ವಿಷಯಕ್ಕೆ ಹೋಗು

ರುದ್ರಾಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುದ್ರಾಕ್ಷಿ ಮರ
ರುದ್ರಾಕ್ಷಿ ಬೀಜಗಳು
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
E. ganitrus
Binomial name
Elaeocarpus ganitrus

ರುದ್ರಾಕ್ಷಿಮರ ಸಸ್ಯಸಾಮ್ರಾಜ್ಯದ ಇಲಾಯಿಯೊಕಾರ್ಪೇಸಿ ಎಂಬ ಕುಟುಂಬಕ್ಕೆ ಸೇರಿರುವ ಮಧ್ಯಮ ಗಾತ್ರದ ಮರ. ಇದರ ವೈಜ್ಞಾನಿಕ ನಾಮ ಇಲಾಯಿಯೊಕಾರ್ಪಸ್ ಜ್ಯಾನಿಟ್ರಸ್. ಸು. 6-10 ಮೀ ಎತ್ತರಕ್ಕೆ ಬೆಳೆಯುವ ಈ ಮರಗಳು ನೇಪಾಲ, ಬಿಹಾರ, ಬಂಗಾಲ, ಅಸ್ಸಾಮ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ದಟ್ಟಕಾಡುಗಳಲ್ಲಿ ಕಂಡುಬರುತ್ತವೆ. ಅಪರೂಪಕ್ಕೆ ಈ ಸಸ್ಯವನ್ನು ಅಲಂಕಾರಕ್ಕಾಗಿಯೂ ಬೆಳೆಸುವುದುಂಟು.

ರುದ್ರನ 'ಅಕ್ಷಿ'ಯೇ ರುದ್ರಾಕ್ಷಿ. ಅರ್ಥಾತ್ ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ.[೧] ಹೀಗಾಗಿ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ. ಹಿಮಾಲಯ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಈ ವೃಕ್ಷಗಳು ಶೀಘ್ರಗತಿಯಲ್ಲಿ ಫಲ ಬಿಡುವ ಜಾತಿಗೆ ಸೇರಿದ್ದು, ಮೂರ್ನಾಲ್ಕು ವರ್ಷಗಳಲ್ಲೇ ರುದ್ರಾಕ್ಷಿ ಬೀಜಗಳನ್ನು ಬಿಡತೊಡಗುತ್ತವೆ. ಇಂಥ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಒಳಜಾತಿಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಸ್ಥಾನಮಾನವಿದೆ. ಇದೇ ಕಾರಣಕ್ಕೆ ಭಕ್ತಾದಿಗಳು ರುದ್ರಾಕ್ಷಿಮಾಲೆಯನ್ನು ಧರಿಸುವದುಂಟು.

ಸಸ್ಯದ ವಿವರಗಳು[ಬದಲಾಯಿಸಿ]

ರುದ್ರಾಕ್ಷಿ ಮರ
ಬಲಿತ ರುದ್ರಾಕ್ಷಿ ಹಣ್ಣುಗಳು ತಮ್ಮ ವಿಶಿಷ್ಟ ನೀಲಿ ಬಣ್ಣವನ್ನು ಪ್ರದರ್ಶಿಸುತ್ತವೆ

ಎಲೆ ಉದುರಿ ಬಿದ್ದಿರುವ ಹಳೆಯದಾದ ಸ್ಥಳಗಳಲ್ಲಿ ರುದ್ರಾಕ್ಷಿ ಗಿಡದ ಹೂಗಳು ಅರಳುತ್ತವೆ. ಗೊಂಚಲು ಗೊಂಚಲಾಗಿ ಹೂಗಳು ಆರಳುತ್ತವೆ. ಇವು ಸಮೂಹ ಅಥವಾ ರೆಸೀಮ್ ಮಾದರಿಯವು. ಒಂದೇ ಬೀಜವಿರುವ ಇದರ ಕಾಯಿಗೆ ಡ್ರೂಪ್ ಎಂದು ಹೆಸರು. ಗುಂಡಗಿರುವುದು. ನೇರಳೆ ಅಥವಾ ನೀಲಿ ಬಣ್ಣ.[೨][೩][೪] ಕಾಯಿಯ ವ್ಯಾಸ 1.5 ಸೆಂಮೀ. ತಿರುಳಿನ ರುಚಿ ಹುಳಿ. ಇದಕ್ಕೆ ಔಷಧೀಯ ಗುಣವಿದೆ. ಮೂರ್ಛೆರೋಗದ ಚಿಕಿತ್ಸೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.

