ಹುಮಾಯೂನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nasiruddin Humayun
Mughal Emperor
ರಾಜ್ಯಭಾರ26 December, 1530 - 17 May, 1540 ; 22 February, 1555 - 27 January, 1556
ಪಟ್ಟಧಾರಣೆ30 December, 1530 at Agra
ಪೂರ್ಣ ಹೆಸರುAl-Sultan al-'Azam wal Khaqan al-Mukarram, Jam-i-Sultanat-i-haqiqi wa Majazi, Sayyid al-Salatin, Abu'l Muzaffar Nasir ud-din Muhammad Humayun Padshah Ghazi, Zillu'llah
ಹುಟ್ಟು(೧೫೦೮-೦೩-೧೭)೧೭ ಮಾರ್ಚ್ ೧೫೦೮
ಹುಟ್ಟುಸ್ಥಳKabul
ಸಾವು27 January, 1556
ಸಾವಿನ ಸ್ಥಳDelhi
ಸಮಾಧಿ ಸ್ಥಳHumayun's Tomb
ಪೂರ್ವಾಧಿಕಾರಿBabur
ಉತ್ತರಾಧಿಕಾರಿAkbar
Consort toHamida Banu Begum

Bega Begum
Bigeh Begum
Haji Begum
Mah-chuchak
Miveh Jan

Shahzadi Khanum
ಸಂತತಿAkbar, son

Mirza Muhammad Hakim, son
Aqiqeh Begum, daughter
Bakshi Banu Begum, daughter

Bakhtunissa Begum, daughter
ಸಂತತಿHouse of Timur
ವಂಶTimurid
ತಂದೆBabur
ತಾಯಿMaham Begum
ಧರ್ಮSunni Islam

ನಾಸಿರ್ ಉದ್ದೀನ್ ಮಹಮ್ಮದ್‌ ಹುಮಾಯೂನ್‌ (ಪೂರ್ಣ ಹೆಸರು: ಅಲ್-ಸುಲ್ತಾನ್ ಅಲ್-ಅಜಮ್ ವಾಲ್ ಖಾಕನ್ ಅಲ್-ಮುಕರಾಮ್, ಜಾಮ್-ಇ-ಸುಲ್ತನಾತ್-ಇ-ಹಕಿಕಿ ವಾ ಮಜಾಜಿ, ಸಯಿದ್ ಅಲ್-ಸಾಲತಿನ್, ಅಬುಇಲ್ ಮುಜಾಫರ್ ನಾಸಿರ್ ಉದ್ದೀನ್ ಮಹಮ್ಮದ್‌ ಹುಮಾಯೂನ್‌ ಪಾದ್‌ಶಾ ಘಜಿ, ಜಿಲ್ಲುಲ್ಲಾಹ್ ) (ಪರ್ಷಿಯನ್:نصيرالدين همايون) (17 ಮಾರ್ಚ್ 1508– 4 ಮಾರ್ಚ್ 1556) (OS 7 ಮಾರ್ಚ್ 1508-OS 22 ಫೆಬ್ರವರಿ 1556) ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದ ಇತರ ಭಾಗಗಳನ್ನು 1530ರಿಂದ 1540ರವರೆಗೆ ಹಾಗೂ ಮತ್ತೆ 1555ರಿಂದ 1556ರವರೆಗೆ ಆಳಿದ ಎರಡನೇ ಮೊಘಲ್ ಚರ್ಕವರ್ತಿಯಾಗಿದ್ದಾನೆ. ತಂದೆ ಬಾಬರ್‌‌ನಂತೆ ಆತನೂ ಸಹ ಅವನ ರಾಜ್ಯವನ್ನು ಬಹುಬೇಗನೆ ಕಳೆದುಕೊಂಡನು. ಆದರೆ ಪರ್ಷಿಯನ್‌ ಸಹಾಯದೊಂದಿಗೆ, ಅವನು ಅಂತಿಮವಾಗಿ ಮತ್ತಷ್ಟು ದೊಡ್ಡ ಸಾಮ್ರಾಜ್ಯವನ್ನು ಪುನಃಪಡೆದನು. 1556ರಲ್ಲಿನ ಅವನ ಮರಣದ ಹಿಂದಿನ ದಿನದವರೆಗೆ ಮೊಘಲ್ ಸಾಮ್ರಾಜ್ಯವು ಒಂದು ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ಪ್ರದೇಶವನ್ನು ವ್ಯಾಪಿಸಿತ್ತು.

ತಂದೆಯ ನಂತರ ಆತನು 1530ರಲ್ಲಿ ಭಾರತದಲ್ಲಿ ಉತ್ತಾರಾಧಿಕಾರಿಯಾದನು. ಆ ಸಂದರ್ಭದಲ್ಲಿ ತೀವ್ರ ಎದುರಾಳಿಯಾದ ಅವನ ಮಲ-ಸಹೋದರ ಕಮ್ರಾನ್ ಮಿರ್ಜಾ, ಅವರ ತಂದೆಯ ಸಾಮ್ರಾಜ್ಯದ ಉತ್ತರದ ಭಾಗಗಳಾದ ಕಾಬುಲ್‌ ಮತ್ತು ಲಾಹೋರ್‌‌ನ ಪರಮಾಧಿಕಾರವನ್ನು ಪಡೆದಿದ್ದನು. ಅವನು ಆರಂಭದಲ್ಲಿ 22ನೇ ವಯಸ್ಸಿನಲ್ಲಿ ಸಿಂಹಾಸನವನ್ನೇರಿದನು ಹಾಗೂ ಅಧಿಕಾರಕ್ಕೆ ಬಂದಾಗ ಸ್ವಲ್ಪ ಅನುಭವ ಪಡೆದನು.

ಹುಮಾಯೂನ್‌ ಅವನ ಭಾರತದ ರಾಜ್ಯಗಳನ್ನು ಪಶ್ತೂನ್‌ ಕುಲೀನ ಶೇರ್ ಶಾ ಸೂರಿನಿಂದಾಗಿ ಕಳೆದುಕೊಂಡನು. ಹದಿನೈದು ವರ್ಷಗಳ ನಂತರ ಅವುಗಳನ್ನು ಪರ್ಷಿಯನ್‌ ಸಹಾಯದೊಂದಿಗೆ ಪುನಃಪಡೆದನು. ಪರ್ಷಿಯನ್‌ ಕುಲೀನರ ದೊಡ್ಡ ಪರಿವಾರವನ್ನು ಜತೆಗೂಡಿಸಿಕೊಂಡು ಹುಮಾಯೂನ್‌‌ ಪರ್ಷಿಯಾದಿಂದ ಹಿಂತಿರುಗಿದ ನಂತರ ಮೊಘಲ್‌ ಸಾಮ್ರಾಜ್ಯದ ಸಂಸ್ಕೃತಿಯಲ್ಲಿ ಪ್ರಮುಖ ಬದಲಾವಣೆಗಳಾದವು. ರಾಜಸಂತತಿಯ ಮಧ್ಯ ಏಷ್ಯಾ ಮೂಲಗಳು ಹೆಚ್ಚಾಗಿ ಪರ್ಷಿಯನ್‌ ಕಲೆ, ವಾಸ್ತುಶಿಲ್ಪ, ಭಾಷೆ ಮತ್ತು ಸಾಹಿತ್ಯದ ಪ್ರಭಾವಕ್ಕೆ ಒಳಗಾದವು.

ಆನಂತರ ಸ್ವಲ್ಪದರಲ್ಲೇ ಹುಮಾಯೂನ್‌ ಅವನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಲು ಸಮರ್ಥನಾದನು. ಆ ಮೂಲಕ ಅವನ ಮಗ ಅಕ್ಬರ್‌‌ಗೆ ಭಾರಿ ಆಸ್ತಿಯನ್ನು ಬಿಟ್ಟುಹೋದನು.

ಹಿನ್ನೆಲೆ[ಬದಲಾಯಿಸಿ]

ಬಾಬರ್‌ನ ತನ್ನ ಇಬ್ಬರು ಮಕ್ಕಳಿಗೆ ಅವನ ಸಾಮ್ರಾಜ್ಯದ ರಾಜ್ಯಗಳನ್ನು ಹಂಚುವ ನಿರ್ಧಾರವು ಭಾರತದಲ್ಲಿ ಅಸಾಮಾನ್ಯವಾಗಿತ್ತು. ಆದರೆ ಇದು ಮಧ್ಯ ಏಷ್ಯಾದಲ್ಲಿ ಗೆಂಘಿಸ್ ಖಾನ್‌‌ನ ಅವಧಿಯಿಂದ ಸಾಮಾನ್ಯ ಅಭ್ಯಾಸವಾಗಿತ್ತು. ಜ್ಯೇಷ್ಠಾಧಿಕಾರವು ಚಾಲ್ತಿಯಲ್ಲಿದ್ದ ಹೆಚ್ಚಿನ ಯುರೋಪಿನ ರಾಜಪ್ರಭುತ್ವಕ್ಕೆ ಭಿನ್ನವಾಗಿ, ಟಿಮುರಿಡ್‌ಗಳು (ಚೆಂ)ಗೆಂಘಿಸ್ ಖಾನ್‌ನ ಉದಾಹರಣೆಯನ್ನು ಅನುಸರಿಸಿಕೊಂಡು ಸಂಪೂರ್ಣ ರಾಜ್ಯವನ್ನು ಹಿರಿಯ ಮಗನಿಗೆ ಬಿಟ್ಟುಕೊಡಲಿಲ್ಲ. ಆ ವ್ಯವಸ್ಥೆಯಡಿಯಲ್ಲಿ ಕೇವಲ ಚಿಂಗಿಸಿಡ್‌ ಮಾತ್ರ ಸಾರ್ವಭೌಮತ್ವಕ್ಕೆ ಮತ್ತು ಖಾನಲ್ ಅಧಿಕಾರಕ್ಕೆ ವಾರಸುದಾರರಾಗಿದ್ದರೂ, ಉಪ-ವಿಭಾಗದ (ತೈಮೂರಿ)(ಟಿಮುರಿಡ್‌ಗಳು) ಯಾವುದೇ ಗಂಡು ಚಿಂಗಿಸಿಡ್‌ ಸಿಂಹಾಸನಕ್ಕೆ ಸಮಾನ ಹಕ್ಕನ್ನು ಹೊಂದಿರುತ್ತಾರೆ.[೧]. (ಚೆ)ಗೆಂಘಿಸ್ ಖಾನ್‌ನ ಸಾಮ್ರಾಜ್ಯವು ಆತನ ಮರಣದ ನಂತರ ಅವನ ಮಕ್ಕಳಿಗೆ ಸಮಾಧಾನಕರವಾಗಿ ಹಂಚಲಾಯಿತು. ಆನಂತರ ಹೆಚ್ಚುಕಡಿಮೆ ಎಲ್ಲಾ ಚಿಂಗಿಸಿಡ್ ಉತ್ತಾರಾಧಿಕಾರವನ್ನು ಹಂಚುವ ಪ್ರಕ್ರಿಯೆ ಸೋದರ ಕೊಲೆಗಳಿಗೆ ಕಾರಣವಾಯಿತು.[೨]

ಟಿಮುರ್ ಆತನ ರಾಜ್ಯಗಳನ್ನು ತಾನೇ ಪಿರ್ ಮಹಮ್ಮದ್‌, ಮಿರನ್ ಶಾ, ಖಲಿಲ್ ಸುಲ್ತಾನ್ ಮತ್ತು ಶಾ ರುಖ್ ಮೊದಲಾದವರಿಗೆ ಹಂಚಿದನು, ಇದು ಕುಟುಂಬದೊಳಗಿನ ಕಲಹಕ್ಕೆ ಕಾರಣವಾಯಿತು.[೧] ಬಾಬರ್‌ನ ಮರಣದ ನಂತರ ಹುಮಾಯೂನ್‌ನ ರಾಜ್ಯಗಳು ಅತಿ ಕಡಿಮೆ ಭದ್ರತೆ ಹೊಂದಿದ್ದವು. ಬಾಬರ್‌ ನಾಲ್ಕು ವರ್ಷಗಳ ಕಾಲ ಮಾತ್ರ ಆಳಿದನು. ಎಲ್ಲಾ ಉಮಾರಾಹ್ (ಕುಲೀನರು) ಹುಮಾಯೂನ್‌ನನ್ನು ನ್ಯಾಯವಾದ ಉತ್ತರಾಧಿಕಾರಿಯೆಂದು ಪರಿಗಣಿಸಲಿಲ್ಲ. ವಾಸ್ತವವಾಗಿ, ಬಾಬರ್‌ ಅನಾರೋಗ್ಯಕ್ಕೆ ಒಳಗಾದಾಗ ಕೆಲವು ಕುಲೀನರು ಹುಮಾಯೂನ್‌ನ ಮಾವನಾದ ಮಹ್ದಿ ಖ್ವಾಜನನ್ನು ಉತ್ತರಾಧಿಕಾರಿಯಾಗಿ ಮಾಡಲು ಪ್ರಯತ್ನಿಸಿದರು. ಈ ಪ್ರಯತ್ನವು ವಿಫಲವಾದರೂ, ಅದು ಮುಂದೆ ಸಮಸ್ಯೆಗಳು ಸಂಭವಿಸುವುದರ ಚಿಹ್ನೆಯಾಗಿತ್ತು.[೩]

ವೈಯಕ್ತಿಕ ವಿಶೇಷ ಸ್ವಭಾವ[ಬದಲಾಯಿಸಿ]

ಹುಮಾಯೂನ್‌ನ ಸಹೋದರಿ ಗುಲ್ಬದಾನ್ ಬೇಗಂ ಬರೆದ ಆತನ ಆತ್ಮಚರಿತ್ರೆ "ಹುಮಾಯೂನ್‌-ನಾಮಾ"ದಲ್ಲಿ ಅವನನ್ನು, ಆತನಿಗೆ ಕೋಪ ತರಿಸುವ ಕೆಲಸಗಳನ್ನು ಯಾವಾಗಲೂ ಕ್ಷಮಿಸುವ ಅಸಾಧಾರಣ ದಯಾಪರನಾಗಿ ನಿರೂಪಿಸಲಾಗಿದೆ. ಅವನ ತಮ್ಮ ಹಿಂದಾಲ್‌ ಹುಮಾಯೂನ್‌‌ನ ಆಪ್ತ ಸಲಹೆಗಾರ ಹಿರಿಯ ಶೇಖ್ನನ್ನು ಕೊಂದು, ಆನಂತರ ಸೈನ್ಯವನ್ನು ಆಗ್ರಾದಿಂದ ಹೊರಗೆ ನಡೆಸುವಂತೆ ಮಾಡಿದನು; ಎಂದು ಈ ಆತ್ಮಚರಿತ್ರೆಯು ಒಂದು ಸಂದರ್ಭದಲ್ಲಿ ಸೂಚಿಸುತ್ತದೆ. ಹುಮಾಯೂನ್‌ ಪ್ರತೀಕಾರ ತೀರಿಸುವ ಬದಲಿಗೆ ನೇರವಾಗಿ ಗುಲ್ಬದಾನ್ ಬೇಗಂ ಇದ್ದ ಅವನ ತಾಯಿಯ ಮನೆಗೆ ಹೋದನು. ತಮ್ಮನ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ, ಆತನಿಗೆ ಮನೆಗೆ ಹಿಂದಿರುಗುವಂತೆ ಸೂಚಿಸುವಂತೆ ತಾಯಿಗೆ ಹೇಳಿದನು. ದಾಖಲಾದ ಅವನ ಹೆಚ್ಚಿನ ದಯೆಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ದುರ್ಬಲತೆ ಬೇರೂರಿದೆ. ಆದರೆ ಅವನ ಅವಧಿಯ ಪ್ರಮಾಣಕಗಳಿಂದ ಅವನು ಸಾಧು ಮತ್ತು ದಯಾಪರನಾಗಿ ಕಂಡುಬರುತ್ತಾನೆ. ಆವನು ತಂದೆಯ ನಿಪುಣತೆ ಮತ್ತು ಅಂಗಸಾಧನೆಯ ಅಭ್ಯಾಸವನ್ನು ಹೊಂದಿರಲಿಲ್ಲ. ಅಸಾಧಾರಣ ಯೋಧನಾಗುತ್ತಿದ್ದರೂ ಅವನು ಆಯ್ಕೆಯ ಸಂದರ್ಭದಲ್ಲಿ ಆರಾಮವಾಗಿ ವಿಶ್ರಮಿಸುತ್ತಿದ್ದನು, ಮತ್ತು ಸೋಮಾರಿಯಾಗಿದ್ದನು.

