ವಿಷಯಕ್ಕೆ ಹೋಗು

ವಿಜಯಾದಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಾದಿತ್ಯ
ಚಾಲುಕ್ಯ ಅರಸ
ಆಳ್ವಿಕೆ c. 696 – c. 733 CE
ಪೂರ್ವಾಧಿಕಾರಿ ವಿನಯಾದಿತ್ಯ
ಉತ್ತರಾಧಿಕಾರಿ ವಿಕ್ರಮಾದಿತ್ಯ 2
ಸಂತಾನ
ವಿಕ್ರಮಾದಿತ್ಯ 2
ಚಕ್ರಾದಿಪತ್ಯ ವಾತಾಪಿಯ ಚಾಲುಕ್ಯರು
ತಂದೆ ವಾತಾಪಿಯ ವಿನಯಾದಿತ್ಯ

ವಿಜಯಾದಿತ್ಯ : ಬಾದಾಮಿ ಚಾಲುಕ್ಯ ವಂಶದ ರಾಜ (696-733). ವಿನಯಾದಿತ್ಯನ ಮಗ. ವಿನಯಾದಿತ್ಯ ತನ್ನ ತಂದೆ ಮತ್ತು ತಾತ ಇವರ ಕಾಲದಲ್ಲಿ ರಾಜ್ಯದ ಆಡಳಿತದಲ್ಲೂ ಅನೇಕ ಯುದ್ಧಗಳಲ್ಲೂ ಭಾಗವಹಿಸಿದ್ದ. ಇವನು ತನ್ನ ತಂದೆಯ ಕಾಲದಲ್ಲಿ ಉತ್ತರ ಭಾರತದಲ್ಲಿ ಯುದ್ಧ ಮಾಡಿ ಗಂಗಾ, ಯಮುನಾ ಪ್ರತಿಮೆಗಳನ್ನೂ ಢಕ್ಕ ಧ್ವಜ ಮತ್ತು ಪಾಳಿ ಧ್ವಜವನ್ನೂ ಶತ್ರುಗಳಿಂದ ವಶಪಡಿಸಿಕೊಂಡನೆಂದು ಕೆಲವು ಶಾಸನಗಳು ತಿಳಿಸುತ್ತವೆ. ಈತ ಉತ್ತರ ಭಾರತದಲ್ಲಿ ವಜ್ರಟ ಎಂಬವನ ಮೇಲೆ ಅಥವಾ ಯಶೋವರ್ಮ ಎಂಬವನ ಮೇಲೆ ಸೆಣಸಿರಬಹುದು. ಯಾವುದೋ ಸಂದರ್ಭದಲ್ಲಿ ಈತನನ್ನು ಶತ್ರುಗಳು ಸೆರೆಹಿಡಿದಿದ್ದರೆಂದೂ ಅಲ್ಲಿಂದ ತಾನೇ ತಪ್ಪಿಸಿಕೊಂಡನೆಂದೂ ಕೆಲವು ಶಾಸನ ಹೇಳಿಕೆಗಳಿವೆ. ಇವನ ಆಳಿಕೆಯ ಕಾಲದಲ್ಲಿ ಯುವರಾಜ ಇಮ್ಮಡಿ ವಿಕ್ರಮಾದಿತ್ಯ ಕಾಂಚಿಯ ಮೇಲೆ ದಾಳಿ ಮಾಡಿ, ಅಲ್ಲಿಯ ರಾಜನಾದ ಇಮ್ಮಡಿ ಪರಮೇಶ್ವರವರ್ಮನನ್ನು ಜಯಿಸಿ ಅವನಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿದನೆಂದು ಉಳ್ವಾಲ (ಕರ್ನೂಲು ಜಿಲ್ಲೆ) ಶಾಸನದಿಂದ ತಿಳಿದುಬರುತ್ತದೆ.

ಆಳ್ವಿಕೆ

[ಬದಲಾಯಿಸಿ]

