ವಿಷಯಕ್ಕೆ ಹೋಗು

ಸಂಗೀತ ಕಛೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮ ವರ್ಮ ಅವರ ಕಛೇರಿ

ಕರ್ನಾಟಕ ಸಂಗೀತದ ಹಾಡುಗಳೊಂದಿಗೆ ಸಂಗೀತಗಾರರು ಮತ್ತು ಪ್ರೇಕ್ಷಕರು ಒಟ್ಟಾಗಿ ಸಭೆ ಸೇರುವುದೇ ಕಛೇರಿ. ಇದನ್ನು ಹಾಡುಗಾರಿಕೆಯ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ವಿದ್ವಾನ್‌ಗಳ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಕೇಳಲು ಸಂಗೀತ ರಸಿಕರು ಮತ್ತು ಸಾಮಾನ್ಯ ಸಂಗೀತ ಅಭಿಮಾನಿಗಳು ಕಛೇರಿ ನಡೆಯುವ ಸ್ಥಳಗಳಲ್ಲಿ ಸೇರುತ್ತಾರೆ. ಈ ಪದದ ವ್ಯುತ್ಪತ್ತಿಯನ್ನು ಗಮನಿಸುವುದಾದರೆ "ಕಛೇರಿ" ಎಂಬ ಪದವು ಉರ್ದು ಭಾಷೆಯಿಂದ ಬಂದಿದ್ದು, ಹಿಂದಿಯಲ್ಲಿ ನ್ಯಾಯಾಲಯ ಎಂಬ ಅರ್ಥವನ್ನು ನೀಡುತ್ತದೆ.

ಗಾಯಕ ಅರಿಯಕುಡಿ ರಾಮಾನುಜ ಅಯ್ಯಂಗಾರ್ (1890-1967) ಕರ್ನಾಟಕ ಸಂಗೀತದಲ್ಲಿ ಆಧುನಿಕ ಕಛೇರಿ (ಸಂಗೀತ) ಸಂಪ್ರದಾಯವನ್ನು ಆರಂಭಿಸಿದರು. ಮಹಿಳಾ ಕಲಾವಿದರಲ್ಲಿ, ಎಂ.ಎಲ್.ವಸಂತಕುಮಾರಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಕಛೇರಿ ಸಂಸ್ಕೃತಿಯ ಪ್ರಚಾರಕ್ಕೆ ಮುಂದಾದರು. 1998ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ಪಡೆದ ಮೊದಲ ಮಹಿಳಾ ಕಲಾವಿದೆ ಎಂಎಸ್ ಸುಬ್ಬುಲಕ್ಷ್ಮಿ (1916 – 2004) ಅವರು ಅತ್ಯಂತ ಪ್ರಸಿದ್ಧ ಗಾಯಕರಲ್ಲೊಬ್ಬರು. ಅವರು ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ ಮೊದಲ ಕಛೇರಿ ನೀಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದು ಪ್ರೇಕ್ಷಕರು ಮತ್ತು ಸಂಗೀತ ವಿಮರ್ಶಕರಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿತ್ತು.

ಇತಿಹಾಸ[ಬದಲಾಯಿಸಿ]