ಅವನು ಅಧಿಕ ಮೂಢನಂಬಿಕೆಯುಳ್ಳನಾಗಿದ್ದನು, ಅಲ್ಲದೇ ಜ್ಯೋತಿಶ್ಶಾಸ್ತ್ರ ಮತ್ತು ಮಾಂತ್ರಿಕತೆಯಿಂದ ಹೆಚ್ಚು ಆಕರ್ಷಿತನಾಗಿದ್ದನು. ಪಾದಿಶಾ ನಾಗಿ (ಚಕ್ರವರ್ತಿ) ಅಧಿಕಾರಕ್ಕೆ ಬಂದ ನಂತರ ಅವನು ಆಡಳಿತವನ್ನು ಅತೀಂದ್ರಿಯವಾಗಿ ಕಂಡುಹಿಡಿಯ ನಿಯಮಗಳಲ್ಲಿ ಪುನಃಆಯೋಜಿಸಲು ಆರಂಭಿಸಿದನು. ಸಾರ್ವಜನಿಕ ಆಡಳಿತವನ್ನು ನಾಲ್ಕು ಘಟಕಗಳಿಗೆ ನಾಲ್ಕು ವಿಭಿನ್ನ ಗುಂಪುಗಳಾಗಿ ವಿಭಾಗಿಸಿದನು. ಭೂಮಿಯ ವಿಭಾಗವು ಕೃಷಿ ಮತ್ತು ಕೃಷಿ-ವಿಜ್ಞಾನಗಳ, ಬೆಂಕಿಯು ಮಿಲಿಟರಿಯ ಹಾಗೂ ನೀರು ಕಾಲುವೆಗಳ ಮತ್ತು ಜಲಮಾರ್ಗಗಳ ಮೇಲ್ವಿಚಾರಣೆಯನ್ನು ಹೊಂದಿತ್ತು. ಅಲ್ಲದೆ ಗಾಳಿಯು ಉಳಿದ ಬೇರೆಯದರ ಜವಾಬ್ದಾರಿಯನ್ನು ಒಳಗೊಂಡಿತ್ತು.(ಪಂಚ ಭೂತಗಳ ಬಗೆಗಿನ ಕಲ್ಪನೆ) ಅವನ ದೈನಂದಿನ ಕೆಲಸಗಳು ಮಾತ್ರವಲ್ಲದೆ ಅವನ ಉಡುಗೆತೊಡುಗೆಗಳೂ ಸಹ ಗ್ರಹಗಳ ಚಲನೆಯ ಆಧಾರದಲ್ಲಿ ಯೋಜಿಸಲಾಗುತ್ತಿತ್ತು. ಅವನು ಎಡಕಾಲನ್ನು ಮುಂದಿಟ್ಟುಕೊಂಡು ಮನೆಯೊಳಗೆ ಪ್ರವೇಶಿಸುವುದನ್ನು ನಿರಾಕರಿಸುತ್ತಿದ್ದನು, ಅದಲ್ಲದೇ ಯಾರಾದರೂ ಹಾಗೆ ಮಾಡಿದರೆ ಅವರನ್ನು ಹಿಂದಕ್ಕೆ ಹೋಗಿ ಮತ್ತೆ ಪ್ರವೇಶಿಸುವಂತೆ ಹೇಳುತ್ತಿದ್ದನು.

ಅವನ ಸೇವಕ ಜಾಹರ್ 'ತಾಧ್ಕಿರಾತ್ ಅಲ್-ವಕಿಯತ್‌'ನಲ್ಲಿ, ಆಕಾಶಕ್ಕೆ ಬಾಣಗಳನ್ನು ಬಿಟ್ಟು ಅವನ ಸ್ವಂತ ಹೆಸರನ್ನು ಅಥವಾ ಶಾ ಆಫ್ ಪರ್ಷಿಯಾನ ಹೆಸರನ್ನು ಬರೆಯಲು ಅವನು ಹೆಸರುವಾಸಿಯಾಗಿದ್ದನು; ಅಲ್ಲದೇ ಅವರು ಹೇಗೆ ಸಾಧಿಸಿದರು ಎಂಬುದರ ಆಧಾರದಲ್ಲಿ ಇದನ್ನು ಅವರಲ್ಲಿ ಯಾರು ಹೆಚ್ಚು ಪ್ರಬಲರಾಗುತ್ತಾರೆ ಎಂಬುದರ ಸೂಚನೆಯಾಗಿ ನಿರೂಪಿಸಲಾಗುತ್ತಿತ್ತು ಎಂದು ಹೇಳಿದ್ದಾನೆ. ಅವನು ವಿಪರೀತ ಕುಡಿಯುತ್ತಿದ್ದನು ಮತ್ತು ಅಫೀಮು ಗುಳಿಗೆಗಳನ್ನೂ ತೆಗೆದುಕೊಳ್ಳುತ್ತಿದ್ದನು. ಅವನ್ನು ಸೇವಿಸಿದ ನಂತರ ಕಾವ್ಯವನ್ನು ಪಠಿಸುತ್ತಿದ್ದನು. ಅವನು ಯುದ್ಧದ ಬಗ್ಗೆ ಹೆಚ್ಚು ಒಲವನ್ನು ಹೊಂದಿರಲಿಲ್ಲ. ಒಂದು ಯುದ್ಧದಲ್ಲಿ ಗೆದ್ದ ನಂತರ ದೊಡ್ಡ ಯುದ್ಧವು ಹೊರಗೆ ನಡೆಯುತ್ತಿದ್ದರೂ ಕೆಲವು ತಿಂಗಳು ಕಾಲ ಸುಭದ್ರ ನಗರದೊಳಗೆ ಕಳೆಯುತ್ತಿದ್ದನು.

ಆರಂಭಿಕ ಆಳ್ವಿಕೆ[ಬದಲಾಯಿಸಿ]

ಹುಮಾಯೂನ್‌ ಸಿಂಹಾಸನವನ್ನೇರಿದಾಗ ಅವನ ಪ್ರದೇಶಗಳನ್ನು ಪಡೆಯಲು ಆಸಕ್ತಿ ಹೊಂದಿದ್ದ ಇಬ್ಬರು ಪ್ರಮುಖ ಎದುರಾಳಿಗಳಿದ್ದರು — ಗುಜರಾತಿನ ಸುಲ್ತಾನ್ ಬಹಾದುರ್‌ ನೈಋತ್ಯ ಭಾಗಕ್ಕೆ ಮತ್ತು ಪ್ರಸ್ತುತ ಗಂಗಾ ನದಿಯಾದ್ಯಂತ ನೆಲೆಸಿರುವ ಬಿಹಾರ್‌ನ ಶೇರ್ ಶಾ ಸೂರಿ (ಶೇರ್ ಖಾನ್) ಪೂರ್ವಕ್ಕೆ. ಹುಮಾಯೂನ್‌ನ ಮೊದಲ ದಂದಯಾತ್ರೆ ಖಾನ್ ಸೂರಿಯ ವಿರುದ್ಧವಾಗಿತ್ತು. ಈ ದಾಳಿಯ ಮಧ್ಯದಲ್ಲೇ ಹುಮಾಯೂನ್‌ ಅದನ್ನು ಬಿಟ್ಟುಬಿಡಬೇಕಾಯಿತು, ಅಲ್ಲದೇ ಅಹ್ಮದ್ ಶಾ ಮಾಡಿದ ಬೆದರಿಕೆಯಿಂದಾಗಿ ಗುಜರಾತ್‌ನೆಡೆಗೆ ಗಮನ ಹರಿಸಬೇಕಾಯಿತು. ಇದರಲ್ಲಿ ಅವನು ಯಶಸ್ವಿಯಾದನು, ಅಲ್ಲದೇ ಗುಜರಾತ್ ಮತ್ತು ಮಾಲ್ವವನ್ನು ಸ್ವಾಧೀನಪಡಿಸಿಕೊಂಡನು. ಆನಂತರ ಚ್ಯಾಂಪನರ್ಅನ್ನು ಮತ್ತು ಮಾಂಡುವಿನ ಶ್ರೇಷ್ಠ ಕೋಟೆಯನ್ನು ವಶಪಡಿಸಿಕೊಂಡನು.

ಹುಮಾಯೂನ್‌ನ ಆಳ್ವಿಕೆಯ ಮೊದಲ ಐದು ವರ್ಷಗಳಲ್ಲಿ, ಸುಲ್ತಾನ್ ಬಹಾದುರ್‌ ಪೂರ್ವದಲ್ಲಿ ಪೋರ್ಚುಗೀಸರೊಂದಿಗಿನ ಆಗೊಮ್ಮೆ ಈಗೊಮ್ಮೆ ಸಂಭವಿಸುವ ಸಂಘರ್ಷಗಳಿಂದ ಒತ್ತಡವನ್ನು ಎದುರಿಸಿದರೂ, ಆ ಇಬ್ಬರು ರಾಜರು ಅವರ ಆಡಳಿತವನ್ನು ಗೋಪ್ಯವಾಗಿ ವಿಸ್ತರಿಸುತ್ತಿದ್ದರು. ಮೊಘಲರು ಒಟ್ಟೋಮನ್ ಸಾಮ್ರಾಜ್ಯದಿಂದ ಫಿರಂಗಿ, ಬಂದೂಕುಗಳನ್ನು ಪಡೆದರು. ಬಹಾದುರ್‌ನ ಗುಜರಾತ್ ಪೋರ್ಚುಗೀಸರೊಂದಿಗೆ ಮಾಡಿಕೊಂಡ ಒಪ್ಪಂದಗಳ ಸರಣಿಯಿಂದ ಅವರನ್ನು ವಶಕ್ಕೆ ತೆಗೆದುಕೊಂಡಿತು. ಪೋರ್ಚುಗೀಸರಿಗೆ ವಾಯುವ್ಯ ಭಾರತದಲ್ಲಿ ಯುದ್ಧಾನುಕೂಲದ ನೆಲೆಯನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿತು.[೪]

ಹುಮಾಯೂನ್‌ ಗುಜರಾತಿನ ಸುಲ್ತಾನ್ ಪೋರ್ಚುಗೀಸರ ಸಹಾಯದೊಂದಿಗೆ ಮೊಘಲ್‌ ರಾಜ್ಯಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾನೆಂಬುದನ್ನು ತಿಳಿದನು. ವಿಶೇಷ ಸ್ಥಿರನಿರ್ಧಾರದೊಂದಿಗೆ ಹುಮಾಯೂನ್‌ ಸೈನ್ಯವನ್ನು ಕಟ್ಟಿಕೊಂಡು ಬಹಾದುರ್‌ನ ಮೇಲೆ ದಾಳಿ ನಡೆಸಿದನು. ಅವನ ದಾಳಿಯು ಅತ್ಯತ್ಭುವಾಗಿತ್ತು. ಒಂದು ತಿಂಗಳೊಳಗೆ ಅವನು ಮಾಂಡು ಮತ್ತು ಚ್ಯಾಂಪನರ್‌ನ ಕೋಟೆಗಳನ್ನು ವಶಕ್ಕೆ ತೆಗೆದುಕೊಂಡನು. ಆಕ್ರಮಣವನ್ನು ಇನ್ನಷ್ಟು ತೀವ್ರಗೊಳಿಸಿ ಶತ್ರುವಿನ ವಿರುದ್ಧ ಹೋರಾಡುವ ಬದಲು ಹುಮಾಯೂನ್‌ ದಂಡಯಾತ್ರೆಯನ್ನು ಕೈಬಿಟ್ಟು, ಅವನ ಹೊಸ ಕೋಟೆಗಳಲ್ಲಿ ಸಂತೋಷದಿಂದಿರಲು ಆರಂಭಿಸಿದನು. ಆಸಂದರ್ಭದಲ್ಲಿ ಬಹಾದುರ್ ತಪ್ಪಿಸಿಕೊಂಡು ಹೋಗಿ, ಪೋರ್ಚುಗೀಸರಲ್ಲಿ ಆಶ್ರಯವನ್ನು ಪಡೆದನು.[೫]

ಶೇರ್ ಶಾ ಸೂರಿ[ಬದಲಾಯಿಸಿ]

ಶೇರ್ ಶಾ ಸೂರಿ

ಹುಮಾಯೂನ್‌ ಗುಜರಾತಿನೆಡೆಗೆ ಸಾಗಿದ ಸ್ವಲ್ಪದರಲ್ಲಿ ಶೇರ್ ಶಾ ಮೊಘಲರಿಂದ ಆಗ್ರಾವನ್ನು ವಶಪಡಿಸಿಕೊಳ್ಳುವ ಅವಕಾಶವನ್ನು ಪಡೆದನು. ಅವನು ಮೊಘಲ್‌ ರಾಜಧಾನಿಯ ಮೇಲಿನ ಶೀಘ್ರ ಮತ್ತು ದೃಢ ಆಕ್ರಮಣಕ್ಕಾಗಿ ತನ್ನ ಸೇನೆಯನ್ನು ಒಟ್ಟುಗೂಡಿಸಲು ಆರಂಭಿಸಿದನು. ಈ ಎಚ್ಚರಿಕೆಯ ಸುದ್ಧಿಯನ್ನು ಕೇಳಿದ ಹುಮಾಯೂನ್‌ ಶೀಘ್ರದಲ್ಲಿ ಅವನ ಸೈನ್ಯವನ್ನು ಆಗ್ರಾಕ್ಕೆ ಕಳುಹಿಸಿದನು. ಇದು ಬಹಾದುರ್‌ಗೆ ಹುಮಾಯೂನ್‌ ವಶಕ್ಕೆ ತೆಗೆದುಕೊಂಡಿದ್ದ ರಾಜ್ಯಗಳನ್ನು ಸುಲಭವಾಗಿ ಪುನಃಪಡೆಯಲು ಅವಕಾಶ ಮಾಡಿಕೊಟ್ಟಿತು. ಕೆಲವು ತಿಂಗಳ ನಂತರ, ಪೋರ್ಚುಗೀಸ್ ವೈಸ್‌ರಾಯ್‌ನನ್ನು ಅಪಹರಿಸುವ ಯೋಜನೆಯು ಗುಂಡು-ಹಾರಿಸುವ ಹೋರಾಟದಲ್ಲಿ ಕೊನೆಗೊಂಡಾಗ ಬಹಾದುರ್ ಸೋತು ಕೊಲ್ಲಲ್ಪಟ್ಟನು.

