ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ
ಹೃದಯದ ಒಂದು ಭಾಗದಲ್ಲಿ ರಕ್ತಪರಿಚಲನೆ ಸಂಪೂರ್ಣವಾಗಿ ತಡೆಗಟ್ಟಲ್ಪಟ್ಟ ಮೇಲೆ ಉಂಟಾಗುವ ನಿರ್ಜೀವತ್ವದ ಫಲವಾಗಿ ಹೃದಯಕ್ಕೆ ಆದ ಪೆಟ್ಟು ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನೋವೇ ಅತ್ಯಂತ ಪ್ರಮುಖವಾಗಿ ತೇಲಿಬರುವ ಗುಣಲಕ್ಷಣ. ಇದರೊಡನೆ ಅನೇಕ ಬಾರಿ ರಕ್ತಪರಿಚಲನೆಯ ಕುಸಿತ ಅಥವಾ ಹೃದಯದ ಸೋಲುವಿಕೆಯ ಗುಣಲಕ್ಷಣಗಳು ತೋರಿಬರಬಹುದು.[೧][೨][೩]
ಹೃದಯಾಘಾತದಲ್ಲಿ ತೋರಿಬರುವ ನೋವಿನ ವೇದನೆ ಯಾವುದೇ ದೈಹಿಕ ಚಟುವಟಿಕೆಗಳಿಗೆ ನೇರ ಸಂಬಂಧವಿರುವುದಿಲ್ಲ. ದಿನದ ಯಾವ ಕಾಲದಲ್ಲಿ ಬೇಕಾದರೂ ಅದು ಕಾಣಿಸಿಕೊಳ್ಳಬಹುದು. ರಾತ್ರಿ ಮಲಗಿದ ವ್ಯಕ್ತಿ ನೋವಿನ ಬಾಧೆಯಿಂದ ಎಚ್ಚರಗೊಳ್ಳಬಹುದು. ನೋವಿನಿಂದ ಪ್ರಾರಂಭವಾದ ಗುಣಲಕ್ಷಣ ಎದೆಯಲ್ಲಿ ಕಸಿವಿಸಿಯಾದಂತೆ ತೋರಿ ತೀವ್ರವಾಗಿ ನೋವಿನ ಬಾಧೆ ವಿಪರೀತವಾಗುತ್ತದೆ. ನೋವು ತುಂಬಾ ತೀವ್ರವಾಗಿ ಬಹಳ ಹೊತ್ತು ಶಮನವಾಗದೆ ಉಳಿದಿರುತ್ತದೆ.
ಎದೆನೋವಿನ ಕರಾಳ ಹಿಡಿತಕ್ಕೆ ಸಿಲುಕಿ ಅದರ ವೇದನೆಯಿಂದ ರೋಗಿ ನಿಶ್ಚಲವಾಗಿ ಬಿದ್ದುಕೊಳ್ಳಬಹುದು. ಅಥವಾ ಕುಳಿತಲ್ಲಿ ಕುಳ್ಳಿರದೆ ಒದ್ದಾಡುತ್ತ ಅನೇಕಬಾರಿ ಪಕ್ಕಗಳನ್ನು ಬದಲಾಯಿಸುತ್ತ ಇರಬಹುದು. ಈ ಯಾವ ಕ್ರಿಯೆಗಳೂ ನೋವನ್ನು ಕಡಿಮೆ ಮಾಡುವುದಿಲ್ಲ.
