ಹುಕ್ಕೇರಿ ಬಾಳಪ್ಪ
ಬಾಳಪ್ಪ ಹುಕ್ಕೇರಿ | |
---|---|
ಜನನ | ಆಗಸ್ಟ್ 21, 1911 |
ಮೂಲಸ್ಥಳ | ಮುರುಗೋಡು, ಬೆಳಗಾವಿ ಜಿಲ್ಲೆ, ಕರ್ನಾಟಕ |
ಮರಣ | ನವೆಂಬರ್ 13, 1992 |
ಸಂಗೀತ ಶೈಲಿ | ಜನಪದ ಸಂಗೀತ, ಸುಗಮ ಸಂಗೀತ, ಭಾವಗೀತೆ |
ವೃತ್ತಿ | ಗಾಯಕ, ಸಾಹಿತಿ |
ಹುಕ್ಕೇರಿ ಬಾಳಪ್ಪನವರು ೧೯೧೧ ಆಗಸ್ಟ್ ೨೧ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಗೋಡಿನಲ್ಲಿ ಜನಿಸಿದರು. ಇವರ ತಾಯಿ ಚೆನ್ನವೀರಮ್ಮ; ತಂದೆ ವೀರಭದ್ರಪ್ಪ. ಮುರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಾಳಪ್ಪನವರು, ಬೈಲಹೊಂಗಲದಲ್ಲಿ ಪ್ರೌಢಶಿಕ್ಷಣ ಪಡೆಯಲು ತೆರಳಿದರು. ಆದರೆ ಕೌಟಂಬಿಕ ಒತ್ತಡಗಳಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ವ್ಯಾಪಾರ ಮತ್ತು ವ್ಯವಸಾಯಕ್ಕೆ ನಿಲ್ಲಬೇಕಾಯಿತು. ಚಿಕ್ಕಂದಿನಿಂದಲೂ ಸುಶ್ರಾವ್ಯವಾಗಿ ಹಾಡುವ ಇವರ ಮೋಡಿಗೆ ಕೇಳಿದವರೆಲ್ಲ ಬೆರಗಾಗುತ್ತಿದ್ದರು. ಇವನ ಹಾಡಿನ ಮೋಡಿಗೆ ಮರುಳಾದ ಶ್ರೀ ಶಿವಲಿಂಗಯ್ಯ ಗವಾಯಿಗಳು ಈ ಬಾಲಕನನ್ನು ಕರೆದು ಶಿಷ್ಯತ್ವ ದಯಪಾಲಿಸಿದರು. ಆರ್ಥಿಕ ಮುಗ್ಗಟ್ಟಿನಿಂದಾಗಿ ಶಾಸ್ತ್ರೀಯ ಗಾಯನ ಕಲಿಯುವದನ್ನು ಅರ್ಧಕ್ಕೆ ನಿಲ್ಲಿಸಿದ ಬಾಲಕನು ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮಿಗಳ ಸಲಹೆಯ ಮೇರೆಗೆ ಜಾನಪದ ಗೀತೆಗಳನ್ನು ಹಾಡಲಾರಂಭಿಸಿದರು.
ಸ್ವಾತಂತ್ರ್ಯ ಹೋರಾಟ
[ಬದಲಾಯಿಸಿ]೧೯೩೦ರಲ್ಲಿ ಬಾಳಪ್ಪನವರು ಕಾಯ್ದೆ ಭಂಗ ಚಳುವಳಿಯಲ್ಲಿ ಭಾಗವಹಿಸಿ ಆರು ತಿಂಗಳ ಸೆರೆಮನೆವಾಸದ ಶಿಕ್ಷೆಯನ್ನು ಅನುಭವಿಸಿದರು.
ಉದ್ಯೋಗ
[ಬದಲಾಯಿಸಿ]ಬಾಳಪ್ಪನವರು ಅನೇಕ ಸಭೆ ಸಮಾರಂಭಗಳಲ್ಲಿ ಹಾಡುತ್ತಿದ್ದರು. ೧೯೩೨ರಿಂದ ೧೯೪೦ರವರೆಗೆ ನಾಟಕ ಕಂಪನಿಯೊಂದನ್ನು ಕಟ್ಟಿ ಊರೂರು ಅಲೆದರು. ಕೊನೆಗೆ ಹೊಟ್ಟೆಪಾಡಿಗಾಗಿ ಕೃಷಿ ಇಲಾಖೆಯಲ್ಲಿ ಪ್ರಚಾರಕರಾಗಿ ನೌಕರಿ ಹಿಡಿಯಬೇಕಾಯಿತು. ಕೃಷಿ ಇಲಾಖೆಯು ಬಾಳಪ್ಪನವರ ಹಾಡುಗಾರಿಕೆ ಹಾಗು ಜನಪ್ರಿಯತೆಯಿಂದಾಗಿ ತುಂಬಾ ಲಾಭ ಪಡೆಯಿತೆನ್ನಬೇಕು. ಕೃಷಿ ಪ್ರಚಾರ, ಮಿತಕುಟುಂಬ ಪ್ರಚಾರಗಳಿಗಾಗಿ ಬಾಳಪ್ಪನವರು ಸ್ವತಃ ಹಾಡು ರಚಿಸಿ ಹಾಡಿದ್ದಾರೆ.
ಕೌಟುಂಬಿಕ
[ಬದಲಾಯಿಸಿ]ಮುದ್ದೇಬಿಹಾಳದ ಶ್ರೀ ವೀರಪ್ಪ ಹೊನವಾಡ ಇವರ ಪುತ್ರಿ ಶಾಂತಮ್ಮನವರೊಡನೆ ಬಾಳಪ್ಪನವರ ವಿವಾಹ ಜರುಗಿತು. ಈ ದಂಪತಿಗಳಿಗೆ ಆರು ಮಕ್ಕಳು.
ಗಾಯನ ಕಾರ್ಯಕ್ರಮಗಳು
[ಬದಲಾಯಿಸಿ]ಹುಕ್ಕೇರಿ ಬಾಳಪ್ಪನವರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಹಾಡಿದ್ದಾರೆ. ಜಾನಪದ ಗೀತೆಗಳನ್ನಲ್ಲದೇ, ಕನ್ನಡದ ಕವಿಗಳಾದ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಕುವೆಂಪು ಮೊದಲಾದವರ ಗಿತೆಗಳನ್ನು ಹಾಡಿದ್ದಾರೆ. ಸ್ವತಃ ತಾವೇ ಹಾಡು ಕಟ್ಟಿ ಹಾಡಿ ಜನರನ್ನು ರಂಜಿಸಿದ್ದಾರೆ. ಕರ್ನಾಟಕದ ಹೊರಗೂ ಸಹ ಬಾಳಪ್ಪನವರು ವಿಜಯಪತಾಕೆಯನ್ನು ಹಾರಿಸಿದ್ದಾರೆ.
- ೧೯೫೨ರಲ್ಲಿ ಪುಣೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗು ಹಿಂದಿ ಭಾಷೆಗಳಲ್ಲಿ ಗಾಯನ ಮಾಡಿದ್ದಾರೆ.
- ೧೯೫೫ರಲ್ಲಿ ದೆಹಲಿಯಲ್ಲಿ [೧] ನಡೆದ ಯುವಜನ ಮೇಳದಲ್ಲಿ ಹಾಗು ಜವಾಹರಲಾಲ ನೆಹರೂ [೨] ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ೧೯೫೯ರಲ್ಲಿ ದೆಹಲಿಯಲ್ಲಿ [೩] ರಾಷ್ಟ್ರಪತಿ ರಾಜೇಂದ್ರ ಪ್ರಸಾದ [೪] ಇವರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ೧೯೬೨ರಲ್ಲಿ ವಿಜಾಪುರದಲ್ಲಿ ನಡೆದ ಇಂದಿರಾ ಗಾಂಧಿಯವರ [೫] ತುಲಾಭಾರ ಕಾರ್ಯಕ್ರಮದಲ್ಲಿ ಗಾಯನ ಮಾಡಿದ್ದಾರೆ.
- ೧೯೬೭ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಹಾಗು ಅಪೆಕ್ಸ ಥೇಟರಿನಲ್ಲಿ ರಾಷ್ಟ್ರಪತಿ ಡಾ. ಝಕೀರ ಹುಸೇನ [೬] ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
- ೧೯೭೫ರಲ್ಲಿ ವಿಜಯನಗರ [೭] ಉತ್ಸವದಲ್ಲಿ ಭಾಗವಹಿಸಿದ್ದಾರೆ.
- ೧೯೭೭ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದಾರೆ. ೧೯೭೮ರಲ್ಲಿ ಗೋವಾ [೮] ಕನ್ನಡ ಸಂಘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಗೀತ ರಚನೆ
[ಬದಲಾಯಿಸಿ]- ಭಕ್ತಿಗೀತೆಗಳು
- ವಿಕಾಸ ಗೀತೆಗಳು
ಸನ್ಮಾನಗಳು
[ಬದಲಾಯಿಸಿ]ಬಾಳಪ್ಪನವರಿಗೆ ಸಂದ ಸನ್ಮಾನಗಳೂ ಅನೇಕ.
- ೧೯೫೪ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಒಕ್ಕಲುತನ ಪ್ರದರ್ಶನದಲ್ಲಿ ಸಭಾಭೂಷಣ ಬಿರುದು ಪ್ರದಾನ.
- ೧೯೬೨ರಲ್ಲಿ ಹುಬ್ಬಳ್ಳಿಯ ಶ್ರೀ ನಿಜಗುಣ ಸ್ವಾಮಿಗಳಿಂದ ‘ವಿನೋದ ರತ್ನ’ ಬಿರುದು ಪ್ರದಾನ.
- ೧೯೮೦ರಲ್ಲಿ ರಾಷ್ಟ್ರಪ್ರಶಸ್ತಿ ಪ್ರದಾನ
- ೧೯೮೧ರಲ್ಲಿ ದೆಹಲಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಇವರಿಂದ ಪ್ರಶಸ್ತಿ ಪ್ರದಾನ.
- ೧೯೮೨ರಲ್ಲಿ ಕೇರಳದ ತಿರುವಾಂಕೂರಿನ ದಕ್ಷಿಣ ಹಿಂದುಸ್ತಾನದ ಸಾಂಸ್ಕೃತಿಕ ಸೊಸಾಯಿಟಿಯಿಂದ ಪ್ರಶಸ್ತಿ.
- ೧೯೮೪ರಲ್ಲಿ ಕನ್ನಡ ಜಾನಪದ ಅಕಾಡೆಮಿ ಸನ್ಮಾನ.
- ೧೯೮೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
- ೧೯೯೦-೯೧ ಸಾಲಿನ ಮಧ್ಯ ಪ್ರದೇಶ ಸರಕಾರದಿಂದ ತುಳಸೀ ಸಮ್ಮಾನ ಪ್ರಶಸ್ತಿ ಪ್ರದಾನ.
ಅಭಿನಂದನಾ ಗ್ರಂಥ
[ಬದಲಾಯಿಸಿ]- ಜಾನಪದ ಸರದಾರ:ಬಾಳಪ್ಪ ಹುಕ್ಕೇರಿ
ಕೊನೆಯ ಗಾಯನ
[ಬದಲಾಯಿಸಿ]ಬಾಳಪ್ಪನವರು ತಮ್ಮ ಸ್ವಂತ ಊರಾದ ಮುರಗೋಡಿನ ದುರದುಂಡೇಶ್ವರ ಮಠದಲ್ಲಿ , ತಮ್ಮ ೮೩ರ ಇಳಿವಯಸ್ಸಿನಲ್ಲಿಯೂ ಸಹ ಎಂದಿನ ಉತ್ಸಾಹದಿಂದಲೇ ಗಾಯನ ಕಾರ್ಯಕ್ರಮ ನಿಡಿದರು. ಎರಡು ದಿನಗಳ ನಂತರ ಅಂದರೆ ೧೯೯೨ ನವೆಂಬರ ೧೩ರಂದು ನಿಧನರಾದರು.
ವ್ಯಕ್ತಿತ್ವ
[ಬದಲಾಯಿಸಿ]ಹುಕ್ಕೇರಿ ಬಾಳಪ್ಪನವರು ಕೇವಲ ತಮ್ಮ ಹಾಡುಗಾರಿಕೆಯಿಂದಷ್ಟಲೇ ಅಲ್ಲ, ತಮ್ಮ ಸರಳ, ಪ್ರಾಮಾಣಿಕ ವ್ಯಕ್ತಿತ್ವದಿಂದ, ನೇರ ನಡೆ, ನುಡಿಗಳಿಂದ ಹಾಗು ಎಲ್ಲರಲ್ಲಿಯೂ ಅಂತಃಕರಣ ತೋರುವ ಮನೋಭಾವದಿಂದ ಜನಪ್ರಿಯರಾಗಿದ್ದರು. ಜನತೆ ಅವರನ್ನು ಪ್ರೀತಿಯಿಂದ ಜಾನಪದ ಸರದಾರ ಎಂದು ಕರೆಯಿತು.