ಹುಮಾಯೂನ್‌ ಆಗ್ರಾವನ್ನು ಶೇರ್ ಶಾನಿಂದ ರಕ್ಷಿಸುವಲ್ಲಿ ಯಶಸ್ವಿಯಾದನು. ಆದರೆ ಬಂಗಾಳದ ವಿಲಾಯತ್ ‌ನ ರಾಜಧಾನಿ, ಸಾಮ್ರಾಜ್ಯದ ಎರಡನೆ ನಗರ ಗೌರ್‌ ಲೂಟಿಯಾಯಿತು. ಹಿಂಭಾಗದ ದಾಳಿಯಿಂದ ಅವನ ಸೈನ್ಯವನ್ನು ರಕ್ಷಿಸಲು ಹುಮಾಯೂನ್‌ನ ಸೈನ್ಯವು ಶೇರ್ ಶಾನ ಮಗನ ಸ್ವಾಧೀನದಲ್ಲಿದ್ದ ಕೋಟೆ ಚುನಾರ್ಅನ್ನು ವಶಪಡಿಕೊಳ್ಳುವಲ್ಲಿ ತಡಮಾಡಿತು. ಸಾಮ್ರಾಜ್ಯದಲ್ಲೇ ಅತಿದೊಡ್ಡದಾದ ಗೌರಿಯಲ್ಲಿನ ಧಾನ್ಯಗಳ ಸಂಗ್ರಹವು ದೋಚಲ್ಪಟ್ಟಿತು, ಅಲ್ಲದೇ ಹುಮಾಯೂನ್‌ ರಸ್ತೆಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಶವಗಳನ್ನು ನೋಡಲು ಬಂದಿದ್ದನು.[೬] ಶೇರ್ ಶಾನಿಗೆ ಭಾರಿ ಯುದ್ಧದ ಹೊಡೆತವನ್ನು ನೀಡಿ ಬಂಗಾಳದ ಅಪಾರ ಸಂಪತ್ತನ್ನು ಲೂಟಿಮಾಡಲಾಯಿತು.[೪]

ಶೇರ್ ಶಾ ಪೂರ್ವಕ್ಕೆ ಹಿಂದಿರುಗಿದನು, ಆದರೆ ಹುಮಾಯೂನ್‌ ಅವನನ್ನು ಹಿಂಬಾಲಿಸಲಿಲ್ಲ: ಬದಲಿಗೆ "ಅವನ ಹ್ಯಾರೆಮ್‌ನಲ್ಲಿ (ಪವಿತ್ರ ಸ್ಥಳ)ಹೆಚ್ಚು ಕಾಲ ಕಳೆದನು ಮತ್ತು ಸುಖವಿಲಾಸಗಳಲ್ಲಿ ಆಸಕ್ತನಾಗಿ ಉಳಿದನು".[೬] ಹುಮಾಯೂನ್‌ನ ಹತ್ತೊಂಭತ್ತು ವರ್ಷದ ಸಹೋದರ ಹಿಂದಾಲ್‌ ಈ ಯುದ್ಧದಲ್ಲಿ ಅವನಿಗೆ ನೆರವು ನೀಡಲು ಹಾಗೂ ದಾಳಿಯಿಂದ ಹಿಂಭಾಗದ ಸೈನ್ಯವನ್ನು ರಕ್ಷಿಸಲು ಒಪ್ಪಿದನು. ಆದರೆ ಅವನು ಅಧಿಕಾರವನ್ನು ತ್ಯಜಿಸಿ, ಆಗ್ರಾಕ್ಕೆ ಹಿಂದಿರುಗಿ, ಅಲ್ಲಿ ತನ್ನನ್ನು ತಾನು ಚಕ್ರವರ್ತಿಯೆಂದು ಘೋಷಿಸಿಕೊಂಡನು. ಹುಮಾಯೂನ್‌ ಪ್ರಧಾನ ಮಫ್ತಿ(ಧಾರ್ಮಿಕ ವಿಷಯಗಳಲ್ಲಿ ತೀರ್ಪುಕೊಡುವ ಅಧಿಕಾರವುಳ್ಳ ಮುಸಲ್ಮಾನ ಕಾನೂನುತಜ್ಞ) ಯಾದ ಶೇಖ್ ಬಹುಲ್‌ನನ್ನು ಅವನೊಂದಿಗೆ ಚರ್ಚಿಸುವುದಕ್ಕಾಗಿ ಕಳುಹಿಸಿದಾಗ, ಶೇಖ್ ಕೊಲ್ಲಲ್ಪಟ್ಟನು. ದಂಗೆಯನ್ನು ಮತ್ತಷ್ಟು ಉದ್ರೇಕಿಸಿ, ಹಿಂದಾಲ್‌ ಪರಮಾಧಿಕಾರ ಸ್ವೀಕಾರದ ಸಂಕೇತವಾಗಿ ಆಗ್ರಾದಲ್ಲಿನ ಪ್ರಮುಖ ಮಸೀದಿಯಲ್ಲಿ ಖುತ್ಬಾ ಅಥವಾ ಧರ್ಮೋಪದೇಶವನ್ನು ಅವನ ಹೆಸರಿನಲ್ಲಿ ಪಠಿಸುವಂತೆ ಆದೇಶಿಸಿದನು.[೫] ಹುಮಾಯೂನ್‌ನ ಸೈನ್ಯಕ್ಕೆ ಹಿಂಭಾಗದಿಂದ ರಕ್ಷಣೆ ನೀಡುವುದರಿಂದ ಹಿಂದಾಲ್‌ ಹಿಂದಕ್ಕೆ ಸರಿದಾಗ, ಶೇರ್ ಶಾನ ಸೇನೆಯು ಶೀಘ್ರದಲ್ಲಿ ಹುಮಾಯೂನ್‌ನನ್ನು ಸುತ್ತುಗಟ್ಟಿ ಈ ಪ್ರದೇಶಗಳನ್ನು ಪುನರ್ವಶಪಡಿಸಿಕೊಂಡಿತು.[೭]

ಹುಮಾಯೂನ್‌ನ ಮತ್ತೊಬ್ಬ ಸಹೋದರ ಕಮ್ರಾನ್‌ ಪಂಜಾಬ್‌ನಲ್ಲಿನ ಅವನ ರಾಜ್ಯಗಳಿಂದ ಕೇವಲ ತೋರಿಕೆಗಾಗಿ ಹುಮಾಯೂನ್‌ಗೆ ನೆರವು ನೀಡಲು ಸಾಗಿ ಬಂದನು. ಅವನ ಈ ತಾಯ್ನಾಡಿನ ಹಿಂದಿರುಗುವಿಕೆಯು ವಿಶ್ವಾಸಘಾತುಕ ಇರಾದೆಯನ್ನು ಹೊಂದಿತ್ತು. ಅವನು ಹುಮಾಯೂನ್‌ನ ಕುಸಿಯುತ್ತಿದ್ದ ಸಾಮ್ರಾಜ್ಯದ ಹೊಣೆಯ ಹಕ್ಕು ಕೇಳುವ ಉದ್ಧೇಶ ಹೊಂದಿದ್ದನು. ಅವನು ಹಿಂದಾಲ್‌ನೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದನು. ಅದರ ಪ್ರಕಾರ, ಹುಮಾಯೂನ್‌ ಒಮ್ಮೆ ಪದಚ್ಯುತಗೊಂಡ ನಂತರ ಕಮ್ರಾನ್ ರಚಿಸುವ ಹೊಸ ಸಾಮ್ರಾಜ್ಯದಲ್ಲಿನ ಒಂದು ಪಾಲಿಗೆ ಪ್ರತಿಯಾಗಿ ಅವನ ಸಹೋದರನು ನಿಷ್ಠೆಯಿಲ್ಲದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿತ್ತು.[೭]

ಶೇರ್ ಶಾ ಹುಮಾಯೂನ್‌ನನ್ನು ಚೌಸದಲ್ಲಿ ಬನಾರಸ್‌‌‌ನ ಹತ್ತಿರ ಗಂಗಾ ನದಿಯ ತೀರದ ಯುದ್ಧದಲ್ಲಿ ಎದುರಿಸಿದನು. ಈ ಯುದ್ಧದಲ್ಲಿ ಎರಡೂ ಕಡೆಯವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಂದಕಗಳನ್ನು ಅಗೆಯುವುದಕ್ಕಾಗಿ ಹೆಚ್ಚು ಸಮಯ ಕಳೆದರು. ಇದರಿಂದಾಗಿ ಮೊಘಲ್‌ ಸೈನ್ಯದ ಪ್ರಮುಖ ಭಾಗವಾದ ಫಿರಂಗಿದಳವು ನಿಶ್ಚಲವಾಗಿತ್ತು. ಹುಮಾಯೂನ್‌ ಮಹಮ್ಮದ್ ಆಜಿಜ್‌ನನ್ನು ರಾಯಭಾರಿಯಾಗಿ ಬಳಸಿಕೊಂಡು ರಾಜತಂತ್ರವನ್ನು ರೂಪಿಸಲು ನಿರ್ಧರಿಸಿದನು. ಹುಮಾಯೂನ್‌ ಶೇರ್ ಶಾನಿಗೆ ಬಂಗಾಳ ಮತ್ತು ಬಿಹಾರವನ್ನು ಆಳಲು ಅವಕಾಶ ಮಾಡಿಕೊಡಲು ಒಪ್ಪಿದನು. ಆದರೆ ಚಕ್ರವರ್ತಿ ಹುಮಾಯೂನ್‌ನಿಂದ ಪಡೆದ ಪ್ರಾಂತಗಳಿಗೆ ಆತನು ಸಂಪೂರ್ಣ ಸೌರ್ವಭೌಮತ್ವವನ್ನು ಹೊಂದಿಲ್ಲದಂತೆ ಮಾಡಲಾಗಿತ್ತು. ಇಬ್ಬರು ರಾಜರು ಮಾನ ಕಾಪಾಡಿಕೊಳ್ಳುವ ಸಲುವಾಗಿ ಒಪ್ಪಂದವೊಂದನ್ನು ಮಾಡಿಕೊಂಡರು. ಅದರ ಪ್ರಕಾರ ಹುಮಾಯೂನ್‌ನ ಸೈನ್ಯವು ಶೇರ್ ಶಾನ ಸೇನೆಯ ಮೇಲೆ ದಾಳಿ ಮಾಡಿದಾಗ, ಅವನ ಸೇನೆಯು ಭಯವನ್ನು ನಟಿಸಿಕೊಂಡು ಹಿಮ್ಮೆಟ್ಟಬೇಕು. ಆ ಮೂಲಕ ತಮ್ಮ ಗೌರವವನ್ನು ಕಾಪಾಡಿಕೊಂಡರು.[೮]

ಹುಮಾಯೂನ್‌ನ ಸೇನೆಯು ದಾಳಿ ಮಾಡಿದಾಗ, ಒಪ್ಪಂದ ಪ್ರಕಾರದಂತೆ ಶೇರ್ ಶಾನ ಸೈನ್ಯವು ಹಿಮ್ಮೆಟ್ಟಿತು, ಮೊಘಲ್‌ ಸೈನ್ಯವು ರಕ್ಷಣೆಯ ತಯಾರಿಗಳನ್ನು ಕಡಿಮೆ ಮಾಡಿತು ಮತ್ತು ಸರಿಯಾದ ರಕ್ಷೆಯಿಲ್ಲದೆ ಕಂದಕ ತೋಡುವಿಕೆಗೆ ಹಿಂದಿರುಗಿತು. ಮೊಘಲರ ಮೇಲೆ ದಾಳಿ ಮಾಡಲು ಅವಕಾಶವಿದ್ದುದನ್ನು ಗಮನಿಸಿದ ಶೇರ್ ಶಾ ಅವನ ಆರಂಭಿಕ ಒಪ್ಪಂದವನ್ನು ಮುರಿದನು. ಅದೇ ರಾತ್ರಿ ಅವನ ಸೈನ್ಯವು ಮೊಘಲರ ಪಾಳೆಯವನ್ನು ತಲುಪಿತು. ಅಲ್ಲಿ ಹೆಚ್ಚಿನವರು ಮಲಗಿದ್ದು, ದಾಳಿಗೆ ತಯಾರಾಗಿರದಿದ್ದ ಮೊಘಲ್‌ ಸೈನ್ಯವನ್ನು ಕಂಡು, ಸೈನ್ಯವು ಆಕ್ರಮಣ ಮಾಡಿತು ಮತ್ತು ಹಲವರನ್ನು ಸಾಯಿಸಿತು. ಹುಮಾಯೂನ್ ಚಕ್ರವರ್ತಿಯು ಗಾಳಿ ತುಂಬಿದ "ನೀರನ್ನು-ತುಂಬುವ-ತೊಗಲಚೀಲ"ವನ್ನು ಬಳಸಿಕೊಂಡು ಗಂಗಾ ನದಿಯಲ್ಲಿ ಈಜಿಕೊಂಡು ಹೋಗಿ, ಆಗ್ರಾವನ್ನು ತಲುಪಿದನು.[೪][೭]