ಬೀಜದ ಹೊರಮೈ ಗುಂಡಾಗಿದ್ದು ಹೊರಕವಚ ಕಲ್ಲಿಗಿಂತಲೂ ಬಿರುಸಾಗಿರುವುದರಿಂದ ಈ ಕಾಯಿಗಳು ಹಲವಾರು ವರ್ಷ ಪರ್ಯಂತ ಕೆಡುವುದಿಲ್ಲ. ಬೀಜಗಳ ಹೊರಮೈಯಲ್ಲಿ ಮೇಲಿನಿಂದ ಕೆಳಕ್ಕೆ ರೂಪಗೊಂಡಿರುವ ಉದ್ದ ಸೀಳುಗಳಿವೆ. ಐದು ಸೀಳುಗಳಿರುವ ಬೀಜವನ್ನು ಪಂಚಮುಖಿ ಎನ್ನುತ್ತಾರೆ. ವಿರಳವಾಗಿ ಬೆಳೆಯುವ ಮರವಾದ್ದರಿಂದ ರುದ್ರಾಕ್ಷಿಬೀಜಗಳಿಗೆ ಬೇಡಿಕೆ ಅಧಿಕ. ಔಷಧೀಯ ಗುಣವೂ ಇವುಗಳ ಬೇಡಿಕೆಗೆ ಇನ್ನೊಂದು ಕಾರಣ. ಬೀಜದ ಹೊರಮೈ ಕೆಲವೊಮ್ಮೆ ಮಾರ್ಪಾಡಾಗಿ ಮೂಲಗುಣದಿಂದ ಭಿನ್ನವಾಗಿರುತ್ತದೆ. ಇಂಥ ಬೀಜಗಳಿಗೆ ಬೇಡಿಕೆ ಇನ್ನೂ ಹೆಚ್ಚು.

ರುದ್ರಾಕ್ಷಿ ಒಂದು ಪವಿತ್ರ ವಸ್ತು[ಬದಲಾಯಿಸಿ]

ಒಣಗಿಸಿದ ರುದ್ರಾಕ್ಷಿ ಬೀಜಗಳು
 • ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಣಿಗಳಾದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ. ಇದನ್ನು ಜಪಮಾಲೆಯಾಗಿಯೂ ಉಪಯೋಗಿಸುತ್ತಾರೆ.[೫]

ಇನ್ನೊಂದು ಪುರಾಣದ ಕಥೆ[ಬದಲಾಯಿಸಿ]