ಬಾದಾಮಿ ಚಾಲುಕ್ಯರ ರಾಜರುಗಳ ಪೈಕಿ ಇವನ ಆಳಿಕೆಯ ಕಾಲ ಅತಿ ದೀರ್ಘವಾದುದೂ ಶಾಂತಿ ಮತ್ತು ಸುಭಿಕ್ಷೆಯಿಂದ ಕೂಡಿದ್ದೂ ಆಗಿತ್ತು. ವಿಜಯಾದಿತ್ಯ ತನ್ನ ತಂದೆ ವಿನಯಾದಿತ್ಯನ ರೀತಿಯಲ್ಲೇ ಆಡಳಿತದ ಸುವ್ಯವಸ್ಥೆಗಾಗಿ ರಾಜ್ಯದಲ್ಲಿ ಆಗಿಂದಾಗ್ಗೆ ಸಂಚರಿಸುತ್ತಿದ್ದನೆಂದೂ ಹಾಗೂ ತನ್ನ ಆಳಿಕೆಯ ಕಾಲದಲ್ಲಿ ಏಲಾಪುರ, ಹತಂಪುರ, ರಕ್ತಪುರ ಹೀಗೆ ಅನೇಕ ಕಡೆ ಬೀಡು ಬಿಟ್ಟಿದ್ದನೆಂದು ಶಾಸನಗಳಿಂದ ತಿಳಿಯುತ್ತದೆ. ಬಾಣರು, ರೇನಾಡುವಿನ ತೆಲುಗು ಚೋಡರು, ಭೂಪಾದಿತ್ಯ, ಉಪೇಂದ್ರ ಮುಂತಾದ ರಾಜರು ಇವನ ಸಾಮಂತರಾಗಿದ್ದರು.

ದಕ್ಷಿಣ ಕೆನರಾದ ಆಳುಪರು ಚಾಲುಕ್ಯರಿಗೆ ನಿಷ್ಠರಾಗಿದ್ದ ಮತ್ತು ವಿಜಯಾದಿತ್ಯನ ಸೋದರಮಾವ ಆಳುಪ ಚಿತ್ರವಾಹನ ನೇತೃತ್ವದಲ್ಲಿ 705 ರಲ್ಲಿ ಮಂಗಳೂರಿನ ಪಾಂಡ್ಯನನ್ನು ಆಕ್ರಮಣದಿಂದ ಸೋಲಿಸಿದರು. ವಿಜಯಾದಿತ್ಯನ ನಂತರ ಅವನ ಮಗ ವಿಕ್ರಮಾದಿತ್ಯ 2 733 ರಲ್ಲಿ ಬಂದನು. ವಿಜಯಾದಿತ್ಯ 18 ವರ್ಷಗಳ ಕಾಲ ಆಳಿದನು.[]

ಆಡಳಿತ

[ಬದಲಾಯಿಸಿ]

ವಿಜಯಾದಿತ್ಯನು 730 CE ನಲ್ಲಿ ಲಕ್ಷ್ಮೇಶ್ವರ, ಗದಗ ಜಿಲ್ಲೆ ನಲ್ಲಿರುವ ಸಂಖ-ಜಿನೇಂದ್ರ ದೇವಾಲಯಕ್ಕೆ ಪುರಿಕರನಗರದ ದಕ್ಷಿಣದಲ್ಲಿರುವ ಕಾಡಮ್ಮ ಎಂಬ ಗ್ರಾಮವನ್ನು ದಾನ ಮಾಡಿದನು.[]

ಸಾರ್ವಜನಿಕ ಸೇವೆ

[ಬದಲಾಯಿಸಿ]

ವಿಜಯಾದಿತ್ಯನ ಕಾಲ ದೇವಾಲಯ ನಿರ್ಮಾಣಕ್ಕೂ ಪ್ರಸಿದ್ಧವಾಗಿದೆ. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ಎಂಬ ಈಶ್ವರ ದೇವಸ್ಥಾನವನ್ನು (ಈಗಿನ ಸಂಗಮೇಶ್ವರ ದೇವಾಲಯ) ಕಟ್ಟಿಸಿದ. ವಿಜಯಾದಿತ್ಯ ಜೈನಧರ್ಮಕ್ಕೂ ತನ್ನ ಗೌರವಾದರವನ್ನು ತೋರಿಸಿ ಅನೇಕ ಜೈನಗುರುಗಳಿಗೆ ದತ್ತಿಗಳನ್ನು ನೀಡಿದ. ಇವನ ಸಹೋದರಿ, ಆಳುಪ ಚಿತ್ರವಾಹನನ ಹೆಂಡತಿ ಕುಂಕುಮ ಮಹಾದೇವಿ ಜೈನಧರ್ಮದಲ್ಲಿ ಅಪಾರ ನಿಷ್ಠೆಯನ್ನು ಹೊಂದಿದ್ದಳು. ಈಕೆ ಲಕ್ಷ್ಮೇಶ್ವರದಲ್ಲಿ ಒಂದು ಜೈನ ದೇವಸ್ಥಾನವನ್ನು ಕಟ್ಟಿಸಿದಳು. ವಿಜಯಾದಿತ್ಯ 733ರಲ್ಲಿ ನಿಧನನಾದ.


ಉಲ್ಲೇಖ

[ಬದಲಾಯಿಸಿ]
  1. Sen, Sailendra Nath (1999). "Ancient Indian History and Civilization" (in ಇಂಗ್ಲಿಷ್). New Age International.
  2. Ram Bhushan Prasad Singh 2008, p. 83.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: