ಆಲಾಪನೆ

ವಿಕಿಪೀಡಿಯ ಇಂದ
Jump to navigation Jump to search

ಆಲಾಪನೆಭಾರತೀಯ ಸಂಗೀತದ ವೈಶಿಷ್ಟ್ಯಗಳಲ್ಲಿ ಮುಖ್ಯವಾದುದು. ಗಾಯಕರ, ವಾದಕರ, ಕಲಾಸೃಷ್ಟಿ ವೈಭವದ ಪರಾಕಾಷ್ಠೆಯೂ ಆಗಿರುವ ಇದು ಕಡೆಯಪಕ್ಷ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಈಗ ರೂಢಿಯಲ್ಲಿರುವ ಆಲಾಪನಕ್ರಮ ಸು. 300 ವರ್ಷಗಳಷ್ಟು ಹಳೆಯದು.

ಇತಿಹಾಸ[ಬದಲಾಯಿಸಿ]

ಉತ್ತರ ಭಾರತದಲ್ಲಿ ಅರಬ್ಬರು, ಪಾರಸಿಕರು ಮೊದಲಾದ ಅನ್ಯ ಸಂಸ್ಕೃತಿಯವರ ಪ್ರಭಾವದಿಂದ ಮೈತಳೆದ ಹಿಂದೂಸ್ಥಾನಿ ಸಂಗೀತ ಮೊಗಲರ ಕಾಲದಲ್ಲಿ ತನ್ನ ಆಧುನಿಕ ಯುಗವನ್ನು ಈ ದಿಸೆಯಲ್ಲಿ ಪ್ರಾರಂಭಿಸಿತು. ದಕ್ಷಿಣ ಭಾರತದಲ್ಲಿ ಕನ್ನಡಿಗನಾದ ಗೋವಿಂದ ದೀಕ್ಷಿತ ತಂಜಾವೂರಿನಲ್ಲಿ ರಚಿಸಿದ ಸಂಗೀತಸುಧೆಯಲ್ಲೂ ಅವನ ಮಗನಾದ ವೆಂಕಟಮಖಿ ರಚಿಸಿದ ಚತುರ್ದಂಡೀ ಪ್ರಕಾಶಿಕೆಯಲ್ಲೂ ಈಗಿನ ಆಲಾಪನಪದ್ಧತಿ ರೂಪುಗೊಂಡಂತೆ ಕಾಣುತ್ತದೆ. ಹೊನ್ನಯ್ಯನ ಮಗನೂ ತನ್ನ ಗುರುವೂ ಆದ ತಾನಪ್ಪ ಮಾಡಿಕೊಟ್ಟ ಲಕ್ಷ್ಯಪ್ರವರ್ತನೆಯಿಂದ ರಾಗಾಲಾಪನೆಯ ವ್ಯವಸ್ಥೆಯನ್ನು ಸಜ್ಜುಗೊಳಿಸಿದುದಾಗಿ ವೆಂಕಟಮಖಿಯೇ ಹೇಳಿಕೊಂಡಿರುವುದರಿಂದ ಕನ್ನಡಿಗರ ಪಾತ್ರ ಇದರಲ್ಲಿ ಸ್ಪಷ್ಟವಾಗುತ್ತದೆ. ಅನಂತರ 18ನೆಯ ಶತಮಾನದಲ್ಲಿ ತಂಜಾವೂರಿನ ಮರಾಠರ ನಾಯಕ ದೊರೆ ತುಳಜೇಂದ್ರ ತನ್ನ ಸಂಗೀತಸಾರಾಮೃತದಲ್ಲಿ ಅಮೂಲ್ಯವಾದ ಸಮಸಾಮಯಿಕ ಉದಾಹರಣೆಗಳ ಮೂಲಕ ಈ ಪರಂಪರೆಯನ್ನು ನೆಲೆಗೊಳಿಸಿದ್ದಾನೆ. ಆದರೂ ರಾಗಾಲಾಪನೆ ಆಧುನಿಕ ರೂಪವನ್ನು ಪಡೆದುದು ಸಂಗೀತ ತ್ರಿಮೂರ್ತಿಗಳ ಯುಗದಲ್ಲಿಯೇ (1750-1850) ಎನ್ನಬಹುದು.