 • ಶಿವನು ದೀರ್ಘ ಕಾಲ ಧ್ಯಾನ ನಿರತನಾಗಿ ನಂತರ ಕಣ್ಣುಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಬಾಷ್ಪ ರುದ್ರಾಕ್ಷಿಯಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ.
 • ಅದು ಶಿವನ ಮೂರನೇ ಕಣ್ಣಿನ ರೂಪವಾದದ್ದು ಜನರ ಕಣ್ಣೀರನ್ನು ಒರೆಸುವ ಎಂದರೆ ದುಃಖವನ್ನು ದೂರಮಾಡುವ ಗುಣ ಹೊಂದಿದೆ ಎಂದು ಕೆಲವರು ಹೇಳುತ್ತಾರೆ.
 • ಇನ್ನೊಂದು ಕಥೆಯಂತೆ ಶಿವನು ತಾರಕಾಸುರನನ್ನು ಸಂಹರಿಸಿದಮೇಲೆ ಅವನ ಮಕ್ಕಳಾದ ತದಿನ್ಮಾಲಿ (ವಿದ್ಯುನ್ಮಾಲಿ), ತಾರಕಾಕ್ಷ, ಕಮಲಾಕ್ಷ ಗುಣವಂತರಾಗಿ ದೇವತೆಗಳ ಸಾಲಿಗೆ ಸೇರಿದರು. ಆದರೆ ಕೆಲವು ಕಾಲಾನಂತರ ದುಷ್ಟರಾಗಿ ಜನರಿಗೆ ತೊಂದರೆ ಕೊಟ್ಟರು. ಅವರನ್ನು ಶಿವನು ಸಂಹರಿಸಿದನು. ಹೀಗೆ ತನ್ನ ಭಕ್ತರು ದುಷ್ಟರಾಗಿ ಸತ್ತುದನ್ನು ನೋಡಿ ಶಿವನ ಕಣ್ಣಿನಿಂದ ನೀರ ಹನಿಗಳು ಉದುರಿದವು. ಅವೇ ಮರಗಳಾಗಿ ಅದರ ಸಂತತಿ ರುದ್ರಾಕ್ಷಿಗಳನ್ನು ಕೊಡುತ್ತಿವೆ. ಒಂದು ಮರದಲ್ಲಿ ಸುಮಾರು ೨೦೦೦ ದಷ್ಟು ಹಣ್ಣುಬಿಡುವುದು. ಅದರಲ್ಲಿ ೧೦೮ ಮಣಿಗಳ ಜಪಮಾಲೆಗಳನ್ನು ಮಾಡುತ್ತಾರೆ. ಹಿಮಾಲಯದ ಯತಿಗಳು ಆ ಮರದ ಹಣ್ಣುಗಳನ್ನು (ಅದನ್ನೇ) ಅಮೃತ ಫಲವೆಂದು ತಿನ್ನುತ್ತಾರೆ.

ರುದ್ರಾಕ್ಷಿಯ ಲಭ್ಯತೆ[ಬದಲಾಯಿಸಿ]

 • ರುದ್ರಾಕ್ಷಿ ಆಗ್ನೇಯ ಏಷಿಯಾ ದೇಶಗಳಲ್ಲಿಯೂ ಬೆಳೆಯುತ್ತದೆ. ರುದ್ರಾಕ್ಷಿ ಕಾಯಿ ಸಿಪ್ಪೆಯ ಭಾಗ. ಸಿಪ್ಪೆ ಸುಲಿದರೆ, ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ. ಅದು ಚೆನ್ನಾಗಿ ಒಣಗಿದ ನಂತರ ನಸು ಶ್ವೇತವರ್ಣ, ತಾಮ್ರದ ನಸು ಕೆಂಪು, ಹಾಗೂ ನಸು ಕಪ್ಪು ಬಣ್ಣದವು ಸಿಗುತ್ತವೆ. ಸೂಜಿಯನ್ನು ಉಪಯೋಗಿಸಿ ಮಡಿಕೆಗಳಿರುವ ರುದ್ರಾಕ್ಷಿಯ ಗೆರೆಗಳನ್ನು ಬಿಡಿಸುತ್ತಾರೆ. ಗೆರೆಗಳ ಆಕಾರವನ್ನು ನೋಡಿ ರುದಾಕ್ಷಿಯ ಮುಖಗಳನ್ನು ಗುರ್ತಿಸುತ್ತಾರೆ. ಅದರಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖಗಳವರೆಗೂ ಇರುವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರೆ. ಆದರೆ ೫ ಮುಖದಿಂದ ೧೪ ಮುಖಗಳಿರುವ ರುದ್ರಾಕ್ಷಿಗಳು ಹೆಚ್ಚು ಇರತ್ತವೆ. ಏಕ ಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತವೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. ಇದಲ್ಲದೆ ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ.
 • (ಈ ರುದ್ರಾಕ್ಷಿಯ ಮಹತ್ವದ ಬಗ್ಗೆ ಉತ್ತರ ಭಾರತದ ಅನೇಕ ಶಿವ ದೇವಾಲಯಗಳ ಗೋಡೆಗಳ ಮೇಲೆ ಮಾಹಿತಿ ವಿವರ ಇದೆ. ಇದು ಅದರ ಆಧಾರದಿಂದ ಬರೆದುದು) ಒಂದರಿಂದ ಹದಿನಾಲ್ಕು ಮುಖಗಳ ರುದ್ರಾಕ್ಷಿಗಳ ಸಂಕ್ಷಿಪ್ತ ಪರಿಚಯ:

