ವಿಷಯಕ್ಕೆ ಹೋಗು

ಎಂ.ಎಲ್.ವಸಂತಕುಮಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ.ಎಲ್.ವಸಂತಕುಮಾರಿ
Bornಜುಲೈ ೩, ೧೯೩೮
Diedಅಕ್ಟೋಬರ್ ೩೧, ೧೯೯೦
Occupationಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ
Years active೧೯೪೨–೧೯೯೦
Spouseಕಲೈಮಾಮಣಿ ವಿಕಟಮ್ ಆರ್.ಕೃಷ್ಣಮೂರ್ತಿ
Childrenಶಂಕರರಾಮನ್, ಶ್ರೀವಿದ್ಯಾ
Parentಅಯ್ಯಸ್ವಾಮಿ ಅಯ್ಯರ್ ಮತ್ತು ಲಲಿತಾಂಗಿ

ಡಾ. ಎಂ. ಎಲ್ ವಸಂತಕುಮಾರಿ (ಜುಲೈ ೩, ೧೯೩೮ - ಅಕ್ಟೋಬರ್ ೩೧, ೧೯೯೦) ಅವರು ಸಂಗೀತ ಕ್ಷೇತ್ರದ ಮಹಾನ್ ದಿಗ್ಗಜರ ಪಂಕ್ತಿಯಲ್ಲಿ ಸಾರ್ವಕಾಲಿಕವಾಗಿ ಉಪಸ್ಥಿತರು. ಎಂ.ಎಲ್.ವಿ ಎಂದು ಪ್ರಖ್ಯಾತಿ ಪಡೆದ ವಸಂತಕುಮಾರಿ ಅವರ ಸಂಗೀತವನ್ನು ವಿಮರ್ಶಿಸಿದ ಒಬ್ಬ ಘನ ವಿದ್ವಾಂಸರು ಅವರ ಹೆಸರಿನಲ್ಲಿರುವ ‘M’ ಎಂಬುದು ಮಾಧುರ್ಯಕ್ಕೂ, ‘L’ ಎಂಬುದು ಲಯಕ್ಕೂ ಹಾಗೂ ‘V’ ಎಂಬುದು ವಿದ್ವತ್ತಿಗೂ ಸಾಕ್ಷಿಯಾಗಿದೆ ಎಂದಿದ್ದರು. ಅವರ ಸಂಗೀತದಲ್ಲಿನ ಮೂರರ ಸಮ್ಮಿಳನದಲ್ಲಿ ಅವರ ಕಂಠ ಮಾಧುರ್ಯ ಉಳಿದ ಎರಡರ ಭಾವಾಲಿಂಗನದಂತೆ ಬೆಸೆದು ಅವರ ಗಾಯನ ಸರ್ವಜನಾದರಣೀಯವಾಗಿದೆ. ಅವರು ಒಬ್ಬ ಪ್ರತಿಷ್ಠಿತ ಪ್ರತಿಭಾವಂತ ಕಲಾವಿದೆ ಹಾಗೂ ಸಂಗೀತಕ್ಕಾಗಿಯೇ ತಮ್ಮನ್ನು ಅರ್ಪಿಸಿಕೊಂಡ ಒಬ್ಬ ಅರ್ಪಣಾ ಮನೋಧರ್ಮದ ಶಿಕ್ಷಕಿಯೂ ಹೌದು. ಅಷ್ಟೇ ಉದಾರ ಮನೋವೃತ್ತಿಯ ಮಾನವೀಯ ಗುಣಗಳನ್ನು ಮೇಳವಿಸಿ ಕೊಂಡವರು. ಕನ್ನಡದ ದಾಸ ಶ್ರೇಷ್ಠರ ಕೃತಿಗಳನ್ನು ಸಂಗೀತಕ್ಕೆ ಅಳವಡಿಸಿಕೊಂಡು ಪ್ರಸಿದ್ಧಿ ಪಡಿಸಿದ ಕೀರ್ತಿ ಎಂ.ಎಲ್.ವಿ ಅವರಿಗೆ ಸಲ್ಲುತ್ತದೆ. ಇಪ್ಪತ್ತನೆಯ ಶತಮಾನದಲ್ಲಿ ಕರ್ನಾಟಕ ಸಂಗೀತದ ಮಹಿಳಾ ತ್ರಿವಳಿಗಳೆಂದೇ ಪ್ರಖ್ಯಾತರಾದವರಲ್ಲಿ ಡಿ.ಕೆ.ಪಟ್ಟಮ್ಮಾಳ್ ಹಾಗೂ ಎಂ.ಎಸ್.ಸುಬ್ಬುಲಕ್ಷ್ಮಿಯವರೊಂದಿಗೆ ಎಂ. ಎಲ್. ವಸಂತಕುಮಾರಿ ಅವರ ಹೆಸರೂ ಜನಜನಿತವೆನಿಸಿತ್ತು.

MLVasanthakumari- ಎಂ. ಎಲ್. ವಸಂತಕುಮಾರಿ (3 ಜುಲೈ 1928 - 31 ಅಕ್ಟೋಬರ್ 1990), ಪ್ರಸಿದ್ಧ ಕರ್ನಾಟಕ ಸಂಗೀತಗಾರರು ಮತ್ತು ಹಿನ್ನೆಲೆ ಗಾಯಕಿ

ಎಂ. ಎಲ್. ವಿ ಅವರ ಪೂರ್ಣ ಹೆಸರು ಮದರಾಸು ಲಲಿತಾಂಗಿ ವಸಂತಕುಮಾರಿ. ಅವರು ಜನಿಸಿದ್ದು ಜುಲೈ ೩, ೧೯೩೮ರಲ್ಲಿ.

ವೈದ್ಯೆಯಾಗುವ ಕನಸು

[ಬದಲಾಯಿಸಿ]

ಎಂ. ಎಲ್. ವಿ ಅವರಿಗೆ ವೈದ್ಯರಾಗಬೇಕೆಂಬ ಅಪೇಕ್ಷೆ ಇತ್ತು. ಆದರೆ ಅವರು ಡಾಕ್ಟರ್ ಆದದ್ದೇ ಬೇರೆ ರೀತಿಯಲ್ಲಿ. ಅದು ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದವರು ನೀಡಿದ ‘ಗೌರವ ಡಾಕ್ಟರೇಟ್’ ಪ್ರಶಸ್ತಿ ಮೂಲಕ. ಅವರಿಗೆ ತಮ್ಮ ಕೊನೆಗಾಲದಲ್ಲಿ ಕ್ಯಾನ್ಸರ್ ಇದೆ ಎಂದು ತಿಳಿದಾಗ ಹೇಳಿದರಂತೆ- “ನಾನು ಡಾಕ್ಟರ್ ಆಗಿದ್ದಿದ್ದರೂ ನನ್ನೀ ಕಾಯಿಲೆಯನ್ನು ಗುಣಪಡಿಸಿ ಕೊಳ್ಳಲಾಗುತ್ತಿರಲಿಲ್ಲ” ಎಂದು.

ಸಂಗೀತ ಸಂಸ್ಕಾರ

[ಬದಲಾಯಿಸಿ]