ಡಿ.ಕೆ.ಪಟ್ಟಮ್ಮಾಳ್ ಅವರಿಂದ ಕಛೇರಿ ಹಾಡುಗಾರಿಕೆ

ಕರ್ನಾಟಕ ಸಂಗೀತ ಕಛೇರಿಯ ಸಂದರ್ಭದಲ್ಲಿ ಬಳಸಿದ ಕಛೇರಿ ಪದದ ಮೂಲ ಹಿಂದಿ ಭಾಷೆಯ "ಕಛೇರಿ" ಎಂಬ ಪದವಾಗಿದೆ. ಕರ್ನಾಟಕ ಸಂಗೀತವನ್ನು ಸೂಚಿಸಲು ಬಳಸಿದ ಈ ಪದದ ಮೂಲ ಅರ್ಥವನ್ನು ನ್ಯಾಯಾಲಯ, ಜನರು ಸೇರುವ ಸರ್ಕಾರಿ ಕಚೇರಿ ಎಂದು ಗುರುತಿಸಲಾಗಿದೆ. ಪ್ರಾಯಶಃ ತಂಜಾವೂರು ಅಂದರೆ ಈಗಿನ ತಮಿಳುನಾಡಿನಲ್ಲಿ ಮರಾಠರ ಆಳ್ವಿಕೆಯ (1670 – 1800) ಕಾಲದಲ್ಲಿ ಕರ್ನಾಟಕ ಸಂಗೀತವನ್ನು ರಾಜರ ದರ್ಬಾರ್ನಲ್ಲಿ ಆರಂಭದಲ್ಲಿಅಳವಡಿಸಿಕೊಳ್ಳಲಾಯಿತು. ಇದು ಪ್ರತ್ಯೇಕ ಅಥವಾ ಒಂದು ಮೂಲೆಯಲ್ಲಿರುವ ಸ್ಥಳವಾಗಿರದೆ, ಸಭಾಂಗಣವಾಗಿದ್ದು, ರಾಜರು ನೆರೆದಿರುವ ಪ್ರೇಕ್ಷಕರಿಗೆ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದ ಸ್ಥಳವಾಗಿದೆ. ಇದು ಎಲ್ಲಾ ವರ್ಗದ ಜನರು ರಾಜನ ಮುಂದೆ ತಮ್ಮ "ಆಕಾಂಕ್ಷೆಗಳು ಮತ್ತು ಕಾಳಜಿಗಳನ್ನು" ಪ್ರಸ್ತುತಪಡಿಸುವ ಸ್ಥಳವಾಗಿತ್ತು. ಈ ಸ್ಥಳದಲ್ಲಿ ಸಂಗೀತಗಾರರು ತಮ್ಮ ಸಂಗೀತ ಸಾಧನೆಗಳನ್ನು ರಾಜರ ಮುಂದೆ ಪ್ರಸ್ತುತಪಡಿಸುತ್ತಿದ್ದರು. ಈ ಸಮಾನತೆಯ ಕಾರಣಗಳಿಂದಾಗಿ ನ್ಯಾಯ ತೀರ್ಮಾನ ಅಥವಾ ದರ್ಬಾರ್ ನಡೆಯುವ ಅದೇ ಸ್ಥಳದಲ್ಲಿ ಖ್ಯಾತಿಯ ಸಂಗೀತಗಾರರು ಪ್ರಸ್ತುತಪಡಿಸುವ ಕರ್ನಾಟಕ ಸಂಗೀತದ ಹಾಡುಗಳನ್ನು ಕಛೇರಿ ಎಂದು ಕರೆಯಲಾಯಿತು. ಇದು ಕಳೆದ ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಭಾಷಿಕವಾಗಿ ಸ್ಥಳವನ್ನು ಪ್ರತಿನಿಧಿಸುವುದರೊಂದಿಗೆ ಕರ್ನಾಟಕ ಸಂಗೀತದ ಸಾಂಸ್ಕೃತಿಕ ಮಹತ್ವವನ್ನು ಸೂಚಿಸುವ ಆಯ್ದ ಕೂಟವನ್ನು ಸೂಚಿಸುತ್ತದೆ. ಇದು ದಕ್ಷಿಣ ಭಾರತದ ಸಂಗೀತ ಪರಂಪರೆಯಲ್ಲಿ ಪ್ರಾಬಲ್ಯವನ್ನು ಹೊಂದಿರುವ ಸಂಗೀತ ಕಛೇರಿಗಳ ಪರಿಕಲ್ಪನೆಯ ಮೂಲವಾಗಿದೆ.

ರೂಪುರೇಷೆ[ಬದಲಾಯಿಸಿ]

