ಸೀಸದ ವಿಷವೇರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವರಲ್ಲಿ ಸೀಸದ ವಿಷವೇರಿಕೆಯ ವಿಶಿಷ್ಟವಾದ ಆವಿಷ್ಕಾರ—ದಟ್ಟ ಮೆಟಾಫ಼ಿಜ಼ಿಯಲ್ ರೇಖೆಗಳು

ಸೀಸದ ವಿಷವೇರಿಕೆ ಎಂದರೆ ಸೀಸಯುಕ್ತ ಪದಾರ್ಥಗಳ ದೀರ್ಘಕಾಲೀನ ಸಂಪರ್ಕದಿಂದಾಗಿ ದೇಹದ ಊತಕಗಳಲ್ಲಿ ನಿಧಾನವಾಗಿ ಸೀಸ ಸಂಚಯಿಸಿ ಉಂಟಾಗುವ ಹಾನಿಕಾರಕ ಪರಿಣಾಮಗಳು (ಲೆಡ್ ಪಾಯ್ಸನಿಂಗ್, ಪ್ಲಂಬಿಸ್ಮ್).[೧] ಸೀಸದ ಜಲವಿಲೇಯ ಲವಣಗಳು ಪ್ರಬಲ ದೈಹಿಕ (ಸಿಸ್ಟೆಮಿಕ್) ವಿಷಗಳು. ಇವನ್ನು ವಿಸರ್ಜಿಸುವ ವ್ಯವಸ್ಥೆ ದೇಹದಲ್ಲಿ ಇಲ್ಲದಿರುವುದು ವಿಷವೇರಿಕೆಗೆ ಕಾರಣ.

ಆಕರಗಳು[ಬದಲಾಯಿಸಿ]

ಸೀಸ ಆಧಾರಿತ ಬಣ್ಣಗಳು ಮತ್ತು ಸೀಸದ ಕೊಳವೆ ಮೂಲಕ ಬರುವ ಕುಡಿಯುವ ನೀರು ವಿಷವೇರಿಕೆಗೆ ಕಾರಣೀಭೂತವಾಗುವ ಸೀಸದ ಸಾಮಾನ್ಯ ಆಕರಗಳು. ಬಣ್ಣದ ಆಟಿಕೆಗಳನ್ನೂ ಮತ್ತಿತರ ವಸ್ತುಗಳನ್ನೂ ಬಾಯಿಗೆ ಹಾಕುವ ಪ್ರವೃತ್ತಿ ಮಕ್ಕಳಿಗೆ ಇರುವುದರಿಂದ ಮೊದಲನೆಯ ಆಕರ ಅವರಿಗೆ ಬಲು ಅಪಾಯಕಾರಿ. ಕೆಲವು ಉದ್ಯಮಗಳಲ್ಲಿ ಸೀಸಯುಕ್ತ ಘನ, ದೂಳು ಅಥವಾ ಧೂಮಭರಿತ ಪರಿಸರ ಇರುವ ಸಾಧ್ಯತೆ ಹೆಚ್ಚು (ಉದಾ: ಪೆಟ್ರೋಲಿಯಮ್, ಸ್ಫುಟೀಕರಣ, ಮುದ್ರಣ, ಬಣ್ಣ ಮತ್ತು ವರ್ಣದ್ರವ್ಯ, ಸಂಗ್ರಹ ಬ್ಯಾಟರಿ). ಎಂದೇ, ಈ ಉದ್ಯಮಗಳಲ್ಲಿಯ ಸಿಬ್ಬಂದಿಗೆ ಅಪಾಯವಿದೆ.[೨] ಸೀಸ ಆಧಾರಿತ ಕೀಟನಾಶಕಗಳನ್ನು ಸಿಂಪಡಿಸುವ ರೈತರಿಗೂ ಮತ್ತು ಉತ್ಪನ್ನಗಳನ್ನು ತಿನ್ನುವವರಿಗೂ ಅಪಾಯಕಾರಿ. ಟೆಟ್ರಈಥೈಲ್ ಸೀಸಯುಕ್ತ ಇಂಧನ ಉಪಯೋಗಿಸುವ ವಾಹನಗಳು ಉಗುಳುವ ಧೂಮವೂ ಸೀಸದ ಅಪಾಯಕಾರೀ ಆಕರಗಳ ಪೈಕಿ ಒಂದು.