ಹಾಡಿನಲ್ಲಿ ಮಾಡಿದ ರೂಪಕಾಲಪ್ತಿ, ಸ್ವತಂತ್ರವಾಗಿ ಮಾಡಿದ ರಾಗಾಲಪ್ತಿ ಎಂದು ಆಲಾಪನೆಯಲ್ಲಿ ಎರಡು ವಿಧ. ಇವುಗಳಲ್ಲಿ ವಿಷಮ, ಪ್ರಾಂಜಲ, ಅಕ್ಷರಸಹಿತ, ಅಕ್ಷರರಹಿತ, ತಾಳಸಹಿತ, ತಾಳರಹಿತ ಎಂದು ಮುಂತಾಗಿ 16 ಅವಾಂತರ ಭೇದಗಳಿವೆ. ಇವೆಲ್ಲವೂ ಇಂದಿಗೂ ರೂಢಿಯಲ್ಲಿರುವಂಥವೇ. ಪ್ರಾಚೀನ ಕಾಲದಲ್ಲಿ ರಾಗಾಲಾಪವನ್ನು ಮುಖಚಾಲೀ ದ್ವ್ಯರ್ಧ, ನ್ಯಸನ ಮುಂತಾದ ನಾಲ್ಕು ಹಂತಗಳಲ್ಲಿ ಮಾಡಲಾಗುತ್ತಿತ್ತು. ಮಧ್ಯಯುಗದಲ್ಲಿ ಇದನ್ನು ಆರು ಘಟ್ಟಗಳಲ್ಲಿ ಮಾಡುತ್ತಿದ್ದರು: ಆಕ್ಷಿಪ್ತಿಕಾ (ಆಯಿತ್ತ) ಎಂಬ ರಾಗಪ್ರವೇಶ, ಎರಡು, ಮೂರು ಖಂಡಗಳಲ್ಲಿ (ಯಡುಪು) ರಾಗದ ಬೆಳೆವಣಿಗೆಯಾಗುತ್ತಿದ್ದ ರಾಗವರ್ಧಿನೀ, ಇದನ್ನು ಖಂಡಗಳಾಗಿ ವಿಭಾಗಿಸುತ್ತಿದ್ದ ವಿದಾರೀ (ಯಡುಪು ಮುಕ್ತಾಯಿ, ಒಂದೊಂದಾಗಿ ಸ್ವರಗಳನ್ನು ಕೇಂದ್ರದಲ್ಲಿಟ್ಟು ಅವುಗಳ ಸುತ್ತಲೂ ರಾಗವನ್ನು ಹೆಣೆಯುತ್ತಿದ್ದ ಸ್ಥಾಯೀ ಎಂಬ ಏಕಸ್ವರವೃದ್ಧಿಕ್ರಮ, ವಿವಿಧಸ್ವರಗಳ ಮಿಶ್ರತಾನಗಳಿಂದ ಹುಟ್ಟಿದ) ವರ್ತನೀ, ರಾಗದ ಪರಿಸಮಾಪ್ತಿಯಾದ ನ್ಯಾಸ (ಮುಕ್ತಾಯಿ ಅಥವಾ ಮಕರಿಣೀ)- ಈ ಕ್ರಮ ಈಗ ಶಿಥಿಲವಾಗಿಹೋಗಿದೆ.