ಕೆಲವು ಬಾರಿ ನೋವು ಇಲ್ಲದೆ ಏಕಾಏಕಿ ಉಬ್ಬಸ ಬಂದು ರೋಗಿ ಏದುಸಿರುಬಿಡುತ್ತ ಬಿದ್ದು ಹೋಗಬಹುದು. ದೇಹವೆಲ್ಲ ಬೆವರು ಹನಿಗಳಿಂದ ತುಂಬಿ ಮುಖ ಬಿಳಿಚಿಕೊಂಡಾಗ ಏಕಾಏಕಿ ಪ್ರಾಣಪಕ್ಷಿ ಹಾರಿಹೋಗುವ ಭಯ ಮನುಷ್ಯನಲ್ಲಿ ಉತ್ಪತ್ತಿಯಾಗುತ್ತದೆ. ಹೊಟ್ಟೆಯ ಮೇಲೂ ತೇಲಿ ಬರುವ ಈ ನೋವು ಅನೇಕ ಬಾರಿ ಜಠರದ ಹುಣ್ಣು (ಪೆಪ್ಟಿಕ್ ಅಲ್ಸರ್), ಪಿತ್ತಕೋಶದ ಉರಿ (ಕೇಲೆಸಿಸ್ಟೃಟಸ್) ಅಥವಾ ಮೇದೋಜೀರಕದ ಉರಿಯಂತೆ ತೋರಿಬರುವುದು. ಎದೆಯ ಎಡಭಾಗದಲ್ಲಿ ಉದ್ಭವವಾಗುವ ನೋವು ಗದ್ದದವರೆಗೆ ಹರಡಬಹುದು. ಎಡಭುಜಕ್ಕೆ ಹಬ್ಬಿ ಅಲ್ಲಿಂದ ಕೈಯವರೆಗೂ ಇಳಿಯಬಹುದು.
ನೋವಿನಿಂದ ಬಿಳಿಚಿಕೊಂಡ ರೋಗಿಯಲ್ಲಿ ನಾಡಿ ಬಡಿತ ತೀವ್ರಗೊಳ್ಳುವುದು. ರಕ್ತದ ಒತ್ತಡ ಕೆಳಗಿಳಿಯುವುದು.
ಹೃದಯಾಘಾತವಾದ ಮೇಲೆ ರೋಗಿಯ ಚಿಕಿತ್ಸೆಯನ್ನು ಮಾಡುವಾಗ ಪ್ರಥಮ ಚಿಕಿತ್ಸೆಯಾಗಿ ತೀವ್ರತರನಾದ ನೋವಿನ ಬಾಧೆಯನ್ನು ಶಮನ ಮಾಡುವುದು. ಹೃದಯದ ಕೆಲಸವನ್ನು ಕಡಿಮೆ ಮಾಡಿ ಪೂರ್ಣ ವಿಶ್ರಾಂತಿಯನ್ನು ನೀಡುವುದು ಮತ್ತು ಮುಂದಿನ ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ಸಾಗಿಸುವುದು.
ಹೃದಯಾಘಾತವಾದ ರೋಗಿಗಳನ್ನು ಸೌಮ್ಯ ಮತ್ತು ತೀವ್ರತೆರನೆಂದು ಪರಿಗಣಿಸಿದರೂ, ರೋಗಿಯ ಚಿಕಿತ್ಸಾ ವಿಧಾನದಲ್ಲಿ ಮಾತ್ರ ಒಂದೇ ರೀತಿಯ ಗಮನ ಕೊಡಬೇಕು. ತೀವ್ರತೆರನಾದ ಆಘಾತ ಜೀವನದ ಉಳಿವಿಕೆಗೆ ಅಪಾಯಕಾರಿಯಾದುದರಿಂದ ಹೆಚ್ಚು ಆಸ್ಥೆ ತೋರಿಸಬೇಕಾದರೂ, ಸೌಮ್ಯವೆಂದು ಪರಿಗಣಿಸಲ್ಪಟ್ಟ ಆಘಾತವೂ ತೀವ್ರತೆರನಾಗಬಹುದಾದುದರಿಂದ ಅಥವಾ ತೊಡಕುಗಳು ಉದ್ಭವಿಸುವ ಸಂಭವವಿರುವುದರಿಂದ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಸವನ್ನು ತೋರಿಸುವಂತಿಲ್ಲ.