ಏಕ ಮುಖ ರುದ್ರಾಕ್ಷಿ[ಬದಲಾಯಿಸಿ]

 • ಏಕ ಮುಖ ರುದ್ರಾಕ್ಷಿಯನ್ನು ಸಾಕ್ಷಾತ್ ಶಿವನ ಸ್ವರೂಪವೆಂದು ತಿಳಿಯುತ್ತಾರೆ. ಒಂದು ರುದ್ರಾಕ್ಷಿ ಮರದಲ್ಲಿ ಏಕಮುಖ ರುದ್ರಾಕ್ಷಿಯು ಒಂದೇ ಒಂದು ಬಿಡುತ್ತದೆ ಎಂದು ಹೇಳುತ್ತಾರೆ. ಇದು ಬಹಳ ಭಾಗ್ಯಶಾಲಿಯೂ, ಶಿವನಿಗೆ ಪ್ರೀತಿ ಪಾತ್ರನೂ ಆದವನಿಗೆ ಮಾತ್ರ ದೊರೆಯುತ್ತದೆ ಎಂಬ ನಂಬುಗೆ ಇದೆ. ಇದಕ್ಕೆ ಬೆಲೆ ಬಹಳ ಜಾಸ್ತಿ. ಅಂದರೆ ರೂ.ಸಾವಿರದಿಂದ ಇದರ ಬೆಲೆ ಆರಂಭವಾಗುತ್ತದೆ. ಈ ಬಗೆಯ ರುದ್ರಾಕ್ಷಿ ಧರಿಸಿದರೆ ಇಹದ ಎಲ್ಲ ಸೌಭಾಗ್ಯಗಳೂ ಈಶ್ವರನ ಕೃಪೆ ಸದಾ ದೊರೆಯುತ್ತದೆ ಎಂಬ ಧೃಢ ನಂಬುಗೆ ಇದೆ..

ದ್ವಿಮುಖ ರುದ್ರಾಕ್ಷಿ[ಬದಲಾಯಿಸಿ]

ಇದು ಶಿವ ಪಾರ್ವತಿ ಸ್ವರೂಪ ಎಂದು ಹೇಳುತ್ತಾರೆ ಈ ರುದ್ರಾಕ್ಷಿಯೂ ಸಿಗುವುದು ತುಂಬಾ ವಿರಳ. ಇದನ್ನು ಧರಿಸುವುದರಿಂದ ಗೋಹತ್ಯೆಯೇ ಮೊದಲಾದ ಇತರೆ ದೋಷಗಳೂ ನಾಶವಾಗುತ್ತದೆ. ಈ ರುದ್ರಾಕ್ಷಿಯು ಉತ್ತಮ ಗೃಹಸ್ಥ ಜೀವನ ಸುಖ ಶಾಂತಿ, ಸೌಭಾಗ್ಯವನ್ನು ಕೊಡುವುದೆಂದು ಹೇಳಲಾಗುತ್ತದೆ. ಇದರ ಬೆಲೆಯೂ ತುಂಬಾ ಹೆಚ್ಚು.

ತ್ರಿಮುಖ ರುದ್ರಾಕ್ಷಿ[ಬದಲಾಯಿಸಿ]

ಮೂರುಮುಖದ ರುದ್ರಾಕ್ಷಿ ಅಗ್ನಿ ದೇವನ ಸ್ವರೂಪ ಎಂದು ಹೇಳುತ್ತಾರೆ. ಇದೂ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಇದರ ಧಾರಣೆಯಿಂದ ಸಕಲ ಪಾಪಗಳೂ ನಿವಾರಣೆ ಆಗುವುದು. ಇದರ ಬೆಲೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ.