ಆಗ್ರಾದಲ್ಲಿ[ಬದಲಾಯಿಸಿ]

ಹುಮಾಯೂನ್‌ ಆಗ್ರಾಕ್ಕೆ ಹಿಂದಿರುಗಿದಾಗ, ಅವನ ಎಲ್ಲಾ ಸಹೋದರರು ಅಲ್ಲಿರುವುದನ್ನು ಕಾಣುತ್ತಾನೆ. ಹುಮಾಯೂನ್‌ ಅವನ ವಿರುದ್ಧ ಸಂಚು ಹೂಡಿದ ಸಹೋದರರನ್ನು ಮತ್ತೊಮ್ಮೆ ಕ್ಷಮಿಸಿದ್ದು ಮಾತ್ರವಲ್ಲದೆ, ನೇರವಾಗಿ ನಂಬಿಕೆದ್ರೋಹ ಮಾಡಿದ ಹಿಂದಾಲ್‌ನನ್ನೂ ಮನ್ನಿಸಿದನು. ಸೈನ್ಯವನ್ನು ನಿಧಾನವಾಗಿ ಮುಂದುವರಿಸುತ್ತಾ ಶೇರ್ ಶಾ ಕ್ರಮೇಣ ಆಗ್ರಾದ ಹತ್ತಿರಕ್ಕೆ ಬಂದನು. ಇದು ಸಂಪೂರ್ಣ ಕುಟುಂಬಕ್ಕೆ ಗಂಭೀರ ಅಪಾಯವೊಂದರ ಸೂಚನೆಯಾಗಿತ್ತು. ಆದರೆ ಹುಮಾಯೂನ್‌ ಮತ್ತು ಕಮ್ರಾನ್‌ ಹೇಗೆ ಮುಂದುವರಿಯಬೇಕೆಂಬುದರ ಬಗ್ಗೆ ಜಗಳವಾಡತೊಡಗಿದರು. ಹುಮಾಯೂನ್‌ ಮುಂದೇ ಸಾಗಿ ಬರುತ್ತಿದ್ದ ಶತ್ರುವಿನ ಮೇಲೆ ಶೀಘ್ರದ ದಾಳಿಯನ್ನು ನಡೆಸಲು ನಿರಾಕರಿಸಿ, ಬದಲಿಗೆ ಅವನ ಸ್ವಂತ ಹೆಸರಿನಡಿಯಲ್ಲಿ ದೊಡ್ಡ ಸೈನ್ಯವೊಂದನ್ನು ರಚಿಸಲು ನಿರ್ಧರಿಸಿದಾಗ ಕಮ್ರಾನ್‌ ಹಿಂದಕ್ಕೆ ಸರಿದನು. ಕಮ್ರಾನ್‌ ಲಾಹೋರ್‌ಗೆ ಹಿಂದಿರುಗಿದಾಗ, ಅವನ ಸೈನ್ಯವೂ ಸ್ವಲ್ಪ ಸಮಯದ ನಂತರ ಅವನನ್ನು ಹಿಂಬಾಲಿಸಿತು. ಹುಮಾಯೂನ್ ಅವನ ಸಹೋದರರಾದ ಆಸ್ಕರಿ ಮತ್ತು ಹಿಂದಾಲ್‌‌ರೊಂದಿಗೆ 1540ರ ಮೇ 17ರಂದು ಕನೌಜ್‌ ಯುದ್ಧದಲ್ಲಿ ಶೇರ್ ಶಾನನ್ನು ಎದುರಿಸುವುದಕ್ಕಾಗಿ 240 ಕಿಲೋಮೀಟರ್‌ಗಳಷ್ಟು (150 ಮೈಲ್‌ಗಳು) ಆಗ್ರಾದ ಪೂರ್ವಕ್ಕೆ ಸಾಗಿದನು. ಈ ಯುದ್ಧದಲ್ಲೂ ಹುಮಾಯೂನ್‌ ಮತ್ತೊಮ್ಮೆ ಯುದ್ಧತಂತ್ರದ ತಪ್ಪುಗಳನ್ನು ಮಾಡಿದನು. ಇದರಿಂದಾಗಿ ಅವನ ಸೈನ್ಯವು ಹೀನಾಯ ಸೋಲನ್ನು ಕಂಡಿತು. ಆತ ಮತ್ತು ಆತನ ಸಹೋದರರು ಶೀಘ್ರದಲ್ಲಿ ಹಿಮ್ಮೆಟ್ಟಿ ಆಗ್ರಾಕ್ಕೆ ಹಿಂದಿರುಗಿದರು. ದಾರಿಯುದ್ದಕ್ಕೂ ಒಕ್ಕಲಿಗರಿಂದ ಮತ್ತು ಹಳ್ಳಿಗರಿಂದ ಅವಮಾನ ಮತ್ತು ಅಪಹಾಸ್ಯಕ್ಕೆ ಒಳಗಾದರು. ಆದ್ದರಿಂದ ಅವರು ಆಗ್ರಾದಲ್ಲಿ ನೆಲೆಸಬಾರದೆಂದು ನಿರ್ಧರಿಸಿ ಲಾಹೋರ್‌ಗೆ ಹಿಂತಿರುಗಿದರು. ಆದರೂ ಶೇರ್ ಶಾ ಅವರನ್ನು ಹಿಂಬಾಲಿಸಿದನು. ನಂತರ ಉತ್ತರ ಭಾರತದಲ್ಲಿ ಅಲ್ಪ-ಕಾಲವಿದ್ದ ಸೂರ್ ರಾಜಸಂತತಿಯನ್ನು ದೆಹಲಿಯಲ್ಲಿ ರಾಜಧಾನಿಯನ್ನು ಹೊಂದುವುದರೊಂದಿಗೆ ಸ್ಥಾಪಿಸಿದನು.

ಲಾಹೋರ್‌ನಲ್ಲಿ[ಬದಲಾಯಿಸಿ]

ನಾಲ್ಕು ಮಂದಿ ಸಹೋದರರೂ ಲಾಹೋರ್‌ನಲ್ಲಿ ಒಂದುಗೂಡಿದರು. ಆದರೆ ಶೇರ್ ಶಾ ಹತ್ತಿರಕ್ಕೆ ಬರುತ್ತಿದ್ದಾನೆಂಬ ವಿಷಯವನ್ನು ಅವರು ಪ್ರತಿದಿನ ಪಡೆಯುತ್ತಿದ್ದರು. ಅವನು ಸಿರ್ಹಿಂದ್ ತಲುಪಿದಾಗ, ಹುಮಾಯೂನ್‌ ಈ ಸಂದೇಶದೊಂದಿಗೆ ರಾಯಭಾರಿಯೊಬ್ಬನನ್ನು ಕಳುಹಿಸಿದನು. - "ನಾನು ನಿನಗೆ ಸಂಪೂರ್ಣ ಹಿಂದುಸ್ತಾನವನ್ನು (ಅಂದರೆ ಗಂಗಾ ಕಣಿವೆಯ ಹೆಚ್ಚಿನ ಭಾಗಗಳನ್ನು ಒಳಗೊಂಡು, ಪಂಜಾಬ್‌ನ ಪೂರ್ವದ ಪ್ರದೇಶಗಳು) ಬಿಟ್ಟು ಕೊಟ್ಟಿದ್ದೇನೆ. ಲಾಹೋರ್‌ ಒಂದನ್ನು ಮಾತ್ರ ಬಿಟ್ಟು ಬಿಡು. ಸಿರ್ಹಿಂದ್ ನಿನ್ನ ಮತ್ತು ನನ್ನ ಮಧ್ಯೆ ಗಡಿಯಾಗಿರಲಿ." ಆದರೆ ಶೇರ್ ಶಾ ಹೀಗೆಂದು ಉತ್ತರಿಸಿದನು - "ನಾನು ನಿನಗೆ ಕಾಬುಲ್ಅನ್ನು ಬಿಟ್ಟು ಕೊಟ್ಟಿದ್ದೇನೆ‌. ನೀನು ಅಲ್ಲಿಗೆ ಹೋಗಬೇಕು." ಕಾಬುಲ್‌ ಹುಮಾಯೂನ್‌ನ ಸಹೋದರ ಕಮ್ರಾನ್ ಮಿರ್ಜಾನ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಕಮ್ರಾನ್ ಅವನ ರಾಜ್ಯಗಳಲ್ಲಿ ಯಾವುದೊಂದನ್ನೂ ಸಹೋದರನೊಂದಿಗೆ ಹಂಚಿಕೊಳ್ಳುವುದು ಬಹುದೂರದ ಮಾತಾಗಿತ್ತು. ಬದಲಿಗೆ ಕಮ್ರಾನ್‌ ಶೇರ್ ಶಾನಲ್ಲಿಗೆ ಹೋಗಿ, ಅವನ ಸಹೋದರರ ವಿರುದ್ಧ ಪ್ರತಿಭಟಿಸಿ ಪಂಜಾಬ್‌ನ ಹೆಚ್ಚಿನ ಭಾಗವನ್ನು ಪಡೆಯುವುದಕ್ಕಾಗಿ ಶೇರ್ ಶಾನಿಗೆ ಬೆಂಬಲ ನೀಡುತ್ತೇನೆಂದು ಪ್ರಸ್ತಾಪಿಸಿದನು. ಅವನ ಸಹಾಯ ಅವಶ್ಯಕತೆ ಇಲ್ಲವೆಂದು ತಿಳಿದು ಶೇರ್ ಶಾ ನಿರಾಕರಿಸಿದನು. ಆದರೆ ಆ ವಿಶ್ವಾಸಘಾತುಕದ ಪ್ರಸ್ತಾಪವು ವೇಗವಾಗಿ ಲಾಹೋರ್‌ಗೆ ಹರಡಿತು ಹಾಗೂ ಹುಮಾಯೂನ್‌ ಕಮ್ರಾನ್‌ನನ್ನು ಕೊಲ್ಲುವಂತೆ ಪ್ರೇರೇಪಿಸಿತು. ಹುಮಾಯೂನ್‌‌ನ ತನ್ನ ತಂದೆ ಬಾಬರ್‌ನ "ನಿನ್ನ ಸಹೋದರರು ಶಿಕ್ಷೆ ಅರ್ಹರಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡ" ಎಂಬ ಕೊನೆಯ ವಾಕ್ಯವನ್ನು ಅಲ್ಲಗಳೆಯುತ್ತಿದ್ದನು.[೯]

ಮತ್ತೊಮ್ಮೆ ಮುಂದುವರಿಯದೇ ಹಿಂದಿರುಗುವಿಕೆ[ಬದಲಾಯಿಸಿ]

ಹುಮಾಯೂನ್‌ ಮತ್ತೆ ಹಿಂದಿರುಗುವುದು ಉತ್ತಮವೆಂದು ನಿರ್ಧರಿಸಿದನು. ಅವನು ಮತ್ತೆ ಸಿಂಧ್‌ಗೆ ಹಿಂದಿರುಗುವುದರಿಂದ ಸಹೋದರರನ್ನು ಸೇರಿಕೊಳ್ಳುವಂತೆ ಕೇಳಿಕೊಂಡನು. ಹಿಂದೆ ಅವಿಧೇಯನಾಗಿದ್ದ ಹಿಂದಾಲ್‌ ರಾಜನಿಷ್ಠೆಯನ್ನು ತೋರಿಸಿದನು. ಆದರೆ ಕಮ್ರಾನ್‌ ಮತ್ತು ಆಸ್ಕರಿ ಕಾಬುಲ್‌ನ ಶಾಂತಿಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಿದರು. ಇದು ಕುಟಂಬದಲ್ಲಿ ಒಡಕಿಗೆ ಕಾರಣವಾಯಿತು.

ಹುಮಾಯೂನ್‌ ಅವನಿಂದ ನೇಮಕ ಮಾಡಲ್ಪಟ್ಟ ಮತ್ತು ಅವನಿಗೆ ರಾಜನಿಷ್ಠೆಯನ್ನು ತೋರಿಸಿದ ಸಿಂಧ್‌ನ ಅಮಿರ್‌ನಿಂದ ನೆರವನ್ನು ನಿರೀಕ್ಷಿಸಿದನು. ಅಮಿರ್ ಹುಸೇನ್ ಹುಮಾಯೂನ್‌‌ಗೆ ಇರಲು ಅವಕಾಶ ಮಾಡಿಕೊಟ್ಟಿದ್ದಾಗ, ಅವನು ಶೇರ್ ಶಾನ ವಿರುದ್ಧ ಸೈನ್ಯವನ್ನು ಕಳುಹಿಸುವುದರಿಂದ ಸಾಕಷ್ಟು ಹಾನಿಯಾಗುತ್ತದೆಂದು ತಿಳಿದಿದ್ದನು. ಆದ್ದರಿಂದ ಅವನು ಸೈನ್ಯದ ನೆರವಿಗಾಗಿ ಹುಮಾಯೂನ್‌ ಮಾಡಿದ ಎಲ್ಲಾ ಕೋರಿಕೆಗಳನ್ನು ವಿನಯಪೂರ್ವಕವಾಗಿ ನಿರಾಕರಿಸಿದನು. ಸಿಂಧ್‌ನಲ್ಲಿದ್ದಾಗ ಹುಮಾಯೂನ್‌ ಹಮಿದಾಳನ್ನು ಭೇಟಿಯಾಗಿ ವಿವಾಹವಾದನು. ಆಕೆ 1541ರ ಆಗಸ್ಟ್‌ 21ರಂದು ಅಕ್ಬರ್‌‌ನಿಗೆ ತಾಯಿಯಾದಳು. ಹುಮಾಯೂನ್‌ ಗ್ರಹಗಳ ಸ್ಥಾನವನ್ನು ಪರಿಶೀಲಿಸಲು ತಾರೋನ್ನತಿ ಮಾಪಕವನ್ನು(ತನ್ನ ಭವಿಷ್ಯಗಾರರನ್ನು) ಸಂಪರ್ಕಿಸಿದ ನಂತರ ದಿನಾಂಕವನ್ನು ಆರಿಸಿದನು.

ರಾವ್ ಮಾಲ್ಡಿಯೊ ರಾಥೋರ್ ಕುಗ್ಗಿದ ಮೊಘಲ್‌ ಸೇನೆಯೊಂದಿಗೆ ಮೈತ್ರಿಯನ್ನು ಮಾಡಿಕೊಂಡನು.

1542ರ ಮೇಯಲ್ಲಿ ಜೋಧ್‌ಪುರದ ರಾಜ ರಾವ್ ಮಾಲ್ಡಿಯೊ ರಾಥೋರ್ ಶೇರ್ ಶಾನ ವಿರುದ್ಧ ಮೈತ್ರಿಯೊಂದನ್ನು ರೂಪಿಸುವುದಕ್ಕಾಗಿ ಹುಮಾಯೂನ್‌ಗೆ ಕೋರಿಕೆಯನ್ನು ಸಲ್ಲಿಸಿದನು. ಆದ್ದರಿಂದ ಹುಮಾಯೂನ್‌ ಮತ್ತು ಅವನ ಸೈನಿಕರು ರಾಜನನ್ನು ಭೇಟಿಯಾಗಲು ಮರುಭೂಮಿಯ ಮೂಲಕ ಸಾಗಿಹೋಗುತ್ತಿದ್ದರು ಅವರು ಮರುಭೂಮಿಯಲ್ಲಿ ಸಾಗುತ್ತಿದ್ದಾಗ ರಾಜನು ಹುಮಾಯೂನ್‌ನ ಸೈನ್ಯವು ಎಷ್ಟೊಂದು ದುರ್ಬಲವಾಗಿದೆಯೆಂಬುದನ್ನು ತಿಳಿದನು. ಇದರ ಜೊತೆಗೆ ಶೇರ್ ಶಾ ಅವನಿಗೆ ಹೆಚ್ಚು ಅನುಕೂಲಕರವಾದ ಕರಾರುಗಳನ್ನು ಒದಗಿಸಿದನು. ಆದ್ದರಿಂದ ಅವನು ಹುಮಾಯೂನ್‌ನನ್ನು ಭೇಟಿಯಾಗಲು ಬಯಸುವುದಿಲ್ಲವೆಂದು ಕಳುಹಿಸಿದನು. ಆಸಂದರ್ಭದಲ್ಲಿ ಅವನು ರಾಜ್ಯದಿಂದ 80 ಕಿಮೀಗಿಂತಲೂ (50 ಮೈಲುಗಳು) ಕಡಿಮೆ ದೂರದಲ್ಲಿದ್ದನು. ಅದರಿಂದಾಗಿ ಹುಮಾಯೂನ್‌ ಮತ್ತು ಅವನ ಸೈನ್ಯ ಹಾಗೂ ಅವನ ತುಂಬುಗರ್ಭಿಣಿ ಪತ್ನಿಯು ಆ ಬಿಸಿ ಮರುಭೂಮಿಯಲ್ಲಿ ಬಂದ ದಾರಿಯಲ್ಲೇ ಹಿಂದಕ್ಕೆ ಹೋಗಬೇಕಾಯಿತು. ಹುಮಾಯೂನ್‌ನ ಸೈನಿಕರು ಅನೇಕ ಹಸುಗಳನ್ನು (ಹಿಂದುಗಳ ಪೂಜನೀಯ ಪ್ರಾಣಿ) ಸಾಯಿಸಿದರಿಂದ, ಹತ್ತಿರದ ನಿವಾಸಿಗರು ಎಲ್ಲಾ ಬಾವಿಗಳನ್ನು ಮರಳಿನಿಂದ ತುಂಬಿದರು. ಇದರಿಂದಾಗಿ ಅವರಿಗೆ ತಿನ್ನಲು ಬೆರಿಹಣ್ಣನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಹಮಿದಾಳ ಕುದುರೆಯು ಸತ್ತಾಗ, ರಾಣಿಗೆ (ಆಗ ಎಂಟು ತಿಂಗಳ ಗರ್ಭಿಣಿಯಾಗಿದ್ದಳು) ನೆರವು ನೀಡಲು ಯಾರೂ ಮುಂದೆ ಬರಲಿಲ್ಲ. ಆದ್ದರಿಂದ ಹುಮಾಯೂನ್‌ ತಾನಾಗೇ ಸಹಾಯ ಮಾಡುವಂತಾಗಿ, ಆರು ಕಿಲೋಮೀಟರ್‌ಗಳವರೆಗೆ (ನಾಲ್ಕು ಮೈಲುಗಳು) ಒಂಟೆಯೊಂದರೆ ಮೇಲೆ ಸವಾರಿ ಮಾಡಿದನು. ಆನಂತರ ಖಾಲೆದ್ ಬೆಗ್ ಅವನ ಸವಾರಿ ಕುದುರೆಯನ್ನು ನೀಡಿದನು. ಹುಮಾಯೂನ್‌ ನಂತರ ಈ ಸಂದರ್ಭವನ್ನು ಅವನ ಜೀವನದಲ್ಲೇ ಅತ್ಯಂತ ಕೆಟ್ಟ ದಿನಗಳೆಂದು ವಿವರಿಸಿದ್ದಾನೆ. ಅವನು ಹಿಂದಾಲ್‌ಗೆ ಕಂದಹಾರ್‌ನಲ್ಲಿ ಅವನ ಸಹೋದರರನ್ನು ಸೇರಿಕೊಳ್ಳುವಂತೆ ಆದೇಶಿಸಿದನು.

ಹುಮಾಯೂನ್‌ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಂಧ್‌ನ ಅಮಿರ್ ಹುಸೇನ್ ಹುಮಾಯೂನ್‌ ಬಗೆಗಿನ ನಿರ್ಧಾರವನ್ನು ಬದಲಿಸುವಂತೆ ರಾಜನನ್ನು ಪ್ರೇರೇಪಿಸಿ ಮಾಲ್ಡಿಯೊನ ತಂದೆಯನ್ನು ಕೊಲ್ಲುತ್ತಾನೆ. ಅವನು ಮರುಭೂಮಿಯ ಓಯಸಿಸ್‌ಅನ್ನು ಒಳಗೊಂಡ ಸಣ್ಣ ನಗರ ಉಮರ್ಕೋಟ್‌ನಲ್ಲಿ ಹುಮಾಯೂನ್‌ನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. ಅದರಿಂದ ಹುಮಾಯೂನ್‌ ಸಂಪೂರ್ಣ ಉಪಚಾರಗಳನ್ನು ಪಡೆದನು. ಸಿಂಧ್‌ನ ವಿರುದ್ಧ ಮೈತ್ರಿಯನ್ನು ರೂಪಿಸಿದರಿಂದ ಅವನಿಗೆ ಹೊಸ ಕುದುರೆ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಲಾಯಿತು. ಉಮರ್ಕೋಟ್‌ ಈ ಯುದ್ಧದ ಕಾರ್ಯಾಚರಣೆಗಳಿಗೆ ಕೇಂದ್ರ ಸ್ಥಾನವಾಯಿತು. ಅಲ್ಲಿ 1542ರ ನವೆಂಬರ್ 23ರಂದು 15 ವರ್ಷದ ಹಮೀದಾ ಅವಳ ಮೊದಲ ಮಗುವಿಗೆ ಜನ್ಮ ನೀಡಿದಳು. 34 ವರ್ಷದ ಹುಮಾಯೂನ್‌ನ ಉತ್ತರಾಧಿಕಾರಿಯಾದ ಆ ಮಗುವನ್ನು ಅವರು ಜಲಾಲುದ್ದಿನ್ (ನಂತರ ಅಕ್ಬರ್) ಎಂದು ಕರೆದರು.

ಕಾಬುಲ್‌ಗೆ ಹಿಮ್ಮೆಟ್ಟುವಿಕೆ‌?[ಬದಲಾಯಿಸಿ]

ಸಿಂಧ್‌ನ ವಿರುದ್ಧದ ಯುದ್ಧವು ಇಕ್ಕಟ್ಟಿನ ಸ್ಥಿತಿಗೆ ಕಾರಣವಾಯಿತು, ಆದ್ದರಿಂದ ಹುಸೇನ್ ಪ್ರದೇಶವನ್ನು ಬಿಟ್ಟುಹೋಗಲು ಹುಮಾಯೂನ್‌‌ಗೆ ಲಂಚಕೊಡಲು ನಿರ್ಧರಿಸಿದನು. ಹುಮಾಯೂನ್‌ ಇದಕ್ಕೆ ಒಪ್ಪಿ, ಮುನ್ನೂರು ಒಂಟೆಗಳು (ಹೆಚ್ಚಿನವು ಪಳಗಿಸಿಲ್ಲದವು) ಮತ್ತು ಎರಡು ಸಾವಿರ ಧಾನ್ಯದ ಹೊರೆಗಳನ್ನು ಪಡೆದು, ಇಂದುಸ್‌ಅನ್ನು 1543ರ ಜುಲೈ 11ರಂದು ದಾಟಿ, ಕಂದಾಹಾರ್‌ನಲ್ಲಿ ಅವನ ಸಹೋದರರನ್ನು ಸೇರಿಕೊಂಡನು.

ಕಮ್ರಾನ್‌ನ ರಾಜ್ಯದಲ್ಲಿ, ಕಮ್ರಾನ್‌ನ ಹೆಸರಿನಲ್ಲಿ ನಿರೂಪಿಸಲಾಗಿದ್ದ ಖುತ್ಬಾ ವನ್ನು (ಶುಕ್ರವಾರದ ಪ್ರಾರ್ಥನೆ ಸಂಭ್ರಮ) ನಿರಾಕರಿಸಿದುದಕ್ಕಾಗಿ ಹಿಂದಾಲ್‌ನನ್ನು ಕಾಬುಲ್‌ನಲ್ಲಿ ಗೃಹ ಬಂಧನದಲ್ಲಿಡಲಾಗಿತ್ತು. ಆಗ ಅವನ ಮತ್ತೊಬ್ಬ ಸಹೋದರ ಆಸ್ಕರಿಯು ಸೈನ್ಯವನ್ನು ಒಂದುಗೂಡಿಸಿಕೊಂಡು, ಹುಮಾಯೂನ್‌ನ ವಿರುದ್ಧ ಮುಂದುವರಿದನು. ಶತ್ರುವಿನ ಸೇನೆಯು ದಂಡೆತ್ತಿ ಬರುತ್ತಿದೆ ಎಂಬ ಸುದ್ಧಿಯನ್ನು ತಿಳಿದ ಹುಮಾಯೂನ್‌ ಅವರನ್ನು ಎದುರಿಸುವ ಬದಲಿಗೆ ಬೇರೆಡೆಯಲ್ಲಿ ಆಶ್ರಯ ಹುಡುಕುವ ನಿರ್ಧಾರ ಮಾಡಿದನು. ಆಗ ಡಿಸೆಂಬರ್‌ ತಿಂಗಳಾಗಿದ್ದು ಮುಂಬರುವ ಮಾರ್ಚ್‌ನಲ್ಲಿ ಹಿಂದು ಕುಶ್‌ನ ಅಪಾಯಕಾರಿ ಮತ್ತು ಹಿಮದ ಪರ್ವತಗಳಲ್ಲಿ ಅತಿಯಾದ ಶೀತವಿದ್ದು, ಅದು 14 ತಿಂಗಳ ಹಸುಳೆಗೆ ಅಪಾಯಕಾರಿಯಾಗಿರಬಹುದೆಂದು ಅಕ್ಬರ್‌ನನ್ನು ಸೈನಿಕರ ಪಾಳೆಯದಲ್ಲೇ ಬಿಡಲಾಯಿತು. ಆಸ್ಕರಿಯು ಪಾಳೆಯದಲ್ಲಿದ್ದ ಅಕ್ಬರ್‌ನನ್ನು ಕಂಡು, ಅವನನ್ನು ಪಡೆದುಕೊಂಡು ಹೋಗಿ, ತನ್ನ ಪತ್ನಿಯು ನೋಡಿಕೊಳ್ಳುವಂತೆ ಮಾಡುತ್ತಾನೆ. ಆಕೆ ಆತನನ್ನು ತನ್ನ ಸ್ವಂತ ಮಗನಂತೆ ಬೆಳೆಸುತ್ತಾಳೆ.

ಪರ್ಷಿಯಾದಲ್ಲಿನ ಆಶ್ರಯ[ಬದಲಾಯಿಸಿ]

ಶಾ ತಾಹ್ಮಾಸ್ಪ್ ನೆಲೆಬಿಟ್ಟು ಹೊರಗಡೆ ಬಂದ ಹುಮಾಯೂನ್‌ನನ್ನು ಸ್ವಾಗತಿಸುತ್ತಿರುವುದು.