1930ರ ದಶಕದಲ್ಲಿ ಅರಿಯಕುಡಿ ರಾಮಾನುಜ ಅಯ್ಯಂಗಾರ್‌ರಿಂದ ರೂಪಿಸಲ್ಪಟ್ಟ ಕಛೇರಿಯ ಆಧುನಿಕ ಸ್ವರೂಪವು ಹಿಂದಿನ ಗುರುಗಳು, ವಿಶೇಷವಾಗಿ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮ ಶಾಸ್ತ್ರಿಗಳಿಂದ ರೂಪಿಸಲ್ಪಟ್ಟ ಸಾಂಪ್ರದಾಯಿಕ ಕರ್ನಾಟಕ ಸಂಗೀತದ ಸಮೃದ್ಧ ಮಿಶ್ರಣವನ್ನು ಹೊಂದಿದ್ದು, ಕರ್ನಾಟಕ ಸಂಗೀತದಲ್ಲಿ ಸಾರ್ವಜನಿಕರ ಆಸಕ್ತಿಯನ್ನು ಉಳಿಸುವ ಉದ್ದೇಶದಿಂದ ಕರ್ನಾಟಕ ಸಂಗೀತದಲ್ಲಿ ಅಭಿರುಚಿಯುಳ್ಳ ಪ್ರೇಕ್ಷಕರಿಗೆ ಬಹಳಷ್ಟು ಸೂಕ್ತವಾಗಿದೆ. ಇದನ್ನು ರಂಗಭೂಮಿ ಮತ್ತು ನಾಟಕದಲ್ಲಿನ ಸಂಗೀತ ರೂಪಾಂತರಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಗಾಯನದಲ್ಲಿ ದೀರ್ಘ ಅವಧಿಯವರೆಗೆ ಪ್ರೇಕ್ಷಕರ ಗಮನವನ್ನು ಸೆಳೆಯುವ ಕಂಠ ಮತ್ತು ಹಾಡುಗಳ ಸಂಗ್ರಹವನ್ನು ಹೊಂದಿರುವ ಗಾಯಕನ ಆಯ್ಕೆಯು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಕಛೇರಿಯು ಆರ್ಥಿಕ ಅವಶ್ಯಕತೆ, ಮನರಂಜನೆ ಮತ್ತು ಕಲಾ ಸೌಂದರ್ಯದ ಅಗತ್ಯವನ್ನು ಸಹ ಪೂರೈಸಿದೆ. ಕಛೇರಿಯ ಅವಧಿಯನ್ನು ಮದ್ರಾಸಿನ ಸಂಗೀತ ಅಕಾಡೆಮಿಯು 3 ಗಂಟೆಗಳೆಂದು ನಿಗದಿಪಡಿಸಿದೆ. ಸಂಗೀತ ಕಛೇರಿಯು ವರ್ಣಂನೊಂದಿಗೆ ಆರಂಭವಾಗುತ್ತದೆ. ಇದು ಪರಂಪರಾಗತ ಸಂಗೀತಗಾರರಿಂದ ರೂಪಿಸಲ್ಪಟ್ಟ ಪರಿಪೂರ್ಣವಾದ ಒಂದು ರೂಪವಾಗಿದ್ದು, ಸುದೀರ್ಘವಾದ ಸಂಗೀತ ಸಂಯೋಜನೆಗಳಿಗೆ ಕಾರಣವಾಗುವ ಗಾಯಕರಿಗೆ ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಇದನ್ನು ಅನೇಕ ಕೃತಿಗಳು (ಸಂಗೀತ ಸಂಯೋಜನೆಗಳು) ಮತ್ತು ರಾಗಗಳು (ಮಧುರಗಳು) ಅನುಸರಿಸುತ್ತವೆ. ಈ ಅನುಕ್ರಮವು ಪ್ರೇಕ್ಷಕರ ಚಿತ್ತವನ್ನು ಅನುಗೊಳಿಸಿ ಪ್ರದರ್ಶಕನು ಸರಾಗವಾಗಿ ಪ್ರದರ್ಶನವನ್ನು ನೀಡಲು ಅನುವು ಮಾಡಿಕೊಡುತ್ತದೆ. ಶಾಸ್ತ್ರೀಯ ಹಾಡುಗಳು ಪಲ್ಲವಿ (ಹಾಡಿನ ವಿಷಯಾಧಾರಿತ ಸಾಲುಗಳು) ಮೂಲಕ ಸಮತೋಲಿತ ಲಯದೊಂದಿಗೆ ಕೂಡಿದ ಅಲಾಪನಾ ಎಂಬ ಮಧುರ ವಿಸ್ತೃತ ವಿಸ್ತರಣೆಯ ಪೀಠಿಕೆಯೊಂದಿಗೆ ಸಾಗುತ್ತವೆ. ಕಛೇರಿಯು ಪದಂ (ಸಂಗೀತ ಸಂಯೋಜನೆ), ಜಾವಳಿ ಮತ್ತು ರಾಷ್ಟ್ರೀಯ ವಿಷಯಗಳುಳ್ಳ ಹಾಡುಗಳ ನಿರೂಪಣೆಯೊಂದಿಗೆ ಮುಕ್ತಾಯಗೊಳ್ಳುವ ಮೂಲಕ ಪ್ರೇಕ್ಷಕರ ಗಮನ ಮತ್ತು ಮೆಚ್ಚುಗೆಯನ್ನು ಹಿಡಿದಿಟ್ಟುಕೊಳ್ಳುತ್ತದೆ.