ಚತುರ್ಮುಖ ರುದ್ರಾಕ್ಷಿ[ಬದಲಾಯಿಸಿ]

ಇದನ್ನು ಬ್ರಹ್ಮ ಸ್ವರೂಪ ಎಂದು ಗುರುತಿಸುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದು. ಇದು ಭ್ರೂಣ ಹತ್ಯಾದೋಷವನ್ನು ನಿವಾರಣೆ ಮಾಡುವುದು. ಸ್ಮರಣ ಶಕ್ತಿ, ಬುದ್ಧಿ, ಶಿಕ್ಷಣದಲ್ಲಿ ಸಫಲತೆ, ಇವು ದೊರಕುವುದೆಂದು ಹೇಳುವರು. ಬೆಲೆ ಸಾಧಾರಣ ಮಟ್ಟದ್ದು.

ಪಂಚಮುಖಿ ರುದ್ರಾಕ್ಷಿ[ಬದಲಾಯಿಸಿ]

ಪಂಚ ಮುಖಿ ರುದ್ರಾಕ್ಷಿಯನ್ನು ಸ್ವಯಂ ಭಗವಾನ್ ಶಂಕರನ ಸ್ವರೂಪ ಎಂದು ತಿಳಿಯುತ್ತಾರೆ. ಹೆಚ್ಚಿನ ರುದ್ರಾಕ್ಷಿಗಳು ಪಂಚಮುಖಿ ಆಗಿರುತ್ತವೆ. ಈ ರುದ್ರಾಕ್ಷಿ ಹೆಚ್ಚು ಸಿಗುವುದರಿಂದ ಬೆಲೆಯೂ ಕಡಿಮೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಈಶ್ವರನ ಕೃಪೆ ದೊರಕಿ ಮನಸ್ಸಿಗೆ ಶಾಂತಿದೊರೆಯುವುದು ಎಂಬ ನಂಬುಗೆ ಇದೆ.

ರುದ್ರಾಕ್ಷಿಯ ಜಪ ಮಾಲೆ[ಬದಲಾಯಿಸಿ]

ಸಾಮಾನ್ಯವಾಗಿ ಪಂಚ ಮುಖಿ ರುದ್ರಾಕ್ಷಿಗಳಿಂದ ಜಪಮಾಲೆ ಮಾಡುತ್ತಾರೆ. ೧೦೮ ಮಣಿ(ಬೀಜದ) /೨೭ ಮಣಿಗಳ( ರುದ್ರಾಕ್ಷಿ ಬೀಜದ) ಅಥವಾ ೧೦ ರುದ್ರಾಕ್ಷಿ ಮಣಿಗಳ ಮಾಲೆ ಮಾಡುವುದು ರೂಡಿಯಲ್ಲಿದೆ. ಜಪ ಮಾಡುವಾಗ ಅದನ್ನು ಒಂದು ಕ್ರಮದಲ್ಲಿ ಬೆರಳುಗಳ ಮಧ್ಯೆ ಇಟ್ಟುಕೊಂಡು, ಹೆಬ್ಬೆರಳಿನಿಂದ ಒಂದೊಂದು ಜಪಕ್ಕೂ ಒಂದೊಂದು ಮಣಿಯನ್ನು ಜಾರಿಸುತ್ತಾ ಜಪ ಮಾಡುವರು. ಈ ರೀತಿ ಹಿಂದೂಗಳು, ಸಿಖ್ಖರು, ಬೌದ್ಧರು, ಎಲ್ಲರೂ ಈ ರೀತಿ ಜಪ ಮಾಡುತ್ತಾರೆ.

