ಆತ್ಮಸಾಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆತ್ಮಸಾಕ್ಷಿಯು ತಪ್ಪಿನಿಂದ ಸರಿಯನ್ನು ವ್ಯತ್ಯಾಸಮಾಡಲು ನೆರವಾಗುವ ಒಂದು ಸಾಮರ್ಥ್ಯ, ಕೌಶಲ, ಅಂತಃಪ್ರಜ್ಞೆ ಅಥವಾ ವಿವೇಚನೆ. ನೈತಿಕ ವಿವೇಚನೆಯು ಮೌಲ್ಯಗಳು ಅಥವಾ ರೂಢಿಗಳಿಂದ ಹುಟ್ಟಬಹುದು (ತತ್ತ್ವಗಳು ಮತ್ತು ನಿಯಮಗಳು). ಮನೋವೈಜ್ಞಾನಿಕ ಪದಗಳಲ್ಲಿ ಆತ್ಮಸಾಕ್ಷಿಯನ್ನು ಹಲವುವೇಳೆ ಮಾನವನು ತನ್ನ ನೈತಿಕ ಮೌಲ್ಯಗಳ ವಿರುದ್ಧ ಹೋಗುವ ಕಾರ್ಯಗಳನ್ನು ಮಾಡಿದಾಗ ಪಶ್ಚಾತ್ತಾಪದ ಅನಿಸಿಕೆಗಳನ್ನು ಉಂಟುಮಾಡುವಂಥದ್ದು ಮತ್ತು ಕಾರ್ಯಗಳು ಅಂತಹ ರೂಢಿಗಳಿಗೆ ಅನುಗುಣವಾಗಿದ್ದಾಗ ಧರ್ಮಶೀಲತೆ ಅಥವಾ ಸಮಗ್ರತೆಯ ಅನಿಸಿಕೆಗಳನ್ನು ಉಂಟುಮಾಡುವಂಥದ್ದು ಎಂದು ವಿವರಿಸಲಾಗುತ್ತದೆ.[೧] ಒಂದು ಕಾರ್ಯದ ಮೊದಲು ಎಷ್ಟರ ಮಟ್ಟಿಗೆ ಆತ್ಮಸಾಕ್ಷಿಯು ನೈತಿಕ ವಿವೇಚನೆಗೆ ಹೇಳುತ್ತದೆ ಮತ್ತು ಅಂತಹ ನೈತಿಕ ವಿವೇಚನೆಗಳು ತರ್ಕದಲ್ಲಿ ಆಧರಿಸಿರಬೇಕೆ ಎಂಬುದು ಪಾಶ್ಚಾತ್ಯ ತತ್ವಶಾಸ್ತ್ರದ ಇತಿಹಾಸದ ಬಹಳಷ್ಟು ಕಾಲ ಚರ್ಚೆಯನ್ನು ಉಂಟುಮಾಡಿದೆ.

ಆತ್ಮಸಾಕ್ಷಿಯ ಧಾರ್ಮಿಕ ದೃಷ್ಟಿಕೋನಗಳು ಸಾಮಾನ್ಯವಾಗಿ ಅದನ್ನು ಎಲ್ಲ ಮಾನವರಲ್ಲಿ ಅಂತರ್ಗತವಾದ ನೈತಿಕತೆ, ಉದಾರವಾದ ಬ್ರಹ್ಮಾಂಡ ಮತ್ತು/ಅಥವಾ ದೈವಿಕತೆಗೆ ಸಂಬಂಧಿಸಿದ್ದು ಎಂದು ಕಾಣುತ್ತವೆ. ಧರ್ಮದ ವೈವಿಧ್ಯಮಯ ಸಂಸ್ಕಾರ ಸಂಬಂಧಿ, ಪೌರಾಣಿಕ, ಸಿದ್ಧಾಂತ ಸಂಬಂಧಿ, ಕಾನೂನು ಸಂಬಂಧಿ, ಸಾಂಸ್ಥಿಕ ಮತ್ತು ಪ್ರಾಪಂಚಿಕ ಲಕ್ಷಣಗಳು ಆತ್ಮಸಾಕ್ಷಿಯ ಅನುಭವಾತ್ಮಕ, ಭಾವನಾತ್ಮಕ, ಆಧ್ಯಾತ್ಮಿಕ ಅಥವಾ ಚಿಂತನಶೀಲ ಪರಿಗಣನೆಗಳೊಂದಿಗೆ ಅಗತ್ಯವಾಗಿ ಸಮಂಜಸವಾಗಿಲ್ಲದಿರಬಹುದು. ಆತ್ಮಸಾಕ್ಷಿಯ ಸಾಮರ್ಥ್ಯ ಸಂಭಾವ್ಯವಾಗಿ ಆನುವಂಶಿಕವಾಗಿ ನಿರ್ಧಾರಿತವಾದುದು, ಮತ್ತು ಅದರ ವಿಷಯ ಬಹುಶಃ ಒಂದು ಸಂಸ್ಕೃತಿಯ ಭಾಗವಾಗಿ ಕಲಿತಿರುವಂಥದ್ದು ಅಥವಾ ಅಚ್ಚಾಗಿರುವಂಥದ್ದು (ಭಾಷೆಯಂತೆ) ಎಂದು ಸಾಮಾನ್ಯ ಜಾತ್ಯತೀತ ಅಥವಾ ವೈಜ್ಞಾನಿಕ ದೃಷ್ಟಿಕೋನಗಳು ಪರಿಗಣಿಸುತ್ತವೆ.

ಆತ್ಮಸಾಕ್ಷಿಗೆ ಬಳಸಲಾಗುವ ಸಾಮಾನ್ಯ ರೂಪಕಗಳೆಂದರೆ "ಒಳಗಿನ ಧ್ವನಿ", "ಆಂತರಿಕ ಬೆಳಕು" ಇತ್ಯಾದಿ. ಆತ್ಮಸಾಕ್ಷಿಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನಿನಲ್ಲಿ ಒಂದು ಪರಿಕಲ್ಪನೆಯಾಗಿದೆ, ಮತ್ತು ಇದು ಸಮಗ್ರವಾಗಿ ವಿಶ್ವಕ್ಕೆ ಅನ್ವಯಿಸುವಂಥದ್ದು ಎಂದು ಹೆಚ್ಚಾಗಿ ಭಾವಿಸಲಾಗಿದೆ, ಮತ್ತು ಸಾರ್ವಜನಿಕ ಹಿತದ ಅಸಂಖ್ಯಾತ ಗಮನಾರ್ಹ ಕಾರ್ಯಗಳಿಗೆ ಪ್ರೇರಣೆಯಾಗಿದೆ, ಮತ್ತು ಸಾಹಿತ್ಯ, ಸಂಗೀತ ಹಾಗೂ ಸಿನಿಮಾದ ಅನೇಕ ಪ್ರಸಿದ್ಧ ಉದಾಹರಣೆಗಳ ವಿಷಯವಾಗಿದೆ.

ಉಪನಿಷತ್ತುಗಳು, ಬ್ರಹ್ಮ ಸೂತ್ರಗಳು ಮತ್ತು ಭಗವದ್ಗೀತೆಯ ಸಾಹಿತ್ಯಿಕ ಪರಂಪರೆಗಳಲ್ಲಿ, ಆತ್ಮಸಾಕ್ಷಿಯು ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ಜ್ಞಾನವನ್ನು ರೂಪಿಸುವ, ಕ್ರಿಯೆಗಳ ಸಮಾಪ್ತಿಯಿಂದ ಮತ್ತು ಪರಿಣಾಮವಾಗಿ ಅನೇಕ ಜನ್ಮಗಳ ಉದ್ದಕ್ಕೂ ಕರ್ಮದ ಸಂಚಯದಿಂದ ಆತ್ಮವು ಪಡೆದುಕೊಳ್ಳುವ ಲಕ್ಷಣಗಳಿಗೆ ನೀಡಲಾದ ಗುರುತುಪಟ್ಟಿಯಾಗಿದೆ. ತಮ್ಮ ವಿವೇಕಚೂಡಾಮಣಿಯಲ್ಲಿ ಆದಿ ಶಂಕರರ ಪ್ರಕಾರ, ನೈತಿಕವಾಗಿ ಸರಿಯಾದ ಕಾರ್ಯ ಹೃದಯವನ್ನು ಶುದ್ಧವಾಗಿಸಲು ಮತ್ತು ಮಾನಸಿಕ ಶಾಂತಿಯನ್ನು ಒದಗಿಸಲು ನೆರವಾಗುತ್ತದೆ ಆದರೆ ಅದು ಒಂದೇ ನಮಗೆ ವಾಸ್ತವದ ನೇರ ಗ್ರಹಿಕೆಯನ್ನು ನೀಡುವುದಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. May, L. (1983). "On Conscience". American Philosophical Quarterly. 20: 57–67.