ಮೈಸೂರು ಧರ್ಮಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಸ್ವಿತರಿಂದ ಸ್ಥಾಪನೆ[ಬದಲಾಯಿಸಿ]

ಶ್ರೀರಂಗಪಟ್ಟಣದಲ್ಲಿ ಜೆಸ್ವಿತರು ಕ್ರಿಸ್ತಶಕ ೧೬೪೮ರಲ್ಲಿ ಮೈಸೂರು ಮಿಶನ್ಅನ್ನು ಸ್ಥಾಪಿಸಿದ್ದರು. ಅವರ ಕೇಂದ್ರಕಚೇರಿ ಗೋವಾದಲ್ಲಿತ್ತು. ಮುಂದೆ ೧೭೭೩ರಲ್ಲಿ ಜೆಸ್ವಿತ್ ಸಭೆಯು ವಜಾ ಆದಾಗ ಮೈಸೂರು ಮಿಷನ್ನಿನ ಸುಪರ್ದಿಯನ್ನು ೧೭೭೬ರಲ್ಲಿ ಎಂಇಪಿ'Paris Foreign Mission Society'ಗೆ ಹಸ್ತಾಂತರಿಸಲಾಯಿತು. ಎಂಇಪಿಯ ಕೇಂದ್ರಕಚೇರಿಯು ಪಾಂಡಿಚೇರಿಯಲ್ಲಿದ್ದುದರಿಂದ ಮೈಸೂರು ಸೀಮೆಯ ಧರ್ಮಪ್ರಸರಣೆಯ ಕಾರ್ಯಕ್ರಮವು ೧೮೪೫ರವರೆಗೆ ಪಾಂಡಿಚೇರಿಯ ಆಡಳಿತದಡಿಯಲ್ಲೇ ನಡೆಯುತಿತ್ತು. ಅದನ್ನು ೧೮೪೫, ಮಾರ್ಚ್ ೧೬ರಂದು ಪಾಂಡಿಚೇರಿಯಿಂದ ಪ್ರತ್ಯೇಕಿಸಲಾಯಿತಾದರೂ ಅದರ ಸಹಯೋಗದಲ್ಲೇ ಕಾರ್ಯನಿರ್ವಹಿಸ ಬೇಕಾಗಿತ್ತು. ೧೮೫೦ರಲ್ಲಿ, ಪಾಂಡಿಚೇರಿಯ ಧರ್ಮಾಧ್ಯಕ್ಷರ ಸಹಾಯಕರಾಗಿದ್ದ ಮೋನ್‌ಸಿನೋರ್ ಎತಿಯೇನ್ ಲೂಯಿ ಶಾರ್ಬೊನೊ ಅವರನ್ನು ಮೈಸೂರು ಪ್ರಾಂತ್ಯದ ಪ್ರೇಷಿತಗುರುವಾಗಿ ನೇಮಿಸಲಾಯಿತು.

೧೮೮೬ರಲ್ಲಿ ಮೈಸೂರು ಪ್ರಾಂತ್ಯವನ್ನು ಅಧಿಕೃತವಾಗಿ 'ಮೈಸೂರು ಧರ್ಮಕ್ಷೇತ್ರ'ವೆಂದು ಘೋಷಿಸಲಾಯಿತು. ಆಗ ಈ ಪ್ರದೇಶದ ಉಸ್ತುವಾರಿಯಾಗಿದ್ದ ಅತಿ ಪೂಜ್ಯ ಕಾಡೋರವರು ಹೊಸ ಧರ್ಮಕ್ಷೇತ್ರದ ಪ್ರಥಮ ಧರ್ಮಾಧ್ಯಕ್ಷರಾಗಿ ನಿಯುಕ್ತರಾದರು. ಇವರ ಅಧಿಕೃತ ನಿವಾಸ ಬೆಂಗಳೂರಿನಲ್ಲಿ. ಮೈಸೂರು ಸೇರಿದಂತೆ ಆಗಿನ ಹಳೇ ಮೈಸೂರು ಸಂಸ್ಥಾನದ ಬೆಂಗಳೂರು, ಕೋಲಾರ, ಚಿತ್ರದುರ್ಗ, ತುಮಕೂರು, ಹಾಸನ, ಚಿಕ್ಕಮಗಳೂರು, ಶೀಮೊಗ್ಗೆ, ಮಂಡ್ಯ, ಕೊಡಗು ಜಿಲ್ಲೆಗಳು ಅಂದಿನ ಮೈಸೂರು ಧರ್ಮಕ್ಷೇತ್ರದ ಕಾರ್ಯವ್ಯಾಪ್ತಿಗೆ ಒಳಪಟ್ಟಿದ್ದವು. ೧೯೪೦ ಫೆಬ್ರವರಿ ೧೩ರಂದು ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಬೆಂಗಳೂರನ್ನು ಮೈಸೂರು ಧರ್ಮಕ್ಷೇತ್ರದಿಂದ ಪ್ರತ್ಯೇಕಿಸಿ ಹೊಸ ಧರ್ಮಕ್ಷೇತ್ರವನ್ನಾಗಿ ಮಾಡಲಾಯಿತು ಮತ್ತು ಆಗಿನ ಮೈಸೂರಿನ ಧರ್ಮಾಧ್ಯಕ್ಷರಾಗಿದ್ದ ಅತಿ ಪೂಜ್ಯ ದೇಪಾಚುರ್ ಅವರನ್ನೇ ಬೆಂಗಳೂರು ಧರ್ಮಕ್ಷೇತ್ರದ ಧರ್ಮಾಧಿಕಾರಿಯನ್ನಾಗಿಯೂ ನೇಮಿಸಲಾಯಿತು. ೧೯೪೧ರಲ್ಲಿ ಮೈಸೂರು ಧರ್ಮಕ್ಷೇತ್ರವನ್ನು ಪುನರ್ ರಚಿಸಲಾಯಿತು. ತಮಿಳುನಾಡಿನೀಲಗಿರಿ ಮತ್ತು ಕೊಯಮತ್ತೂರು ಜಿಲ್ಲೆಗಳು ಮೈಸೂರು ಧರ್ಮಕ್ಷೇತ್ರದಲ್ಲಿ ವಿಲೀನಗೊಂಡವು.

ವಿಭಜನೆ[ಬದಲಾಯಿಸಿ]

೧೯೫೫, ಜುಲೈ ೩ ರಂದು ಮೈಸೂರು ಧರ್ಮಕ್ಷೇತ್ರವು ಮತ್ತೊಮ್ಮೆ ವಿಭಜನೆಯಾಯಿತು. ಕೊಯಮತ್ತೂರ್ ಹಾಗೂ ನೀಲಗಿರಿ ಜಿಲ್ಲೆಗಳು ಮೈಸೂರು ಧರ್ಮಕ್ಷೇತ್ರದಿಂದ ಪ್ರತ್ಯೇಕಗೊಂಡವು. ಇವನ್ನು 'ಉದಕಮಂಡಲ ಧರ್ಮಕ್ಷೇತ್ರ'ವೆಂದು ಘೋಷಿಸಲಾಯಿತು.

ಕ್ರೈಸ್ತರ ಸಂಖ್ಯೆ ಹೆಚ್ಚಿದಂತೆ ಹಿಗ್ಗುವ ಧರ್ಮಕ್ಷೇತ್ರವನ್ನು ಸುಲಲಿತವಾಗಿ ಆಡಳಿತ ನಡೆಸುವ ಸಲುವಾಗಿ ಹಾಗು ಆ ಪ್ರದೇಶದ ಕ್ರೈಸ್ತರ ಧಾರ್ಮಿಕ ಅನುಕೂಲಕ್ಕಾಗಿ ವಿಭಜಿಸುವದು ಅನಿವಾರ್ಯವಾಗಿತ್ತು. ಹಾಗಾಗಿ ಕ್ರೈಸ್ತರ ಸಂಖ್ಯೆ ಹೆಚ್ಚಿದಂತೆ ೧೯೬೩, ನವೆಂಬರ್ ೧೬ರಲ್ಲಿ ಮತ್ತೆ ವಿಭಜನೆಗೊಳಗಾದ ಮೈಸೂರು ಧರ್ಮಕ್ಷೇತ್ರದಿಂದ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳು ಪ್ರತ್ಯೇಕಗೊಂಡು ಹೊಸತಾದ ಚಿಕ್ಕಮಗಳೂರು ಧರ್ಮಕ್ಷೇತ್ರವಾಗಿ ಹೊರಹೊಮ್ಮಿತು.

