂ 8 ನೆಯ ತರಗತಿಯಲ್ಲಿ ನಿಸರ್ಗ ವಿಜ್ಞಾನವನ್ನೂ ಆರಂಭಿಸುವರು.

ಐದನೆಯ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳು ರಷ್ಯನ್ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ಪ್ರೌಢಶಾಲೆಯಲ್ಲಿ ಇಂಗ್ಲಿಷ್, ಫ್ರೆಂಚ್, ಜರ್ಮನ್ ಇವುಗಳ ಪೈಕಿ ಒಂದು ಆಧುನಿಕ ಪರಭಾಷೆಯನ್ನು ಕಲಿಯುವರು. ಆರೋಗ್ಯ ಶಾಸ್ತ್ರ ಖಗೋಳ ವಿಜ್ಞಾನ ಮತ್ತು ಇತರ ಐಚ್ಛಿಕ ವಿಷಯಗಳನ್ನು ಅಲ್ಲಿ ವ್ಯಾಸಂಗ ಮಾಡುವ ಅವಕಾಶವುಂಟು.

ಈಚೆಗೆ ಶಿಕ್ಷಣಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಿರುವ ಜ್ಞಾನದ ಸಮಗ್ರ ರೂಪ, ಕಲಿವಿಗೆ ಸಂಬಂಧಿಸಿದ ಮನೋವಿಜ್ಞಾನ ಮತ್ತು ವರ್ತನಾಶಾಸ್ತ್ರ ಮುಂತಾದ ತತ್ತ್ವ ದೃಷ್ಟಿಗಳನ್ನನುಸರಿಸಿ ಪ್ರೌಢಶಾಲೆಯ ಪಠ್ಯವಿಷಯಗಳನ್ನು ಪುನವ್ರ್ಯವಸ್ಥೆಗೊಳಿಸಲಾಗುತ್ತಿದೆ. ಪಾಶ್ಚಾತ್ಯ ಯೂರೋಪಿನ ಸಂಸ್ಕøತಿ, ಇಂಗ್ಲಿಷ್ ಭಾಷೆ ಇವಕ್ಕೆ ಹೆಚ್ಚಿನ ವ್ಯಾಸಂಗಕಾಲವನ್ನು ಒದಗಿಸಲಾಗುತ್ತಿದೆ. ಪಾಲಿಟೆಕ್ನಿಕ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಉಪಕರಣಗಳ ಬಳಕೆ, ಗಣಿತ, ಯಂತ್ರಗಳ ನಕ್ಷೆ ಮುಂತಾದುವುಗಳಲ್ಲಿ ಶಿಕ್ಷಣವಿತ್ತು. ಅವರನ್ನು ಉದ್ಯೋಗಕ್ಕೆ ಸಿದ್ಧಪಡಿಸಲಾಗುವುದು. ಇಲ್ಲಿ ಬಾಲಿಕೆಯರೂ ಅಧಿಕ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುವರು. ವೃತ್ತಿ ಪ್ರೌಢಶಾಲೆಗಳಲ್ಲಿ ಸಾಂಸ್ಕøತಿಕ ಶಿಕ್ಷಣದೊಡನೆ ಹೊಂದುಕೊಳ್ಳುವ ತಾಂತ್ರಿಕ ತರಪೇತು ನೀಡಿ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧಪಡಿಸಲಾಗುತ್ತಿದೆ. ಅವರಿಗೆ ಅಗತ್ಯವಾದ ಕಾರ್ಖಾನೆ ತರಪೇತನ್ನು ದೊರಕಿಸಿಕೊಡಲಾಗುತ್ತಿದೆ. ಗಣಿತ, ವಿಜ್ಞಾನ, ಸಮಾಜ ಪಾಠ ಮುಂತಾದ ಸಾಂಸ್ಕøತಿಕ ವಿಷಯಗಳನ್ನೂ ಅಲ್ಲಿ ಬೋಧಿಸುವರು.

ಎಲ್ಲ ಶಾಲೆಗಳಲ್ಲೂ ನಾಲ್ಕು ಬಗೆಯ ಶಿಕ್ಷಣ ಕಾರ್ಯಕ್ರಮವುಂಟು. ತರಗತಿಯ ಪಾಠ, ಮನೆಕೆಲಸ, ಪಠ್ಯೇತರ ಚಟುವಟಿಕೆ, ಸಮಾಜದಲ್ಲಿ ನೇರ ಪಾತ್ರ ವಹಿಸುವಿಕೆ - ಈ ವಿಧವಾಗಿ ವಿಂಗಡಿಸಿಕೊಂಡು ಅವುಗಳಲ್ಲಿ ಸಮನ್ವಯವನ್ನು ಸಾಧಿಸುವ ಯತ್ನ ನಡೆಯುತ್ತಿದೆ.