ಹುಮಾಯೂನ್‌ ಇರಾನ್‌ನ ಸ್ಯಾಫವಿಡ್ ಚಕ್ರವರ್ತಿಯ ಆಶ್ರಯಕ್ಕಾಗಿ ನಲವತ್ತು ಸೈನಿಕರು ಹಾಗೂ ಅವನ ಪತ್ನಿ ಮತ್ತು ಆಕೆಯ ಒಡನಾಡಿಯೊಂದಿಗೆ ಪಲಾಯನ ಮಾಡಿದನು. ಆಗಿನ ಪರಿಸ್ಥಿತಿಯು ಅವರನ್ನು ಸೈನಿಕರ ಹೆಲ್ಮೆಟ್ಟುಗಳಲ್ಲಿ ಬೇಯಿಸಿದ ಕುದುರೆಯ ಮಾಂಸದಿಂದ ಜೀವಿಸುವಂತೆ ಮಾಡಿತು. ಈ ಹೀನಾಯಕರ ಪರಿಸ್ಥಿತಿಯು ಅವರು ಹೆರಾಟ್‌ಗೆ ತಲುಪವವರೆಗೆ ಹಾಗೆಯೇ ಮುಂದುವರಿಯಿತು. ಅಲ್ಲಿಗೆ ತಲುಪಿದ ನಂತರ ಅವರು ಜೀವನದಲ್ಲಿ ಮತ್ತೆ ಉತ್ತಮ ಸಂದರ್ಭಗಳನ್ನು ಪಡೆದರು. ನಗರವನ್ನು ಪ್ರವೇಶಿಸಿದಾಗ ಅವನ ಸೈನ್ಯವು ಸುಸಜ್ಜಿತ ಅಂಗರಕ್ಷಕ ಪಡೆಯಿಂದ ಸ್ವಾಗತ ಪಡೆಯಿತು. ಅವರಿಗೆ ಯಥೇಚ್ಛ ಆಹಾರ ಮತ್ತು ಬಟ್ಟೆಬರೆಗಳನ್ನು ನೀಡಲಾಯಿತು. ಅವರು ಉಳಿದುಕೊಳ್ಳಲು ಉತ್ತಮ ವಸತಿಗಳನ್ನು ಪಡೆದರು; ಅದಕ್ಕಾಗಿ ಮನೆ ಮುಂದಿನ ರಸ್ತೆಗಳನ್ನು ಚೊಕ್ಕವಾಗಿ ಸ್ವಚ್ಛಗೊಳಿಸಲಾಗಿತ್ತು. ಹುಮಾಯೂನ್‌ನ ಕುಟುಂಬದಿಂದ ಬೇರೆಯಾದ ಶಾ ತಹ್ಮಾಸ್ಪ್ ಮೊಘಲರನ್ನು ಅತ್ತುತ್ತಮ ರೀತಿಯಲ್ಲಿ ಸ್ವಾಗತಿಸಿದನು, ಅಲ್ಲದೇ ಅವನನ್ನು ರಾಜೋಚಿತ ಸಂದರ್ಶಕನಾಗಿ ನೋಡಿಕೊಂಡನು. ಅಲ್ಲಿ ಹುಮಾಯೂನ್‌ ಪ್ರೇಕ್ಷಣೀಯ ದೃಶ್ಯಗಳನ್ನು ನೋಡಲು ಹೋದನು. ಅವನು ನೋಡಿದ ಪರ್ಷಿಯನ್‌ ಚಿತ್ರಗೆಲಸ ಮತ್ತು ವಾಸ್ತುಶಿಲ್ಪದಿಂದ ಆಶ್ಚರ್ಯಚಕಿತನಾದನು. ಇವುಗಳಲ್ಲಿ ಹೆಚ್ಚಿನವು ಟಿಮುರಿಡ್ ಸುಲ್ತಾನ್‌ ಹುಸೇನ್ ಬಾಯ್ಕರಾಹ್ ಮತ್ತು ಅವನ ಪೂರ್ವಿಕ ರಾಣಿ ಗೌಹಾರ್ ಶಾದ್ ರಚಿಸದವುಗಳಾಗಿದ್ದವು. ಅದರಿಂದ ಅವನು ಮೊದಲ ಬಾರಿಗೆ ಅವನ ಸಂಬಂಧಿಕರ ಮತ್ತು ಪೂರ್ವಜರ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸುವಂತಾಯಿತು. ಅವನಿಗೆ ಪರ್ಷಿಯನ್‌ ಸೂಕ್ಷ್ಮ ಚಿತ್ರಕಾರರ ಕೃತಿಗಳ ಬಗ್ಗೆ ಪರಿಚಯಿಸಲಾಯಿತು. ಕಮಲೆದ್ದಿನ್ ಬೆಹ್ಜಾದ್ ಅವನ ಇಬ್ಬರು ಶಿಷ್ಯರನ್ನು ಹುಮಾಯೂನ್‌ನ ಆಸ್ಥಾನಕ್ಕೆ ಸೇರಿಸಿದನು. ಹುಮಾಯೂನ್‌ ಅವರ ಕೆಲಸಗಳಿಂದ ಆಕರ್ಷಿತವಾಗಿ, ತಾನು ಹಿಂದುಸ್ತಾನದ ಪರಮಾಧಿಕಾರವನ್ನು ಪುನಃಪಡೆದರೆ ತನಗಾಗಿ ಕೆಲಸ ಮಾಡುತ್ತಾರೆಯೇ ಎಂಬುದನ್ನು ಅವರಲ್ಲಿ ಕೇಳಿದನು. ಅದಕ್ಕೆ ಅವರು ಒಪ್ಪಿದರು. ಹುಮಾಯೂನ್‌ ಜುಲೈವರೆಗೆ ಪರ್ಷಿಯಾಕ್ಕೆ ಬಂದು ಸುಮಾರು ಆರು ತಿಂಗಳವರೆಗೂ ಶಾನನ್ನು ಭೇಟಿಯಾಗಿರಲಿಲ್ಲ. ಹೆರಾಟ್‌ನಿಂದ ದೀರ್ಘಕಾಲದ ಪ್ರಯಾಣದ ನಂತರ ಇಬ್ಬರೂ ಕ್ವಾಜ್ವಿನ್‌ನಲ್ಲಿ ಭೇಟಿಯಾದರು. ಅಲ್ಲಿ ಅವರ ಭೇಟಿಗಾಗಿ ಭೋಜನಕೂಟ ಮತ್ತು ಪರಸ್ಪರ ಭೇಟಿ ವ್ಯವಸ್ಥೆಗೊಳಿಸಲಾಗಿತ್ತು. ಈ ಇಬ್ಬರ ರಾಜರ ಭೇಟಿಯನ್ನು ಎಸ್ಫಹಾನ್‌ನ ಪ್ರಸಿದ್ಧ ಚೆಹೆಲ್ ಸೊಟೌನ್ (ನಲವತ್ತು ಆಧಾರಸ್ತಂಭಗಳ) ಅರಮನೆಯ ಗೋಡೆಯ-ಚಿತ್ರಣದಲ್ಲಿ ಚಿತ್ರಿಸಲಾಗಿದೆ.

ಶಾ ಹುಮಾಯೂನ್‌ಗೆ ಸುನ್ನಿಯಿಂದ ಶಿಯಾ ಇಸ್ಲಾಂಗೆ ಮತಾಂತರ ಹೊಂದುವಂತೆ ಸೂಚಿಸಿದನು. ಹುಮಾಯೂನ್‌ ತಾನು ಮತ್ತು ಅನೇಕ ಮಂದಿ ಹಿಂಬಾಲಕರನ್ನು ಜೀವಂತವಾಗಿಡಲು ಮನಸ್ಸಿಲ್ಲದೆ ಅಂತಿಮವಾಗಿ ಒಪ್ಪಿದನು.[೧೦] ಇದರ ಬಗ್ಗೆ ಅವನ ಜೀವನಚರಿತ್ರೆಕಾರ ಜಾಹರ್‌ ಅಸಮ್ಮತಿಯನ್ನು ಸೂಚಿಸಿದ್ದಾನೆ.[ಸೂಕ್ತ ಉಲ್ಲೇಖನ ಬೇಕು] ಶಿಯಾ ಇಸ್ಲಾಂಅನ್ನು ಸ್ವೀಕರಿಸಿದುದಕ್ಕಾಗಿ ಶಾ ಹುಮಾಯೂನ್‌ಗೆ ಹೆಚ್ಚು ಬೆಂಬಲ ನೀಡಲು ತಯಾರಿ ನಡೆಸಿದನು.[೧೦] ಹುಮಾಯೂನ್‌ನ ಸಹೋದರ ಕಮ್ರಾನ್‌ ಹುಮಾಯೂನ್‌ನನ್ನು ಸಾಯಿಸಿ ಅಥವಾ ಜೀವಂತವಾಗಿ ನೀಡಿದರೆ ಬದಲಿಗೆ ಕಂದಹಾರ್‌ಅನ್ನು ಒಪ್ಪಿಸುವುದಾಗಿ ಪರ್ಷಿಯನ್‌ಗೆ ಹೇಳಿದಾಗ, ಶಾ ಅದನ್ನು ನಿರಾಕರಿಸಿದನು. ಬದಲಿಗೆ ಶಾ ಹುಮಾಯೂನ್‌ಗೆ ಮುನ್ನೂರು ಅತ್ಯಂತ ವೈಭವದ ಪರ್ಷಿಯನ್‌ ಡೇರೆಗಳು, 12 ಸಂಗೀತದ ಬ್ಯಾಂಡುಗಳು ಮತ್ತು "ಎಲ್ಲಾ ರೀತಿಯ ಮಾಂಸ"ದೊಂದಿಗೆ ಔತಣವೊಂದನ್ನು ಏರ್ಪಡಿಸಿದನು. ಅಲ್ಲಿ ಶಾ, ಇವೆಲ್ಲವೂ ಮತ್ತು 12,000 ಕುದುರೆ ಸಿಪಾಯಿಗಳು ಹುಮಾಯೂನ್‌ನ ಸಹೋದರ ಕಮ್ರಾನ್‌‌ನ ಮೇಲೆ ದಾಳಿ ನಡೆಸಲು ಅವನಿಗೆ ನೀಡಿದ ಬೆಂಬಲವಾಗಿದೆಯೆಂದು ಘೋಷಿಸಿದನು. ಹುಮಾಯೂನ್‌ ಸೈನ್ಯವು ಜಯಶಾಲಿಯಾದರೆ ಕಂದಹಾರ್‌ ತನ್ನದಾಗಬೇಕೆಂದು ಶಾ ಕೇಳಿದನು.

ಕಂದಾಹಾರ್‌ ಮತ್ತು ಇನ್ನೂ ಮುಂದಕ್ಕೆ[ಬದಲಾಯಿಸಿ]

ಷಾ ಜಹಾನ್‌ನಿಂದ ಸಿದ್ಧಗೊಂಡ ಆಲ್ಬಮ್‌ನ ಚಿತ್ರವೊಂದು ಹುಮಾಯೂನ್‌ ಭಾರತದಲ್ಲಿನ ಉದ್ಯಾನದಲ್ಲಿನ ಮರವೊಂದರ ಕೆಳಗೆ ಕುಳಿತಿರುವುದನ್ನು ತೋರಿಸುತ್ತಿದೆ.

ಈ ಪರ್ಷಿಯನ್‌ ನೆರವಿನೊಂದಿಗೆ ಹುಮಾಯೂನ್‌ ಕಂದಹಾರ್‌ಅನ್ನು ಎರಡು-ವಾರಗಳ ದಾಳಿಯ ನಂತರ ಆಸ್ಕರಿಯಿಂದ ವಶಪಡಿಸಿಕೊಂಡನು. ಆಸ್ಕರಿಗೆ ಸೇವೆ ಸಲ್ಲಿಸುತ್ತಿದ್ದವರು; ಅವನಿಗೆ ಸಹಾಯ ನೀಡಲು ಒಂದುಗೂಡಿದುದನ್ನು ಅವನು ಹೀಗೆಂದು ಸೂಚಿಸಿದ್ದಾನೆ - "ನಿಜವಾಗಿ ಪ್ರಪಂಚದ ಹೆಚ್ಚಿನ ನಿವಾಸಿಗಳು ಕುರಿಯ ಹಿಂಡು ಇದ್ದಂತೆ, ಒಂದು ಕುರಿ ಎಲ್ಲಿಗೆ ಹೋಗುತ್ತದೊ ಉಳಿದವು ತಕ್ಷಣ ಅದನ್ನು ಹಿಂಬಾಲಿಸುತ್ತವೆ". ಕಂದಹಾರ್‌ಅನ್ನು ಒಪ್ಪಿದಂತೆ ಶಾನಿಗೆ ನೀಡಲಾಯಿತು. ಅವನು ತನ್ನ ಎಳೆಯ ಮಗ ಮುರಾದ್‌ನನ್ನು ವೈಸ್‍‌ರಾಯ್‌ನಾಗಿ ಕಳುಹಿಸಿದನು. ಆ ಮಗು ಬೇಗನೆ ತೀರಿಕೊಂಡಿತು. ಹಾಗಾಗಿ ಹುಮಾಯೂನ್‌ ಅಧಿಕಾರವನ್ನು ಪಡೆಯಲು ತನ್ನನ್ನು ಸಾಕಷ್ಟು ಪ್ರಬಲನೆಂದು ಪರಿಗಣಿಸಿದನು.

ಹುಮಾಯೂನ್‌ ಅವನ ಸಹೋದರ ಕಮ್ರಾನ್‌ನಿಂದ ಆಳಲ್ಪಡುತ್ತಿದ್ದ ಕಾಬುಲ್‌ಅನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸಿದನು. ಕೊನೆಯಲ್ಲಿ, ನಿಜವಾಗಿ ಮುತ್ತಿಗೆ ಹಾಕಲಿಲ್ಲ. ಕಮ್ರಾನ್‌ ನಾಯಕನಾಗಲು ಹಿಂಜರಿದನು. ಹುಮಾಯೂನ್‌ನ ಪರ್ಷಿಯನ್‌ ಸೈನ್ಯವು ನಗರವನ್ನು ತಲುಪಿದಂತೆ, ಕಮ್ರಾನ್‌ನ ಸೇನೆಯ ನೂರಾರು ಮಂದಿ ತಮ್ಮ ಪಕ್ಷವನ್ನು ಬದಲಿಸಿಕೊಂಡು, ಹುಮಾಯೂನ್‌ನನ್ನು ಸೇರಲು ಒಂದುಗೂಡಿದರು;ಅಲ್ಲದೇ ಅವನ ಸೈನ್ಯದ ಬಲವನ್ನು ಹೆಚ್ಚಿಸಿದರು. ಕಮ್ರಾನ್‌ ತಲೆಮರೆಸಿಕೊಂಡು ಹೋಗಿ, ನಗರದ ಹೊರಗೆ ಸೈನ್ಯವನ್ನು ಕಟ್ಟಲು ಆರಂಭಿಸಿದನು. 1545ರ ನವೆಂಬರ್‌ನಲ್ಲಿ ಹಮೀದ ಮತ್ತು ಹುಮಾಯೂನ್‌ ಅವರ ಮಗ ಅಕ್ಬರ್‌ನೊಂದಿಗೆ ಮತ್ತೆ ಒಂದುಗೂಡಿದರು; ಅದರ ನೆನಪಿಗಾಗಿ ಭಾರಿ ಔತಣಕೂಟವೊಂದನ್ನು ಏರ್ಪಡಿಸಿದರು. ಅವನಿಗೆ ಪರಿಕರ್ತನ(ಗೌರವ ಔತಣ) ಮಾಡಿದಾಗಲೂ, ಮತ್ತೊಂದು ಅದ್ಧೂರಿಯ ಔತಣ ಕೂಟವನ್ನು ಏರ್ಪಡಿಸಿದರು.