ರುದ್ರಾಕ್ಷಿಯ ಜಪ ಮಾಲೆ

ಷಷ್ಠ ಮುಖಿ ರುದ್ರಾಕ್ಷಿ[ಬದಲಾಯಿಸಿ]

ಆರು ಮುಖದ ರುದ್ರಾಕ್ಷಿ ಶಿವ ಪುತ್ರ ಕುಮಾರ ಕಾರ್ತಿಕೇಯನ ರೂಪವೆಂದು ತಿಳಿಯಲಾಗುತ್ತದೆ. ಈ ರುದ್ರಾಕ್ಷಿಯೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದು. ಈ ರುದ್ರಾಕ್ಷಿ ಧರಿಸುವುದರಿಂದ ಅಧರ್ಮಾಚರಣೆ ಮಾಡಿದ್ದಲ್ಲಿ ಅದರಿಂದ ಉಂಟಾದ ಪಾಪಗಳು ನಿವಾರಣೆ ಆಗುವುದು ಹಾಗೂ ಸ್ಮರಣ ಶಕ್ತಿ ಹೆಚ್ಚುವುದು ಎಂಬ ನಂಬುಗೆ ಇದೆ.

ಸಪ್ತ ಮುಖಿ ರುದ್ರಾಕ್ಷಿ[ಬದಲಾಯಿಸಿ]

ಏಳು ಮುಖದ ರುದ್ರಾಕ್ಷಿ ಅನಂತ ನಾಗನ (ಅಥವಾ ಆದಿಶೇಷನ ) ಸ್ವರೂಪ ಎಂದು ಹೇಳುವರು. ಇದೂ ಸಹ ವಿರಳವಾಗಿ ದೊರೆಯುವುದು. ಆದ್ದರಿಂದ ಬೆಲೆ ಹೆಚ್ಚು. ಈ ರುದ್ರಾಕ್ಷಿ ಧಾರಣೆಯಿಂದ ಹಾವಿನ ಭಯ ಇರುವುದಿಲ್ಲ. ಶರೀರ ಧೃಢವಾಗಿ ಬುದ್ಧಿ ಚುರುಕಾಗುವುದು - ಎಂದು ನಂಬಲಾಗಿದೆ.

ಅಷ್ಟ ಮುಖಿ ರುದ್ರಾಕ್ಷಿ[ಬದಲಾಯಿಸಿ]

ಎಂಟು ಮುಖದ ರುದ್ರಾಕ್ಷಿಯು ಗಣಪತಿಯ ರೂಪವಾಗಿದೆ. ಈ ರುದ್ರಾಕ್ಷಿ ಬಹಳ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಬೇಡಿಕೆ ಜಾಸ್ತಿ ಇರುವುದರಿಂದ, ಬೆಲೆ ಜಾಸ್ತಿ. ಈ ರುದಾಕ್ಷಿಯನ್ನು ಧರಿಸುವುದಿಂದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಮತ್ತು ಸರ್ವ ಸಿದ್ಧಿಯುಂಟಾಗುವುದೆಂಬುದು ಭಕ್ತರ ನಂಬುಗೆ.

ನವ ಮುಖಿ ರುದ್ರಾಕ್ಷಿ[ಬದಲಾಯಿಸಿ]

ಒಂಭತ್ತು ಮುಖದ ರುದ್ರಾಕ್ಷಿಯನ್ನು ಭೈರವ ಮತ್ತು ನವ ದುರ್ಗ ಸ್ವರೂಪ ಎಂದು ತಿಳಿಯಲಾಗುತ್ತದೆ. ಈ ರುದ್ರಾಕ್ಷಿಯೂ ಕೂಡಾ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಆದ್ದರಿಂದ ಬೆಲೆಯೂ ಹೆಚ್ಚು. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಉತ್ತಮ ಸಂತಾನ ಪ್ರಾಪ್ತಿಯಾಗುವುದೆಂದು ಹೇಳುತ್ತಾರೆ.

ದಶಮುಖಿ ರುದ್ರಾಕ್ಷಿ[ಬದಲಾಯಿಸಿ]

ಹತ್ತುಮುಖದ ರುದ್ರಾಕ್ಷಿ ಭಗವಾನ್ ನಾರಾಯಣನ ಸ್ವರೂಪವೆಂದು ನಂಬುಗೆ. ಈ ರುದ್ರಾಕ್ಷಿ ಧಾರಣೆಯಿಂದ ಇಹದ ಎಲ್ಲ ಸೌಲಭ್ಯಗಳೂ ಲಭಿಸುತ್ತದೆ ಮತ್ತು ಸದಾ ಸುಖ ಶಾಂತಿ ಇರುತ್ತದೆ ಎಂದು ಹೇಳುತ್ತಾರೆ.