ಕರ್ನಾಟಕ ಸಂಗೀತ ಗಾಯನ ಕಛೇರಿ

ಕರ್ನಾಟಕ ಸಂಗೀತದ ಕಛೇರಿ ಸಾಮಾನ್ಯವಾಗಿ ಗಾಯನ ಸಂಗೀತವಾಗಿದೆ. ಕಛೇರಿಯಲ್ಲಿನ ವಾತಾವರಣವು "ಸಂಯಮದಿಂದ ಮತ್ತು ಘನತೆಯಿಂದ ಕೂಡಿರುತ್ತದೆ". ಆದರೆ ಹಿಂದೂಸ್ತಾನಿ ಸಂಗೀತದ ಕಛೇರಿಯ ಸ್ವರೂಪವನ್ನು ಪ್ರತಿನಿಧಿಸುವ "ಮೆಹ್ಫಿಲ್ " ಸಂದರ್ಭದಲ್ಲಿ "ವಿಶಿಷ್ಟವಾದ ಕೈಬಿಡುವಿಕೆ" ಇದೆ. ಈ ಸ್ವರೂಪದಲ್ಲಿನ ಕಛೇರಿಗಳು ಇತ್ತೀಚಿನ ದಿನಗಳಲ್ಲಿ ಪ್ರತಿಭಾನ್ವಿತ ಸಂಗೀತಗಾರರನ್ನು ಹೆಚ್ಚಾಗಿ ಆಕರ್ಷಿಸಿವೆ ಮತ್ತು ಗಾಯನ ಸಂಗೀತದ ಈ ಪ್ರಕಾರದಲ್ಲಿ ನೂರಾರು ಸಂಗೀತಗಾರರು, ವೈಣಿಕರು, ವಾದ್ಯಗಾರರು, ಪಿಟೀಲು, ಕೊಳಲು ಮತ್ತು ಇತ್ಯಾದಿ ಪ್ರಕಾರದವರು ತೊಡಗಿಸಿಕೊಂಡಿದ್ದಾರೆ. ಕಛೇರಿ ಸಂಗೀತ ಸ್ವರೂಪದಲ್ಲಿ, ಹಾಡುಗಳನ್ನು ಮಧ್ಯಮ ಮತ್ತು ವೇಗದ ಗತಿಯಲ್ಲಿ ಪ್ರದರ್ಶಿಸಲಾಗುತ್ತದೆ. ನಿಧಾನ ಮತ್ತು ನಿಧಾನ ಗತಿಯಲ್ಲಿ ಸಾಗುವ ಹಿಂದೂಸ್ತಾನಿ ಹಾಡುಗಾರಿಕೆಗೆ ಹೋಲಿಸಿದರೆ ಇದು ಪ್ರದರ್ಶನಕ್ಕೆ ಅದರ ಅರ್ಧದಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

ಆದಾಗ್ಯೂ, ಸಂಗೀತದ ಅಭಿಮಾನಿಗಳ ಸಮ್ಮುಖದಲ್ಲಿ ಮದುವೆಯ ಆರತಕ್ಷತೆಯ ಭಾಗವಾಗಿ ನಡೆಯುವ 'ಕಛೇರಿ' ಪ್ರದರ್ಶನವು ಸಂಗೀತಗಾರರಿಗೆ ಅವರ ಸಂಗೀತ ಪ್ರೌಢಿಮೆ ಮತ್ತು ಸಂಯೋಜನೆಗಳ ರೂಪಾಂತರ ಕೌಶಲ್ಯ ಮತ್ತು ಸಂಗೀತದ ವಿದ್ವತ್ ಜ್ಞಾನವನ್ನು ಪ್ರಸ್ತುತಪಡಿಸಲು ಅವಕಾಶವನ್ನು ನೀಡುತ್ತದೆ. ಅಂತಹ ಕಛೇರಿಗಳಲ್ಲಿ ಪ್ರಸ್ತುತಪಡಿಸಲಾದ ಹಾಡುಗಳು ನಿರ್ದಿಷ್ಟ ರಾಗವನ್ನು ವಿಷದಪಡಿಸುವಂತೆ ಮಾಡುತ್ತವೆ. ಇದು ಒಂದು ನಿರ್ದಿಷ್ಟ ಲಯಗಾರಿಕೆಯೊಂದಿಗೆ ಹಾಡಿದ ಸಾಲುಗಳ ಗುಂಪನ್ನು ಹೊಂದಿರುವ ರಾಗದ ಸ್ವರೂಪವನ್ನು ಪ್ರೇಕ್ಷಕರಿಗೆ ಸರಿಯಾಗಿ ತಿಳಿಸುತ್ತದೆ. ಅಂತಹ ಪ್ರಸ್ತುತಪಡಿಸುವಿಕೆಯಲ್ಲಿ ಹಾಡಿನ ಪ್ರತಿಯೊಂದು ಸಾಲಿನಲ್ಲೂ ಪಲ್ಲವಿಯನ್ನು ವಿಭಿನ್ನ ಲಯಬದ್ಧ ಶೈಲಿಗಳಲ್ಲಿ "ಲಯ ಆಧರಿತ ಗತಿಯ ಮೂಲ ರಚನೆ"ಗೆ ಸರಿಯಾದ ಅನುಸರಣೆಯೊಂದಿಗೆ ನಿರೂಪಿಸಲಾಗುತ್ತದೆ. ಹಾಡುಗಳ ಅವತರಣಿಕೆಯು ಅನೇಕ ವಿಷಯಗಳನ್ನು ಒಳಗೊಂಡಿರುತ್ತದೆ.

ಅಲ್ಲದೆ, ಕಛೇರಿಯ ಸಮಯದಲ್ಲಿ, "ಕನಕರಿ" ಎಂದು ಕರೆಯಲ್ಪಡುವ ಆಟವನ್ನು ಆಡಲಾಗುತ್ತದೆ. ಇದರಲ್ಲಿ ಹಾಡಿನೊಳಗೆ ಅಡಗಿರುವ ವಿವರವನ್ನು ಅರ್ಥಮಾಡಿಕೊಳ್ಳಲು ಸುಳಿವಿನೊಂದಿಗೆ ಪ್ರೇಕ್ಷಕರಿಗೆ ಸವಾಲುಗಳನ್ನು ಒಡ್ಡಲಾಗುತ್ತದೆ. ಹತ್ತು ರೂಪಗಳನ್ನು ಸೂಚಿಸುವ ಹತ್ತು ರಾಗಗಳು ಅಥವಾ ಮಧುರಗಳನ್ನು ನಿರೂಪಿಸುವ ಮೂಲಕ ಮತ್ತೊಂದು ಸವಾಲು ಒಡ್ಡಿ ಪ್ರೇಕ್ಷಕರು ಯಾವ ರಾಗವು ಯಾವ ರೂಪವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ತಿಳಿಸಬೇಕು. ಇದು ಸಂಗೀತಗಾರನ ಸಂಗೀತ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಇದಕ್ಕಾಗಿ ಅವರಿಗೆ ಬಹುಮಾನವನ್ನು ನೀಡಲಾಗುತ್ತದೆ.  

ಗ್ರಂಥಸೂಚಿ[ಬದಲಾಯಿಸಿ]

  • Arkin, A.J.; Magyar, K.P.; Pillay, G.J. (1989). The Indian South Africans: a contemporary profile. Owen Burgess. ISBN 978-0-947446-11-6.
  • Diggavi, Mysore Gopalarao (1981). A guide to intelligent appreciation of Hindustani and Karnatak music. Copies from M.G. Diggavi.
  • Menon, Indira (2004). Great masters of carnatic music, 1930–1965. Indialog Publications. ISBN 9788187981534.
  • Krishna, T. M. (24 December 2013). A Southern Music. HarperCollins Publishers India. ISBN 978-93-5029-822-0.
  • Madras Music Academy (2000). The Journal of the Music Academy, Madras. Music Academy.
  • Subramanian, Lakshmi (1 January 2008). New Mansions for Music: Performance, Pedagogy and Criticism. Berghahn Books. ISBN 978-81-87358-34-3.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]