ಹುಮಾಯೂನ್‌ ಅವನ ಸಹೋದರನಿಗಿಂತ ದೊಡ್ಡ ಸೈನ್ಯವನ್ನು ಹೊಂದಿದ್ದು, ಅವನಿಗಿಂತ ಹೆಚ್ಚು ಪ್ರಬಲನಾಗಿದ್ದನು. ಎರಡು ಸಂದರ್ಭಗಳಲ್ಲಿ ಅವನ ದುರ್ಬಲ ಸೈನ್ಯವು ಕಮ್ರಾನ್‌ಗೆ ಕಾಬುಲ್‌ ಮತ್ತು ಕಂದಾಹಾರ್‌ಅನ್ನು ಪುನಃವಶಪಡಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಹುಮಾಯೂನ್‌ಗೆ ಅವರನ್ನು ಮತ್ತೆಸೆರೆಹಿಡಿಯಲು ಮತ್ತಷ್ಟು ಕಾರ್ಯಾಚರಣೆಗಳನ್ನು ನಡೆಸುವಂತೆ ಮಾಡಿತು. ಕಮ್ರಾನ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಹೋದರ ಹುಮಾಯುನ್‌ಗೆ ಸಹಾಯ ಮಾಡಿದ್ದಾರೆಂದು ಭಾವಿಸಿದ ನಿವಾಸಿಗರ ವಿರುದ್ಧ ಕಡುದುರಾಚಾರದಿಂದ ನಡೆದುಕೊಂಡಿದ್ದನು.ಇದರ ವಿರುದ್ಧವಾಗಿ ನಗರಗಳನ್ನು ರಕ್ಷಿಸಿದ ಸೈನ್ಯದ ಬಗೆಗಿನ ದಯಾಪರತೆಯಿಂದ ಹುಮಾಯುನ್‌ ಬೆಂಬಲವನ್ನು ಪಡೆಯಬಹುದಿತ್ತು.

ಅವನ ಸಹೋದರರಲ್ಲೇ ಹೆಚ್ಚು ವಿಶ್ವಾಸಘಾತುಕನಾಗಿದ್ದ ತಮ್ಮ ಹಿಂದಾಲ್‌ ಅವನ ಕಡೆಯಿಂದ ಯುದ್ಧ ಮಾಡುವಾಗ ಸಾವನ್ನಪ್ಪಿದನು. ಅವನ ಸಹೋದರ ಆಸ್ಕರಿಯನ್ನು ಅವನ ಕುಲೀನರ ಮತ್ತು ಬೆಂಬಲಿಗರ ಆಣತಿಯಂತೆ ಸಂಕೋಲೆಗಳಿಂದ ಬಂಧಿಸಲಾಯಿತು. ಅವನಿಗೆ ಹಜ್‌ಗೆ ಹೋಗಲು ಅವಕಾಶ ಮಾಡಿಕೊಡಲಾಯಿತು. ಅವನು ದಾರಿಯಲ್ಲಿ ಮರುಭೂಮಿಯಲ್ಲಿ ಡ್ಯಾಮಸ್ಕಸ್‌ನ ಹೊರಗೆ ಸಾವನ್ನಪ್ಪಿದನು.

ಹುಮಾಯೂನ್‌ನ ಮತ್ತೊಬ್ಬ ಸಹೋದರ ಕಮ್ರಾನ್‌ ಅನೇಕ ಬಾರಿ ಹುಮಾಯೂನ್‌ನನ್ನು ಕೊಲ್ಲಲು ಪ್ರಯತ್ನಿಸಿದನು. ಇದಕ್ಕಾಗಿ ಅವನು 1552ರಲ್ಲಿ ಶೇರ್ ಶಾನ ಉತ್ತರಾಧಿಕಾರಿ ಇಸ್ಲಾಂ ಶಾನೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುವಾಗ ಗಾಖರ್‌‌ರಲ್ಲಿ ಒಬ್ಬನಿಂದ ಬಂಧಿಸಲ್ಪಟ್ಟನು. ಗಾಖರ್‌ಗಳೆಂದರೆ ಮೊಘಲರಿಗೆ ಸ್ವಾಮಿನಿಷ್ಠರಾಗಿ ಉಳಿದುಕೊಂಡಿದ್ದ ಕೆಲವು ಮಂದಿಯ ಗುಂಪುಗಳಾಗಿದ್ದವು. ಗಾಖರ್‌ಗಳ ಸುಲ್ತಾನ್ ಆಡಮ್, ಕಮ್ರಾನ್‌ನನ್ನು ಹುಮಾಯೂನ್‌ಗೆ ಒಪ್ಪಿಸಿದನು. ಕಮ್ರಾನ್‌ನ ನಿರಂತರ ದುರಾಚಾರಗಳಿಗೆ ಶಿಕ್ಷೆಯನ್ನು ವಿಧಿಸದಿದ್ದರೆ ಹುಮಾಯೂನ್‌ನ ಸ್ವಂತ ಆಡಳಿತದಲ್ಲಿ ದಂಗೆಯು ಉಂಟಾಗಬಹುದೆಂದು ಎಚ್ಚರಿಕೆಯನ್ನು ನೀಡಿದರೂ, ಆತ ಸಹೋದರನನ್ನು ಕ್ಷಮಿಸುವುದಾಗಿ ಯೋಚಿಸಿದನು. ಆದ್ದರಿಂದ ಕಮ್ರಾನ್‌ನನ್ನು ಕೊಲ್ಲುವ ಬದಲಿಗೆ ಹುಮಾಯೂನ್‌ ಅವನನ್ನು ಮರೆಮಾಡಿ, ಅಧಿಕಾರಕ್ಕಾಗಿ ಯಾವುದೇ ಹಕ್ಕು ಸಾಧಿಸುವುದನ್ನು ಕೊನೆಗೊಳಿಸಿದನು. ಸಹೋದರನನ್ನು ಪಾಪದಿಂದ ಮುಕ್ತನಾಗಿ ಕಾಣಲು ಬಯಸಿ ಅವನನ್ನು ಹಜ್‌ಗೆ ಕಳುಹಿಸಿದನು. ಆದರೆ ಅವನು 1557ರಲ್ಲಿ ಮೆಕ್ಕಾದ ಹತ್ತಿರ ಅರೇಬಿಯನ್ ಮರುಭೂಮಿಯಲ್ಲಿ ಸಾವನ್ನಪ್ಪಿದನು.

ಭಾರತದ ಮರುಭೇಟಿ[ಬದಲಾಯಿಸಿ]

ಶೇರ್ ಶಾ ಸೂರಿಯು 1545ರಲ್ಲಿ ಮರಣವನ್ನಪ್ಪಿದನು. ಅವನ ಮಗ ಮತ್ತು ಉತ್ತರಾಧಿಕಾರಿ ಇಸ್ಲಾಂ ಶಾ ಸಹ 1554ರಲ್ಲಿ ಸಾವನ್ನಪ್ಪಿದನು. ಇವರಿಬ್ಬರ ಮರಣವು ರಾಜವಂಶವನ್ನು ತತ್ತರಿಸುವಂತೆ ಮತ್ತು ವಿಭಜಿಸುವಂತೆ ಮಾಡಿತು. ದೆಹಲಿಯಲ್ಲಿ ಸಿಂಹಾಸನಕ್ಕಾಗಿ ಮೂರು ದಂಗೆಗಳು ಎದ್ದವು. ಅನೇಕ ನಗರಗಳಲ್ಲಿ ನಾಯಕರು ಸ್ವಾತಂತ್ರ್ಯಕ್ಕಾಗಿ ಹಕ್ಕು ಸಾಧಿಸಲು ಪ್ರಯತ್ನಿಸಿದರು. ಈ ಸಂದರ್ಭವು ಮೊಘಲರಿಗೆ ಭಾರತಕ್ಕೆ ಹಿಂದಿರುಗಲು ಸೂಕ್ತವಾದ ಅವಕಾಶವಾಗಿತ್ತು. ಹುಮಾಯೂನ್‌ ಬೈರಮ್ ಖಾನ್‌ನ ಸಮರ್ಥ ಮುಖಂಡತ್ವದಲ್ಲಿ ಸೈನ್ಯವನ್ನು ರೂಪಿಸಿದನು. ಇದು ಹುಮಾಯೂನ್‌ನ ಸೈನ್ಯದ ಅಕೌಶಲತೆಯ ದಾಖಲೆಯಲ್ಲೇ ಅತ್ಯಂತ ಉತ್ತಮವಾದ ಬೆಳವಣಿಗೆಯಾಗಿತ್ತು. ಅದು ದೂರದೃಷ್ಟಿಯನ್ನೂ ಹೊಂದಿತ್ತು. ಆ ಮೂಲಕ ಬೈರಮ್ ಶ್ರೇಷ್ಠ ಯುದ್ಧ ತಂತ್ರ ನಿಪುಣನೆಂಬುದನ್ನು ಸಾಧಿಸಿದನು.

ಬೈರಮ್ ಖಾನ್ ಸೈನ್ಯವನ್ನು ವಿರೋಧವಿಲ್ಲದೆ ಪಂಜಾಬ್‌ಗೆ ಮುಂದುವರಿಸಿದನು. ಹುಮಾಯೂನ್‌ಗೆ ನಿಷ್ಠಾವಂತರಾಗಿದ್ದ ಗಾಖರ್‌ಗಳನ್ನು ಸದೆಬಡಿಯಲು 1541-43ರಲ್ಲಿ ಶೇರ್ ಶಾ ನಿರ್ಮಿಸಿದ ರೊಹ್ತಾಸ್‌ನ ಕೋಟೆಯನ್ನು ಪ್ರಯತ್ನವಿಲ್ಲದೆಯೇ ವಿಶ್ವಾಸಘಾತುಕ ಕಮಾಂಡರ್‌ನಿಂದ ವಶಪಡಿಸಿಕೊಳ್ಳಲಾಯಿತು. ರೊಹ್ತಾಸ್ ಕೋಟೆಯ ಗೋಡೆಗಳು 12,5 ಮೀಟರ್‌ಗಳಷ್ಟು ದಪ್ಪ, ಮತ್ತು 18,28 ಮೀಟರ್‌ಗಳಷ್ಟು ಎತ್ತರ ಇವೆ. ಅವು 4 ಕಿಮೀನಷ್ಟು ದೂರಕ್ಕೆ ವಿಸ್ತರಿಸಿವೆ, ಅಲ್ಲದೇ 68 ಅರ್ಧ-ವೃತ್ತಾಕಾರದ ಕೊತ್ತಲಗಳನ್ನು ಹೊಂದಿವೆ. ಇದರ ಭಾರಿ ಗಾತ್ರದ ಮತ್ತು ಅಲಂಕೃತವಾದ ಮರಳಶಿಲೆಯ ಹೆಬ್ಬಾಗಿಲುಗಳು, ಮೊಘಲ್‌ ಸೈನ್ಯ ರಚನೆಯ ಮೇಲೆ ಗಾಢವಾದ ಪ್ರಭಾವ ಬೀರಿವೆಯೆಂದು ತಿಳಿಯಲಾಗುತ್ತದೆ.

ಹುಮಾಯೂನ್‌ನ ಸೈನ್ಯವು ಎದುರಿಸಿದ ಪ್ರಮುಖ ಯುದ್ಧವೆಂದರೆ ಸಿರ್ಹಿಂದ್‌ನಲ್ಲಿ ನಡೆದ ಸಿಕಂದರ್ ಸೂರಿಯ ವಿರುದ್ಧದ ಯುದ್ಧ. ಇದರಲ್ಲಿ ಬೈರಮ್ ಖಾನ್ ಯುದ್ಧತಂತ್ರವೊಂದನ್ನು ರೂಪಿಸಿ, ಶತ್ರುವನ್ನು ಮುಕ್ತ ಯುದ್ಧದಲ್ಲಿ ಎದುರಿಸಿದನು. ಆದರೆ ನಂತರ ಶೀಘ್ರದಲ್ಲೇ ಜೀವ ಭಯದಿಂದ ಹಿಮ್ಮೆಟ್ಟಬೇಕಾಯಿತು. ಶತ್ರುಗಳು ಅವರನ್ನು ಹಿಂಬಾಲಿಸಿ, ಅವರ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ಸುಲಭವಾಗಿ ವಶಪಡಿಸಿಕೊಂಡರು.

ದಾಳಿ ಮಾಡುವ ಸೈನ್ಯವು ರಾಜಧಾನಿಗೆ ಹೋಗಲು ದಾರಿ ಮಾಡಿಕೊಂಡಿದ್ದರಿಂದ, ಹೆಚ್ಚಿನ ಪಟ್ಟಣಗಳು ಮತ್ತು ಹಳ್ಳಿಗಳು ಅದನ್ನು ಸ್ವಾಗತಿಸಲು ನಿರ್ಧರಿಸಿದವು. 1555ರ ಜುಲೈ 23ರಂದು ಹುಮಾಯೂನ್‌ ದೆಹಲಿಯಲ್ಲಿ ಮತ್ತೊಮ್ಮೆ ಬಾಬರ್‌ನ ಸಿಂಹಾಸನವನ್ನೇರಿದನು.

ಉತ್ತರ ಭಾರತದಲ್ಲಿ ಮತ್ತೊಮ್ಮೆ ಆಳ್ವಿಕೆ[ಬದಲಾಯಿಸಿ]

ಹುಮಾಯೂನ್‌ನ ಸಹೋದರರೆಲ್ಲರೂ ಸಾವನ್ನಪ್ಪಿದ್ದರಿಂದ, ಸೈನ್ಯದ ಕಾರ್ಯಾಚರಣೆಗಳೊಂದಿಗೆ ಅವನ ಸಿಂಹಾಸನವನ್ನು ಮತ್ತೊಬ್ಬರು ಅತಿಕ್ರಮಿಸುವ ಭಯವಿರಲಿಲ್ಲ. ಆದ್ದರಿಂದ ಆತ ಅಧಿಕೃತ ಮುಖಂಡನಾದನು; ಅಲ್ಲದೇ ತನ್ನ ಜನರಲ್‌ಗಳ ಮೇಲೆ ನಂಬಿಕೆಯನ್ನು ಹೊಂದಿದ್ದನು. ಈ ಹೊಸ ಸಾಮರ್ಥ್ಯದೊಂದಿಗೆ ಹುಮಾಯೂನ್‌ ಅವನ ದಾಳಿಯನ್ನು ಪೂರ್ವ ಮತ್ತು ಪಶ್ಚಿಮ ಭಾರತದ ಪ್ರದೇಶಗಳಿಗೆ ವಿಸ್ತರಿಸುವ ಗುರಿಯೊಂದಿಗೆ ಸೈನ್ಯದ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದನು.

ನೆಲೆಬಿಟ್ಟು ಬಹುಕಾಲ ಹೊರಗಡೆ ಇದ್ದ ಹುಮಾಯೂನ್‌ನ ಯಾತ್ರೆಯು ಜ್ಯೋತಿಶ್ಶಾಸ್ತ್ರದಲ್ಲಿನ ಅವನ ನಂಬಿಕೆಯನ್ನು ಕಡಿಮೆ ಮಾಡಿತು ಹಾಗೂ ಅವನ ಸೈನ್ಯದ ಮುಖಂಡತ್ವವು ಅವನು ಪರ್ಷಿಯಾದಲ್ಲಿ ವೀಕ್ಷಿಸಿದ ವಿಧಾನಗಳನ್ನು ಅನುಕರಿಸುವ ಮೂಲಕ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಅತಿ ಶೀಘ್ರದಲ್ಲಿ ಜಯಗಳಿಸಲು ಅವನಿಗೆ ಅನುವು ಮಾಡಿಕೊಟ್ಟಿತು.

ಇದು ಸಾಮ್ರಾಜ್ಯದ ಆಡಳಿತಕ್ಕೂ ಅನ್ವಯಿಸಿತು. ಪರ್ಷಿಯನ್‌ ಆಡಳಿತ ವಿಧಾನಗಳು ಹುಮಾಯೂನ್‌ನ ಆಳ್ವಿಕೆಯಲ್ಲಿ ಉತ್ತರ ಭಾರತಕ್ಕೆ ಬಂದಿತು. ಕಂದಾಯ ಸಂಗ್ರಹದ ವ್ಯವಸ್ಥೆಯನ್ನು ಪರ್ಷಿಯನ್‌ ಮತ್ತು ದೆಹಲಿ ಸುಲ್ತಾನರು ಗಳ ಮಾದರಿಗಳೆರಡರಲ್ಲೂ ಅಭಿವೃದ್ಧಿಪಡಿಸಲಾಯಿತು. ಪರ್ಷಿಯನ್‌ ಕಲೆಯೂ ಸಹ ಹೆಚ್ಚು ಪ್ರಭಾವಶಾಲಿಯಾಗಿತ್ತು; ಅಲ್ಲದೇ ಪರ್ಷಿಯನ್‌-ಶೈಲಿಯ ಸೂಕ್ಷ್ಮ ಚಿತ್ರಕಲೆಗಳನ್ನು ಮೊಘಲ್‌ (ಆನಂತರ ರಜಪೂತರ) ಅರಮನೆಯಲ್ಲಿ ಬಳಸಲಾಗಿತ್ತು. ಬಾಬರ್‌ ಅವನ ಆತ್ಮಚರಿತ್ರೆಯನ್ನು ಬರೆದ ಚಾಘಟೈ ಭಾಷೆಯು ಆಸ್ಥಾನದ ಗಣ್ಯರ ಸಂಸ್ಕೃತಿಯಿಂದ ಹೆಚ್ಚುಕಡಿಮೆ ಸಂಪೂರ್ಣವಾಗಿ ಅಳಿದುಹೋಯಿತು. ಹೀಗಾಗಿ ಅಕ್ಬರ್‌ನಿಗೆ ಈ ಭಾಷೆಯನ್ನು ಮಾತನಾಡಲು ತಿಳಿದಿರಲಿಲ್ಲ. ಜೀವನದ ಅರ್ಧಕ್ಕಿಂತಲೂ ಹೆಚ್ಚು ಸಂದರ್ಭದಲ್ಲಿ ಹುಮಾಯೂನ್‌ ಪರ್ಷಿಯನ್‌ ಭಾಷೆಯಲ್ಲೇ ಮಾತನಾಡಿದ್ದಾನೆಂದು ಹೇಳಲಾಗುತ್ತದೆ.

ನಂಬಿಗಸ್ಥ ಜನರಲ್‌ಗಳು[ಬದಲಾಯಿಸಿ]

ಗುಜರಾತ್‌ನಲ್ಲಿ ಬಹಾದುರ್ ಶಾನ ಒಕ್ಕೂಟವನ್ನು ಸೋಲಿಸಿದ ನಂತರ ಹುಮಾಯೂನ್‌ ಈ ಕೆಳಗಿನ ಜನರಲ್‌ಗಳನ್ನು ಗುಜರಾತ್‌ನಲ್ಲಿ ನಿಯೋಜಿಸಿದನು:

  1. ಮಿರ್ಜಾ ಆಸ್ಕುರಿ - ಅಹಮದಾಬಾದ್‌ನಲ್ಲಿ
  2. ಯಾದ್ಗರ್ ನಾಸಿರ - ಪಟಾನ್‌ನಲ್ಲಿ
  3. ಕಾಸಿಮ್ ಹುಸೇನ್ ಸುಲ್ತಾನ್ - ಭರೋಚ್‌ನಲ್ಲಿ
  4. ಹಿಂದು ಬೆಗ್ - ಬರೋಡಾದಲ್ಲಿ
  5. ಟಾರ್ಡಿ ಬೆಗ್ ಖಾನ್ - ಚ್ಯಾಂಪನರ್

ಆದರೆ ಈ ಅಧಿಕಾರಿಗಳು ಮತ್ತು ಜನರಲ್‌ಗಳು ದಂಗೆಗಳನ್ನು ಮಾಡದೇ, ಗುಜರಾತ‌ನ್ನು ಬಹಾದುರ್ ಶಾ ಮತ್ತೆ ಆಕ್ರಮಿಸಿಕೊಳ್ಳಲು ಬಿಟ್ಟುಬಿಟ್ಟರು.

ಸಾವು ಮತ್ತು ಪರಂಪರೆಯ ಆಸ್ತಿ[ಬದಲಾಯಿಸಿ]

ಭಾರತದ ದೆಹಲಿಯಲ್ಲಿರುವ ಹುಮಾಯೂನ್‌ನ ಸಮಾಧಿ.

1556ರ ಜನವರಿ 27ರಂದು ಹುಮಾಯೂನ್‌ ಕೈಯಲ್ಲಿ ತುಂಬಾ ಪುಸ್ತಕಗಳನ್ನು ಹಿಡಿದುಕೊಂಡು, ಮಹಮ್ಮದೀಯ ಘೋಷಕ(ಮ್ಯುಯೆಸಿನ್) ಅಧಾನ್‌ಗೆ (ಪ್ರಾರ್ಥನೆಯ ಕರೆ) ಘೋಷಿಸಿದಾಗ, ತನ್ನ ಗ್ರಂಥಾಲಯದಿಂದ ಮೆಟ್ಟಿಲುಗಳಲ್ಲಿ ಇಳಿಯುತ್ತಿದ್ದನು. ಕರೆಯನ್ನು ಕೇಳಿದಾಗಲೆಲ್ಲಾ ಧಾರ್ಮಿಕ ಭಯಭಕ್ತಿಯಿಂದ ಮಂಡಿ ಬಾಗಿಸುವುದು ಆತನ ಅಭ್ಯಾಸವಾಗಿತ್ತು. ಹಾಗೆ ಮಂಡಿಯೂರುವಾಗ ಪಾದವು ಅವನ ನಿಲುವಂಗಿಗೆ ಸಿಲುಕಿದರಿಂದ ಅವನು ಮೆಟ್ಟಿಲುಗಳಲ್ಲಿ ಉರುಳಿಕೊಂಡು ಹೋಗಿ ಕೆಳಕ್ಕೆ ಬಿದ್ದನು. ಆಗ ಅವನ (ಹಣೆ) ಕಣತಲೆಯು ಒರಟಾದ ಕಲ್ಲಿನ ತುದಿಗೆ ಬಡಿಯಿತು. ಆತ ಮೂರು ದಿನಗಳ ನಂತರ ಸಾವನ್ನಪ್ಪಿದನು. ನಂತರ 13 ವರ್ಷದ ಅಕ್ಬರ್‌ ಉತ್ತರಾಧಿಕಾರಿಯಾದನು.

ಹುಮಾಯೂನ್‌ ಜ್ಯೋತಿಶ್ಶಾಸ್ತ್ರ ಮತ್ತು ಖಗೋಳ ವಿಜ್ಞಾನವನ್ನು ಹೆಚ್ಚು ಪ್ರೀತಿಸುತ್ತಿದ್ದನು. ಅಲ್ಲದೇ ವೀಕ್ಷಣಾಲಯಗಳನ್ನು ನಿರ್ಮಿಸಿದನು, ಅವು ಶತಮಾನಗಳಷ್ಟು ಕಾಲ ಉಳಿದುಕೊಂಡಿತ್ತು. ಅವನ ಜೀವನವು, ಮಗ ಅಕ್ಬರ್‌ನ ಕೋರಿಕೆಯ ಮೇರೆಗೆ ಅವನ ಸಹೋದರಿ ಗುಲ್ಬದಾನ್ ಬೇಗಂ ಬರೆದ ಹುಮಾಯೂನ್‌-ನಾಮ ವೆಂಬ ಜೀವನ ಚರಿತ್ರೆಯ ಕೃತಿಯಲ್ಲಿ ನಿರೂಪಿತವಾಗಿದೆ. ಪರ್ಷಿಯನ್‌ ಚಿಂತನೆಗಳನ್ನು ಭಾರತ ಸಾಮ್ರಾಜ್ಯಕ್ಕೆ ತಂದಿರುವುದು ಅವನ ಹೆಚ್ಚು ಶಾಶ್ವತವಾದ ಪರಿಣಾಮವಾಗಿದೆ. ಇದು ನಂತರ ಅನೇಕ ನಾಯಕರಿಂದ ವಿಸ್ತರಿಸಲ್ಪಟ್ಟಿತು. ಸ್ಯಾಫವಿಡ್ ಕಲೆಯ ಪ್ರದರ್ಶನವನ್ನು ಅನುಸರಿಸಿದ, ಕಲೆಯ ಬಗೆಗಿನ ಅವನ ಬೆಂಬಲವು, ಅರಮನೆಗೆ ವರ್ಣಚಿತ್ರಕಾರರನ್ನು ನೇಮಿಸುವಂತೆ ಮಾಡಿತು. ಇವರು ಪ್ರಸಿದ್ಧ ಮೊಘಲ್‌ ಶೈಲಿಯ ವರ್ಣಚಿತ್ರವನ್ನು ಅಭಿವೃದ್ಧಿಪಡಿಸಿದರು. ಹುಮಾಯೂನ್‌ನ ಶ್ರೇಷ್ಠ ವಾಸ್ತುಶಿಲ್ಪೀಯ ರಚನೆಯೆಂದರೆ ದೆಹಲಿ ಯಲ್ಲಿನ ದಿನ್-ಪನಾಹ್ (ಧರ್ಮದ ಆಶ್ರಯ) ಕೋಟೆ. ಇದನ್ನು ಪುರಾಣ ಕಿಲಾ ಎಂದೂ ಕರೆಯಲಾಗುತ್ತದೆ. ಇದು ನಂತರ ಶೇರ್ ಶಾ ಸೂರಿಯಿಂದ ನಾಶಮಾಡಲ್ಪಟ್ಟಿತು. ಆತನನ್ನು ಇಂದು, ಆತನ ಮರಣದ ನಂತರ ಆತನ ಪತ್ನಿ 1562 ಮತ್ತು 1571ರ ಮಧ್ಯದಲ್ಲಿ ನಿರ್ಮಿಸಿದ ಅವನ ಶ್ರೇಷ್ಠ ಸಮಾಧಿಯಿಂದಾಗಿ ಸ್ಮರಿಸಿಕೊಳ್ಳಲಾಗುತ್ತದೆ. ಹುಮಾಯೂನ್‌ನ ಸಮಾಧಿಗೆ ಮೂಲಭೂತ ಮಾದರಿಯೆಂದರೆ ಸಮರ್ಕಂಡ್‌ನಲ್ಲಿರುವ ಗರ್-ಇ ಅಮಿರ್ ಹಾಗೂ ಇದನ್ನು ಶೈಲಿಯಲ್ಲಿ ತಾಜ್‌ ಮಹಲ್‌ಗೆ ಪೂರ್ವಸೂಚಕವಾದುದೆಂದು ಹೇಳಲಾಗುತ್ತದೆ. ಅದರ ಗುಮ್ಮಟ ಮತ್ತು ಐವಾನ್ ‌ನ ಆಕರ್ಷಕ ರಚನೆ ಹಾಗೂ ಅದರ ಸ್ಥಳೀಯ ವಸ್ತುಗಳ ಪ್ರತಿಭಾಶಕ್ತಿಯ-ಬಳಕೆಯಿಂದಾಗಿ, ಅದು ಭಾರತದಲ್ಲಿನ ಮೊಘಲ್ ಸ್ಮಾರಕಗಳಲ್ಲೇ ಅತ್ಯುತ್ತಮವಾದುದಾಗಿದೆ.

ಆಕರಗಳು[ಬದಲಾಯಿಸಿ]

  1. ೧.೦ ೧.೧ ಶರಫ್ ಆಲ್-ದಿನ್: "ಜಾಫರ್-ನಾಮ".
  2. ಸ್ವಾತ್ ಸಾಸೆಕ್: "ಎ ಹಿಸ್ಟರಿ ಆಫ್ ಇನ್ನರ್ ಏಷ್ಯಾ".
  3. ನಿಜಾಮುದ್ದಿನ್ ಅಹ್ಮದ್: "ತಬಕತ್-ಇ-ಅಕ್ಬರಿ".
  4. ೪.೦ ೪.೧ ೪.೨ ರಾಮ ಶಂಕರ್ ಅವಸ್ಥಿ: "ದ ಮೊಘಲ್ ಎಂಪರರ್ ಹುಮಾಯೂನ್‌".
  5. ೫.೦ ೫.೧ S.K. ಬ್ಯಾನರ್ಜಿ: "ಹುಮಾಯೂನ್‌ ಬಾದ್‌ಶಾ".
  6. ೬.೦ ೬.೧ ಜಾಹರ್: "ತಧ್ಕಿರಾತ್ ಅಲ್-ವಕಿಯತ್".
  7. ೭.೦ ೭.೧ ೭.೨ ಬ್ಯಾಂಬರ್ ಗ್ಯಾಸ್ಕೋಯ್ನ್: "ದ ಗ್ರೇಟ್ ಮೊಘಲ್ಸ್".
  8. ಬದಾನಿ: "ಮುಂತಖಾಬ್ ಅಲ್-ತವಾರಿಖ್".
  9. ಅಬುಲ್-ಫಾಜಲ್: "ಅಕ್ಬರ್‌-ನಾಮ".
  10. ೧೦.೦ ೧೦.೧ John F. Richards, Gordon Johnson (1996). Cambridge University Press (ed.). The Mughal Empire (illustrated, reprint ed.). p. 11. ISBN 0521566037.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]


ಹುಮಾಯೂನ್‌
Born: 7 March 1508 Died: 22 February 1556
Regnal titles
ಪೂರ್ವಾಧಿಕಾರಿ
Babur
Mughal Emperor
1530–1539
ಉತ್ತರಾಧಿಕಾರಿ
Sher Shah Suri
(as Shah of Delhi))
ಪೂರ್ವಾಧಿಕಾರಿ
Adil Shah Suri
(as Shah of Delhi))
Mughal Emperor
1555–1556
ಉತ್ತರಾಧಿಕಾರಿ
Akbar