ಹೃದಯವು ಅರಕ್ತತೆಯಿಂದ ತನಗಾದ ಪೆಟ್ಟನ್ನು ತೀವ್ರತೆರನಾದ ನೋವಿನ ಮೂಲಕ ಸೂಚಿಸುತ್ತದೆ. ರೋಗದ ಆದಿಭಾಗದಲ್ಲಿ ವಿಪರೀತ ನೋವಿನಿಂದ ವಿಶ್ರಾಂತಿ ಇಲ್ಲವೆ ಚಡಪಡಿಸುತ್ತಿರುವ ಅಥವಾ ಉಸಿರಾಟದ ತೀವ್ರತರ ತೊಂದರೆಯನ್ನು ಅನುಭವಿಸುತ್ತಿರುವ ರೋಗಿಯನ್ನು ನೋವಿನಿಂದ ರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ.
- ಅಫೀಮಿನ ಸತ್ವಾಂಶದಿಂದ ಸಿದ್ಧಪಡಿಸಿದ ಮಾರ್ಫಿನ್, ಪೆಥಿಡಿನ್, ಇಲ್ಲವೆ ಮೆಪೆಂಡಿನ್ ಅಥವಾ ಪೆಂಟಜೇಸಿನ್ ಚುಚ್ಚುಮದ್ದನ್ನು ನೋವನ್ನು ಗುರುತಿಸಿದ ಕೂಡಲೇ ಕೊಡಬೇಕು. ನೋವನ್ನು ಶಮನ ಮಾಡುವಲ್ಲಿ ಮಾರ್ಫಿನ್‌ಗಿಂತ ಮಿಗಿಲೆನಿಸಿದ ಔಷಧಿ ಇಲ್ಲ. ಅದು ನೋವನ್ನು ದೂರಮಾಡುವುದಲ್ಲದೆ ವ್ಯಾಕುಲತೆಯನ್ನು ಕಡಿಮೆ ಮಾಡುವುದು.
- ಪ್ರಥಮ ಚಿಕಿತ್ಸೆಯಲ್ಲಿ ರೋಗಿಗೆ ವಿಶ್ರಾಂತಿ ನೀಡುವುದೂ ಮಹತ್ವದ್ದು. ಹೃದಯಕ್ಕೆ ಪೆಟ್ಟು ಬಿದ್ದಾಗ ದೈಹಿಕ ಮತ್ತು ಮಾನಸಿಕವಾಗಿ ಸಂಪೂರ್ಣ ವಿಶ್ರಾಂತಿ ಅತ್ಯಗತ್ಯ. ವಿಶ್ರಾಂತಿಯಿಂದ ಹೃದಯದ ಬಡಿತ ನಿಧಾನಗೊಂಡು ಹೃದಯಕ್ಕೆ ಹೆಚ್ಚು ವಿಶ್ರಾಂತಿಯ ಸಮಯ ಲಭ್ಯವಾಗುವುದು.
- ರೋಗಿಗೆ ಆಕ್ಸಿಜನ್ ಗಾಳಿಗೆಯೊಂದನ್ನು ಕೊಟ್ಟು ರಕ್ತದ ಕಿರುಫಲಕಗಳು ಒಗ್ಗೂಡುವುದನ್ನು ತಪ್ಪಿಸಬೇಕು.
- ಕೂಡಲೇ ರೋಗಿಯನ್ನು ವೈದ್ಯರ ಬಳಿ ಕರೆದೊಯ್ದ, ರೋಗವನ್ನು ಖಚಿತಪಡಿಸಿಕೊಂಡು, ಹೃದಯದ ರಕ್ತಪರಿಚಲನವನ್ನು ಪುನರ್ ಪ್ರತಿಷ್ಠಾಪಿಸುವ ಕಾರ್ಯವನ್ನು ಕೈಗೊಳ್ಳಬೇಕು.
ಉಲ್ಲೇಖಗಳು
[ಬದಲಾಯಿಸಿ]