ವಿಷಯಕ್ಕೆ ಹೋಗು

ಲಕ್ಷ್ಮೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ
ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ
ಕನ್ನಡದ ಕಲ್ಬರಹ
ಕಲ್ಯಾಣಿ

ಲಕ್ಷ್ಮೇಶ್ವರ ಪಟ್ಟಣವು ಗದಗ ಜಿಲ್ಲೆಯ ತಾಲೂಕು ಕೇಂದ್ರ. ಗದಗ ನಂತರ ಜನಸಂಖ್ಯೆ ಅಲ್ಲಿ ಎರಡನೆ ದೊಡ್ಡ ನಗರವಾಗಿದೆ ಶಿರಹಟ್ಟಿ ತಾಲ್ಲೂಕಿನಲ್ಲಿನ ಒಂದು ಪ್ರಮುಖ ಪಟ್ಟಣವಾಗಿತ್ತು. ಇದು ಗದಗ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಲಕ್ಷ್ಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ೨೩ ವಾರ್ಡಗಳಿವೆ.

ಲಕ್ಷ್ಮೇಶ್ವರ ತಾಲೂಕು ಇಂಜಿನಿಯರಿಂಗ್,ಪದವಿ ವಿದ್ಯಾಲಯಗಳು,ಡಿಪ್ಲೋಮಾ, ಐಟಿಐ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