ಏಕಾದಶ ಮುಖದ ರುದ್ರಾಕ್ಷಿ[ಬದಲಾಯಿಸಿ]

ಹನ್ನೊಂದು ಮುಖದ ರುದ್ರಾಕ್ಷಿ ಪರಶಿವನ ರುದ್ರ ಸ್ವರೂಪ (ಏಕಾದಶ ರುದ್ರರು) ಎಂದು ಹೇಳುತ್ತಾರೆ. ಇದೂ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಸಾಮಾನ್ಯವಾಗಿ ಸಂನ್ಯಾಸಿಗಳು, ಯತಿಗಳು, ಸಾಧಕರು ಇದನ್ನು ಧರಿಸುತ್ತಾರೆ. ಯಜ್ಞ ಯಾಗಾದಿಗಳ ಫಲ ಈ ರುದ್ರಾಕ್ಷಿ ಧರಿಸುವುದರಿಂದ ಸಿದ್ಧಿಸುತ್ತದೆ ಎಂದು ನಂಬಿಕೆ ಇದೆ.

ದ್ವಾದಶ ಮುಖಿ ರುದ್ರಾಕ್ಷಿ[ಬದಲಾಯಿಸಿ]

ಹನ್ನೆರಡು ಮುಖದ ರುದ್ರಾಕ್ಷಿ ಭಗವಾನ್ ಸೂರ್ಯನಾರಾಯಣನ ಸ್ವರೂಪವೆಂದು ತಿಳಿಯಲಾಗುತ್ತದೆ (ದ್ವಾದಶಾದಿತ್ಯರು). ಈ ರುದ್ರಾಕ್ಷಿಯ ಬೆಲೆಯೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಮನುಷ್ಯನಲ್ಲಿ ತೇಜಸ್ಸು ಹೆಚ್ಚುತ್ತದೆ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವವುಂಟಾಗುತ್ತದೆ ಎಂದು ಹೇಳುತ್ತಾರೆ. ಇದರ ಬೆಲೆಯೂ ಹೆಚ್ಚು.

ತ್ರಯೋದಶಿ ಮುಖಿ ರುದ್ರಾಕ್ಷಿ[ಬದಲಾಯಿಸಿ]

ಹದಿಮೂರು ಮುಖದ ರುದ್ರಾಕ್ಷಿ ಇಂದ್ರ ದೇವನ ಸ್ವರೂಪ ಎಂದು ಭಾವಿಸುತ್ತಾರೆ. ಈ ರುದ್ರಾಕ್ಷಿಯ ಧಾರಣೆಯಿಂದ ಆತ್ಮ ಶಾಂತಿ ದೊರೆಯುವುದು, ಶಾರೀರಿಕ ಶಾಂತಿ ದೊರೆಯುವುದು.

ಚತುರ್ದಶ ಮುಖದ ರುದ್ರಾಕ್ಷಿ[ಬದಲಾಯಿಸಿ]

ಹದಿನಾಲ್ಕು ಮುಖದ ರುದ್ರಾಕ್ಷಿ ಆಂಜನೇಯನ ಸ್ವರೂಪವೆಂದು ತಿಳಿಯಲಾಗುತ್ತದೆ. ಇದು ಸಹಾ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಈ ರುದ್ರಾಕ್ಷಿ ಧಾರಣೆಯಿಂದ ರೋಗಗಳಿಂದ ಮುಕ್ತಿ ದೊರೆಯುತ್ತದೆ- ಮನುಷ್ಯ ನಿರೋಗಿಯಾಗಿ ಬಲಶಾಲಿಯಾಗುತ್ತಾನೆ ಎಂದು ಹೇಳುತ್ತಾರೆ. ಬೆಲೆಯೂ ಹೆಚ್ಚು.[೬][೭]

ಟಿಪ್ಪಣಿ[ಬದಲಾಯಿಸಿ]

