ವಿಷಯಕ್ಕೆ ಹೋಗು

ಹೆಚ್. ವೈ. ಶಾರದಾ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:HYP.jpg
'ಹೆಚ್. ವೈ. ಶಾರದಾ ಪ್ರಸಾದ್'

ಹೊಳೆನರಸೀಪುರ ಯೋಗಾನರಸಿಂಹ ಶಾರದಾ ಪ್ರಸಾದ್ ದಿವಂಗತ, ಮಾಜೀ ಪ್ರಧಾನಮಂತ್ರಿಗಳಾಗಿದ್ದ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ ಯವರಿಗೆ ಮಾಧ್ಯಮಸಲಹೆಗಾರರಾಗಿ ಕೆಲಸಮಾಡಿ, 'ಸೈ, ಎನ್ನಿಸಿಕೊಂಡಿದ್ದ ಮೇಧಾವಿ, ಸಮರ್ಥ, ಕನ್ನಡಿಗರು.

ಜನನ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

೧೯೨೪ ರ ಏಪ್ರಿಲ್, ೧೫ ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ, ಎಚ್. ಯೋಗಾನರಸಿಂಹ. ಅಧ್ಯಾಪಕರು. ಸಂಗೀತ ಹಾಗೂ ಸಂಸ್ಕೃತದಲ್ಲಿ ಘನ ವಿದ್ವಾಂಸರು. ಪ್ರೌಢಶಿಕ್ಷಣವೆಲ್ಲಾ ಮೈಸೂರುನಗರದಲ್ಲಿ ನಡೆಯಿತು. ಅವರ ಸಹಪಾಠಿಗಳಾದ ಕನ್ನಡದ ಖ್ಯಾತ ಕವಿ, ಗೋಪಾಲಕೃಷ್ಣ ಅಡಿಗ, ಸಾಹಿತಿ- ಶಿಕ್ಷಣತಜ್ಞ, ಪ್ರೊ. ಸಿ. ಡಿ. ನರಸಿಂಹಯ್ಯ, ಲಲಿತ ಪ್ರಬಂಧಕಾರ, ಎ. ಎನ್. ಮೂರ್ತಿರಾವ್, ಕವಿ, ಎ. ಕೆ ರಾಮಾನುಜಮ್ ಮುಂತಾದವರು.

ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು

[ಬದಲಾಯಿಸಿ]

ಮಹಾರಾಜಾ ಕಾಲೇಜ್ ನಲ್ಲಿ ಓದುತ್ತಿದ್ದಾಗ, ಶಾರದಾ ಪ್ರಸಾದ್ ಮಹಾತ್ಮಾ ಗಾಂಧಿಯವರ 'ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ,' ಎಂಬ ಸತ್ಯಾಗ್ರಹದಲ್ಲಿ ಪಾಲುದಾರರಾದರು. 'ಸೈಕಲ್ ಬ್ರಿಗೇಡ್,' ಗಳಮೇಲೆ ಹಳ್ಳಿ-ಹಳ್ಳಿಗಳನ್ನು ಸುತ್ತಿ, ಸ್ವದೇಶೀ ಜಾಗೃತಿಯನ್ನೂ, ದೇಶಪ್ರೇಮವನ್ನೂ, ಸಾರ್ವಜನಿಕರಲ್ಲಿ ಬಿತ್ತಿದರು. ಜೈಲುವಾಸ ಮಾಡಬೇಕಾಗಿಬಂತು. ಮಹಾರಾಜಾ ಕಾಲೇಜ್ ನ ಪ್ರಿನ್ಸಿಪಾಲ್, ಜೆ. ಸಿ. ರಾಲೋ, ರವರ ದಯದಿಂದ ಜೈಲಿನಿಂದಲೇ ಪರೀಕ್ಷೆಯಲ್ಲಿ ಬರೆಯಲು ಅನುಮತಿ ಸಿಕ್ಕಿತು. ಶಾರದಾ ಪ್ರಸಾದ್ ಪ್ರಥಮ ರ್‍ಯಾಂಕ್ ನಲ್ಲಿ ತೇರ್ಗಡೆಯೂ ಆದರು. ಶಾರದಾಪ್ರಸಾದರು, ಪತ್ರಿಕೋದ್ಯಮಿಯಾಗಿ[ಸುದ್ದಿ ಸಂಪಾದಕರಾಗಿ] ಬೊಂಬಾಯಿನ 'ಇಂಡಿಯನ್ ಎಕ್ಸ್ಪ್ರೆಸ್ ಪೇಪರ್', ನಲ್ಲಿ ತಮ್ಮ ಅತಿ-ಚಿಕ್ಕವಯಸ್ಸಿನಲ್ಲೇ ಕೆಲಸ ಆರಂಭಿಸಿದರು.[೧೯೫೫-೫೬]