  • ಪ್ರಾಚೀನ ಕಾಲದಲ್ಲಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಬಾದಾಮಿ ಚಾಲುಕ್ಯ ವಿಕ್ರಮಾದಿತ್ಯನ (ಕ್ರಿ. ಶ ೬೮೬ ರ) ಶಾಸನದಲ್ಲಿ ಈ ಊರನ್ನು ರಾಜಧಾನಿ ಪಟ್ಟಣ ೧೨೦ ಮಹಾಜನರಿಂದ ಕೂಡಿದ ಬ್ರಹ್ಮೇಶ್ವರಗಿರಿ ಘಟಕಸ್ಥಾನ ಎಂದು ವರ್ಣಿಸಲಾಗಿದೆ. ಹಾಗೂ ಇದೊಂದು ಪ್ರಾಚೀನ ಜೈನ ಕೇಂದ್ರವಾಗಿದ್ದು, ಆದಿ ಕವಿ ಪಂಪನಿಂದ ಮೊದಲುಗೊಂಡು ಹಲವಾರು ಕನ್ನಡದ ಕವಿಗಳು ಕನ್ನಡ ನಾಡಿನಲ್ಲೇ ಅತ್ಯಂತ ಪರಿಪಕ್ವವಾದ ಶುದ್ಧ ಕನ್ನಡ (ತಿರುಳ್ಗನ್ನಡ) ಭಾಷೆಯನ್ನು ಮಾತನಾಡುತ್ತಿದ್ದ ಸ್ಥಳವೆಂದು ಇದನ್ನು ವರ್ಣಿಸಿರುವರು.
  • ಇದನ್ನು ಪುಲಿಗೇರಿ, ಹುಲಿಗೇರಿ, ಪುರಿಗೇರಿ ಹಾಗೂ ಪುಲಿಕರ ಎಂದೂ ಕರೆಯುತ್ತಾರೆ. ಇಲ್ಲಿನ ದೇವಸ್ಥಾನಗಳಲ್ಲಿ “ಶ್ರೀ. ಸೋಮೇಶ್ವರ ದೇವಸ್ಥಾನ” ಪ್ರಮುಖವಾಗಿದ್ದು, ಲಕ್ಷಣ ಅಥವಾ ಲಕ್ಮರಸನೆಂಬವನು ತನ್ನ ಹೆಸರಿನಲ್ಲಿ ಲಕ್ಷ್ಮೇಣೇಶ್ವರ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಈ ರೀತಿ ನಾಮಕರಣ ಮಾಡಿದ ಕಾರಣ ಕಾಲಾನುಕಾಲಕ್ಕೆ ಲಕ್ಷ್ಮೇಶ್ವರ ಎಂಬ ಹೆಸರು ಬಂದಿರುವುದು ವ್ಯಕ್ತವಾಗುತ್ತದೆ.
  • ಬಾದಾಮಿ ಚಾಳುಕ್ಯರ ೨ನೇ ಪುಲಕೇಶಿ ಕಾಲದಲ್ಲಿ ಇಲ್ಲಿ ಮೊಟ್ಟಮೊದಲ ಬಾರಿಗೆ ಜೈನರ ಶಂಖ ಬಸದಿ ಕಟ್ಟಲಾಯ್ತು. ತಿರುಳ್ಗನ್ನಡ ನಾಡಿನ ಗರ್ಭ ಪ್ರದೇಶವಿದಾಗಿದ್ದು ಹಿಂದಿನ ಪುಲಿಗೆರೆ-೩೦೦ ಪ್ರಾಂತದ ರಾಜಧಾನಿಯಾಗಿತ್ತು. ಕ್ರಿ ಶ ೬೮೬ರ ಶಾಸನದಂತೆ ಬಾದಾಮಿ ಚಾಳುಕ್ಯರ ವಿನಯಾದಿತ್ಯನ ಕಾಲದಲ್ಲಿ ಇದು ಈ ಪ್ರಾಂತದ ರಾಜಧಾನಿಯಾಗಿತ್ತು. ನೃಪತುಂಗನ ಕಾಲಕ್ಕೂ ಹಿಂದಿನಿಂದ ಅಚ್ಚಗನ್ನಡದ ಶ್ರೇಷ್ಠ ಸಂಸ್ಕೃತಿಯ ನಾಡು ಇದು. ಈ ಊರು ತಿರುಳ್ ಗನ್ನಡ ನಾಡಿನ ಹೃದಯಭಾಗವೆಂದು ಪಂಪ ಉದ್ಗರಿಸಿದ್ದಾನೆ. ಪೂರ್ವದಲ್ಲಿ ಇದು ಜೈನರ ಮುಖ್ಯ ಕೇಂದ್ರವಾಗಿತ್ತು. ಅವರೆಲ್ಲ ವಣಿಕ ವೃತ್ತಿಯವರಾಗಿದ್ದರು.
  • ೧೧-೧೨ನೇ ಶತಮಾನದಲ್ಲಿ ಶೈವ ಪಂಥ ಪ್ರವರ್ಧಮಾನಕ್ಕೆ ಬಂತು, ಆಗಲೇ ಅನೇಕ ಶೈವ ದೇವಾಲಯಗಳನ್ನು ಕಟ್ಟಲಾಯ್ತು. ಅಂತಹುದರಲ್ಲಿ ಈಗಿರುವ ಸೋಮೇಶ್ವರ ದೇವಸ್ಥಾನ ಅತ್ಯಂತ ಪ್ರಶಿದ್ಧವಾದ್ದು. ಇಲ್ಲಿರುವ ಸೋಮನಾಥ ಮೂರ್ತಿಯನ್ನು ಶಿವಶರಣ ಆದಯ್ಯ ಸೌರಾಷ್ಟ್ರದಿಂದದು ತಂದು ಸ್ಥಾಪಿಸಿದ ಎಂದು ಹೇಳಲಾಗುತ್ತಿದೆಯಾದರೂ ಇದೊಂದು ಸ್ವಯಂಭೂ ಮೂರ್ತಿ ಎಂಬುದು ಜನರ ನಂಬಿಕೆಯಾಗಿದೆ. ಇಲ್ಲಿರುವ ಸೋಮನಾಥನ(ಈಶ್ವರ) ಮೂರ್ತಿ ಬೇರೆಲ್ಲಿಯಂತೆ ಲಿಂಗಸ್ವರೂಪದಲ್ಲಿರದೇ ನಂದಿಯ ಮೇಲೆ ಪಾರ್ವತಿ ಸಹಿತನಾಗಿ ಹೊರಟಿರುವಂತಿರುವುದು ಇಲ್ಲಿನ ವಿಶೇಷ. ಕಲ್ಯಾಣ ಚಾಳುಕ್ಯರ ೬ನೇ ವಿಕ್ರಮಾದಿತ್ಯನ ಮಹಾಮಂಡಲೇಶ್ವರನಾಗಿದ್ದ ಲಕ್ಷ್ಮರಸ ಎಂಬುವನಿಂದ ಆಳಲ್ಪಟ್ಟಿದ್ದರಿಂದಲೋ ಏನೋ ಈ ಊರಿಗೆ ಲಕ್ಷ್ಮೇಶ್ವರ ಎಂದು ಹೆಸರು ಸ್ಥಾಯಿಯಾಗುಳಿಯಿತು.
  • ಬಾದಾಮಿ ಚಾಳುಕ್ಯರ ಹೆಜ್ಜೆಗುರುತಿನಿಂದ ಹಿಡಿದು ರಾಷ್ಟ್ರಕೂಟರು,ಕಲ್ಯಾಣ ಚಾಳುಕ್ಯರು, ಕಳಚೂರಿಗಳು,ಸೇವುಣರು, ಹೊಯ್ಸಳರು ಕಡೆಯದಾಗಿ ವಿಜಯನಗರದರಸರವರೆಗೆ ಎಲ್ಲ ಪ್ರಮುಖ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ. ಕಳಚೂರಿಯ ೨ನೇ ಬಿಜ್ಜಳನ ಕಾಲದಲ್ಲಿ ಇಲ್ಲಿ ಬ್ರಹ್ಮಪುರಿಯನ್ನು ಸ್ಥಾಪಿಸಲಾಯಿತು. ವಿಜಯನಗರದರಸರ ಕಾಲದಲ್ಲಿ ಇಲ್ಲಿನ ಜೈನ-ಹಿಂದುಗಳ ನಡುವಿನ ದೇವಾಲಯದ ಜಗಳವನ್ನು ಪರಿಹರಿಸಲಾಯ್ತು. ನಂತರದ ಮುಸ್ಲಿಮ್ ಆಳ್ವಿಕೆಯಲ್ಲೂ ಅನೇಕ ವಾಸ್ತು ನಿರ್ಮಾಣಗಳಾಗಿವೆ. ಬಿಜಾಪುರದ ಆದಿಲ್ ಶಾಹಿ ಕಾಲದಲ್ಲಿ ಕಟ್ಟಿಸಿದ ಜುಮ್ಮಾಮಸೀದಿ ಇದಕ್ಕೊಂದು ಸಾಕ್ಷಿ. ಇಲ್ಲಿನ ಒಂದೇಕಲ್ಲಿನಲ್ಲಿ ಮಾಡಿದ ಸರಪಣಿ ಕುತೂಹಲಕರ.
  • ಅರಿಕೇಸರಿ ಆಸ್ಥಾನ ಕವಿಯಾಗಿದ್ದ ಪಂಪ ಇಲ್ಲಿಗೆ ಹತ್ತಿರವಿರುವ ಅಣ್ಣಿಗೇರಿಯಲ್ಲಿ ಹುಟ್ಟಿದ್ದಾನೆ. ಅರಿಕೇಸರಿಯನ್ನು ನಾಯಕನನ್ನಾಗಿ ಇಟ್ಟುಕೊಂಡು ರಚಿಸಿರುವ ವಿಕ್ರಮಾರ್ಜುನ ವಿಜಯ ಹಾಗು ಆದಿಪುರಾಣ ಗ್ರಂಥಗಳು ಈ ನೆಲದಲ್ಲಿ ಹುಟ್ಟಿದ್ದು.ಮಸಲ್ಮಾನರ ಆಡಳಿತ[ಬದಲಾಯಿಸಿ]