ದಿನದಿನಕ್ಕೂ ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿ ಸಂಖ್ಯೆಗೆ ಅಗತ್ಯವಾದ ಶಿಕ್ಷಣ ಸೌಲಭ್ಯವೊದಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಶಾಲಾಕಾಲೇಜುಗಳಿಗೆ ಕಟ್ಟಡ, ಉಪಕರಣಗಳು, ಅಧ್ಯಾಪಕರು - ಇವಕ್ಕೆಲ್ಲ ಬೇಕಾದ ಹಣ ಒದಗಿಸುವುದು ಕಷ್ಟವಾಗುತ್ತಿದೆ. ಎರಡನೆಯ ಮಹಾಯುದ್ಧದ ಅನಂತರ ಎಂದರೆ 1950 ರ ಸುಮಾರಿನಿಂದ ಜನಸಂಖ್ಯಾ ಸ್ಫೋಟ ತೀವ್ರಗೊಂಡು ಶಿಕ್ಷಣ ಸೌಲಭ್ಯವನ್ನು ವಿಸ್ತರಿಸುವ ಕಾರ್ಯ ಏಕಪ್ರಕಾರವಾಗಿ ನಡೆಯುತ್ತಿದ್ದರೂ ಆ ಸಮಸ್ಯೆ ಪೂರ್ಣವಾಗಿ ಬಗೆಹರಿದಿಲ್ಲ.

ಕಡ್ಡಾಯ ಶಿಕ್ಷಣವನ್ನು ಪ್ರೌಢಶಾಲೆಗೂ ವಿಸ್ತರಿಸಬೇಕೆಂಬ ಯತ್ನ ಹಣ ಮತ್ತು ಇತರ ಕಾರಣಗಳಿಂದಾಗಿ ಹಾಗೆಯೇ ಉಳಿದುಕೊಂಡಿದೆ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಮೇಲೆ ಎರಡು ವರ್ಷ ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಬೇಕೆಂಬ ಸಲಹೆಯೂ ದೇಶದ ಮುಂದಿದೆ. ಹಾಗೂ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಉದ್ಯೋಗ ನಿರತರಾಗತಕ್ಕವರಿಗೆ ಭಾಗಶಃ ಕಾಲದ ಶಿಕ್ಷಣಕ್ಕಾಗಿ ವಿಶಿಷ್ಟ ಶಿಕ್ಷಣ ಸಂಸ್ಥೆಗಳು ಏರ್ಪಟ್ಟಿವೆ.

ಪ್ರೌಢಶಿಕ್ಷಣದ ಪಠ್ಯಕ್ರಮದಲ್ಲಿ ಪಶ್ಚಿಮ ಯೂರೋಪಿನ ಕೆಲವು ರಾಷ್ಟ್ರಗಳಲ್ಲಿರುವಂತೆ ಗಣಿತ, ಭೌತ, ರಸಾಯನ ಮತ್ತು ಜೀವವಿಜ್ಞಾನಗಳ ವಿಭಾಗ, ಸಮಾಜ ಶಾಸ್ತ್ರಗಳ ವಿಭಾಗ ಸಾಂಸ್ಕøತಿಕ ವಿಭಾಗ, ಸಾಮಾಜಿಕ ಮತ್ತು ಆರ್ಥಿಕ ವಿಭಾಗ - ಎಂಬ ರೀತಿ ವೈವಿಧ್ಯಗೊಳಿಸಬೇಕೆಂಬ ಸಲಹೆಯೂ ಬರುತ್ತಿದೆ.

ಶಿಕ್ಷಣ ಶಾಸ್ತ್ರದ ಕಾಲೇಜುಗಳೂ ವಿಶ್ವವಿದ್ಯಾಲಯಗಳೂ ಸಂಶೋಧನೆಗಳನ್ನು ನಡೆಸಿ ಶಿಕ್ಷಣ ಕ್ಷೇತ್ರದಲ್ಲಾಗಬೇಕಾದ ಸುಧಾರಣೆಗಳನ್ನು ಸ್ಪಷ್ಟವಾಗಿ ಸೂಚಿಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪೋಲೆಂಡ್&oldid=1237259" ಇಂದ ಪಡೆಯಲ್ಪಟ್ಟಿದೆ