ಸಂಗೀತ ಕಚೇರಿಗಳಲ್ಲಿ ಗಾಯಕ ಅಥವಾ ಗಾಯಕಿ ನಿರಂತರವಾಗಿ ಯಶೋವಂತರಾಗಿ ವಿಜ್ರಂಭಿಸಬೇಕಾದರೆ – ಸಂಸ್ಕಾರ, ಬೆಳೆದ ವಾತಾವರಣವೂ ಬೇಕು’ ಎಂದು ಎಂ. ಎಲ್. ವಿ ಅವರು ತಮ್ಮ ಒಂದು ಭಾಷಣದಲ್ಲಿ ಹೇಳಿದ್ದರು. ವಸಂತಕುಮಾರಿಯವರು ಪುರಂದರದಾಸರ ಕೀರ್ತನೆಗಳು, ತಿರುವಾರೂರು ತ್ರಿಮೂರ್ತಿಗಳ ಕೀರ್ತನೆಗಳು ಹಾಗೂ ಕರ್ನಾಟಕ ಸಂಗೀತದ ಇತರ ಮಹಾ ವಾಗ್ಗೇಯಕಾರರ ಕೀರ್ತನೆಗಳು ಮೊಳಗಿ ಬೆಳಗುತ್ತಿದ್ದ ವಾತಾವರಣದಲ್ಲಿ ಬೆಳೆದವರು. ಹಿಂದೂಸ್ತಾನಿ ಸಂಗೀತದ ಖಯ್ಯಲ್, ತುಮರಿ, ಧುನ್ಗಳನ್ನು ಹಿರಿಯ ಹಿಂದೂಸ್ತಾನಿ ದಿಗ್ಗಜ ರಿಂದ ಕೇಳುವ ಅವಕಾಶವೂ ಅವರಿಗೆ ದೊರಕಿತ್ತು. ಮುಂದೆ ಕರ್ನಾಟಕ ಸಂಗೀತದ ಘನವೆತ್ತ ಗಾಯಕ ಜಿ. ಎನ್. ಬಾಲಸುಬ್ರಮಣ್ಯಂ ಅವರಲ್ಲಿ ಹತ್ತು ವರ್ಷಗಳ ಕಾಲ ಎಂ.ಎಲ್.ವಿ ಅವರ ಶಿಷ್ಯವೃತ್ತಿ ಸಾಗಿತು. ಎಂ. ಎಲ್. ವಿ ಅವರು ತಮ್ಮ ಬಾಳಕಡೆಯ ಉಸಿರಿರುವವರೆಗೂ ಜಿ.ಎನ್.ಬಿ ಅವರನ್ನು ತಮ್ಮ ಗುರುವೆಂದು ಕೃತಜ್ಞತೆ ಯಿಂದ ಸ್ಮರಿಸುತ್ತಿದ್ದರು. ಎಂ. ಎಲ್. ವಿ ಅವರ ಗುರು ಜಿ.ಎನ್.ಬಿ ಹಾಗೂ ಪಟಿಯಾಲ ಘರಾನದ ಉಸ್ತಾದ್ ಬಡೇಗುಲಾಂ ಅಲಿ ಅವರ ಸಂಬಂಧ ಅದೊಂದು ಭಾವನುಬಂಧ. ಬಡೇ ಗುಲಾಂ ಅಲಿ ಅವರಿಗೆ ಅಂತಹುದೇ ಪ್ರೀತಿ ವಿಶ್ವಾಸ ಜಿ.ಎನ್.ಬಿ ಅವರ ಶಿಷ್ಯೆಯಾದ ಎಂ. ಎಲ್. ವಿ ಅವರ ಬಗೆಗೂ ಇತ್ತು. ಸಿಂಧು ಭೈರವೀ ರಾಗದ ವಿಸ್ತರಣೆಯನ್ನು ಬಡೇ ಗುಲಾಂ ಅಲಿ ಖಾನ್ ಅವರಿಂದ ಪ್ರೇರಣೆ ಪಡೆದೆ ಎಂಬುದು ಎಂ.ಎಲ್.ವಿ ಅವರ ಮಾತಾಗಿತ್ತು.

ರಾಗಂ ತಾನಂ ಪಲ್ಲವಿ

[ಬದಲಾಯಿಸಿ]

“ರಾಗಂ ತಾನಂ ಪಲ್ಲವಿ” ಕರ್ಣಾಟಕ ಸಂಗೀತದ ಒಂದು ಮುಖ್ಯ ಅಂಗ. ಸಂಗೀತದ ಘನತೆ ಗೌರವ ಕಾಪಾಡಲು ಎರಡು ಗಂಟೆಗಳ ಕಚೇರಿಯಲ್ಲಿ ಒಂದು ಸಣ್ಣ ಪಲ್ಲವಿಯನ್ನಾದರೂ ನಿವೇದಿಸಬೇಕು. ಕಲಾವಿದನಿಗೆ ಒಂದೊಂದು ಕಚೇರಿಯೂ ಒಂದೊಂದು ಪರೀಕ್ಷೆಯೇ! ಹಾಗಾಗಿ ಕಚೇರಿಯಲ್ಲಿ ಕಲಾವಿದ ಮಿತಿ ಮೀರಿದ ಆತ್ಮವಿಶ್ವಾಸ ಹೊಂದದೆ, ಶ್ರದ್ಧೆ, ಭಕ್ತಿ, ಹಿತಮಿತ ಉತ್ಸಾಹಗಳಿಂದ ಕಚೇರಿಯನ್ನು ನಿರ್ವಹಿಸಬೇಕು. ಇದು ಎಂ. ಎಲ್.ವಿ ಅವರ ದೃಢನಂಬಿಕೆ.

ದಾಸ ಸಾಹಿತ್ಯದಲ್ಲಿ

[ಬದಲಾಯಿಸಿ]

ದಾಸ ಸಾಹಿತ್ಯ ಎಂ. ಎಲ್. ವಿ ಅವರಿಗೆ ಅವರ ತಾಯಿ ಲಲಿತಾಂಗಿ ಅವರಿಂದ ಬಂದ ಬಳುವಳಿ. ಅದನ್ನು ಅತ್ಯಂತ ಶ್ರದ್ಧೆಯಿಂದ ಎಂ.ಎಲ್.ವಿ ಪಾಲಿಸಿಕೊಂಡು ಬಂದರು. ಎಂ. ಎಲ್. ವಿ ಅವರು ಹಾಡಿರುವ ಗೀತೆಗಳಲ್ಲಿ ‘ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ’ ಅತ್ಯಂತ ವಿಶಿಷ್ಟವಾಗಿದ್ದು ಜಗತ್ಪ್ರಸಿದ್ಧವಾಗಿದೆ. ಬಲಿಯ ಮನೆಗೆ ವಾಮನ ಬಂದಂತೆ ಎಂಬ ಉಗಾಭೋಗದಿಂದ ಪ್ರಾರಂಭಿಸುತ್ತಿದ್ದ ಎಂ.ಎಲ್.ವಿ ಅವರ ಈ ಗಾಯನ ಮನ ಮುಟ್ಟುವಂತದ್ದು. ಒಮ್ಮೆ ಎಂ. ಎಸ್. ಸುಬ್ಬುಲಕ್ಷ್ಮಿ ಅವರಿಗೆ ಬಾರೋ ಕೃಷ್ಣಯ್ಯ ಹಾಡುವಂತೆ ಕೇಳಿದಾಗ ಅದನ್ನು ವಸಂತಕುಮಾರಿಯಂತೆ ಯಾರಿಗೂ ಹಾಡಲು ಸಾಧ್ಯವಿಲ್ಲ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿ ಅದನ್ನು ಆಕೆ ಹಾಡಿದರೇ ಚೆನ್ನ ಎಂದರು. ಎಂ. ಎಲ್. ವಿ ಅವರ ಇತರ ದಾಸಶ್ರೇಷ್ಠರ ಕೃತಿಗಳಾದ ಆನೆಯು ಕರೆದರೆ ಆದಿಮೂಲ ಬಂದಂತೆ ಎಂಬ ಉಗಾಭೋಗದಿಂದ ಪ್ರಾರಂಭವಾಗುವ ‘ಯಮನೆಲ್ಲಿ ಕಾಣೆನೆಂದು ಹೇಳಬೇಡ, ಯಮನೇ ಶ್ರೀರಾಮನು ಸಂದೇಹ ಬೇಡ’, ‘ಇನ್ನೂ ದಯ ಬಾರದೆ ದಾಸನ ಮೇಲೆ’, ‘ಭಾಗ್ಯದ ಲಕ್ಷ್ಮೀ ಭಾರಮ್ಮ’, ‘ದಯಮಾಡೋ ರಂಗ’, ‘ಹರಿಸ್ಮರಣೆ ಮಾಡೋ ನಿರಂತರ’, ‘ಜಯ ಜಾನಕಿ ಕಾಂತಾ’, ‘ನೀನೇ ಅನಾಥ ಬಂಧು’, ‘ಶ್ರೀಕಾಂತ ಎನಗಿಷ್ಟು ದಯಮಾಡೋ ತಂದೆ’, ‘ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ’, ‘ಯಾಕೆ ನಿರ್ಧಯನಾದೆಯೋ ಹರಿಯೇ’, 'ನಮ್ಮ ಯಾದವರಾಯ ಬೃಂದಾವನದೊಳು ವೇಣುನಾದವಾ ಮಾಡುತಿರೆ' ಮುಂತಾದವು ಸಂಗೀತ ಕ್ಷೇತ್ರದಲ್ಲಿ ಚಿರಸ್ಮರಣೀಯವಾಗಿವೆ. ಎಂ. ಎಲ್.ವಿ ಅವರು ಕರ್ನಾಟಕದಲ್ಲಿ ಪುರಂದರ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದರು. ಅವರು ದಾಸ ಸಾಹಿತ್ಯಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವ ನೀಡಿದ್ದುದು ಅತ್ಯಂತ ಶ್ಲಾಘನೀಯವಾದುದಾಗಿದೆ. ಎಂ. ಎಲ್. ವಿ ಅವರ ಪ್ರಿಯ ಶಿಷ್ಯೆ ಸುಧಾ ರಘುನಾಥನ್ ಅವರು ಕೂಡಾ ತಮ್ಮ ಗುರು ಪರಂಪರೆಯನ್ನು ಮುಂದುವರೆಸಿ ದಾಸ ಸಾಹಿತ್ಯವನ್ನು ಬೆಳಗುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.

ಚಲನಚಿತ್ರಗಳಲ್ಲಿ

[ಬದಲಾಯಿಸಿ]

ದಕ್ಷಿಣ ಭಾರತದ ಹಲವಾರು ಚಿತ್ರಗಳಿಗೆ ಕೂಡಾ ಹಾಡಿರುವ ಎಂ. ಎಲ್.ವಿ ಅವರು ಹಂಸಗೀತೆ ಚಿತ್ರದಲ್ಲಿನ ಕೆಲವೊಂದು ನಾಟ್ಯಪ್ರಧಾನ ಗೀತೆಗಳಿಗೆ ಧ್ವನಿಗೂಡಿಸಿದ್ದಾರೆ. ಅವುಗಳಲ್ಲಿ ‘ಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ’ ಮತ್ತು ‘ನಿಜಗಾದಾಸ ಯದು ನಂದನೆ’ ಎಂಬ ಜಯದೇವಕವಿಯ ಅಷ್ಟಪದಿಗಳು ಮೋಹಕವಾಗಿವೆ. ಎಂ. ಎಲ್. ವಿ ಅವರು ತಮ್ಮ ಪುತ್ರಿ ಶ್ರೀವಿದ್ಯಾ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತ ಕಲಿಸಿದರಾದರೂ ಶ್ರೀವಿದ್ಯಾ ಅವರು ಚಲನಚಿತ್ರರಂಗವನ್ನು ಆಯ್ಕೆಮಾಡಿಕೊಂಡು ಅಲ್ಲಿ ಪ್ರಸಿದ್ಧಿಯನ್ನು ಪಡೆದರು.

ಶಿಷ್ಯ ಪರಂಪರೆ

[ಬದಲಾಯಿಸಿ]

ಎಂ. ಎಲ್. ವಿ ಅವರ ಶಿಷ್ಯ ಪರಂಪರೆಯಲ್ಲಿ ಮೂಡಿಬಂದ ಬಹಳಷ್ಟು ಪ್ರತಿಭೆಗಳಲ್ಲಿ ಸುಧಾ ರಘುನಾಥನ್, ಎ. ಕನ್ಯಾಕುಮಾರಿ, ತ್ರಿಚೂರು ವಿ ರಾಮಚಂದ್ರನ್, ಯೋಗಂ ಸಂತಾನಂ, ಚಾರುಮತಿ ರಾಮಚಂದ್ರನ್ ಪ್ರಮುಖರಾಗಿದ್ದಾರೆ. ಇದಲ್ಲದೆ ಜಿಡ್ಡು ಕೃಷ್ಣಮೂರ್ತಿ ಅವರು ಸ್ಥಾಪಿಸಿದ್ದ ರಿಷಿ ವ್ಯಾಲಿ ಶಾಲೆಯ ಮಕ್ಕಳಿಗೆ ಸಹಾ ಎಂ.ಎಲ್.ವಿ ಸಂಗೀತ ಕಲಿಸುತ್ತಿದ್ದರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಎಂ.ಎಲ್.ವಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅಲ್ಲದೆ 1977 ರಲ್ಲಿ ಭಾರತ ಸರಕಾರದಿಂದ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಅತ್ಯಂತ ಚಿಕ್ಕ ಪ್ರಾಯದಲ್ಲಿಯೇ ಕರ್ನಾಟಕ ಸಂಗೀತದ ಅತ್ಯುನ್ನತ ಪ್ರಶಸ್ತಿಯಾದ "ಸಂಗೀತ ಕಲಾನಿಧಿ" ಇವರಿಗೆ ಒಲಿದು ಬಂತು.

ಆತ್ಮ ನಿವೇದನೆ

[ಬದಲಾಯಿಸಿ]

ಎಂ. ಎಲ್. ವಿ ಅವರು ತಮ್ಮ ಅರವತ್ತೆರಡನೆಯ ವಯಸ್ಸಿನಲ್ಲಿ ಅಕ್ಟೋಬರ್ ೩೧, ೧೯೯೦ರಲ್ಲಿ ನಿಧನರಾದರು. ಆದರೆ ಅವರ ವಿದ್ವತ್ತು, ಅವರು ಸಂಗೀತಕ್ಕೆ ನೀಡಿದ ಅವಿಸ್ಮರಣೀಯ ಕೊಡುಗೆಗಳು ಅವರನ್ನು ನಿರಂತರವಾಗಿ ನಮ್ಮ ಹೃದಯದಲ್ಲಿ ನೆಲೆಸುವಂತೆ ಮಾಡಿವೆ. “ಕಚೇರಿ ಗಳಲ್ಲಿ ಗಾಯಕನ ದೃಷ್ಟಿ – ಶ್ರೋತೃಗಳ ಹೃದಯವನ್ನು ತಣಿಸಿ ಸಂತೋಷಗೊಳಿಸುವುದೇ ಆಗಿರಬೇಕು. ಅವರು ಗಾಯಕ ಯಾವ ಪರಂಪರೆಯನ್ನು ನಿವೇದಿಸುತ್ತಿದ್ದಾನೆ ಎಂದು ಗಮನಿಸುವುದಿಲ್ಲ. ಆತ್ಮನಿವೇದನೆ ಪ್ರಮುಖವಾಗಿರಬೇಕು” ಎನ್ನುತ್ತಿದ್ದ ಎಂ.ಎಲ್.ವಿ ತಮ್ಮ ಆತ್ಮವನ್ನು ತಮ್ಮ ದೈವೀರೂಪೀ ಸಂಗೀತದ ಮೂಲಕ ನಾದಲೋಕಕ್ಕೆ ತೆರೆದಿಟ್ಟುಕೊಂಡ ಮಹಾನ್ ತಪಸ್ವಿಗಳು. []

ಮಾಹಿತಿ ಕೃಪೆ

[ಬದಲಾಯಿಸಿ]

ಡಾ. ಕೆ. ಶ್ರೀಕಂಠಯ್ಯ ಅವರ ಭಾರತೀಯ 'ಸಂಗೀತದ ಮಕುಟ ಮಣಿಗಳು' ಕೃತಿ ಮತ್ತು ಇಂಗ್ಲಿಷಿನ ವಿಕಿಪೀಡಿಯ.

ಉಲ್ಲೇಖ

[ಬದಲಾಯಿಸಿ]
  1. ಡಾ. ಕೆ. ಶ್ರೀಕಂಠಯ್ಯ ಅವರ ಭಾರತೀಯ 'ಸಂಗೀತದ ಮಕುಟ ಮಣಿಗಳು' ಕೃತಿ