ಹದಿನಾರು ಮತ್ತು ಹದಿನೇಳನೇ ಶತಮಾನದಲ್ಲಿ ಈ ಜಾಗವು ಬಿಜಾಪುರದ ಆದಿಲ್ ಶಾಹಿಯ ಅಡಿಯಲ್ಲಿ ಕೆಲಸ ಮಾಡುವ ಸೈಯದ್ ಅಂಕುಶ್ ಖಾನ್ (ಸೈಯದ್ ಬುಖಾರಿ) ಅವರ ಸುಪರ್ದಿಯಲ್ಲಿತ್ತು. ಅವನು ವೀರ ಮತ್ತು ಸಂತನಾಗಿದ್ದ. ಹಾಗಾಗಿ ರಾಜ ಅವನಿಗೆ ಬಹುಮಾನದ ರೂಪದಲ್ಲಿ ಈ ಜಾಗವನ್ನು ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ಜಹಗೀರಾಗಿ ನೀಡಿದನು. ಇವತ್ತಿನ ಕಂದಾಯ ಇಲಾಖೆಯ ಕಚೇರಿಯು ಅವನ ಕಾಲದಲ್ಲಿನ ಲಕ್ಷ್ಮೇಶ್ವರದ ಕೋಟೆಯಿದ್ದ ಜಾಗವಾಗಿತ್ತು. ಇವನ ಕಾಲದಲ್ಲಿ ಮುಸ್ಲಿಂ ವಾಸ್ತುಶಿಲ್ಪದ ಸಾಕಷ್ಟು ಸ್ಮಾರಕಗಳು ತಲೆ ಎತ್ತಿದವು. ಇವರು ಧಾರ್ಮಿಕ ಚಟುವಟಿಕೆಗಳಿಗಾಗಿ ಶಿರಹಟ್ಟಿ ಬಳಿಯ ಜಾಗವೊಂದನ್ನು ದೇಸಾಯಿ ಒಬ್ಬರಿಗೆ ದಾನವಾಗಿ ನೀಡಿದರು. ನಂತರ ಲಕ್ಷ್ಮೇಶ್ವರದ ಹತ್ತಿರವಿರುವ ಮೌಸೊಲಿಯಮ್ ದರ್ಗಾ (ಬಡೇ ನಾನಾ ದರ್ಗಾ) ಇರುವ ಹಳ್ಳಿಯಲ್ಲಿ ಜೀವನ ಮಾಡಿದರು. ಈ ದರ್ಗಾದಲ್ಲಿ ಇಂದಿಗೂ ಪ್ರತಿವರ್ಷ ಸಾವಿರಾರು ಭಕ್ತರು ಸೇರುತ್ತಾರೆ. ಸಂತ ವಂಶಸ್ಥರಾದ ಡಾ ಡಿ ಬಿ ಪೀರ್ ಜ಼ಾದೆ ಕುಟುಂಬದವರು ಪ್ರತಿ ವರ್ಷ ಉರುಸ್ ನಡೆಸುತ್ತಾರೆ.

ಹತ್ತೊಂಬತ್ತನೆಯ ಶತಮಾನದ ಶುರುವಿನಲ್ಲಿ ಆದಿಲ್ ಶಾಹಿ ಸುಲ್ತಾನರ ಅವಸಾನದ ನಂತರ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ಬಂದು ಕೆಲವು ವರ್ಷಗಳ ಕಾಲ (ಕರ್ನಾಟಕ ರಾಜ್ಯ ರಚನೆಗೂ ಮುನ್ನ) ಲಕ್ಷ್ಮೇಶ್ವರವು ಬಾಂಬೆ ರಾಜ್ಯದ ಮೀರಜ್ ಸರಕಾರ (ಪಟವರ್ಧನ್)ದ ಆಡಳಿತದಲ್ಲಿತ್ತು.

ಪ್ರಸ್ತುತ ಸುಲೈಮಾನ್ ಬಾದಶಾಹ್ ಅವರ ದೂದ್ ನಾನಾ ವಲ್ಲಿ ಎಂದೂ ಕರೆಯಲ್ಪಡುವ ಮೌಸೊಲಿಯಮ್ ದರ್ಗಾ ಪಟ್ಟಣದಲ್ಲಿದೆ. ಈ ದರ್ಗಾದಲ್ಲಿ ಪೂಜೆಗೆ ಜನರು ಹಾಲು ತರುತ್ತಾ ಇದ್ದಿದ್ದರಿಂದ ದರ್ಗಾಕ್ಕೆ ದೂದ್ ನಾನಾ ದರ್ಗಾ ಎಂದು ಕರೆಯುತ್ತಾರೆ. ಇಲ್ಲಿ ಪೂಜ್ಯ ಸುಲೈಮಾನ್ ಬಾದಶಹ್ ಖಾದ್ರಿ ಬಾಬಾ ಅವರ ಸಮಾಧಿಯಿದೆ. ಈ ಸೂಫಿ ಸಂತ ತುಂಬಾ ಪ್ರಸಿದ್ದನಾಗಿದ್ದು ಇವರ ಫೋಟೋಗಳನ್ನು ದಕ್ಷಿಣ ಭಾರತದಾದ್ಯಂತ ಸಾಕಷ್ಡು ಕಡೆ ಮಾರಾಟ ಮಾಡುತ್ತಾರೆ.

ಸಾರಿಗೆ[ಬದಲಾಯಿಸಿ]

ಈ ಪಟ್ಣಣವು ಜಿಲ್ಲಾ ಕೇಂದ್ರವಾದ ಗದಗದಿಂದ ೪೧ ಕಿ.ಮೀ ದೂರದಲ್ಲಿದೆ. ಹಾಗಾಗಿ ಗದಗದಿಂದ, ಧಾರವಾಡದಿಂದ, ರಾಣಿಬೆನ್ನೂರಿನಿಂದ ನೇರ ಬಸ್ ಸೌಲಭ್ಯವಿದೆ. ಹತ್ತಿರದ ಎಲವಗಿ ರೈಲು ನಿಲ್ದಾಣ ಲಕ್ಷ್ಮೇಶ್ವರದಿಂದ ೧೨ ಕಿ.ಮೀ ದೂರದಲ್ಲಿ ಇದೆ.

ಜನಸಂಖ್ಯೆ[ಬದಲಾಯಿಸಿ]

ಲಕ್ಷ್ಮೇಶ್ವರದ ಜನಸಂಖ್ಯೆ ೨೦೧೧ ರ ಜನಗಣತಿಯ ಪ್ರಕಾರ ೩೮,೮೨೬ ಇರುತ್ತದೆ.