ಅದೇ ಸಮಯದಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ 'ನೀಮನ್ ಫೆಲೋಷಿಪ್,' ಸಿಕ್ಕಿತು. ಪತ್ರಿಕೋದ್ಯಮ, ವಿಶೇಷ ಅಧ್ಯಯನ, ಉಪನ್ಯಾಸಗಳನ್ನು ಕೈಗೊಂಡು ಮಾಧ್ಯಮದಲ್ಲಿ ಪರಿಣಿತಿ ಪಡೆದರು. ಭಾರತ ಸರ್ಕಾರದ ಪ್ರಕಟನಾ ವಿಭಾಗದ ಮುಖವಾಣಿಯಾಗಿದ್ದ 'ಯೋಜನಾ' ಪತ್ರಿಕೆಗೆ ಸಂಪಾದಕರಾದರು. ಇಂದಿರಾಗಾಂಧಿಯವರು, ತೀಕ್ಷ್ಣಮತಿ, ಮೇಧಾವಿ, ಶಿಸ್ತು-ಬದ್ಧ ಕೆಲಸಗಾರ ಶಾರದಾ ಪ್ರಸಾದ್, ರನ್ನು ತಮ್ಮ ಆಪ್ತ ಸಿಬ್ಬಂದಿ ವರ್ಗವಲಯಕ್ಕೆ ಮಾಧ್ಯಮ ಸಲಹೆಗಾರರಾಗಿ ಸಂವಹನ ವಿಚಾರಗಳಲ್ಲಿ ಆಪ್ತ-ಸಮಾಲೋಚಕರಾಗಿ ಕೆಲಸನಿರ್ವಹಿಸಲು ಆಹ್ವಾನಿಸಿದರು. ಪ್ರಧಾನಿಗಳಿಗೆಲ್ಲಾ ಭಾಷಣಗಳನ್ನು ಬರೆದುಕೊಟ್ಟರು. ಗುಲ್ಜಾರಿಲಾಲ್ ನಂದಾ, ಮೊರಾರ್ಜಿ ದೇಸಾಯ್, ಜಯಪ್ರಕಾಶ್ ನಾರಾಯಣ್, ಮೊದಲಾದವರನ್ನು ಅತಿ ಹತ್ತಿರದಲ್ಲಿ ಕಂಡವರು. ಸರಕಾರಿ ಪತ್ರಿಕಾ ವಲಯದಲ್ಲಿ ಕೆಲಸಕ್ಕೆ ಸೇರಿದರೂ, ಸಂವಹನದ ಪ್ರಾಮುಖ್ಯ ಪತ್ರಿಕಾ ಧರ್ಮವಾದ, ಜ್ಞಾನ ಪ್ರಸಾರ, ಮತ್ತು ವಸ್ತುನಿಷ್ಠೆಗಳನ್ನು ಕಾಪಾಡಿಕೊಂಡುಬಂದರು. ಶಾರದಾ ಪ್ರಸಾದ್ ಸರಕಾರದ ನೀತಿ, ಗೌಪ್ಯತೆಗಳಿಗೆ ನಿಷ್ಠರಾಗಿದ್ದುಕೊಂಡು, ಆ ಚೌಕಟ್ಟಿನಲ್ಲೇ ಅವರು ಪತ್ರಕರ್ತ ಮಿತ್ರರಿಗೆ ಸುದ್ದಿ ಸಮಾಚಾರಗಳ ನಿಧಿಯಾಗಿದ್ದಂತೆ, ಸಲಹೆಗಾರರೂ ಆಗಿದ್ದರು. ಎಂದೂ ಸುಳ್ಳು-ಸುದ್ದಿ ವರದಿಮಾಡಲಿಲ್ಲ. ಸಮಾಜದ ಅಹಿತಕರ ವಿಷಯಗಳನ್ನು ವಿನಾಕಾರಣ ಯಾರೊಡನೆಯೂ ತರ್ಕಿಸುತ್ತಿರಲಿಲ್ಲ. ಯಾವಸಂಗತಿಗಳನ್ನೂ ಉತ್ಪ್ರೇಕ್ಷೆಮಾಡುತ್ತಿರಲಿಲ್ಲ. ರಾಷ್ಟ್ರದಲ್ಲಾಗುವ ಅನೇಕ ಕಾಲಕಾಕಾಲದ ಘಟನೆಗಳ ಪ್ರಾಮುಖ್ಯತೆಯನ್ನು ಅತಿಯಾಗಿ ಹಿಗ್ಗಿಸುವುದು, ಅಥವಾ ಕುಗ್ಗಿಸಿವುದೂ ಅವರಿಗೆ ಸರಿಬರುತ್ತಿರಲಿಲ್ಲ. ಸತ್ಯನಿಷ್ಠೆ, ವಸ್ತುನಿಷ್ಠೆ, ಮತ್ತು ಸಮಾಜ ಬದ್ದತೆಯನ್ನು ಪರಿಪಾಲಿಸುತ್ತಿದ್ದುದ್ದಲ್ಲದೆ, ತಮ್ಮ ಮಿತ್ರರಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಶಾರದಾ ಪ್ರಸಾದ್ ಸದಾ ದಿಲ್ಲಿಯಲ್ಲಿದ್ದರೂ, ದೇಶದ ಪರಿಸ್ಠಿತಿಗಳನ್ನು ವಿದ್ಯುನ್ಮಾದ ಮಾಧ್ಯಮಗಳಿಂದ ಪಡೆದು ತಿಳಿದುಕೊಳ್ಳುತ್ತಿದ್ದರು. ಅಗತ್ಯವೆನಿಸಿದಾಗ, ಟೀಕೆ, ಟಿಪ್ಪಣಿ, ಬುದ್ಧಿಮಾತುಗಳಿಂದ ದೇಶವನ್ನು ಎಚ್ಚರಿಸುತ್ತಿದ್ದರು. ಕರ್ನಾಟಕದ ಪತ್ರಿಕಾಕರ್ತ, ಲಂಕೇಶ್ ಅವರ ಪ್ರಿಯವ್ಯಕ್ತಿ. 'ಆತ್ಮಸಾಕ್ಷಿ,' ಎಂದು ಬಣ್ಣಿಸುತ್ತಿದ್ದರು. ಶಾರದಾ ಪ್ರಸಾದ್, ಸೃಜನಶೀಲ ಲೇಖಕರ ವರ್ಗಕ್ಕೆ ಸೇರದಿದ್ದರೂ, ಕವಿಸಹಜವಾದ ಕುತೂಹಲ, ಅಂತಃಕರಣ, ಮಾನವೀಯ ಅರ್ದ್ರತೆ ಇತ್ತು. ದಿನದ ಬಹುಪಾಲುಸಮಯವನ್ನು ಅವರು ರಾಜಕೀಯ ವಲಯಗಳಲ್ಲೇ ಇದ್ದು ಕಾಲವ್ಯಯವಾದಾಗ್ಯೂ, ಅವರ ಬುದ್ಧಿ, ಹೃದಯದಲ್ಲಿ, ಕಲೆ, ಸಾಹಿತ್ಯ, ಸಂಗೀತದಲ್ಲಿ ಎಡೆಯಿತ್ತು. ನಿರಾಡಾಂಬರ ಶೈಲಿಯಲ್ಲಿ ಲಾಲಿತ್ಯಪೂರ್ಣವಾಗಿ ಚಿತ್ರಿಸುವ ಭಾಷಾಶೈಲಿ, ಕರಗತವಾಗಿತ್ತು. ಹೃದ್ಗತವಾಗಿತ್ತು. ಹೆಚ್.ವೈ.ಶಾರದಾ ಪ್ರಸಾದ್ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲವು ವರ್ಷ ಅಂಕಣಕಾರರಾಗಿದ್ದರು.

'ತುರ್ತು ಪರಿಸ್ಥಿತಿ,ಸಮಯದಲ್ಲಿ

[ಬದಲಾಯಿಸಿ]

ಇಂದಿರಾಜಿಯವರಿಗೆ, ಅತಿ-ಸಮೀಪವರ್ತಿಯಾಗಿದ್ದ ಶಾರದಾಪ್ರಸಾದರ್ ಸಮದರ್ಶಿ ನೋಟ, ವಸ್ತುನಿಷ್ಠ ದೃಷ್ಟಿ, ತುರ್ತುಪರಿಸ್ಥಿತಿಯನ್ನು ಕಂಡು, ಪ್ರತಿಕ್ರಿಯಿಸಿದ್ದು ಹೀಗೆ :

" ರಾಜಕೀಯ ಲೆಕ್ಕಾಚಾರ ಸರಳವಾದುದಲ್ಲ ; ಸರಕಾರಗಳಿಗೆ ಸತ್ಯಾಗ್ರಹವನ್ನು ಎದುರಿಸಲು ಬೇರೆ ಯಾವ ಉಪಾಯವೂ ಹೊಳೆಯದೇ ಹೋದಾಗ' ತುರ್ತು ಪರಿಸ್ಥಿತಿ, ' ಕಾಯಿದೆ ಪ್ರಯೋಗಿಸುತ್ತವೆ. ಹತ್ತು ಪಟ್ಟು ಬಲ ಪ್ರಯೋಗ ಸಾಕು ಎಂಬಲ್ಲಿ ನೂರು ಪಟ್ಟನ್ನು ಬಳಸುವುದು ಇಂದಿರಾಗಾಂಧಿ ಯವರ ಸ್ವಭಾವ. ಅವರಿಗೇನಾದರೂ ರಾಜ್ಯಾಂಗದ ಬಗ್ಗೆ, ಕಾನೂನು ಬಗ್ಗೆ ಸ್ವಲ್ಪ ಹೆಚ್ಚಿನ ತಿಳುವಳಿಕೆ ಇದಿದ್ದರೆ ಅವರು ತುರ್ತು ಪರಿಸ್ಥಿತಿ ಪ್ರಯೋಗವನ್ನು ತಪ್ಪಿಸಬಹುದಾಗಿತ್ತು. ಈ ಲೋಪದಿಂದಾಗಿ ಅವರು ತಮ್ಮ ಸಲಹೆಗಾರರು ಮತ್ತು ನ್ಯಾಯವಾದಿ ಸಹೋದ್ಯೋಗಿಗಳನ್ನು ಅವಲಂಭಿಸಬೇಕಾಯಿತು."

'ಸ್ವ' ಇಚ್ಛೆಯಿಂದ ಅವರು ತುರ್ತು ಪರಿಸ್ಥಿತಿ ರದ್ದುಪಡಿಸಿದರು. ಬಹುಶಃ ಅವರು ಅದನ್ನು ಜಾರಿಗೊಳಿಸಿದ ಬಗ್ಗೆ ಪ್ರಾಯಶ್ಚಿತ್ತ ಅನುಭವಿಸಿರಬೇಕು. ಒಂದು ವಿಚಿತ್ರವೆಂದರೆ ಆಕೆ ಜನತಾ ಸರಕಾರದೆದುರಿಗೆ ಸೋತು ಏನೆಲ್ಲಾ ಅನುಭವಿಸಿದರೋ ಅದೆಲ್ಲವೂ ಜನರ ದೃಷ್ಟಿಯಲ್ಲಿ ಆಕೆ ತನ್ನ ವಿರೋಧಿಗಳಿಗೆ ಕೊಟ್ಟ ಕಿರುಕುಳಕ್ಕೆ ಪ್ರತಿಯಾಗಿ ದೊರೆತ ಪ್ರಾಯಶ್ಚಿತ್ತಕ್ಕೆ ಸಮನಾಯಿತು ಎಂಬುದು ಅವರ ಚಿಚಾರವಾಗಿತ್ತು. ಅದೇನೇ ಇರಲಿ, ತುರ್ತು ಪರಿಸ್ಥಿಯಿಂದ ಇಂದಿರಾಗಾಂಧಿ ಸಾಧಿಸಿದ ಒಂದು ವಿಚಾರವೆಂದರೆ, ಮುಂದೆ ಯಾವೊಬ್ಬ ಪ್ರಧಾನಿಯೂ, ತುರ್ತು ಪರಿಸ್ಥಿತಿ ಜಾರಿಗೊಳಿಸುವ ಪ್ರಲೋಭನೆಗೆ ಒಳಗಾಗುವ ಸಾಧ್ಯತೆ ಇರುವುದಿಲ್ಲ.'

ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯ್, ಹಾಗೂ ರಾಜೀವ್ ಗಾಂಧಿಯವರಿಗೆ ಮಾಧ್ಯಮ ಸಲಹಾಕಾರರಾಗಿದ್ದರು. ಸುಮಾರು ೨೦ ವರ್ಷಗಳಕಾಲ ಪ್ರಧಾನಿಯವರ ಕಚೇರಿಯಲ್ಲೇ ಕೆಲಸಮಾಡಿದ ಶಾರದಾ ಪ್ರಸಾದ್, ನಿವೃತ್ತರಾದಾಗ, ಶ್ರೀಮತಿ ಸೋನಿಯಾಗಾಂಧಿಯವರು, ಒಂದು ಬಂಗಲೆಯನ್ನು ವಾಸ್ತವ್ಯಕ್ಕಾಗಿ ಕೊಡಿಸಲು ಮುಂದಾದಾಗ, ನಯವಾಗಿ ನಿರಾಕರಿಸಿದ್ದರು. ಅವರು ವಾಸವಾಗಿದ್ದದ್ದು ಎರಡು ರೂಂನ ಫ್ಲಾಟ್ ಒಂದರಲ್ಲಿ. ಅದೂ ದೆಹಲಿಯ ಕೊಳಚೆ ಪ್ರದೇಶವೇ ತುಂಬಿರುವ, 'ಪಶ್ಚಿಮವಿಹಾರ್,' ನಲ್ಲಿ. ಜ್ಞಾನದ ಆನೆಯನ್ನೂ, ಅಧಿಕಾರದ ಕುದುರೆಯನ್ನೂ ಏರಿ, ಸಂಭಾಳಿಸಿದ, ಶಾರದಾ ಪ್ರಸಾದರು, ಸಾರ್ವಜನಿಕ ಜೀವನದಲ್ಲಿ ಘನತೆ, ಗೌರವ, ಋಜುತ್ವ, ಪ್ರಾಮಾಣಿಕತೆ, ಸಮಗ್ರತೆಗಳಿಗೆ ಮಾದರಿಯಾಗಿದ್ದವರು.

ದೊರೆತ ಗೌರವ ಪ್ರಶಸ್ತಿಗಳು

[ಬದಲಾಯಿಸಿ]

ಶಾರದಾ ಪ್ರಸಾದ್, ಬರೆದ ಕೆಲವು ಪ್ರಮುಖ ಕೃತಿಗಳು

[ಬದಲಾಯಿಸಿ]

ಶಿವರಾಮ ಕಾರಂತರ ಕೃತಿಗಳ ಇಂಗ್ಲೀಷ್ ಭಾಷಾಂತರ

[ಬದಲಾಯಿಸಿ]

ಇತರ ಕೃತಿ-ರಚನೆಗಳು

[ಬದಲಾಯಿಸಿ]

೨೦೦೮ ರ ಸೆಪ್ಟೆಂಬರ್ ೨ ರಂದು ಮಂಗಳವಾರ, ಗೌರಿಹಬ್ಬದ ದಿನ ಶಾರದಾ ಪ್ರಸಾದ್ ಇಹಲೋಕವನ್ನು ತ್ಯಜಿಸಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು.

ಇವುಗಳನ್ನೂ ನೋಡಿ

[ಬದಲಾಯಿಸಿ]