ಹೆರ್ಮಾನ್ ಸ್ಟೌಡಿಂಗೆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆರ್ಮಾನ್ ಸ್ಟೌಡಿಂಗೆರ್

ಹೆರ್ಮಾನ್ ಸ್ಟೌಡಿಂಗೆರ್ (1881-1965) ಜರ್ಮನಿಯ ಒಬ್ಬ ರಸಾಯನ ವಿಜ್ಞಾನಿ.

ಜೀವನ, ಸಾಧನೆಗಳು[ಬದಲಾಯಿಸಿ]

ಹಾಲೆ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಪಡೆದು (1903), 1912ರ ವರೆಗೆ ತಾಂತ್ರಿಕ ಸಂಸ್ಥೆಯೊಂದರಲ್ಲಿ ಅಧ್ಯಾಪಕನಾಗಿ ಸೇವೆ. ಅಲ್ಲಿ ಫ್ರಿಟ್ಝ್ ಹಾಬೆರ್‌ನ (1868-1934) ಮಾರ್ಗದರ್ಶನದಲ್ಲಿ  ಸಂಶೋಧನೆ. ಮುಂದೆ ನಿವೃತ್ತನಾಗುವ ತನಕ (1951) ಫ್ರೀಬರ್ಗ್ ವಿಶ್ವವಿದ್ಯಾಲಯದಲ್ಲಿ ನೆಲೆನಿಂತ.[೧] ನಿವೃತ್ತಿಯ ಬಳಿಕ ಮಹೋಪಾಧ್ಯಾಯನಾಗಿ ನೇಮಕಗೊಂಡು ಆರ್ಗ್ಯಾನಿಕ್ ರಸಾಯನವಿಜ್ಞಾನದಲ್ಲಿ, ಮುಖ್ಯವಾಗಿ ಪಾಲಿಮೆರ್ ಕುರಿತ ಸಂಶೋಧನೆಗಳಿಂದ ಖ್ಯಾತನಾದ. ಬೃಹದಣುಗಳ ಚಿಕ್ಕ ಘಟಕಗಳು (ಮಾನೊಮರ್‌ಗಳು) ಮಣಿಯಂತೆ ಪೋಣಿಸಿಕೊಳ್ಳುವುದರ ಸಮಷ್ಟಿಯೇ ಪಾಲಿಮೆರ್. ಸಹಸ್ರಾರು ಆಲ್ಫಾ ಗ್ಲುಕೋಸ್ ಘಟಕಗಳು ಕೂಡಿ ನೀರು ಕಳೆದು ಪಿಷ್ಟದ ಅಣು, ಹೀಗೆಯೇ  ಬೀಟಾ ಗ್ಲುಕೋಸ್ ಘಟಕಗಳ ಸಂಯೋಜನೆಯಿಂದ ಸೆಲ್ಯುಲೋಸ್ (ಹತ್ತಿ, ಕಾಗದ ಇತ್ಯಾದಿ), ಅಮೈನೊ ಆಮ್ಲಗಳ ಸಂಘಟನೆಯಿಂದ ಪ್ರೋಟೀನುಗಳು ಆಗುವಂತೆ  ಪಾಲಿಮೆರ್‌ಗಳ ರೂಪಣೆ ಕೂಡ ಆಗುತ್ತದೆ.[೨] ಪ್ಲಾಸ್ಟಿಕ್‌ಗಳು ಇಂಥ ಪಾಲಿಮೆರ್‌ಗಳ ನೇರ ಸರಣಿ ರಚನೆಯುಳ್ಳವು. ಅನ್ಯರು ಭಾವಿಸಿದ್ದಂತೆ ಇವು ಅಡ್ಡಾದಿಡ್ಡಿ ಹೆಣೆದುಕೊಂಡಿರುವ ಅಣು ಜೊಂಪೆಗಳಲ್ಲ. ಇದು ಇವನ ಸಂಶೋಧನೆಯ ಸಾರಾಂಶ. ಎರಡನೆಯ  ಮಹಾಯುದ್ಧದ (1939-45) ಅನಂತರ ಜಗತ್ತಿನಾದ್ಯಂತ ಸಂಶ್ಲೇಷಿತ ಪ್ಲಾಸ್ಟಿಕುಗಳ ಬಳಕೆ ವ್ಯಾಪಕವಾಯಿತು. ಈ ನಿಟ್ಟಿನಲ್ಲಿ ಮೂಲಭೂತ ಸಂಶೋಧನೆಗೈದಿದ್ದ ಇವನಿಗೆ 1953ರ ರಸಾಯನವಿಜ್ಞಾನ ನೊಬೆಲ್ ಪಾರಿತೊಷಕ ಪ್ರದಾನವಾಯಿತು.[೩]

ಉಲ್ಲೇಖಗಳು[ಬದಲಾಯಿಸಿ]

  1. Biography on Nobel prize website
  2. Staudinger, H. (1920). "Über Polymerisation". Ber. Dtsch. Chem. Ges. 53 (6): 1073–1085. doi:10.1002/cber.19200530627.
  3. The Nobel Prize in Chemistry 1953 (accessed Mar 2006).

ಹೊರಗಿನ ಕೊಂಡಿಗಳು[ಬದಲಾಯಿಸಿ]