 • ಈ ಹದಿನಾಲ್ಕು ವಿಧದ ರುದ್ರಾಕ್ಷಿಗಳು ಪ್ರಕೃತಿಯಲ್ಲಿ ದೊರೆಯುತ್ತವೆ . ಇಚ್ಛೆಗೆ ಅನುಗುಣವಾಗಿ ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಇಚ್ಛಿತ ಫಲ ದೊರಕುವುದೆಂದು ದೈವ ಭಕ್ತರ ನಂಬುಗೆ ಇದೆ. ಇದಕ್ಕೂ ಹೆಚ್ಚಿನ ಮುಖದ ರುದ್ರಾಕ್ಷಿಗಳು ಸಿಗುವುದು ತುಂಬಾ ವಿರಳ. ಜನ ಮನ್ನಣೆ ಪೆಡೆರುವುದು ಈ ಹದಿನಾಲ್ಕು ಬಗೆಗಳು ಮಾತ್ರ ಎಂದು ಹೇಳುತ್ತಾರೆ.

ಛಾಯಾಂಕಣ[ಬದಲಾಯಿಸಿ]

ನೋಡಿ:[ಬದಲಾಯಿಸಿ]

ನೋಡಿ[ಬದಲಾಯಿಸಿ]

 1. ಇಂಗ್ಲಿಷ್ ವಿಕಿಪೀಡಿಯಾ: ಸೋಮನಾಥ್
 2. ದ್ವಾದಶ ಜ್ಯೋತಿರ್ಲಿಂಗಗಳು ಮತ್ತು ರುದ್ರಾಕ್ಷಿ - ಪ್ರವಾಸ ಲೇಖನ ಗ್ರಂಥ, ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ (ಈ ರುದ್ರಾಕ್ಷಿಯ ಮಹತ್ವದ ಬಗ್ಗೆ ಉತ್ತರ ಭಾರತದ ಅನೇಕ ಶಿವ ದೇವಾಲಯಗಳಲ್ಲಿದ್ದಮಾಹಿತಿ ವಿವರ.

ಉಲ್ಲೇಖ[ಬದಲಾಯಿಸಿ]

 1. Stutley, M. (1985). The Illustrated Dictionary of Hindu Iconography. New Delhi, India: Munshiram Manoharlal Publishers. p. 119. ISBN 81-215-1087-2.
 2. "Elaeocarpus angustifolius". Northern Territory Government. Retrieved 8 February 2021.
 3. F.A.Zich; B.P.M.Hyland; T.Whiffen; R.A.Kerrigan (2020). "Elaeocarpus angustifolius". Australian Tropical Rainforest Plants Edition 8 (RFK8). Centre for Australian National Biodiversity Research (CANBR), Australian Government. Retrieved 24 June 2021.
 4. Short, Philip S.; Cowie, Ian D. "Flora of the Darwin Region". Northern Territory Government. Retrieved 8 February 2021.
 5. Coode, M. J. E. (2010). "Elaeocarpus for Flora Malesiana: new taxa and understanding in the Ganitrus group". Kew Bulletin. 65 (3): 355–399. doi:10.1007/s12225-010-9223-2. JSTOR 23216389. S2CID 25451336.
 6. ದ್ವಾದಶ ಜ್ಯೋತಿರ್ಲಿಂಗಗಳು ಮತ್ತು ರುದ್ರಾಕ್ಷಿ - ಪ್ರವಾಸ ಲೇಖನ ಗ್ರಂಥ, ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ (ಈ ರುದ್ರಾಕ್ಷಿಯ ಮಹತ್ವದ ಬಗ್ಗೆ ಉತ್ತರ ಭಾರತದ ಅನೇಕ ಶಿವ ದೇವಾಲಯಗಳಲ್ಲಿದ್ದಮಾಹಿತಿ ವಿವರ.
 7. ಪರಿಹಾರ ಜ್ಯೋತಿಷ್ಯದಲ್ಲಿ ರುದ್ರಾಕ್ಷಿಯ ಪಾತ್ರ, ಯಾರಿಗೆ ಯಾವ ರೀತಿಯ ರುದ್ರಾಕ್ಷಿ ಒಳಿತು?
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: