ವಿಷಯಕ್ಕೆ ಹೋಗು

ವೀರನಾರಾಯಣ ದೇವಸ್ಥಾನ, ಗದಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೀರ ನಾರಾಯಣ ದೇವಸ್ಥಾನ


ಗದಗದಲ್ಲಿರುವ ವೀರನಾರಾಯಣ ದೇವಸ್ಥಾನವು ಕ್ರಿಸ್ತಶಕ 1117 ಸುಮಾರಿನಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಕಟ್ಟಿಸಿದ್ದು . [೧][೨] ನಾರಾಯಣ ಅಥವಾ ವಿಷ್ಣುವು ಈ ದೇವಾಲಯದ ಅಧಿದೇವತೆ. ಈ ದೇವಸ್ಥಾನವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ)ಯ ಸುರಕ್ಷಿತ ಸ್ಮಾರಕವಾಗಿದೆ. [೩]

ಚತುರಶಿಲ್ಪಿ ಜಕಣಾಚಾರಿ ಕೆತ್ತಿದನೆಂದು ಹೇಳಲಾಗುವ ಈ ದೇವಸ್ಥಾನದ ಗೋಪುರ ನೋಡುಗರ ಕಣ್ಮನ ಸೆಳೆಯುತ್ತದೆ.ಈ ಗೋಪುರವನ್ನು ವಿಜಯನಗರದ ಅರಸ ಪ್ರೌಢದೇವರಾಯನು ನಿರ್ಮಾಣ ಮಾಡಿಸಿದನೆಂದು ಶಾಸನೋಕ್ತವಾಗಿದೆ. "ಗದುಗಿನ ಮಹಾಭಾರತ" ಅಥವಾ ಕರ್ಣಾಟ ಭಾರತ ಕಥಾಮಂಜರಿ ರಚಿಸಿದ ಕುಮಾರವ್ಯಾಸ ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ರಚಿಸಿದನೆಂದು ಹೇಳಲಾಗುತ್ತದೆ. ಆತ ದೇವಸ್ಥಾನದ ಯಾವ ಕಂಬದ ಕೆಳಗೆ ಕುಳಿತು ಪ್ರತಿದಿನ ಮಹಾಭಾರತ ಬರೆಯುತ್ತಿದ್ದನೋ ಇವತ್ತಿಗೂ ಅದು ಕುಮಾರವ್ಯಾಸ ಕಂಬವೆಂದೇ ಪ್ರಸಿದ್ದಿಯಾಗಿದೆ.

ಇತಿಹಾಸ[ಬದಲಾಯಿಸಿ]

ಇತಿಹಾಸವು ಹೇಳುವಂತೆ ರಾಮಾನುಜಾಚಾರ್ಯರು ಹೊಯ್ಸಳ ರಾಜಕುಮಾರಿಯನ್ನು ಕಾಯಿಲೆಯಿಂದ ಗುಣಪಡಿಸಿದಾಗ ರಾಜನಾದ ಬಿಟ್ಟಿದೇವನು ಅವರ ಪ್ರಭಾವಕ್ಕೆ ಒಳಗಾಗಿ ತನ್ನ ಹೆಸರನ್ನು ವಿಷ್ಣುವರ್ಧನ ಎಂದು ಬದಲಾಯಿಸಿಕೊಂಡು ತನ್ನ ಜೈನ ಧರ್ಮವನ್ನು ತ್ಯಜಿಸಿ ಶ್ರೀವೈಷ್ಣವ ಪಂಥಕ್ಕೆ ಸೇರಿಕೊಂಡು ರಾಮಾನುಜಾಚಾರ್ಯರ ಶಿಷ್ಯನಾದನು. ಅವನು ವಿಷ್ಣುವಿಗಾಗಿ 5 ದೇವಾಲಯಗಳನ್ನು ನಿರ್ಮಿಸಿದನು. ಅವು ಯಾವುವೆಂದರೆ ಗದಗದ ವೀರನಾರಾಯಣ ದೇವಸ್ಥಾನ, ತೊಂಡನೂರಿನ ನಂಬಿನಾರಾಯಣ ದೇವಸ್ಥಾನ, ಬೇಲೂರಿನ ಚೆನ್ನಕೇಶವ ದೇವಾಲಯ, ತಲಕಾಡಿನ ಕೀರ್ತಿನಾರಾಯಣ ದೇವಸ್ಥಾನ, ಮತ್ತು ಮೇಲುಕೋಟೆಯ ಚೆಲುವನಾರಾಯಣ ದೇವಸ್ಥಾನ. [೧][೨] 34 ಮಧ್ಯಕಾಲೀನ ಶಾಸನಗಳು ಗದಗಿನಲ್ಲಿ , ಅವುಗಳಲ್ಲಿ ಬಹುತೇಕ ಶಾಸನಗಳು ಗದಗದ ಎರಡು ಮುಖ್ಯ ದೇವಸ್ಥಾನಗಳಾದ ವೀರನಾರಾಯಣ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳ ಅವರಣಗಳಲ್ಲಿ ಪತ್ತೆಯಾಗಿದ್ದು ಗದಗ್ ಪಟ್ಟಣವು ಪುರಾತನಕಾಲದಲ್ಲಿ ಮಹಾಅಗ್ರಹಾರ ಎಂದರೆ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದುದು ತಿಳಿದು ಬರುತ್ತದೆ.

ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಅಚ್ಯುತರಾಯನು ಶಕವರ್ಷ ೧೪೯೧ ವಿಕಾರಿ ಸಂವಾದದ ಭಾದ್ರಪದ ಶುದ್ಧ ಶ್ರವಣ ೧೨ ಮಂಗಳವಾರ (26-08-1539) "ಕವಿ ಕುಮಾರವ್ಯಾಸನಿಗೆ ಪ್ರಸನ್ನನಾದ ಗದುಗಿನ(ಶ್ರೀವೀರ) ನಾರಾಯಣನ ಸನ್ನಿಧಿಯಲ್ಲಿ" ಆನಂದನಿಧಿ ಎಂಬ ಪಾರಿತೋಷಕವನ್ನು ಇಲ್ಲಿಯ ಘನ ವಿದ್ವಾಂಸರುಗಳಾದ ಬ್ರಾಹ್ಮಣರಿಗೆ ಕೊಟ್ಟನೆಂದು ಈ ದೇವಾಲಯದ ಪ್ರಾಕಾರದಲ್ಲಿರುವ ಆ ಅರಸನ ಕಾಲದ ಒಂದು ಶಿಲಾ ಶಾಸನದಲ್ಲಿದೆ.

ವಾಸ್ತುಶಿಲ್ಪ ಮತ್ತು ಶಿಲ್ಪಕಲೆ[ಬದಲಾಯಿಸಿ]

ದೇವಸ್ಥಾನದಲ್ಲಿ ಚಾಲುಕ್ಯ , ಹೊಯ್ಸಳ ಮತ್ತು ವಿಜಯನಗರ ಶೈಲಿಗಳನ್ನು ನೋಡಬಹುದಾಗಿದೆ. ದೇವಾಲಯದ ಮಹಾದ್ವಾರ  ಮತ್ತು ಗೋಪುರಗಳು ವಿಜಯನಗರ ಶೈಲಿ ಯಲ್ಲಿದ್ದು ಮುಂದಿನ ಗರುಡಗಂಬ ಮತ್ತು ರಂಗಾ ಮಂಟಪಗಳು ಹೊಯ್ಸಳ ಶೈಲಿಯಲ್ಲಿವೆ.ಗರ್ಭಗುಡಿಗೆ ಹೊಂದಿಕೊಂಡಂತಿರುವ ಮಂಟಪವು ಚಾಲುಕ್ಯ ಶೈಲಿಯಲ್ಲಿ ಇದೆ. ಅಧಿದೇವತೆಯಾದ ವೀರನಾರಾಯಣನು ತನ್ನ ನಾಲ್ಕು ಕೈಗಳಲ್ಲಿ, ಚಕ್ರ, ಗದೆ ಮತ್ತು ಪದ್ಮ (ಅಂದರೆ ಕಮಲ)ಗಳನ್ನು ಹಿಡಿದುಕೊಂಡು ಹೋರಾಡಲು ಸಿದ್ಧನಾಗಿ ವೀರಗಚ್ಚೆ ಹಾಕಿಕೊಂಡು ನಿಂತಿರುವಂತೆ ಮೂರ್ತಿಯನ್ನು ಕೆತ್ತಲಾಗಿದೆ.  ಲಕ್ಷ್ಮಿದೇವಿ ಹಾಗೂ ಗರುಡರು ಅವನ ಪಕ್ಕಗಳಲ್ಲಿ ಇದ್ದಾರೆ.

ಆಸಕ್ತಿಕರ ಮಾಹಿತಿ[ಬದಲಾಯಿಸಿ]

  • ಇಂದಿಗೂ ಪೂಜೆಗೊಳ್ಳುವ ಈ ದೇವಾಲಯದ ಮೂಲವಿಗ್ರಹ ಕೈಯಲ್ಲಿ ಚೆಂಡನ್ನು ಹಿಡಿದಿದೆ.
  • ದೇವಾಲಯದ ಗೋಪುರದ ಗೋಡೆಯ ಮೇಲೆ ಪುರುಷಾರ್ಥವಾದ ಕಾಮವನ್ನು ಪ್ರತಿನಿಧಿಸುವ ಮಿಥುನ ಶಿಲ್ಪಗಳಿವೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Raghusuta, Chapter:To Karnataka, Section:Bitti Deva
  2. ೨.೦ ೨.೧ "Veera Narayana Temple". Karnataka.com. Retrieved 1 June 2015.
  3. "Protected Monuments in Karnataka". Archaeological Survey of India, Government of India. Indira Gandhi National Center for the Arts. Retrieved 2 June 2015.