೧೬೫ ವರ್ಷಗಳ ಇತಿಹಾಸವಿರುವ ಮೈಸೂರು ಧರ್ಮಕ್ಷೇತ್ರವು ಪ್ರಸ್ತುತ ಮೈಸೂರು ಜಿಲ್ಲೆಯೂ ಸೇರಿದಂತೆ ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿದೆ. ಸಂತ ಜೋಸೆಫರು ಈ ಧರ್ಮಕ್ಷೇತ್ರದ ಪಾಲಕರು. ಇಲ್ಲಿಯ ಪ್ರಸಕ್ತ ಧರ್ಮಾಧ್ಯಕ್ಷರು ಅತಿ ಪೂಜ್ಯ ಥೋಮಸ್ ಅಂಥೋನಿ ವಾಜಪಿಳ್ಳಿಯವರು. ೨೦೦೧ರ ಜನಗಣತಿಯ ಪ್ರಕಾರ ೫೯,೧೬,೭೬೮ ಜನಸಂಖ್ಯೆಯಿರುವ ಈ ಧರ್ಮಕ್ಷೇತ್ರದಲ್ಲಿ ಅಂದಾಜಿಗೆ ೧.೧ಲಕ್ಷ ಕ್ರೈಸರು(ಶೇ.೦೨)ಇದ್ದಾರೆಂದು ತಿಳಿದು ಬಂದಿದೆ. ಇವರಲ್ಲಿ ಹೆಚ್ಚಿನಂಶ(ಶೇ.೬೫)ಕ್ರೈಸ್ತರು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲೇ ಇದ್ದಾರೆ. ಕನ್ನಡ, ತಮಿಳು, ಕೊಂಕಣಿ, ಮಲಯಾಳಮ್, ತೆಲುಗು ಮತ್ತು ಇಂಗ್ಲಿಷ್ ಇಲ್ಲಿಯ ಅಧಿಕೃತ ಭಾಷೆಗಳು. ಇಲ್ಲಿಯ ಧರ್ಮಾಧ್ಯಕ್ಷರ ನಿಲಯವು ಬೆಂಗಳೂರು ನೀಲಗಿರಿ ರಸ್ತೆಯ ಫೈವ್ ಲೈಟ್ ವೃತ್ತಕ್ಕೆ ಸಮೀಪದಲ್ಲಿದೆ.

ಈ ಧರ್ಮಕ್ಷೇತ್ರದಲ್ಲಿ ಇದುವರೆಗೂ ತನ್ನ ಸೇವೆಯನ್ನು ಸಲ್ಲಿಸಿ ಆಡಳಿತ ನಡೆಸಿದ ಅತಿ ಪೂಜ್ಯರುಗಳು ಇಂತಿದ್ದಾರೆ;

ಇದುವರೆಗಿನ ಧರ್ಮಾಧ್ಯಕ್ಷರುಗಳು[ಬದಲಾಯಿಸಿ]

  • ಎತಿಯೇನ್ ಲೂಯಿ ಶಾರ್ಬೊನೊ (೧೮೪೫-೧೮೭೩)
  • ಜೋಸೆಫ್ ಅಗಸ್ಟಿನ್ ಶೆವಾಲಿಯೇ (೧೮೭೩-೧೮೮೦)
  • ಈವ್ಸ್ ಮರೀ ಕುವಾಡೊ (೧೮೮೦-೧೮೯೦)
  • ಯೂಜಿನ್ ಲೂವಿಸ್ ಕೀನೆ (೧೮೯೦-೧೯೧೦)
  • ಎ ಬೇಸಲ್ (೧೯೧೦-೧೯೧೫)
  • ಹಿಪ್ಪೊಲೈಟ್ ‍ತೆಸಿಯೇ(೧೯೧೬-೧೯೨೧)
  • ಮೌರಿಸ್ ಬೆರ್ನಾರ್ಡ್ ದೇಪಾಚುರ್ (೧೯೨೨-೧೯೪೦)
  • ರೇನೆ ಫ್ಯೂಗ (೧೯೪೧-೧೯೬೪)
  • ಆಲ್ಬರ್ಟ್ ವಿನ್ಸೆಂಟ್ ಡಿಸೋಜ (೧೯೫೯-೧೯೬೧)ಸಹಾಯಕರಾಗಿ
  • ಮಥಿಯಾಸ್ ಫೆರ್ನಾಂಡಿಸ್ (೧೯೬೪-೧೯೮೫)
  • ಫ್ರಾನ್ಸಿಸ್ ಮಿಕೇಲಪ್ಪ (೧೯೮೭-೧೯೯೩)
  • ಜೋಸೆಫ್ ರಾಯ್ (೧೯೯೫-೨೦೦೧)
  • ಥಾಮಸ್ ವಾಳಪಿಳ್ಳಿ (೨೦೦೩ರಿಂದ)

ಕರ್ನಾಟಕದ ಇತರ ಧರ್ಮಪ್ರಾಂತ್ಯಗಳು:[ಬದಲಾಯಿಸಿ]

  • ಬೆಂಗಳೂರು ಪ್ರಧಾನ ಧರ್ಮಕ್ಷೇತ್ರ-ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳು. (೧೯೪೦ರವರೆಗೆ ಅವಿಭಜಿತ ಮೈಸೂರು ಧರ್ಮಪ್ರಾಂತ್ಯವಾಗಿತ್ತು)
  • ಚಿಕ್ಕಮಗಳೂರು ಧರ್ಮಕ್ಷೇತ್ರ-ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು(೧೯೬೩ರವರೆಗೆ ಮೈಸೂರು ಧರ್ಮಪ್ರಾಂತ್ಯಕ್ಕೆ ಸೇರಿತ್ತು)
  • ಶೀಮೊಗ್ಗೆ ಧರ್ಮಕ್ಷೇತ್ರ-ಶೀಮೊಗ್ಗೆ, ಚಿತ್ರದುರ್ಗ ಮತ್ತು ದಾವಣಗೆರೆ(೧೯೬೩ರವರೆಗೆ ಮೈಸೂರು ಧರ್ಮಪ್ರಾಂತ್ಯಕ್ಕೂ, ನಂತರ ೧೯೮೮ರವರೆಗೆ ಚಿಕ್ಕಮಗಳೂರು ಧರ್ಮಪ್ರಾಂತ್ಯಕ್ಕೂ ಸೇರಿತ್ತು. ಆನಂತರ ಬೆಂಗಳೂರು ಧರ್ಮಪ್ರಾಂತ್ಯದ ಚಿತ್ರದುರ್ಗ ಜಿಲ್ಲೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಪ್ರತ್ಯೇಕ ಪ್ರಾಂತ್ಯವಾಯಿತು. ಈಗ ಚಿತ್ರದುರ್ಗವೇ ಎರಡು ಜಿಲ್ಲೆಗಳಾಗಿ ವಿಂಗಡಿಸಲ್ಪಟ್ಟಿವೆ)
  • ಬಳ್ಳಾರಿ ಧರ್ಮಕ್ಷೇತ್ರ-ಬಳ್ಳಾರಿ, ರಾಯಚೂರು, ಕೊಪ್ಪಳ (ಹೈದ್ರಾಬಾದ್ ಧರ್ಮಪ್ರಾಂತ್ಯದ ರಾಯಚೂರು, ಗುಲ್ಬರ್ಗಗಳನ್ನು ಹೊರತಂದು,ಮದ್ರಾಸ್-ಮೈಲಾಪುರ್ ಧರ್ಮಪ್ರಾಂತ್ಯಕ್ಕೆ ಸೇರಿದ ಬಳ್ಳಾರಿಯನ್ನು ವಿಭಜಿಸುವುದರೊಂದಿಗೆ ಅವುಗಳನ್ನು ಒಟ್ಟುಗೂಡಿಸಿ ೧೯೨೮ರಲ್ಲಿ ಬಳ್ಳಾರಿಯನ್ನು ಧರ್ಮಕ್ಷೇತ್ರವನ್ನಾಗಿ ಮಾಡಲಾಯಿತು)
  • ಬೆಳಗಾವಿ ಧರ್ಮಕ್ಷೇತ್ರ-ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡವೂ ಸೇರಿ ಬೆಳಗಾವಿ ಧರ್ಮಕ್ಷೇತ್ರವೆನಿಸಿದೆ. ೧೯೫೩ರ ಪೂರ್ವದಲ್ಲಿ ಇದು ಗೋವಾ ಧರ್ಮಪ್ರಾಂತ್ಯದ ಭಾಗವಾಗಿತ್ತು.
  • ಕಾರವಾರ ಧರ್ಮಕ್ಷೇತ್ರ-ಇಡೀ ಉತ್ತರಕನ್ನಡ ಜಿಲ್ಲೆಯನ್ನು ಆವರಿಸಿಕೊಂಡು ೧೯೭೬ರಲ್ಲಿ ಅಸ್ತಿತ್ವಕ್ಕೆ ಬಂದ ಕಾರವಾರ ಧರ್ಮಕ್ಷೇತ್ರವು ೧೯೫೩ರವರೆಗೆ ಗೋವಾ ಧರ್ಮಪ್ರಾಂತ್ಯಕ್ಕೂ ಹಾಗು ೧೯೭೬ರವರೆಗೆ ಬೆಳಗಾವಿ ಧರ್ಮಕ್ಷೇತ್ರಕ್ಕೂ ಸೇರಿತ್ತು.
  • ಮಂಗಳೂರು ಧರ್ಮಕ್ಷೇತ್ರ-ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದ ಕಾಸರಗೋಡು ಮುಂತಾದ ಪ್ರದೇಶಗಳು(ಗೋವ, ವೆರೊಪೊಲಿ ಮತ್ತು ಪಾಂಡಿಚೇರಿಯ ಆಡಳಿತಕ್ಕೊಳಪಟ್ಟಿದ್ದ ಇದು ನಂತರ ೧೮೮೭ರಲ್ಲಿ ಸ್ವತಂತ್ರ ಧರ್ಮಕ್ಷೇತ್ರವಾಯಿತು. ೧೯೨೩ರಲ್ಲಿ ಇದು ವಿಭಜನೆಯಾಗಿ, ಇದರೊಂದಿಗಿದ್ದ ಮಲಬಾರಿನ ಕಲ್ಲಿಕೋಟೆ ಪ್ರತ್ಯೇಕಗೊಂಡಿತು.
  • ಉಡುಪಿ ಧರ್ಮಕ್ಷೇತ್ರ-ಉಡುಪಿ ಜಿಲ್ಲೆಯನ್ನೊಳಗೊಂಡ ಈ ಧರ್ಮಪ್ರಾಂತ್ಯವನ್ನು ೨೦೧೨ರಲ್ಲಿ ರಚಿಸಲಾಗಿದೆ.
  • ಗುಲ್ಬರ್ಗಾ ಧರ್ಮಕ್ಷೇತ್ರ-ಗುಲ್ಬರ್ಗಾ, ಬೀದರ್, ಯಾದಗಿರಿಮತ್ತು ಬಿಜಾಪುರ ಜಿಲ್ಲೆಗಳನ್ನೊಳಗೊಂಡಿದೆ.
  • ಬೆಳ್ತಂಗಡಿ ಧರ್ಮಕ್ಷೇತ್ರ-ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳು ಈ ಸಿರೊ ಮಲಬಾರ್ ಧರ್ಮಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ.
  • ಮಂಡ್ಯ ಧರ್ಮಕ್ಷೇತ್ರ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡು ಸಿರೊಮಲಬಾರ್ ಧರ್ಮಕ್ಷೇತ್ರವಾಗಿದೆ.
  • ಭದ್ರಾವತಿ ಧರ್ಮಕ್ಷೇತ್ರ ಶೀಮೊಗ್ಗೆ ಜಿಲ್ಲೆಯ ಸಿರೊಮಲಬಾರ್ ಕ್ರೈಸ್ತರಿಗಾಗಿ ಈ ಧರ್ಮಕ್ಷೇತ್ರವನ್ನು ರಚಿಸಲಾಗಿದೆ.
  • ಪುತ್ತೂರು ಧರ್ಮಕ್ಷೇತ್ರ ಇದು ಕರ್ನಾಟಕದ ಏಕೈಕ ಸಿರೊಮಲಂಕರ ಕ್ರೈಸ್ತಪದ್ಧತಿಯ ಧರ್ಮಕ್ಷೇತ್ರವೆನಿಸಿದೆ.