ರೋಗಲಕ್ಷಣಗಳು[ಬದಲಾಯಿಸಿ]

ಇತರ ಅಂಶಗಳು ಸಮವಿದ್ದಾಗಲೂ ಸೀಸದ ವಿಷವೇರಿಕೆಗೆ ಈಡಾಗುವ ಸಂಭವನೀಯತೆಗೆ ಹಾಗೂ ಈಡಾದವರು ತೋರುವ ರೋಗಲಕ್ಷಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಭಿನ್ನತೆಗಳಿವೆ. ವಿಷವೇರಿಕೆಯ ಪರಿಣಾಮಗಳು ನಿಧಾನವಾಗಿ ಪ್ರಕಟವಾಗಬಹುದು; ದೀರ್ಘಕಾಲ ಒಡ್ಡುವಿಕೆಯಿಂದಾಗಿ (ಕ್ರಾನಿಕ್ ಎಕ್ಸ್‌ಪೋಶರ್) ಥಟ್ಟನೆ ಆಗಲೂಬಹುದು. ಈ ವಿಷ ಸಮಗ್ರ ದೇಹಕ್ಕೆ, ವಿಶೇಷತಃ ನರವ್ಯೂಹ, ಜೀರ್ಣನಾಳ ಮತ್ತು ರಕ್ತಕಣ ಉತ್ಪಾದಿಸುವ ಊತಕಗಳಿಗೆ ಬಾಧೆಯುಂಟುಮಾಡುತ್ತದೆ.

ಮುಖದ ಕಾಂತಿಹೀನತೆ, ಚಂಚಲ ಮನೋವೃತ್ತಿ, ಸಿಡುಕು ಸ್ವಭಾವ ಬಾಧಿತರ ಆರಂಭಿಕ ಲಕ್ಷಣಗಳು. ಅಸ್ತವ್ಯಸ್ತ ಪಚನ, ಅಗ್ನಿಮಾಂದ್ಯ, ತೀವ್ರ ಉದರಬೇನೆ, ಉದರಸ್ನಾಯುಗಳ ಸೆಳವು (ಲೆಡ್ ಕಾಲಿಕ್) ಮತ್ತು ಮಲಬದ್ಧತೆ ತೀವ್ರಬಾಧೆಯ ಮೊದಲನೆಯ ಹಂತದ ಚಿಹ್ನೆಗಳು.[೩][೪] ಈ ಹಂತದಲ್ಲಿ ಒಸಡಿನ ಬುಡದಲ್ಲಿ ಕಪ್ಪು ರೇಖೆ (ಲೆಡ್ ಲೈನ್) ಮತ್ತು ರಕ್ತಹೀನತೆ ಗೋಚರಿಸಲೂಬಹುದು. ತಲೆನೋವು, ತಲೆಸುತ್ತು, ಗೊಂದಲಮಯ ಮನಃಸ್ಥಿತಿ, ದೃಷ್ಟಿ ಸಮಸ್ಯೆ ಎರಡನೆಯ ಹಂತದಲ್ಲಿ ಸಾಮಾನ್ಯ. ಅಧಿಕ ಪ್ರಮಾಣದ ಒಡ್ಡುವಿಕೆಯಿಂದ ಪರಿಧೀಯ ನರಗಳು ಬಾಧಿತವಾಗಿ ನಿಶ್ಚೇಷ್ಟತೆಗೆ (ಲೆಡ್ ಪಾಲ್ಸಿ) ಅಥವಾ ಮಿದುಳಿಗೆ ಗಾಸಿಯಾಗಿ ಸಾವಿಗೀಡಾಗುವ ಸಂಭವವೂ ಇದೆ. ಮಕ್ಕಳ ಮಿದುಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ತತ್ಪರಿಣಾಮವಾಗಿ ಕುರುಡು ಅಥವಾ ಕಿವುಡಾಗುವ, ಸಾವಿನಲ್ಲಿ ಪರ್ಯವಸಾನವಾಗುವ ಸೆಳವು ಅಥವಾ ಪ್ರಜ್ಞಾಹೀನತೆ ಉಂಟಾಗುವ ಸಂಭವವಿದೆ.

ಚಿಕಿತ್ಸೆ[ಬದಲಾಯಿಸಿ]

ವಿಷವೇರಿಕೆಯ ಆರಂಭಿಕ ಹಂತಗಳಲ್ಲಿ ಯುಕ್ತ ದೀರ್ಘಕಾಲಿಕ ಚಿಕಿತ್ಸೆ ನೀಡಿ ವಿಷಭರಿತ ಊತಕಗಳನ್ನು ಕ್ರಮೇಣ ಹೊರತೆಗೆಯಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Lead poisoning and health". WHO. September 2016. Archived from the original on 18 October 2016. Retrieved 14 October 2016.
  2. Gracia RC, Snodgrass WR (January 2007). "Lead toxicity and chelation therapy". American Journal of Health-System Pharmacy. 64 (1): 45–53. doi:10.2146/ajhp060175. PMID 17189579.
  3. "Lead Information for Workers". CDC. 30 September 2013. Archived from the original on 18 October 2016. Retrieved 14 October 2016.
  4. Merrill, Morton, Soileau (2007) p. 860

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: