ಸಿದ್ಧವನ ಗುರುಕುಲ

ವಿಕಿಪೀಡಿಯ ಇಂದ
Jump to navigation Jump to search

ಪೀಠಿಕೆ[ಬದಲಾಯಿಸಿ]

ಪ್ರಾಚೀನ ಭಾರತೀಯ ಸಂಸ್ಕೃತಿಯ ಹೆಗ್ಗುರುತಾದ ಗುರುಕುಲ ಪದ್ದತಿಯನ್ನು ಪುನರುಜ್ಜೀವನ ಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ 1940ರಲ್ಲಿ ಕೀರ್ತಿಶೇಷ ಪೂಜ್ಯ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು ಧರ್ಮಸ್ಥಳದಿಂದ 7ಕಿ.ಮೀ. ದೂರದ ಉಜಿರೆಯಲ್ಲಿ ಶ್ರೀ ಸಿದ್ಧವನ ಗುರುಕುಲ ಸ್ಥಾಪಿಸಿದರು. ಅಲ್ಲದೆ ಆಧುನಿಕ ಜೀವನಕ್ಕೆ ಬೇಕಾದ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೆ ಪ್ರಚೋದನೆ ನೀಡಿ, ನಮ್ಮ ಸಂಸ್ಕೃತಿ, ಪರಂಪರೆಗಳ ಮಹೋನ್ನತಿಯನ್ನು ತಿಳಿಸಿಕೊಡುವಂತಹ ಆಧ್ಯಾತ್ಮಿಕ ಶಿಕ್ಷಣವನ್ನು ಗುರುಕುಲದಲ್ಲಿ ವ್ಯವಸ್ಥೆ ಮಾಡಬೇಕೆಂಬುದು ಅವರ ಹೆಬ್ಬಯಕೆಯಾಗಿತ್ತು. ಈ ಉನ್ನತಾದರ್ಶದಿಂದ ಪ್ರೇರಿತರಾಗಿ ಇದನ್ನೊಂದು ಮಾದರಿ ಸೌಂಸ್ಥೆಯನ್ನಾಗಿ ರೂಪಿಸಿದರು. ಈವರೆಗೆ ಈ ಆದರ್ಶ ಸಂಸ್ಥೆಯಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿ, ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡು ಪ್ರಸ್ತುತ ದೇಶ-ವಿದೇಶಗಳಲ್ಲಿ, ಸಮಾಜದ ವಿಭಿನ್ನ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ದಿ| ಡಿ. ರತ್ನವರ್ಮ ಹೆಗ್ಗಡೆಯವರು ಈ ಆದರ್ಶ ಸಂಸ್ಥೆಯ ಮೂಲಭೂತ ಧ್ಯೇಯ-ಧೋರಣೆಗಳಿಗೆ ಪೂರಕವಾಗುವಂತೆ ಹಲವಾರು ಸೌಕರ್ಯಗನ್ನೊದಗಿಸಿ ಸಂಸ್ಥೆಯು ಇನ್ನಷ್ಟು ಪ್ರಗತಿಪರ ಪಥದಲ್ಲಿ ನಡೆಯುವಂತೆ ಮಾಡಿದರು. ಶ್ರೀ ಸಿದ್ಧವನ ಗುರುಕುಲದ ಇಂದಿನ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿ ಶಿಕ್ಷಣ ರಂಗದಲ್ಲಿ ಸಂಸ್ಥೆಯನ್ನೊಂದು ಮೈಲುಗಲ್ಲನ್ನಾಗಿ ರೂಪಿಸಿದ್ದಾರೆ. ಅಲ್ಲದೆ ರಾಜ್ಯ ಹೊರ ರಾಜ್ಯಗಳಿಂದ ಆಕರ್ಷಿತರಾಗಿ ಇಲ್ಲಿ ಪ್ರವೇಶ ಪಡೆಯುವ ಅರ್ಹ ವಿದ್ಯಾರ್ಥಿಗಳಿಗೆ ಇಂದು ಕಾಲೇಜು ಶಿಕ್ಷಣದೊಂದಿಗೆ ಸ್ವಾವಲಂಬಿಯಾಗಿ ಮುಂದಡಿ ಇಡಲು ಆವಶ್ಯಕವಾದ ವೃತ್ತ್ಯಾಧಾರಿತ ಶಿಕ್ಷಣವನ್ನೂ ಒದಗಿಸುವ ವ್ಯವಸ್ಥೆ ಮಾಡಿ, ಗುರುಕುಲಕ್ಕೆ ಮತ್ತಷ್ಟು ವ್ಯಾಪಕ ಸ್ವರೂಪವನ್ನು ನೀಡಿ ಪೋಷಿಸಿಕೊಂಡು ಬರುತ್ತಿದ್ದಾರೆ.

ಗುರುಕುಲದ ದಿನಚರಿ[ಬದಲಾಯಿಸಿ]

ಗುರುಕುಲ ಜೀವನ ಪ್ರಾರಂಭವಾಗುವುದು ಮುಂಜಾನೆ ಸರಿಯಾಗಿ ೫ ಗಂಟೆಯ ಗಂಟಾನಾದದೊಂದಿಗೆ. ನಂತರ ನಿತ್ಯಕರ್ಮಗಳನ್ನು ಮುಗಿಸಿ ದಿನದ ಜೀವನ ಆಹ್ಲಾದಕರವಾಗಿಲು ವಿದ್ಯಾರ್ಥಿಗಳು ದೊಡ್ಡದಾದ ಪ್ರಾರ್ಥನ ಮಂದಿರದಲ್ಲಿ ಸೇರಿ ಯೋಗ, ಪ್ರಾಣಾಯಾಮದೊಂದಿಗೆ ದೇವರನ್ನು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಯ ನಂತರ ಬಿಸಿ ಬಿಸಿ ಚಹಾ ವಿದ್ಯಾರ್ಥಿಗಳನ್ನು ಕಾಯುತ್ತಿರುತ್ತದೆ. ಚಹಾ ಸವಿದ ನಂತರ ವಿದ್ಯಾರ್ಥಿಗಳನ್ನು ಎರಡು ತಂಡಗಳಾಗಿ ವಿಭಾಗಿಸಲಾಗುತ್ತದೆ. ಅದರಲ್ಲಿ ಒಂದು ತಂಡವು ವಿವಿಧ ಕೆಲಸಗಳಲ್ಲಿ ನಿರತರಾದರೆ (ಹಸುಗಳ ಪಾಲನೆ-ಪೋಷಣೆ, ಹೈನುಗಾರಿಕೆ, ತರಕಾರಿ ಬೆಳೆಸುವುದು, ಸುತ್ತಮುತ್ತಲಿನ ಸ್ವಚ್ಛತೆ, ಅಡುಗೆ ತಯಾರಿಕರಿಗೆ ಸಹಾಯ, ಉದ್ಯಾನ ವನದ ಸ್ವಚ್ಛತೆ ಮುತಾಂದವು), ಮತ್ತೊಂದು ತಂಡ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತದೆ.ಸರಿಯಾಗಿ ೭-೩೦ಕ್ಕೆ ಕೆಲಸಗಳನ್ನು ಮುಗಿಸಿ ೮ ಗಂಟೆಯವರೆಗೆ ಶುಚಿಭೂತರಾಗುತ್ತಾರೆ.ಸರಿಯಾಗಿ ೮ ಗಂಟೆಗೆ ಬೆಳಗಿನ ಉಪಹಾರ (ಗಂಜಿ-ಚಟ್ನಿ, ಪಲಾವ್, ಬಿಸಿಬೇಳೆ ಬಾತ್, ಟೊಮೆಟೋ ಬಾತ್, ಅವಲಕ್ಕಿ ಉಪ್ಪಿಟ್ಟು, ಪುಳಿಯೊಗರೆ, ಇಡ್ಲಿ-ಸಾಂಬಾರ್ ಇತ್ಯಾದಿ) ಮುಗಿಸಿ ಕಾಲೇಜಿಗೆ ತೆರಳುತ್ತಾರೆ. ಹಾಗೇ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ಸಂಜೆ ೬ ಗಂಟೆಯೊಳಗೆ ಗುರುಕುಲದಲ್ಲಿ ಇರತಕ್ಕದು. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ಸರಿಯಾಗಿ ೬-೧೫ಕ್ಕೆ ವಿದ್ಯಾರ್ಥಿಗಳು ಪ್ರಾರ್ಥನೆಗೆ ಸೇರುತ್ತಾರೆ. ಇಲ್ಲಿ ಮುಖ್ಯಪಾಲಕರು(ವಾರ್ಡನ್) ರಾಮಾಯಣ, ಮಹಾಭಾರತ, ಮಂಕುತಿಮ್ಮನ ಕಗ್ಗ ಹೀಗೆ ಜೀವನಕ್ಕೆ ಅಗತ್ಯವಾದ ನೀತಿಪೂರ್ಣ ಮತ್ತು ಮೌಲ್ಯಯುತ ಕಥೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಸಮಯ ಸಂದರ್ಭಕ್ಕನುಗುಣವಾಗಿ ಚರ್ಚೆ,ಭಾಷಣ, ರಸ ಪ್ರಶ್ನೆ ಕಾರ್ಯಕ್ರಮ ಮುಂತಾದವುಗಳನ್ನು ನಡೆಸುತ್ತಾರೆ. ಪ್ರತಿ ಶನಿವಾರ ಇದೇ ಸಮಯಕ್ಕೆ ಸರಿಯಾಗಿ ಭಜನಾ ಕಾರ್ಯಕ್ರಮ ನಡೆದರೆ, ಭಾನುವಾರದಂದು ಸಾಂಸ್ಕ್ಋತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಡುತ್ತಾರೆ.೭ ರಿಂದ ೭-೩೦ ರವರೆಗೆ ಭೋಜನ ಮುಗಿಸಿ, ೧೦-೩೦ರವರೆಗೆ ಅಧ್ಯಯದಲ್ಲಿ ನಿರತರಾಗುತ್ತಾರೆ. ನಂತರ ವಿಶ್ರಾಂತಿ ಪಡೆಯುತ್ತಾರೆ.

 • ವೇಳಾಪಟ್ಟಿ

ಬೆಳಿಗ್ಗೆ:

   ೫-೦೦ - ೫-೩೦ ನಿತ್ಯವಿಧಿ
   ೫-೩೦ - ೬-೦೦ ಪ್ರಾರ್ಥನೆ
   ೬-೧೫ - ೭-೩೦ ಕೃಷಿ ಕೆಲಸ(ಸರದಿಯಂತೆ)
   ೬-೧೦ - ೭-೪೫ ಅಧ್ಯಯನ(ಸರದಿಯಂತೆ)
   ೮-೦೦ - ೯-೦೦ ಊಟ, ಕಾಲೇಜಿಗೆ ತಯಾರಿ
   ೯-೦೦ - ೧-೦೦ ಕಾಲೇಜು ವ್ಯಾಸಂಗ

ಮಧ್ಯಾಹ್ನ:

   ೧-೦೦ - ೨-೦೦ ಬೋಜನ
   ೨-೦೦ - ೫-೦೦ ಕಾಲೇಜು ವ್ಯಾಸಂಗ

ಸಂಜೆ:

   ೫-೦೦ - ೬-೦೦ ಆಟೋಟಗಳು/ವಿಹಾರ
   ೬-೦೦ - ೬-೨೦ ಪಾಠೇತರ ಚಟುವಟಿಕೆ
   ೬-೨೦ - ೭-೦೦ ಗೀತೋಪದೇಶ ಹಾಗೂ ಧಾರ್ಮಿಕ ಪ್ರವಚನ ಇತ್ಯಾದಿ
   ೭-೦೦ - ೭-೩೦ ಭೋಜನ
   ೭-೦೦ - ೧೦-೩೦ ಅಧ್ಯಯನ
   ೧೦-೩೦ - ೫-೦೦ ವಿಶ್ರಾಂತಿ


ಅರ್ಹತೆ ಮತ್ತು ಆಯ್ಕೆ[ಬದಲಾಯಿಸಿ]

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮುಗಿಸಿದ ಅರ್ಹ ವಿದ್ಯಾರ್ಥಿಗಳಿಗೆ ಗುರುಕುಲದಲ್ಲಿ ಅವಕಾಶವಿದ್ದು ಆಯ್ಕೆ ಮಾಡುವ ವಿಧಾನ ಕಟ್ಟುನಿಟ್ಟಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲರಾಗಿರುವ ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಇಂತಹ ಬಡ ವಿದ್ಯಾರ್ಥಿಗಳಿಗಾಗಿ ಗುರುಕುಲ ಯೋಗ್ಯವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೂ ಅವಕಾಶವಿರುತ್ತದೆ.

ಸರಳ ಜೀವನ[ಬದಲಾಯಿಸಿ]

ಇಲ್ಲಿಯ ವೇಷಭೂಷಣ ಸರಳವಾಗಿದ್ದು ಶ್ವೇತ ವಸ್ತ್ರಗಳನ್ನು ಮಾತ್ರ ಧರಿಸತಕ್ಕದ್ದು. ಉಪಹಾರ ಮತ್ತು ಊಟದ ಸಮಯದಲ್ಲಿ ಬಿಳಿ ಪಂಚೆ, ಮೇಲ್ಹೋದಿಕೆ ಕಡ್ಡಾಯ. ಕೆಲಸದ ಸಮಯವನ್ನು ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲೂ ಬಿಳಿ ಪಂಚೆ,ಬಿಳಿ ಅಂಗಿಯನ್ನು ಧರಿಸಲೇಬೇಕು. ಇಲ್ಲಿ ಸ್ನಾನ ಕೂಡ ತಣ್ಣೀರಿನಲ್ಲೇ. ಐಷಾರಾಮಿ ವಸ್ತುಗಳಾದ ಮೊಬೈಲ್, ಲ್ಯಾಪ್ ಟಾಪ್, ಐ-ಪಾಡ್ ಮುಂತಾದ ಯಾವುದೇ ಯಾಂತ್ರಿಕ ವಸ್ತುಗಳನ್ನು ಬಳಸುವಂತಿಲ್ಲ.

ಆಚರಣೆ[ಬದಲಾಯಿಸಿ]

ಇಲ್ಲಿ ಎಲ್ಲಾ ರಾಷ್ಟ್ರಿಯ ಹಬ್ಬಗಳನ್ನು ಮತ್ತು ಧರ್ಮ ಭೇದವಿಲ್ಲದೆ ಎಲ್ಲಾ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಗಣೇಶ ಮೂರ್ತಿಯು ವಿದ್ಯಾರ್ಥಿಗಳಿಂದಲೇ ಪೂಜಿಸಿ ವಿಜೃಂಭಣೆಯ ಮೆರವಣಿಗೆಯೊಂದಿಗೆ, ಅನೇಕ ಕಸರತ್ತುಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

ಸರ್ಕಾರ[ಬದಲಾಯಿಸಿ]

ಪ್ರಜಾಪ್ರಭುತ್ವದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿದ್ಯಾರ್ಥಿಗಳದ್ದೆ ಒಂದು ಸರ್ಕಾರವನ್ನು ಕಟ್ಟಲಾಗುತ್ತದೆ. ರಾಜ್ಯ-ರಾಷ್ಟ್ರದಲ್ಲಿರುವಂತೆ ಎಲ್ಲ ರಾಜಕೀಯ ಹುದ್ದೆಗಳನ್ನು ಒಳಗೊಂಡು ಸಾಂವಿಧಾನಿಕ ಚುನಾವಣೆ ಮೂಲಕ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಅಧಿಕ ಮತಗಳನ್ನು ಪಡೆದವರು ಸರ್ಕಾರ ನಿರ್ಮಿಸಿದರೆ, ಉಳಿದ ಸ್ಪರ್ಧಿಗಳು ವಿರೋಧ ಪಕ್ಷದಲ್ಲಿದ್ದು ವರ್ಷದ ಎಲ್ಲ ಚಟುವಟಿಕೆಗಳು ಸರಿಯಾಗಿ ನಡೆಯವಂತೆ ನೋಡಿಕೊಳ್ಳುತ್ತಾರೆ.

ದಾಖಲಾತಿ[ಬದಲಾಯಿಸಿ]

 • ವಿದ್ಯಾರ್ಥಿಯ ಬುದ್ದಿಮತ್ತೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿದೆ.
 • ಎಲ್ಲಾ ಧರ್ಮದ, ಸಮುದಾಯದ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ.
 • ವ್ಯಾಸಂಗ ಮುಗಿಸಿ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಹೊಸ ದಾಖಲಾತಿ ಅವಲಂಬಿತವಾಗುತ್ತದೆ.
 • ತೋಟಗಾರಿಕೆ,ಹೈನುಗಾರಿಕೆ ಮಾಡಲು ಸಮರ್ಥರಿರಬೇಕು.
 • ೫೦೦ ಮರಗಳಿರುವ ತೆಂಗಿನತೋಟ, ಅಡಿಕೆತೋಟ ಜೊತೆಗೆ ದಿನಬಳಕೆಗೆ ತರಕಾರಿಗಳನ್ನು ಬೆಳೆಸಲು ಸಮರ್ಥರಿರಬೇಕು.

ಗುರುಕುಲದ ನಿಯಮಾವಳಿ[ಬದಲಾಯಿಸಿ]

 • ಗುರುಕುಲಕ್ಕೆ ಸೇರಿದ ವಿಧ್ಯಾರ್ಥಿಯು ಗುರುಕುಲದ ಒಳಗೆ ಮತ್ತು ಹೊರಗೆ ಅತ್ಯಂತ ಶಿಸ್ತಿನಿಂದ, ಸಂಯಮದಿಂದ ವರ್ತಿಸತಕ್ಕದ್ದು.
 • ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ಪಾಲಕರ ಸಭೆ ಜರುಗುವುದು.
 • ಗುರುಕುಲದ ಪಾಲಕರ ನಿರ್ದೇಶನದಂತೆ ಸರಳ ಉಡುಪನ್ನು ಧರಿಸುವುದು.
 • ವಿದ್ಯಾರ್ಥಿ ನಿಲಯದ ನಿಯಮೋಲ್ಲಂಘನೆ ಮಾಡಿದರೆ ಗುರುಕುಲದ ವಾಸ್ತವ್ಯ ಮತ್ತು ಶ್ರೀ ಧ.ಮ. ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶವಿರುವುದಿಲ್ಲ.
 • ಗುರುಕುಲದ ನಿಯಮಾವಳಿಗೆ ವಿರೋಧವಾಗಿ ನಡೆಯುವ ಹಾಗೂ ದುರ್ನಡತೆಯ ವಿದ್ಯಾರ್ಥಿಯನ್ನು ಗುರುಕುಲದಿಂದ ಅಮಾನತುಗೊಳಿಸಲಾಗುವುದು. ಕಾಲೇಜಿನಿಂದಲೂ ತೆಗೆದುಹಾಕಲಾಗುವುದು.
 • ಗುರುಕುಲದ ವಿದ್ಯಾರ್ಥಿಗಳು ಪ್ರಾಧ್ಯಾಪಕರು, ವ್ಯವಸ್ತಾಪಕರು ಹಾಗೂ ನೌಕರ ವರ್ಗದವರಲ್ಲಿ ವಿನಯಶೀಲರಾಗಿ ವರ್ತಿಸತಕ್ಕದ್ದು.
 • ಗುರುಕುಲದಲ್ಲಿ ನಡೆಯುವ ಧಾರ್ಮಿಕ ಪ್ರವಚನ, ಪೂಜೆ, ಭಜನೆ,ಹಾಗೂ ಸಭೆ ಸಮಾರಂಭಗಳಲ್ಲಿ ತಪ್ಪದೇ ಭಾಗವಹಿಸತಕ್ಕದ್ದು.
 • ಅಧಿಕಾರಿ ವರ್ಗದವರು ಮತ್ತು ಅತಿಥಿಗಳು ಗುರುಕುಲದ ವಿದ್ಯಾರ್ಥಿಗಳ ಕೊಠಡಿಗೆ ಬಂದಾಗ ಎದ್ದು ನಿಂತು ನಮಸ್ಕಾರ ಮಾಡುವ ಶಿಷ್ಟಾಚಾರವನ್ನು ಅಳವದಿಸಿಕೊಳ್ಳತಕ್ಕದ್ದು.
 • ಗುರುಕುಲದ ವಿದ್ಯಾರ್ಥಿಗಳಲ್ಲಿ ತಮ್ಮೊಳಗೆ ಮತ್ತು ನೌಕರ ವರ್ಗದವರಲ್ಲಿ ಮನಸ್ತಾಪ ಬಂದರೆ ಪಾಲಕರ ಗಮನಕ್ಕೆ ತರುವುದು.
 • ಮೊಬೈಲ್, ವಾಕ್ಮನ್ ಮುಂತಾದ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟುಕೊಳ್ಳಬಾರದು.

ಗುರುಕುಲದ ಸೌಕರ್ಯಗಳು[ಬದಲಾಯಿಸಿ]

 • ಉಚಿತ ಊಟ ಹಾಗೂ ವಸತಿಯ ವ್ಯವಸ್ಥೆಯಿರುವುದು.
 • ಅಧ್ಯಯನಕ್ಕೆ ಗ್ರಂಥಾಲಯವಿದೆ.
 • ಪ್ರತಿ ಕೊಠಡಿಯಲ್ಲೂ ಅಧ್ಯಯನಕ್ಕಾಗಿ ಮೇಜು, ಕುರ್ಚಿ, ಟೇಬಲ್ ಲ್ಯಾಂಪ್, ಫ್ಯಾನ್ ಸೌಕರ್ಯವಿದ್ದು, ವಿದ್ಯುತ್ ಇಲ್ಲದ ಸಮಯ ಜನರೇಟರ್ ಬಳಸಲಾಗುವುದು.
 • ವಿದ್ಯಾರ್ಥಿಗಳಲ್ಲಿ ಉತ್ತಮ ಸ್ವಾವಲಂಬನೆ ಬೆಳೆಸಲು ಕೃಷಿ, ಹೈನುಗಾರಿಕೆ, ತರಕಾರಿ ಬೆಳೆಸುವ ತರಬೇತಿಗಳನ್ನು ಒದಗಿಸಲಾಗುತ್ತದೆ.
 • ವಿದ್ಯಾರ್ಥಿಗಳಿಗೆ ಸಮಾಜಸೇವೆ, ಶ್ರಮದಾನ, ಜನ ಸಂಪರ್ಕ ಮೊದಲಾದ ಅನೇಕ ವಿಚಾರಗಳಲ್ಲಿ ತರಬೇತಿ ಪಡೆಯಲು ಅವಕಾಶ ನೀಡಲಾಗುವುದು.
 • ಬೌದ್ಧಿಕ ಹಾಗೂ ಶಾರೀರಿಕ ವಿಕಾಸನಕ್ಕಾಗಿ ಯೋಗ, ಪ್ರಾಣಾಯಾಮ, ಭಜನೆ, ಸಾಂಸ್ಕೃತಿಕ ಚಟುವಟಿಕೆಗಳು, ದಾರ್ಮಿಕ ಹಾಗೂ ನೈತಿಕ ಪ್ರವಚನಗಳ ವ್ಯವಸ್ಥೆಯಿರುವುದು.
 • ಅನಾರೋಗ್ಯ ಕೊಠಡಿ, ಪ್ರಥಮ ಚಿಕಿತ್ಸೆಯ ಸೌಲಭ್ಯವಿರುತ್ತದೆ.
 • ಅತಿಥಿ ಕೊಠಡಿಗಳೂ ಇವೆ.
 • ಒಳಾಂಗಣ ಕ್ರೀಡಾ ಕೊಠಡಿ, ಟಿಟಿ ಹಲಗೆ ಮತ್ತು ಅಗತ್ಯವಿರುವ ಕ್ರೀಡಾ ಸಲಕರಣೆಗಳಿವೆ.
 • ದೂರದರ್ಶನ ಕೊಠಡಿ ಮತ್ತು ಧ್ವನಿವರ್ದಕಗಳಿವೆ.

ಗುರುಕುಲದ ಉದ್ದೇಶಗಳು[ಬದಲಾಯಿಸಿ]

 • ಶ್ರೀ ಕ್ಷೇತ್ರ ಧರ್ಮಸ್ಥಳದ ಉನ್ನತಾದರ್ಶಗಳ ಹಿನ್ನೆಲೆಯಲ್ಲಿ ಪ್ರಾಚೀನ ಭಾರತದ ಗುರುಕುಲ ಪದ್ಧತಿಯ ಶಾಂತ ಪರಿಸರದಲ್ಲಿ ನಾಡಿನ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶವೊದಗಿಸಿ, ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವುದು.
 • ನಮ್ಮ ದೇಶದ ಧಾರ್ಮಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳ ಪರಿಚಯವನ್ನು ವಿದ್ಯಾರ್ಥಿಗಳ ಹಂತದಲ್ಲೇ ನೀಡಿ, ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ತರಬೇತಿಯನ್ನು ಒದಗಿಸಿ ಕೊಡುವುದು.
 • ನಮ್ಮ ಭಾರತೀಯ ಜನ ಜೀವನದ ಮೂಲಾಧಾರವಾದ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವಿದ್ಯಾರ್ಥಿಯ ಬದುಕಿನಲ್ಲಿ ‘ಶ್ರಮ ಗೌರವ’ದ ಆದರ್ಶತತ್ವವನ್ನು ಅಳವಡಿಸುವ ಅವಕಾಶವನ್ನು ಕಲ್ಪಿಸುವುದು.
 • ಗುರುಕುಲದಲ್ಲಿ ಪ್ರತಿನಿತ್ಯವೂ ನಡೆಯುವ ವೈಭವಪೂರ್ಣ ಚಟುವಟಿಕೆಗಳಲ್ಲಿ, ವಿವಿಧ ಕಲೆಗಳು ಮತ್ತು ಕ್ರೀಡಾ ಕಾರ್ಯಗಳಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನದ ಸಂದರ್ಭಗಳು ಹೆಚ್ಚು ಹೆಚ್ಚು ಸಿಗುವಂತೆ ಮಾಡುವುದು.
 • ವೇದಾಧ್ಯಯನ, ಜೈನ ಧರ್ಮ, ಸಂಸ್ಕೃತ ಪಾಠಗಳೊಂದಿಗೆ ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿ ನಿಲ್ಲುವಂತಹ ಸಹ ಜೀವನದ ವಾತಾವರಣವನ್ನು ಸವಿಯುವುದಕ್ಕಾಗಿ ವಿವಿಧ ಧಾರ್ಮಿಕ ಪರ್ವಗಳ ಆಚರಣೆಯ ಮೂಲಕ ಉಜ್ವಲ ರಾಷ್ಟ್ರಪ್ರೇಮವುಳ್ಳ ನಾಗರಿಕರನ್ನು ರೂಪಿಸುವುದು.

[೧]

 1. www.siddavana.com