ಆಲಾಪನೆ ಎಂದರೆ 5, 6 ಅಥವಾ 7 ಸ್ವರಗಳು ಆರೋಹಣ ಅವರೋಹಣಗಳಲ್ಲಿ ಕ್ರಮಸಂಚಾರದಲ್ಲಿ ಅಥವಾ ವಕ್ರಸಂಚಾರದಲ್ಲಿ ಬರುವ ರೀತಿಯೊಂದನ್ನು ತೆಗೆದುಕೊಂಡು ಮನಸ್ಸು ರಂಜಿಸುವಂತೆ, ಛಂದೋಲಯಗಳ ನಿರ್ಬಂಧವಿಲ್ಲದೆ ಸ್ವಂತ ರೀತಿಯಲ್ಲಿ ವಿವಿಧ ಸ್ವರಸಂಯೋಜನೆಗಳನ್ನು ಸೃಷ್ಟಿ ಮಾಡುವುದು. ಇದರ ಲಕ್ಷಣವನ್ನು ನಮ್ಮ ಸಂಗೀತಶಾಸ್ತ್ರ ಬಹು ಹಿಂದಿನಿಂದಲೂ ವೈಜ್ಞಾನಿಕವಾಗಿ ವರ್ಣಿಸಿದೆ. ಒಂದು ನಿರ್ದಿಷ್ಟವಾದ ವಿಷಯದಲ್ಲಿ ಪ್ರಬಂಧರಚನೆಯನ್ನು ಮಾಡಬೇಕಾದರೆ ವಿಷಯಪ್ರವೇಶ, ಪ್ರಧಾನಾಂಶದ ಅಥವಾ ಸ್ಥಾಯೀಭಾವದ ಉಪಬೃಂಹಣ, ನಿರ್ದಿಷ್ಟವಾಗಿ, ಅಚ್ಚುಕಟ್ಟಾಗಿ ಭಾವಗಳನ್ನು ವಾಕ್ಯಸಮುಚ್ಚಯಗಳಲ್ಲಿ ವಿಭಾಗಿಸುವುದು, ಇವುಗಳಲ್ಲಿ ವಿಷಯವನ್ನು ವರ್ಧಿಸಿ ಪರಾಕಾಷ್ಠೆಯ ಏಕಾಗ್ರಮುಖತೆಗೆ ಒಯ್ಯುವುದು, ಅಲ್ಲಿಂದ ಕ್ರಮವಾಗಿ ಇಳಿದು ವಿಷಯೋಪಸಂಹಾರದಿಂದ ನ್ಯಾಸಮಾಡುವುದು-ಇವು ಹೇಗೆ ಮುಖ್ಯವೋ ಹಾಗೆಯೇ ರಾಗಾಲಾಪನೆಯಲ್ಲಿ ಯಾವುದು ಪ್ರಾರಂಭಸ್ವರ, ಜೀವಸ್ವರ, ಬಹುಳಸ್ವರ, ಅಂತ್ಯಸ್ವರ, ಮೇಲು ಕೆಳಗಿನ ಸ್ಥಾಯಿಗಳಲ್ಲಿ ಯಾವ ಸ್ವರದವರೆಗೆ ಸಂಚಾರವಿದೆ, ಯಾವ ಸ್ವರಗಳಲ್ಲಿ ವಿಶೇಷ ಸಂಗತಿಯಿದೆ, ಯಾವುದು ಅಲ್ಪವಾಗಿ ಪ್ರಯೋಗವಾಗಬೇಕು, ರಾಗವನ್ನು ವಿವಿಧಖಂಡಗಳಾಗಿ ಎಲ್ಲಿ ಒಡೆದುತೋರಬೇಕು-ಮುಂತಾದ ಹತ್ತು ಲಕ್ಷಣಗಳ ಮೂಲಕವಾದ ಭೌತವಿಶ್ಲೇಷಣೆಯೂ ಮುಖ್ಯ. ಇದು ನಮ್ಮಲ್ಲಿ ಮುಖ್ಯವಾದ ಒಂದು ಶಾಸ್ತ್ರಪ್ರಕ್ರಿಯೆ. ರಾಗಾಲಾಪನೆಯಿಂದ ಆಯಾ ರಾಗದ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಮೂಡಿಸುವುದು ಹೇಗೆ ಮುಖ್ಯವೋ ಸದೃಶವಾದ ರಾಗಗಳಿಂದ ಅದನ್ನು ಪೃಥಕ್ಕರಿಸುವುದೂ ಹಾಗೆಯೇ ಅಗತ್ಯ. ಇದಕ್ಕಾಗಿ ರಾಗಾಲಾಪನ ಪದ್ಧತಿಯಲ್ಲಿ ಕೆಲವು ತಂತ್ರಗಳನ್ನು ಬಳಸಲಾಗುವುದು. ಎರಡು ಸದೃಶ ರಾಗಗಳಲ್ಲಿ ಆರೋಹಣ-ಅವರೋಹಣಗಳು ಒಂದೇ ಆಗಿದ್ದು ಸ್ಥೂಲಭೌತ ಸಾಮ್ಯವಿದ್ದರೂ ಒಂದೇ ಸ್ವರ ಎರಡರಲ್ಲೂ ಸೂಕ್ಷ್ಮವೂ ವಿಶಿಷ್ಟವೂ ಆದ ಛಾಯಾಂತರಗಳನ್ನೂ ಗಮಕಪ್ರಯೋಗಗಳನ್ನೂ ಪಡೆಯುತ್ತದೆ. ಕೆಲವು ಸ್ವರಗಳು ಇಂಥದೇ ರೀತಿಯಲ್ಲಿ, ಸಂಯೋಜನೆಯಲ್ಲಿ, ಸಂದರ್ಭದಲ್ಲಿ ಪ್ರಯುಕ್ತವಾಗಬೇಕೆಂಬ ನಿಯಮವಿರುತ್ತದೆ. ಆರಂಭಸ್ವರ, ಮುಕ್ತಾಯಸ್ವರ, ಬೇರೆ ಸ್ಥಾಯಿಗಳಲ್ಲಿ ಸಂಚಾರವ್ಯಾಪ್ತಿ-ಇವುಗಳಿಂದಲೂ ಮೇಲುನೋಟಕ್ಕೆ ಒಂದೇ ಆಗಿರುವಂತೆ ಕಾಣುವ ಎರಡು ರಾಗಗಳನ್ನು ಬೇರ್ಪಡಿಸಬಹುದು. ಇವುಗಳೇ ಅಲ್ಲದೆ ಆಯಾ ರಾಗಕ್ಕೇ ವಿಶಿಷ್ಟವಾದ ನಡೆ ಅಥವಾ ವೇಗ, ಪ್ರತಿಪಾದ್ಯರಸದ ಸ್ಥಾಯೀಭಾವ, ಸ್ವರಭಾವ ಮುಂತಾದ ಇತರ ಹಲವು ಕ್ಲಿಷ್ಟವೂ ಪ್ರೌಢವೂ ಆದ ಅನುಕ್ತನಿಯಮಗಳು ಭಾರತೀಯ ರಾಗಾಲಾಪನೆಯ ರೂಢಿಯಲ್ಲಿವೆ. ಇವನ್ನು ಕೇವಲ ಕಂಠ ಪರಂಪರೆಯಿಂದಲೂ ಸಾಂಪ್ರದಾಯಿಕ ಸೂಕ್ಷ್ಮ ಅಭ್ಯಾಸದಿಂದಲೂ ಗುರುಮುಖದಿಂದಲೂ ಕಲಿಯಬೇಕು.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಆಲಾಪನೆ&oldid=793016" ಇಂದ ಪಡೆಯಲ್ಪಟ್ಟಿದೆ